✍️ ರೈಹಾನ್ ವಿ.ಕೆ., ಸಚೇರಿಪೇಟೆ
ಮನುಷ್ಯನು ತನ್ನ ಅಸ್ತಿತ್ವವನ್ನು ಅರಿಯಬೇಕಾದರೆ ತನ್ನ ಸೃಷ್ಟಿಕರ್ತನನ್ನು ಅರಿಯುವುದು ಅನಿವಾರ್ಯ. ಮನುಷ್ಯ ತಾನು ಯಾರು, ನನ್ನ ಸೃಷ್ಟಿ ಹೇಗಾಯಿತು? ಸೃಷ್ಟಿಯ ಉದ್ದೇಶವೇನು? ಅವನ ಇಹಲೋಕ ಜೀವನದ ನಂತರ ಏನಾಗಲಿದೆ? ಪರಲೋಕದ ಅಗತ್ಯ ಏನಿದೆ? ಎಂಬಿತ್ಯಾದಿ ಪ್ರಶ್ನೆಗಳಿಗಿರುವ ಉತ್ತರ ತಿಳಿದಿದ್ದರೆ ಅದುವೇ ಅವನ ಯಶಸ್ಸು.
ಒಬ್ಬ ಮನುಷ್ಯ ತನ್ನ ಬಗ್ಗೆ ಚಿಂತಿಸುತ್ತಾನೆಂದಾದರೆ ಖಂಡಿತ ಅವನಲ್ಲಿ ಪ್ರಶ್ನೆಗಳು ಉದ್ಭವಿಸುವುದು ಸಹಜ. ಈ ಪ್ರಶ್ನೆಗಳಿಗೆಲ್ಲ ಉತ್ತರ ಮನುಷ್ಯನನ್ನು ಅವನಿಗೆ ವಾಸಯೋಗ್ಯವಾದ ಈ ಪ್ರಪಂಚವನ್ನು ಉಂಟು ಮಾಡಿದ ಸೃಷ್ಟಿಕರ್ತನಿಂದಲೇ ಬಂದಿರುತ್ತದೆ. ಅದುವೇ ಗ್ರಂಥ ರೂಪದಲ್ಲಿ ನಮ್ಮ ಕೈಯಲ್ಲಿರುವ ಕುರ್ಆನ್. ವಾಸ್ತವದಲ್ಲಿ ಮನುಷ್ಯನ ಎಲ್ಲಾ ಗೊಂದಲಕ್ಕಿರುವ ಪರಿಹಾರವೇ ಕುರ್ಆನ್.
ಆದ್ದರಿಂದಲೇ ಇದು ಮನುಷ್ಯನ ಸಮಗ್ರ ಯಶಸ್ಸಿಗೆ ಹೇತು. ಮನುಷ್ಯನ ಅಸ್ತಿತ್ವ, ಅವನ ಸಾಮಾಜಿಕ, ಸಾಂಸ್ಕೃತಿಕ, ಅವನ ವೈವಾಹಿಕ, ಆರ್ಥಿಕ, ಕೌಟುಂಬಿಕ ರಾಜಕೀಯ, ಕಾನೂನು, ಅವನ ವ್ಯಾವಹಾರಿಕ ಹೀಗೆ ಯಾವೆಲ್ಲಾ ಹಂತಗಳ ಮೂಲಕ ಅವನಿಗೆ ಹಾದುಹೋಗ ಬೇಕಾಗುತ್ತದೋ ಆ ಎಲ್ಲಾ ಹಂತಗಳಲ್ಲಿ ಮನುಷ್ಯನಿಗಿರುವ ಕರ್ತವ್ಯವೇನು? ಅವನ ಹಕ್ಕುಗಳೇನು ಮತ್ತು ಇವೆಲ್ಲ ಹಂತಗಳಲ್ಲಿ ಅವನ ಸೋಲು ಗೆಲುವುಗಳ ಪ್ರಶ್ನೆಗಳ ಉತ್ತರದ ಸಮಾಹಾರವೇ ಸೃಷ್ಟಿಕರ್ತನ ವಾಣಿಯಾದ ಕುರ್ಆನ್.
ಏಕೆಂದರೆ ಕುರ್ಆನಿನ ವಿಷಯ ಮನುಷ್ಯ. ಇದು ಮನುಷ್ಯನ ಭಾವನೆಗಳೊಂದಿಗೆ ಮಾತಾಡುತ್ತದೆ. ಇದನ್ನು ಕೇಳಿದಾಗ ಅವನ ಹೃದಯವು ಕಂಪಿಸುತ್ತದೆ. ಎಂತಹ ಕಲ್ಲು ಹೃದಯವನ್ನೂ ಪಲ್ಲಟಗೊಳಿಸುವಂತಹ ಶಕ್ತಿ ಇದಕ್ಕಿದೆ.
ಬಾಹ್ಯ ದೃಷ್ಟಿ, ಊಹಾಪೋಹ ಅಥವಾ ಇಂದ್ರಿಯಾಸಕ್ತಿಗಳ ಕಾರಣಗಳಿಂದ ಮಾನವನು ದೇವನ ಬಗ್ಗೆ ಇರಿಸಿಕೊಂಡಿರುವ ಭಾವನೆಗಳೂ ಅವುಗಳ ತಳಹದಿಯಲ್ಲಿ ಸ್ವೀಕರಿಸಿಕೊಂಡಿರುವ ನಿಲುಮೆಗಳೂ ವಾಸ್ತವಿಕತೆಯ ದೃಷ್ಟಿಯಿಂದ ತಪ್ಪು ಹಾಗೂ ಪರಿಣಾಮದ ದೃಷ್ಟಿಯಿಂದಲೂ ಸ್ವತಃ ಮಾನವನಿಗೇ ವಿನಾಶಕಾರಿಯೂ ಆಗಿರುತ್ತದೆ.
ವಾಸ್ತವದಲ್ಲಿ ಮಾನವನಿಗೆ ಸೃಷ್ಟಿಕರ್ತನು ನೀಡಿದ ಸ್ಥಾನ ಸೃಷ್ಟಿಕರ್ತನ ಪ್ರತಿನಿಧಿ. ಆದ್ದರಿಂದ ಪ್ರತಿನಿಧಿ ಎಂಬ ನೆಲೆಯಲ್ಲಿ ಅವನು ಯಾವ ರೀತಿ ಜೀವಿಸಬೇಕೆಂದು ಕುರ್ಆನ್ ಬೆಳಕು ಚೆಲ್ಲುತ್ತದೆ. ಉದಾಹರಣೆಗೆ ಯಾವುದೇ ಒಂದು ಪ್ರೊಡಕ್ಷನ್ ಜೊತೆ ಅದರ ಯೂಝುರ್ಸ್ ಮ್ಯಾನರ್ ಇರುವಂತೆ ಮನುಷ್ಯನೆಂಬ ಪ್ರೊಡಕ್ಷನ್ ಜತೆ ಕುರ್ಆನ್ ಎಂಬ ಯೂಝುರ್ಸ್ ಮ್ಯಾನರ್. ಅಂದರೆ ಯಾರು ಈ ಜಗತ್ತು ಮತ್ತು ಸಕಲ ಮಾನವ ಕೋಟಿಯನ್ನು ಸೃಷ್ಟಿಸಿದನೋ ಆ ಸೃಷ್ಟಿಕರ್ತನಿಂದಲೇ ಬಂದಿರುತ್ತದೆ.
ಆದ್ದರಿಂದ ಅದರ ಅಧ್ಯಯನದ ಹೊರತಾಗಿ ಮನುಷ್ಯನ ಯಶಸ್ಸು ಖಂಡಿತ ಅಸಾಧ್ಯ. ಅದು ಭೂಮಿ-ಆಕಾಶಗಳ ನಿರ್ಮಾಣ, ಮಾನವನ ಸೃಷ್ಟಿ ವಿಶ್ವ ನಿದರ್ಶನಗಳ ಪರಿಶೀಲನೆ ಮತ್ತು ಗತಸಮುದಾಯಗಳ ಘಟನೆಗಳ ಬಗ್ಗೆ ಪ್ರಸ್ತಾಪಿಸುತ್ತದೆ. ಬೇರೆ ಬೇರೆ ಜನಾಂಗಗಳ ವಿಶ್ವಾಸ, ಚಾರಿತ್ರ್ಯ ಮತ್ತು ವರ್ತನೆಗಳನ್ನು ವಿಮರ್ಶಿಸುತ್ತದೆ. ಅಲೌಕಿಕ ವಿಷಯಗಳನ್ನೂ ಸಮಸ್ಯೆಗಳನ್ನೂ ವಿವರಿಸುತ್ತದೆ. ಆದರೆ ಇವೆಲ್ಲ ಭೌತಶಾಸ್ತ್ರ ಅಥವಾ ಇತಿಹಾಸ, ತತ್ವಶಾಸ್ತ್ರ ಇನ್ನಾವುದಾದರೂ ವಿದ್ಯೆ ಅಥವಾ ಕಲೆಯ ಶಿಕ್ಷಣ ನೀಡಲಿಕ್ಕಾಗಿ ಅಲ್ಲ. ಅದು ಮಾನವನಲ್ಲಿ ಪರಮಾತ್ಮನ ಬಗ್ಗೆ ಇರುವ ತಪ್ಪುಕಲ್ಪನೆಯನ್ನು ದೂರೀಕರಿಸಲಿಕ್ಕೂ ವಾಸ್ತವಿಕತೆಯನ್ನೂ ಜನರಿಗೆ ಬೋಧಿಸಲಿಕ್ಕೂ ಜನರಿಗೆ ವಸ್ತುಸ್ಥಿತಿಗೆ ವಿರುದ್ಧವಾದ ನಿಲುಮೆಯ ದೋಷ ಮತ್ತು ದುಷ್ಪರಿಣಾಮಗಳನ್ನು ವ್ಯಕ್ತಪಡಿಸಲಿಕ್ಕೂ ಪರಮಾರ್ಥ ಹಾಗೂ ತತ್ಪರಿಣಾಮವನ್ನುಂಟು ಮಾಡಬಲ್ಲ ನೀತಿಯ ಕಡೆಗೆ ಕರೆಕೊಡಲಿಕ್ಕೂ ಆಗಿರುತ್ತದೆ.
ಆದುದರಿಂದ ಅದು ಪ್ರತಿಯೊಂದು ವಿಷಯದ ಕುರಿತು ಉದ್ದೇಶಕ್ಕೆ ಅಗತ್ಯವಿರುವಷ್ಟರ ಮಟ್ಟಿಗೆ ಮಾತ್ರ ಹೇಳಿದ ಬಳಿಕ ಅನವಶ್ಯಕ ವಿವರಗಳನ್ನು ಬಿಟ್ಟು ತನ್ನ ಮುಖ್ಯ ಮತ್ತು ಕೇಂದ್ರೀಯ ವಿಷಯದ ಕಡೆಗೆ ವಾಲುತ್ತದೆ.
ಕುರ್ಆನ್ ಅಲ್ಲಾಹನು ಒಮ್ಮೆಲೇ ಬರೆದು ಮುಹಮ್ಮದ್ರಿಗೆ(ಸ) ಕೊಟ್ಟು ಇದನ್ನು ಪ್ರಕಟಿಸಿ ಜನರನ್ನು ಒಂದು ನಿರ್ದಿಷ್ಟ ಜೀವನ ವಿಧಾನದ ಕಡೆಗೆ ಆಹ್ವಾನಿಸಿರೆಂದು ಹೇಳಿದ ಗ್ರಂಥವಲ್ಲ. ಇದು ಸಾಮಾನ್ಯ ಗ್ರಂಥ ರಚನಾ, ವಿನ್ಯಾಸ ಪ್ರಕಾರ ಗ್ರಂಥದ ಮೂಲ ವಿಷಯ ಮತ್ತು ಕೇಂದ್ರೀಯ ವಿಷಯಗಳ ಕುರಿತು ಚರ್ಚಿಸಲಾಗುವಂತಹ ಗ್ರಂಥವೂ ಅಲ್ಲ. ಆ ಕಾರಣದಿಂದಲೇ ಇದರಲ್ಲಿ ಗ್ರಂಥ ರಚನಾ ಕ್ರಮವಾಗಲಿ ಗ್ರಂಥದ ಶೈಲಿಯಾಗಲೀ ಇಲ್ಲ.
ಆದ್ದರಿಂದ ಈ ಗ್ರಂಥದಿಂದ ಪ್ರಯೋಜನ ಪಡೆಯಬೇಕಾದರೆ ತನ್ನನ್ನು ತಾನೇ ಸಿದ್ಧಪಡಿಸಿಕೊಳ್ಳಬೇಕು. ಅದು ಮನಮಸ್ತಿಷ್ಕ, ಬುದ್ಧಿ, ಭಾವನೆಗಳೆಲ್ಲದರ ಮೇಲೂ ಪ್ರಭಾವ ಬೀರುವ ಮೂಲಕ ಭಾವನಾಲೋಕವನ್ನು ಬದಲಾಯಿಸುವುದರ ಮೂಲಕ, ಭಾವೋದ್ವೇಗಗಳ ಪ್ರವಾಹನ್ನೆಬ್ಬಿಸುವ ಮೂಲಕ ತನ್ನನ್ನು ಸ್ವತಃ ಸಂಸ್ಕರಿಸಿ ತರಬೇತುಗೊಳಿಸುತ್ತದೆ. ಮನುಷ್ಯರಲ್ಲಿ ದೃಢ ಸಂಕಲ್ಪ ತುಂಬುವುದು ಮತ್ತು ನೈತಿಕ ಬಲವನ್ನು ಹೆಚ್ಚಿಸುತ್ತದೆ. ಮನುಷ್ಯರಲ್ಲಿ ಸಕಾರಾತ್ಮಕ ಶಕ್ತಿಯನ್ನು ಬೆಳೆಸುತ್ತದೆ. ಆದ್ದರಿಂದ ಇದು ಕೇವಲ ವಿಚಾರ ಸಿದ್ಧಾಂತಗಳ ಗ್ರಂಥವೇನೂ ಅಲ್ಲ. ಇದೊಂದು ಮತೀಯ ಗ್ರಂಥವೂ ಅಲ್ಲ. ಇದು ಒಂದು ಸಂದೇಶ ಹಾಗೂ ಆಂದೋಲನದ ಗ್ರಂಥವಾಗಿದೆ.
ಓರ್ವ ಮೌನ ಪ್ರಕೃತಿಯ ಹಾಗೂ ಉತ್ತಮ ಗುಣ ಸ್ವಭಾವದ ವ್ಯಕ್ತಿಯನ್ನು ಏಕಾಂತವಾಸದಿಂದ ಹೊರತಂದು ದೇವನಿಂದ ವಿಮುಖವಾಗಿದ್ದ ಜಗತ್ತನ್ನು ಎದುರಿಸಲು ಸಿದ್ಧಗೊಳಿಸುತ್ತದೆ.
ಆದ್ದರಿಂದ ಅರಬರಲ್ಲಿ ಕುರ್ಆನ್ ತಂದ ಕ್ರಾಂತಿಗೆ ಇತಿಹಾಸ ಸಾಕ್ಷಿ. ಅಂದು ಶರಾಬು, ಜೂಜಾಟ, ಕ್ಷುಲ್ಲಕ ಕಾರಣಕ್ಕಾಗಿ ವರ್ಷ ಗಟ್ಟಲೆ ಯುದ್ಧ, ಹೆಣ್ಣಿನ ಜೀವನ ಅಪಶಕುನದಂತೆ ಕಾಣುತ್ತಿದ್ದಂತಹ ಜನತೆಯಲ್ಲಿ ಆಮೂಲಾಗ್ರ ಬದಲಾವಣೆ ತಂದ ಗ್ರಂಥ.
ಕುರ್ಆನ್ ನಿರ್ಗತಿಕರೊಂದಿಗೆ ಮಾತನಾಡಿದೆ. ವಿಧವೆಯರಿಗೆ ಆಶಾಕಿರಣವಾಗಿದೆ. ಅಬಲೆಯರಿಗೆ ಶಕ್ತಿ ನೀಡಿದೆ. ಅನಾಥರಿಗೆ ಆಶ್ರಯ ನೀಡಿದೆ. ಫಿರ್ಔನಂತಹ ಕ್ರೂರ ಆಡಳಿತಗಾರನ ವಿರುದ್ಧ ಹೋರಾಡಿ ಸೋಲಿಸಿದ ಗ್ರಂಥ. ಸಿಂಹದಂತೆ ಘರ್ಜಿಸುತ್ತಾ ಪ್ರವಾದಿವರ್ಯ(ಸ)ರನ್ನು ಕೊಲ್ಲಲು ಬಂದ ಉಮರ್ರನ್ನು ಶಾಂತ ಸ್ವಭಾವಿ ಹಾಗೂ ನನ್ನ ಆಡಳಿತ ಕಾಲದಲ್ಲಿ ಯೂಪ್ರಟೀಸ್ ನದೀ ತೀರದಲ್ಲಿ ಒಂದು ನಾಯಿ ಹಸಿದಿದ್ದರೆ ಅದರ ಜವಾಬ್ದಾರನು ನಾನು ಮತ್ತು ನಾಳೆ ಪರಲೋಕದಲ್ಲಿ ಇದಕ್ಕೆ ಉತ್ತರಿಸಬೇಕಾಗಿದೆ ಎಂದು ಒಂದು ಉತ್ತಮ ಆಡಳಿತಗಾರನನ್ನಾಗಿ ಮಾರ್ಪಡಿಸಿದ ಹಾಗೂ ನನ್ನ ನಂತರ ಓರ್ವ ಪ್ರವಾದಿಯ ಆಗಮನವಾಗುವುದಿದ್ದರೆ ಅದು ಉಮರ್(ರ) ಎಂದು ಪ್ರವಾದಿ(ಸ) ಹೇಳುವಷ್ಟು ಬದಲಾವಣೆ ತಂದ ಗ್ರಂಥ. ಕುರ್ಆನ್ ಇದನ್ನು ಸ್ವತಃ ಹೇಳುತ್ತದೆ, ಇದು ಹುದನ್ ಲಿನ್ನಾಸ್ (ಜನರಿಗೆ ಮಾರ್ಗದರ್ಶನವಾಗಿದೆ). ಇದು ವಿಜಯದ ಸೋಪಾನವಾಗಿದೆ.
IslamKannada News Portal
