Home / ಲೇಖನಗಳು / ಆ ಚಾರಿತ್ರಿಕ ನಾಯಕ ಪ್ರವಾದಿ ಮುಹಮ್ಮದ್ (ಸ)

ಆ ಚಾರಿತ್ರಿಕ ನಾಯಕ ಪ್ರವಾದಿ ಮುಹಮ್ಮದ್ (ಸ)

ಅಂತಿಮ ಪ್ರವಾದಿ ಮುಹಮ್ಮದ್(ಸ) ಜೀವನ ಮತ್ತು ಅವರು ಮಾಡಿರುವ ಕಾರ್ಯಗಳನ್ನು ಅವಲೋಕಿಸುವುದಕ್ಕಿಂತ ಮೊದಲಾಗಿ ಜಗತ್ತು ಮತ್ತು ಜನಜೀವನದತ್ತ ವಿಹಂಗಮ ನೋಟ ಹರಿಸಬೇಕಾಗಿದೆ.

ಜಗತ್ತು ಹೇಗೆ ಚಲಿಸುವುದು ಮತ್ತು ಅದರಲ್ಲಿರುವ ಪ್ರಾಕೃತಿಕ ನಿಯಮಗಳು (Natural Laws) ಯಾವ ರೀತಿ ಕಾರ್ಯ ನಿರತವಾಗಿದೆ ಎಂದು ಅರಿತು ಕೊಳ್ಳುವ ಪ್ರಯತ್ನವನ್ನು ವಿಜ್ಞಾನವು ನಡೆಸುತ್ತಿದೆ.

ವಿಜ್ಞಾನವು ಪ್ರಪಂಚದಲ್ಲಿ ವಸ್ತುಗಳ ಬಳಕೆಯನ್ನು ತಿಳಿಸಿಕೊಡಬಹುದು. ಮಾನವನು ಆರೋಗ್ಯವನ್ನು ಕಾಪಾಡುವುದು ಹೇಗೆ, ರೋಗ ಉಪಚಾರ ನಡೆಸುವುದು ಹೇಗೆ, ಶತ್ರುಗಳ ವಿರುದ್ಧ ಗೆಲ್ಲಲು ಯಾವ ಅಸ್ತ್ರಗಳನ್ನು ಸಂಶೋಧಿಸಬಹುದು, ವಾಯುಮಂಡಲ ಮಲಿನಗೊಳ್ಳದಂತೆ ಹೇಗೆ ತಡೆಯುವುದು ಎಂಬಿತ್ಯಾದಿ ಜ್ಞಾನವನ್ನು ವಿಜ್ಞಾನವು ಕಲಿಸುತ್ತದೆ. ಜನರ ಬಳಿಗೆ ಅತಿ ಶೀಘ್ರದಲ್ಲಿ ಸಂದೇಶಗಳನ್ನು ಕಳಿಸಲೆಂದು ಟೆಲಿಗ್ರಾಫ್, ಫ್ಯಾಕ್ಸ್ ಇಂಟರ್‌ನೆಟ್‌ಗಳನ್ನು ವಿಜ್ಞಾನವು ಸಂಶೋಧಿಸಿದೆ. ದೂರದ ಸ್ಥಳಕ್ಕೆ ಶೀಘ್ರದಲ್ಲಿ ತಲುಪಲು ವಾಯುಯಾನವನ್ನು ವಿಜ್ಞಾನವು ಕಂಡು ಹುಡುಕಿತು. ಅದು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಅಟಂಬಾಂಬುಗಳನ್ನು ಹೈಡ್ರೋಜನ್ ಬಾಂಬುಗಳನ್ನು ತಯಾರಿಸಿದೆ.

ಇಷ್ಟೆಲ್ಲ ಸಾಧನೆಯ ಬಳಿಕವೂ ಜಗತ್ತು ಮತ್ತು ಜೀವಿಗಳ ವಾಸ್ತವಿಕ ಉದ್ದೇಶವೇನೆಂದು ವಿವರಿಸಲು ವಿಜ್ಞಾನವು ವಿಫಲವಾಗಿದೆ. ಮಾನವರು ಭೂಮಿಯಲ್ಲಿ ಹುಟ್ಟಲು ಕಾರಣವೇನು? ಅವರ ಜೀವನದ ಗುರಿಯೇನು? ಸಾವು ಅಂತಿಮ ವಿಧಿಯೇ? ಅಥವಾ ಅವರ ಜೀವನಕ್ಕೆ ಬೇರೆ ಗುರಿಯಿದೆಯೇ? ಮಾನವರ ಕರ್ತವ್ಯವೇನು? ಅವರು ಏನನ್ನು ಸಾಧಿಸಬೇಕಾಗಿದೆ. ಜಗತ್ತು ಮತ್ತು ಮಾನವ ಜೀವಿಗಳಿಗೆ ಭೌತಿಕೇತರ ಯಾವುದಾದರೂ ಉದ್ದೇಶಗಳಿವೆಯೇ ಮುಂತಾದ ಪ್ರಶ್ನೆಗಳಿಗೆ ವಿಜ್ಞಾನದಿಂದ ಉತ್ತರ ಲಭಿಸಿಲ್ಲ.

ಇವು ವಿಜ್ಞಾನದ ವ್ಯಾಪ್ತಿಯಿಂದ ಹೊರಗಿರುವ ಪ್ರಶ್ನೆಗಳಾಗಿವೆ. ಧರ್ಮವೇ ಮಾನವರ ಈ ಮೂಲಭೂತ ಪ್ರಶ್ನೆಗಳನ್ನು ಉತ್ತರಿಸಬೇಕು. ಆದರೆ ಇಂದು ಧರ್ಮಗಳು ಈ ಪ್ರಶ್ನೆಯನ್ನು ಬಿಡಿಸುವ ಬದಲು ಅವು ಇನ್ನಷ್ಟು ಜಟಿಲಗೊಂಡಿರುವುದನ್ನು ಕಾಣುತ್ತೇವೆ. ಧರ್ಮವು ಮೂಲಭೂತ ಪ್ರಶ್ನೆಗಳಿಗಿಂತ ಬೇರೆಯೇ ವಿಚಾರಗಳಿಗೆ ಒತ್ತು ನೀಡಿ ಜನರನ್ನು ಉತ್ತೇಜಿಸುವುದನ್ನು ನೋಡುವಾಗ ಇಂದು ಒಂದು ಒಗಟಿನಂತೆ ಕಾಣಿಸುತ್ತಿದೆ.

ನಿಜವಾಗಿ ಜಗತ್ತಿಗೆ ಏಕೈಕ ಧರ್ಮ ಇರಬೇಕಾದುದು ನ್ಯಾಯವಾಗಿದೆ. ಆದರೆ ಆ ಒಂದು ನೈಜ ಧರ್ಮವು ವಿವಿಧ ಧರ್ಮ ಸಂಪ್ರದಾಯಗಳಾಗಿ ಇಂದು ಹಂಚಿ ಹೋಗಿವೆ. ಈ ರೀತಿ ಜಗತ್ತಿನಲ್ಲಿ ಹಲವು ಧರ್ಮಗಳಾಗಿರುವುದು ಸ್ಪಷ್ಟವಾದ ಅಧರ್ಮವಾಗಿದೆ.

ಮೂಲ ಧರ್ಮದಲ್ಲಿ ಅನೇಕ ರೀತಿಯ ಉತ್ತರವಿರಲು ಸಾಧ್ಯವೇ? ಧರ್ಮದಿಂದ ಮಾನವರ ಪ್ರತಿಷ್ಟೆ, ಸೂಕ್ತ ನ್ಯಾಯ ಮತ್ತು ಸತ್ಯಾಧಾರಿತವಾದ ಉತ್ತರ ದೊರಕಬೇಕು. ಯಾಕೆಂದರೆ ಮೂಲದಲ್ಲಿ ಮಾನವ ಪ್ರಕೃತಿ ಒಂದೇ ಆಗಿದೆ. ಆದುದರಿಂದ ಅದಕ್ಕೆ ಬೇರೆ ಬೇರೆ ಉತ್ತರಗಳಿಲ್ಲ. ಅನೇಕ ಧರ್ಮಗಳ ಅನೇಕ ಉತ್ತರ ಹೇಗೆ ನಮಗೆ ಸ್ವೀಕಾರಾರ್ಹವಾದೀತು.

ಭೂಮಿಯಲ್ಲಿ ದೇವನು ಮಾನವರ ಜೀವನಕ್ಕೆ ಅವಶ್ಯಕವಾಗಿರುವ ಸಕಲ ಸಾಧನಗಳನ್ನು ಸಂಗ್ರಹಿಸಿದ್ದಾನೆ. ಅಲ್ಲಿ ಮಾನವ ವಾಸಕ್ಕೆ ವಿಶಾಲವಾದ ವ್ಯವಸ್ಥೆಯಿದೆ. ಭೂಮಿಯಲ್ಲೇ ಧಾನ್ಯ ಮೊಳಕೆಯೊಡೆಯುತ್ತದೆ. ಮಳೆಯಿಂದ ಗದ್ದೆಗೆ ನೀರಾವರಿಯೂ ಸೂರ್ಯನಿಂದ ಹಗಲು ರಾತ್ರಿಗಳೂ ಉಂಟಾಗುತ್ತವೆ, ಗದ್ದೆಯ ಪೈರುಗಳು ಮಾಗುತ್ತವೆ, ಭೂಮಿಯ ಗುರುತ್ವಾಕರ್ಷಣಾ ಶಕ್ತಿಯಿಂದಾಗಿಯೇ ನಾವು ಭೂಮಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದೇವೆ. ಭೂಮಿಯ ಪಥ ಸಂಚಲನದಿಂದ ರಾತ್ರಿ ಹಗಲುಗಳಾಗುವುದು. ಮಾನವರು ಹಗಲಿನಲ್ಲಿ ದುಡಿಯುತ್ತಾರೆ. ರಾತ್ರಿ ವೇಳೆ ವಿಶ್ರಾಂತಿ ಪಡೆಯುತ್ತಾರೆ. ಇಂತಹ ಅದ್ಭುತ ಸುವ್ಯವಸ್ಥಿತ ವ್ಯವಸ್ಥೆ ಮಾಡಿಕೊಟ್ಟ ದೇವನು ನಮ್ಮ ಜೀವನದ ಉದ್ದೇಶವನ್ನು ತಿಳಿಸಿಕೊಡುವ ವ್ಯವಸ್ಥೆಯನ್ನು ನಮಗೆ ಮಾಡದಿರುತ್ತಾನೆಯೇ?

ದೈವಿಕ ಮಾರ್ಗದರ್ಶನ
ಮಾನವನು ಭೂಮಿಯ ಸರ್ವ ಶ್ರೇಷ್ಠ ಮತ್ತು ನಿಗೂಢ ಸೃಷ್ಟಿಯಾಗಿದ್ದಾನೆ. ಈ ರೀತಿ ಮಾನವನನ್ನು ಸೃಷ್ಟಿಸಲು ಸಾಧ್ಯವಿರುವ ದೇವನಿಗೆ ಮಾನವನ ಮಾರ್ಗದರ್ಶನ ಮಾಡುವುದು ಅಸಂಭವವಲ್ಲ? ಮಾನವರ ಮಾರ್ಗದರ್ಶನಕ್ಕಾಗಿ ದೇವನು ಆರಂಭದಿಂದಲೇ ಸಂದೇಶವಾಹಕರನ್ನು ನಿಯೋಜಿಸುತ್ತಾ ಬಂದಿದ್ದಾನೆ. ನಾವು ಅವರನ್ನು ನೆಬಿ, ಪೈಗಂಬರ್. ರಸೂಲ್ (ಪ್ರವಾದಿ) ಇತ್ಯಾದಿ ಹೆಸರಿನಲ್ಲಿ ಕರೆಯುತ್ತೇವೆ. ಅಸಂಖ್ಯಾತ ಪ್ರವಾದಿಗಳು ಜಗತ್ತಿಗೆ ಆಗಮಿಸಿದ್ದು ಆಯಾ ಕಾಲದ ಮಾನವರಿಗೆ ಮಾರ್ಗದರ್ಶನ ನೀಡಿರುವರು. ಮಾನವರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿರುವರು. ಮಾನವರ ಮಾರ್ಗದರ್ಶನಕ್ಕಾಗಿ ದೈವಿಕ ವಚನಗಳು ಅವತೀರ್ಣವಾಯಿತು. ದೈವಿಕ ಗ್ರಂಥವೂ ಅವತೀರ್ಣಗೊಂಡಿತು. ಆಯಾ ಕಾಲದ ಮಾನವರ ಭಾಷೆಯಲ್ಲಿಯೇ ಎಲ್ಲ ಪ್ರವಾದಿಗಳು ಜನರನ್ನು ಸಂಬೋಧಿಸಿರುವರು.

ಪ್ರವಾದಿ ಮುಹಮ್ಮದರಿಗಿಂತ(ಸ) ಮೊದಲು
ಮುಹಮ್ಮದರು(ಸ) ಅಂತಿಮ ಪ್ರವಾದಿಯಾಗಿದ್ದಾರೆ. ಧರ್ಮವು ಸಂಪೂರ್ಣ ಕ್ಷಯಿಸಿ ಆಡುಮಾತಿನಂತಾಗಿದ್ದಾಗ ಪ್ರವಾದಿವರ್ಯರು(ಸ) ಆಗಮಿಸಿದ್ದಾರೆ. ಅಂದು ನಾನಾ ರೀತಿಯ ಕಂದಾಚಾರಗಳನ್ನು ಧರ್ಮವೆಂದು ಹೆಸರಿಸಲಾಗಿತ್ತು. ವಿಧ ವಿಧದ ಕೆಟ್ಟ ಆಚರಣೆಗಳು ರೂಢಿಯಲ್ಲಿದ್ದವು. ಧರ್ಮವು ಅಂದು ನೈಜರೂಪವನ್ನು ಕಳೆದುಕೊಂಡಿತ್ತು. ಪರಸ್ಪರ ವಿರೋಧಾಭಾಸಗಳ ಆಗರವಾಗಿತ್ತು. ಒಂದು ಆಟ-ವಿನೋದವಾಗಿ ಜನರ ನಡುವೆ ಧರ್ಮವಿತ್ತು. ಕೆಟ್ಟ ಆಚಾರಗಳು ಧಾರ್ಮಿಕ ರೂಪವನ್ನು ಪಡೆದುಕೊಂಡಿತ್ತು. ಕೆಲವರಂತೂ ಅಂದು ದೇವನನ್ನೂ ಆತ್ಮವನ್ನೂ ನಿರಾಕರಿಸುತ್ತಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಉನ್ನತಿಯು ಉನ್ನತ ಕುಲದಲ್ಲಿ ಜನಿಸಿದವರ ಪಾಲಾಗಿತ್ತು.

ಕೆಲವರಿಗೆ ಒಬ್ಬನೇ ದೇವನು ಸಾಕಾಗಲಿಲ್ಲ. ಅವರು ತ್ರಿಏಕತ್ವಕ್ಕೆ ಗಂಟು ಬಿದ್ದರು. ಇನ್ನು ಕೆಲವರು ಅಸಂಖ್ಯಾತ ದೇವರುಗಳನ್ನು ಮಾಡಿಕೊಂಡು ಪೂಜೆ ಅರ್ಚನೆ ಸಲ್ಲಿಸುತ್ತಿದ್ದರು. ಹೆಚ್ಚಾಗಿ ಆ ದಿನಗಳಲ್ಲಿ ಬಹುದೇವತ್ವವೇ ಗಟ್ಟಿಯಾಗಿ ತಳವೂರಿತ್ತು ಎನ್ನಬಹುದು. ದೇವನ ಹಕ್ಕು ಅಧಿಕಾರಗಳನ್ನೇ ಅಂದಿನ ಜನರು ಮರೆತು ಬಿಟ್ಟರು. ಜನರಿಗೆ ನೈತಿಕ ಕರ್ತವ್ಯಗಳ ಗಂಧಗಾಳಿಯೇ ಗೊತ್ತಿರಲಿಲ್ಲ. ಮಾನವರು ಮಾನವರ ನಡುವೆ ಪರಸ್ಪರ ಭೇದಭಾವದ ಗೋಡೆ ಎದ್ದು ನಿಂತಿತ್ತು. ಮಹಿಳೆಯರೊಡನೆ ಸದ್ವರ್ತನೆ ತೋರಬೇಕು. ನ್ಯಾಯದಿಂದ ವರ್ತಿಸಬೇಕು ಎಂಬ ಕಲ್ಪನೆಯಿರಲಿಲ್ಲ. ಅಂದಿನ ಪುರುಷರಲ್ಲಿ ಮಹಿಳೆಯರಿಗೆ ಗೌರವ ತೋರಿಸುವ ಮನೋಭಾವಗಳಿರಲಿಲ್ಲ. ಅದು ಒಂದು ಅವಶ್ಯಕತೆಯೆಂದು ಅವರಿಗೆ ಅಂದು ಅನ್ನಿಸಿರಲಿಲ್ಲ.

ಪುರೋಹಿತಶಾಹಿಯು (Pristhood) ಧರ್ಮದೊಳಗೆ ತಲೆ ಎತ್ತಿ ನಿಂತಿತ್ತು. ಧಾರ್ಮಿಕ ಹಿರಿಮೆಯು ಅದೊಂದೇ ವರ್ಗಕ್ಕೆ ಮೀಸಲಾಗಿತ್ತು. ಅವರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿತ್ತು. ಈ ಮಂದಿ ಧರ್ಮದ ಗುತ್ತೇದಾರರಾಗಿದ್ದರು. ಅಂದು ಪುರೋಹಿತರ ಮೂಲಕ ದೇವಸಾನಿಧ್ಯ ಪಡೆಯಬಹುದಾಗಿತ್ತು. ಆದರೆ ಮೋಕ್ಷ ಸಂಪಾದನೆಯ ಸ್ಪಷ್ಟವಾದ ವಿಚಾರ ಅವರಲ್ಲಿರಲಿಲ್ಲ. ಒಂದು ವರ್ಗ ಕೇವಲ ತಮ್ಮ ಪಾಲಿಗೆ ಮಾತ್ರ ಮುಕ್ತಿ ಬಿಡುಗಡೆ (Salvation)ಗಳಿವೆ ಎಂದು ಪ್ರಬಲವಾಗಿ ವಾದಿಸುತ್ತಿತ್ತು. ಆದರೆ ಅವರು ಪ್ರತಿಪಾದಿಸುತ್ತಿದ್ದ ಧರ್ಮದಲ್ಲಿ ಧರ್ಮದ ಸಹಜ ಗುಣಗಳೇ ಲೋಪಗೊಂಡಿದ್ದವು. ಒಟ್ಟಾರೆ ಅವರ ನಡುವೆ ಧರ್ಮವು ತನ್ನ ಸಹಜ ಗುಣವನ್ನೇ ಕಳೆದುಕೊಂಡಿತ್ತೆನ್ನಬಹುದು.

ಅವರು ಕೆಲವು ಉತ್ತಮವೂ ಮತ್ತು ಕೆಟ್ಟವೂ ಆದ ಸಂಪ್ರದಾಯಗಳನ್ನು ಧರ್ಮ ಎಂದು ಕರೆಯುತ್ತಿದ್ದರು. ಅಂದು ಹೆಚ್ಚು ಅಧರ್ಮವೆಸಗುತ್ತಿದ್ದವರು ಧಾರ್ಮಿಕ ವಕ್ತಾರರಾಗಿದ್ದರು. ಅಧಾರ್ಮಿಕ ಕಾರ್ಯಗಳಲ್ಲಿ ಅವರು ಪಾಲ್ಗೊಂಡು ಅದರಲ್ಲೇ ಮುಳುಗಿ ಬಿಡುತ್ತಿದ್ದರು. ದಾನ ಕೊಡುವ ಯೋಗ್ಯತೆಯೂ ಅವರಿಗೇ ಇತ್ತು.

ಈ ಎಲ್ಲದರ ನಡುವೆ ಅವರಲ್ಲಿ ಪರಲೋಕದ ಕುರಿತು ನಾನಾ ರೀತಿಯ ನಂಬಿಕೆಗಳು ಅಸ್ತಿತ್ವದಲ್ಲಿದ್ದವು. ಇಂತಹ ಉದಾಹರಣೆಗಳನ್ನು ನಾವಿಂದೂ ಕಾಣಬಹುದಾಗಿದೆ. ಅವರ ಧರ್ಮವು ಇಚ್ಛೆ, ಸ್ವಾರ್ಥ, ಲಾಲಸೆಯ ಭೌತಿಕ ರೂಪಾಂತರವಾಗಿತ್ತು. ಧರ್ಮ ಜನರಲ್ಲಿ ಅಂದು ಜಾಗೃತಿ ಮೂಡಿಸುವ ಬದಲಾಗಿ ಅಜ್ಞಾನವನ್ನು ಹರಡುತ್ತಿತ್ತೆಂದರೆ ಆಶ್ಚರ್ಯವಾಗುವುದಿಲ್ಲವೇ? ಹೌದು, ಅಂದು ಧರ್ಮ ಒಂದು ಅಂಧ ವಿಶ್ವಾಸದಂತೆ ಉಪಯೋಗಗೊಂಡಿತ್ತು. ಧರ್ಮದಲ್ಲಿ ನೈಜ ಧಾರ್ಮಿಕತೆಯಾಗಲಿ, ವಿವೇಕವಾಗಲಿ ಅಂದು ಗೋಚರಿಸುತ್ತಿರಲಿಲ್ಲ. ಅದರಲ್ಲಿ ಅಧ್ಯಾತ್ಮಿಕತೆಯ ಪ್ರಶ್ನೆಯೇ ಇರಲಿಲ್ಲ. ಧಾರ್ಮಿಕ ಮಾರ್ಗವನ್ನು ಅತಿ ಜಟಿಲಗೊಳಿಸಲಾಗಿತ್ತು. ಧರ್ಮ ಒಣ(ಶುಷ್ಕ) ಆಚರಣೆಯಾಗಿ ಮಾರ್ಪಟ್ಟಿತ್ತು. ಜನರಲ್ಲಿ ಧರ್ಮದ ಬಗ್ಗೆ ಜಿಗುಪ್ಪೆ ಹುಟ್ಟಿಕೊಂಡಿತ್ತು.

ಜನರ ಮನಸ್ಸಿನಲ್ಲಿ ಕೋಮಲ ಮತ್ತು ಮಧುರ ಭಾವನೆಗಳಿರಲಿಲ್ಲ. ಒರಟುತನ ಮೈವೆತ್ತವರಂತೆ ವರ್ತಿಸುತ್ತಿದ್ದರು. ದೇವ ಸಮರ್ಪಣೆಯ ಜೀವನ ಅಥವಾ ದೇವ ಭಯಭಕ್ತಿ ಇವೆಲ್ಲವೂ ಗ್ರಂಥಗಳಿಗೆ ಸೀಮಿತವಾಗಿತ್ತು. ಅವು ಜನರ ನಡುವೆ ಆಚರಣೆಯಲ್ಲಿರಲಿಲ್ಲ.

ಕುತೂಹಲವೆಂದರೆ ಅವರ ಧರ್ಮ ಸಂತರು ಮತ್ತು ಗುರುಗಳಿಗೆ ನೈಜ ಧರ್ಮ ಜ್ಞಾನವಿರಲಿಲ್ಲ. ಕೆಲವು ಪಾರಿಭಾಷಿಕ ಧಾರ್ಮಿಕ ಶಬ್ದಗಳನ್ನು ಅವರು ತಿಳಿದಿದ್ದರು. ಅಂಧರಿಗೆ ಬೆಳಕಿನ ಬಗ್ಗೆ ಹೇಳಿದರೆ ಅರ್ಥವಾಗುವುದು. ಆದರೆ ಬೆಳಕನ್ನು ಅಂಧರು ಅನುಭಮಿ, ತಿಳಿಯಲಾರರಷ್ಟೇ. ಒಟ್ಟಾರೆ ಇಂತಹ ಅಜ್ಞಾನದ ವಾತಾವರಣದಲ್ಲಿ ಮುಹಮ್ಮದರು(ಸ) ಆಗಮಿಸಿದರು. ಅಂದು ಸತ್ಯಸಂಧವಾದ ಧಾರ್ಮಿಕ ಜೀವನ ಯಾರೂ ನಡೆಸುತ್ತಿರಲಿಲ್ಲ. ಧರ್ಮದೊಳಗೆ ಅನುಚಿತವಾದ ಮಿಶ್ರಣ ಮತ್ತು ಲೋಪಗಳು ತಲೆಯೆತ್ತಿದ್ದವು. ಆದುದರಿಂದ ಸತ್ಯವೆಂಬುದು ಸಹಜವಾಗಿ ಮರೆಗೆ ಸೇರಿತ್ತು. ಇಂತಹ ಜನರನ್ನು ತರಬೇತಿ ಮಾರ್ಗದರ್ಶನಗಳ ಮೂಲಕ ಸನ್ಮಾರ್ಗದಲ್ಲಿ ಮುನ್ನಡೆಸುವ ಹೊಣೆಯೊಂದಿಗೆ ಮುಹಮ್ಮದರನ್ನು(ಸ) ಪ್ರವಾದಿಯಾಗಿ ನಿಯೋಜಿಸಲಾಯಿತು. ಅವರು ಯಾವುದೋ ವಿಶಿಷ್ಟ ಜನಾಂಗಕ್ಕೆ ಮಾತ್ರ ಪ್ರವಾದಿಯಾಗಿರಲಿಲ್ಲ ಬದಲಾಗಿ ಅವರು ಸಕಲ ಮಾನವರಿಗೂ ಮಾರ್ಗದರ್ಶನ ನೀಡಬೇಕಾಗಿತ್ತು. ಮಾನವರಿಗೆ ನೈಜ ಗುರಿ, ನೈಜ ಉದ್ದೇಶಗಳನ್ನು ಹೇಳಿಕೊಡುವುದು ಪ್ರವಾದಿವರ್ಯರ(ಸ) ಹೊಣೆಯಾಗಿತ್ತು. ಮಾನವರಿಗೆ ದೇವನ ಶಿಕ್ಷಣಗಳೇನು? ದೇವನ ಸಂಪ್ರೀತಿ ಗಳಿಸಬೇಕಾದರೆ ಮಾನವರು ಯಾವ ರೀತಿ ಬದುಕಬೇಕಾಗಿದೆಯೆಂದು ಅವರು(ಸ) ತಿಳಿಸಬೇಕಾಗಿತ್ತು.

ಪ್ರವಾದಿಯ ವ್ಯಕ್ತಿತ್ವ ಮತ್ತು ಕರ್ತವ್ಯಗಳ ಹೊಳಪು
ಪ್ರವಾದಿ ಮುಹಮ್ಮದರು(ಸ) ತಮ್ಮ ಈ ಕರ್ತವ್ಯವನ್ನು ನಿರ್ವಹಿಸಲು ನಾನಾ ಸಂಕಷ್ಟಗಳನ್ನು ಎದುರಿಸಿದರು. ಜನರು ಅವರ ಬದ್ಧ ವೈರಿಗಳಾದರು. ಪ್ರವಾದಿಯ(ಸ) ಮೇಲೆ ವಿಶ್ವಾಸವಿರಿಸಿದ ಜನರನ್ನು ಸತಾಯಿಸಿದರು. ವಿರೋಧಿಗಳ ಕಿರುಕುಳ ಮಿತಿ ಮೀರಿದಾಗ ಪ್ರವಾದಿವರ್ಯರು(ಸ) ಹುಟ್ಟೂರು ತೊರೆಯಬೇಕಾಯಿತು. ಸಂಗಡಿಗರೊಂದಿಗೆ ಮದೀನಾದಲ್ಲಿ ಆಶ್ರಯ ಪಡೆಯಬೇಕಾಯಿತು. ಹೀಗಿದ್ದರೂ ಪ್ರವಾದಿವರ್ಯರು(ಸ) ತಮ್ಮ ಕರ್ತವ್ಯದಲ್ಲಿ ಕಿಂಚಿತ್ತೂ ಚ್ಯುತಿ ಮಾಡಲಿಲ್ಲ. ಕರ್ತವ್ಯ ನಿರ್ವಹಿಸಲು ಅವರು ನಿರಂತರವಾಗಿ ಶ್ರಮಿಸಿದರು.

ಪ್ರವಾದಿವರ್ಯರು(ಸ) ದೇವನಿಂದ ಮಹಾನತೆ ಲಭಿಸಿದ್ದ ವ್ಯಕ್ತಿಯಾಗಿದ್ದಾರೆ. ಅವರು ಅತ್ಯಂತ ವಿಶಾಲ ಹೃದಯಿಯಾಗಿದ್ದರು ಪರಿಶುದ್ಧವೂ ಕೋಮಲವೂ ಆದ ಸ್ವಭಾವ ಅವರದ್ದಾಗಿತ್ತು. ಅವರು ಕರುಣೆ-ಮಮತೆಗಳ ಆಗರವಾಗಿದ್ದರು. ಅವರ ನೆರವಿಗೆ ದೇವನಿದ್ದನು. ಅವನು ಅವರಿಗೆ ಸಹಾಯವೊದಗಿಸುತ್ತಿದ್ದನು. ಆದುದರಿಂದ ಅದ್ಭುತಾದ್ಭುತವಾದ ಮಹಾ ಕಾರ್ಯಗಳನ್ನು ಅವರು ಸಾಧಿಸಿದರು.

ಮುಖ್ಯವಾಗಿ ವ್ಯಕ್ತಿಯ ಮಹಾನತೆಗಳನ್ನು ಎರಡು ವಿಧದಿಂದ ನಾವು ಗುರುತಿಸಬಹುದಾಗಿದೆ. ಮಹಾನ್ ವ್ಯಕ್ತಿಗಳಾಗಿರುವವರು ಉದಾರ ದಾನಿಗಳಾಗಿರುವರು. ಪ್ರವಾದಿ ವರ್ಯರು(ಸ) ಮಹಾದಾನಿಯಾಗಿದ್ದರು. ‘ನನಗೆ ಉಹುದ್ ಬೆಟ್ಟದಷ್ಟು ಬಂಗಾರ ಲಭಿಸಿದರೆ ಸಾಲ ಸಂದಾಯಕ್ಕೆ ಅವಶ್ಯಕವಾದುದನ್ನು ಹೊರತು ಅದರ ಒಂದು ದೀನಾರ್ ಕೂಡಾ ನನ್ನ ಬಳಿ ಮೂರು ದಿವಸಕ್ಕಿಂತ ಹೆಚ್ಚು ಕಾಲ ಉಳಿಯುವುದನ್ನು ಬಯಸಲಾರೆ ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಇಂತಹ ಮಹಾನ್ ದಾನಶೀಲ ವ್ಯಕ್ತಿ ಪ್ರವಾದಿಯಾಗಿದ್ದಾರೆ(ಸ).

ಪ್ರವಾದಿಯು(ಸ) ಜಗತ್ತಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಅವರ ಬಳಿಯಿದ್ದ ಒಂದು ಚಿನ್ನದ ಗಟ್ಟಿಯನ್ನು ಸದಕಾ(ದಾನ) ನೀಡುವಂತೆ ಹೇಳಿದ್ದರು.

ಮರಣದ ವೇಳೆ ಪ್ರಜ್ಞೆ ತಪ್ಪಿ ಮರುಕಳಿಸಿದಾಗಲೆಲ್ಲ “ಸದಕಾ(ದಾನ) ನೀಡಿದ್ದೀರಾ? ನಾನು ಮನೆಯಲ್ಲಿ ಸಂಪತ್ತು ಉಳಿಸಿಕೊಂಡ ಸ್ಥಿತಿಯಲ್ಲಿ ದೇವನನ್ನು ಭೇಟಿಯಾಗಲು ಇಚ್ಛಿಸುವುದಿಲ್ಲ’ ಎಂದು ಪ್ರವಾದಿವರ್ಯರು(ಸ) ಹೇಳುತ್ತಿದ್ದರು.

ಅವರು ಸಜ್ಜನ ವ್ಯಕ್ತಿಯಾಗಿದ್ದರು. ಬಹಳ ಸರಳವಾಗಿ ಬದುಕಿದರು. ಕೇವಲ ಒಂದು ಜೋಡಿ ಬಟ್ಟೆ ಮಾತ್ರ ಅವರಲ್ಲಿತ್ತು. ನಿಧನಗೊಂಡ ಸಮಯದಲ್ಲಿ ಅವರು ತೇಪೆ ಹಚ್ಚಿದ್ದ ಬಟ್ಟೆಯನ್ನು ಧರಿಸಿದ್ದರು. ಅವರ ಮನೆಯಲ್ಲಿ ಸಾಮಾನ್ಯವಾದ ಒಂದು ಮಂಚವಿತ್ತು. ಮರಣದ ವೇಳೆ ಚರ್ಮದ ಹೂಜಿ, ಸ್ವಲ್ಪ ಜೋಳ ಬಿಟ್ಟರೆ ಅವರ ಮನೆಯಲ್ಲಿ ಬೇರೇನೂ ಇರಲಿಲ್ಲ,

ಆದರೆ ಮರಣದ ವೇಳೆ ಅವರು 10 ಲಕ್ಷ ಮೈಲು ವಿಸ್ತೀರ್ಣವಾದ ಭೂಭಾಗದ ಆಡಳಿತಗಾರರಾಗಿದ್ದರು. ಯಮನ್‌ನಿಂದ ಸಿರಿಯಾದವರೆಗಿನ ಇಸ್ಲಾಮೀ ಸಾಮ್ರಾಜ್ಯದ ಅಧಿಕಾರ ಅವರ ಕೈಯಲ್ಲಿತ್ತು.

ತಮ್ಮ ಪತ್ನಿಯರಿಗೆ ಗಟ್ಟಿಮುಟ್ಟಾದ ಕೋಣೆಯನ್ನು ಕೂಡಾ ಅವರು(ಸ) ಕಟ್ಟಿಸಿರಲಿಲ್ಲ. ಒಬ್ಬ ವ್ಯಕ್ತಿ ನೆಟ್ಟಗೆ ನಿಂತರೆ ಅದರ ಛಾವಣಿ ತಲೆಗೆ ತಾಗುತ್ತಿತ್ತು. ಅದನ್ನು ನಂತರ ಉಮವಿ ವಂಶದ ಖಲೀಫ ಅಬ್ದುಲ್ ಮಲಿಕ್‌ರು ಪ್ರವಾದಿವರ್ಯರ(ಸ) ಮಸೀದಿ ವಿಸ್ತರಣೆಗಾಗಿ ಅನಿವಾರ್ಯವಾಗಿ ಕೆಡವಿದರು. ಅಂದು ಮದೀನಾ ನಿವಾಸಿಗಳು ಅತ್ತರು. ಅವರಿಗೆ ಅದನ್ನು ಉಳಿಸಿಕೊಳ್ಳಬೇಕಾಗಿತ್ತು. 10 ಲಕ್ಷ ಮೈಲು ವಿಸ್ತೀರ್ಣದ ಭೂಭಾಗಕ್ಕೆ ಆಡಳಿತಗಾರನಾಗಿದ್ದ ಪ್ರವಾದಿವರ್ಯರ(ಸ) ಸರಳ ಬದುಕನ್ನು ನಂತರದ ತಲೆಮಾರು ನೋಡಬೇಕೆಂದು ಅವರು ಬಯಸಿದರು. ಪ್ರವಾದಿವರ್ಯರ(ಸ) ಬದುಕು ಅಷ್ಟು ಸರಳವಾಗಿತ್ತು. “ನಾನು” ಹಂಚುವವನು ಮತ್ತು ಅಲ್ಲಾಹನು ನೀಡುವವನು” ಎಂದು ಹೇಳುತ್ತಿದ್ದರು.

ಮಹಾನ್ ವ್ಯಕ್ತಿಗಳಲ್ಲಿ ಅಪಾರ ಕ್ಷಮಾ ಗುಣವಿರುತ್ತದೆ. ಪ್ರವಾದಿವರ್ಯರಲ್ಲಿ(ಸ) ಈ ಗುಣ ಪರಿಪೂರ್ಣ ರೂಪದಲ್ಲಿತ್ತು. ತಾಯಿಫ್‌ನ ಜನರು ಕಲ್ಲೆಸೆದು ಅವರಿಗೆ(ಸ) ಕಿರುಕುಳಕೊಟ್ಟರು. ಕಾಲಿಗೆ ಗಾಯವಾಗಿ ರಕ್ತ ಒಸರುತ್ತಿತ್ತು. ಅವರ ಚಪ್ಪಲಿ ರಕ್ತದಿಂದ ತೊಯ್ದಿತ್ತು. ಇಂತಹ ಕಿರುಕುಳವನ್ನು ಅವರು ಸಹಿಸಿದರು. ಆದರೂ ಅವರು ತಾಯಿಫ್‌ನ ಜನರನ್ನು ಕ್ಷಮಿಸಿದರು. “ಓ ಅಲ್ಲಾಹ್! ಇವರನ್ನು ಕ್ಷಮಿಸು. ಇವರು ಅಜ್ಞಾನಿಗಳಾಗಿದ್ದಾರೆ ಎಂದು ಅಲ್ಲಾಹನನ್ನು ಪ್ರಾರ್ಥಿಸಿದರು.

ಮಕ್ಕಾ ವಿಜಯದ ವೇಳೆಯೂ ಪ್ರವಾದಿವರ್ಯರ(ಸ) ಅಪಾರ ಕ್ಷಮಾಗುಣ ಪ್ರದರ್ಶನಗೊಂಡಿತ್ತು. ಅವರನ್ನು ಕೊಲ್ಲಲು ಆ ಜನರು ತಯಾರಿ ನಡೆಸಿದ್ದರು. ಅಂತಹ ಜನ ಸಮೂಹವನ್ನು ಕ್ಷಮಿಸಿ ಪ್ರವಾದಿವರ್ಯರು(ಸ) ಹೇಳಿದರು- “ಹೋಗಿರಿ, ನೀವು ಸ್ವತಂತ್ರರಾಗಿದ್ದೀರಿ.” ಪ್ರವಾದಿವರ್ಯರನ್ನು(ಸ) ಮತ್ತು ಸಂಗಡಿಗರನ್ನು ಇದೇ ಜನರು ಸತಾಯಿಸಿದ್ದರು. ಅವರು ಪ್ರವಾದಿವರ್ಯರನ್ನು(ಸ) ಕೊಲೆಗೈಯಲೆಂದು ಅದೊಂದು ದಿನ ಸಕಲ ಸಿದ್ಧತೆಗಳೊಂದಿಗೆ ಪ್ರವಾದಿವರ್ಯರ(ಸ) ಮನೆಗೆ ಮುತ್ತಿಗೆ ಹಾಕಿದ್ದರು. ಪ್ರವಾದಿವರ್ಯರು(ಸ) ಇಂತಹ ಪ್ರಾಣ ಶತ್ರುಗಳಿಗೂ ಕ್ಷಮೆ ನೀಡಿದ್ದು ಮಾತ್ರವಲ್ಲ ಅವರನ್ನು ಗೌರವಿಸಿದರು.

ಹಜ್ಜ್ ನ ಸಂದರ್ಭದಲ್ಲಿ ಮಕ್ಕಾದ ಅರಫಾತ್ ಮೈದಾನದಲ್ಲಿ ನೀಡಿದ ಪ್ರವಾದಿವರ್ಯರ(ಸ) ಭಾಷಣವು ಹೀಗಿದೆ-

“ಜನರೇ, ಈ ವರ್ಷದ ಬಳಿಕ ನಾವು ಪರಸ್ಪರ ಇಲ್ಲಿ ಭೇಟಿಯಾಗುತ್ತೇವೋ ಇಲ್ಲವೋ ಎಂದು ನನಗೆ ತಿಳಿಯದು. ಜನರೇ, ಖಂಡಿತವಾಗಿಯೂ ನಿಮ್ಮ ರಕ್ತ, ನಿಮ್ಮ ಸೊತ್ತು ಮತ್ತು ನಿಮ್ಮ ಮಾನವು ನೀವು ನಿಮ್ಮ ಪ್ರಭುವಿನ ಬಳಿ ಹಾಜರಾಗುವ ತನಕ ಪವಿತ್ರವೂ ಅನುಲ್ಲಂಘನೀಯವೂ ಆಗಿದೆ, ನಿಮ್ಮ ಈ ದಿನ, ನಿಮ್ಮ ಈ ತಿಂಗಳು, ನಿಮ್ಮ ಈ ನಗರವು ಪವಿತ್ರವೂ ನಿಷಿದ್ಧವೂ ಆಗಿರುವಂತೆ. ಖಂಡಿತವಾಗಿಯೂ ನೀವು ಸದ್ಯವೇ ನಿಮ್ಮ ಪ್ರಭುವನ್ನು ಭೇಟಿಯಾಗುವಿರಿ. ಹೌದು! ನಿಮ್ಮ ಕರ್ಮಗಳಿಗಾಗಿ ಅಲ್ಲಿ ವಿಚಾರಣೆಗೊಳಗಾಗುವಿರಿ. ತಿಳಿಯಿರಿ! ಅಜ್ಞಾನ ಕಾಲದ ಎಲ್ಲ ಸಂಪ್ರದಾಯಗಳು ನನ್ನ ಪಾದಗಳಡಿಯಲ್ಲಿವೆ. ಅಜ್ಞಾನ ಕಾಲದ ಎಲ್ಲ ಕೊಲೆಯ ಪ್ರತೀಕಾರಗಳನ್ನು ಅನೂರ್ಜಿತಗೊಳಿಸಲಾಗಿದೆ. ಆ ಪೈಕಿ ಮೊದಲ ಕೊಲೆಯ ಪ್ರತೀಕಾರವನ್ನು ಅನೂರ್ಜಿತಗೊಳಿಸುವುದಾಗಿ ನಾನು ಘೋಷಿಸುತ್ತೇನೆ. ಅದು ಸಅದ್ ಗೋತ್ರಕ್ಕೆ ಸೇರಿದ ರಬೀಆ ಬಿನ್ ಹಾರಿಸ್‌ರ ಕೊಲೆಯ ಪ್ರತೀಕಾರವಾಗಿದೆ. ಅವರನ್ನು ಹುಝೈಲರು ಕೊಂದಿದ್ದರು. ಅಜ್ಞಾನ ಕಾಲದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಲಾಗಿದೆ. ಆ ಪೈಕಿ ಮೊದಲನೆಯದಾಗಿ ನಾನು (ನನ್ನ ಪಿತೃ ಸಹೋದರ) ಅಬ್ಬಾಸ್ ಬಿನ್ ಮುತ್ತಲಿಬ್‌ರಿಗೆ ಸಲ್ಲಬೇಕಾದ ಎಲ್ಲ ಬಡ್ಡಿಗಳನ್ನು ಮನ್ನಾ ಮಾಡಿರುವುದಾಗಿ ಘೋಷಿಸುತ್ತೇನೆ. ಖಂಡಿತವಾಗಿಯೂ ಅದು ಸಂಪೂರ್ಣವಾಗಿ ಮನ್ನಾ ಆಯಿತು.

ಜನರೇ, ನಿಮಗೆ ನಿಮ್ಮ ಪತ್ನಿಯರ ಮೇಲೆ ಕೆಲವು ಹಕ್ಕುಗಳಿವೆ ಮತ್ತು ಪತ್ನಿಯರಿಗೆ ನಿಮ್ಮ ಮೇಲೂ ಹಕ್ಕುಗಳಿವೆ. ನಿಮ್ಮ ದಾಂಪತ್ಯ ಸಂಬಂಧದ ಪಾವಿತ್ರ್ಯವನ್ನು ಕುಪಾಡಬೇಕಾದುದು ಮತ್ತು ನಿಮ್ಮ ಹೊರತು ಇತರ ಯಾರನ್ನೂ ನಿಮ್ಮ ಹಾಸಿಗೆಗೆ ಬರಗೊಡದಿರುವುದು ಅವರ ಮೇಲೆ ನಿಮ್ಮ ಹಕ್ಕಾಗಿದೆ. ಅದರಲ್ಲಿ ಅವರು ಚ್ಯುತಿ ಮಾಡಿದರೆ ಅವರನ್ನು ನಿಮ್ಮ ಹಾಸಿಗೆಯಿಂದ ಬೇರ್ಪಡಿಸಬಹುದು. ಗಾಯ ಅಥವಾ ಕಲೆ ಆಗದ ರೀತಿಯಲ್ಲಿ ಅವರನ್ನು ಹೊಡೆಯಬಹುದು ಮತ್ತು ಅದರಿಂದ ಅವರು ತಿದ್ದಿಕೊಂಡು ನಿಮಗೆ ವಿಧೇಯರಾದರೆ ಅವರಿಗೆ ನಿಮ್ಮ ಸಾಮರ್ಥ್ಯಾನುಸಾರ ಉಣಿಸಿರಿ ಹಾಗೂ ತೊಡಿಸಿರಿ ತಿಳಿಯಿರಿ! ಪತಿಯ ಸಂಪತ್ತಿನಿಂದ ಅವನ ಅನುಮತಿಯಿಲ್ಲದೆ ಏನನ್ನೂ ದಾನ ಮಾಡುವುದು ಪತ್ನಿಗೆ ಧರ್ಮ ಸಮ್ಮತವಲ್ಲ, ಖಂಡಿತಾ ನಾನು ನಿಮ್ಮ ಬಳಿ ನಿಮ್ಮನ್ನೆಂದೂ ದಾರಿ ತಪ್ಪಿಸದ ವಸ್ತುವನ್ನು ಬಿಟ್ಟಗಲುತ್ತೇನೆ. ಅಲ್ಲಾಹನ ಗ್ರಂಥ ಮತ್ತು ಆತನ ಪ್ರವಾದಿಯ ಸುನ್ನತ್ (ಜೀವನ ವಿಧಾನ) ಅವುಗಳನ್ನು ನೀವು ಬಿಗಿ ಹಿಡಿದರೆ ನೀವೆಂದೂ ದಾರಿ ತಪ್ಪಲಾರಿರಿ. ಜಾಗ್ರತೆ! ಧರ್ಮದ ವಿಷಯದಲ್ಲಿ ಅತಿರೇಕ ಎಸಗಬೇಡಿರಿ. ಧಾರ್ಮಿಕ ವಿಷಯದಲ್ಲಿ ಅತಿರೇಕವೆಸಗಿಯೇ ನಿಮ್ಮ ಪೂರ್ವಜರಲ್ಲಿ ಅನೇಕರು ನಾಶ ಹೊಂದಿದರು.

ಜನರೇ, ನನ್ನ ನಂತರ ಯಾವ ಪ್ರವಾದಿಯೂ ನಿಯುಕ್ತರಾಗುವುದಿಲ್ಲ, ನಿಮ್ಮ ನಂತರ ಯಾವ ಸಮುದಾಯವೂ ರಚಿಸಲ್ಪಡುವುದಿಲ್ಲ. ಕೇಳಿರಿ! ನಿಮ್ಮ ಪ್ರಭುವನ್ನು ಆರಾಧಿಸಿರಿ. ದಿನಕ್ಕೆ ಐದು ಬಾರಿ ನಮಾಝ್ ನಿರ್ವಹಿಸಿರಿ. ರಮಝಾನ್ ತಿಂಗಳಲ್ಲಿ ಉಪವಾಸ ಆಚರಿಸಿರಿ. ನಿಮ್ಮ ಸಂಪತ್ತಿನ ಮೇಲಿನ ಝಕಾತನ್ನು ಸಂತೋಷದಿಂದ ಪಾವತಿ ಮಾಡಿರಿ. ಅಲ್ಲಾಹನ ಭವನದ ಹಜ್ ಯಾತ್ರೆಯನ್ನು ಕೈಗೊಳ್ಳಿರಿ. ನಿಮ್ಮ ಆಜ್ಞಾಧಿಕಾರಿಗಳನ್ನು ಅನುಸರಿಸಿರಿ. ನೀವು ನಿಮ್ಮ ಪ್ರಭುವಿನ ಸ್ವರ್ಗದಲ್ಲಿ ಪ್ರವೇಶಿಸಲ್ಪಡುವಿರಿ.

ನನ್ನ ಬಗ್ಗೆ ಕಿಯಾಮತ್‌ನ ದಿವಸ ನಿಮ್ಮನ್ನು ವಿಚಾರಿಸಿದಾಗ ನೀವು ಏನೆಂದು ಹೇಳುವಿರಿ?

ಜನರು ಹೇಳಿದರು! ನೀವು ಧರ್ಮದ ಅಮಾನತನ್ನು ತಲುಪಿಸಿರುವಿರಿ. ನಿಮ್ಮ ಪ್ರವಾದಿತ್ವ ರಾಯಭಾರವನ್ನು ಸಂಪೂರ್ಣ ನಿರ್ವಹಿಸಿರುವಿರಿ ಮತ್ತು ನಮ್ಮ ಕಲ್ಯಾಣದ ಬಗ್ಗೆ ಕಾಳಜಿ ವಹಿಸಿರುವಿರಿ ಎಂದು ನಾವು ಸಾಕ್ಷ್ಯ ವಹಿಸುತ್ತೇವೆ.

ಆಗ ಅಲ್ಲಾಹನ ಸಂದೇಶವಾಹಕರು ತನ್ನ ತೋರ್ಬೆರಳನ್ನು ಆಕಾಶದತ್ತ ತೋರಿಸುತ್ತಾ ಜನರೆಡೆಗೆ ತೋರಿಸಿ ಹೀಗೆ ಹೇಳಿದರು.

ನೀನು ಸಾಕ್ಷಿಯಾಗಿರು. ಓ ಅಲ್ಲಾಹ್! ನೀನು ಸಾಕ್ಷಿಯಾಗಿರು.

ಕೇಳಿರಿ! ಇಲ್ಲಿ ಹಾಜರಿರುವವರು ಹಾಜರಿಲ್ಲದವರಿಗೆ ಇದನ್ನು (ಸಂದೇಶವನ್ನು) ತಲುಪಿಸಬೇಕು. ನೀವು ತಲುಪಿಸುವವರ ಪೈಕಿ ಅನೇಕ ಜನರು ಅದರ ಬಗ್ಗೆ ನಿಮಗಿಂತ ಕಾಳಜಿಯಿರುವವರಾಗಿರಬಹುದು.

‘ದ ಮೆಸೇಜ್’ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …