Home / ಲೇಖನಗಳು / ಪವಾಡದಂತೆ ನಡೆದು ಹೋದ ಈಜಿಪ್ಟ್ ವೈದ್ಯರ ಹಜ್

ಪವಾಡದಂತೆ ನಡೆದು ಹೋದ ಈಜಿಪ್ಟ್ ವೈದ್ಯರ ಹಜ್

ಕಳೆದ ವರ್ಷದ ಹಜ್ಜ್ ನ ಸಂದರ್ಭ. ಹಜ್ಜ್ ಕರ್ಮ ಮತ್ತು ಅದರ ವಿಧಿ ವಿಧಾನಗಳನ್ನು ಮುಗಿಸಿ ಊರಿಗೆ ಹಿಂತಿರುಗಲು ಆ ಇಬ್ಬರು ಹಾಜಿಗಳು ಜಿದ್ದಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೆಯಿಟಿಂಗ್ ಹಾಲ್‌ನಲ್ಲಿ ಕುಳಿತಿದ್ದರು. ಓರ್ವ ಟುನೀಶ್ಯಾದ ಶ್ರೀಂಮತ ವ್ಯಕ್ತಿ ಅಬೂ ನಜೀಬ್. ಇನ್ನೋರ್ವ ಈಜಿಪ್ಟಿನ ಫಿಸಿಯೋಥೆರಪಿಸ್ಟ್ ಸಈದ್. ಈರ್ವರೂ ಪರಸ್ಪರ ವಿವರವಾಗಿ ಪರಿಚಯಪಟ್ಟುಕೊಂಡರು.

ಧನಿಕ: ನಾನು ಸಂಧಾನಕಾರನಾಗಿ ಕೆಲಸ ಮಾಡುತ್ತೇನೆ. ಈ ವರ್ಷದ ಹಜ್ಜ್ ನನ್ನ 10ನೇ ಹಜ್ಜ್ ಆಗಿದೆ.

ಸಈದ್: ಮಬ್ರೂಕ್, ಅಲ್ಲಾಹನು ನೀವು ಮಾಡಿದ ಹಜ್ಜನ್ನು ಸ್ವೀಕರಿಸಿ, ಪಾಪಗಳನ್ನು ಕ್ಷಮಿಸಲಿ…

ಧನಿಕ: ಆಮೀನ್. ತಮಗೂ ಅಲ್ಲಾಹನು ಹಜ್ಜನ್ನು ಸ್ವೀಕರಿಸಿ ಪಾಪಗಳನ್ನು ಮನ್ನಿಸಲಿ. ತಾವು ಇದು ಮಕ್ಕಾಕ್ಕೆ ಪ್ರಥಮ ಭೇಟಿಯೇ?

ಸಈದ್: ಹೌದು, ತುಂಬಾ ಸಮಯದಿಂದ ಬರಬೇಕೆಂಬ ಆಶೆಯಿತ್ತು. ಆದರೆ ಈ ಬಾರಿ ಬರಲು ಸಾಧ್ಯವಾಯಿತು.

ಧನಿಕ: ತುಂಬಾ ಸಮಯದಿಂದಲಾ? ಏನಿತ್ತು ಸಮಸ್ಯೆ?

ಸಈದ್: ನನ್ನ ಹಜ್ಜ್ ನದ್ದು ದೀರ್ಘ ಕಥೆಯಾಗಿದೆ ಹಾಜೀ.

ಧನಿಕ: ಏನಿದ್ದರೂ ನನ್ನ ವಿಮಾನ ಬರಲು ಇನ್ನೂ ತುಂಬಾ ಸಮಯವಿದೆ. ನೀವು ಹೇಳಿ.

ಸಈದ್ ನಗುತ್ತಾ ಹೇಳಿದರು: ಹೌದು, ಸುದೀರ್ಘವಾದ ಕಾಯುವಿಕೆಯ ಬಳಿಕವೇ ನನ್ನ ಕಥೆ ಆರಂಭವಾಗುತ್ತದೆ. ಈ ಹಜ್ಜ್ ನಿರ್ವಹಿಸಲು ನಾನು ವರ್ಷಗಳಿಂದ ಕಾಯುತ್ತಲಿದ್ದೆ. 30 ವರ್ಷದಿಂದ ನನ್ನ ಊರಿನ ಖಾಸಗಿ ಆಸ್ಪತ್ರೆಯಲ್ಲಿ ಫಿಸಿಯೋ ಥೆರಪಿಷ್ಟ್ ಆಗಿ ಕೆಲಸ ಮಾಡಿ ಹಜ್ಜ್ ಗೆ ಬೇಕಾದ ಹಣ ಸಂಗ್ರಹಿಸಲು ಸಾಧ್ಯವಾಯಿತು. ಹೀಗೆ ಈ ಬಾರಿಯ ಹಜ್ಜ್ ಗೆ ಸಂಕಲ್ಪ ಮಾಡಿ, ಆಸ್ಪತ್ರೆಯಲ್ಲಿ ಒಂದು ತಿಂಗಳ ರಜೆ ತೆಗೆದು ಹೊರ ಬರುವಾಗ ಆ ಅಮ್ಮನನ್ನು ಕಂಡಿತು. ಪಕ್ಷಪಾತ ಪೀಡಿತನಾದ ಅವರ ಮಗ ಐದಾರು ವರ್ಷದಿಂದ ನನ್ನ ಪೇಶಂಟ್ ಆಗಿದ್ದ. ಅವರ ಮುಖದಲ್ಲಿ ಆತಂಕ ಹಾಗೂ ದುಃಖ ತುಂಬಿಕೊಂಡಿತ್ತು.

ಅವರು ಅಳುತ್ತಾ ನನ್ನೊಡನೆ ಹೇಳಿದರು: ವೈದ್ಯರೇ, ನಮ್ಮದು ಈ ಆಸ್ಪತ್ರೆಗೆ ಕೊನೆಯ ಭೇಟಿ. ಇನ್ನು ಮುಂದೆ ನಾವು ಪರಸ್ಪರ ಭೇಟಿಯಾಗಬಹುದೆಂದು ಅನಿಸುತ್ತಿಲ್ಲ.

ಅವರ ಮಾತು ಕೇಳಿ ನನಗೆ ಆಶ್ಚರ್ಯವಾಯಿತು. ಅವರ ಮಗನ ಚಿಕಿತ್ಸೆಯಿಂದ ಅವರು ತೃಪ್ತರಲ್ಲವೆಂದೂ, ಆದ್ದರಿಂದ ಬೇರೆ ಕಡೆಗೆ ಚಿಕಿತ್ಸೆಗೆ ಹೋಗುತ್ತಾರೆಂದೂ ನಾನು ಭಾವಿಸಿದೆ.

ಆಕೆ ನನ್ನೊಡನೆ ಹೇಳಿದರು: ವೈದ್ಯರೇ, ನೀವು ನನ್ನನ್ನು ಒಡಹುಟ್ಟಿದವರಂತೆ ಪ್ರೀತಿಸುತ್ತೀರಿ. ನನ್ನ ಮಗನ ಕಾಲು ಚಲಿಸಲು ಆರಂಭಿಸಿದ್ದೇ ನಿಮ್ಮ ಚಿಕಿತ್ಸೆಯಿಂದ… ಎಂದು ಹೇಳಿ ಕಣ್ಣೀರು ಒರೆಸಿಕೊಂಡರು. ತಟ್ಟನೆ ಸಲಾಮ್ ಹೇಳಿ ಹೊರಟರು.

ನಾನು ಕೂಡಲೇ ಆಸ್ಪತ್ರೆಯ ಆಫೀಸ್ ರೂಮ್ ಗೆ ಹೋಗಿ ವಿಚಾರಿಸಿದೆ. ಎರಡು ಮೂರು ತಿಂಗಳಿನಿಂದ ಅವರ ಬಿಲ್ ಬಾಕಿಯಾಗಿದೆ ಎಂದು ತಿಳಿಯಿತು. ಅವರ ಪತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಈಗ ವಯಸ್ಸಾಗಿದೆಯೆಂದು ಹೇಳಿ ಅವರನ್ನು ಕೆಲಸದಿಂದ ತೆಗೆಯಲಾಗಿತ್ತು. ಇನ್ನು ಮನೆಯ ಖರ್ಚು, ಆಸ್ಪತ್ರೆಯ ಬಿಲ್ ಎಲ್ಲಾ ಒಟ್ಟಾಗಿ ಭರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಮಗನ ಚಿಕಿತ್ಸೆಯನ್ನು ನಿಲ್ಲಿಸಲು ತೀರ್ಮಾನಿಸಿದ್ದರು. ನಾನು ಕೂಡಲೇ ಆಸ್ಪತ್ರೆಯ ಮ್ಯಾನೇಜಿಂಗ್ ಡೈರಕ್ಟರ್‌ರ ಚೇಂಬರ್‌ಗೆ ಹೋಗಿ ವಿಷಯವನ್ನು ತಿಳಿಸಿದೆ. ಅವರು ತನ್ನ ಟೈಯನ್ನು ಬಿಗಿಗೊಳಿಸಿ ಸ್ವಲ್ಪ ಗಂಭೀರವಾಗಿಯೇ ಹೇಳಿದರು:

“ಸೀ ಮಿಸ್ಟರ್ ಸಈದ್, ನೀವು ಕೇವಲ ಇಲ್ಲಿ ಫಿಸಿಯೋಥೆರಪಿಸ್ಟ್ ಮಾತ್ರ ಆಗಿದ್ದೀರಿ. ಆ ಹುಡುಗ ನಿಮ್ಮ ಪೇಶಂಟ್ ಆಗಿದ್ದಾನೆ. ಓಕೆ. ಇದು ಒಂದು ಧರ್ಮಾಸ್ಪತ್ರೆಯಲ್ಲ, ಉಚಿತವಾಗಿ ಚಿಕಿತ್ಸೆ ನೀಡುವ ಚಾರಿಟಿ ಹಾಸ್ಪಿಟಲ್‌ಗಳು ಈ ಊರಿನಲ್ಲಿದೆ. ಎಲ್ಲಾ ವಿಷಯಕ್ಕೂ ಹೀಗೆ ವಕಾಲತ್ತು ವಹಿಸಿಕೊಂಡು ಬರಬಾರದು ಮಿಸ್ಟರ್ ಸಈದ್. ಸೋ ಯು ಮೇ ಗೋ…”

ನಾನು ಸೀದಾ ಅಕೌಂಟ್ ಗೆ ಹೋಗಿ ಹಜ್ಜ್ ಗಾಗಿ ಇರಿಸಿದ್ದ ಹಣದಿಂದ ಆ ಹುಡುಗನ ಬಿಲ್ಲನ್ನು ಭರಿಸಿದೆ. ಆರು ತಿಂಗಳ ಚಿಕಿತ್ಸೆಗೆ ಬೇಕಾದ ಅಡ್ವಾನ್ಸ್ ಅನ್ನು ಕಟ್ಟಿ ಇಳಿದು ಬರುವಾಗ ಆ ಅಮ್ಮ ಎಲ್ಲಾ ವಸ್ತುಗಳನ್ನು ವಾಹನದಲ್ಲಿ ಇರಿಸುತ್ತಿದ್ದರು.

ನಾನವರೊಂದಿಗೆ ಹೇಳಿದೆ: “ಆರು ತಿಂಗಳಲ್ಲಿ ನಿಮ್ಮ ಮಗ ನಡೆಯಲಾರಂಭಿಸುತ್ತಾನೆ. ಅದಕ್ಕೆ ಬೇಕಾದ ಸೌಕರ್ಯ ನಾನು ಮಾಡಿದ್ದೇನೆ. ನನ್ನ ರಜೆ ಮುಗಿದು ಬರುವವರೆಗೆ ನನಗಿಂತ ಯೋಗ್ಯನಾದ ವೈದ್ಯರು ಅವನನ್ನು ನೋಡಿಕೊಳ್ಳುತ್ತಾರೆ. ರಜೆ ಮುಗಿದು ನಾನು ಬರುತ್ತೇನೆ. ಇನ್ಶಾಅಲ್ಲಾಹ್.”

ಆ ಅಮ್ಮ ನನಗಾಗಿ ತುಂಬಾ ಹೊತ್ತು ಪ್ರಾರ್ಥಿಸಿದರು. ನಾನು ಸ್ಕೂಟರ್ ತೆಗೆದುಕೊಂಡು ಮನೆಗೆ ಹೋಗಿ, ವಸ್ತ್ರ ಬದಲಿಸಿ ಹಜ್ಜ್ ತಪ್ಪಿ ಹೋದ ದುಃಖದಲ್ಲಿ ಕುಳಿತುಕೊಂಡಿದ್ದೆ. ಅನಾರೋಗ್ಯ ಪೀಡಿತ ಹುಡುಗನಿಗೆ ಚಿಕಿತ್ಸೆ ನೀಡಲು ನನಗೆ ಸಾಧ್ಯವಾಯಿತಲ್ಲ ಎಂಬ ಸಂತೋಷ ತಟ್ಟನೆ ನನ್ನ ಹೃದಯದಲ್ಲಿ ಮೂಡಿತು. ಆ ಅಮ್ಮ ಮತ್ತು ಮಗನ ದುಃಖವನ್ನು ದೂರಗೊಳಿಸಲಾಯಿತಲ್ಲಾ? ನನ್ನ ದುಃಖ ಸಂತೋಷವಾಗಿ ಪರಿವರ್ತಿತವಾಯಿತು.

ಆಹಾರ ಸೇವಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಆಸ್ಪತ್ರೆಯಿಂದ ಒಂದು ಫೋನ್ ಕರೆ ಬಂತು. ಹಾಸ್ಪಿಟಲ್‌ನ ಪಾಲುದಾರರಲ್ಲಿ ಕಾಲಿನ ಅನಾರೋಗ್ಯವಿರುವ ಓರ್ವ ಶ್ರೀಮಂತ ವ್ಯಕ್ತಿ ಈ ಭಾರಿ ಹಜ್ಜ್ ಗೆ ಹೋಗಲಿದ್ದಾರೆ. ಅವರಿಗೆ ಓರ್ವ ಫಿಸಿಯೋಥೆರಪಿಸ್ಟ್ ಸೇವೆ ಅಗತ್ಯಬೇಕು. ಆತನೊಂದಿಗೆ ಹೋಗುತ್ತೇನೆಂದು ನಿರ್ಧರಿಸಿದ ವ್ಯಕ್ತಿಯ ಪತ್ನಿಗೆ ಹೆರಿಗೆಯ ಸಮಯವಾದುದರಿಂದ ಆತನಿಗೆ ಬರಲಾಗುವುದಿಲ್ಲ. ಸಈದ್ ಸಾರ್, ನೀವು ಈ ಕೇಸ್ ತೆಗೆದುಕೊಳ್ಳಬೇಕು… ಎಲ್ಲವೂ ತಟ್ಟನೇ ಆಗಿತ್ತು. ಹೀಗೆ ನಾನು ಇಲ್ಲಿಗೆ ತಲುಪಿದೆ. ಆ ವ್ಯಕ್ತಿ ಆ ರೂಮ್‌ನಲ್ಲಿ ವಿಶ್ರಾಂತಿಯಲ್ಲಿದ್ದಾರೆ…

ಇದನ್ನು ಕೇಳಿದ ಟುನೀಶ್ಯಾದ ವ್ಯಕ್ತಿಗೆ ಕಣ್ಣೀರು ತಡೆಯಲಾಗಲಿಲ್ಲ. ನಿಮ್ಮಂತಹವರ ಒಂದು ಹಜ್ಜ್ ನನ್ನಂತಹವರ ನೂರು ಹಜ್ಜ್ ಗಿಂತಲೂ ಮಹತ್ತರವಾದುದು ಎಂದು ಹೇಳಿ ಸಈದ್‌ರ ಹಣೆಗೆ ಮುತ್ತಿಕ್ಕಿದರು. ವಿಮಾನ ನಿಲ್ದಾಣದಲ್ಲಿ ಇವರ ವಿಷಯವನ್ನು ಕೇಳಿ ನಿಂತವರೆಲ್ಲರೂ ಸಈದ್‌ಗೆ ಹಸ್ತಲಾಘವ ಮಾಡಿದರು.

ಸೌಜನ್ಯ: ಆಂಗ್ಲ ಮೂಲ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …