Home / ಲೇಖನಗಳು / ಪ್ರವಾದಿ ಮುಹಮ್ಮದ್‍ರ(ಸ) ವಿವಾಹಗಳು

ಪ್ರವಾದಿ ಮುಹಮ್ಮದ್‍ರ(ಸ) ವಿವಾಹಗಳು

ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಸಾಮಾನ್ಯವಾಗಿ ಮುಸ್ಲಿಮೇತರ ಬಂಧುಗಳಲ್ಲಿ ಗೊಂದಲಕ್ಕೆ ಕಾರಣವಾಗುವುದಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದನೆಯದಾಗಿ ಬಹುಪತ್ನಿತ್ವ ಸಂಪ್ರದಾಯವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಎರಡನೆಯದಾಗಿ ಪಾಶ್ಚಾತ್ಯ ಇಸ್ಲಾಮ್ ವಿರೋಧಿಗಳು ಮತ್ತು ಅವರ ಪೌರ್ವಾತ್ಯ ಅಂಧಾನುಯಾಯಿಗಳು ಇಸ್ಲಾಮಿನ ವಿರುದ್ಧ ನಡೆಸುವ ಯೋಜಿತ ಕುಪ್ರಚಾರಗಳಲ್ಲಿ ಬಹುಪತ್ನಿತ್ವ, ಅದರಲ್ಲೂ ವಿಶೇಷವಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಪ್ರಮುಖ ವಿಷಯವಾಗಿವೆ. ಮೂರನೆಯದಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ತಿಳುವಳಿಕೆ ಇಲ್ಲ. ಈ ಪೈಕಿ ಬಹುಪತ್ನಿತ್ವ ಸಂಪ್ರದಾಯದ ಕುರಿತು ನಾವು ಮುಂದೆ ವಿವರವಾಗಿ ಪ್ರಸ್ತಾಪಿಸಲಿದ್ದೇವೆ. ಇಲ್ಲಿ ನಾವು ಪ್ರವಾದಿವರ್ಯರ(ಸ) ವಿವಾಹಗಳ ಕುರಿತು ಸಂಕ್ಷಿಪ್ತವಾಗಿ ವಿವೇಚಿಸೋಣ-

ಪ್ರಥಮ ವಿವಾಹ
ಪ್ರವಾದಿ ಮುಹಮ್ಮದ್‍ರ(ಸ) ಪ್ರಥಮ ವಿವಾಹ ನಡೆದಾಗ ಅವರಿಗೆ 25 ವರ್ಷ ವಯಸ್ಸು, ಈ ಪ್ರಥಮ ವಿವಾಹವು 4ಂರ ಹರೆಯದ ಖದೀಜಾ(ರ) ಎಂಬ ಓರ್ವ ವಿಧವೆಯೊಂದಿಗೆ ನಡೆದಿತ್ತು. ಖದೀಜಾ ಮಕ್ಕಾದ ಓರ್ವ ಗೌರವಾನ್ವಿತ ಮಹಿಳೆಯಾಗಿದ್ದರು. ಪ್ರವಾದಿ ಮುಹಮ್ಮದ್(ಸ) ಖದೀಜಾರ ಜೊತೆ ಸುಮಾರು 25 ವರ್ಷಗಳ ವೈವಾಹಿಕ ಬಾಳ್ವೆ ನಡೆಸಿದರು. ಪ್ರಥಮ ಪತ್ನಿ ಖದೀಜಾ ನಿಧನರಾದಾಗ ಪ್ರವಾದಿವರ್ಯರಿಗೆ(ಸ) 5ಂ ವರ್ಷ ವಯಸ್ಸಾಗಿತ್ತು. ಆಗ ಖದೀಜಾರ ವಯಸ್ಸು 65 ವರ್ಷ. ಖದೀಜಾ ಜೀವಂತವಿದ್ದಷ್ಟು ಕಾಲ ಪ್ರವಾದಿಯವರು(ಸ) ಬೇರೆ ವಿವಾಹವಾಗಿರಲಿಲ್ಲ. ಅವರ ವೈವಾಹಿಕ ಜೀವನ ಎಲ್ಲ ವಿಧದಲ್ಲೂ ಸುಖಮಯ ಹಾಗೂ ಆದರ್ಶ ಪ್ರಾಯವಾಗಿತ್ತು. ಮುಹಮ್ಮದ್‍ರವರು(ಸ) ಖದೀಜಾರಿಂದಲೇ ಸಂತಾನವನ್ನೂ ಪಡೆದರು.

ಪ್ರವಾದಿವರ್ಯರ(ಸ) ಇತರ ಎಲ್ಲ ವಿವಾಹಗಳೂ ಖದೀಜಾರವರ(ರ) ನಿಧನಾನಂತರ ಅಂದರೆ 5ಂ ವರ್ಷ ವಯಸ್ಸು ಕಳೆದ ಬಳಿಕವೇ ಜರುಗಿದುವು. ಇದಕ್ಕೆ ಅಮಿತ ಲೈಂಗಿಕ ಆಸಕ್ತಿ ಅಥವಾ ಅತಿಕಾಮ ಖಂಡಿತ ಕಾರಣವಾಗಿರಲಿಲ್ಲ. ಅರಬರು ಯುವಕರಾಗಿರುವಾಗಲೇ ಹತ್ತಾರು ಮಂದಿಯನ್ನು ವರಿಸಿಕೊಳ್ಳುತ್ತಿದ್ದ ಕಾಲವಾಗಿತ್ತದು. ವಿವಾಹದಂತೆಯೇ ವಿವಾಹ ವಿಚ್ಛೇದನವೂ ಸರ್ವಸಾಮಾನ್ಯವಾಗಿತ್ತು. ಒಬ್ಬ ಪುರುಷನು ತನಗಿಷ್ಟ ಬಂದಷ್ಟು ಸಲ ತನ್ನ ಪತ್ನಿಯನ್ನು ವಿಚ್ಛೇದಿಸಿ ಪುನಃ ಆಕೆಯೊಂದಿಗೇ ದಾಂಪತ್ಯ ಜೀವನವನ್ನು ಮುಂದುವರಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ ಯಾವುದೇ ಮಿತಿಯಾಗಲೀ ನಿಯಂತ್ರಣವಾಗಲೀ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರವಾದಿ ಮುಹಮ್ಮದ್(ಸ) ಏಕಪತ್ನೀಕರಾಗಿ ತಮ್ಮ ಯುವತ್ವವನ್ನೂ ಮಧ್ಯ ವಯಸ್ಸನ್ನೂ ಕಳೆದರು. ಅದೂ ಈ ಹಿಂದೆ ಎರಡು ಸಲ ವಿವಾಹವಾಗಿದ್ದ ಓರ್ವ ಮಧ್ಯ ವಯಸ್ಕ ವಿಧವೆಯ ಜೊತೆ. ಇದು ಲೈಂಗಿಕ ಆಸಕ್ತಿ ಹೆಚ್ಚಿರುವಂತಹ ಓರ್ವ ಪುರುಷನ ಲಕ್ಷಣವೆಂದು ಬುದ್ಧಿಯುಳ್ಳವರಾರೂ ಹೇಳಲಾರರು.

ವಿವಾಹದ ಕಾರಣಗಳು
ಪ್ರವಾದಿವರ್ಯರು(ಸ) ತಮ್ಮ ಇಳಿ ವಯಸ್ಸಿನಲ್ಲಿ ಮಾಡಿಕೊಂಡ ವಿವಾಹಗಳ ಹಿಂದೆ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕವಾದ ಅನೇಕ ಪ್ರಬಲ ಕಾರಣಗಳಿದ್ದುವು. ಪ್ರವಾದಿ ಮುಹಮ್ಮದ್‍ರವರು(ಸ) ಪುರುಷರಂತೆ ಸ್ತ್ರೀಯರ ಮಟ್ಟಿಗೂ ಅಲ್ಲಾಹನ ಅಂತಿಮ ಪ್ರವಾದಿಯಾಗಿದ್ದರು. ಅವರ ಜೀವನವು ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲ ಮನುಷ್ಯರಿಗೂ ಸದಾಕಾಲಕ್ಕೆ ಆದರ್ಶ ಜೀವನವಾಗಿದೆ. ಹಾಗಿರುವಾಗ ದೈವಿಕ ಶಿಕ್ಷಣ- ಬೋಧನೆಗಳನ್ನು ಸ್ತ್ರೀಯರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಪ್ರವಾದಿವರ್ಯರ(ಸ) ದೇವದತ್ತ ಕರ್ತವ್ಯವಾಗಿತ್ತು. ಸ್ತ್ರೀಯರಿಗೆ ಸಂಬಂಧಿ ಸಿದ ಅನೇಕ ವಿಷಯಗಳನ್ನು ಕಲಿಸುವಂತಹ ಹೊಣೆಗಾರಿಕೆಯನ್ನು ಪ್ರವಾದಿವರ್ಯರು(ಸ) ತಮ್ಮ ಪತ್ನಿಯರಿಗೆ ವಹಿಸಿಕೊಟ್ಟಿದ್ದರು. ಪ್ರವಾದಿ ಮುಹಮ್ಮದ್(ಸ) ಅವರಿಂದ ಸಹಸ್ರಾರು ವಚನಗಳನ್ನು ವರದಿ ಮಾಡಿರುವ ಹ. ಆಯಿಶಾರವರ(ರ) ಹೆಸರು ಆ ಪೈಕಿ ಉಲ್ಲೇಖನೀಯ. ಮೂಢನಂಬಿಕೆಗಳು, ಕಂದಾಚಾರಗಳು ಮತ್ತು ಅಜ್ಞಾನಜನ್ಯ ರೂಢಿ-ಸಂಪ್ರದಾಯಗಳಿಂದ ತುಂಬಿ ಹೋಗಿದ್ದ ಒಂದು ಸಮುದಾಯಕ್ಕೆ ಅಲ್ಲಾಹನ ಧರ್ಮವನ್ನು ತಲುಪಿಸುವ ಹೊಣೆಗಾರಿಕೆ ಪ್ರವಾದಿ ಮುಹಮ್ಮದ್ ರವರ(ಸ) ಮೇಲಿತ್ತು. ಪುರುಷರಂತೆ ಸ್ತ್ರೀಯರನ್ನು ಸುಶಿಕ್ಷಿತಗೊಳಿಸದೆ ಈ ಗುರುತರ ಜವಾಬ್ದಾರಿಯನ್ನು ಈಡೇರಿಸಲು ಸಾಧ್ಯವಿರಲಿಲ್ಲ. ಪ್ರವಾದಿವರ್ಯರಿಗೆ(ಸ) ಈ ಹೊಣೆಯನ್ನು ನಿರ್ವಹಿಸಲಿಕ್ಕೆ ವಿಭಿನ್ನ ಯೋಗ್ಯತಾರ್ಹತೆಗಳ, ವಿಭಿನ್ನ ಪ್ರಕೃತಿಯ, ವಿಭಿನ್ನ ವಿದ್ಯಾರ್ಹತೆಯಿರುವ, ವಿಭಿನ್ನ ಪ್ರಾಯದ ಮತ್ತು ವಿಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕ್ರತಿಕ ಹಿನ್ನೆಲೆಯಿರುವ ಮಹಿಳೆಯರ ಅಗತ್ಯವಿತ್ತು. ಅದಕ್ಕಾಗಿ ಅಂಥವರನ್ನು ವಿವಾಹವಾಗುವುದೊಂದೇ ಪ್ರಾಯೋಗಿಕ ಮಾರ್ಗವಾಗಿತ್ತು. ಪ್ರವಾದಿ(ಸ) ಮಾನವಕುಲಕ್ಕೆ ಆದರ್ಶ ಪುರುಷ ರಾಗಿರುವುದು ಕೇವಲ ಸಾಮಾಜಿಕ ಜೀವನದಲ್ಲಿ ಮಾತ್ರ ಅಲ್ಲ, ಖಾಸಗಿ ಮತ್ತು ಗೃಹ ಜೀವನದಲ್ಲೂ ಅವರೇ ಅನುಕರಣೀಯ ಆದರ್ಶ ಪುರುಷರಾಗಿರುವರು. ಅವರ ಸಾಮಾಜಿಕ ಜೀವನದ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮಾನವ ಕುಲಕ್ಕೆ ತಲುಪಿಸಲು ಅವರ ಸುತ್ತ ಅನೇಕ ಪುರುಷ ಅನುಯಾಯಿಗಳಿದ್ದರು. ಆದರೆ ಕೌಟುಂಬಿಕ ಮತ್ತು ಗೃಹ ಜೀವನದಲ್ಲಿ ಪ್ರವಾದಿಯ ಆದರ್ಶವೇನೆಂಬುದನ್ನು ಸಕಲ ವಿವರಗಳೊಂದಿಗೆ ಮಾನವ ಕುಲಕ್ಕೆ ತಲುಪಿಸಲು ಪ್ರವಾದಿಯ ಪತ್ನಿಯರಿಗೆ ಮಾತ್ರ ಸಾಧ್ಯವಿತ್ತು. ಅವರ ಮೂಲಕವೇ ಪ್ರವಾದಿ ಮುಹಮ್ಮದರು(ಸ) ಅರೇಬಿಯಾದ ಮಹಿಳೆಯರನ್ನು ಇಸ್ಲಾಮಿನೆಡೆಗೆ ಆಹ್ವಾನಿಸಿದರು ಮತ್ತು ಅವರ ಮೂಲಕವೇ ಸ್ತ್ರೀ ಕುಲದ ಶಿಕ್ಷಣ ತರಬೇತಿಗಳ ಏರ್ಪಾಡು ಮಾಡಿದರು.

ಪ್ರವಾದಿವರ್ಯರು(ಸ) ತಮ್ಮ ಧರ್ಮಪ್ರಚಾರ ಕಾರ್ಯದಿಂದಾಗಿ ಇಡೀ ಅರಬ್ ಜಗತ್ತಿನ ಎಲ್ಲ ಕುಲಗೋತ್ರಗಳ ಶತ್ರುತ್ವಕ್ಕೆ ಪಾತ್ರರಾಗಿದ್ದರು. ಈ ಶತ್ರುತ್ವವನ್ನು ಮಿತ್ರತ್ವವಾಗಿ ಬದಲಿಸುವುದರಲ್ಲಿಯೂ ಪ್ರವಾದಿವರ್ಯರ(ಸ) ವಿವಾಹಗಳು ನಿರ್ಣಾಯಕ ಪಾತ್ರ ವಹಿಸಿದ್ದುವು. ವಿಭಿನ್ನ ಗೋತ್ರಗಳಿಗೆ ಸೇರಿದ ವಿಧವೆ, ವಿವಾಹ ವಿಚ್ಛೇದಿತೆ ಮತ್ತು ಅನಾಥೆಯರಾದ ಮಹಿಳೆಯರನ್ನು ವಿವಾಹವಾಗುವ ಮೂಲಕ ಅವರು ಆ ಗೋತ್ರಗಳ ಸ್ನೇಹ ಸಂಬಂಧವನ್ನೂ ಬಂಧುತ್ವವನ್ನೂ ಗಳಿಸಿಕೊಂಡರು. ಕನಿಷ್ಠ ಪಕ್ಷ ತಮ್ಮ ಗೋತ್ರದೊಂದಿಗೆ ವಿವಾಹ ಸಂಬಂಧವಿರುವವರೆಂಬ ನೆಲೆಯಲ್ಲಿ ಪ್ರವಾದಿವರ್ಯರ(ಸ) ಮೇಲಿನ ಅವರ ದ್ವೇಷ ಮತ್ತು ವೈರವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು. ಇಸ್ಲಾಮಿನ ಬದ್ಧ ವೈರಿಯಾಗಿದ್ದ ಅಬೂ ಸುಫ್ಯನ್‍ರ ಮಗಳಾದ ಉಮ್ಮು ಹಬೀಬಾರೊಂದಿಗೆ ಪ್ರವಾದಿಯ ವಿವಾಹವು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

ದತ್ತು ಸಂಬಂಧದಲ್ಲಿ ವಿವಾಹ
ಸಮಾಜದ ಅಜ್ಞಾನಜನ್ಯ ರೀತಿ-ಸಂಪ್ರದಾಯಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ದತ್ತು ಪುತ್ರರಾದ ಝೈದ್‍ರ ವಿಚ್ಛೇದಿತ ಪತ್ನಿ ಹ. ಝೈನಬ್‍ರೊಂದಿಗೆ ಪ್ರವಾದಿ ವರ್ಯರು(ಸ) ಮಾಡಿಕೊಂಡ ವಿವಾಹವು ಐತಿಹಾಸಿಕ ಮಹತ್ವಕ್ಕೆ ಪಾತ್ರವಾಗಿದೆ. ತನ್ಮೂಲಕ ಅರೇಬಿಯಾದಲ್ಲಿ ದತ್ತು ಪುತ್ರನನ್ನು ಸ್ವಂತ ಪುತ್ರನಂತೆ ಪರಿಗಣಿಸಿ ಆಸ್ತಿಯಲ್ಲಿ ಹಕ್ಕು ನೀಡುತ್ತಿದ್ದ ಹಾಗೂ ತನ್ನ ಪತ್ನಿ ಮತ್ತು ಪುತ್ರಿಯರನ್ನು ಅವನ ತಾಯಿ ಮತ್ತು ಸಹೋದರಿಯರೆಂದು ಪರಿಗಣಿಸುತ್ತಿದ್ದ ಸಂಪ್ರದಾಯವು ಕೊನೆಗೊಂಡಿತು (ಹೆಚ್ಚಿನ ವಿವರಗಳಿಗೆ ನೋಡಿರಿ- ಪವಿತ್ರ ಕುರ್‍ಆನ್ ಅಧ್ಯಾಯ 33ರ ಮುನ್ನುಡಿ ಮತ್ತು ಕುರ್‍ಆನ್ ವ್ಯಾಖ್ಯಾನ ಭಾಗ-2ರ ಅಧ್ಯಾಯ 33ರ ಪ್ರಸ್ತಾವನೆ.)

ಹ. ಸಫಿಯಾ ಮತ್ತು ಜುವೇರಿಯಾ(ರ) ಯಹೂದಿ ಮನೆತನಕ್ಕೆ ಸೇರಿದ ಸ್ತ್ರೀಯರಾಗಿದ್ದರು. ಅವರನ್ನು ವಿವಾಹವಾಗುವ ಮೂಲಕ ಯಹೂದಿ ಗೋತ್ರಗಳೊಂದಿಗೂ ಪ್ರವಾದಿ ವರ್ಯರು(ಸ) ಸಂಬಂಧ ಸ್ಥಾಪಿಸಿಕೊಂಡರು ಮತ್ತು ಆ ಮೂಲಕ ಅವರ ಶತ್ರುತ್ವಕ್ಕೆ ಕಡಿವಾಣ ಹಾಕಿದರು. ಅಂದಿನ ಅರಬ್ ಸಂಪ್ರದಾಯದಂತೆ ಒಂದು ಗೋತ್ರದ ಯಾವುದೇ ಹೆಣ್ಣನ್ನು ವರಿಸಿದವನು ಆ ಗೋತ್ರದ ಅಳಿಯನಾಗಿ ಮಾರ್ಪಡುತ್ತಿದ್ದನು. ತನ್ಮೂಲಕ ದ್ವೇಷ ಮತ್ತು ಪ್ರತೀಕಾರದ ಕ್ರಮಗಳಿಂದ ಸುರಕ್ಷಿತನಾಗಿ ಅವರ ಆತ್ಮೀಯ ಸಂಬಂಧಿಯಾಗಿ ಬಿಡುತ್ತಿದ್ದನು. ಈ ರೀತಿ ದೂರಗಾಮಿ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಪರಿಣಾಮಗಳನ್ನು ಹೊಂದಿರುವ ಪ್ರವಾದಿವರ್ಯರ(ಸ) ವಿವಾಹಗಳು ಯಾವ ನಿಷ್ಪಕ್ಷಮತಿಗೂ ಯಾವ ದೃಷ್ಟಿಯಿಂದಲೂ ಆಕ್ಷೇಪಾರ್ಹವಾಗಿ ಕಾಣಲಾರವು.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …