Home / ಲೇಖನಗಳು / ಆರಾಧನಾಲಯಗಳ ಪಾವಿತ್ರ್ಯ

ಆರಾಧನಾಲಯಗಳ ಪಾವಿತ್ರ್ಯ

ಎಲ್ಲ ಧರ್ಮಾನುಯಾಯಿಗಳ ಆರಾಧನಾಲಯಗಳೂ ಗೌರವಾರ್ಹವಾಗಿವೆ. ಅವುಗಳನ್ನು ಅವಮಾನಿಸಬಾರದು. ನಾಶಪಡಿಸಬಾರದು. ಮುಸ್ಲಿಮರ ಮಸೀದಿಗಳಂತೆಯೇ ಇತರ ಸಮುದಾಯಗಳ ಆರಾಧನಾ ಕೇಂದ್ರಗಳೂ ಸುರಕ್ಷಿತವಾಗಿರಬೇಕೆಂದು ಇಸ್ಲಾಮ್ ಬಯಸುತ್ತದೆ. ಅವು ನಾಶಗೊಳಿಸಲ್ಪಡದಿರಲಿಕ್ಕಾಗಿ ಭೂಮಿಯಲ್ಲಿ ಅವಶ್ಯಕ ಕ್ರಮ ಕೈಗೊಳ್ಳಲಾಗುವುದೆಂದು ಪವಿತ್ರ ಕುರ್‌ಆನ್ ತಿಳಿಸಿದೆ. ”ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನೀಗಿಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳೂ ಇಗರ್ಜಿಗಳೂ ಯಹೂದಿಯರ ಆರಾಧನಾಲಯಗಳೂ ಮಸೀದಿಗಳೂ ಧ್ವಂಸಗೊಳ್ಳುತ್ತಿದ್ದುವು.” (ಪವಿತ್ರ ಕುರ್ ಆನ್, 22:40)

ಮುಸ್ಲಿಮ್ ಆಡಳಿತಗಾರರು ಮತ್ತು ಸಮುದಾಯ ನಾಯಕರು ಅನ್ಯಧರ್ಮಿಯರ ಆರಾಧನಾಲಯಗಳ ಸಂರಕ್ಷಣೆಗೆ ಪ್ರತಿಜ್ಞಾ ಬದ್ಧರಾಗಿದ್ದಾರೆ. ಅವಿವೇಕ ಮತ್ತು ಭಾವಾವೇಶದಿಂದ ಮುಸ್ಲಿಮರು ಅವುಗಳನ್ನು ಮಸೀದಿಯಾಗಿ ಪರಿವರ್ತಿಸುವ ಅವಕಾಶ ದೊರೆಯಬಾರದೆಂಬ ನಿಷ್ಕರ್ಷೆ ಹಿಂದಿನ ಕಾಲದ ನಾಯಕರಲ್ಲಿತ್ತು.

ಪ್ರಥಮ ಖಲೀಫರಾದ ಹ.ಅಬೂಬಕರ್‌ರೊಡನೆ ರಾಷ್ಟ್ರದ ಕೈಸ್ತರು ತಮ್ಮ ನೂತನ ಚರ್ಚ್ ಒಂದನ್ನು ಉದ್ಘಾಟಿಸುವಂತೆ ವಿನಂತಿಸಿದರು. “ನಿಮ್ಮ ಧರ್ಮಾಚಾರದಂತೆ ನಮಾಝ್ ನಿರ್ವಹಿಸಿ ಉದ್ಘಾಟಿಸಿದರೆ ಸಾಕೆಂದೂ” ಪ್ರತ್ಯೇಕವಾಗಿ ತಿಳಿಸಿದ್ದರು. ಆಗ ಅಬೂಬಕರ್(ರ) ಹೀಗೆಂದರು: “ನಾನು ಉದ್ಘಾಟಿಸಿದರೆ ನನ್ನ ಕಾಲಾನಂತರ ನಿಜಸ್ಥಿತಿಯನ್ನು ಅರಿಯದವರು ಇದು ನಮ್ಮ ಖಲೀಫರು ನಮಾಝ್ ಮಾಡಿದ ಸ್ಥಳವೆಂದು ವಾದಿಸಿ ಅದು ಗಲಭೆಗೆ ಹೇತುವಾಗಬಹುದು.” ಖಲೀಫರ ಸಂದೇಹವನ್ನು ಗಂಭೀರವಾಗಿ ಪರಿಗಣಿಸಿ ಕೈಸ್ತ ಬಾಂಧವರು ಆ ಕಾರ್ಯಕ್ರಮವನ್ನು ಕೈಬಿಟ್ಟರು.

ಮಹಾನುಭಾವರಾದ ಉಮರ್ ಫಾರೂಕ್(ರ), ಫೆಲೆಸ್ತೀನ್‌ನಲ್ಲಿ ಶತಮಾನಗಳಿಂದ ಅಸ್ತಿತ್ವದಲ್ಲಿದ್ದ ಸಾಮ್ರಾಜ್ಯಶಾಹಿತ್ವವನ್ನು ಕೊನೆಗೊಳಿಸಿದ್ದರು. ಅವರು ಹರ್ಕ್ಯುಲೆಸ್‌ ದುರಾಡಳಿತವನ್ನು ಕೊನೆಗೊಳಿಸಿ ಅಲ್ಲಿನ ಜನರಿಗೆ ನೆಮ್ಮದಿ ನೀಡಿದ್ದರು. ಆದ್ದರಿಂದಲೇ ಅಲ್ಲಿಗೆ ಭೇಟಿ ನೀಡಿದ ಖಲೀಫರನ್ನು ಅಲ್ಲಿನ ಪ್ರಜೆಗಳು ಪ್ರೀತ್ಯಾದರಗಳಿಂದ ಸ್ವಾಗತಿಸಿದ್ದರು. ಸ್ಥಳೀಯ ಕೃಷ್ಣ ಪುರೋಹಿತನಾಗಿದ್ದ ಸಫರ್‌ನಿಯೂಸ್ ಮತ್ತು ಪರಿವಾರವು ಅದರಲ್ಲಿ ಮುಂಚೂಣಿಯಲ್ಲಿತ್ತು. ಖಲೀಫರು ಅವರ ಜತೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾಗ ಝಹರ್ (ಮಧ್ಯಾಹ್ನ) ನಮಾಝ್ ನ ವೇಳೆಯಾಯಿತು. ಈ ವಿಷಯವನ್ನು ತಿಳಿದ ಪೇಟ್ರಿಯಾರ್ಕಿಸ್, ಉಮರ್‌ ಮತ್ತು ಸಂಗಡಿಗರೊಡನೆ ಅಲ್ಲಿನ ಚರ್ಚ್‌ನಲ್ಲಿ ನಮಾಝ್ ಮಾಡುವಂತೆ ವಿನಂತಿಸಿದರು. ಆದರೆ ಸಫರ್‌ನಿಯೂಸಿಯ ಈ ವಿನಂತಿಯನ್ನು ಖಲೀಫರು ಕೃತಜ್ಞತೆಯಿಂದ ತಿರಸ್ಕರಿಸಿದರು. ಅದಕ್ಕೆ ಅವರು ನೀಡಿದ ಕಾರಣ ಹೀಗಿತ್ತು. “ನಾನು ಇಲ್ಲಿ ನಮಾಝ್ ಮಾಡಿದರೆ ಮುಂದೆ ಯಾರಾದರೂ ಅವಿವೇಕಿ ಮುಸ್ಲಿಮರು ಅದರ ವಾರೀಸು ಹಕ್ಕಿಗಾಗಿ ವಾದಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಪ್ರಯತ್ನಿಸಬಹುದು.” ಅಂತಹ ಅಕ್ರಮಕ್ಕೆ ಅವಕಾಶವಾಗಬಾರದೆಂಬ ಮುಂದಾಲೋಚನೆಯಿಂದ ಉಮರ್ ಫಾರೂಕ್(ರ), ಚರ್ಚ್‌ನ ಹೊರಗಿನ ಖಾಲಿ ಸ್ಥಳದಲ್ಲಿ ಬಟ್ಟೆ ಹಾಸಿ ನಮಾಝ್ ಮಾಡಿದರು.

ಡಮಸ್ಕಸ್‌ನಲ್ಲಿ ಗ್ರೀಕರ ಜುಪಿಟರ್ ಮೂರ್ತಿಯಿರಿಸಿದ ಒಂದು ಬೃಹತ್ ಆರಾಧನಾಲಯವಿತ್ತು. ಕ್ರೈಸ್ತರು ಆ ಪ್ರದೇಶವನ್ನು ಸ್ವಾಧೀನ ಪಡಿಸಿದ ಬಳಿಕ ಅದನ್ನು ಯೋಹಾನನ ನಾಮದ ಚರ್ಚ್ ಆಗಿ ಮಾರ್ಪಡಿಸಿದರು. ಉಮರ್ ಫಾರೂಕ್‌ರ ಕಾಲದಲ್ಲಿ ಆ ಪ್ರದೇಶವು ಇಸ್ಲಾಮಿ ರಾಷ್ಟ್ರದ ಭಾಗವಾಯಿತು. ತರುವಾಯ ಯೋಹಾನನ ಚರ್ಚನ್ನು ಬಳಸುತ್ತಿದ್ದ ಡಮಸ್ಕಸ್‌ನ ಬಹುವಂಶ ನಿವಾಸಿಗಳು ಇಸ್ಲಾಮ್ ಸ್ವೀಕರಿಸಿದರು. ಆದ್ದರಿಂದ ಅದನ್ನು ಮಸೀದಿಯಾಗಿ ಪರಿವರ್ತಿಸಬೇಕೆಂಬ ಒತ್ತಾಯ ತೀವ್ರವಾಯಿತು. ಆದರೂ ಇಸ್ಲಾಮಿ ಸರಕಾರ ಅದಕ್ಕೆ ಒಪ್ಪಲಿಲ್ಲ, ಚರ್ಚ್ ಬಳಸುವ ಕೊನೆಯ ವ್ಯಕ್ತಿಯೂ ಇಸ್ಲಾಮ್ ಸ್ವೀಕರಿಸಬೇಕು  ಅಥವಾ ಅದರ ಹಕ್ಕುದಾರರು ಮನಃಪೂರ್ವಕ ಅದನ್ನು ತೆರವುಗೊಳಿಸಬೇಕು. ಅನ್ಯಥಾ ಅದು ಅಸಾಧ್ಯವೆಂಬ ಧೋರಣೆಯನ್ನು ಇಸ್ಲಾಮಿ ನಾಯಕರು ಹೊಂದಿದ್ದರು. ತರುವಾಯ ಮುಸ್ಲಿಮರು ಮತ್ತು ಕ್ರೈಸ್ತರು ಪರಸ್ಪರ ಚರ್ಚಿಸಿ ನಿರ್ಧರಿಸಿದ ಪ್ರಕಾರ ಉಭಯ ವಿಭಾಗಗಳೂ ತಂತಮ್ಮ ಆರಾಧನಾ ಕರ್ಮಗಳಿಗಾಗಿ ಅದನ್ನು ಬಳಸುತ್ತಲಿದ್ದವು. ಒಂದೆಡೆ ಮುಸ್ಲಿಮರು ನಮಾಝ್ ನಿರ್ವಹಿಸುವಾಗ ಇನ್ನೊಂದೆಡೆ ಕ್ರೈಸ್ತರು ತಮ್ಮ ಪ್ರಾರ್ಥನೆಗಳನ್ನು ನಿರ್ವಹಿಸುತ್ತಿದ್ದರು. ಹೀಗೆ ಸುದೀರ್ಘ ಕಾಲ ಅದನ್ನು ಉಪಯೋಗಿಸಲಾಯಿತು.

ವಲೀದ್ ಬಿನ್ ಅಬ್ದುಲ್ ಮಲಿಕ್‌ರ ಆಡಳಿತ ಕಾಲದಲ್ಲಿ ಮದೀನಾ ಮತ್ತು ಫೆಲೆಸ್ತೀನ್ ಮಸೀದಿಗಳೊಂದಿಗೆ ಅದನ್ನು ನವೀಕರಿಸಲು ನಿರ್ಧರಿಸಲಾಯಿತು. ಕ್ರೈಸ್ತರು ಅದಕ್ಕೆ ಸಮ್ಮತಿಸಿ ಅದನ್ನು ಮಸೀದಿಯಾಗಿ ಪರಿವರ್ತಿಸಲು ಸಂಪೂರ್ಣ ಒಪ್ಪಿಗೆ ನೀಡಿದರು. ಅದಕ್ಕೆ ಪ್ರತಿಯಾಗಿ ಮರ್ಯಮ್ ಚರ್ಚನ್ನು ನವೀಕರಿಸಿ ಕೊಡಲಾಯಿತು. ವಲೀದ್ ರು ಬೃಹತ್ ಯೋಜನೆಯನ್ವಯ ನಿರ್ಮಾಣ ಕಾರ್ಯ ಆರಂಭಿಸಿದರು. ಅದು ಸಂಪೂರ್ಣವಾಗಲು 20 ವರ್ಷ ಹಿಡಿಯಿತು. 1500 ಕೆಲಸಗಾರರು ಅದರ ನಿರ್ಮಾಣದಲ್ಲಿ ಭಾಗವಹಿಸಿದ್ದರು. ರೋಮ್‌ನಿಂದಲೂ ವಿಶೇಷ ತಜ್ಞರನ್ನು ಕರೆತರಲಾಗಿತ್ತು. ಅದರ ಮೇಲೆ ಸುಂದರ ಕುಂಭಗೋಪುರವನ್ನು ನಿರ್ಮಿಸಿದ್ದರು. ನೆಲಕ್ಕೆ ಬಿಳಿ ಶಿಲೆ ಹಾಸಿ, ಗೋಡೆಗಳನ್ನು ಆಕರ್ಷಕ ಕೆತ್ತನೆ ಕೆಲಸಗಳಿಂದ ಅಲಂಕರಿಸಲಾಯಿತು. ವಲೀದ್ ರು ಅದರ ನಿರ್ಮಾಣಕ್ಕಾಗಿ 1 ಕೋಟಿ 60 ಲಕ್ಷ ದಿನಾರ್ ವ್ಯಯಿಸಿದರು. ಆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಅವರ ಸಹೋದರ ಸುಲೈಮಾನ್‌ರ ಕಾಲದಲ್ಲಿ ಅದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

ಉಮರ್ ಬಿನ್ ಅಬ್ದುಲ್ ಅಝೀಝ್ ರು ಇಸ್ಲಾಮಿ ಆಡಳಿತದ ಉಜ್ವಲ ಮಾದರಿಗಳಾಗಿ ಶೋಭಿಸಿದ ಮಹಾರಥರಲ್ಲಿ ಅಗ್ರಗಣ್ಯರಾಗಿದ್ದಾರೆ. ಅವರು ಅಧಿಕಾರವಹಿಸಿದಾಗ ಅವರ ನ್ಯಾಯನಿಷ್ಠೆ ಮತ್ತು ಪರಮತ ಸಹಿಷ್ಣುತೆಯ ಬಗ್ಗೆ ದೃಢ ವಿಶ್ವಾಸವಿದ್ದ ಕ್ರೈಸ್ತ ಸಮುದಾಯವು ಮಸೀದಿಯನ್ನು ಕೆಡಹಿ ಯೋಹಾನನ ಚರ್ಚನ್ನು ಪುನರ್ನಿಮಿಸಬೇಕೆಂದು ಒತ್ತಾಯಿಸಿತು. ವಲೀದ್ ರ ಕಾಲದಲ್ಲಿ ಬಲವಂತಕ್ಕೆ ಕಟ್ಟುಬಿದ್ದು ನಾವು ಅದನ್ನು ಬಿಟ್ಟುಕೊಡಬೇಕಾಯಿತೆಂದು ಅವರು ವಾದಿಸಿದರು. ಆ ಕಾಲದ ಅತಿದೊಡ್ಡ ಹಾಗೂ ಅತ್ಯದ್ಭುತವಾಗಿದ್ದ ಮಸೀದಿಯನ್ನು ಕೆಡಹಿ ಚರ್ಚ್ ನಿರ್ಮಿಸುವುದು, ಅದು ಕೂಡಾ ಓರ್ವ ಪರಮಭಕ್ತನಾದ ಮುಸ್ಲಿಮ್ ಆಡಳಿತಗಾರ! ಸಾಮಾನ್ಯ ನಂಬಿಕೆಯಂತೆ ಅದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಆದರ್ಶ ನಿಷ್ಠರಾಗಿದ್ದ ಖಲೀಫರು ಎಲ್ಲ ಕಾಲಗಳ ಸದ್ಭಕ್ತರಂತೆಯೇ ನ್ಯಾಯವನ್ನು ಪಾಲಿಸಿದರು. ಸತ್ಯವಿಶ್ವಾಸಿಗಳಿಗೆ ಸಂಕುಚಿತ ಮತ್ತು ಪಕ್ಷಪಾತೀ ಮನೋಭಾವವನ್ನು ಬೆಳೆಸಲು ಸಾಧ್ಯವಿಲ್ಲ, ಉಮರ್ ಬಿನ್ ಅಬ್ದುಲ್ ಅಝೀಝ್ ರು ಮಸೀದಿ ಕೆಡವಿ ಚರ್ಚ್ ನಿರ್ಮಿಸುವಂತೆ ಆಜ್ಞಾಪಿಸಿದರು. ಕ್ರೈಸ್ತರು ವಲೀದ್ ರ ಕಾಲದಲ್ಲಿ ಸ್ವಇಚ್ಛೆಯಿಂದ ಬಿಟ್ಟುಕೊಟ್ಟುದರಿಂದ ಮಸೀದಿಯನ್ನು ನಿರ್ಮಿಸಲಾಗಿದ್ದುದ್ದರಿಂದ ಆಜ್ಞೆಯನ್ನು ಹಿಂತೆಗೆಯಬೇಕೆಂದು ಮುಸ್ಲಿಮರು ಬಲವಾಗಿ ವಾದಿಸಿದರು. ಆದರೂ ಖಲೀಫರು ಜಗ್ಗಲಿಲ್ಲ. ಅವರು ತಮ್ಮ ದಿಟ್ಟ ನಿರ್ಧಾರದಲ್ಲಿಯೇ ಅಚಲರಾಗಿ ನಿಂತರು. ಕೊನೆಗೆ ಮುಸ್ಲಿಮರು ಕ್ರೈಸ್ತರ ಮನವೊಲಿಸಿ ಉಭಯ ವಿಭಾಗಗಳು ವಿನಂತಿಸಿದ ಬಳಿಕವೇ ಅವರು ಮಸೀದಿಯನ್ನು ಯಥಾವತ್ತಾಗಿ ಉಳಿಸುವ ಒಪ್ಪಿಗೆ ನೀಡಿದರು.

ಇಸ್ಲಾಮಿ ರಾಷ್ಟ್ರದಲ್ಲಿ ಯಾವಾಗಲೂ ಎಲ್ಲೆಡೆಯೂ ಸಹೋದರ ಸಮುದಾಯ ಆರಾಧನಾಲಯಗಳು ಸಂಪೂರ್ಣ ಸುರಕ್ಷಿತವಾಗಿದ್ದುವು. ಸ್ವಂತ ಧರ್ಮಾನುಯಾಯಿಗಳಾಗಿದ್ದ ಮುಸ್ಲಿಮರಾಗಲಿ ಅಥವಾ ಇತರರಿಗಾಗಲಿ ಅದರಲ್ಲಿ ಹಸ್ತಕ್ಷೇಪ ನಡೆಸುವ ಅವಕಾಶವಿರಲಿಲ್ಲ. ಅದೇ ವೇಳೆ ಅನ್ಯ ಧರ್ಮಾನುಯಾಯಿಗಳಿಗೆ ಅವರ ಇಷ್ಟಪ್ರಕಾರ ದೇವಾಲಯಗಳನ್ನು ನಿರ್ಮಿಸುವ ಹಕ್ಕು ಮತ್ತು ಅನುಮತಿಯನ್ನು ನೀಡಲಾಗಿತ್ತು. ಆದ್ದರಿಂದ ಮುಸ್ಲಿಮ್ ರಾಷ್ಟ್ರಗಳಲ್ಲಿ ವಿವಿಧ ಧರ್ಮಾನುಯಾಯಿಗಳ ಆರಾಧನಾ ಕೇಂದ್ರಗಳು ನಿಕಟವಾಗಿರುವುದು ಕಂಡು ಬರುತ್ತದೆ. ಆದ್ದರಿಂದಲೇ ಮಧ್ಯಪ್ರಾಚ್ಯದಲ್ಲಿ ಆಡಳಿತ ನಡೆಸುತ್ತಿದ್ದ ವಿವಿಧ ರೋಮ್ ಪರ್ಶಿಯನ್ ಸಾಮ್ರಾಜ್ಯ ಶಕ್ತಿಗಳ ಹಿಂಸೆಗೆ ಗುರಿಯಾಗಿ ಕಷ್ಟ ಅನುಭವಿಸುತ್ತಿದ್ದ ಯಹೂದಿಗಳು ಮತ್ತು ಕ್ರೈಸ್ತರು ಹಾಗೂ ಮಜೂಸಿಗಳಿಗೆ ಮುಸ್ಲಿಮರ ಉಪಸ್ಥಿತಿಯು ಅಪಾರ ನೆಮ್ಮದಿಯನ್ನು ನೀಡಿತ್ತು. ಅವಿವೇಕಿಗಳಾದ ಜನಸಾಮಾನ್ಯರು ಅನ್ಯಧರ್ಮಿಯರ ಆರಾಧನಾಲಯಗಳನ್ನು ಅನಾದರಿಸುವ ಸಾಧ್ಯತೆ ಅಧಿಕವಿರುವುದರಿಂದ ಆ ಬಗ್ಗೆ ಕಟ್ಟೆಚ್ಚರ ವಹಿಸಬೇಕೆಂದು ಆಡಳಿತಗಾರರು, ರಾಜ್ಯಪಾಲರಿಗೂ ಅಧಿಕಾರಿಗಳಿಗೂ ಪದೇ ಪದೇ ನೆನಪಿಸುತ್ತಿದ್ದರು. ಖಲೀಫರ ಪತ್ರ ಮತ್ತು ಫರಮಾನುಗಳನ್ನು ನೋಡಿದರೆ ಇದು ವ್ಯಕ್ತವಾಗುತ್ತದೆ. ಉಮರ್ ಬಿನ್ ಅಬ್ದುಲ್ ಅಝೀಝ್ ರು ಅಬ್ದುರಹ್ಮಾನ್ ಬಿನ್ ನಈಮ್‌ರಿಗೆ ಹೀಗೆ ಬರೆದಿದ್ದರು: “ನೀವು ಚರ್ಚ್, ಮಠ ಮತ್ತು ಮಜೂಸಿಗಳ ಹೋಮ ಕುಂಡಗಳನ್ನು ನಾಶಪಡಿಸಬಾರದು.”

ಭಾರತದಲ್ಲಿ ಮುಸ್ಲಿಮ್ ಸಾಮ್ರಾಜ್ಯದ ಮೂಲ ಪುರುಷನಾದ ಮುಹಮ್ಮದ್ ಬಿನ್ ಕಾಸಿಮ್ ಸಿಂಗ್ ನಿವಾಸಿಗಳೊಡನೆ ಮಾಡಿಕೊಂಡ ಒಪ್ಪಂದದಲ್ಲಿ ಹೀಗೆ ಹೇಳಲಾಗಿದೆ: “ಹಿಂದುಗಳ ಕ್ಷೇತ್ರಗಳೂ, ಮಸೀದಿ ಮತ್ತು ಯಹೂದಿ ದೇವಾಲಯಗಳೂ ಮಾಹಿಯಾನರ ಅಗ್ನಿ ದೇವಾಲಯಗಳೂ ಸರಿಸಮಾನವಾಗಿವೆ.” (ಸಯ್ಯದ್ ಸುಲೈಮಾನ್ ನದ್ವಿ. ‘ಅರಬ್ ಔರ್ ಹಿಂದ್ ಕೆ ತಅಲ್ಲುಕಾತ್’ ಪುಟ: 194)

“ಅವರು (ಮುಹಮ್ಮದ್ ಬಿನ್ ಕಾಸಿಮ್) ಪುರಪ್ರಮುಖರು, ದೇಶವಾಸಿಗಳು ಮತ್ತು ಬ್ರಾಹ್ಮಣರೊಡನೆ ತಂತಮ್ಮ ಆರಾಧನಾಲಯಗಳನ್ನು ನಿರ್ಮಿಸಿ ಮುಸ್ಲಿಮರೊಡನೆ ನಿರ್ಭೀತಿಯಿಂದ ಬೆರೆತು ಬಾಳಿ, ತಮ್ಮ ಪ್ರಗತಿಗಾಗಿ ದುಡಿಯುವಂತೆ ಆದೇಶಿಸಿದರು. ಮತಾಂಧ ಬ್ರಾಹ್ಮಣರೊಡನೆ ಅವರು ದಯೆಯಿಂದ ವರ್ತಿಸಿ ಅವರ ಪೂರ್ವಜರ ಆಚಾರ ಕರ್ಮಗಳನ್ನು ಮಾನ್ಯ ಮಾಡಿ ಹಳೆಯ ಸಂಪ್ರದಾಯದಂತೆ ಕಾಣಿಕೆ ಮತ್ತು ದೇಣಿಗೆಗಳನ್ನು ನೀಡಿದರು.” (ಈಲಿಯಲ್, ಸಂಪುಟ: 1, ಪುಟ: 186)

ಮುಹಮ್ಮದ್ ಬಿನ್ ಕಾಸಿಮ್‌ರ ಸೇನಾ ಕಾರ್ಯಾಚರಣೆಯಲ್ಲಿ ಹಾನಿಗೀಡಾದ ದೇವಾಲಯಗಳನ್ನು ಪುನರ್ನಿರ್ಮಿಸುವಂತೆ ಖಲೀಫರು ಆಜ್ಞಾಪಿಸಿ, ಅವರು ಅದನ್ನು ಕಾರ್ಯಗತಗೊಳಿಸಿದರೆಂದು ಇತಿಹಾಸ ದಾಖಲೆಗಳಲ್ಲಿವೆ. (S.M.Jafar: Islamic Culture P: 109).

ಭಾರತದ ಮುಸ್ಲಿಮ್ ಆಡಳಿತಗಾರರಲ್ಲಿ ಅತ್ಯಧಿಕ ಅಸಹಿಷ್ಣುತೆಯ ಆರೋಪಕ್ಕೆ ಗುರಿಯಾಗಿರುವ ಔರಂಗಝೇಬರು ಯಾವುದೇ ದೇವಾಲಯವನ್ನೂ ನಾಶಪಡಿಸಿಲ್ಲ, ಮಾತ್ರವಲ್ಲ ಹಲವು ದೇವಾಲಯಗಳಿಗೆ ಅಪಾರ ನೆರವು ನೀಡಿದ್ದಾರೆ. ಅವರು ಸೋಮೇಶ್ವರ ಮಹಾ ದೇವಾಲಯಕ್ಕೆ ಭೂಸೊತ್ತು ಮತ್ತು ಹಣವನ್ನು ದಾನವಾಗಿ ನೀಡಿದ ಚಾರಿತ್ರಿಕ ದಾಖಲೆಗಳಿವೆ. ಹಾಗೆಯೇ ವಾರಣಾಸಿಯ ಜಂಗಂಬಾಡಿ ಶಿವಾಲಯಕ್ಕೆ ಔರಂಗಝೇಬ್ ಜಮೀನು ನೀಡಿ ಆಜ್ಞೆ ಹೊರಡಿಸಿದ ದಾಖಲೆಗಳು ಈಗಲೂ ಅಲ್ಲಿನ ಮಹಂತರ ಬಳಿಯಿದೆ. ಗಿರ್ನಾರ್ ಮತ್ತು  ಅಬೂವಿನ ದೇವಾಲಯಗಳಿರುವ ಸ್ಥಳವು ಅವುಗಳ ನಿರ್ಮಾಣಕ್ಕಾಗಿ ಔರಂಗಝೇಬರೇ ನೀಡಿದ್ದಾಗಿದೆ. ಶತ್ರುಂಜಯ ಕ್ಷೇತ್ರವೂ ಸೇರಿದಂತೆ ಹಲವು ಹಿಂದೂ ದೇವಾಲಯಗಳಿಗೂ ಅಲ್ಲಿನ ಪೂಜಾರಿಗಳಿಗೂ ಅವರು ಬಹಳಷ್ಟು ವಿನಾಯಿತಿಗಳನ್ನು ನೀಡಿದ್ದರು. (ಹೆಚ್ಚಿನ ವಿವರಗಳಿಗೆ ಬಿ.ಎನ್.ಪಾಂಡೆ ಬರೆದ Islam & Indian Culture (ಪುಟ: 58-73) ನೋಡಿರಿ)

ಅನ್ಯಧರ್ಮಿಯರ ಆರಾಧನಾಲಯಗಳನ್ನು ಅಗೌರವಿಸಬಾರದು, ಧ್ವಂಸಗೊಳಿಸಬಾರದೆಂದು ನಿಷ್ಠುರವಾಗಿ ಆದೇಶಿಸಿರುವ ಇಸ್ಲಾಮಿನ ಯಾವೊಬ್ಬ ನಿಷ್ಠಾವಂತ ಅನುಯಾಯಿಯೂ ದೇವಳ, ಚರ್ಚ್ ಅಥವಾ ಮಠಗಳನ್ನು ನಾಶಗೊಳಿಸಿದ ಉದಾಹರಣೆ ಇತಿಹಾಸದಲ್ಲಿ ಒಂದಾದರೂ ದೊರೆಯಲಾರದು. ಆದರೆ, ಧರ್ಮನಿಷ್ಠೆಯಿಲ್ಲದ, ಆಕ್ರಮಣಗಾರ ಮತ್ತು ಧನಮೋಹಿಯಾಗಿದ್ದ ಮುಹಮ್ಮದ್ ಘಜ್ನಿ ಹಲವು ಕ್ಷೇತ್ರಗಳನ್ನು ಕೊಳ್ಳೆ ಹೊಡೆದ ವಾಸ್ತವಿಕತೆಯನ್ನು ಇಲ್ಲಿ ನಿರಾಕರಿಸುವಂತಿಲ್ಲ. ಆತನ ಈ ಕೃತ್ಯಗಳಿಗೆ ಧನಮೋಹ ಪ್ರೇರಕವಾಗಿತ್ತೇ ವಿನಾ ಧರ್ಮ ಸರ್ವಥಾ ಅಲ್ಲ. ಮುಹಮ್ಮದ್ ಘಜ್ನಿ ಮುಲ್ತಾನದ ಸೂರ್ಯ ದೇವಾಲಯವನ್ನು ಕೊಳ್ಳೆ ಹೊಡೆದಿದ್ದನೆಂದು ಡಾ| ಈಶ್ವರ ಪ್ರಸಾದ್‌ ದಾಖಲಿಸಿದ್ದಾರೆ. (History of Muslim Rule, P: 49) ಅದರಲ್ಲಿದ್ದ ಸಂಪತ್ತನ್ನು ಸಂಪೂರ್ಣವಾಗಿ ದೋಚಿದ್ದರೂ ಕ್ಷೇತ್ರಕ್ಕೆ ಯಾವುದೇ ಹಾನಿ ಮಾಡಿರಲಿಲ್ಲ. ಆದ್ದರಿಂದ ಇಲ್ಲಿ 4 ಅತಿ ಮಹತ್ವದ ಅಂಶಗಳು ವಿಶೇಷ ಗಮನಾರ್ಹವಾಗಿವೆ.

1. ಮುಹಮ್ಮದ್ ಘಜ್ನಿಯು ಕೇವಲ ಆರ್ಥಿಕ ಉದ್ದೇಶದಿಂದ ಧಾರ್ಮಿಕ ಕ್ಷೇತ್ರಗಳನ್ನು ಆಕ್ರಮಿಸಿ ದೋಚಿದ್ದನು. ಖ್ಯಾತ ಇತಿಹಾಸಗಾರ ಪಿ.ಥೋಮಸ್ ಹೀಗೆ ಬರೆದಿದ್ದಾರೆ: ಭಾರತದ ಎಲ್ಲ ರಾಜ್ಯಗಳಲ್ಲಿಯೂ ಆಯಾ ಪ್ರದೇಶಗಳ ಸೊತ್ತು ಸಂಪತ್ತುಗಳನ್ನು ಅಲ್ಲಿನ ದೇವಾಲಯಗಳಲ್ಲಿ ಶೇಖರಿಸಿಡಲಾಗುತ್ತಿತ್ತೆಂಬ ಒಂದೇ ಅಂಶದಿಂದ ಬ್ರಾಹ್ಮಣ ಪೌರೋಹಿತ್ಯದ ಪ್ರಭಾವವನ್ನು ನಿರ್ಧರಿಸಬಹುದಾಗಿದೆ. ರಾಜಂದಿರ ಖಜಾನೆಗಳನ್ನು ಈ ದೇವಾಲಯಗಳ ಸಂಪತ್ತಿಗೆ ಹೋಲಿಸಿದರೆ ಅವು ನಗಣ್ಯವಾಗಿದ್ದುವು. ಆ ಕಾರಣದಿಂದಲೇ ಅರಮನೆಗಳ ಬದಲಾಗಿ ದೇವಾಲಯಗಳೇ ಮುಹಮದ್ ಘಜ್ನಿಯ ಆಕ್ರಮಣದ ಪ್ರಧಾನ ಗುರಿಯಾಗಿತ್ತು. (P.Thomas: Hindu Religion)

ಭೀಮ್‌ನಗರದ ಆಕ್ರಮಣದಲ್ಲಿ ಮುಹಮ್ಮದ್ ಘಜ್ನಿ ದೋಚಿದ ವಸ್ತುಗಳ ವಿವರಣೆಯಲ್ಲಿ ಹೀಗಿದೆ: “ಸುಲ್ತಾನನ ಸೈನಿಕರು ಹೊರಬಹುದಾದಷ್ಟು ಸೊತ್ತುಗಳನ್ನು ದೋಚಿದರು. ಉಳಿದುದನ್ನು ಹಲವರು ಹಂಚಿಕೊಂಡರು. ಸುಲ್ತಾನನಿಗೆ ದೊರೆತ ಕೇವಲ ಮುದ್ರಿತ ಬಂಗಾರದ ನಾಣ್ಯಗಳ ಬೆಲೆಯೇ ಎಂಟು ಕೋಟಿ ದಿರಮ್‌ಗಳಾಗಬಹುದು. ಬಂಗಾರ ಮತ್ತು ಬೆಳ್ಳಿಯು 7,400 ಜನ ಹೊರುವಷ್ಟಿತ್ತು. ಅದಲ್ಲದೇ ಉತ್ತಮ ಬಟ್ಟೆಬರೆ ಇತ್ಯಾದಿಗಳು ಹೇರಳವಾಗಿದ್ದುವು.” (Elliot & Dowson, Vol: 1, P; 35)

“ಉತ್ತರ ಮಥುರಾಪುರಿಯ ಶ್ರೀಕೃಷ್ಣ ಕ್ಷೇತ್ರದಿಂದ ಮುಹಮ್ಮದ್ ಘಜ್ನಿಗೆ ಬಂಗಾರದಿಂದ ನಿರ್ಮಿಸಿದ 5 ಗಜ ಉದ್ದದ 5 ವಿಗ್ರಹಗಳು ದೊರೆತವು. ಅದರಲ್ಲಿ ಒಂದು ವಿಗ್ರಹದ ಕಣ್ಣನ್ನು ಎರಡು ಮಾಣಿಕ್ಯದ ಕಲ್ಲುಗಳಿಂದ ನಿರ್ಮಿಸಲಾಗಿತ್ತು. ಪ್ರತಿಯೊಂದರ ಬೆಲೆ 50,000 ದೀನಾರ್‌ಗಳಾದೀತು. ಇನ್ನೊಂದು ವಿಗ್ರಹದ ಕಣ್ಣನ್ನು 450 ಮಿಸ್ಕಾಲ್ (1 ಮಿಸ್ಕಾಲ್= 4.25 ಗ್ರಾಂ) ವೈಢೂರ್ಯದಿಂದ ನಿರ್ಮಿಸಲಾಗಿತ್ತು. ಮತ್ತೊಂದು ವಿಗ್ರಹದ ಕಾಲುಗಳು 4400 ಮಿಸ್ಕಾಲ್ ಭಾರವಿತ್ತು. ಈ ಐದು ವಿಗ್ರಹಗಳಲ್ಲಿ ಒಟ್ಟು 98,800 ಮಿಸ್ಕಾಲ್ ಚಿನ್ನವಿತ್ತು.” (Elliot & Dowson Vol: 2, P: 44) ವಿವಿಧ ಧಾರ್ಮಿಕ ಕ್ಷೇತ್ರಗಳಿಂದ ಘಜ್ನಿ ಅಪಾರ ಸಂಪತ್ತನ್ನು ದೋಚಿದ್ದಾನೆ. ಅದಕ್ಕೆ ಧನಮೋಹವೇ ಪ್ರೇರಕವಾಗಿತ್ತು. ಆದ್ದರಿಂದಲೇ ಆತನು ಆರಾಧನಾಲಯಗಳನ್ನು ಧ್ವಂಸಗೊಳಿಸಿರಲಿಲ್ಲ.

2. ಮುಹಮ್ಮದ್ ಘಜ್ನಿ ಧರ್ಮಭಕ್ತ ಅಥವಾ ಧರ್ಮ ಪ್ರಚಾರಕನಾಗಿರಲಿಲ್ಲ. ಸ್ಟೇಚ್ಛಾಧಿಪತಿ ಮತ್ತು ಮರ್ದಕ ಆಡಳಿತಗಾರನೂ ತೀವ್ರ ಧನಮೋಹಿಯೂ ಆಗಿದ್ದ. ವೈಯಕ್ತಿಕ ಜೀವನದಲ್ಲಿ ಆತ ಇಸ್ಲಾಮಿನ ಆರಾಧನಾ ಕರ್ಮಗಳನ್ನಾಗಲಿ, ಆಚಾರ ರೀತಿಗಳನ್ನಾಗಲಿ ಪಾಲಿಸುತ್ತಿರಲಿಲ್ಲ. ಹೀಗಿರುವಾಗ ಆಡಳಿತ ವ್ಯವಹಾರಗಳ ಸ್ಥಿತಿಯನ್ನು ಹೇಳಬೇಕಾಗಿಲ್ಲ. ಕಾಝಿ ಮುಗೀಸುದ್ದೀನ್ ಹೀಗೆಂದಿದ್ದಾರೆ: “ಮಧ್ಯಕಾಲೀನ ಶತಮಾನದಲ್ಲಿ ಭಾರತದ ರಾಷ್ಟ್ರನಾಯಕನು ಮುಸ್ಲಿಮನಾಗಿದ್ದರೂ ರಾಷ್ಟ್ರವು ಇಸ್ಲಾಮ್ ಆಗಿರಲಿಲ್ಲ. ಪವಿತ್ರ ಗ್ರಂಥಗಳಾದ ಕುರ್‌ಆನ್ ಮತ್ತು ಹದೀಸ್‌ಗಳ ಬೋಧನೆಗಳನ್ನಾಗಲಿ, ಸುನ್ನಿ ಕರ್ಮಶಾಸ್ತ್ರದ ನಾಲ್ಕು ವಿಧದಲ್ಲಿರುವ ಯಾವುದೇ ಕಾನೂನುಗಳನ್ನಾಗಲಿ ರಾಷ್ಟ್ರ ಅವಲಂಬಿಸಲಿಲ್ಲ. ಮಧ್ಯಕಾಲೀನ ಭಾರತವು ಧರ್ಮಾಧಿಷ್ಠಿತವಾಗಿತ್ತೆನ್ನುವುದು ಸರಿಯಲ್ಲ ಏಕೆಂದರೆ, ಅದು ಮುಸ್ಲಿಮ್ ವಿದ್ವಾಂಸರ ಮಾರ್ಗದರ್ಶನದಲ್ಲಿ ವ್ಯವಹರಿಸುತ್ತಿರಲಿಲ್ಲ.” (B.N.Pande: Islam & Indian Culture, P:52)

ಸಿ ಅಚ್ಚುತ ಮೆನನ್ ಬರೆದಿದ್ದಾರೆ: ‘ವಸ್ತುತಃ ಮಧ್ಯಕಾಲೀನ ಸರಕಾರವು ಇಸ್ಲಾಮ್ ಧರ್ಮವನ್ನು ಜನರ ಮೇಲೆ  ಹೇರಲು ಅಥವಾ ಇಸ್ಲಾಮಿ ಧರ್ಮಾಚಾರಗಳನ್ವಯ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿಲ್ಲ.” (ಜನಯುಗ ಸಾಪ್ತಾಹಿಕ 26-11-78)

3. ಮುಹಮ್ಮದ್ ಘಜ್ನಿಯ ಸೈನಿಕರಲ್ಲಿ ಅನೇಕ ಹಿಂದುಗಳಿದ್ದರು. ಕೆಲವು ಉನ್ನತ ಹುದ್ದೆಗಳಲ್ಲಿಯೂ ಅವರು ನೇಮಕಗೊಂಡಿದ್ದರು. ಇದರಿಂದಾಗಿ ದೇವಾಲಯ ಲೂಟಿಗೆ ಧರ್ಮದ್ವೇಷ ಕಾರಣವಲ್ಲವೆಂದು ಸ್ಪಷ್ಟವಾಗುತ್ತದೆ. ಡಾ| ಈಶ್ವರೀ ಪ್ರಸಾದ್ ಹೀಗೆ ಬರೆದಿದ್ದಾರೆ: “ಅವರ ಸೇನೆಯಲ್ಲಿ ಹಿಂದುಗಳ ತುಕಡಿಯಿತ್ತು. ಅನೇಕ ಸೇನಾಧಿಕಾರಿಗಳಿದ್ದರು. ಅವರ ಲಾಹೋರಿನ ರಾಜ್ಯಪಾಲನೂ ಓರ್ವ ಹಿಂದುವಾಗಿದ್ದ.” (Dr. Iswari Prasad: ‘Muslim rule in India)

4. ಮುಹಮ್ಮದ್ ಘಜ್ನಿಯಂತೆಯೇ ಹಲವು ಹಿಂದೂ ರಾಜರೂ ಧನಮೋಹ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ದೇವಾಲಯಗಳನ್ನು ದೋಚಿ ನಾಶಪಡಿಸಿದ್ದಾರೆ. ಮರಾಠರು ಮತ್ತು ರಜಪೂತರು ಅನ್ಯರಾಜ್ಯಗಳ ಅನೇಕ ದೇವಾಲಯಗಳನ್ನು ದೋಚಿದ್ದರು. “1791ರಲ್ಲಿ ರಘುನಾಥ ರಾವ್ ಪಟುವರ್ಧನನ ನಾಯಕತ್ವದಲ್ಲಿ ಮರಾಠ ಸೇನೆಯು ಪ್ರಖ್ಯಾತ ಶೃಂಗೇರಿ ಮಠವನ್ನು ದೋಚಿ ಅನೇಕ ಬ್ರಾಹ್ಮಣರನ್ನು ಕೊಂದಿತ್ತು. ಹೇರಳ ಸಂಪತ್ತನ್ನು ಅಪಹರಿಸಿತ್ತು. ಮಠಾಧಿಪತಿಗಳು ಪ್ರಾಣ ರಕ್ಷಣೆಗಾಗಿ ಪಲಾಯನ ಮಾಡಬೇಕಾಯಿತು. ಅಂದು ಶೃಂಗೇರಿ ಪೀಠಾಧಿಪತಿಗಳ ವಿನಂತಿಯನ್ನು ಮನ್ನಿಸಿ ಸಂರಕ್ಷಣೆಗಾಗಿ ಟಿಪ್ಪುಸುಲ್ತಾನ್ ರು ಸೇನೆಯನ್ನು ಕಳುಹಿಸಿ ಅಕ್ರಮಿಗಳನ್ನು ಹೊಡೆದೋಡಿಸಿದ್ದರು.” (Bundle of Letters in the Temple Sringeri Discovered by Shri Narasimachar in 1916 quoted by K.H.Khan, Tippu Sultan, P: 355)

ರೋಮಿಲಾಥಾಪರ್ ಹೀಗೆ ಬರೆದಿದ್ದಾರೆ: “ಹನ್ನೆರಡನೆಯ ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಹರ್ಷನ ಉದಾಹರಣೆ ನಮ್ಮ ಮುಂದಿದೆ. ಆತನ ಮಟ್ಟಿಗೆ ಪೂಜಾಸ್ಥಳದ ಧ್ವಂಸವು ಯೋಜಿತ ಕೃತ್ಯವಾಗಿತ್ತು. ಅದಕ್ಕಾಗಿ ಆಡಳಿತಾತ್ಮಕ ವ್ಯವಸ್ಥೆಯನ್ನು ಮಾಡಲಾಗಿತ್ತು. ಹರ್ಷನು ದೇವೋತ್ಪತನ ನಾಯಕನೆಂಬ (ದೇವಂದಿರನ್ನು ನಾಶಪಡಿಸುವ ಅಧಿಕಾರಿ) ಓರ್ವ ಅಧಿಕಾರಿಯನ್ನೇ ಅದಕ್ಕಾಗಿ ನೇಮಿಸಿದ್ದನೆಂದು ಕಲ್ಹಣನು ತನ್ನ ರಾಜತರಂಗಿಣಿ’ಯಲ್ಲಿ ಸ್ಪಷ್ಟಪಡಿಸಿದ್ದಾನೆ. ಪೂಜಾಲಯಗಳನ್ನು ದೋಚುವುದೇ ಆತನ ಪ್ರಧಾನ ಕೆಲಸವಾಗಿತ್ತು. ಈ ಕೃತ್ಯಕ್ಕಾಗಿ ಹರ್ಷನನ್ನು ಮತಾಂಧನೆಂದು ಹೆಸರಿಸುವಂತಿಲ್ಲ, ಆತನು ಸಂಪತ್ತಿಗಾಗಿ ಪೂಜಾಲಯಗಳನ್ನು ದೋಚಿ ಆ ಸಂಪತ್ತನ್ನು ಆತ ಬೇರೆ ಕಾರ್ಯಗಳಿಗಾಗಿ ಬಳಸುತ್ತಿದ್ದ.” (‘ಕೋಮುವಾದ ಮತ್ತು ಪ್ರಾಚೀನ ಭಾರತದ ಇತಿಹಾಸ ರಚನೆ ಪ್ರಭಾತ ಪ್ರಿಂಟಿಂಗ್ ಏಂಡ್ ಪಬ್ಲಿಷಿಂಗ್ ಕಂಪೆನಿ ಲಿಮಿಟೆಡ್, ಪು: 23)

ಹರ್ಬನ್ಸ್ ಮುಖಿಯು ಹೀಗೆ ಬರೆದಿದ್ದಾರೆ: “ಮುಸ್ಲಿಮರು ರಾಜಕೀಯ ಪ್ರತಿಸ್ಪರ್ಧಿಗಳಾಗಿ ರಂಗ ಪ್ರವೇಶಿಸುವುದಕ್ಕಿಂತ ಎಷ್ಟೋ ಮುಂಚೆಯೇ ಶತ್ರುಗಳ ಪೂಜಾಲಯಗಳೊಂದಿಗೆ ಅನೇಕ ಹಿಂದೂ ರಾಜರು ಇದೇ ರೀತಿ ವರ್ತಿಸಿದ್ದರೆಂಬ ವಾಸ್ತವಿಕತೆಯನ್ನು ಇಲ್ಲಿ ಸಾಂದರ್ಭಿಕವಾಗಿ ಜ್ಞಾಪಿಸುತ್ತಿದ್ದೇನೆ. ವರ್ಮಾರ ವಂಶದ ಆಡಳಿತಾಧಿಕಾರಿಯಾಗಿದ್ದ ಸುಭತ ವರ್ಮನು (1193-1210) ಗುಜರಾತನ್ನು ಆಕ್ರಮಿಸಿ ದಾಭೋಯಿ ಮತ್ತು ಕಾಂಬೋಯಿಗಳ ಜೈನ ಬಸದಿಗಳನ್ನು ದೋಚಿದ್ದನು. ಕಾಶ್ಮೀರದ ಆಡಳಿತಗಾರನಾಗಿದ್ದ ಹರ್ಷನು ತನ್ನ ಸಾಮ್ರಾಜ್ಯದಲ್ಲಿ ನಾಲ್ಕು ದೇವಾಲಯಗಳನ್ನು ಬಿಟ್ಟು ಇತರೆಲ್ಲ ದೇವಾಲಯಗಳನ್ನು ದೋಚಿ ತನ್ನ ಖಜಾನೆ ತುಂಬಿಸಿದ್ದನು. (Ibid, ಪುಟ: 48)

ಭಾರತದ ಬೌದ್ಧ ವಿಹಾರಗಳ ಪತನಗಾಥೆ ಯಾರಿಗೂ ಅಜ್ಞಾತವಾಗಿಲ್ಲ. ‘ಕೇರಳವು ಪರಶುರಾಮನಿಂದ’ ಎಂಬ ಕೃತಿಯಲ್ಲಿ ಹೀಗಿದೆ: “ಭಾರತದಾದ್ಯಂತವಿರುವ ಅನೇಕ ಸಹಸ್ರ ಬೌದ್ಧ ವಿಹಾರಗಳನ್ನು ನಾಶಪಡಿಸಿ ಅವುಗಳಲ್ಲಿ ಹೆಚ್ಚಿನ ವಿಹಾರಗಳನ್ನು ಇಂದು ಪ್ರಚಲಿತವಿರುವ ಬ್ರಾಹ್ಮಣ ನಿಯಂತ್ರಿತ ಆರಾಧನಾ ಕ್ರಮಗಳಿರುವ ಪೂಜಾಲಯಗಳಾಗಿ ಮಾರ್ಪಡಿಸಲಾಯಿತು.”

ಕೇರಳ ಸರಕಾರವು ಪ್ರಕಟಿಸಿದ ‘ಜನಪಥ’ದಲ್ಲಿ ಹೀಗೆ ಬರೆಯಲಾಗಿದೆ: “ಆರ್ಯರು ಬೌದ್ಧ-ಜೈನ ವಿಹಾರಗಳನ್ನು ಹಿಂದೂ ಪೂಜಾಲಯಗಳಾಗಿ ಮಾರ್ಪಡಿಸಿ ಅವುಗಳ ಆಶ್ರಯದಲ್ಲಿದ್ದ ವಿದ್ಯಾಲಯಗಳನ್ನು ವೇದಪಾಠ ಶಾಲೆಗಳಾಗಿ ಬದಲಾಯಿಸಿದರು.” (ಜನಪಥ: ಜೂನ್ 1983)

ಮುಹಮ್ಮದ್ ಘಜ್ನಿಯ ದೇವಾಲಯ ಲೂಟಿಯು ಭಾರತದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರಿಗೂ ಇಸ್ಲಾಮಿ ಸಂದೇಶ ಪ್ರಚಾರಕ್ಕೂ ಮಾಡಿರುವ ಹಾನಿಯು ಅವರ್ಣನೀಯವಾಗಿದೆ. ಅವರ ಇಸ್ಲಾಮೇತರ ಮತ್ತು ಅರೋಚಕವಾದ ಈ ಹೀನಕೃತ್ಯವು ಹಿಂದೂ ಸಮುದಾಯದಲ್ಲಿ ಇಸ್ಲಾಮಿನ ಕುರಿತು ಗಂಭೀರ ತಪ್ಪು ತಿಳುವಳಿಕೆಗಳಿಗೆ ಕಾರಣವಾಯಿತು. ಪ್ರೊ| ಹಬೀಬ್ ಮುಹಮ್ಮದ್ ಹೀಗೆ ಬರೆದಿದ್ದಾರೆ: “ಮಹಮ್ಮದ್ ಘಜ್ನಿಯ ಆಕ್ರಮಣದಿಂದ ಈ ದೇಶದಲ್ಲಿ ವಿಗ್ರಹ ಧ್ವಂಸ ನಡೆಯಿತು. ಅನಂತರ ಎಲ್ಲ ಮುಸ್ಲಿಮ್ ರಾಜಂದಿರನ್ನು ಸಾರಾಸಗಟಾಗಿ ದೇವಾಲಯ ಧ್ವಂಸಕರೆಂದು ಚಿತ್ರೀಕರಿಸಲಾಗಿದೆ. ಆ ಮೂಲಕ ಘಜ್ನಿಯು ಭಾರತೀಯರ ಮನದಲ್ಲಿ ಶಾಶ್ವತ ದ್ವೇಷ ಮತ್ತು ಅಪನಂಬಿಕೆಗೆ ಕಾರಣನಾಗಿದ್ದಾನೆ. ಇಸ್ಲಾಮಿನ ಸಂದೇಶ ಪ್ರಚಾರಕ್ಕೆ ಘಜ್ನಿಯ ಆಕ್ರಮಣದ ನೆನಪು ಮತ್ತು ಅದರಿಂದ ಮೂಡಿದ ಭೀತಿಯು ಮಹಾ ಅಡ್ಡಿಯಾಗಿದೆ. ಆದ್ದರಿಂದಲೇ ಘಜ್ನಿ ತೀರಿಕೊಂಡಾಗ ಲಾಹೋರ್‌ನಿಂದ ಉತ್ತರ ಭಾರತದ ಯಾವೆಡೆಗಳಲ್ಲಿಯೂ ಇಸ್ಲಾಮಿನ ಕಣವೂ ಉಳಿದಿರಲಿಲ್ಲ’ (Prof. Habeeb Muhammad of Ghazamin. ಪುಟ: 47)

“ಕೆಲವರು, ಪ್ರಖ್ಯಾತರಾದ ಟಿಪ್ಪುಸುಲ್ತಾನ್‌ರನ್ನು ಮತಾಂಧ ಮತ್ತು ದೇವಾಲಯ ಧ್ವಂಸಕನೆಂದು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ಅವರು ಬ್ರಿಟಿಷರು ರಚಿಸಿದ ಕೃತಕ ದಾಖಲೆಗಳನ್ನು ಅವಲಂಬಿಸುತ್ತಾರೆ. ವಸ್ತುತಃ ಟಿಪ್ಪು ಸುಲ್ತಾನರು ಸಹೋದರ ಸಮುದಾಯಗಳ ಧಾರ್ಮಿಕ ವಿಶ್ವಾಸಗಳನ್ನೂ ಆಚಾರಗಳನ್ನೂ ಆರಾಧನಾ ಕರ್ಮಗಳನ್ನೂ ಸಂಪೂರ್ಣವಾಗಿ ಗೌರವಿಸುವ ಆಡಳಿತಗಾರರಾಗಿದ್ದರು. ಅವರು ಅನೇಕ ದೇವಾಲಯಗಳ ನಿರ್ಮಾಣಕ್ಕೆ ನೆರವು ನೀಡಿದ್ದಾರೆ. ಅನೇಕ ದೇವಾಲಯಗಳಿಗೆ ಸೊತ್ತುಗಳನ್ನು ಕೊಡುಗೆ ನೀಡಿದ್ದಾರೆ. ಮೈಸೂರಿನ ಪ್ರಾಚ್ಯವಸ್ತು ಇಲಾಖೆಯ ವರದಿಯನ್ವಯ ಅವರು ನಂಜನಗೂಡು ತಾಲೂಕಿನ ಲಕ್ಷ್ಮೀಕಾಂತ ದೇವಾಲಯ ಮತ್ತು ಮೇಲು ಕೋಟೆ ನಾರಾಯಣ ಸ್ವಾಮಿ ದೇವಾಲಯಗಳಿಗೆ ಆನೆಗಳನ್ನೂ ಚಿನ್ನ ಬೆಳ್ಳಿಯ ಹರಿವಾಣಗಳನ್ನೂ ಜಮೀನು ಮತ್ತಿತರ ಸೊತ್ತುಗಳನ್ನೂ ನೀಡಿದ್ದರು.” (ಮೈಸೂರ್ ಆರ್ಕಿಯಲಾಜಿಕಲ್ ರಿಪೋರ್ಟ್, 1917 ಪುಟ: 60)

ಈ ದೇವಾಲಯಗಳ ಅನೇಕ ಚಿನ್ನದ ಹರಿವಾಣ ಮತ್ತು ದೀಪಗಳಲ್ಲಿ ‘ಪಾದುಶಾ ಟಿಪ್ಪುಸುಲ್ತಾನ್‌ರ ಕೊಡುಗೆ ಬರೆದಿರುವುದನ್ನು ಇಂದಿಗೂ ನೋಡಬಹುದು. (Ibid ಪುಟ: 23-40)

ಪುಷ್ಪಗಿರಿ ದೇವಾಲಯದ ಪರಿಪಾಲನೆಗಾಗಿ ತುಂಗಹಳ್ಳಿ ಮತ್ತು ಗೊಲ್ಲಹಳ್ಳಿ ಎಂಬ ಗ್ರಾಮಗಳನ್ನು ಟಿಪ್ಪುಸುಲ್ತಾನ್ ಉಂಬಳಿಯಾಗಿ ನೀಡಿದ್ದರು. (Ibid ಪುಟ: 249-295)

ಶಾರದಾ ಪೀಠದ ಜಗದ್ಗುರುಗಳು, ಅಲೀ ಸಹೋದರರ ದಾವೆಯ ವಿಚಾರಣೆಯ ವೇಳೆ ನ್ಯಾಯಾಲಯದಲ್ಲಿ ನೀಡಿದ ಸಾಕ್ಷ್ಯದಲ್ಲಿ ಹೀಗಿದೆ: “ಶೃಂಗೇರಿ ಮಠಾಧೀಶರಾದ ಶಂಕರಾಚಾರ್ಯರನ್ನು ಬಹಳವಾಗಿ ಗೌರವಿಸುತ್ತಿದ್ದ ಟಿಪ್ಪುಸುಲ್ತಾನ್‌ರು ನೂರಾರು ದೇವಾಲಯಗಳ ಜೀರ್ಣೋದ್ಧಾರ ಇತ್ಯಾದಿಗಳಿಗಾಗಿ ನೆರವು ನೀಡಿದ್ದಾರೆ. ಮಾತ್ರವಲ್ಲ ಅವರ ಶ್ರಮಫಲದಿಂದ ಹಲವು ಹೊಸ ದೇವಾಲಯಗಳೂ ನಿರ್ಮಿಸಲ್ಪಟ್ಟಿವೆ. (ಉದ್ಧರಣೆ: Noorani, The Trail of Ali Brothers, Indian Express dt 25.3.1973)

“ರಂಗನಾಥ ದೇವಾಲಯವು ಟಿಪ್ಪುಸುಲ್ತಾನ್‌ರ ಶ್ರೀರಂಗಪಟ್ಟಣದ ಕೋಟೆಯೊಳಗಿದೆ. ಅದು ಅವರ ಅರಮನೆಯಿಂದ ಕೇವಲ 100 ಗಜ ದೂರದಲ್ಲಿದೆ. ನರಸಿಂಹರಾವ್‌ ಕ್ಷೇತ್ರ ಮತ್ತು ಗಂಗಾಧರೇಶ್ವರ ಕ್ಷೇತ್ರವೂ ಅವರ ಕೋಟೆಯ ಒಳಗಿದೆ. ಅವುಗಳ ಆಡಳಿತ ಮತ್ತು ಉತ್ಸವಗಳಿಗಾಗಿ ಟಿಪ್ಪುಸುಲ್ತಾನ್ ಉದಾರ ಆರ್ಥಿಕ ನೆರವು ನೀಡುತ್ತಿದ್ದರು. ಟಿಪ್ಪುಸುಲ್ತಾನ್ ರು 156 ಹಿಂದೂ ಕ್ಷೇತ್ರಗಳಿಗೆ ಆರ್ಥಿಕ ನೆರವು ನೀಡಿದ್ದರೆಂದು ಸಿ.ಕೆ.ಕರೀಮ್ ಆಧಾರ ಸಹಿತ ಸಾಬೀತುಪಡಿಸಿದ್ದಾರೆ. ” (ಇತಿಹಾಸ ಅಧ್ಯಯನಗಳು ಪುಟ: 433-438)

ಅವರ ಕುರಿತು ಗಾಂಧೀಜಿ ಹೀಗೆ ಬರೆದಿದ್ದಾರೆ: “ವಿದೇಶಿ ಇತಿಹಾಸಗಾರರು ಟಿಪ್ಪುಸುಲ್ತಾನ್‌ರನ್ನು ಮತಾಂಧ, ಇಸ್ಲಾಮ್ ಸ್ವೀಕರಿಸುವಂತೆ ಹಿಂದೂ ಪ್ರಜೆಗಳನ್ನು ಬಲಾತ್ಕರಿಸಿದವನೆಂದು ಚಿತ್ರೀಕರಿಸಿದ್ದಾರೆ. ಆದರೆ, ಅವರು ಅಂತಹವರಾಗಿರಲಿಲ್ಲ, ಬದಲಾಗಿ ಹಿಂದೂ ಪ್ರಜೆಗಳೊಂದಿಗೆ ಅವರ ಸಂಬಂಧವು ಸಂಪೂರ್ಣ ಸೌಹಾರ್ದಮಯವಾಗಿತ್ತು. ಮೈಸೂರು ಸಂಸ್ಥಾನದ ಪ್ರಾಚ್ಯವಸ್ತು ವಿಭಾಗದಲ್ಲಿ ಟಿಪ್ಪುಸುಲ್ತಾನ್ರು ಶೃಂಗೇರಿ ಮಠದ ಶಂಕರಾಚಾರ್ಯರಿಗೆ ಬರೆದ ಸುಮಾರು 30 ಪತ್ರಗಳಿವೆ… ಹಿಂದೂ ದೇವಾಲಯಗಳಿಗೆ ಟಿಪ್ಪುಸುಲ್ತಾನ್ ಧಾರಾಳ ಜಮೀನುಗಳನ್ನು ದಾನ ಮಾಡಿದ್ದಾರೆ. ಟಿಪ್ಪುವಿನ ಅರಮನೆಯ ಮುಂಭಾಗದಲ್ಲಿರುವ ವೆಂಕಟರಮಣ, ಶ್ರೀನಿವಾಸ, ಶ್ರೀರಂಗನಾಥ ಇತ್ಯಾದಿ ಕ್ಷೇತ್ರಗಳು ಆ ಮಹಾನುಭಾವನ ಸಹಿಷ್ಣುತೆ ಮತ್ತು ವಿಶಾಲ ಮನೋಭಾವದ ಅಮರ ಸ್ಮಾರಕಗಳಾಗಿವೆ. ಅಲ್ಲಾಹನ ಭಕ್ತನಾಗಿದ್ದ ಆ ಮಹಾನ್ ಹುತಾತ್ಮ ಅವರು ಸ್ವಾತಂತ್ರ್ಯದ ಹುತಾತ್ಮರಾಗಿದ್ದರು. ಅವರು ಹಿಂದೂ ದೇವಾಲಯಗಳ ಘಂಟಾನಾದವನ್ನು ತನ್ನ ಪ್ರಾರ್ಥನೆಗಳಿಗೆ ಅಡ್ಡಿಯೆಂದು ಭಾವಿಸಿರಲಿಲ್ಲ.” (ಯಂಗ್ ಇಂಡಿಯಾ, 1930 ಜನವರಿ 23, ಪುಟ: 31)

ಸಂಕ್ಷಿಪ್ತದಲ್ಲಿ, ಯಾವ ಮುಸ್ಲಿಮ್ ಆಡಳಿತಗಾರನೂ ಪ್ರಜ್ಞಾಪೂರ್ವಕವಾಗಿ ದೇವಾಲಯಗಳನ್ನು ನಾಶಪಡಿಸಿರಲಿಲ್ಲ, ಯುದ್ಧ ಮತ್ತು ಸಂಘರ್ಷಗಳಿಂದ, ಕೆಲವು ದೇವಾಲಯಗಳು ಹಾನಿಗೊಂಡಿವೆ ಅಥವಾ ನಾಶವಾಗಿವೆಯೆಂಬುದು ನಿಜ. ಆದರೆ, ಧಾರ್ಮಿಕ ಕಾರಣಗಳಿಗಾಗಿ ಅನ್ಯರ ಆರಾಧನಾಲಯಗಳನ್ನು ಕೆಡಹಿದ ಸಾಕ್ಷ್ಯಾಧಾರಗಳನ್ನು ಇತಿಹಾಸದಲ್ಲಿ ಕಂಡು ಹಿಡಿಯಲು ಸಾಧ್ಯವಿಲ್ಲ ಎಂಟು ಶತಮಾನಗಳ ನಿರಂತರ ಮುಸ್ಲಿಮ್ ಆಳ್ವಿಕೆಯ ಬಳಿಕವೂ ಭಾರತದ ಸಹಸ್ರಾರು ದೇವಾಲಯಗಳು ಸುರಕ್ಷಿತವಾಗಿ ಉಳಿದುವೆಂಬ ವಾಸ್ತವಿಕತೆಯನ್ನು ಮರೆಯಬಾರದು.

ಪವಿತ್ರ ಕುರ್ ಆನ್ ಮತ್ತು ಪ್ರವಾದಿಚರ್ಯೆಯನ್ನು ಅನುಸರಿಸಲು ಪ್ರತಿಜ್ಞಾಬದ್ಧನಾಗಿರುವ ಓರ್ವ ಸತ್ಯವಿಶ್ವಾಸಿಯು ಪರಧರ್ಮಿಯರ ಆರಾಧನಾಲಯಗಳಿಗೆ ಹಾನಿಯುಂಟು ಮಾಡಲಾರನು. ಎಲ್ಲ ಧರ್ಮಾನುಯಾಯಿಗಳ ಆರಾಧನಾಲಯಗಳು ಸುರಕ್ಷಿತವಾಗಿರಬೇಕೆಂದು ಇಸ್ಲಾಮ್ ಬಯಸುತ್ತದೆ. ಇತಿಹಾಸದ ಕರಾಳ ಹಂತಗಳಲ್ಲಿ ಯಾರಿಂದಲಾದರೂ ಅಕ್ರಮಗಳು ನಡೆದಿದ್ದರೆ, ಅದಕ್ಕೆ ದೇವವಿಶ್ವಾಸ ಮತ್ತು ಪರಲೋಕ ಪ್ರಜ್ಞೆಯಿಲ್ಲದ ಮುಸ್ಲಿಮ್ ನಾಮಧಾರಿಗಳೇ ಕಾರಣರಾಗಿದ್ದಾರೆ. ಸ್ವಾರ್ಥಿಗಳಾದ ದುಷ್ಟ ಆಡಳಿತಗಾರರಿಗೆ ಧರ್ಮ ಮತ್ತು ವಿಶ್ವಾಸಗಳೆಲ್ಲವೂ ಅಧಿಕಾರಗಳಿಸಿ ಅದನ್ನು ಸುಧೃಢಗೊಳಿಸುವ ಮರೆಯಾಗಿದೆಯಷ್ಟೆ.

  • ಇಸ್ಲಾಮ್ ಮತ್ತು ಪರಧರ್ಮ ಸಹಿಷ್ಣುತೆ ಎಂಬ ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …