ಪ್ರಶ್ನೆ: ಕರ್ಮಭ್ರಷ್ಟರು ಮತ್ತು ಮಹಾಪಾಪಿಗಳು ಸತ್ತರೆ ಅವರ ಜನಾಝಾ ನಮಾಝ್ ಮಾಡಬಾರದೆಂದು ಹೇಳುತ್ತಾರೆ. ಇದು ಸರಿಯೇ? ದಯವಿಟ್ಟು ಉತ್ತರಿಸಿ.
ಉತ್ತರ: ಪ್ರವಾದಿ(ಸ) ಹೇಳಿದ್ದಾರೆ- “ಲಾ ಇಲಾಹ ಇಲ್ಲಲ್ಲಾಹ್ (ಅಲ್ಲಾಹ ನಲ್ಲದೆ ಅನ್ಯ ಆರಾಧ್ಯರಿಲ್ಲ) ಎಂದು ಹೇಳುವ ಪ್ರತಿಯೊಬ್ಬನ ಜನಾಝಾ ನಮಾಝ್ ಮಾಡಿರಿ.” (ದಾರುಕುತ್ನಿ) ಆದ್ದರಿಂದ ಕರ್ಮಭ್ರಷ್ಟರ (ಫಾಸಿಕ್) ಮತ್ತು ಮಹಾಪಾಪಿಗಳ ಜನಾಝ ನಮಾಝ್ ಮಾಡಬಹುದೆಂದು ಬಹುಸಂಖ್ಯಾತರಾದ ವಿದ್ವಾಂಸರು ಹೇಳುತ್ತಾರೆ. ಇದರಲ್ಲಿ ಇಮಾಮ್ ಅಬೂ ಹನೀಫಾ, ಮಾಲಿಕ್, ಶಾಫಿಈ ಮತ್ತು ಇಬ್ನು ಹಝಯ್ ಸೇರಿದ್ದಾರೆ. ಈ ವಿಷಯದಲ್ಲಿ ಒಮ್ಮತಾಭಿಪ್ರಾಯ ವಿದ್ದರೂ ಕೆಲವು ವಿವರಣೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ.
ಇಮಾಮ್ ಅಬೂ ಹನೀಫಾರ ದೃಷ್ಟಿಯಲ್ಲಿ ಬಂಡುಕೋರ ಮತ್ತು ವಿದ್ರೋಹಿಯ ಜನಾಝ ನಮಾಝ್ ಮಾಡಬಾರದು. ಇಮಾಮ್ ಶಾಫಿಈಯವರ ಪ್ರಕಾರ, ಡಕಾಯಿತ ಮತ್ತು ದರೋಡೆಕೋರನ ನಮಾಝ್ ಮಾಡುವಂತಿಲ್ಲ. ಇಮಾಮ್ ಮಾಲಿಕ್‍ರ ಅಭಿಪ್ರಾಯದಲ್ಲಿ ನವೀನಾಚಾರಿಯ ನಮಾಝ್ ಮಾಡಬಹುದಾದರೂ ಅದು ಮಕ್ರೂಹ್ ಆಗಿದೆ. ಇಮಾಮ್ ಇಬ್ನು ಹಝಮ್ ಹೇಳುತ್ತಾರೆ- ಯಾವನೇ ಮುಸಲ್ಮಾನನ ಜನಾಝ ನಮಾಝ್ ಮಾಡದಿರುವುದು ಸರಿಯಲ್ಲ. ಅವರು ಬರೆಯುತ್ತಾರೆ- “ಪಾಪಿಯು ಪ್ರಾರ್ಥನೆಗೆ ಹೆಚ್ಚು ಅರ್ಹನು.” (ಫತ್ಹುರ್ರಬ್ಬಾನಿ)
ಉಮರ್ ಬಿನ್ ಅಬ್ದುಲ್ ಅಝೀಝ್, ಔಝಾಈ ಮತ್ತು ಇಮಾಮ್ ಅಹ್ಮದ್‍ರವರು, ಕರ್ಮ ಭ್ರಷ್ಟರ ಮತ್ತು ಮಹಾ ಪಾಪಿಯ ಜನಾಝ ನಮಾಝ್ ಮಾಡಬೇಕು. ಆದರೆ ವಿದ್ವಾಂಸರು ಮತ್ತು ನೇತಾರರು ನಮಾಝ್ ಮಾಡುವಂತಿಲ್ಲ. ಇದು ಜನರಿಗೆ ಪಾಠಬೋಧಕವಾಗಲಿಕ್ಕಾಗಿದೆ. ಇದಕ್ಕೆ ಝೈದ್ ಬಿನ್ ಖಾಲಿದ್‍ರವರ ವರದಿ ಆಧಾರವಾಗಿದೆ. ಅವರು ಹೇಳುತ್ತಾರೆ- ಖೈಬರ್ ಯುದ್ಧದಲ್ಲಿ ಒಬ್ಬ ವ್ಯಕ್ತಿ ಕೊಲ್ಲಲ್ಪಟ್ಟ. ಈ ವಿಷಯ ಪ್ರವಾದಿಯವರಿಗೆ ತಿಳಿಸಲಾದಾಗ, ನೀವು ನಮಾಝ್ ಮಾಡಿರಿ. ನಾನು ಮಾಡುವುದಿಲ್ಲವೆಂದು ಅವರು ಹೇಳಿದರು. ಇದನ್ನು ಕೇಳಿ ಸಹಾಬಿಗಳ ಮುಖ ವಿವರ್ಣವಾಯಿತು. ಇದನ್ನು ಕಂಡು ಪ್ರವಾದಿ(ಸ) ಹೇಳಿದರು- ಈತನು ಅಲ್ಲಾಹನ ಮಾರ್ಗದಲ್ಲಿ ಕಳವು ಮಾಡಿದ್ದಾನೆ (ಅಂದರೆ ಸಮರಾರ್ಜಿಕ ಸೊತ್ತಿನಿಂದ ಕದ್ದಿದ್ದಾನೆ) [ಅಬೂ ದಾವೂದ್, ನಸಾಈ, ಇಬ್ನುಮಾಜಃ] ಇನ್ನೊಂದು ಹದೀಸ್ ಜಾಬಿರ್ ಬಿನ್ ಸಮ್ರಃರದ್ದಾಗಿದೆ- ಒಬ್ಬ ವ್ಯಕ್ತಿ ಬಾಣ ಮೊನೆಯಿಂದ ತಿವಿದು ಆತ್ಮಹತ್ಯೆ ಮಾಡಿದನು. ಅವರ ಜನಾಝ ನಮಾಝನ್ನು ಪ್ರವಾದಿ(ಸ) ಮಾಡಲಿಲ್ಲ.
ಬಹುಸಂಖ್ಯಾತ ಇಮಾಮರು ಹೇಳುವುದೇನೆಂದರೆ- ಪ್ರಸ್ತುತ ಘಟನೆಗಳಿಂದ ತಿಳಿದು ಬರುವುದೇನೆಂದರೆ ಪ್ರವಾದಿಯವರು(ಸ) ಕಳ್ಳನ ಮತ್ತು ಆತ್ಮಹತ್ಯೆ ಮಾಡಿದವನ ನಮಾಝ್ ನಿರ್ವಹಿಸಲಿಲ್ಲ. ಆದರೆ ಸಹಾಬಿಗಳು ನಿರ್ವಹಿಸಿದ್ದಾರೆಂದಷ್ಟೆ. ಸಹಾಬಿಗಳು ನಮಾಝ್ ನಿರ್ವಹಿಸಿರುವಾಗ, ಇತರರೂ (ನಂತರದವರು) ಮಾಡಬೇಕು. ಅಹ್ಲೆ ಹದೀಸ್ ಉಲೆಮಾಗಳಲ್ಲಿ ಮೌಲಾನಾ ಅಬ್ದುರ್ರಹ್ಮಾನ್ ಮುಬಾರಕ್‍ಪುರಿಯವರ ಅಭಿಪ್ರಾಯವೂ ಇಮಾಮ್ ಅಹ್ಮದ್ ಮತ್ತಿತರ ವಿದ್ವಾಂಸರದ್ದಾಗಿದೆ.
IslamKannada News Portal
