ಪ್ರಶ್ನೆ: ಯಾಸೀನ್ ಅಧ್ಯಾಯದಲ್ಲಿ ಸತ್ಯ ನಿಷೇಧೀಗಳು ನಿರ್ಣಾಯಕ ದಿನದಂದು ಎಚ್ಚರಗೊಂಡಾಗ, “ನಮ್ಮನ್ನು ನಮ್ಮ ಶಯನ ಗೃಹದಿಂದ ಎಬ್ಬಿಸಿದವರಾರು” ಎಂದು ಕೇಳುವರೆಂದಿದೆ. ಈ ಮಾತಿನಿಂದ ತಿಳಿದು ಬರುವುದೇನೆಂದರೆ ಮರಣಾನಂತರ ಪುನರಪಿ ಎಬ್ಬಿಸಲ್ಪಡುವ ತನಕ ಅಪ್ರಜ್ಞಾವಸ್ಥೆಯಲ್ಲಿ ನಿದ್ರಿಸಿರುವರೆಂದಾಗುತ್ತದೆ. ಹಾಗಾದರೆ, ಗೋರಿ ಶಿಕ್ಷೆಯ ಕಲ್ಪನೆಯು ತಪ್ಪಾಗುತ್ತದೆ. ಅನ್ಯಥಾ ಸತ್ಯನಿಷೇಧಿಗಳು, ನಮ್ಮನ್ನು ನಮ್ಮ ಶಯನ ಗೃಹಗಳಿಂದ ಎಬ್ಬಿಸಿದವರಾರು ಎಂದು ಕೇಳುತ್ತಿರಲಿಲ್ಲವಷ್ಟೇ? ಸ್ಪಷ್ಟೀಕರಿಸಿ.
ಉತ್ತರ: ಮರಣ ಮತ್ತು ಪುನಃ ಎಬ್ಬಿಸಲ್ಪಡುವುದರ ತಾತ್ಪರ್ಯವನ್ನು ಮೊದಲು ಗ್ರಹಿಸಬೇಕು. ಮರಣವೆಂದರೇನು? ದೇಹದಿಂದ ಆತ್ಮವನ್ನು ಬೇರ್ಪಡಿಸುವುದು. ಪುನಃ ಎಬ್ಬಿಸುವುದೆಂದರೆ ಆತ್ಮವನ್ನು ಪುನಃ ದೇಹಕ್ಕೆ ಜೋಡಿಸುವುದು. ಮರಣ ಬರುವಾಗ ಆತ್ಮವು ದೇಹದಿಂದ ಬೇರ್ಪಡುತ್ತದೆ. ಆದರೆ ಅದು ಅಳಿದು ಹೋಗುವುದಿಲ್ಲ. ಪೂರ್ಣ ಪ್ರಜ್ಞಾವಸ್ಥೆಯಲ್ಲಿ ಉಳಿದಿರುತ್ತದೆ. ಅದೇ ಸ್ಥಿತಿಯಲ್ಲಿ ಅದಕ್ಕೆ ಶಿಕ್ಷೆ ನೀಡಲಾಗುತ್ತದೆ. ಅದನ್ನೇ ಗೋರಿ ಶಿಕ್ಷೆಯೆನ್ನಲಾಗುತ್ತದೆ.
ಒಬ್ಬನು ಕನಸಿನಲ್ಲಿ ಹುಲಿ ದಾಳಿ ಮಾಡುವುದನ್ನು ಕಾಣುತ್ತಾನೆ. ಎಚ್ಚರದಲ್ಲಿರುವ ಹುಲಿಯ ಆಕ್ರಮಣದಿಂದ ಹೇಗೆ ಅವನು ಭಯಭೀತನಾಗುತ್ತಾನೋ ಅದೇ ರೀತಿಯ ಭಯವನ್ನು ಅವನು ಕನಸಿನಲ್ಲೂ ಅನುಭವಿಸುತ್ತಾನೆ. ಮಲಗಿರುವವನು ಭಯಭೀತಿಯಿಂದ ತಾನು ಕನಸು ಕಾಣುತ್ತಿದ್ದೇನೆಂದು ತಿಳಿದಿರುವುದಿಲ್ಲ. ಅವನು ಹಾಸಿಗೆಯಲ್ಲಿ ಬಿದ್ದುಕೊಂಡಿರುತ್ತಾನೆ. ಆದರೆ ಅವನು ಹುಲಿಯ ದಾಳಿಯನ್ನು ನಿಜವಾದ ದಾಳಿಯೆಂದೇ ಭಾವಿಸುತ್ತಾನೆ. ಈ ಭಯದಿಂದ ಸಂಕಷ್ಟ ಅನುಭವಿಸುತ್ತಾನೆ. ಗೋರಿ ಶಿಕ್ಷೆಯ ರೂಪ ಇದೇ ರೀತಿಯಿರುತ್ತದೆ ಎನ್ನಬಹುದು.
ಅನಂತರ ಅವನು ಎಚ್ಚರಗೊಂಡಾಗ, ತಾನು ಮಲಗಿದ್ದು, ಕೇವಲ ಕನಸು ಕಂಡಿದ್ದೆ ಎಂಬುದು ಅವನಿಗೆ ತಿಳಿಯುತ್ತದೆ. ಇದೇ ರೀತಿಯಲ್ಲಿ ಸತ್ಯನಿಷೇಧಿಗಳು ಎಚ್ಚರಗೊಂಡಾಗ ಇದೇ ಅರ್ಥದಲ್ಲಿ ಕೇಳುವರು. ಅಂದರೆ ನಾವು ಮಲಗಿದ್ದೆವಲ್ಲ. ಭಯಾನಕ ಕನಸು ಕಂಡಿದ್ದು ಹೇಗೆ ಎಚ್ಚರವಾಗುತ್ತಿದೆಯಲ್ಲ ಎಂದು ಹೇಳುವರು. ಆ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳಿಗೆ ಇದು ನಿರ್ಣಾಯಕ ದಿನದಂದು ಎಚ್ಚೆತ್ತದ್ದು ಎಂದು ತಿಳಿಯುವುದು. ಆದರೆ ಸತ್ಯನಿಷೇಧಿಗಳು, ಬಹುದೇವವಿಶ್ವಾಸಿಗಳು ಹಾಗೂ ಪರಲೋಕವನ್ನು ನಿರಾಕರಿಸುವವರು ಗಾಬರಿಗೊಂಡು, ನಾವು ಮಲಗಿದ್ದೆವು. ನಮ್ಮನ್ನು ಎಬ್ಬಿಸಲಾಗಿದೆ. ನಮ್ಮನ್ನು ನಮ್ಮ ಶಯನಗೃಹಗಳಿಂದ ಎಬ್ಬಿಸಿದವರಾರು ಎಂದು ಕೇಳುವರು. ಆಗ ಅವರಿಗೆ, “ಇದು ದಯಾಮಯನು (ಅಲ್ಲಾಹನು) ವಾಗ್ದಾನ ಮಾಡಿದುದೇ ಆಗಿದೆ ಮತ್ತು ಸಂದೇಶವಾಹಕರ ಮಾತು ಸತ್ಯವಾಗಿತ್ತು” ಎಂದು ಹೇಳಲಾಗುವುದು.
IslamKannada News Portal
