Home / ಲೇಖನಗಳು / ಕೊರೋನಾ ನೆನಪಿಸಿದ ಸತ್ಯ

ಕೊರೋನಾ ನೆನಪಿಸಿದ ಸತ್ಯ

ಮರಣದ ಕುರಿತು ನಮ್ಮ ನಿರ್ಲಕ್ಷ್ಯವು ಲೌಕಿಕ ಜೀವನದ ಸುಖಾಂಡಬರಗಳಲ್ಲೇ ಮುಳುಗಲು ಕಾರಣವಾಗುತ್ತದೆಂಬ ಕುರಿತು ಧಾರಾಳ ಉಪನ್ಯಾಸಗಳನ್ನು, ಭಾಷಣ,  ಲೇಖನ ನಾವು ಆಲಿಸಿದ್ದೇವೆ. ಓದಿದ್ದೇವೆ. ಆದರೆ ಕೊರೋನಾ ಕಾಲದಲ್ಲಿ ನಾವು ಅರಿತುಕೊಂಡ ವಾಸ್ತವಿಕತೆಗಳಲ್ಲಿ ಅತ್ಯಂತ ಮುಖ್ಯವಾಗಿ ಮನುಷ್ಯ ತನ್ನ ಮರಣದ  ಕುರಿತು ಧಾರಾಳವಾಗಿ ನೆನಪಿಸಿಕೊಂಡಿದ್ದಾನೆ. ಮರಣವು ನಿಷೇಧಿಸಲಾಗದ ಸತ್ಯವೆಂಬ ಅರಿವಿದ್ದೂ, ಅದು ತನ್ನ ಬಳಿಗೆ ತಲುಪಲು ಇನ್ನೂ ಸಮಯವಿದೆಯೆಂದೇ ಸಾಮಾನ್ಯವಾಗಿ ಹೆಚ್ಚಿನೆಲ್ಲರ ಭಾವನೆಯಾಗಿರುತ್ತದೆ. ಆದರೆ ಎಂಥ ಆರೋಗ್ಯವಂತನೂ ಕ್ಷಣಾರ್ದದಲ್ಲೇ ರೋಗಿಯಾಗಿ, ಕೆಲವೇ ದಿನಗಳಲ್ಲಿ ಅದು ಮರಣದವರೆಗೆ ತಲುಪಿಸುತ್ತದೆಯೆಂಬ ಸತ್ಯವು ಜನರಿಗೆ ಹುಟ್ಟಿಸಿದ ಭಯ ಸಣ್ಣದಲ್ಲ. ಔಷಧವಿಲ್ಲದ ರೋಗವಾದ ಕಾರಣ ಹಣ, ಅಧಿಕಾರವಿರುವ ವ್ಯಕ್ತಿಗಳೂ, ಅದಿಲ್ಲದವರೂ ಒಂದೇ ರೀತಿಯ ಆತಂಕದಲ್ಲಿದ್ದಾರೆ.

ಮರಣದ ಭೀತಿಯು ನಮ್ಮ ಸಮಾಜದಲ್ಲಿ ತುಂಬಲು ಕಾರಣವಿದೆ. ಹಲವು ತಿಂಗಳುಗಳಿಂದ ನಿರಂತರ ಏರುತ್ತಿರುವ ರೋಗಿಗಳ ಸಂಖ್ಯೆ, ಮೃತರ ಸಂಖ್ಯೆಯನ್ನು ಕೇಳುತ್ತಿರುವ ಜನರ ನಡುವೆಯು ಮರಣವೆಂಬ ವಾಸ್ತವಿಕತೆಯ ಬಗ್ಗೆ ಭೀತಿ ಸಹಜವೇ ಆಗಿದೆ. ಮರಣದ ಕುರಿತು ಭಯಭೀತರಾಗಲು ಜನರಿಗೆ ಹಲವು ಕಾರಣಗಳಿರಬಹುದು. ಈ ಲೋಕದಲ್ಲಿ ಬದುಕು ಸಾಕಾಗದಿರುವುದು, ಮರಣಾ ನಂತರದ ಜೀವನದ ಕುರಿತು ವಿಶ್ವಾಸವಿಲ್ಲದಿರುವುದು, ನಾನು ಸತ್ತರೆ ನನ್ನ ಕುಟುಂಬವೂ,  ಪ್ರೀತಿ ಪಾತ್ರರೂ ಏನಾಗಬಹುದೆಂಬ ಚಿಂತೆ… ಹೀಗೆ ಮರಣ ಭೀತಿಗೆ ಹಲವಾರು ಕಾರಣಗಳಿವೆ. ಆದರೆ ಈ ರೀತಿಯ ಭಯವು ಸತ್ಯ ವಿಶ್ವಾಸಿಗಳಲ್ಲಿ ಉಂಟಾಗಬಾರದು.  ಇಹಲೋಕ ಮತ್ತು ಅದರ ಸಂಬಂಧಗಳೊಂದಿಗೆ ಜೋಡಿಸಿಕೊಂಡ ಮರಣದ ಭಯವು ರಸೂಲ್(ಸ)ರು ಮುನ್ನೆಚ್ಚರಿಕೆ ನೀಡಿದ ಕರಾಹತುಲ್ ಮೌತ್‍ನ ಭಾಗವಾಗಿದೆ.

ಸತ್ಯವಿಶ್ವಾಸಿಯು ಭಯಪಡಬೇಕಾದ ಕೆಲವು ವಿಷಯಗಳು ಮರಣದಲ್ಲಿದೆ. ಅದು ಈ ಲೋಕದ ಜೀವನ ಮುಗಿದು ಹೋಗುತ್ತದೆಂಬ ಸಂಕಟದಿಂದಲ್ಲ. ಬದಲಾಗಿ ಮರಣಾನಂತರ ಎದುರಿಸಬೇಕಾದ ಜೀವನದ ವಾಸ್ತವಿಕತೆಗಳ ಕುರಿತು ಚಿಂತಿಸಿ ಭಯವಾಗಿದೆ. ಅಲ್ಲಾಹನ ಮುಂದೆ ನಿಂತುಕೊಳ್ಳುವ ಮತ್ತು ವಿಚಾರಣೆಯನ್ನು ಎದುರಿಸಬೇಕಾದ ಸಂದರ್ಭವನ್ನು ನೆನೆಸಿ, ಸ್ವರ್ಗಕ್ಕೆ ಅರ್ಹವಾದ ಯಾವ ಕೆಲಸವನ್ನು ತಾನು ಮಾಡಿದ್ದೇನೆಂಬ ಚಿಂತೆಯು ವಿಶ್ವಾಸಿಯಲ್ಲಿ ಮರಣದ ಭೀತಿಯನ್ನು ಉಂಟು  ಮಾಡುತ್ತದೆ. “ತನ್ನ ಪ್ರಭುವಿನ ಮುಂದೆ ಹಾಜರಾಗಲಿಕ್ಕಿದೆಯೆಂದು ಭಯಪಡುತ್ತಿದ್ದವನಿಗೆ ಮತ್ತು ತನ್ನ ದುಷ್ಟಚಿತ್ತದ ದುಷ್ಟ ಅಪೇಕ್ಷೆಗಳಿಂದ ತನ್ನನ್ನು ತಡೆದಿಟ್ಟುಕೊಂಡವನಿಗೆ  ಸ್ವರ್ಗವೇ ನಿವಾಸವಾಗುವುದು.” (79: 41-42)

ಸುತ್ತಲೂ ಮರಣದ ಭೀತಿಯು ತುಂಬಿರುವಾಗಲೂ ವಿಶ್ವಾಸಿಯು ಅಂತಹ ಭೀತಿಯಿಂದ ಮುಕ್ತನಾಗಿರಬೇಕು. ಅದೇ ವೇಳೆ ಅದು ನಮ್ಮಲ್ಲಿ ಅಜಾಗರೂಕತೆ, ಮುನ್ನೆಚ್ಚರಿಕೆ  ಇಲ್ಲದಿರಲು, ಕಾರಣವಾಗಬಾರದು. ಸ್ವತಃ ನಾಶಕ್ಕೆ ಧುಮುಕಬಾರದು ಎಂದು ಕುರ್‍ಆನ್‍ನ ಆದೇಶಕ್ಕೆ ಅದು ವಿರುದ್ಧವೂ ಆಗಿದೆ. “ನಿಮ್ಮನ್ನು ನೀವೇ ವಿನಾಶಕ್ಕೊಳ ಪಡಿಸಿಕೊಳ್ಳಬೇಡಿರಿ.” (2: 195)

ಅದೇವೇಳೆ ಮರಣದ ಕುರಿತು ಚಿಂತೆಗಳು ಮನಸ್ಸಿನಲ್ಲಿ ಉಂಟಾಗಬೇಕು. ಯಾವ ಗಳಿಗೆಯಲ್ಲೂ ನನ್ನ ಆಯುಷ್ಯ ಕೊನೆಗೊಳ್ಳಬಹುದು. ಈ ನಿಮಿಷ ಅಲ್ಲಾಹನ ಮುಂದೆ ಹಾಜರಾದರೆ ನನ್ನ ಅವಸ್ಥೆ ಹೇಗಿರಬಹುದೆಂಬ ಚಿಂತೆಯು ವಿಶ್ವಾಸಿಗಳಲ್ಲಿ ಆತಂಕ ಮೂಡಿಸುತ್ತದೆ. ಆ ಚಿಂತೆಯು ಮರಣಾನಂತರ ಜೀವನಕ್ಕಾಗಿ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. “ಸತ್ಯವಿಶ್ವಾಸಿಗಳೇ, ಪ್ರತಿಯೊಬ್ಬನೂ ತಾನು ನಾಳೆಗಾಗಿ ಏನನ್ನು ಸಿದ್ಧಪಡಿಸಿಟ್ಟಿರುವೆನೆಂಬುದನ್ನು ನೋಡಿಕೊಳ್ಳಲಿ. ಅಲ್ಲಾಹನನ್ನು  ಭಯಪಡಿರಿ.” (59:18)

ಹ. ಅಲಿ(ರ)ರು ಒಮ್ಮೆ ತಖ್ವಾದ ಕುರಿತು ಹೀಗೆ ಹೇಳಿದ್ದರು: ತಖ್ವಾ ಎಂದರೆ ಅಲ್ಲಾಹನ ಕುರಿತು ಭಯ. ಕುರ್‍ಆನನ್ನು ಅನುಸರಿಸಿದ ಬದುಕು,  ಇರುವುದರಲ್ಲಿ ತೃಪ್ತಿ ಪಡುವುದು ಹಾಗೂ ಮುಂದಿನ ಪಯಣಕ್ಕೆ ಸಿದ್ಧತೆಯಾಗಿದೆ. ಅಂತಹ ಯಾವುದೇ ಯೋಚನೆಗಳಿಲ್ಲದೆ ಬದುಕಿ ಮರಣಾ ನಂತರದ ಜೀವನಕ್ಕೆ  ಪೂರ್ವ ತಯಾರಿ ಮಾಡದ ಜನರು ಮರಣ ಸನ್ನಿಹಿತವಾದ ಸಮಯದಲ್ಲಿ ಗೋಳಿಡುತ್ತಾರೆ. ಸ್ವಲ್ಪ ಕಾಲಾವಕಾಶ ತಮಗೆ ನೀಡಬೇಕೆಂದು ಬೇಡುತ್ತಾರೆ. ಇವರಲ್ಲಿ  ಯಾರಿಗಾದರೂ ಮರಣ ಬಂದಾಗ, “ನನ್ನ ಪ್ರಭೂ ನಾನು ಬಿಟ್ಟು ಬಂದ ಲೋಕಕ್ಕೆ ನನ್ನನ್ನು ಮರಳಿ ಕಳುಹಿಸಿಬಿಡು. ಇನ್ನು ನಾನು ಸತ್ಕರ್ಮವೆಸಗುವ ನಿರೀಕ್ಷೆ ಇದೆ”  ಎಂದು ಹೇಳುವನು. ಎಷ್ಟು ಮಾತ್ರಕ್ಕೂ ಹಾಗಾಗದು. ಇದು ಕೇವಲ ಅವನಾಡುವ ಮಾತು.” (23:100) ಅಂದು ನರಕವನ್ನು ಮುಂದೆ ತರಲಾಗುವುದು. ಅವನು,  “ಅಯ್ಯೋ, ನಾನು ನನ್ನ ಈ ಜೀವನಕ್ಕಾಗಿ ಮೊದಲೇ ಸಿದ್ಧತೆ ಮಾಡುತ್ತಿದ್ದರೆ?” ಎಂದು ಹೇಳಿದನು. (89:24)

ನನ್ನ ದೇಹದಿಂದ ಆತ್ಮವನ್ನು ವಶಪಡಿಸಿಕೊಳ್ಳುವಾಗ ನಾನು ಯಾವ ಸ್ಥಿತಿಯಲ್ಲಿ ಇರುತ್ತೇನೆ? ಸಂತೋಷದಿಂದ ಲೋಕಕ್ಕೆ ವಿದಾಯ ಕೋರಲು ಸಾಧ್ಯವಾಗಬೇಕಾದರೆ  ನಮ್ಮ ಕುರಿತು ನಮಗೆ ದೃಢವಿಶ್ವಾಸವಿರಬೇಕು. ಅಲ್ಲಾಹನ ನ್ಯಾಯಾಲಯದಲ್ಲಿ ಅಲ್ಲಾಹನ ಮುಂದೆ ವಿಚಾರಣೆಗೆ ಒಳಗಾಗುವ ಮೊದಲು ಸ್ವಯಂ ವಿಚಾರಣೆ ನಡೆಸಬೇಕು.  ಅಲ್ಲಿ ನಮ್ಮ ಕೈ ಕಾಲುಗಳು ನಮ್ಮ ವಿರುದ್ಧ ಸಾಕ್ಷಿ ಹೇಳದ ರೀತಿಯಲ್ಲಿರಿಸಲು ನಾವು ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿದ್ದೇವೆಂಬ ಅರಿವು ನಮಗೆ  ಉಂಟಾಗಬೇಕು.

ಪರಲೋಕದಲ್ಲಿ ವಿಜಯಿಯಾಗುವವರು ಯಾರೆಂದೂ, ಪರಾಜಯ ಹೊಂದುವವರು ಯಾರೆಂದೂ ಪವಿತ್ರ ಕುರ್‍ಆನ್ ನಮಗೆ ಸ್ಪಷ್ಟಪಡಿಸಿದೆ. ಅದನ್ನು ಮುಂ ದಿರಿಸಿಕೊಂಡು ನಾವು ನಮ್ಮ ಜೀವನವನ್ನು ರೂಪಿಸಬೇಕಾಗಿದೆ. ಅಲ್ಲಾಹನು ಹೇಳುತ್ತಾನೆ, “ಅಂದು ಸೊತ್ತಾಗಲಿ, ಸಂತತಿಗಳಾಗಲಿ ಸ್ವಲ್ಪವೂ ಫಲಕಾರಿಯಾಗಲಾರವು.  ನಿಷ್ಕಳಂಕ ಹೃದಯದೊಂದಿಗೆ ಅಲ್ಲಾಹನ ಸನ್ನಿಧಿಯಲ್ಲಿ ಹಾಜರಾಗುವವನ ಹೊರತು.” (26:89)

ನಮ್ಮ ಮನಸ್ಸು ರೋಗ ಪೀಡಿತವಾಗಿದೆಯೇ? ಅಸೂಯೆ, ಜಿಪುಣತೆ, ಕಪಟತೆ, ನಿಪಾಕ್ ಇವೆಲ್ಲ ಮನಸ್ಸನ್ನು ಬಾಧಿಸುವ ರೋಗಗಳಾಗಿವೆ. ನಮ್ಮ ದೇಹಕ್ಕೆ ವೈರಸ್  ಪ್ರವೇಶಿಸದಿರಲು ನಾವೆಷ್ಟು ಮುಂಜಾಗರೂಕತೆಯನ್ನು ವಹಿಸುತ್ತೇವೆ. ಹಾಗಾದರೆ ಮನಸ್ಸಿನ ಆರೋಗ್ಯವು ಅದಕ್ಕಿಂತಲೂ ಮುಖ್ಯವಾದುದಲ್ಲವೇ?

`ಈಮಾನ್’ ರೋಗ  ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಯಾಗಿದೆ. ಈಮಾನನ್ನು ಆಗಾಗ ಪುನರ್ನವೀಕರಿಸುತ್ತಲೂ, ಬಲಪಡಿಸುತ್ತಲೂ ಇರಬೇಕು ಎಂದು ಕುರ್‍ಆನ್ ಪದೇ ಪದೇ  ಉಪದೇಶಿಸುತ್ತದೆ. “ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಮೇಲೆ, ಅವನ ಸಂದೇಶವಾಹಕರ ಮೇಲೆ, ಅವನು ತನ್ನ ಸಂದೇಶವಾಹಕರಿಗೆ ಅವತೀರ್ಣಗೊಳಿಸಿದ ಗ್ರಂಥದ  ಮೇಲೆ ಮತ್ತು ಇದಕ್ಕಿಂತ ಮುಂದೆ ಅವನು ಅವತೀರ್ಣಗೊಳಿಸಿದ್ದ ಪ್ರತಿಯೊಂದು ಗ್ರಂಥದ ಮೇಲೆ ವಿಶ್ವಾಸವಿಡಿರಿ.” (4: 136)

ಈಮಾನ್ ಎಂದರೆ ಕೇವಲ ಅರಿವು ಮಾತ್ರವಲ್ಲವಲ್ಲಾ. ಅಲ್ಲಾಹನು ಇದ್ದಾನೆ. ಪರಲೋಕವು ಇದೆ ಎಂಬ ಅರಿವಿನೊಂದಿಗೆ ಅದೊಂದು ಅನುಭೂತಿಯೂ, ಅನುಭವವೂ ಆಗಿ ಮಾರ್ಪಡಬೇಕು. ಜೀವನವನ್ನು ಪ್ರಚೋದಿಸಲು ಕಾರಣವಾಗಬೇಕು. ಮರಣಾ ನಂತರ ಜೀವನದ ಕುರಿತು ಆಲೋಚನೆಗಳಲ್ಲಿ ನಮಗೆ ಮುಖ್ಯವಾಗಿ ನಮ್ಮ  ಈಮಾನ್‍ನ ಕುರಿತು ಚಿಂತೆ ಇರಬೇಕು.

ಭಯ ಹುಟ್ಟಿಸುವ ವಾತಾವರಣ ಉಂಟಾಗುವಾಗ ಅಲ್ಲಾಹನ ಕುರಿತ ಚಿಂತನೆಗಳು ನಮಗೆ ನಿರ್ಭಯತೆಯನ್ನು ನೀಡುತ್ತದೆಯೇ?

ಸಂದಿಗ್ಧ ಘಟ್ಟಗಳಲ್ಲಿ ಸಾಗುವಾಗ ಅವನು ನಮ್ಮೊಂದಿಗಿದ್ದಾನೆ ಎಂಬ ಆತ್ಮ ಧೈರ್ಯ ಮೂಡುತ್ತದೆಯೇ?

ಜೀವನದಲ್ಲಿ ಪ್ರಿಯವಾದದ್ದು ನಷ್ಟವಾಗುವಾಗ, ನಾನು ಬಹಳ  ಆಸೆ ಪಟ್ಟದ್ದು ದೊರಕದೆ ಹೋದಾಗ ನಿರಾಶರಾಗದೆ ಅಲ್ಲಾಹನು ತನಗೆ ಇದರಲ್ಲಿ ಬೇರೇನಾದರೂ ಒಳ್ಳೆಯದು ಇಟ್ಟಿರಬಹುದು ಎಂದು ಆಲೋಚಿಸಲು  ಸಾಧ್ಯವಾಗುತ್ತದೆಯೇ?

ಆಮಿಷಗಳಿಗೆ ಬಲಿ ಬೀಳುವಾಗ, ಲೌಕಿಕ ಸುಖಭೋಗಗಳು ಕಣ್ಣಿಗೆ ತಂಪೆನಿಸುವಾಗ, ಅಲ್ಲಾಹನು ಇಷ್ಟಪಡದ ದೃಶ್ಯಗಳಲ್ಲೂ ಮನರಂಜನೆಗಳಲ್ಲೂ ಆನಂದ ಅನುಭವಿಸುವಾಗ ಅಲ್ಲಾಹನಿಗೆ ಇಷ್ಟವಿಲ್ಲದ ಯಾವುದೂ ತನಗೆ ಬೇಕಾಗಿಲ್ಲವೆಂದು ದೂರ ಸರಿಯಲು ಸಾಧ್ಯವಾಗುತ್ತದೆಯೇ?

ಹೀಗೆ ಇದೆಯೆಂದಾದರೆ ನಮ್ಮ ವಿಶ್ವಾಸದ ಕುರಿತು ನಮಗೆ ಸಂತೃಪ್ತರಾಗಬಹುದು. ಇಲ್ಲದಿದ್ದರೆ ತನ್ನ ವಿಶ್ವಾಸದಲ್ಲಿ ಗೆದ್ದಲು ಹಿಡಿದಿದೆಯೆಂದು ಅರ್ಥಮಾಡಿಕೊಂಡು ಸರಿ ಪಡಿಸಲು ಪ್ರಯತ್ನಿಸಲು ನಮಗೆ ಸಾಧ್ಯವಾಗಬೇಕು.

ನಮಾಝ್ ಸೇರಿದಂತೆ ಆರಾಧನಾ ಕರ್ಮಗಳನ್ನು ಇಖ್ಲಾಸ್ ಹಾಗೂ ಇಹ್‍ಸಾನ್‍ನೊಂದಿಗೆ ಮಾಡಲು ನಮಗೆ  ಸಾಧ್ಯವಾಗುತ್ತಿದೆಯೇ? ಇಂತಹ ಆರಾಧನಾ ಕರ್ಮಗಳು ಮಾತ್ರ ಅಲ್ಲಾಹನ ಬಳಿ ಸ್ವೀಕರಿಸಲ್ಪಡುತ್ತದೆಂದು ನಮಗೆ ತಿಳಿದಿದೆಯಲ್ಲವೇ? ಆದ್ದರಿಂದ ಆ ಕುರಿತು ಆತ್ಮಾವಲೋಕನ ನಡೆಸಬೇಕು. ಇಲ್ಲದಿದ್ದರೆ ಅಲ್ಲಾಹನ ಮುಂದೆ ತಲುಪುವಾಗ ನೀವು ತುಂಬಾ ಆರಾಧನಾ ಕರ್ಮಗಳನ್ನು ನೆರವೇರಿಸಿದ್ದಿ. ಅದರೆ ಅದು ನನಗೆ ಬೇಕಾಗಿ ಆಗಿರಲಿಲ್ಲ. ಇತರರು ನಿನ್ನನ್ನು ಸಮಾಜ ಸೇವಕ, ಭಯ ಭಕ್ತಿಯುಳ್ಳವ ಎಂದು ಹೇಳಲಿ ಎಂಬ ಉದ್ದೇಶವಿತ್ತು. ಅದು ನಿನಗೆ ಅಲ್ಲಿ ದೊರೆತಿದೆ. ಇಲ್ಲಿ ನಿನಗೆ ಏನೂ ಇಲ್ಲ.  ಹೀಗೆ ಅಲ್ಲಾಹನು ನಮ್ಮೊಡನೆ ಹೇಳಿದರೆ ನಮ್ಮ ಅವಸ್ಥೆಯೇನು?

ಹಲವಾರು ಸಂಬಂಧಗಳ ಕುರಿತು ಪ್ರವಾದಿಯವರು(ಸ) ನಮಗೆ ಕಲಿಸಿಕೊಟ್ಟಿದ್ದಾರೆ. ತಂದೆ, ತಾಯಿ, ಸಂಗಾತಿ, ಮಕ್ಕಳು, ಕುಟುಂಬ, ನೆರೆಕರೆ, ಸ್ನೇಹಿತರು, ಸಹ ಕಾರ್ಯಕರ್ತರು ನಮ್ಮೊಂದಿಗೆ ವ್ಯವಹರಿಸುವ ವ್ಯಕ್ತಿಗಳೊಂದಿಗೆ… ಈ ಸಂಬಂಧಗಳೆಲ್ಲಾ ಬಹಳ ಉತ್ತಮವಾಗಿ ಸಾಗುತ್ತಿದೆಯೆಂದೂ, ಯಾರೊಂದಿಗೂ ಹಗೆ, ದ್ವೇಷವಿಲ್ಲವೆಂದು ಹೇಳಲು ನಮಗೆ ಸಾಧ್ಯವಾಗಬೇಕು. ಕಾರಣವೇನೆಂದರೆ ಸಂಬಂಧಗಳಲ್ಲಿನ ಬಿರುಕುಗಳು ಪ್ರಾರ್ಥನೆಗಳು ಕೂಡಾ ಸ್ವೀಕರಿಸಲ್ಪಡದಿರಲು ಕಾರಣವಾಗುವುದೆಂದೂ  ಪ್ರವಾದಿ(ಸ)ರು ಕಲಿಸಿಕೊಟ್ಟಿದ್ದಾರೆ. ಮನುಷ್ಯರೊಂದಿಗಿನ ಹಕ್ಕುಗಳ ಕುರಿತು ಇಸ್ಲಾಮ್ ಧಾರಾಳವಾಗಿ ವಿವರಿಸಿದೆ. ಆರಾಧನೆಯ ಕುರಿತು ವಿವರಿಸುವುದಕ್ಕಿಂತ  ಹೆಚ್ಚಾಗಿ ಕುರ್‍ಆನ್ ಪ್ರಸ್ತಾಪಿಸಿದ ವಿಷಯವೇ ಸಚ್ಚಾರಿತ್ರ್ಯ ಅಖ್‍ಲಾಖ್. ನಮ್ಮ ನೋಟ, ಮಾತು, ನಡತೆ, ಗಮನ ಎಲ್ಲವೂ ಓರ್ವರಿಗೆ ಬೇಸರ ತರಿಸುವ ರೂಪದಲ್ಲಿ,  ರೀತಿಯಲ್ಲಿ ಇಲ್ಲ ಎಂಬ ನಂಬಿಕೆ ನಮ್ಮಲ್ಲಿರಬೇಕು. ಇಲ್ಲದಿದ್ದರೆ ನಮ್ಮಿಂದ ಅನ್ಯಾಯಕ್ಕೊಳಗಾದವರಿಗೆ ನಮ್ಮ ಸತ್ಕರ್ಮಗಳನ್ನು ನೀಡಲಾಗುತ್ತದೆಯೆಂದು ಪ್ರವಾದಿಯವರು(ಸ) ಹೇಳಿದ್ದಾರಲ್ಲವೇ?

ನಮ್ಮ ಸಂಪಾದನೆಯ ಕುರಿತು ಎಚ್ಚರಿಕೆ ಇರಬೇಕು. ನನ್ನ ಸಂಪಾದನೆಯಲ್ಲಿ ಹರಾಮ್ ಆದ ಅಥವಾ ತನ್ನ ಹಕ್ಕಿನದ್ದಲ್ಲದ ಯಾವುದೂ ಇಲ್ಲ ಎಂಬ ಬಗ್ಗೆ ಖಾತ್ರಿಯಿರಬೇಕು. ನಾನು ಖರ್ಚು ಮಾಡುವ ರೀತಿಯೂ ಅಲ್ಲಾಹನಿಗೆ ನಾನು ಖರ್ಚು ಮಾಡುವ ರೀತಿಯೂ ಅಲ್ಲಾಹನಿಗೆ ಇಷ್ಟವಿಲ್ಲದ್ದಲ್ಲ. ಅವನ ಮಾರ್ಗದಲ್ಲಿ ಅವ ನಿಚ್ಛೆಯಂತೆ ಖರ್ಚು ಮಾಡುತ್ತಿದ್ದೇನೆ. ಇಂತಹ ಉತ್ತರಗಳನ್ನು ಪಡೆಯಲು ಸಾಧ್ಯವಾಗಬೇಕು. ಸಾಮಾಜಿಕ ರಂಗದಲ್ಲಿ ನನ್ನ ಕಾರ್ಯ ಚಟುವಟಿಕೆ ಹೇಗಿದೆ? ಸಾಮೂಹಿಕ ಕಾರ್ಯಗಳಲ್ಲಿ ನನ್ನ ಪಾಲು ಎಷ್ಟಿದೆ? ಕೇವಲ ಓರ್ವನೇ ಹಲವಾರು ಕರ್ಮಗಳನ್ನು ಮಾಡಿ ಅಲ್ಲಾಹನ ಬಳಿಯ ಸ್ವರ್ಗವನ್ನು ಪಡೆಯಬಹುದು ಎಂಬುದು ಇಸ್ಲಾಮ್‍ನ ಪಾಠವಲ್ಲವಲ್ಲಾ? ವೈಯಕ್ತಿಕ ಕರ್ಮಗಳೊಂದಿಗೆ ಸಾಮೂಹಿಕ ಕರ್ತವ್ಯಗಳೂ ನನಗಿದೆ.  ಅಂತಹ ಹೊಣೆಗಾರಿಕೆಯನ್ನು ನಿರ್ವಹಿಸಲು ನನ್ನನ್ನು ಸಹಾಯ ಮಾಡುವ ಹಲವು ಸಂಘಟನೆಗಳೂ, ಪ್ಲಾಟ್‍ಫಾರ್ಮ್‍ಗಳು ನನ್ನ ಪರಿಸರದಲ್ಲಿದೆ. ಅದರಲ್ಲೆಲ್ಲಾ ನಾನೆಷ್ಟು  ಕ್ರಿಯಾತ್ಮಕವಾಗಿದ್ದೇನೆ? ನನ್ನ ವೈಯಕ್ತಿಕ ನಿಬಿಡತೆಗಳು ಮುಗಿದು ಪುರುಸೊತ್ತು ಇದ್ದರೆ ಮಾತ್ರ ಅದರಲ್ಲಿ ಕಾರ್ಯನಿರ್ವಹಿಸಬಹುದೆಂಬ ಭಾವನೆಯಲ್ಲಿದ್ದೀರಾ? ಅಥವಾ  ನನ್ನ ನಿಬಿಢತೆಯ ನಡುವೆಯೂ ಸಾಮೂಹಿಕ ಚಟುವಟಿಕೆಗಳಿಗೆ ಪ್ರಾಶಸ್ತ್ಯ ನೀಡಲು ಸಾಧ್ಯವಾಗುತ್ತಿದೆಯೇ? ಎಲ್ಲವುಗಳಿಗಿಂತ ಹೆಚ್ಚಾಗಿ ಅಲ್ಲಾಹ್, ಅವನ ರಸೂಲ್  ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಹೆಚ್ಚು ಪ್ರಾಶಸ್ತ್ಯ ನೀಡುವವನೇ ವಿಶ್ವಾಸಿಯೆಂದು ಕುರ್‍ಆನ್ ಹೇಳುತ್ತದೆ.

ನಾವು ಬದುಕುತ್ತಿರುವ ಈ ಭೂಮಿ ಯಲ್ಲಿ ನಮ್ಮ ಸುತ್ತಲೂ ಕೋಟಿಗಟ್ಟಲೆ ಮನುಷ್ಯರಿದ್ದಾರೆ. ಸತ್ಯಸಂದೇಶ ತಲುಪದ ಕೋಟಿಗಿಂತಲೂ ಅಧಿಕ ಜನರು. ನಮ್ಮ ಮಾತು,  ಕಾರ್ಯಚಟುವಟಿಕೆಗಳು, ಬರಹಗಳು, ಜೀವನದ ಮಾದರಿಗಳ ಮೂಲಕ ಎಷ್ಟು ಮಂದಿಗೆ ಇಸ್ಲಾಮ್ ಪರಿಚಯಿಸಲು ಸಾಧ್ಯವಾಗಿದೆ. ಇವೆಲ್ಲಾ ನಮ್ಮ ಕುರಿತು  ಆಲೋಚನೆಗಳಲ್ಲಿ ಬರಬೇಕಾದ ವಿಷಯಗಳಾಗಿವೆ. ಇದಕ್ಕೆಲ್ಲಾ ಸಮಾಧಾನದ ಉತ್ತರ ಕಂಡು ಹಿಡಿಯಲು ನಮಗೆ ಸಾಧ್ಯವಾದರೆ ಮರಣಾನಂತರ ಜೀವನದ ಕುರಿತ ಭಯ, ಆತಂಕಗಳು ಶುಭ ನಿರೀಕ್ಷೆ ಮತ್ತು ಬಯಕೆಯಾಗಿ ಮಾರ್ಪಡುವುದು.

“ಯಾರಿಗಾದರೂ ತನ್ನ ಪ್ರಭುವಿನೊಂದಿಗೆ ಭೇಟಿ ಮಾಡಬೇಕೆಂದು ಬಯಸುವುದಾದರೆ ಅವನು ಸತ್ಕರ್ಮಗಳನ್ನು ಮಾಡಲಿ” (18:110). ಅಲ್ಲಾಹನನ್ನು ಭೇಟಿಯಾಗಬಯಸುವವರು ತಿಳಿಯಿರಿ, ಅಲ್ಲಾಹನು ನಿಶ್ಚಯಿಸಿದ ಸಮಯ ಬರಲಿದೆಯೆಂದು. (29: 5) ಮರಣ ಭಯ ಹಾಗೂ ಆತಂಕಗಳು ತುಂಬಿರುವ ಸಮಾಜದಲ್ಲಿ ಸಹಜವಾಗಿಯೇ ಅಂತಹ ಆತಂಕಗಳೂ ವಿಶ್ವಾಸಿಗಳಲ್ಲೂ ಮೂಡುತ್ತವೆ. ಆದರೆ ಲೌಕಿಕ ಜೀವನ ಹಾಗೂ ಮರಣದ ಕುರಿತು ಮಿತಿಮೀರಿದ ಆತಂಕಗಳು  ವಿಶ್ವಾಸಿಗೆ ತಕ್ಕುದಲ್ಲ. ಅದರೊಂದಿಗೆ ತನಗೆ ಯಾವುದೇ ಸಂದರ್ಭದಲ್ಲೂ ಅಲ್ಲಾಹನ ಭೇಟಿ ನಡೆಸಲಿಕ್ಕಿದೆಯೆಂಬ ಪ್ರಜ್ಞೆಯೂ ಇರಬೇಕು. ಈ ಲೋಕದ ಜೀವನದಲ್ಲೇ ನಾವು ನಮ್ಮ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಏನೆಲ್ಲಾ ಸಿದ್ಧತೆಯನ್ನು ಮಾಡುತ್ತಿದ್ದೇವೆ. ಅತ್ಯಗತ್ಯ ವಸ್ತುಗಗಳು ಅಥವಾ ಸಂಪತ್ತು ಸಂಗ್ರಹವಾದರೆ ನಮ್ಮ ಭಾವಿಯ ಕುರಿತು ಎಷ್ಟು ಸಂತೋಷ ಪಡುತ್ತೇವೆ.

ಯಾವುದೇ ಕ್ಷಣದಲ್ಲೂ ಅಂತ್ಯಗೊಳ್ಳಬಹುದಾದ ಈ ಜೀವನದ ಬಗ್ಗೆ ನಾವು ಕಾಳಜಿ ತೋರುವಾಗ ಶಾಶ್ವತವಾದ ಜೀವನಕ್ಕೆ ಎಷ್ಟೊಂದು ಪ್ರಾಧಾನ್ಯತೆ ಕೊಡಬೇಕು ಎಂಬುದು ನಾವು ಚಿಂತಿಸಬೇಕಾದ ವಿಷಯವಾಗಿದೆ. “ಓ ಪೈಗಂಬರರೇ, ಅವರೊಡನೆ ಹೇಳಿರಿ, “ನೀವು ಪ್ರವರ್ತಿಸಿ ನಿಮ್ಮ ವರ್ತನೆ ಈಗ ಹೇಗಿರು ತ್ತದೆಂದು ಅಲ್ಲಾಹ್,  ಅವನ ರಸೂಲ್ ಮತ್ತು ಸತ್ಯವಿಶ್ವಾಸಿಗಳು ವೀಕ್ಷಿಸುವರು. ಆ ಬಳಿಕ ಪ್ರತ್ಯಕ್ಷ ಮತ್ತು ರಹಸ್ಯಗಳೆಲ್ಲವನ್ನೂ ಅರಿಯುವಾತನ ಕಡೆಗೆ ನೀವು ಮರಳಿಸಲ್ಪಡುವಿರಿ.” (4: 105)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …