ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯ 1163ರಲ್ಲಿ ಸ್ಥಾಪನೆಗೊಂಡಿತು. ಅದರ ಹಚ್ಚ ಹಸುರಾದ ಹುಲ್ಲುಗಾವಲು ಜಗತ್ಪ್ರಸಿದ್ಧವಾಗಿದೆ. ಅಮೇರಿಕಾದ ಓರ್ವ ಕೋಟ್ಯಾಧೀಶ ಆ ಹುಲ್ಲುಗಾವಲನ್ನು ನೋಡಿ ಬಹಳ ಮೆಚ್ಚಿಕೊಂಡ. ತನ್ನ ಬಂಗಲೆಯಲ್ಲಿಯೂ ಇಂತಹದೇ ಒಂದು ಹುಲ್ಲುಗಾವಲಿರಬೇಕೆಂದು ಆತ ಬಯಸಿದ. “ಇಂತಹ ಹುಲ್ಲುಗಾವಲು ಎಷ್ಟು ಡಾಲರ್ ಗಳಲ್ಲಿ ಸಿದ್ಧವಾದೀತು?”ಆತ ಆಕ್ಸ್ ಫರ್ಡ್ನ ತೋಟಗಾರನಲ್ಲಿ ವಿಚಾರಿಸಿದ. ತೋಟಗಾರ ಗಂಭೀರವಾಗಿಯೇ ಹೇಳಿದ, “ಉಚಿತವಾಗಿ.” “ಅದು ಹೇಗೆ?” “ನೀವು ನಿಮ್ಮ ಜವಿೂನನ್ನು ಸಮತಟ್ಟುಗೊಳಿಸಿ ಅದರಲ್ಲಿ ಹುಲ್ಲು ನೆಡಿರಿ. ಹುಲ್ಲು ಬೆಳೆದು ನಿಂತಾಗ ಅದನ್ನು ಕತ್ತರಿಸಿ ಮೇಲಿನಿಂದ ರೋಲರ್ ತಿರುಗಿಸಿ. ಹೀಗೆ ಐನೂರು ವರ್ಷಗಳ ತನಕ ಮಾಡುತ್ತಲಿರಿ. ಐನೂರು ವರ್ಷ ಪೂರ್ತಿಯಾದಾಗ ಇಂತಹುದೇ ಹುಲ್ಲುಗಾವಲು ನಿಮ್ಮಲ್ಲೂ ಸಿದ್ಧವಾದೀತು. ಇದಕ್ಕೆ ಸಮಯ ಬೇಕೇ ಹೊರತು ದುಡ್ಡಲ್ಲ.
“ಸಂಜೆಯ ವೇಳೆ ಸೂರ್ಯ ನಿಮ್ಮ ಮೇಲೆ ಅಸ್ತಮಿಸುವನು. ನೀವು ಮತ್ತೊಮ್ಮೆ ಮುಂಜಾನೆಯ ದೃಶ್ಯ ನೋಡ ಬಯಸುವುದಾದರೆ ರಾತ್ರಿಯಿಡೀ ಕಾಯಬೇಕಾದೀತು. ರಾತ್ರಿಯಿಡೀ ಕಳೆಯದೆ ನೀವು ಬೆಳಗಿನ ವಾತಾವರಣವನ್ನು ನಿಮ್ಮ ಕಣ್ಣಾರೆ ಕಾಣಲಾರಿರಿ. ನಿಮ್ಮ ಬಳಿ ಒಂದು ಬೀಜವಿದ್ದರೆ ನೀವು ಅದನ್ನು ಒಂದು ಮರದ ರೂಪದಲ್ಲಿ ನೋಡ ಬಯಸಿದರೆ ನೀವು ಅದಕ್ಕೆ ಹಲವು ವರ್ಷಗಳ ತನಕ ಕಾಯಬೇಕಾದೀತು. ಅದಕ್ಕಿಂತ ಮುಂಚೆ ನಿಮ್ಮ ಬಳಿಯಿರುವ ಬೀಜವು ಒಂದು ಹಚ್ಚ ಹಸುರಾದ ಮರದ ರೂಪ ತಾಳಲಾರದು. ಅದೇ ರೀತಿ ಪ್ರಕೃತಿಯ ಎಲ್ಲ ಘಟನೆಗಳಿಗೂ ಪ್ರತ್ಯಕ್ಷಗೊಳ್ಳಲು ಒಂದು ಕಾಲಮಿತಿ ನಿಶ್ಚಯವಿದೆ. ಯಾವ ಘಟನೆಯೂ ತನ್ನ ನಿಯಮಿತ ಸಮಯಕ್ಕೆ ಮುಂಚೆ ಪ್ರತ್ಯಕ್ಷವಾಗುವುದಿಲ್ಲ.
ಸಮಯವೆಂದರೆ ಒಂದು ಕಾರ್ಯ ವಿಧಾನವು ಜಾರಿಗೊಂಡು ಪೂರ್ಣಗೊಳ್ಳಲಿಕ್ಕಿರುವ ಅವಧಿ. ಪ್ರಕೃತಿಯ ಸಂಪೂರ್ಣ ವ್ಯವಸ್ಥೆಯಲ್ಲಿ ಇದೇ ತತ್ವ ಕಾರ್ಯವೆಸಗುತ್ತಿದೆ. ಮನುಷ್ಯನ ಹೊರತು ಇತರೆಲ್ಲ ವಿಶ್ವದಲ್ಲಿ ಈ ತತ್ವವು ನೇರವಾಗಿ ದೈವಿಕ ವ್ಯವಸ್ಥೆಯ ಮೂಲಕ ಸ್ಥಾಪಿತವಾಗಿದೆ. ಮನುಷ್ಯನು ಈ ತತ್ವವನ್ನು ತನ್ನ ಜೀವನದಲ್ಲಿ ತನ್ನ ಇಚ್ಛೆಯಂತೆ ಅಳವಡಿಸಬಹುದಾಗಿದೆ. ಸಮಸ್ತ ವಿಶ್ವದ ವ್ಯವಸ್ಥೆಯು ಮನುಷ್ಯನಿಗೆ ಒಂದು ವ್ಯಾವಹಾರಿಕ ಪಾಠ ನೀಡುತ್ತದೆ. ಘಟನೆಗಳು ಪ್ರಕಟವಾಗುವುದಕ್ಕೆ ಅವನು ಯಾವ ವಾಸ್ತವಿಕ ಯೋಜನೆಯನ್ನು ಕೈಗೊಂಡರೆ ಈ ಲೋಕದಲ್ಲಿ ಯಶಸ್ವಿಯಾಗಬಹುದೆಂಬುದನ್ನು ಅದು ತಿಳಿಸುತ್ತದೆ.
ವ್ಯಕ್ತಿ ಜೀವನದ ನಿರ್ಮಾಣದ ಕಾರ್ಯವಾಗಲಿ, ಒಂದು ಜನಾಂಗದ ಜೀವನದ ನಿರ್ಮಾಣ ಕಾರ್ಯವಾಗಲಿ ಎರಡೂ ವಿಷಯಗಳಿಗೆ ಮನುಷ್ಯನ ಮುಂದಿರುವುದು ಒಂದೇ ಒಂದು ದಾರಿ. ಅವನು ಆರಂಭದಿಂದಲೇ ತನ್ನ ಪಯಣವನ್ನು ತೊಡಗಬೇಕು. ನಿರ್ದಿಷ್ಟ ಅವಧಿಗಿಂತ ಮುಂಚೆ ಅದರ ಪರಿಣಾಮವನ್ನು ನೋಡಲು ಬಯಸಬಾರದು. ಅನ್ಯಥಾ ಅವನ ಅವಸ್ಥೆಯು ತನ್ನ ನಿಲ್ದಾಣ ಬರುವುದಕ್ಕಿಂತ ಮುಂಚೆ ರೈಲಿನಿಂದ ಇಳಿಯ ಬಯಸುವ ಪ್ರಯಾಣಿಕನಂತಾಗುವುದು. ಆ ಪ್ರಯಾಣಿಕ ಸಮಯಕ್ಕೆ ಮುಂಚೆ ತನ್ನ ಕಂಪಾರ್ಟ್ಮೆಂಟ್ನ ಬಾಗಿಲು ತೆರೆದು ಇಳಿದರೆ ಅವನು ಸ್ಮಶಾನಕ್ಕೆ ತಲುಪುವನೇ ಹೊರತು ಬಯಸುವ ಊರಿಗೆ ತಲುಪಲಾರ. ಪ್ರತಿಯೊಂದು ಯಶಸ್ಸಿಗೂ ಹೆಚ್ಚು ಸಮಯ ಬೇಕು. ಆದರೆ ಯಶಸ್ಸಿನ ಈ ಬೆಲೆಯನ್ನು ನೀಡಲು ಮನುಷ್ಯನು ಸಿದ್ಧವಾಗುವುದಿಲ್ಲ.
- ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ)
IslamKannada News Portal
