“ಹೇಳಿರಿ, ಅವನು ಅಲ್ಲಾಹನು ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ ಕುರ್ಆನ್: 112)
ಕುರ್ಆನ್ನಲ್ಲಿ ಏಕದೇವ ಸಿದ್ಧಾಂತದ ಸಮಗ್ರ ಪರಿಕಲ್ಪನೆಯ ಸಂಕ್ಷಿಪ್ತ ರೂಪವಾಗಿದೆ ಈ ಅಧ್ಯಾಯ. `ಅಲ್ಲಾಹ್’ ಎಂಬುದು ಅರಬಿಕ್ ಪದವೇ ಹೊರತು ಅದು ಮುಸ್ಲಿಮರ ದೇವರಲ್ಲ. ಸೃಷ್ಟಿಕರ್ತ, ಒಡೆಯ, ಅನ್ನದಾತ, ಆರಾಧ್ಯ ದೇವ, ವ್ಯವಸ್ಥಾಪಕ ಇತ್ಯಾದಿ ಅರ್ಥಗಳು ಸಿಗುತ್ತವೆ. ಸಕಲ ಧರ್ಮಗಳ ಸಾರವೂ `ದೇವನು ಒಬ್ಬನೇ’ ಆಗಿದೆ. ಕುರ್ಆನ್ ಕೂಡ ಅದನ್ನೇ ಹೇಳುತ್ತದೆ, “ಹುವಲ್ಲಾಹು ಅಹದ್”- `ಅವನು ಏಕನಾಗಿದ್ದಾನೆ’. ಜಗತ್ತಿನ ಅಸ್ತಿತ್ವದ ಹಿಂದಿರುವ ದೊಡ್ಡ ಬ್ರಹ್ಮಾಂಡ ಶಕ್ತಿಯೂ ಆಗಿದ್ದಾನೆ ಎಂದು ಕುರ್ಆನ್ ವಿಶ್ಲೇಷಿಸುತ್ತದೆ. ಖ್ಯಾತ ಇಸ್ಲಾಮಿ ಚಿಂತಕ ಅಬುಲ್ ಆಲಾ ಹೀಗೆ ಹೇಳುತ್ತಾರೆ: “ದೊಡ್ಡ ದೊಡ್ಡ ಗ್ರಹಗಳಿಂದ ಹಿಡಿದು ಭೂಮಿಯ ಅತ್ಯಂತ ಸಣ್ಣ ಕಣದ ವರೆಗೆ ಎಲ್ಲ ವಸ್ತುಗಳು ಬಂಧಿತವಾಗಿರುವಂತಹ ಈ ಬಲಿಷ್ಠ ನಿಯಮವೂ ಒಂದು ದೊಡ್ಡ ಅಧಿಪತಿಯಿಂದ ರಚಿತವಾದ ನಿಯಮವಾಗಿದೆ.” (ಇಸ್ಲಾಮ್ ಧರ್ಮ: ಪುಟ: 12)
ಏಕ ದೇವನಲ್ಲಿ ನಂಬಿಕೆ ಹೊಂದುವುದರಿಂದ ಪ್ರತಿಯೊಬ್ಬನಿಗೆ ಯಾವ ವಸ್ತು ಅಥವಾ ಯಾವ ಪ್ರಜೆಯಾಗಲಿ ಪರಕೀಯವಾಗಿ ಕಾಣುವುದಿಲ್ಲ. ತನ್ನಂತೆಯೇ ಇತರರಿಗೂ ಇಲ್ಲಿ ಸಮಾನ ಹಕ್ಕುಗಳಿವೆಯೆಂದು ಅರಿಯುತ್ತಾನೆ. ಸಂಕುಚಿತ ದೃಷ್ಟಿ ಕೋನದಿಂದ ಮುಕ್ತನಾಗುತ್ತಾನೆ. ಆತ್ಮಾಭಿಮಾನ ಉಂಟಾಗುತ್ತದೆ. ಭಯ ಮತ್ತು ಶರಣಾಗತಿ ಒಬ್ಬನಿಗೆ ಮಾತ್ರ ಮೀಸಲಿಡುತ್ತಾನೆ. ಅಸತ್ಯ ಅನ್ಯಾಯದಿಂದ ದೂರವಾಗುತ್ತಾನೆ. ಏಕ ದೇವನಲ್ಲಿ ನಂಬಿಕೆಯಿರಿಸುವುದರಿಂದ ಭೂಮಿಯ ಮೇಲೆ ಮಾನವರೆಲ್ಲರೂ ಒಂದೇ ದೇವನ ದಾಸರು ಎಂಬ ಏಕತೆಯ ಭಾವನೆ ಬೆಳೆಯುತ್ತದೆ. “ಒಂದೇ ದೇವರು” ಎಂಬುದು ಶ್ರೀ ನಾರಾಯಣ ಗುರುವಿನ ಅತೀ ಮುಖ್ಯ ಬೋಧನೆಯಾಗಿತ್ತು. ಗುರುಗಳು ದೇವನ ಬಗ್ಗೆ ಹೀಗೆ ಹೇಳುತ್ತಾರೆ:
“ನೀನು ಸತ್ಯ ಜ್ಞಾನಾನಂದನು
ನೀನೇ ವರ್ತಮಾನ, ಭೂತ
ಭವಿಷ್ಯತ್ತೂ ಬೇರಲ್ಲ, ಮಾತನಾಡುವ
ನುಡಿಯು ನೆನೆದೊಡೆ ನೀನೇ ಅಲ್ಲವೇ”
(ದೈವದಶಕಂ: 7)
ಈ ವಚನದ ವ್ಯಾಖ್ಯಾನದಲ್ಲಿ ಹೀಗೆ ವಿವರಿಸಲಾಗಿದೆ. ದೇವನ ಸ್ವರೂಪವೇನೆಂದು ಗುರುಗಳು ಈ ವಾಣಿಯ ಮೂಲಕ ತಿಳಿಯಪಡಿಸುತ್ತಾರೆ. ದೇವನೆಂಬುದು ಸತ್ಯವಾಗಿದೆ. ಸತ್ಯವೆಂದರೆ ಏನು? “ಬದಲಾವಣೆಯಿಲ್ಲದೆ ನೆಲೆ ನಿಲ್ಲುವಿಕೆ. ಶಾಶ್ವತವಾಗಿ ನೆಲೆ ನಿಲ್ಲುವವನು. ಅವನು ಪರಮ ಜ್ಞಾನಿ. ಕಾಲದ ಸ್ವರೂಪವಾಗಿದ್ದಾನೆ. ಎಲ್ಲರಿಗೂ ಆನಂದ ನೀಡುವವನು, ಸರ್ವ ವ್ಯಾಪಿಯಾದವನು ಆಗಿದ್ದಾನೆ. ಪ್ರೊಫೆಸರ್ ಜಿ. ಬಾಲಕೃಷ್ಣನ್ ನಾಯರ್ರು `ಶ್ರೀ ನಾರಾಯಣಗುರು ದೇವೋ ಕೃತಿಗಳು: ಸಂಪೂರ್ಣ ವ್ಯಾಖ್ಯಾನ- ಭಾಗ 1 ದೈವದಶಕಂ’ ಅಧ್ಯಾಯದ ಈ ವಾಣಿಯ ವಿವರಣೆಯ ಪುಟ ಸಂಖ್ಯೆ 55-69ರಲ್ಲಿ ವಿವರಿಸಿದ್ದಾರೆ.
ಪವಿತ್ರ ಕುರ್ಆನಿನಲ್ಲಿಯೂ ದೇವನ ಅಸ್ತಿತ್ವ ಮತ್ತು ಅವನ ಗುಣ ನಡತೆಗಳ ಬಗ್ಗೆ ಹಲವು ವಿವರಣೆಗಳನ್ನು ನೀಡಿದೆ.
“ಅವನು ಪೂರ್ವ ಪಶ್ಚಿಮಗಳ ಒಡೆಯನು. ಅವನ ಹೊರತು ಇನ್ನಾವ ಆರಾಧ್ಯನೂ ಇಲ್ಲ. ಆದ್ದರಿಂದ ಅವನನ್ನೇ ನಿಮ್ಮ ಕಾರ್ಯ ಸಾಧಕನನ್ನಾಗಿ ಮಾಡಿಕೊಳ್ಳಿ.” (ಪವಿತ್ರ ಕುರ್ಆನ್- 73: 9)
ಇನ್ನೊಂದು ಕಡೆ ಹೀಗಿದೆ;
“ಅವನು ಅತ್ಯಂತ ಮಂಗಲಮಯನು. ಅವನ ಕೈಯಲ್ಲಿ (ವಿಶ್ವದ) ಪ್ರಭುತ್ವವಿದೆ ಮತ್ತು ಅವನು ಸಕಲ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ. ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವರೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು. ಅವನು ಪ್ರಬಲನೂ ಕ್ಷಮಾಶೀಲನೂ ಆಗಿರುತ್ತಾನೆ.” (ಪವಿತ್ರ ಕುರ್ಆನ್ 67: 1-2)
ಕುರ್ಆನಿನಲ್ಲಿ ಸರಿಸುಮಾರು ಇಪ್ಪತ್ತೈದು ಪ್ರವಾದಿಗಳು ಜಗತ್ತಿಗೆ ಆಗಮಿಸಿದ ವಿವರಣೆಯನ್ನು ನೀಡುತ್ತದೆ. ಅವರಲ್ಲಿ ಮುಖ್ಯವಾದ ಇಬ್ರಾಹೀಮ್ (ಅಬ್ರಹಾಂ), ಮೂಸಾ(ಮೊಸೆಸ್), ಈಸಾ(ಜಿಸೆಸ್), ದಾವೂದ್(ಡೇವಿಡ್), ನೂಹ್(ಮನು) ಇತ್ಯಾದಿ ಅವರೆಲ್ಲರೂ ಮುಖ್ಯವಾಗಿ ಬೋಧಿಸಿದ್ದ ಮನುಷ್ಯರಿಗೆಲ್ಲ ಒಂದೇ ದೇವರು, ಅವನ ದಾಸ್ಯ ಆರಾಧನೆ ಮಾಡಬೇಕು, ಆದ್ದರಿಂದ ಮಾತ್ರ ಜಗತ್ತಿನಲ್ಲಿ ಏಕತೆಯ ಭಾವನೆ, ಶಾಂತಿ ಸಮಾಧಾನ, ನ್ಯಾಯ, ಸುರಕ್ಷತೆ ಉಂಟಾಗಲು ಸಾಧ್ಯ ಎಂದಿದ್ದರು.
ಕುರ್ಆನ್ ಹೇಳುತ್ತದೆ, “ನಾವು ಪ್ರತಿಯೊಂದು ಸಮುದಾಯದಲ್ಲಿ ಓರ್ವ ಸಂದೇಶವಾಹಕನನ್ನು ಕಳುಹಿಸಿದೆವು ಮತ್ತು “ಅಲ್ಲಾಹನ ದಾಸ್ಯ ಆರಾಧನೆ ಮಾಡಿರಿ ಮತ್ತು `ತಾಗೂತ್’ನ ಆರಾಧನೆಯಿಂದ ದೂರವಿರಿ” ಎಂದು ಅವರ ಮುಖಾಂತರ ಎಚ್ಚರಿಕೆ ನೀಡಿದೆವು. ಅನಂತರ ಅಲ್ಲಾಹನು ಕೆಲವರಿಗೆ ಸನ್ಮಾರ್ಗದರ್ಶನ ಮಾಡಿದನು ಮತ್ತು ಇನ್ನು ಕೆಲವರ ಮೇಲೆ ಪಥಭ್ರಷ್ಟತೆ ಹೇರಲ್ಪಟ್ಟಿತು. ಹೀಗೆ ಸುಳ್ಳಾಗಿಸುವವರ ಅಂತಿಮ ಪರಿಣಾಮವೇನಾಗಿದೆಯೆಂದು ಭೂಮಿಯ ಮೇಲೆ ಸಂಚರಿಸಿ ನೋಡಿಕೊಳ್ಳಿರಿ.” (ಅನ್ನಹ್ಲ್: 36)
ಶ್ರೀ ನಾರಾಯಣ ಗುರುವಿನ ಮುಖ್ಯ ಭೋದನೆಯಾದ “ಒಂದು ದೈವ ಮನುಷ್ಯನಿಗೆ” ಇದರ ತತ್ವಸಾರವು. `ಪರಮಾತ್ಮನ’ ಬಗೆಯಾಗಿದೆ. ಅವನು ಒಬ್ಬನೇ ಎಂದು ಸಾರುತ್ತದೆ. ದೇವನ ಬಗ್ಗೆ ಗುರುವಾಣಿ ಹೀಗಿದೆ:
ವ್ಯಾಪ್ತಂ ಯೇನ ಚರಾಚರಂ ಘಟಶರಾ-
ವಾದೀವಾ ಮೃತ್ಸತ್ತಯಾ
ಯಸ್ಸಾಂತಃ ಸ್ಫುರಿತಂ ಯದಾತ್ಮಕಮಿದಂ
ಜತಾ ಯತೋ ವರ್ತತೇ
ಯಸ್ಮಿನ್ ಯತ್ ಪ್ರಳಯೇ ಪಿ ಸದ್ಘನಮಜಂ
ಸರ್ವಂ ಯದನ್ವೇತಿ ತಿತ್
ಸತ್ಯಂ ವಿದ್ಯಮೃತಾಯ ನಿರ್ಮಲಧಿಯೋ
ಯಸ್ಮೈ ನಮಸ್ಕುರ್ವತೇ
(ಬ್ರಹ್ಮ ವಿದ್ಯಾಪಂಚಕಂ: 3)
ಅರ್ಥ: ಕೊಡಿ ಹಣತೆ ಮೊದಲಾದವುಗಳು ಹೇಗೆ ಮಣ್ಣಿನ ಸತ್ತೆಯಿಂದ ವ್ಯಾಪಿಸಿರುವುವೋ, ಯಾವುದರಿಂದ ಚರಾಚರಗಳೆಲ್ಲವೂ ವ್ಯಾಪಿಸಿರುವುದೋ ಈ ಲೋಕವು ಯಾವುದರ ಒಳಗೆ ಸ್ಫುರಿಸುತ್ತಿದೆಯೋ, ಯಾವುದು ಇದರ ಆತ್ಮವಾಗಿದೆಯಾ, ಇದು ಯಾವುದರಿಂದ ಜನಿಸಿ, ಯಾವುದರಲ್ಲಿ ನೆಲೆಗೊಳ್ಳುವುದೋ, ಯಾವುದೊಂದು ಪ್ರಳಯದಲ್ಲಿಯೂ ಕೂಡಾ ಸದ್ಘನವಾಗಿ ವರ್ತಿಸುತ್ತಿದೆಯೋ ಯಾವುದಕ್ಕೆ ಜನ್ಮವಿಲ್ಲವೋ ಯಾವುದು ಸರ್ವವನ್ನು ಹಿಂಬಾಲಿಸುತ್ತಿದೆಯೋ. ಯಾವುದನ್ನು ನಿರ್ಮಲ ಬುದ್ಧಿಯುಳ್ಳವರು ಅಮೃತತ್ವಕ್ಕಾಗಿ ನಮಸ್ಕರಿಸುತ್ತದೋ ಅದನ್ನು ಸತ್ಯವೆಂದು ತಿಳಿ.
ಧಾನಾದಿವ ವಟೋ ಯಸ್ಮಾತ್
ಪ್ರಾದುರಾಸೀದಿದಂ ಜಗತ್
ಸಬ್ರಹ್ಮಾ ಸಶಿವೋ ವಿಷ್ಣುಃ
ಸ ಪರಃ ಸರ್ವ ಏವ ಸಃ
(ದರ್ಶನಮಾಲಾ: ಅಧ್ಯಾರೋಪದರ್ಶನಂ: 10)
(ಅರ್ಥ: ಬೀಜದಿಂದ ವಟವೃಕ್ಷದಂತೆ ಈ ಜಗತ್ತು ಯಾರಿಂದ ಉದ್ಭವಿಸಿದೆಯೋ ಅವನೇ ಬಹ್ಮಾ, ಅವನೇ ಶಿವನು, ಅವನೇ ವಿಷ್ಣು, ಅವನೇ ಪರಮನು, ಅವನೇ ಎಲ್ಲವೂ)
ಈಶನು ಜಗದಲೆಲ್ಲಾ
ವಾಸಿಸುವುದರಿಂದ ನೀನು
ಚರಿಸು ಮುಕ್ತನಾಗಿ
ಬಯಸಬೇಡಿ ಯಾರ ಧನವನ್ನು
(ಈಶಾವಾಸ್ಸೋಪನಿಷತ್: 1)
`ಜಗಕ್ಕೆ ಏಕನಾದಿ ಆದಿ’ ಅವನು ಒಬ್ಬನು ಎಂಬುದು ಸತ್ಯವಾಗಿದೆ. ಜಗತ್ತಿನ ಉತ್ಪಾದನೆ, ಪ್ರಳಯ, ಜೀವಜಾಲಗಳ ಜನನ ಮತ್ತು ಮರಣದ ನಿಯಂತ್ರಕನಾಗಿದ್ದಾನೆ ಭಗವಾನ್ ಎಂದು ಈ ಶ್ಲೋಕದ ವ್ಯಾಖ್ಯಾನದಲ್ಲಿ ವ್ಯಕ್ತವಾಗುತ್ತದೆ.
ಗುರುಗಳು ತಮ್ಮ ಶ್ಲೋಕದ ಮೂಲಕ `ದೇವನು ಒಂದು’, ಆದ್ದರಿಂದ ಅವನ ಸೃಷ್ಟಿಗಳಾದ ಮನುಷ್ಯರೆಲ್ಲರೂ ಒಂದು ಮತ್ತು ಸಮಾನರು ಎಂದು ಹೇಳುತ್ತಾರೆ.
ಪವಿತ್ರ ಕುರ್ಆನ್ ಕೂಡ ಅದೇ ತತ್ವವನ್ನು ಸಾರಿದೆ. ಜಗತ್ತಿನಲ್ಲಿ ನೂರಾರು ದೇವತೆಗಳು, ದೇವರುಗಳು ಆಡಳಿತಗಳು ಜಾರಿಯಲ್ಲಿದ್ದರೆ ಪ್ರಕೃತಿಯ ಬೆಳವಣಿಗೆಯಲ್ಲಿ ಅಸಮತೋಲನ ಉಂಟಾಗುತ್ತದೆ. “ಭೂಮಿ-ಆಕಾಶಗಳಲ್ಲಿ ಅಲ್ಲಾಹನ ಹೊರತು ಇತರ ದೇವರುಗಳಿದ್ದರೆ ಖಂಡಿವಾಗಿಯೂ ಅವುಗಳ ವ್ಯವಸ್ಥೆಯು ಅಸ್ತವ್ಯಸ್ತವಾಗುತ್ತಿತ್ತು” (ಅಲ್ ಅಂಬಿಯಾ: 22). ಆದರೆ ಜಗತ್ತು ಒಬ್ಬನ ನಿಯಂತ್ರಣದಲ್ಲಿದೆ, ಅವನೇ ಭಗವಂತ, ಅಲ್ಲಾಹ್, ಶಿವ, ಗಾಡ್ ಎಂಬ ನೂರಾರು ಅಪರ ನಾಮಗಳಿಂದ ವಿಶ್ಲೇಷಿಸುತ್ತೇವೆ. ಆದ್ದರಿಂದ ಜಗತ್ತಿನ ನಿಯಂತ್ರಕ ಒಡೆಯ ಒಬ್ಬನೇ ಆಗಿದ್ದಾನೆ ಎಂಬ ಪರಮ ಸತ್ಯವನ್ನು ಒಪ್ಪಿ ಬದುಕಬೇಕಾದದ್ದು ಮನುಷ್ಯರ ಕರ್ತವ್ಯವಾಗಿದೆ. ಕುರ್ಆನ್ ಹೇಳುತ್ತದೆ, “ಭೂಮಿ-ಆಕಾಶಗಳ ಸಾರ್ವಭೌಮತೆ ಅವನಿಗೆ ಸೇರಿದೆ. ಅವನ ಹೊರತು ಅನ್ಯ ಆರಾಧ್ಯರಿಲ್ಲ. ಅವನೇ ಜೀವನ ನೀಡುವವನು ಮತ್ತು ಅವನೇ ಮರಣ ಕೊಡುವವನು.” (ಪವಿತ್ರ ಕುರ್ಆನ್: 7: 158)
ದೇವರು ಮತ್ತು ಮಾನವರ ನಡುವೆ ಸಂಪರ್ಕದ ಉಪ ಮಾರ್ಗಗಳು ಯಾವುದೂ ಇಲ್ಲ. ದೇವರು ಮತ್ತು ಮನುಷ್ಯರ ನಡುವಿರುವ ನೇರಾ ನೇರ ಸಂಬಂಧವೇ ಅಚಲವಾದ ನಂಬಿಕೆಯಾಗಿದೆ. ದೇವನಿಗೆ ಅವನ ಸೃಷ್ಟಿಗಳ ಮೇಲೆ ಭೇದಗಳಿಲ್ಲ. ಬಡವನ ನೋವನ್ನೂ ಅವನು ಆಲಿಸುತ್ತಾನೆ. ಶ್ರೀಮಂತನ ದುರ್ನಡತೆಯನ್ನು ಅವನು ಪ್ರಶ್ನಿಸಿಯೇ ತೀರುತ್ತಾನೆ. ಎಲ್ಲ ಕಷ್ಟ ಸುಖಗಳು ಅವನ ಪರೀಕ್ಷೆಯಾಗಿದೆ. ಬದಲಾಗಿ ಯಾರಿಗೂ ಅನ್ಯಾಯ ಮಾಡುವುದಿಲ್ಲ. ವಿಶ್ವಾಸ ದುರ್ಬಲವೇ ಬಹುದೇವಾರಾಧನೆ ಮತ್ತು ಮೂಢ ನಂಬಿಕೆಗಳಿಗೆ ಮನುಷ್ಯನನ್ನು ಬಲಿಯಾಗಿಸುತ್ತದೆ ಮತ್ತು ಅವರು ಅದರ ಬಲಿ ಪಶುವಾಗುತ್ತಾರೆ. ಬಹುದೇವಾರಾಧನೆಯೆಂಬುದು ಅವೈಚಾರಿಕ ಕಲ್ಪನೆಯಾಗಿದೆ. ಅದರಿಂದಲೇ ಮೂಢ ನಂಬಿಕೆಗಳು, ಬಲಿ ಪೂಜೆಗಳು, ಹರಕೆಗಳು, ಮೂರ್ತಿ ಪೂಜೆ, ಗೋರಿ ಪೂಜೆಗಳನ್ನು ಅವರು ಅವಲಂಬಿಸುತ್ತಾರೆ. ಇದರಿಂದ ತೋರಿಕೆಯ ಸಂತೃಪ್ತಿ ಉಂಟಾದರೂ ವೈಚಾರಿಕ ನಷ್ಟ ಸಂಭವಿಸುತ್ತದೆ. ಪಥಭ್ರಷ್ಟತೆಗೊಳಪಡುತ್ತಾನೆ.
“ನಿನ್ನ ಅಗತ್ಯಗಳ ಪೂರೈಕೆ ಮತ್ತು ನಿನ್ನ ಶ್ರದ್ಧಾ ಭಕ್ತಿ ಭಾವಗಳ ಶಮನಕ್ಕೆ ಒಬ್ಬ ದೇವನು ಸಾಕಾಗದೇ” ಎಂದು ಕುರ್ಆನ್ ಮನುಷ್ಯರನ್ನು ಪ್ರಶ್ನಿಸುತ್ತದೆ. (ಅಝುಮರ್: 36)
ಒಂದು ಜಾತಿ ಒಂದು ಮತ
ಒಂದು ದೈವ ಮನುಷ್ಯನಿಗೆ
ಒಂದು ಯೋನಿ ಒಂದಾಕಾರ
ಒಂದು ಇಲ್ಲಿದರೊಳು ಭೇದ
(ಜಾತಿ ನಿರ್ಣಯ: 2)
ಏಕತೆಯ ಪರಿಕಲ್ಪನೆಯು ಗುರುವಾಣಿ ಮತ್ತು ಕುರ್ಆನ್ ವಚನಗಳಲ್ಲಿರುವ ಸಮನ್ವತೆಯ ಸಾರಾಂಶಗಳನ್ನು ಓದುಗರ ಮುಂದೆ ಇಟ್ಟಿದ್ದೇನೆಯೇ ಹೊರತು ಯಾರದು ಸರಿ ಯಾರದು ತಪ್ಪು ಎಂಬ ಚರ್ಚೆಗಳನ್ನಲ್ಲ. `ಒಂದೇ ದೇವರು ಮನುಷ್ಯರಿಗೆ’ ಎಂಬ ಸದಾಶಯವೇ ಜಗತ್ತಿನಲ್ಲಿ ನೆಲೆಗೊಳ್ಳಲಿ.
- ಎಂ. ಅಶೀರುದ್ದೀನ್ ಆಲಿಯಾ, ಸಾರ್ತಬೈಲ್
IslamKannada News Portal
