ಅಬ್ದುಲ್ಲಾ ಇಬ್ನು ಮಸ್‍ಊದ್(ರ)ರಿಂದ ವರದಿಯಾಗಿದೆ ಪ್ರವಾದಿವರ್ಯರು(ಸ) ಹೇಳಿದರು. ನೀವು ಸತ್ಯವನ್ನು ಬಿಗಿ ಹಿಡಿಯಿರಿ. ಸತ್ಯ ನಿಮ್ಮನ್ನು ಪುಣ್ಯ ಮತ್ತು ಸ್ವರ್ಗಕ್ಕೆ ಕರೆದೊಯ್ಯುವುದು. ಮನುಷ್ಯ ಸತ್ಯ ಹೇಳುವುದು ಮತ್ತು ಸತ್ಯದಲ್ಲಿ ನಿಷ್ಠೆ ಇರಿಸಿದರೆ ಅಲ್ಲಾಹನ ಬಳಿ ಸತ್ಯಸಂಧ(ಸಿದ್ದೀಕ್) ಎಂಬ ಪದವಿಗೆ ಅರ್ಹನಾಗುವನು. ನೀವು ಸುಳ್ಳು ಹೇಳುವುದರಿಂದ ಎಚ್ಚರ ವಹಿಸಿರಿ. ಸುಳ್ಳು ಅಧರ್ಮದೆಡೆಗೂ ಅಧರ್ಮ ನರಕದೆಡೆಗೂ ಕರೆದೊಯ್ಯುತ್ತದೆ. ನಿರಂತರ ಸುಳ್ಳು ಹೇಳುವುದರಿಂದ ಮನುಷ್ಯ ಅಲ್ಲಾಹನ ಬಳಿ ಸುಳ್ಳುಗಾರ ಎಂಬ ಕೆಟ್ಟ ಹೆಸರಿಗೆ ಪಾತ್ರನಾಗುವನು”
ಸಂಸ್ಕಾರ, ಇಚ್ಛಾಶಕ್ತಿಯಿರುವ ಉತ್ತಮ ಸಮಾಜ ನಿರ್ಮಾಣವನ್ನು ಇಸ್ಲಾಮ್ ಬಯಸುತ್ತದೆ. ಇತರರಿಂದ ಭಿನ್ನವಾಗಿ ಅನೇಕ ಸ್ವಭಾವಗಳು ಒಬ್ಬ ವಿಶ್ವಾಸಿಯಲ್ಲಿ ಕಾಣಿಸಿಕೊಳ್ಳಬಹುದು. ಅವುಗಳಲ್ಲಿ ಪ್ರಧಾನವಾದದ್ದು ಸತ್ಯಸಂಧತೆ. ಅಲ್ಲಾಹನ ಮಾರ್ಗದಲ್ಲಿ ಪ್ರವೇಶಿಸುವವನ ಆಯುಧ ಇದು. ಉತ್ತಮ ಕರ್ಮಗಳನ್ನು ಅನುಷ್ಠಾನಿಸುವುದು, ಪೂರ್ಣತೆ ಗಳಿಕೆಗೂ ಸತ್ಯಸಂಧತೆ ಅವನನ್ನು ಪ್ರೇರೇಪಿಸುತ್ತದೆ.
ಸತ್ಯದ ಮಾರ್ಗ ಸ್ವೀಕರಿಸುವವರಿಗೆ ಸಂತೋಷ ಸುದ್ದಿ, ಅದನ್ನು ನಿರಾಕರಿಸುವವರಿಗೆ ಮುನ್ನೆಚ್ಚರಿಕೆಗಳನ್ನು ಈ ಪ್ರವಾದಿ ವಚನ ನೀಡುತ್ತಿದೆ. ಸತ್ಯ ಸಂಧತೆ ಪುಣ್ಯಕ್ಕೂ, ಪುಣ್ಯ ಸ್ವರ್ಗಕ್ಕೂ ಕರೆದೊಯ್ಯುವುದು. ಸತ್ಯದ ವಿರುದ್ಧ ಸುಳ್ಳು ಅಧಾರ್ಮಿಕತೆಗೂ ಅಧಾರ್ಮಿಕತೆ ನರಕಕ್ಕೂ ಒಯ್ಯುತ್ತದೆ. ಸತ್ಯಸಂಧತೆ ವಿಶ್ವಾಸದ ಲಕ್ಷಣವಾಗಿದೆ. ಸುಳ್ಳು ಕಪಟತನದ ಲಕ್ಷಣವಾಗಿದೆ. ಸತ್ಯಸಂಧತೆ ಎನ್ನುವುದು ಕೇವಲ ಸತ್ಯ ಮಾತುಗಳಿಗೆ ಮೀಸಲಾದ ಒಂದು ಜೀವ ರೀತಿ, ನೀತಿಯಾಗಿದೆ. ಮುಸ್ಲಿಮ್ ಯಾರೆಂದು ಅವನ ಮಾತು, ವರ್ತನೆ ತೋರಿಸಿ ಕೊಡುತ್ತದೆ. ಅಲ್ಲಿ ಸತ್ಯಸಂಧತೆ ಪ್ರಮಾಣಿಕತೆಗಳು ಎದ್ದು ನಿಲ್ಲಬೇಕು. ಚಿಂತನೆಯಿಂದ ಹಿಡಿದು ಜೀವನದ ಸರ್ವೋಪರಿ ಕ್ಷೇತ್ರವು ಸತ್ಯ ಮನೋಹರವಾಗಿಸಲು ವಿಶ್ವಾಸಿಗೆ ಸಾಧ್ಯವಾಗಬೇಕು. ಹೀಗೆ ಅವನು ಅಲ್ಲಾಹನ ಬಳಿ ಸಿದ್ದೀಕ್ ಪದವಿಗೇರಬಹುದಾಗಿದೆ.
ಸುಳ್ಳು ಹೇಳುವುದನ್ನು ಪ್ರವಾದಿವರ್ಯರು(ಸ) ತೀವ್ರವಾಗಿ ವಿರೋಧಿಸಿದ್ದಾರೆ. ಈ ಅಭ್ಯಾಸ ಒಬ್ಬನನ್ನು ಅಲ್ಲಾಹನ ಬಳಿ ಸುಳ್ಳುಗಾರನಾಗಿಸುತ್ತದೆ. ಲೋಕದ ತಾತ್ಕಾಲಿಕ ಲಾಭಕ್ಕೆ ಕೆಲವರು ಸುಳ್ಳು ದಾರಿ ಹಿಡಿಯುತ್ತಾರೆ. ಎಷ್ಟು ಕಹಿಯಾದರೂ ಸತ್ಯವನ್ನೇ ಆಡಿರಿ ಎಂದು ಪ್ರವಾದಿ(ಸ) ತನ್ನ ಅನುಯಾಯಿಗಳಿಗೆ ಹೇಳಿದ್ದಾರೆ. ಸುಳ್ಳಿನ ನಡುವೆ ಇಂದು ನಾವು ಬದುಕುತ್ತಿದ್ದೇವೆ. ಅಧಿಕಾರಿಗಳು, ರಾಜಕೀಯ ನಾಯಕರು ಸುಳ್ಳಿನ ವಕ್ತಾರರಾಗಿ ಬಿಟ್ಟಿದ್ದಾರೆ. ಭ್ರಷ್ಟಾಚಾರ, ವಂಚನೆ ಇವೇ ನಾವು ದಿನೇ ದಿನೇ ಕೇಳಿಸಿಕೊಳ್ಳುತ್ತಿರುವ ವಿದ್ಯಮಾನಗಳು. ಆಡನ್ನು ನಾಯಿಯಾಗಿಸುವಂತಹದೆಲ್ಲವೂ ನಡೆದು ಹೋಗುತ್ತಿದೆ. ಅಧಿಕಾರ ಬಲ ಅವರಿಗಿದೆ. ಅದನ್ನು ವಿರೋಧಿಸುವವರು ಹೆಚ್ಚು ನಾಷನಷ್ಟ ಕಷ್ಟಕ್ಕೆ ಭಾಜನರಾಗುತ್ತಲೂ ಇದ್ದಾರೆ.
ಅಸತ್ಯಕ್ಕೆ ಹೆಚ್ಚು ಅನುಯಾಯಿಗಳು. ಸತ್ಯಕ್ಕೆ ಕಡಿಮೆ ಮಂದಿ. ಎಲ್ಲರಿಗೂ ಪೆಟ್ಟು ನೋವು ನಿಂದನೆ ಬೈಗುಳ ಹೀಗಳಿಕೆ ಇತ್ಯಾದಿ ಸತ್ಯಕ್ಕಾಗಿ ತಿನ್ನುವ ಮನಸ್ಸಿರುವುದಿಲ್ಲ. ಎಜೆಸ್ಟ್ ಮೆಂಟ್, ಹೊಂದಾಣಿಕೆ ದಾರಿ ಹಿಡಿದುಕೊಳ್ಳುತ್ತಿದ್ದಾರೆ. ಇವರು ಅಸತ್ಯದ ಸಮರ್ಥಕರಾಗಿ ಉಳಿದು ಬಿಟ್ಟರೆ, ಇವರೂ ಸುಳ್ಳುಗಾರರೇ. ಅಲ್ಲಾಹನ ಬಳಿ ಇದಕ್ಕಿಂತ ಉತ್ತಮ ಸ್ಥಾನ ಸಿಗುತ್ತದೆ ಎಂದು ಊಹಿಸುವುದಾದರೂ ಹೇಗೆ. ಒಟ್ಟಿನಲ್ಲಿ ಸುಳ್ಳನ್ನು ನೋಡಿ ಮೌನವಾಗಿರುವುದು ಕೂಡ ಅಪರಾಧ ಎಂಧದರ್ಥ. ಯಾವುದೇ ಸ್ಥಿತಿಯಲ್ಲಿಯೂ ಸತ್ಯವನ್ನು ಬಿಗಿ ಹಿಡಿರಿ. ಅದೆಷ್ಟು ಕಹಿಯಾದರೂ. ಇದು ಪ್ರವಾದಿ(ಸ) ಮಾತು.
IslamKannada News Portal

