–ಸಯ್ಯದ್ ಸಆದತುಲ್ಲಾ ಹುಸೈನಿ
ಜ.ಇ. ಹಿಂದ್ ರಾಷ್ಟ್ರೀಯ ಅಧ್ಯಕ್ಪರು
(ಅಧ್ಯಯನಾತ್ಮಕ ಮತ್ತು ಇತಿಹಾಸ ಆಧಾರಿತವಾಗಿ ಬರೆದ ಬರಹ)
ಭಾಗ 1
ದತ್ತಿ ವ್ಯವಸ್ಥೆಯ ಮೂಲಕ ಜಗತ್ತಿನಲ್ಲಿ ಕಲ್ಯಾಣ ಸಂಸ್ಥೆಗಳ ಕಲ್ಪನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದವರು ಮುಸ್ಲಿಮರು ಎಂಬುದು ಐತಿಹಾಸಿಕ ಸತ್ಯ. ಇಸ್ಲಾಮೀ ಇತಿಹಾಸದಲ್ಲಿ ವಕ್ಫ್ ಯೋಜನೆಯು ಸಾರ್ವಜನಿಕ ವಲಯದ ಜೊತೆಗೆ ಸಾರ್ವಜನಿಕ ಸೇವೆಗಳ ತಂತ್ರವಲಯವಾಗಿ ಹೊರ ಹೊಮ್ಮಿತು. ಬಡವರು ಮತ್ತು ಅಸಹಾಯಕರ ಅಗತ್ಯಗಳನ್ನು ತಾವಾಗಿಯೇ ಪೂರೈಸುವುದು ತಮ್ಮ ಏಕೈಕ ಜವಾಬ್ದಾರಿ ಎಂದು ಶ್ರೀಮಂತ ವ್ಯಕ್ತಿಗಳು ಭಾವಿಸಿರಲಿಲ್ಲ. ಬದಲಾಗಿ ಅವರು ತಮ್ಮ ಸಂಪತ್ತಿನ ಗಮನಾರ್ಹ ಭಾಗವನ್ನು ಆಡಳಿತ ವ್ಯವಸ್ಥೆಯೊಂದಿಗೆ ಸಹಕರಿಸಲು ಮತ್ತು ಅವರ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ತೀರ್ಮಾನಿಸಿದರು. ಅನಾಥರು, ವಿಧವೆಯರು ಮತ್ತು ಇತರ ನಿರ್ಗತಿಕರು, ಮಸೀದಿಗಳು ಮತ್ತು ಆಶ್ರಮಗಳ ನಿರ್ಮಾಣ ಮತ್ತು ನಿರ್ವಹಣೆ, ಇತರ ಧಾರ್ಮಿಕ ವ್ಯವಹಾರಗಳು, ಶಿಕ್ಷಣ ಆರ್ಥಿಕ ಕಲ್ಯಾಣ, ಸಾರ್ವಜನಿಕ ಆರೋಗ್ಯ ಪ್ರಜೆಗಳ ಸಾರ್ವಜನಿಕ ಸೌಲಭ್ಯಗಳಿಗಾಗಿ ತಮ್ಮ ಆಸ್ತಿಯಲ್ಲಿ ದೊಡ್ಡ ಭಾಗವನ್ನು ವಕ್ಫ್ ಗೆ ಮೀಸಲಿಟ್ಟರು.
ವಕ್ಫ್ ನ ವಿಶಾಲವಾದ ಈ ನೆಟ್ವರ್ಕ್ ಇಸ್ಲಾಮೀ ಇತಿಹಾಸದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ವಕ್ಫ್ ಸಾರ್ವಜನಿಕರ ನಡುವೆ ಉತ್ತಮ ಪ್ರವೃತ್ತಿಯನ್ನು ಸೃಷ್ಟಿಸಿದ ಸಂಸ್ಥೆಯಾಗಿತ್ತು. ಇದು ವಿಶ್ವದಾದ್ಯಂತ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಜನ್ಮ ನೀಡಿತು. ಬಡತನ ನಿರ್ಮೂಲನ, ಸಮಾನತೆ ಮತ್ತು ಮಾನವೀಯತೆಯಂತಹ ಇಸ್ಲಾಮಿನ ಉದಾತ್ತ ಮೌಲ್ಯಗಳಿಗೆ ಪ್ರಬಲವಾದ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಪ್ರಾಯೋಗಿಕ ಸಾಕ್ಷ್ಯವನ್ನು ಪ್ರಸ್ತುತಪಡಿಸಿತು. ವಕ್ಫ್ ವ್ಯವಸ್ಥೆಯು ಜೀವನದ ವಿವಿಧ ರಂಗಗಳಿಗೆ ಸಂಬಂಧಿಸಿದ ಇಸ್ಲಾಮ್ ಧರ್ಮದ ವಿಶಿಷ್ಟ ಮೌಲ್ಯಗಳು ಮತ್ತು ದೃಷ್ಟಿಕೋನವನ್ನು ವ್ಯಾಪಕವಾಗಿ ಪರಿಚಯಿಸಿತು. ಅದನ್ನು ಶ್ರೇಷ್ಠತೆಯ ಸಂಸ್ಥೆಯಾಗಿ ಅಭಿವೃದ್ಧಿ ಪಡಿಸಿತು. ನಂತರ ಈ ದತ್ತಿ ಕಲ್ಪನೆಯು ಪ್ರಪಂಚದಾದ್ಯಂತ ನಾಗರಿಕತೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿತು. ಇದು ಸರ್ಕಾರಗಳ ನೀತಿಗಳ ಮೇಲೆ ಪ್ರಭಾವ ಬೀರಿ ವಿಶ್ವದೆಲ್ಲೆಡೆ ಇಸ್ಲಾಮಿನ ಕೆಲವು ಮುಖ್ಯ ಮೌಲ್ಯಗಳನ್ನು ಜನಪ್ರಿಯಗೊಳಿಸಿತು. ಈ ವಿಚಾರಗಳ ಮೇಲೆ ಜಾಗತಿಕ ಒಮ್ಮತ ರೂ ಪುಗೊಂಡಿತು. ದತ್ತಿಯ ಸಂಪೂರ್ಣ ಪಾತ್ರವನ್ನು ವಿವರಿಸುವ ವಿವರಣೆಗಳನ್ನು ನೀಡುವುದು ಈ ಲೇಖನದ ಉದ್ದೇಶ.
ವಕ್ಫ್ ಎಂಬ ಸುಂದರ ವ್ಯವಸ್ಥೆ
ಅಲ್ಲಾಹನ ಪ್ರವಾದಿ ಮುಹಮ್ಮದ್(ಸ)ರೇ ವಕ್ಫ್ ವ್ಯವಸ್ಥೆಯ ಸ್ಥಾಪಕ. ಪ್ರಥಮವಾಗಿ ವಕ್ಫ್ ನಿರ್ವಹಿಸಿದವರೂ ಅವರೇ. ಉಹುದ್ ಯುದ್ಧದಲ್ಲಿ ಮುಸ್ಲಿಮರನ್ನು ಬೆಂಬಲಿಸಿ ಹೋರಾಡುತ್ತಿರುವುದರ ನಡುವೆ ಮುಖೈರಿಖುಬ್ನು ನದೀರ್ (ಕೆಲವು ವರದಿಗಳ ಪ್ರಕಾರ ಅವರು ಇಸ್ಲಾಮ್ ಸ್ವೀಕರಿಸಿದ್ದರು) ಎಂಬ ಯಹೂದಿ ವ್ಯಕ್ತಿ, ತಾನು ಕೊಲ್ಲಲ್ಪಟ್ಟರೆ ತನ್ನ ಸೊತ್ತನ್ನು ಪ್ರವಾದಿ ಮುಹಮ್ಮದ್(ಸ)ರಿಗೆ ನೀಡುವುದೆಂದು ಉಯಿಲು ಬರೆದರು. ಯುದ್ಧದಲ್ಲಿ ಅವರು ಕೊಲ್ಲಲ್ಪಟ್ಟ ಅವರ ಏಳು ತೋಟಗಳು ಪ್ರವಾದಿಯವರ(ಸ) ಆಸ್ತಿಯಾಯಿತು. ಪ್ರವಾದಿವರ್ಯರು(ಸ) ಈ ತೋಟಗಳನ್ನು ಅಲ್ಲಾಹನ ಮಾರ್ಗದ ವಕ್ಫ್ ಆಗಿ ಘೋಷಿಸಿದರು. ಹೀಗೆ ಉದಾತ್ತ ಹಾಗೂ ಅಮೂಲ್ಯವಾದ ಅನುಗ್ರಹೀತ ಮೊದಲ ವಕ್ಫ್ ಉದ್ಘಾಟನೆಗೊಂಡಿತು. ನಂತರ ಖಲೀಫಾ ಉಮರ್(ರ) ಖೈಬರ್ ಭೂಮಿಯಿಂದ ತನಗೆ ಲಭಿಸಿದ ಭೂಮಿಯನ್ನು ವಕ್ಫ್ ಮಾಡಿ, ವಕ್ಫ್ ನ ವಿವರವಾದ ವ್ಯವಸ್ಥೆಗಳನ್ನು ಬರೆದಿಟ್ಟರು. ಬಳಿಕ ಅದು ಇಸ್ಲಾಮಿನ ವಕ್ಫ್ ನಿಯಮದ ಆಧಾರವಾಗಿ ಬದಲಾಯಿತು. ಅಬೂಬಕರ್, ಉಮರ್, ಉಸ್ಮಾನ್, ಅಲಿ, ಝೈದ್ ಇಬ್ನು ಸಾಬಿತ್, ಝುಬೈರುಬ್ನುಲ್ ಅವ್ವಾಮ್, ಸಅïದುಬ್ನು ಅಬೀ ವಕಾಸ್, ಮುಆದಿಬ್ನು ಜಬಲ್, ಖಾಲಿದ್ ಬಿನ್ ವಲೀದ್, ಉಮ್ಮಹಾತುಲ್ ಮೂಅïಮಿನೀನ್ ಹ. ಆಯಿಶಾ, ಉಮ್ಮು ಸಲಮ, ಉಮ್ಮು ಹಬೀಲ, ಸಫೀಯ್ಯ ಮುಂತಾದ ಮಹಾನ್ ವ್ಯಕ್ತಿಗಳು ತಮ್ಮ ಸೊತ್ತುಗಳನ್ನು ವಕ್ಫ್ ಮಾಡಿದ್ದರು. ಅತ್ಯಂತ ಪ್ರಮುಖ ಸಹಾಬಿಗಳ ಈ ಪಟ್ಟಿ ನೋಡುವಾಗ ಆ ಕಾಲದಲ್ಲಿ ದತ್ತಿ ಎಂಬುದು ಹೇಗೆ ಟ್ರೆಂಡ್ ಆಗಿತ್ತೆಂದು ತೋರಿಸಿ ಕೊಡುತ್ತದೆ.
ನಂತರ ದಿನಗಳಲ್ಲಿ ವಕ್ಫ್ ವ್ಯವಸ್ಥೆಯು ಇಸ್ಲಾಮೀ ನಾಗರಿಕತೆಯ ವಿಶಿಷ್ಟ ಮುಖವಾಗಿ, ಸಾರ್ವಜನಿಕ ಕಲ್ಯಾಣದ ವಿಶಾಲವಾದ ಮತ್ತು ಗಂಭೀರವಾದ ವ್ಯವಸ್ಥೆಯಾಗಿ ಮಾರ್ಪಟ್ಟಿತು. ಜನರ ಆವಶ್ಯಕತೆಗಳನ್ನು ಪೂರೈಸಲು ದೊಡ್ಡ ಪ್ರಮಾಣದಲ್ಲಿ ದಾನಶೀಲರು ಮುಂದೆ ಬಂದರು. ಪವಿತ್ರ ಕುರ್ಆನ್ನ ಬೆಳಕಿನಲ್ಲಿ ಅವರು ತಮ್ಮ ಸಂಪತ್ತನ್ನು ದೇವನ ಅಮಾನತ್ ಎಂದು ತಿಳಿದುಕೊಂಡು ಅದನ್ನು ಸಾರ್ವಜನಿಕ ಕಲ್ಯಾಣ ಮತ್ತು ಅಗತ್ಯಗಳಿಗಾಗಿ ಬಳಸುವುದು ತಮ್ಮ ಕರ್ತವ್ಯವೆಂದು ಅರ್ಥ ಮಾಡಿಕೊಂಡರು. ಹೀಗಾಗಿ ಸಾರ್ವಜನಿಕ ಕಲ್ಯಾಣ ಮತ್ತು ನಿರ್ಗತಿಕರ ಅಗತ್ಯಗಳ ಪೂರೈಕೆಯನ್ನು ಕೇವಲ ಸರ್ಕಾರಗಳಿಗೆ ಮೀಸಲಿರಿಸದೆ ವಕ್ಫ್ ನ ರೂಪದಲ್ಲಿ ಈ ಅಗತ್ಯ ಪೂರೈಸಲು ಸಮಾನಾಂತರವಾಗಿ ಒಂದು ದೊಡ್ಡ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಇಸ್ಲಾಮಿಕ್ ಯುಗದಲ್ಲಿ ಸಾರ್ವಜನಿಕ ಸೇವೆಗಳು ಎಲ್ಲರಿಗೂ ಸುಲಭವಾಗಿ ಲಭಿಸಲು ಈ ವ್ಯವಸ್ಥೆಯಿಂದ ಸಾಧ್ಯವಾಯಿತು.
ಇಂದಿಗೂ ಚಾರಿಟೇಬಲ್ ಸಂಸ್ಥೆಗಳ ಚಟುವಟಿಕೆಗಳಲ್ಲಿ ಅಗತ್ಯಗಳನ್ನು ನೆರವೇರಿಸುವಲ್ಲಿ ಎಂಡೋಪ್ಮೆಂಟ್ಗಳು ಪ್ರಮುಖ ಪಾತ್ರ ವಹಿಸಿವೆ. ಇತಿಹಾಸದಲ್ಲಿ ಸಮಾಜಿಕ ಕಲ್ಯಾಣಕ್ಕಾಗಿ ಅನೇಕ ದತ್ತಿಗಳನ್ನು ರಚಿಸಲಾಗಿದೆ. ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ವೈಜ್ಞಾನಿಕ ಸಂಶೋಧನಾ ಕೇಂದ್ರಗಳು, ಗ್ರಂಥಾಲಯಗಳು, ಚಿಕಿತ್ಸಾಲಯಗಳು, ಅನಾಥಾಶ್ರಮಗಳು ಮತ್ತು ವಿಧವೆಯರಿಗೆ ನೆರವು ನೀಡುವ ವ್ಯವಸ್ಥೆಗಳ ನಿರ್ಮಾಣ ಮತ್ತು ನಿರ್ವಹಣೆಯನ್ನು ವಕ್ಫ್ ಒಳಗೊಂಡಿದೆ. ಇದಲ್ಲದೆ ಕಾಲದ ಆವಶ್ಯಕತೆಗೆ ಅನುಗುಣವಾಗಿ ಛತ್ರಗಳ ಸ್ಥಾಪನೆ, ಪ್ರಯಾಣಿಕ ತಂಗುದಾಣಗಳು, ಮಸೀದಿ, ಮದ್ರಸಾ ಸ್ಥಾಪನೆ ಎಲ್ಲವೂ ವಕ್ಫ್ ನ ಪ್ರಮುಖ ಭಾಗವಾಯಿತು.
ಭಾರತದಲ್ಲಿ ದೆಹಲಿಯ ಸುಲ್ತಾನರ ಕಾಲದಿಂದಲೇ ಸೂಫಿ ಆಶ್ರಮಗಳು ಕಾರ್ಯನಿರ್ವಹಿಸುತ್ತಿತ್ತು. ಇವು ಏಕಕಾಲದಲ್ಲಿ ಧಾರ್ಮಿಕ ಬೋಧನೆ, ಸುಧಾರಣೆ, ತರಬೇತಿ, ಸಮಾಜ ಸೇವೆಯಂತಹ ಚಟು ವಟಿಕೆಗಳ ಕೇಂದ್ರವಾಗಿತ್ತು. ಪ್ರತಿಯೊಂದು ಆಶ್ರಮವು ವಸತಿ ಮತ್ತು ಆಹಾರಕ್ಕಾಗಿ ವಿಶಾಲ ವ್ಯವಸ್ಥೆಯನ್ನು ಹೊಂದಿತ್ತು. ಶಿಕ್ಷಣ ತರಬೇತಿ ಪಡೆಯಲು ಮತ್ತು ಯಾತ್ರಿಕರು ಮತ್ತು ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಈ ಆಶ್ರಮಗಳ ಬಾಗಿಲುಗಳನ್ನು ತೆರೆಯಲಾಗಿತ್ತು. ವಿವಿಧ ಧರ್ಮೀಯರನ್ನೂ ಈ ಕೇಂದ್ರಗಳಿಗೆ ಸ್ವಾಗತಿಸಲಾಯಿತು. ಅವರ ನಡುವೆ ಆರೋಗ್ಯಕರ ಚರ್ಚೆಗಳು ನಡೆಯಿತು. ಅನೇಕ ಸೂಫಿ ಕೇಂದ್ರಗಳು ದೊಡ್ಡ ಶಾಲೆಗಳು, ಶೈಕ್ಷಣಿಕ ಕೇಂದ್ರಗಳು ಮತ್ತು ಗ್ರಂಥಾಲಯಗಳನ್ನು ಹೊಂದಿದ್ದವು. ಎಲ್ಲಾ ಧರ್ಮೀಯರಿಗೂ ಉಚಿತ ಭೋಜನ ವ್ಯವಸ್ಥೆ ಇತ್ತು. ನಂತರ ಈ ವ್ಯವಸ್ಥೆಯಲ್ಲಿ ಸ್ವಲ್ಪ ದೌರ್ಬಲ್ಯ ಕಂಡು ಬಂದರೂ ಅದನ್ನು ಪರಿಗಣಿಸದೆ ಒಂಭತ್ತನೇ ಶತಮಾನದಿಂದ 18ನೇ ಶತಮಾನದವರೆಗೆ ಇಸ್ಲಾಮಿಕ್ ಲೋಕದಾದ್ಯಂತ ಇಸ್ಲಾಮಿನ ಪ್ರಚಾರ, ಬೋಧನೆ ಮತ್ತು ಮುಸ್ಲಿಮ್ ಸುಧಾರಣೆ, ಶಿಕ್ಷಣಗಳಲ್ಲೂ ಈ ಆಶ್ರಮಗಳು ಪ್ರಮುಖ ಪಾತ್ರವಹಿಸಿರುವುದರಲ್ಲಿ ಸಂಶಯವಿಲ್ಲ.
ಸಾರ್ವಜನಿಕ ಅಗತ್ಯಗಳನ್ನು ಅರ್ಥಮಾಡಿಕೊಂಡು ಅವರು ಕಂಡುಕೊಂಡ ವಿವಿಧ ದಾರಿಗಳನ್ನು ಪ್ರಸ್ತಾಪಿಸುವಾಗ ಸಂಶೋಧಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ವ್ಯಾಪಕವಾದ ದತ್ತಿಗಳ ವಿವರವನ್ನು ತಿಳಿಯಲು ಉಸ್ಮಾನಿಯಾ (ಒಟ್ಟೋಮನ್) ಕಾಲದ ದತ್ತಿಗಳ ಉದಾಹರಣೆಯನ್ನು ಸಾಮಾನ್ಯವಾಗಿ ಪ್ರಸ್ತಾಪಿಸಲಾಗುತ್ತದೆ. ಏಕೆಂದರೆ ಈ ದತ್ತಿಗಳ ಅಂಕಿ ಅಂಶಗಳು ಲಭ್ಯವಿವೆ.
– ಒಟ್ಟೋಮನ್ ಕಾಲದಲ್ಲಿ ಸಾಗುವಳಿ ಮಾಡಬಹುದಾದ ಭೂಮಿಯ ಮುಕ್ಕಾಲು ಭಾಗ ದತ್ತಿ ಭೂಮಿಯಾಗಿತ್ತು. ಅಲ್ಜೀರಿಯಾದಲ್ಲಿ ಅರ್ಧದಷ್ಟು ಕೃಷಿಯೋಗ್ಯ ಭೂಮಿ, ಟುನಿಶಿಯಾ ಮತ್ತು ಗ್ರೀಸ್ನಲ್ಲಿ ಮೂರನೇ ಒಂದು ಭಾಗ, ಈಜಿಪ್ಟ್ ನಲ್ಲಿ ಇಪ್ಪತ್ತು ಪ್ರತಿಶತಃ ಮತ್ತು ಇರಾನ್ನಲ್ಲಿ 15% ಎಲ್ಲವೂ ವಕ್ಫ್ ಗೆ ಸೇರಿತ್ತು.
– ಸಾರ್ವಜನಿಕ ಕಲ್ಯಾಣಕ್ಕಾಗಿ ದತ್ತಿಗಳು ಖರ್ಚು ಮಾಡಿದ ಬಜೆಟ್ ಒಟ್ಟೋಮನ್ ಸಾಮ್ರಾಜ್ಯದಲ್ಲಿ ಸರ್ಕಾರದ ಬಜೆಟ್ನ ಮೂರನೆ ಒಂದು ಭಾಗಕ್ಕೆ ಸಮವಾಗಿತ್ತು.
– ಹದಿನಾರನೇ ಶತಮಾನದಲ್ಲಿ ಇಸ್ತಾಂಬುಲ್ನಲ್ಲಿದ್ದ ಹೆಚ್ಚಿನ ಆಸ್ಪತ್ರೆಗಳು ವಕ್ಫ್ ನಿಂದ ನಡೆಸಲ್ಪಡುತ್ತಿತ್ತು.
– 17 ಶತಮಾನದ ಡೆಮಾಸ್ಕಸ್ನ ಸಂಪೂರ್ಣ ನೀರು ಸರಬರಾಜು ವ್ಯವಸ್ಥೆ ವಕ್ಫ್ ನ್ನು ಆಧರಿಸಿತ್ತು.
– ಒಟ್ಟೋಮನ್ ಆಳ್ವಿಕೆಯಲ್ಲಿ ಜನಸಂಖ್ಯೆಯ ಆರರಲ್ಲಿ ಒಬ್ಬರು ಚಾರಿಟೇಬಲ್ ಸಂಸ್ಥೆಗಳಲ್ಲಿ ಉದ್ಯೋಗಿಯಾಗಿದ್ದರು. ಡೆಮಾಸ್ಕಸ್ನ ತನ್ನ ಸಂದರ್ಶನದ ಕುರಿತು ವಿವರಿಸುವಾಗ ಇಬ್ನು ಬತೂತ ರಸಮಯವಾದ ಒಂದು ಉದ್ದರಣೆಯೊಂದಿಗೆ ತನ್ನ ವಿವರಣೆಯನ್ನು ಕೊನೆಗೊಳಿಸುತ್ತಾರೆ, “ಡಮಾಸ್ಕಸ್ನ ದತ್ತಿಗಳು ಬಹಳ ದೊಡ್ಡದು ಮತ್ತು ವೈವಿಧ್ಯಮಯವಾಗಿದೆ, ಎಣಿಸಲಸಾಧ್ಯವಾದಷ್ಟು ಬಹುಮುಖ ಕಾರ್ಯಗಳಿಗಾಗಿ ವಕ್ಫ್ ಉಪಯೋಗಿಸಲಾಗುತ್ತಿತ್ತು. ಹಜ್ಜ್ ಮಾಡಲು ಸಾಧ್ಯವಾಗದವರ ವೆಚ್ಚವನ್ನು ಭರಿಸಲು, ಹೆಣ್ಣು ಮಕ್ಕಳಿಗೆ ಮದುವೆಯ ಬಟ್ಟೆಗಳನ್ನು ನೀಡಲು, ಕೈದಿಗಳ ಬಿಡುಗಡೆಗೆ, ಪ್ರಯಾಣಿಕರಿಗೆ ಆಹಾರ ವ್ಯವಸ್ಥೆ, ಬಟ್ಟೆ ಮತ್ತು ಪ್ರಯಾಣದ ವೆಚ್ಚವನ್ನು ಕೂಡಾ ಭರಿಸಲು ಉಪಯೋಗಿಸಲಾಗುತ್ತಿತ್ತು. ಒಟ್ಟಿನಲ್ಲಿ ಜನರು ಪ್ರತಿ ಒಳ್ಳೆಯ ಕಾರ್ಯಗಳಿಗೂ ವಕ್ಫ್ ನೀಡುತ್ತಿದ್ದರು…
ಒಮ್ಮೆ ಡೆಮಾಸ್ಕಸ್ನ ಒಂದು ಬೀದಿಯಲ್ಲಿ ನಡೆಯುತ್ತಿರುವಾಗ ಬೆಲೆಬಾಳುವ ಒಂದು ಪಾತ್ರೆಯು ಓರ್ವ ಗುಲಾಮ ಹುಡುಗನ ಕೈಯಿಂದ ಕೆಳಗೆ ಬಿತ್ತು. ನೆರೆದ ಜನಸಂದಣಿಯ ನಡುವೆ ಒಬ್ಬ ಹೇಳಿದ, “ಒಡೆದ ಪಾತ್ರೆಯ ತುಂಡುಗಳೊಂದಿಗೆ ಇಂತಿಂತಹ ಸ್ಥಳಕ್ಕೆ ಹೋಗು. ಅಲ್ಲಿ ಮುರಿದ ಪಾತ್ರೆಗೆ ವಕ್ಫ್ ಹಣವನ್ನು ನೀಡುವ ವ್ಯಕ್ತಿಯಿದ್ದಾನೆ… ಹುಡುಗ ಅಲ್ಲಿಗೆ ಹೋದಾಗ ಹೊಸ ಪಾತ್ರೆ ಕೊಳ್ಳಲು ಹುಡುಗನಿಗೆ ಸಹಾಯ ಮಾಡಲಾಯಿತು. ಇಲ್ಲದಿದ್ದರೆ ಆ ಗುಲಾಮ ಹುಡುಗ ಯಜಮಾನನಿಂದ ಶಿಕ್ಷೆಯನ್ನು ಅನುಭವಿಸಬೇಕಾಗಿತ್ತು. ಆತನನ್ನು ಅದರಿಂದ ರಕ್ಷಿಸಲು ಈ ವಕ್ಫ್ ನಿಂದ ಸಾಧ್ಯವಾಯಿತು.
ಈ ವಿವರಗಳಿಂದ ಕೆಳಗಿನ ಪ್ರಮುಖ ಅಂಶಗಳು ಮನದಟ್ಟಾಗುತ್ತದೆ
1. ಇಸ್ಲಾಮೀ ನಾಗರಿಕತೆಯು ಸಮಾಜ ಕಲ್ಯಾಣ ಸಂಸ್ಥೆಗಳ ಸುಸ್ಥಿರ ವ್ಯವಸ್ಥೆಯನ್ನು ಸ್ಥಾಪಿಸಿತು. ದತ್ತಿಗಳ ಮೂಲಕ ನಡೆಯುವ ಈ ಸಂಸ್ಥೆಗಳು ಇಸ್ಲಾಮೀ ನಾಗರಿಕತೆಯ ಪ್ರತೀಕವಾಯಿತು. ಹೀಗೆ ಮಾನವೀಯ ಸೇವೆಯನ್ನು ವಕ್ಫ್ ನ ಮೂಲಕ ಒದಗಿಸಲು ಸಾಂಸ್ಥಿಕ ಪ್ರಯತ್ನವು ಪ್ರವಾದಿ ಮುಹಮ್ಮದ್(ಸ)ರ ಕಾಲದಿಂದ ಇಂದಿನವರೆಗೆ ಇಸ್ಲಾಮೀ ಪರಂಪರೆಯ ಪ್ರಮುಖ ಭಾಗವಾಗಿದೆ.
2. ಶ್ರೀಮಂತ ವ್ಯಕ್ತಿಗಳು ತಮ್ಮ ಸಂಪತ್ತನ್ನು ಸಾರ್ವಜನಿಕ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಇದಕ್ಕಾಗಿ ಪ್ರತ್ಯೇಕ ವಕ್ಫ್ ಗಳನ್ನೂ, ವಕ್ಫ್ ಆಧಾರಿತ ಸಾಂಸ್ಥಿಕ ವ್ಯವಸ್ಥೆಯನ್ನು ಸ್ಥಾಪಿಸಿದರು.
3. ಈ ಸಮಾಜ ಕಲ್ಯಾಣವು ಕೇವಲ ಜೀವ ಕಾರುಣ್ಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅತ್ಯಂತ ಸುವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸುವುದಲ್ಲದೆ, ಸರ್ಕಾರಗಳಿಗೂ ಸಹಾಯ ಮಾಡಲು ಶ್ರೀಮಂತರು ತಮ್ಮ ಸಂಪತ್ತು ಖರ್ಚು ಮಾಡಿದರು.
4. ಜನರ ಅಗತ್ಯಗಳನ್ನು ತಿಳಿದುಕೊಳ್ಳಲು ಸಮೀಕ್ಷೆ ಹಾಗೂ ಅಧ್ಯಯನವನ್ನು ನಡೆಸಿದ್ದರು. ನವೀನ ರೀತಿಯಿಂದ ಈ ಅಗತ್ಯ ಪೂರೈಸಲು ಶ್ರಮಿಸಿದರು. ಇಂದು ವ್ಯಾಪಾರ, ವ್ಯವಸಾಯ, ಕೈಗಾರಿಕೆಯಲ್ಲಿ ಹೊಸತನಕ್ಕೆ ಪೈಪೋಟಿ ನಡೆಯುವಂತೆ ಆ ದಿನಗಳಲ್ಲಿ ಪರೋಪಕಾರ ಮತ್ತು ಸಂಪತ್ತಿನ ಬಳಕೆಗೆ ಇದೇ ರೀತಿಯ ಸ್ಪರ್ಧೆಯಿತ್ತು.
5. ಇಂದಿನ ಪ್ರಜಾಪ್ರಭುತ್ವ ಸರ್ಕಾರಗಳು ಮತದಾರರ ಮೇಲೆ ಪ್ರಭಾವ ಬೀರಲು ಹೊಸ ಕಲ್ಯಾಣ ಯೋಜನೆಗಳನ್ನು ತಂದಂತೆ ಶ್ರೀಮಂತರು ತಮ್ಮ ಸಂಪತ್ತನ್ನು ಬಳಸಿಕೊಳ್ಳಲು ಮತ್ತು ಹೊಸ ವಕ್ಫ್ ಗಳನ್ನು ರಚಿಸಲು ಹೊಸ ಯೋಜನೆಯನ್ನು ರೂಪಿಸಿದರು. (ಮುಂದುವರಿಯುವುದು)
IslamKannada News Portal
