ಮುಸ್ಲಿಮರು ಭಾವಿಸುವಂತೆ ನಾವು ಬಹುದೇವ ವಿಶ್ವಾಸಿಗಳೋ ಅಥವಾ ಬಹುದೇವಾರಾಧಕರೋ ಅಲ್ಲ, ದೇವನು ಒಬ್ಬನೆಂದು ವಿಶ್ವಾಸವಿರಿಸಿ ಆತನನ್ನು ಆರಾಧಿಸುತ್ತಿದ್ದೇವೆ. ವಿಗ್ರಹಗಳನ್ನು ದೇವರನ್ನು ನೆನಪಿಸಲು ಹಾಗೂ ದೇವರಲ್ಲಿ ಶ್ರದ್ಧೆ ಮೂಡಲು ಪ್ರತಿಷ್ಠಾಪಿಸುತ್ತೇವೆ. ಹಾಗಿದ್ದರೂ ನೀವು ವಿಗ್ರಹಾರಾಧನೆಯನ್ನು ವಿರೋಧಿಸುವುದೇಕೆ.?
ಇಸ್ಲಾಮ್ ಏಕದೇವತ್ವವನ್ನು ಪ್ರಬಲವಾಗಿ ಪ್ರತಿಪಾದಿಸುತ್ತದೆ. ಅವನನ್ನು ಮಾತ್ರ ಆರಾಧಿಸಲು, ಪ್ರಾರ್ಥಿಸಲು ತಾಕೀತು ಮಾಡುತ್ತದೆ. ದೇವನ ಗುಣ ವಿಶೇಷಗಳು ಹಾಗೂ ಅಧಿಕಾರದಲ್ಲಿ ಸಾರ್ವಭೌಮತೆಯಲ್ಲಿ ಭಾಗಿಗಳನ್ನು ಮಾಡುವುದು ಅಕ್ಷಮ್ಯ ಅಪರಾಧವೆಂದು ಪರಿಗಣಿಸುತ್ತದೆ. ಆದ್ದರಿಂದಲೇ ವಿವಿಧ ಕಾರಣಗಳಿಂದ ವಿಗ್ರಹಾರಾಧನೆಯನ್ನು ವಿರೋಧಿಸಬೇಕಾಗುತ್ತದೆ.
1. ದೇವನು ನಿರಾಕಾರನೆಂದೂ, ಅಗೋಚರನೆಂದೂ ಹಿಂದೂ ಧರ್ಮವೂ ಸೇರಿದಂತೆ ಎಲ್ಲಾ ಧರ್ಮಗಳು ಸಾರುತ್ತದೆ.
ಕೇನೋಪನಿಷತ್ನಲ್ಲಿ ಹೀಗೆ ಕಾಣಬಹುದು,
“ಯನ್ಮನಸಾನ ಮನುತೇ ಯೆನಾಹುರ್ಮನೋ ಮತಂ
ತದೇವ ಬ್ರಹ್ಮತ್ವಂ ವಿದ್ದಿತೇದಂ ಯದಿರಮುಪಾಸತೆ’ (1:6)
ಮನಸ್ಸಿಗೆ ಅರ್ಥವಾಗಲು ಸಾಧ್ಯವಾಗದ, ಆದರೆ ಮನಸ್ಸಿಗೆ ಅರ್ಥ ಮಾಡುವ ಸಾಮರ್ಥ್ಯವನ್ನು ನೀಡುವ ಶಕ್ತಿಯೇ ಬ್ರಹ್ಮನೆಂದು ತಿಳಿಯಿರಿ. ಇದುವೇ ‘ಬ್ರಹ್ಮ’ ಎಂದು ಭಾವಿಸಿ ಉಪಾಸನೆ ಮಾಡುವುದು ಯಾವುದೂ ಬ್ರಹ್ಮನಲ್ಲ.
“ಯಚ್ಛಸ್ಥಕ್ಷುಷಾ ನ ಪಶ್ಯತಿ ಯೇ ಚಕ್ಷುಷಿ ಪಶ್ಯತಿ
ತ ದೇವ ಬ್ರಹ್ಮತ್ತಂ ವಿದ್ದಿ ನೇದಂ ಯದಿದ ಮುಪಾಸತೆ’ (127)
ಕಣ್ಣಿನಿಂದ ಕಾಣಲು ಸಾಧ್ಯವಾಗದ, ಕಣ್ಣಿನಿಂದ ಗ್ರಹಿಸಲು ಹೇತುವಾಗಿರುವುದು ಯಾವುದೋ ಅದು ಬ್ರಹ್ಮನೆಂದು ತಿಳಿಯಿರಿ. ಇದು ಬ್ರಹ್ಮನೆಂದು ತಿಳಿದು ಉಪಾಸನೆ ನಡೆಸಲ್ಪಡುವುದು ಬ್ರಹ್ಮನಲ್ಲ.
‘ಯದ್ ಶ್ರೋತೇನ ನ ಶ್ಯನೋತಿ ಯೇನ ಶ್ರೋತ್ರ ಮಿದಂ ಶ್ರುತಂ
ತ ದೇವ ಬ್ರಹ್ಮತ್ವಂ ವಿದ್ದಿನೇದಂ ಯದಿದಮುಪಾಸತೇ’ (1:8)
ಕಿವಿಯಿಂದ ಕೇಳಲು ಸಾಧ್ಯವಿಲ್ಲದ್ದು, ಆದರೆ ಕಿವಿಗೆ ಕೇಳುವ ಸಾಮರ್ಥ್ಯ ನೀಡುವುದು ಯಾವುದೋ ಅದೇ ಬ್ರಹ್ಮನೆಂದು ತಿಳಿಯಿರಿ. ಅದುವೇ ಇದೆಂದು ಭಾವಿ ಆರಾಧನೆ ನಡೆಸುತ್ತಿರುವುದು ಬ್ರಹ್ಮನಲ್ಲ.
ದೇವನು ನಿರಾಕಾರನೆಂದು ಹಿಂದೂ ಧರ್ಮವು ಸ್ಪಷ್ಟಪಡಿಸುತ್ತದೆ.
ಉಪನಿಷತ್ತು ದೇವನನ್ನು ‘ನಿರ್ಗತ ಆಕಾರಾತ್ಸ ನಿರಾಕಾರ’: ‘ಯಾರಿಗೆ ಆಕಾರವಿಲವೋ ಅವನು’ ಎಂದು ತಿಳಿಸಿದೆ. (ಸ್ವಾಮಿ ವಾಗ್ಬಟಾನಂದ ಸರಸ್ವತಿ, ಸತ್ಯಾರ್ಥ ಪ್ರಕಾಶ, ಆರ್ಯ ಪ್ರಾದೇಶಿಕ ಪ್ರತಿನಿಧಿ ಸಭೆ ಪಂಜಾಬ್ ಪುಟ 38)
ಸ್ವಾಮಿ ದಯಾನಂದ ಸರಸ್ವತಿ ಬರೆಯುತ್ತಾರೆ: ‘ಈಶ್ವರನು ನಿರಾಕಾರನಾಗಿದ್ದಾನೆ. ಅವನಿಗೆ ರೂಪವಿದ್ದರೆ ಆತ ಸರ್ವವ್ಯಾಪ್ತಿಯಾಗುತ್ತಿರಲಿಲ್ಲ, ಸರ್ವವ್ಯಾಪ್ತಿಯಲ್ಲದಿದ್ದರೆ ಸರ್ವಜ್ಞನಂತಹ ಗುಣ ಇರಲಾರದು. ಏಕೆಂದರೆ ಅತ್ಯಪೂರ್ವ ವಸ್ತುವಿನಲ್ಲಿರುವ ಗುಣ-ಕರ್ಮ-ಸಭಾವವೂ ಅಪೂರ್ವವಾಗಿರಬೇಕು. ಮಾತ್ರವಲ್ಲ ದೇವನಿಗೆ ಆಕಾರವಿದೆಯೆಂದಾದರೆ ಶೀತ, ಉಷ್ಣ, ರೋಗಗಳು, ಸಮಸ್ಯೆಗಳು, ಅಗಲುವಿಕೆ ಮೊದಲಾದ ಕ್ರಿಯೆಗಳು ಆಗದಿರಲು ಸಾಧ್ಯವಿಲ್ಲ. ಆದ್ದರಿಂದ ದೇವನು ನಿರಾಕಾರನೆಂದೇ ತೀರ್ಮಾನಿಸಬೇಕಾಗಿದೆ.
(ಸತ್ಯಾರ್ಥ ಪ್ರಕಾಶ ಪುಟ 288)
ಪವಿತ್ರ ಕುರ್ಆನ್ ಹೇಳುತ್ತದೆ: ಅಲ್ಲಾಹನು ಸರ್ವವನ್ನೂ ಸೃಷ್ಟಿಸಿದನು ಮತ್ತು ಸಕಲ ವಸ್ತುಗಳ ಜ್ಞಾನವುಳ್ಳವನು. ಅವನೇ ಅಲ್ಲಾಹ್, ನಿಮ್ಮ ಪ್ರಭು, ಅವನ ಹೊರತು ಅನ್ಯ ಆರಾಧ್ಯನಿಲ್ಲ, ಸಕಲ ವಸ್ತುಗಳ ಕರ್ತೃ. ಆದುದರಿಂದ ನೀವು ಅವನ ದಾಸ್ಯ-ಆರಾಧನೆಯನ್ನು ಮಾಡಿರಿ, ಅವನು ಸಕಲ ವಸ್ತುಗಳ ಹೊಣೆಗಾರನು. ದೃಷ್ಟಿಗಳು ಅವನನ್ನು ಕಾಣಲಾರವು. ಆದರೆ ಅವನು ದೃಷ್ಟಿಗಳನ್ನು ಕಾಣುತ್ತಾನೆ. ಅವನು ಅತ್ಯಂತ ಸೂಕ್ಷ್ಮದರ್ಶಿಯೂ, ಸೂಕ್ಷ್ಮಜ್ಞನೂ ಆಗಿರುತ್ತಾನೆ. (ಪವಿತ್ರ ಕುರ್ಆನ್ 6: 101-103)
ನಿರಾಕಾರನೂ, ಅಗೋಚರನೂ ಆಗಿರುವ ದೇವನಿಗೆ ರೂಪವನ್ನು ಕಲ್ಪಿಸುವುದು ಕೃತಕವಾಗಿದೆ. ಮಿಥ್ಯವನ್ನು ಸತ್ಯದೊಂದಿಗೆ ಕಲಬೆರಕೆ ಮಾಡಿದಂತಾಗುತ್ತದೆ. ಇದು ದೇವರ ಕುರಿತು ತಪ್ಪುಕಲ್ಪನೆಯನ್ನು ವಿಶ್ವಾಸಿಗಳಲ್ಲಿ ಮೂಡಿಸುತ್ತದೆ. ಇದು ನಾವು ದೇವನಿಗೆ ಮಾಡುವ ಮಹಾ ಅನ್ಯಾಯವಾಗಿದೆ.
ಈ ಕುರಿತು ಬ್ರಹ್ಮಾನಂದ ಸ್ವಾಮಿ ಶಿವಯೋಗಿ ಬರೆಯುತ್ತಾರೆ: ನಾವು ನಮ್ಮ ತಂದೆ ಅಥವಾ ಗುರುಗಳ ಛಾಯಾ ಚಿತ್ರವನ್ನು ತೆಗೆಯುತ್ತೇವೆ. ಅವರ ಅನುಪಸ್ಥಿತಿಯಲ್ಲಿ ಅದನ್ನು ನೋಡಿ ಸಂತೋಷ ಪಡುತ್ತೇವೆ. ವಂದಿಸುತ್ತೇವೆ. ಅದೇ ರೀತಿ ದೇವಾಲಯಗಳಲ್ಲಿ ದೇವರ ಮೂರ್ತಿಯನ್ನಿಟ್ಟು ಸಂತೋಷ ಪಡುತ್ತೇವೆ, ಪೂಜಿಸುತ್ತೇವೆ. ಹೀಗೆ ಮಾಡದಿದ್ದರೆ ಅಲ್ಪ ಬುದ್ದಿಯವರಿಗೆ ದೇವರು ಇದ್ದಾರೆಂದು ತಿಳಿಯುವುದಾದರೂ ಹೇಗೆ? ಎಂದು ಕಾರ್ಮನ್ ಮಾರ್ ವಾದಿಸುತ್ತಾರೆ. ಇದು ನಿಜವಾಗಿ ಅಸಂಬದ್ಧವಾಗಿದೆ. ತಂದೆ ಯಾ ಗುರುವನ್ನು
ಕಂಡು ಫೋಟೋವನ್ನು ತೆಗೆಯುತ್ತೇವೆ. ಆ ಫೋಟೋದಲ್ಲಿ ಅವರ ರೂಪವಿದೆ. ಆದರೆ ದೇವನಿಗೆ ಆಕಾರವಿಲ್ಲ, ಮತ್ತೆ ಚಿತ್ರ ತೆಗೆದದ್ದಾದರೂ ಹೇಗೆ? ತೆಗೆದವರು ಯಾರು? ಶಿಲ್ಪಿಗಳು ಕಲ್ಲು ಅಥವಾ ಇತರ ವಸ್ತುಗಳಿಂದ ಕೆತ್ತುವುದು ದೇವರ ಚಿತ್ರವೇ? ಹೀಗೆ ನಾನಾ ವಿಗ್ರಹಗಳ ರೂಪದಿಂದ ದೇವಸ್ವರೂಪವನ್ನೂ, ಆರಾಧನಾ ಕ್ರಮವನ್ನೂ ತಪ್ಪು ದಾರಿಗೆಳೆಯುವುದು ದೊಡ್ಡ ಮೂರ್ಖತನವಾಗಿದೆ.
2. ಶ್ರದ್ದೆಯನ್ನು ಕೇಂದ್ರೀಕರಿಸಲು ಅಥವಾ ನೆನಪು ಉಳಿಯಲು ನಮ್ಮಲ್ಲಿ ಮಂಗ ಅಥವಾ ನಾಯಿಗಳ ಚಿತ್ರಗಳು, ಪ್ರತಿಮೆಗಳನ್ನು ಯಾರೂ ನಿರ್ಮಿಸುವುದಿಲ್ಲ, ಅದನ್ನು ನಾವು ಇಷ್ಟಪಡುವುದೂ ಇಲ್ಲ ಏಕೆಂದರೆ ಮಂಗಗಳು ಮತ್ತು ನಾಯಿಗಳು ನಮಗಿಂತ ನಿಕೃಷ್ಟ ದರ್ಜೆಯವು ಎಂದು ನಾವು ಭಾವಿಸುತ್ತೇವೆ. ಅದೇ ರೀತಿ ಪ್ರಪಂಚದ ಎಲ್ಲಾ ವಸ್ತುಗಳೂ, ಸೃಷ್ಟಿಗಳೂ ದೇವನೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲದಂತೆ ನಿಕೃಷ್ಟವಾಗಿದೆ. ಅವುಗಳಲ್ಲಿ ಯಾವುದಾದರೂ ಒಂದನ್ನು ದೇವರನ್ನು ನೆನಪಿಸಲು, ಅವನಲ್ಲಿ ಶ್ರದ್ದೆ ಕೇಂದ್ರೀಕರಿಸಲು ಪ್ರತಿಷ್ಟಾಪಿಸುವುದು ಸೃಷ್ಟಿಕರ್ತನಿಗೆ ನಾವು ಮಾಡುವ ದ್ರೋಹವಾಗಿದೆ. ಆದ್ದರಿಂದ ಇದು ಅಕ್ಷಮ್ಯ ಅಪರಾಧವಾಗಿದೆ.
3. ದೇವನನ್ನು ಆರಾಧಿಸುವ ರೀತಿಯನ್ನು ತಿಳಿಸಬೇಕಾದುದು ಅವನೇ ಆಗಿದ್ದಾನೆ. ವಿಗ್ರಹ, ಪ್ರತಿಮೆಗಳನ್ನು ಸಿದ್ಧಪಡಿಸಿ ತನ್ನನ್ನು ಆರಾಧಿಸಬೇಕೆಂದು ದೇವನು ಹೇಳಿಲ್ಲ ಅಂತಹ ಆರಾಧನಾ ಕ್ರಮವನ್ನು ಕಲಿಸಲೂ ಇಲ್ಲ, ಮಾತ್ರವಲ್ಲ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಆರಾಧಿಸಕೂಡದೆಂದು ಬಹಳ ಕಠಿಣವಾಗಿ ಆದೇಶಿಸಿದ್ದಾರೆ.
4. ಸಾಕ್ಷಾತ್ ದೇವನ ಹೊರತು ಇತರರನ್ನು ಕರೆದು ಪ್ರಾರ್ಥಿಸಬಾರದೆಂದು ಇಸ್ಲಾಮ್ ಧರ್ಮದಂತೆ ಹಿಂದೂ ಧರ್ಮವೂ ಕಲಿಸಿದೆ. ವಿಗ್ರಹಾರಾಧನೆಯು ಬಹುದೇವಾರಾಧನೆಯಲ್ಲ ವೆಂದಾದರೆ ಅನ್ಯ ಆರಾಧ್ಯರೆಂದು ವಿಮರ್ಶಿಸಬೇಕಾಗಿಲ್ಲವಲ್ಲಾ, ಛಂದೋಪನಿಷತ್ನಲ್ಲಿ ಹೀಗೆ ಹೇಳಲಾಗಿದೆ, “ಓಮಿತ್ಯೇ ತದಕ್ಷರ ಮುದ್ಗೀಥಮುಪಾಸೀತ” (ಓಂಕಾರವೆಂಬುದು ಓರ್ವನ ನಾಮಧೇಯವೇ? ಒಮ್ಮೆಯೂ ನಾಶವಾಗದವನನ್ನು ಉಪಾಸನೆ ನಡೆಸಬೇಕು. ಬೇರೆಯವನನ್ನಲ್ಲ) ಪ್ರಸಿದ್ದ ಹಿಂದೂ ಸ್ತೋತ್ರವೊಂದರಲ್ಲಿ ಕಾಣಬಹುದು,
ತ್ವಮೇಕಂ ವರಣ್ಯಂ ತ್ವಮೇಕಂ ಶರಣ್ಯಂ
ತ್ವಮೇಕಂ ಜಗದ್ ಕಾರಣಂ ವಿಶ್ವರೂಪಂ
(ನಿನ್ನನ್ನು ಮಾತ್ರ ನಾವು ಆರಾಧಿಸುತ್ತೇವೆ, ನಿನಗೆ ಮಾತ್ರ ಶರಣಾಗಿದ್ದೇವೆ. ವಿಶ್ವ ಸೃಷ್ಟಿಗೆ ನೀನೇ ಕಾರಣ, ನೀನು ವಿಶ್ವ ಸ್ವರೂಪಿ.) .
ಶ್ವೇ ತಾಶ್ರತರೋಪನಿಷತ್ತಿನಲ್ಲಿ ಹೀಗೆ ಕಾಣಬಹುದು,
‘ತಮೀಶ್ವರಾಣಾಂ ಪರಮಂ ಮಹೇಶ್ವರಂ
ತಂ ದೇವತಾನಾಂ ಪರಮಂ ಚ ದೈವತಂ
ಪತಿಂ ಪತೀನಾಂ ಪರಮಂ ಪರಸ್ತಾತ್
ವಿದಾಮ ದೇವಂ ಭೂವನೇಶಮೀಡ್ಯಂ’ (6-7)
ಅದು ಎಲ್ಲಾ ಈಶ್ವರರ ಮಹಾನನಾದ ಆಜ್ಞಾಧಿಪತಿಯೂ, ಸರ್ವ ದೇವರುಗಳಿಗೆ ಆರಾಧ್ಯನೂ, ಸರ್ವ ಸಂರಕ್ಷಕರ ಸಂರಕ್ಷಕನೂ, ಸಮಸ್ತ ಬ್ರಹ್ಮಾಂಡ ನಾಯಕನೂ ಆಗಿದ್ದಾನೆ. ಸುತ್ಯರ್ಹನೂ ಪ್ರಕಾಶ ಸ್ವರೂಪಿಯೂ ಆಗಿದ್ದು ಎಲ್ಲವುಗಳಿಗಿಂತಲೂ ಅತೀತನೆಂದು ನಾವು ತಿಳಿಯುತ್ತೇವೆ.
ಗೀತೆಯಲ್ಲಿ ಹೀಗಿದೆ:
“ಯಾಂತಿ ದೇವಪ್ರತಾ ದೇವಾನ್ ಪಿತೃನ್ ಯಾಂದಿ ಪಿತೃ ವೃತಾ: ಭೂತಾನಿ ಯಾಂದಿ ಭೂತೇ ಜ್ಯಾಯಾಂತಿ ಮದ್ಯಾಜಿನೋ ಹಮಾಂ’ ದೇವರ ಉಪಾಸನೆ ಮಾಡುವವರು ದೇವರನ್ನು ಒಲಿಸಿಕೊಳ್ಳುತ್ತಾರೆ. ಪಿತೃರನ್ನು ಆರಾಧಿಸುವವರು ಅವರನ್ನು ಧರಿಸುತ್ತಾರೆ. ಭೂತಗಳನ್ನು ಉಪಾಸನೆ ಮಾಡುವವರು ಭೂತಗಳಿಗೆ ತಲುಪುತ್ತಾರೆ. ಆದರೆ ನನ್ನ ಉಪಾಸನೆ ಮಾಡುವವರು ನನ್ನನ್ನು ಪಡೆಯುತ್ತಾರೆ. (ಉದ್ದರಣೆ: ವಿದ್ಯಾವಾ ಚಸ್ಪತಿ, ವಿ. ಪನೋಳಿ ಶ್ರೀ ಶಂಕರ ದರ್ಶನಂ ಪುಟ-91)
ಸ್ವಾಮಿ ದಯಾನಂದ ಸರಸ್ವತಿ ಬರೆಯುತ್ತಾರೆ, ”ಸ್ತುತಿ, ಪ್ರಾರ್ಥನೆ ಹಾಗೂ ಉಪಾಸನೆಗಳನ್ನು ಶ್ರೇಷ್ಠನಾದವನಿಗೆ ಮಾತ್ರ ಮಾಡಬೇಕು. ಗುಣ, ಕರ್ಮ, ಸ್ವಭಾವ, ಪ್ರಾಮಾಣಿಕತೆ ಎಂಬ ವಿಷಯಗಳಲ್ಲಿ ಎಲ್ಲರಿಗಿಂತಲೂ ಉತ್ಕೃಷ್ಟನಾಗಿರುವವನೇ ಶ್ರೇಷ್ಠ ಎಂದು ಹೇಳಬೇಕಾಗಿದೆ. ಯಾರು ಶ್ರೇಷ್ಠರಲ್ಲಿ ಶ್ರೇಷ್ಠನೋ, ಅವನೇ ಪರಮೇಶ್ವರ, ಅವನಿಗಿಂತ ಮಿಗಿಲಾಗಿ ಈ ಮೊದಲು ಯಾರೂ ಉಂಟಾಗಿಲ್ಲ, ಉಂಟಾಗಲು ಸಾಧ್ಯವೂ ಇಲ್ಲ. ಹೀಗಿರುವಾಗ ಅವನಿಗಿಂತ ಶ್ರೇಷ್ಠನು ಇರುವುದು ಹೇಗೆ ಸಾಧ್ಯ.? ಸತ್ಯ, ದಯೆ, ನ್ಯಾಯ, ಶಕ್ತಿ ಸಾಮರ್ಥ್ಯ ಹಾಗೂ ಸರ್ವಜ್ಞನಂತಹ ಅಸಂಖ್ಯಾತ ವಿಶಿಷ್ಟ ಗುಣಗಳು ಇತರ ಜಡವಸ್ತುಗಳಿಗೋ, ಜೀವಾತ್ಮಕ್ಕೋ ಇಲ್ಲ. ಸತ್ಯಸ್ವರೂಪಿಯಾದ, ಪ್ರಕಾಶಿಸುವ ವಸ್ತುವಿನ ಗುಣಕರ್ಮಗಳೂ, ಸಭಾವಗಳೂ ಸತ್ಯವೇ ಆಗಿರುತ್ತದೆ. ಆದ್ದರಿಂದ ಮನುಷ್ಯರೆಲ್ಲ ಪರಮೇಶ್ವರನಿಗೆ ಸ್ತುತಿ, ಪ್ರಾರ್ಥನೆ, ಆರಾಧನೆಯನ್ನು ಮಾಡಬೇಕಾಗಿದೆ. ಬೇರೆ ಯಾರನ್ನೂ ಮಾಡುವಂತಿಲ್ಲ, ಬ್ರಹ್ಮ, ವಿಷ್ಣು ಶಿವ ಎಂಬ ಪುರಾತನ ವಿದ್ವಾಂಸರು, ದೈತ್ಯರು, ದಾನವರಂತಹ ನಿಕೃಷ್ಟ ಮನುಷ್ಯರು ಹಾಗೂ ಸಾಮಾನ್ಯ ಮಾನವರೂ ದೇವನನ್ನೇ ಆರಾಧಿಸಿದ್ದರು. ಅವನ ಉಪಾಸನೆ ಹಾಗೂ ಪ್ರಾರ್ಥನೆಯನ್ನು ನಿರ್ವಹಿಸಿದ್ದರು ಬೇರೆ ಯಾರನ್ನೂ ಪ್ರಾರ್ಥಿಸಿರಲಿಲ್ಲ, ಆದ್ದರಿಂದ ನಾವೆಲ್ಲರೂ ಅದೇ ರೀತಿ ಮಾಡಬೇಕು. (ಸತ್ಯಪ್ರಕಾಶ ಪುಟ 12-13)
ಬ್ರಹ್ಮ ವಿಷ್ಣು ಶಿವ ಎಂಬವರ ಸ್ತುತಿಗಾನ, ಪ್ರಾರ್ಥನೆ, ಉಪಾಸನೆ ಮಾಡಬಾರದೆಂಬುದು ಇದರ ಅರ್ಥ. ಇದೇ ವಿಷಯವನ್ನು ವಾಗ್ಬಟಾನಂದರು ಬಹಳ ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. (ವಾಗ್ಬಟಾನಂದರ ಸಂಪೂರ್ಣ ಕೃತಿಗಳು- ಒಂದನೇ ಆವೃತಿ- ಮಾತೃಭೂಮಿ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಕಂಪೆನಿ ಲಿಮಿಟೆಡ್, ಪುಟ 357-359)
ಬ್ರಹ್ಮಾನಂದ ಸ್ವಾಮಿ ಶಿವಯೋಗಿ ವರಿಷ್ಠರಿಂದ ಉಲ್ಲೇಖಿಸುತ್ತಾರೆ:
‘ನಟ್ಟಕಲ್ಲೆಯ್ ತೈವಮೆನ್ನು ನಾಲು ಪುಷ್ಪಂ ಚಾರ್ತೂರಿರ್
ಚುತ್ತಿವಂದು ಮೊಂಟು ಚೆಲ್ಲುಮಂದಿರ ಮೆ ತ ಕ್ಕಡೋ
ನಟ್ಯಕಲ್ಲು ಪೆಯುಮೋ ನಾದ ತುಳ್ಳಿರುಕ್ಕಯಿಲ್
ಚುಟ್ಟ ಚುಟ್ಟಿ ಚಟ್ಟುಗಂ ಕರಿಚುವೆಯರಿಯುಮೋ
ಒಂದು ಕಲ್ಲನ್ನು ಪ್ರತಿಷ್ಠಾಪಿಸಿ ದೇವರೆಂದು ವಿಶ್ವಾಸದಿಂದ ಪೂಜಿಸಲಾಗುತ್ತದೆ. ಅದಕ್ಕೆ ಪ್ರದಕ್ಷಿಣೆ ಮಾಡಲಾಗುತ್ತದೆ. ಮಂತ್ರ ಜಪಿಸಲಾಗುತ್ತದೆ. ಆದರೆ ಆ ಪ್ರತಿಷ್ಠಾಪಿಸಿದ ಕಲ್ಲಿಗೆ ಅದು ಕೇಳುತ್ತದೆಯೇ? ಪದಾರ್ಥ ಮಾಡುವ ಪಾತ್ರೆ. ಅದಕ್ಕೆ ಹಾಕುವ ಸೌಟು ಪದಾರ್ಥದ ರುಚಿಯನ್ನು ತಿಳಿಯುತ್ತದೆಯೇ? (ವಿಗ್ರಹಾರಾಧನ ಖಂಡನಂ ಪುಟ-1) |
5. ಜನಸಾಮಾನ್ಯರಿಗೆ ಆರಾಧಿಸಲು ವಿಗ್ರಹಗಳು ಅಗತ್ಯವೆಂಬ ವಾದವನ್ನು ಬ್ರಹ್ಮಾನಂದ ಸ್ವಾಮಿ ಶಿವಯೋಗಿಯವರು ಹೀಗೆ ಖಂಡಿಸುತ್ತಾರೆ: “ಮಕ್ಕಳಿಗೆ ಧರಿಸಲು ಸಣ್ಣ ವಸ್ತ್ರವೇ ಬೇಕು, ದೊಡ್ಡ ವಸ್ತ್ರ ಸಾಧ್ಯವಿಲ್ಲ, ಅದೇ ರೀತಿ ಅಲ್ಪಜ್ಞಾನಿಗಳಿಗೆ ವಿಗ್ರಹಾರಾಧನೆ ಬೇಕು. ಬ್ರಹ್ಮ ಧ್ಯಾನ ಸಾಧ್ಯವಾಗುವುದಿಲ್ಲ’ ಎಂದು ವಾದಿಸುತ್ತಾರೆ. ‘ಮಕ್ಕಳಿಗೆ ನೋಡಲು ಸಣ್ಣ ಸೂರ್ಯ ಬೇಕು, ದೊಡ್ಡ ಸೂರ್ಯನ ಬೆಳಕಿನಲ್ಲಿ ನೋಡಿದರೆ ಕಾಣುವುದಿಲ್ಲ’ ಎಂದು ಹೇಳುವಂತೆ ಅಸಂಬದ್ದವಾಗಿದೆ. (ವಿಗ್ರಹಾರಾಧನೆ ಖಂಡನಂ)
6. ವಿಗ್ರಹಾರಾಧಕರಾದ ಬಹುಸಂಖ್ಯಾತ ಜನರು ವಿಗ್ರಹಕ್ಕೆ ವಿಶೇಷವಾದ ಪಾವಿತ್ರ್ಯ ಹಾಗೂ ದಿವ್ಯತ್ವವನ್ನು ಕಲ್ಪಿಸುತ್ತಾರೆ. ಯಾರನ್ನು ಪ್ರತಿಷ್ಠಾಪಿಸಲಾಗಿದೆಯೋ ಅವರ ಚೈತನ್ಯ ಅದರಲ್ಲಿ ಪ್ರವಹಿಸುತ್ತದೆಂದು ವಿಗ್ರಹಾರಾಧಕರ ವಿಶ್ವಾಸ, ಬದಲಾಗಿ ಶ್ರದ್ದೆ ಕೇಂದ್ರೀಕರಿಸುವ ಉದ್ದೇಶ ಮಾತ್ರವೆಂದಾದರೆ ಎದುರುಗಡೆ ಏನಾದರೂ ಇಟ್ಟರೂ ಸಾಕಾಗುತ್ತದೆಯಲ್ಲವೇ? ಮಾತ್ರವಲ್ಲ ವಿಗ್ರಹವನ್ನು ಬದಲಾಯಿಸಿದರೂ ವಿರೋಧಿಸಬೇಕಾಗಿಲ್ಲ, ಆದರೆ ತಾವು ಆರಾಧಿಸುವ ವಿಗ್ರಹಗಳನ್ನು ಬದಲಾಯಿಸುವುದನ್ನು ವಿಶ್ವಾಸಿಗಳಿಗೆ ಊಹಿಸಲೂ ಸಾಧ್ಯವಿಲ್ಲ, ಆದ್ದರಿಂದ ವಿಗ್ರಹಗಳು ದೇವನನ್ನು ನೆನಪಿಸಲು ಹಾಗೂ ಶ್ರದ್ಧೆ ಮೂಡಿಸಲು ಎಂಬ ವಾದ ವಾಸ್ತವವಲ್ಲ. ಅದು ಬಹುದೇವಾರಾಧನೆಯೇ ಆಗಿದೆ. ಆದ್ದರಿಂದ ಛಂದೋಗ್ಯೂಪನಿಷತ್ತು ಮತ್ತು ಸ್ವಾಮಿ ದಯಾನಂದ ಸರಸ್ವತಿ ಹಾಗೂ ವಾಗ್ಬಟಾನಂದ ಗುರುವಿಗೆ ಅನ್ಯದೇವಾರಾಧನೆಯನ್ನು ಎದುರಿಸಬೇಕಾಗಿ ಬಂತು.
8. ಆರಾಧ್ಯನನ್ನು ಅತ್ಯಂತ ಗೌರವಾದರಗಳಿಂದ, ಭಯಭಕ್ತಿಯಿಂದ ಪೂಜಿಸುವ ಕರ್ಮವೇ ಆರಾಧನೆ, ಸೃಷ್ಟಿಗಳಲ್ಲಿ ಶ್ರೇಷ್ಠನಾದ ಮಾನವ ಅದನ್ನು ತನ್ನಂತಹ ಅಥವಾ ತನಗಿಂತ ಕೆಳ ದರ್ಜೆಯವರಿಗೆ ಅರ್ಪಿಸುವುದು ಆತನ ಗೌರವಕ್ಕೂ ಪ್ರತಿಷ್ಟೆಗೂ ನಿಲುಕುವಂತಹದಲ್ಲ. ಆದ್ದರಿಂದ ದೇವೇತರರ ಆರಾಧನೆ ಸ್ವಂತಕ್ಕೆ ಮಾಡುವ ಅತಿಕ್ರಮವೆಂದು ಇಸ್ಲಾಮ್ ಭಾವಿಸುತ್ತದೆ. ಒಟ್ಟಿನಲ್ಲಿ ಸ್ವಾಮಿ ದಯಾನಂದ ಸರಸ್ವತಿ ಸ್ಪಷ್ಟಪಡಿಸಿದಂತೆ ನಮ್ಮಗೌರವ, ಅಭಿಮಾನವನ್ನು ಅದಕ್ಕೆ ಅರ್ಹತೆಯಿರುವವರಿಗೆ ಮಾತ್ರ ಅರ್ಪಿಸಬೇಕು. ಶ್ರೇಷ್ಟತೆ, ಮಹಾನತೆ, ಜ್ಞಾನಶಕ್ತಿ ಎಲ್ಲದರಲ್ಲೂ ಘನತೆಯುಳ್ಳವನು ದೇವನು ಮಾತ್ರ. ಆದ್ದರಿಂದ ಅವನನ್ನು ಮಾತ್ರ ಆರಾಧಿಸಬೇಕು. ಆಗ ಹಕ್ಕು ಅವನಿಗೆ ಮಾತ್ರ ಮೀಸಲು. ದೇವನ ಹಕ್ಕನ್ನು ಇತರರಿಗೆ ನೀಡುವುದು ದೇವಧಿಕ್ಕಾರವೂ ಇತರರನ್ನು ದೇವತ್ವಕ್ಕೆ ಏರಿಸಿದಂತೆಯೂ ಆಗುತ್ತದೆ. ವಿಗ್ರಹಾರಾಧನೆಯನ್ನು ಮಹಾ ಪಾಪ ಎಂದು ಹೇಳಲು ಇದೇ ಕಾರಣವಾಗಿದೆ.
‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ
IslamKannada News Portal