Home / ಲೇಖನಗಳು / ಮಹಿಳಾ ದಿನಾಚಾರಣೆ ಮತ್ತು ಮಹಿಳೆ

ಮಹಿಳಾ ದಿನಾಚಾರಣೆ ಮತ್ತು ಮಹಿಳೆ

@ ನಝೀರ್ ಅಹ್ಮದ್ ಕಾಜಿ, ವಿಜಯಪುರ

ಮಾರ್ಚ್ 8 ಬಂದರೆ ಸಾಕು ಮಹಿಳೆಯರಿಗೆ ಸನ್ಮಾನ, ಪುರಸ್ಕಾರದಂತಹ ಸಮಾರಂಭಗಳು ಜೋರಾಗಿಯೇ ನಡೆಯುತ್ತವೆ. ಇವತ್ತು ಜಗತ್ತಿನ ಪ್ರತಿಯೊಂದು ದೇಶದಲ್ಲಿ ಮಹಿಳಾ ದಿನಾಚರಣೆ ಬಹಳ ಹೆಮ್ಮೆಯಿಂದ, ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಆದರೆ ಆ ದಿನದ ಬಳಿಕ ಮತ್ತೆ ಯಥಾ ರೀತಿ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಅತ್ಯಾಚಾರದಂತಹ ವಿಕೃತ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿವೆ. ನಾವು ಇವತ್ತು ಮಹಿಳೆಯರ ಮೇಲೆ ಆಗುವ ಅತ್ಯಾಚಾರಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದೇವೆ. ಮಹಿಳೆಯರೊಂದಿಗೆ ಅನುಚಿತ ವರ್ತನೆ, ಹಿಂಸೆ ದೌರ್ಜನ್ಯ, ತಮ್ಮವರಿಂದಲೇ ಅತ್ಯಾಚಾರ, ಪ್ರಗತಿಯ ಹೆಸರಿನಲ್ಲಿ ಮಾನಹರಣ ಮತ್ತು ಶೋಷಣೆ ವ್ಯಾಪಕವಾಗುತ್ತಿರುವುದು ಅತ್ಯಂತ ದುಃಖಕರ ಅಂಶವಾಗಿದೆ. ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ  ದೇವತೆಗಳು ವಾಸ ಮಾಡುತ್ತಾರೆ ಅಂತ ಹಿಂದು ಧರ್ಮ ಹೇಳುತ್ತದೆ. ಆದ ಕಾರಣ ಮಹಿಳಾ ದಿನಾಚರಣೆ ಕೇವಲ ಆಚರಣೆಗೆ ಸೀಮಿತಗೊಳಿಸದೇ ಮಹಿಳೆಯರಿಗೆ ಭಯ ಮುಕ್ತ ವಾತಾವರಣದಲ್ಲಿ ನಿರ್ಮಿಸಬೇಕು.

ಪ್ರತಿ 15 ನಿಮಿಷಕ್ಕೆ ಓರ್ವ ಹೆಣ್ಣು ಅತ್ಯಾಚಾರಕ್ಕೆ ಒಳಗಾಗುತ್ತಾಳೆ. 2015ರ ಅಂಕಿ ಅಂಶಗಳ ಪ್ರಕಾರ 147,000 ಅತ್ಯಾಚಾರಗಳಾಗಿವೆ. ಇದರಲ್ಲಿ ರಾಜ್ಯಕ್ಕೆ 6ನೇ ಸ್ಥಾನ. ಕರ್ನಾಟಕದಲ್ಲಿ 5 ವರುಷದಲ್ಲಿ  14300 ಮಂದಿ ಮಹಿಳಾ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಕೇವಲ ಕೆಲವು ನೂರು ಜನರಿಗೆ ಮಾತ್ರ ಶಿಕ್ಷೆಯಾಗಿದೆ.

ಮಹಾತ್ಮಾಗಾಂಧಿ ಹೇಳಿದ ಮಾತು “ನಾನು ಹೆಣ್ಣಾಗಿ ಹುಟ್ಟಿದ್ದರೆ, ಹೆಣ್ಣನ್ನು ಆಟಿಕೆಯೆಂದು ತಿಳಿಯುವ ಗಂಡಸಿನ ವರ್ತನೆಗಳ ವಿರುದ್ಧ ಸಿಡಿದೇಳುತ್ತಿದ್ದೆ. ಅದೇ ತರಹ ಅವರು ಹೇಳಿದ್ದು ಇನ್ನೊಂದು ಮಾತು, ದೇಶಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿತು. ಆದರೆ ಯಾವಾಗ ನಮ್ಮ ಮಹಿಳೆ ಒಂಟಿಯಾಗಿ ಧೈರ್ಯವಾಗಿ ದೇಶದ ಊರು, ಪಟ್ಟಣಗಳಲ್ಲಿ ಹಗಲು ರಾತ್ರಿ ಭಯ ಭೀತಳಾಗದೇ ಪ್ರಯಾಣ ಮಾಡಿಸುವ ವಾತಾವರಣ ನಿರ್ಮಾಣವಾಗುತ್ತದೋ ಆ ದಿನ ಹೆಮ್ಮೆಯಿಂದ ನಾನು ಹೇಳಬಲ್ಲೆ ದೇಶ ಸ್ವಾತಂತ್ರ್ಯವಾಯಿತು.

ಕ್ರಾಂತಿಕಾರಿ ಬಸವಣ್ಣನವರು ಹೇಳಿದ ಮಾತು, ನಾನು ಹಾವಿಗೆ, ಬೆಂಕಿಗೆ, ಖಡ್ಗಕ್ಕೆ ಇತ್ಯಾದಿಗಳಿಗೆ ಅಂದರೆ ನನ್ನನ್ನು ಕೊಲ್ಲುವ ಯಾವ ವಸ್ತುಗಳಿಗೂ ಹೆದರುವುದಿಲ್ಲ. ಆದರೆ ನಾನು ಪರಸ್ತ್ರೀಗೆ ಮಾತ್ರ ಹೆದರುತ್ತೇನೆ. ಗೌತಮ ಬುದ್ಧ ಹೇಳಿದ ಮಾತು, ವ್ಯಭಿಚಾರ ಎಂದೂ ಮಾಡ ಕೂಡದು.

ಪ್ರವಾದಿ ಮುಹಮ್ಮದ್(ಸ) ಹೇಳಿದರು ನೀವು ನಿಮ್ಮ ಗುಪ್ತಾಂಗಗಳನ್ನು ರಕ್ಷಿಸಿರಿ. ವ್ಯಭಿಚಾರವಾಗದಂತೆ ನೋಡಿಕೊಳ್ಳಿರಿ. ಯಾರ ಯೌವನವು ವಿಪತ್ತುಗಳಿಂದ ಸುರಕ್ಷಿತವಾಗಿರುವುದೋ ಅದು ಸ್ವರ್ಗಕ್ಕೆ ಅರ್ಹವಾಗಿದೆ. ಪ್ರವಾದಿ ಮುಹಮ್ಮದ್(ಸ) ಹೇಳಿದರು, ತನ್ನ ನಾಲಿಗೆ ಮತ್ತು ಗುಪ್ತಾಂಗಗಳ ಬಗ್ಗೆ  (ಅವುಗಳನ್ನು ಪಾಪ ಕಾರ್ಯಗಳಿಗೆ ಉಪಯೋಗಿಸದಂತೆ ರಕ್ಷಿಸುವೆನೆಂದು) ಯಾರಾದರೂ ವಾಗ್ದಾನ ಕೊಟ್ಟರೆ ನಾನು ಅವರಿಗೆ ಸ್ವರ್ಗದ ವಾಗ್ದಾನ ನೀಡುವೆನು. (ಬುಖಾರಿ)

“ಕಾಮಾತು ರಾಣಾಂನ ಲಜ್ಜಾನ ಭಯಂ” ಕಾಮದಿಂದ ಆವರಿಸಲ್ಪಟ್ಟ ವ್ಯಕ್ತಿಗೆ ಭಯ ಲಜ್ಜೆ ಯಾವುದೂ ಇರುವುದಿಲ್ಲ, ಕಣ್ಣಿಗೆ ಕಾಣುವ ಎಲ್ಲ ಸ್ತ್ರೀಯರ ಬಗ್ಗೆ ಮೋಹಿತರಾದರೆ ದೌರ್ಜನ್ಯಕ್ಕೆ  ಕಾರಣವಾಗುತ್ತದೆ. ನಾವು ಕಾಮ ಕ್ರೋಧಗಳನ್ನು ಗೆಲ್ಲಬೇಕು. ಇವತ್ತಿನ ನಮ್ಮ ಯುವ ಜನಾಂಗ ನಾಳಿನ ನಮ್ಮ ದೇಶದ ನಾಗರಿಕರು ಎಂಬುದನ್ನು ಮರೆಯಬಾರದು. ಆಧುನಿಕಕತೆಯ ಮೋಜು ಎಂಬ  ಭ್ರಮೆಯಲ್ಲಿರುವ ನಮ್ಮ ಯುವ ಪೀಳಿಗೆಗೆ ಇದಕ್ಕೆ ಮುಂದೆ ಎಂತಹ ಬೆಲೆ ತೆರ ಬೇಕಾಗಬಹುದು ಎಂಬ ಪರಿವೆಯೆ ಇಲ್ಲ. ನಾವು ಕಾಮ ಕ್ರೋಧಗಳನ್ನು ತೊರೆದವರು, ಸಂಪತ್ತನ್ನು ಜರಿದವರು. ಸದಾ ಆ ಭಗವಂತನ ಸ್ಮರಣೆ ಮಾಡುವವರು. ಗೆಲ್ಲಲು ಬೇಕಾಗಿರುವುದು ವಸ್ತುನಿಷ್ಠವಾದ ಆಲೋಚನೆ ಮತ್ತು ಸಹನೆ. ಇವೆರಡನ್ನೂ ಗೆದ್ದವನು, ಯಶಸ್ವಿಯೂ, ಸಜ್ಜನನೂ, ಮೂಮಿನನೂ ಆಗುತ್ತಾನೆ.

ಇವತ್ತು ಮಹಿಳೆಯರ ಮೇಲೆ ಆಗುತ್ತಿರುವ ಅತ್ಯಾಚಾರಗಳಿಗೆ ಮಾದಕ ವಸ್ತುಗಳೂ ಕಾರಣ. ಚಿಪ್ಸ್, ಚಾಕಲೇಟ್, ಸಿಗುವ ರೀತಿಯಲ್ಲಿ ಶಾಲಾ ಕಾಲೇಜುಗಳ ಆಸು ಪಾಸಿನಲ್ಲಿ ಮಾದಕ ದ್ರವ್ಯಗಳನ್ನು ಅತೀ ಸುಲಭವಾಗಿ ಹರೆಯದ ಹುಡುಗ/ಹುಡುಗಿಯರಿಗೆ ಮಾರಲಾಗುತ್ತಿರುವ ಆತಂಕಕಾರಿ ಸುದ್ದಿಗಳಿವೆ. ಮಾದಕ ಪದಾರ್ಥಗಳ ಮಾರಾಟ ನಿಷೇಧವಿದ್ದರೂ ಕಾನೂನಿನ ಕಣ್ಣು ತಪ್ಪಿಸಿ ಅನೇಕ ಜನರು ಮಾರಾಟ ಮಾಡುತ್ತಿದ್ದಾರೆ. ಇನ್ನು ಮಾದಕ ಪದಾರ್ಥಗಳ ಮಾರಾಟ ಸ್ಥಗಿತಗೊಳಿಸುವ ಕೆಲಸ ಕೇವಲ ಪೊಲೀಸ್ ಹಾಗೂ ಸರಕಾರಕ್ಕೆ ಸಂಬಂಧಿಸಿದ್ದು ಎನ್ನುವ ಮನೋಭಾವನೆಯಿಂದ ಸಾರ್ವಜನಿಕರು ಹೊರ ಬಂದು ನಮ್ಮ ಯುವ ಜನಾಂಗವನ್ನು ಮಾದಕ ವಸ್ತುಗಳಿಂದ ದೂರವಿರಿಸುವ ಕಾರ್ಯ ಮಾಡಬೇಕಾಗಿದೆ.

ಸಂಪೂರ್ಣ ಪಾನ ನಿಷೇಧದ ಕುರಿತು ಒಲವಿದ್ದ ಮಹಾತ್ಮ ಗಾಂಧೀಜಿಯವರ ತತ್ವಗಳನ್ನು ಸರಕಾರ ಒಂದೆಡೆ ಜಪಿಸುತ್ತಾ ಮತ್ತೊಂದೆಡೆ ಸಾರಾಯಿ ಮಾರಾಟಕ್ಕೆ ಪ್ರೋತ್ಸಾಹಿಸುವ ಈ ದ್ವಂದ್ವ ನೀತಿ ಯಾಕೆ?  ಯಾಕೆಂದರೆ ಇವತ್ತು ಎಲ್ಲ ಮಹಿಳೆಯರ ಮೇಲಿನ ಅತ್ಯಾಚಾರ, ಅನಾಹುತಗಳಿಗೆ ಮಾದಕ ದ್ರವ್ಯಗಳು, ಮದ್ಯವೇ ಕಾರಣ ಮತ್ತು ಮದ್ಯ ಸೇವನೆ ಎಲ್ಲ ಕೆಡಕುಗಳ ತಾಯಿ (MOTHER OF ALL EVILS) ಅಂತ ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ.

ನಮ್ಮ ದೇಶದಲ್ಲಿ ಕೋಟಿ ಗಟ್ಟಲೆ ಮದ್ಯಪಾನಿಗಳಿದ್ದಾರೆ. ನಾವಿಂದು ಅನುಭವಿಸುತ್ತಿರುವ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಲೈಂಗಿಕ ಅರಾಜಕತೆಯಾಗಿದೆ. ಇಸ್ಲಾಮ್ ಮಹಿಳೆಯರಲ್ಲಿ ವಿದ್ಯೆಯ ಬಗೆಗೆ ಅಪಾರ ಕಾಳಜಿಯನ್ನುಂಟು ಮಾಡುತ್ತದೆ. ಮಹಿಳೆಗೆ ಕೇವಲ ಧರ್ಮದ ಮೂಲಭೂತ ನಿಯಮಗಳು ಮಾತ್ರ ತಿಳಿದರೆ ಸಾಕೆಂದು ಪ್ರವಾದಿ(ಸ)  ಬಗೆಯಲಿಲ್ಲ. ಓದು ಬರಹವೂ ಆಕೆಗೆ ಅನಿವಾರ್ಯವೆಂದು ಪ್ರವಾದಿ ಮುಹಮ್ಮದ್(ಸ) ಆದೇಶಿಸುವರು.  ತಾಯಿಯ ಪಾದದ ಅಡಿಯಲ್ಲಿ ಸ್ವರ್ಗವಿದೆ ಎಂದು ಪ್ರವಾದಿ ಹೇಳಿದ್ದಾರೆ.

ಇವತ್ತಿನ ಆಧುನಿಕ  ಜಗತ್ತಿನಲ್ಲಿ ಮಹಿಳೆ ಸಂತೋಷವಾಗಿದ್ದಾಳೆಯೇ? ಇವತ್ತು ಮಹಿಳೆಯು ಸೌಂದರ್ಯ, ಸ್ಪರ್ಧೆ, ಫ್ಯಾಶನ್ ಶೋ ರೂಪದರ್ಶಿ, ಅರೆ ನಗ್ನ ಬಟ್ಟೆ ತೊಟ್ಟು ಕ್ರೀಡೆಗಳಲ್ಲಿ ಭಾಗವಹಿಸುವುದೇ ತನ್ನ ಸ್ವಾತಂತ್ರ್ಯ ಎಂದು ಬಗೆದಿದ್ದಾಳೆ.  ತನ್ನ ಪ್ರಮುಖ ಕಾರ್ಯ ಕ್ಷೇತ್ರವಾದ ಕುಟುಂಬದ ಬಗ್ಗೆ ಸಂಪೂರ್ಣ ಗಮನ ಕೊಡುವುದು ಅವಳಿಂದ ಸಾಧ್ಯವಾಗುತ್ತಿಲ್ಲ. ಇವತ್ತು ಗಂಡು ಹೆಂಡತಿ ಎಲ್ಲರೂ ನೌಕರಿಗೆ  ಹೋಗಬೇಕು. ಹೆತ್ತವರ ಅನುಪಸ್ಥಿತಿಯ ಕಾರಣ ಮಕ್ಕಳಲ್ಲಿ ತರತರವಾದ ಕೆಡುಕುಗಳು ಹರಡತೊಡಗಿವೆ. ಜ್ಞಾನವು ಐಕ್ಯತೆಗೆ ಒಯ್ಯುವುದು. ಅಜ್ಞಾನವು ಭಿನ್ನತೆಗೆ ಒಯ್ಯುವುದು, ರಾಮಕೃಷ್ಣ ಪರಮಹಂಸ  ಹೇಳಿದ್ದಾರೆ. ಪುರುಷರಿಗೆ ಸ್ತ್ರೀಯರ ಮೇಲೆ ಹಕ್ಕಿರುವ ಹಾಗೆಯೇ ಸ್ತ್ರೀಯರಿಗೂ ಪುರುಷರ ಮೇಲೆ ನ್ಯಾಯೋಜಿತ ಹಕ್ಕು ಇದೆ ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ.
ಇವತ್ತು ಮಹಿಳೆಯನ್ನು ನಗ್ನಗೊಳಿಸಿ, ಆಕೆಯನ್ನು ಹೊಗಳಿ, ಪ್ರಶಸ್ತಿಗಳನ್ನು ಕೊಟ್ಟು ಸಮಾಜ ಸಂತೋಷ ಪಡುತ್ತದೆ. ಆಕೆಯ ಅರೆ ನಗ್ನ ದೇಹವನ್ನು ಪದೇ ಪದೇ ವೀಕ್ಷಿಸಿ ಪುರುಷ ಸಮೂಹ ಕಾಲ್ಪನಿಕ  ರೀತಿಯಲ್ಲಿ ವ್ಯಭಿಚಾರ ಮಾಡುತ್ತಿದೆ. ಪವಿತ್ರ ಕುರಆನ್‍ನ ಅನ್ನೂರ್ ಅಧ್ಯಾಯ 30-31 ಸೂಕ್ತಿಯಲ್ಲಿ “ಓ ಪೈಗಂಬರರೇ ಸತ್ಯವಿಶ್ವಾಸಿ ಪುರಷರಿಗೆ ತಿಳಿಸಿ, ಅವರು ತಮ್ಮ ದೃಷ್ಟಿಗಳನ್ನು ಕೆಳಗಿರಿಸಲಿ, ತಮ್ಮ  ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ.” ಪುರುಷ ಸ್ತ್ರೀ ಮನುಷ್ಯನ ಎರಡು ಕಣ್ಣುಗಳು ಇದ್ದಂತೆ ದ್ವೀಚಕ್ರ ವಾಹನದ ಎರಡು ಚಕ್ರಗಳು ಇದ್ದ ಹಾಗೆ.

ಅತ್ಯಾಚಾರ ತಡೆಗೆ ಅಧ್ಯಯನ ಅಗತ್ಯ, ಅತ್ಯಾಚಾರ ನಡೆದಾಗಲೆಲ್ಲ ಅತ್ಯಾಚಾರಿಗಳಿಗೆ ಎಷ್ಟು ಕಠಿಣ ಶಿಕ್ಷೆ ನೀಡಬೇಕು ಎನ್ನುವ ವಿಷಯದ ಬಗ್ಗೆ ಪೈಪೋಟಿಗಳ ಮೇಲೆ ಚರ್ಚೆಗಳಾಗುತ್ತಿವೆ. ಆದರೆ ಕೇವಲ ಕಾನೂನು ಮಾಡುವ ಬದಲು ಇಂತಹ ಅಹಿತಕರ ಘಟನೆಗಳಿಗೆ ಕಾರಣವಾಗುತ್ತಿರುವ ಸಾಮಾಜಿಕ, ನೈತಿಕ, ಸಾಂಸ್ಕ್ರತಿಕ ಹಾಗೂ ಮನಃಶಾಸ್ತ್ರೀಯ ಅಧ್ಯಯನ ಮಾಡಿ ಮುಂದೆ ಅತ್ಯಾಚಾರಗಳು ನಡೆಯದಂತೆ ಪರಿಹಾರ ಕಂಡುಕೊಳ್ಳುವುದು ಪ್ರತಿಯೊಬ್ಬರ ಕೆಲಸವಾಗಿದೆ. ಎಲ್ಲಿಯವರೆಗೆ ಮಹಿಳೆಯನ್ನು ದೇಹ ಮಾತ್ರ ಎಂದು ಪರಿಗಣಿಸಲಾಗುತ್ತದೆಯೋ ಅಲ್ಲಿಯವರೆಗೂ ಈ ದೌರ್ಜನ್ಯ ನಿರಂತರ

ಯಾವಾಗಲೂ ಮಹಿಳೆಯ ಪ್ರೀತಿಯಿಂದಲೇ ಕುಟುಂಬ ಕಟ್ಟಲ್ಪಡುತ್ತದೆ. ಅದೇ ಕುಟುಂಬದ ಕೇಂದ್ರ ಬಿಂದು ಕೂಡ.

ಮಹಿಳೆಯ ಸ್ಥಿತಿಗತಿಗಳು ಸುಧಾರಿಸದೇ ಜಗತ್ತಿನ ಅಭಿವೃದ್ಧಿ ಸಾಧ್ಯವಿಲ್ಲ. ಹಕ್ಕಿಗೆ ಒಂದೇ ರೆಕ್ಕೆಯಿಂದ ಹಾರಾಟ ನಡೆಸಲು ಸಾಧ್ಯವಿಲ್ಲ. ಗ್ರೀಕ್ ರೋಮನ್  ಸಂಸ್ಕ್ರತಿಗಳು ನಾಶ ಹೊಂದಲು ಮುಖ್ಯ ಕಾರಣ ನೈತಿಕ ಅಧಃಪತನ ಮತ್ತು ಲೈಂಗಿಕ ಅರಾಜಕತೆಯಾಗಿತ್ತು. ಕೇವಲ ಸರಕಾರವನ್ನು ದೋಷಿಸದೇ ನಾವೆಲ್ಲರೂ ಕೂಡ ಇದನ್ನು ತಡೆಯಲು ಪ್ರಯತ್ನ ಮಾಡಬೇಕು. ಅತ್ಯಾಚಾರಕ್ಕೆ ಯಾವುದೇ ಧರ್ಮ ಇರುವುದಿಲ್ಲ. ಪುರುಷರು, ಸ್ತ್ರೀಯರು ತಮ್ಮ ಹಕ್ಕುಗಳನ್ನು ಅರಿತು ತಮ್ಮ ತಮ್ಮ ಕರ್ತವ್ಯಗಳನ್ನು ಪಾಲಿಸುತ್ತಾ ದೇವ ಭಯ ಹೊಂದಿದರೆ ಮಾತ್ರ ಸಮಾಜವು ಆರೋಗ್ಯಕರವಾಗುವುದು. ಮಾನವನ ಪ್ರಗತಿ ಮತ್ತು ಸಾಧನೆಗಳ ಹಿಂದೆ ಹಾಗೂ ಜೀವನದ ಸತ್ವ ಪರೀಕ್ಷೆಗಳನ್ನು ಎದುರಿಸಿ ಮುಂದೆ ಸಾಗುವುದರಲ್ಲಿ ಮಹಿಳೆಯ ಸುವ್ಯಕ್ತ ಪಾತ್ರವಿತ್ತೆಂಬುದಕ್ಕೆ ಇತಿಹಾಸದಲ್ಲಿ ಸಾಕಷ್ಟು ಸಾಕ್ಷ್ಯಗಳಿವೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …