ಸತ್ಯವಿಶ್ವಾಸಿಗಳ ಅತ್ಯಂತ ಸುಪ್ರಧಾನವಾದ ಆರ್ಥಿಕ ಹೊಣೆಗಾರಿಕೆಯೆಂದು ಪವಿತ್ರ ಕುರ್ಆನ್ ಝಕಾತನ್ನು ಎತ್ತಿ ತೋರಿಸುತ್ತದೆ. ಇಸ್ಲಾಮಿನ ಪಂಚ ಆಧಾರ ಸ್ತಂಭಗಳಲ್ಲಿ ಒಂದೆಂದು ಪ್ರವಾದಿ(ಸ)ರು ಕಲಿಸಿಕೊಟ್ಟಿದ್ದಾರೆ. ಪವಿತ್ರ ಕುರ್ಆನ್ನ ಹೆಚ್ಚಿನ ಕಡೆಗಳಲ್ಲಿ ನಮಾಝ್ ನೊಂದಿಗೆ ಝಕಾತನ್ನು ಸೇರಿಸಿ ಹೇಳಲಾಗಿದೆ. ನಮಾಝನ್ನು ಅದರ ಸಂಪೂರ್ಣ ಚೈತನ್ಯದೊಂದಿಗೆ ನೆರವೇರಿಸುವ ವ್ಯಕ್ತಿಯು ಝಕಾತನ್ನು ಸರಿಯಾಗಿ ಪಾವತಿಸುತ್ತಾನೆ ಎಂಬುದೇ ಅದರ ತಿರುಳು.
ಆದರೆ ಇಂದು ಮುಸ್ಲಿಮ್ ಸಮುದಾಯದಲ್ಲಿ ನಮಾಝ್ನ ಕುರಿತು ಸೂಕ್ಷ್ಮತೆಯನ್ನು ಪಾಲಿಸುವವರ ಸಂಖ್ಯೆ ಅಧಿಕವಿದ್ದು ಝಕಾತ್ನ ವಿಷಯದಲ್ಲಿ ನಿಷ್ಠೆ ತೋರಿಸುವವರು ಕಡಿಮೆಯಿದ್ದಾರೆ. ಈ ವಿರೋಧಾಭಾಸ ಹಲವಾರು ವರ್ಷಗಳಿಂದ ಕಂಡು ಬರುತ್ತಾ ಇದೆ. ಗೋಧಿ, ಜವೆ, ಖರ್ಜೂರ, ದ್ರಾಕ್ಷೆ ಮೊದಲಾದ ಒಣಗಿಸಿ ದಾಸ್ತಾನಿರಿಸಬಹುದಾದ ವಸ್ತುಗಳಿಗೆ ಮಾತ್ರ ಪ್ರವಾದಿ(ಸ)ರು ಝಕಾತನ್ನು ಪಡೆಯುತ್ತಿದ್ದರೆಂದೂ, ಆದ್ದರಿಂದ ಇತರ ಉತ್ಪನ್ನಗಳಿರುವ ಈ ಕಾಲದಲ್ಲಿ ಅದೆಷ್ಟೇ ಲಾಭದಾಯಕವಾದುದೇ ಆಗಿದ್ದರೂ ಝಕಾತ್ನ ಪರಿಧಿಯೊಳಗೆ ಬರುವುದಿಲ್ಲವೆಂಬ ವಿಚಿತ್ರ ವಾದಗಳು ಇಂದೂ ಕೂಡಾ ಹಲವು ಕಡೆಗಳಲ್ಲಿ ಕೇಳಿ ಬರುತ್ತಿದೆ. ಅದಕ್ಕೆ ಆಧಾರವಾಗಿ ಫಿಕ್ಹ್ ಗ್ರಂಥಗಳನ್ನು ಉಲ್ಲೇಖಿಸಲಾಗುತ್ತದೆ. ಝಕಾತನ್ನು ಅವಗಣಿಸಲು ಮತ್ತು ರಮಝಾನ್ನ ಕೊನೆಯ ದಿನಗಳಲ್ಲಿ ನೀಡುವಂತಹ ಒಂದು ಆಚಾರ ಕರ್ಮವೆಂಬ ರೀತಿಯಲ್ಲಿ ಉಳಿಯಲು ಇಂತಹ ವಾದಗಳು ಪ್ರಧಾನ ಪಾತ್ರ ವಹಿಸುತ್ತವೆ.
ಝಕಾತ್ ಅನ್ನು ಯಾವ ಕಾರಣಕ್ಕಾಗಿ ಇಸ್ಲಾಮಿನ ಆಧಾರ ಸ್ತಂಭದಲ್ಲೊಂದಾಗಿ ನಿಶ್ಚಯಿಸಲಾಗಿದೆಯೋ ಆ ಉನ್ನತ ಧ್ಯೇಯವನ್ನು ಕೆಡಿಸುವಲ್ಲಿ ಇಂತಹ ಆಧಾರರಹಿತ ವಾದಗಳು ಕಾರಣವಾಗುತ್ತದೆ. ಪ್ರವಾದಿಯವರು(ಸ) ತನ್ನ ಕಾಲದ ಆರ್ಥಿಕ ಮೂಲಗಳಾದ ಎಲ್ಲವುಗಳ ಮೇಲೂ ಝಕಾತ್ ಕಡ್ಡಾಯಗೊಳಿಸಿದ್ದರು. ನಾಗರಿಕತೆ ಬೆಳೆದು ಬಂದಂತೆ ವರಮಾನಗಳ ಮೂಲಗಳು ಬದಲಾಗುತ್ತದೆ. ಮಾತ್ರವಲ್ಲ ಮೌಲ್ಯಗಳಿಲ್ಲದ ಉತ್ಪನ್ನಗಳು ಆರ್ಥಿಕ ಮೌಲ್ಯಗಳು ಹೆಚ್ಚುವುದು ಸ್ವಾಭಾವಿಕವಾದುದು ಮಾತ್ರವಲ್ಲ, ಪ್ರತಿಯೊಂದು ದೇಶದ ರಾಜ್ಯಗಳ ಆರ್ಥಿಕ ಮೂಲಗಳು, ಬೆಳೆಗಳು, ವರಮಾನ ಮಾರ್ಗಗಳೂ ಬೇರೆ ಬೇರೆಯಾಗಿರುತ್ತವೆ.
ಪ್ರವಾದಿಯವರು(ಸ) ಆ ಕಾಲದ ವಾಣಿಜ್ಯ ಬೆಳೆಗಳ ಹೆಸರನ್ನು ಸೂಚಿಸಿದ್ದರು. ಅಂದರೆ ನಾವು ಕೂಡ ಇಂದು ನಮ್ಮಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನು ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಹಳೆಯ ಅರೇಬಿಯನ್ ಸಮೂಹದಲ್ಲಿ ಚಾಲ್ತಿಯಲ್ಲಿದ್ದ ಒಂದು ವ್ಯವಸ್ಥೆಯೆಂದು ಝಕಾತನ್ನು ಮತ್ತು ಇಸ್ಲಾಮನ್ನು ವ್ಯಾಖ್ಯಾನಿಸಬೇಕಾಗುತ್ತದೆ. ಇಸ್ಲಾಮ್ ಅಂತ್ಯ ದಿನದವರೆಗೂ ಸಕಲ ಮಾನವರಿಗೆ ಜೀವನ ವ್ಯವಸ್ಥೆಯಾಗಿದೆ ಎಂಬ ಕುರ್ಆನ್ನ ಘೋಷಣೆಗೆ ಇದು ತದ್ವಿರುದ್ಧವಾಗಿದೆ. ಝಕಾತ್ನ ಕುರಿತು ಕುರ್ಆನ್ನಲ್ಲಿ ಸೂಚಿಸಿರುವ ವಿಷಯಗಳನ್ನು ಗಮನಿಸುವಾಗ ನಮ್ಮ ಸಂಪೂರ್ಣ ವರಮಾನವು ಝಕಾತ್ನ ಪರಿಧಿಯಲ್ಲಿ ಬರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. “ನೀವು ಅವರ ಸಂಪತ್ತುಗಳಿಂದ ದಾನ-ಧರ್ಮಗಳನ್ನು ಪಡೆದು ಅವರನ್ನು ಶುದ್ಧೀಕರಿಸಿರಿ.” (9:103) “ನಿಮ್ಮ ಸಂಪತ್ತಿನಿಂದ ಮತ್ತು ಉತ್ಪಾದನೆಗಳಿಂದ ಉತ್ತಮವಾದುದನ್ನು ದೇವ ಮಾರ್ಗದಲ್ಲಿ ಖರ್ಚು ಮಾಡಿರಿ.” (2:267) “ಬೆಳೆಯನ್ನು ಕೊಯ್ದಾಗ ಅಲ್ಲಾಹನ ಹಕ್ಕು ಸಂದಾಯ ಮಾಡಿರಿ.” (6:141) ಮೊದಲಾದ ಕುರ್ಆನ್ನ ಶೈ ಲಿಯು ಆರ್ಥಿಕ ವ್ಯವಹಾರಗಳನ್ನು ಒಳಗೊಂಡಿದೆಯೆಂದು ಇಮಾಮ್ ಅಬೂ ಹನೀಫರಂತಹ ಹಿಂದಿನ ಕಾಲದ ವಿದ್ವಾಂಸರು ಸಮರ್ಥಿಸಿದ್ದಾರೆ. ಏನಿದ್ದರೂ ಝಕಾತ್ನ ಕುರಿತು ಮುಸ್ಲಿಮ್ ಸಮುದಾಯವು ಇದುವರೆಗೆ ತಳೆದಿರುವ ನಿಲುವುಗಳಲ್ಲಿ ವೇಗವಾಗಿ ಮಾರ್ಪಾಡು ಕಂಡುಬರುತ್ತಿದೆ ಎಂಬುದು ಸಂತೋಷಕರ ವಿಚಾರವಾಗಿದೆ.
ಕೋವಿಡ್- 19 ಎಂಬ ಮಹಾ ರೋಗವನ್ನು ಎದುರಿಸುವ ಒಂದು ಪ್ರಬಲ ಆಯುಧವಾಗಿ ಝಕಾತನ್ನು ಉಪಯೋಗಿಸಬೇಕೆಂದು ವಿದ್ವಾಂಸರು ಒಗ್ಗಟ್ಟಾಗಿ ಕರೆ ನೀಡಿದ್ದಾರೆ. ಕೋವಿಡ್ ರೋಗಿಗಳ ಚಿಕಿತ್ಸೆಗೂ, ಅವರ ಪುನರ್ವಸತಿಗಾಗಿ ರಮಝಾನ್ ತಿಂಗಳು ಬರುವುದಕ್ಕಿಂತ ಮೊದಲೇ ಝಕಾತನ್ನು ಅರ್ಹರಿಗೆ ತಲುಪಿಸಬೇಕೆಂದು ವಿದ್ವಾಂಸರು ವಿನಂತಿಸಿದ್ದರು. ತನ್ನ ತಂದೆಯ ಸಹೋದರಾದ ಅಬ್ಬಾಸ್(ರ)ರ ಒಂದು ವರ್ಷದ (ಇನ್ನೊಂದು ವರದಿ ಪ್ರಕಾರ 2 ವರ್ಷದ) ಝಕಾತನ್ನು ಪ್ರವಾದಿವರ್ಯರು(ಸ) ಮೊದಲೇ ಪಡೆದುಕೊಂಡಿದ್ದರು. ಕೋವಿಡ್ನ ನಂತರದ ಕಾಲವನ್ನು ಎದುರಿಸಲು ನಾವೂ ಕೂಡ ಒಂದೆರಡು ವರ್ಷದ ಝಕಾತನ್ನು ಮೊದಲೇ ನೀಡಬೇಕಾಗಿ ಬರಬಹುದು.
ಝಕಾತ್ ಅಲ್ಲದ ಆರ್ಥಿಕ ಹೊಣೆಗಾರಿಕೆಯೂ ಇಸ್ಲಾಮ್ನಲ್ಲಿ ಇದೆಯೆಂಬುದು ನಮಗೆಲ್ಲಾ ತಿಳಿದಿರುವ ಕಾರ್ಯ. ಇಂದಿನ ಈ ಕ್ಲಿಷ್ಟಕರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಯಾವುದೆಲ್ಲಾ ಸಾಧ್ಯತೆಗಳನ್ನು ಹೇಗೆ ಉಪಯೋಗಿಸಬಹುದೆಂದು ಮುಸ್ಲಿಮ್ ವಿದ್ವಾಂಸರು ಹಾಗೂ ಸಂಘಟನೆಗಳು ಆಲೋಚಿಸಬೇಕು.
IslamKannada News Portal

