Home / ಲೇಖನಗಳು / ಝಕಾತ್: ಧನಿಕರ ಸೊತ್ತಿನಲ್ಲಿರುವ ಬಡವರ ಹಕ್ಕು

ಝಕಾತ್: ಧನಿಕರ ಸೊತ್ತಿನಲ್ಲಿರುವ ಬಡವರ ಹಕ್ಕು

ನಮಾಝ್‍ನಂತೆಯೇ ಝಕಾತ್ ಕೂಡಾ ಇಸ್ಲಾಮಿನ ಒಂದು ಆರಾಧನಾ ವಿಧಿ. ನಮಾಝ್ ದೈಹಿಕ ಆರಾಧನೆಯಾದರೆ ಝಕಾತ್ ಸಂಪತ್ತಿನ ಮೂಲಕ ನಡೆಸುವ ಆರಾಧನೆ. ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮನೂ ತನ್ನ ಸೊತ್ತು-ಸಂಪತ್ತುಗಳ ಒಂದಂಶವನ್ನು ಪ್ರತಿ ವರ್ಷ ಬಡ ಬಗ್ಗರಿಗೆ, ದೀನ ದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ, ಪ್ರಯಾಣಿಕರಿಗೆ, ಧರ್ಮ ಸಂಸ್ಥಾಪನೆಯ ಕಾರ್ಯಗಳಿಗೆ ಕಡ್ಡಾಯವಾಗಿ ನೀಡಬೇಕು.

ವರ್ಷಾಂತ್ಯದಲ್ಲಿ ಒಬ್ಬ ಸ್ಥಿತಿವಂತ ಮುಸ್ಲಿಮನ ಬಳಿಯಿರುವ ನಗದು, ವ್ಯಾಪಾರ ಸರಕು, ಬೆಳ್ಳಿ, ಬಂಗಾರಗಳು ಇತ್ಯಾದಿಗಳ ನಲ್ವತ್ತನೇ ಒಂದಂಶವನ್ನು ಝಕಾತ್ ನೀಡಬೇಕು. ಕೃಷಿ ಉತ್ಪನ್ನಗಳಿಂದ ಹತ್ತನೇ ಒಂದಂಶವನ್ನೂ ಕೃತಕ ನೀರಾವರಿಯಿಂದಾದ ಕೃಷಿ ಉತ್ಪನ್ನಗಳ ಇಪ್ಪತ್ತನೇ ಒಂದಂಶವನ್ನೂ ಝಕಾತ್ ನೀಡಬೇಕು.

ಝಕಾತ್ ಒಂದು ದಾನವಾಗಲೀ ಭಿಕ್ಷೆಯಾಗಲೀ ಅಲ್ಲ. ಅದು ಬಡವರ ಹಕ್ಕಾಗಿದೆ. ಇದನ್ನು ಪವಿತ್ರ ಕುರ್‍ಆನ್ ಅನೇಕ ಕಡೆ ಸ್ಪಷ್ಟಪಡಿಸಿದೆ. ಅವುಗಳ ಪೈಕಿ ಒಂದನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇವೆ:
“ಅವರ ಸಂಪತ್ತುಗಳಲ್ಲಿ ಒಂದು ನಿಶ್ಚಿತ ಹಕ್ಕಿದೆ. ಬೇಡುವವನಿಗೆ ಮತ್ತು ವಂಚಿತನಿಗೆ.” (7ಂ:24-25)

ಝಕಾತನ್ನು ದಾನದ ರೂಪದಲ್ಲಿ ನೀಡುವುದು ಮತ್ತು ಅದಕ್ಕಾಗಿ ಬಡವರು ತಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುವುದು ಇಸ್ಲಾಮಿನ ಶಿಕ್ಷಣಕ್ಕೆ ವಿರುದ್ಧವಾಗಿದೆ. ಅದು ಝಕಾತ್ ಹಣದ ವಿತರಣೆಯ ಹೊಣೆಯನ್ನು ಧನಿಕರ ಮೇಲೆಯೇ ಹೊರಿಸುತ್ತದೆ ಮತ್ತು ಅರ್ಹ ಬಡವರನ್ನು ಗುರುತಿಸಿ ಅದನ್ನು ತಲುಪಿಸುವಂತೆ ಅವರಿಗೆ ಆಜ್ಞಾಪಿಸುತ್ತದೆ.

ಭಿಕ್ಷಾಟನೆಯನ್ನು ಇಸ್ಲಾಮ್ ಅತ್ಯುಗ್ರವಾಗಿ ಖಂಡಿಸಿದೆ. ಕೊಡುವ ಕೈಯು ಪಡೆಯುವ ಕೈಗಿಂತ ಉತ್ತಮವಾದುದೆಂದು ಪ್ರವಾದಿ(ಸ) ಹೇಳಿರುವರು. ಹಾಗೆಯೇ ಬೇಡುವುದನ್ನು ವೃತ್ತಿಯಾಗಿಸಿಕೊಂಡವನು ನಿರ್ಣಾಯಕ ದಿನದಂದು ಮುಖದ ಮೇಲೆ ಚರ್ಮವಿಲ್ಲದ ಸ್ಥಿತಿಯಲ್ಲಿ ಅಲ್ಲಾಹನ ಮುಂದೆ ಹಾಜರಾಗುವನೆಂದೂ ಪ್ರವಾದಿ(ಸ) ಎಚ್ಚರಿಸಿರುವರು.

ಬಡವರನ್ನು ಮನೆ ಬಾಗಿಲಲ್ಲಿ ಸೇರಿಸಿ ಅವರಿಗೆ ಝಕಾತ್ ವಿತರಣೆ ಮಾಡುವುದರಲ್ಲಿ ತೃಪ್ತಿ ಕಾಣುವವರು ಪ್ರವಾದಿ ಮುಹಮ್ಮದ್‍ರವರ(ಸ) ಆದೇಶಗಳಿಗೆ ವಿರುದ್ಧ ವರ್ತಿಸುತ್ತಿದ್ದಾರೆ. ಮಾತ್ರವಲ್ಲ ಬಡವರ ಆತ್ಮ ಗೌರವವನ್ನು ಕಸಿಯುವ ಮೂಲಕ ಒಂದು ಘೋರ ಅಪರಾಧವನ್ನೂ ಎಸಗುತ್ತಿದ್ದಾರೆ.

ಒಂದು ಇಸ್ಲಾವಿೂ ಸರಕಾರವಿರುವ ಕಡೆ ಧನಿಕರಿಂದ ಝಕಾತನ್ನು ಸಂಗ್ರಹಿಸುವ ಮತ್ತು ಬಡವರಲ್ಲಿ ಅದನ್ನು ವಿತರಿಸುವ ಕಾರ್ಯವನ್ನು ಸರಕಾರವೇ ಮಾಡಬೇಕು. ಇಸ್ಲಾವಿೂ ಸರಕಾರವಿಲ್ಲದಿರುವಲ್ಲಿ ಮುಸ್ಲಿಮರು ಝಕಾತನ್ನು ಸಾಧ್ಯವಿರುವಲ್ಲಿ ಸಾಮೂಹಿಕವಾಗಿ ಸಂಗ್ರಹಿಸುವ ಮತ್ತು ವಿತರಿಸುವ ವ್ಯವಸ್ಥೆ ಮಾಡುತ್ತಾರೆ. ಉಳಿದೆಡೆ ಧನಿಕರು ಸ್ವಯಂ ಅದರ ವಿತರಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

  • ತಪ್ಪು ಕಲ್ಪನೆಗಳು ಕೃತಿಯಿಂದ
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …