Home / ಲೇಖನಗಳು / ಮದುವೆಯನ್ನು ಮರ್ಮಾಂಗಕ್ಕೆ ಸಂಬಂಧಿಸಿ ವಿಶ್ಲೇಷಿಸುವುದು ವಿಕೃತಿ..

ಮದುವೆಯನ್ನು ಮರ್ಮಾಂಗಕ್ಕೆ ಸಂಬಂಧಿಸಿ ವಿಶ್ಲೇಷಿಸುವುದು ವಿಕೃತಿ..

ಮುಷ್ತಾಕ್ ಹೆನ್ನಾಬೈಲ್

ದೇಶಾದ್ಯಂತ ಪ್ರವಾದಿ ಮುಹಮ್ಮದ್ (ಸ) ಮತ್ತು ಅವರ ಪತ್ನಿ ಆಯೇಷಾ (ರ)ರವರ ಮದುವೆಯ ಸುತ್ತಲಿನ ಚರ್ಚೆ ಮತ್ತು ವಿವಾದ ತಾರಕಕ್ಕೇರಿದೆ. ದೇಶದೊಳಗಿನ ವಿದ್ಯಮಾನ ಮತ್ತು ಭಾರತೀಯ ಮುಸ್ಲಿಮರ ಕುರಿತಾಗಿ ಪ್ರಸ್ತುತ ಕೇಂದ್ರ ಮತ್ತು ಕೆಲ ರಾಜ್ಯ ಸರ್ಕಾರಗಳ ಧೋರಣೆಯನ್ನು ವಿಶ್ವವೇ ಗಮನಿಸುತ್ತಿದೆ ಮಾತ್ರವಲ್ಲ ನಿರಂತರ ಪ್ರತಿಕ್ರಿಯಿಸುತ್ತಿದೆ. ಸ್ವತಃ ಪ್ರವಾದಿ ಮುಹಮ್ಮದರು ಬದುಕಿದ್ದ ಕಾಲದಲ್ಲಿ ಅವರ ಕಡು ವಿರೋಧಿಗಳೇ ಅವರ ವಿವಾಹ ಮತ್ತು ಚಾರಿತ್ರ್ಯವನ್ನು ಆರೋಪಿಸಿರಲಿಲ್ಲ. ದೇವವಾಣಿ ಪ್ರಸರಣ ಆರಂಭಿಸಿದ ನಂತರ ಕಡುಕಷ್ಟ ನೀಡಿ ಇಲ್ಲಸಲ್ಲದ ಆರೋಪ ಮಾಡಿದರೂ ಮಕ್ಕಾದಲ್ಲಿದ್ದ ಬದುಕಿನ ಬಹುತೇಕ ಕಾಲದಲ್ಲಿ ಅರಬ್ಬರು ಮತ್ತು ಅರಬೇತರರು ಪ್ರವಾದಿಯನ್ನು “ಅಲ್ ಅಮೀನ್ ” (ಸತ್ಯಸಂಧ) ಎಂದು ಕರೆಯುತ್ತಿದ್ದರು. ಅವರ ಆರೋಪವೇನಿದ್ದರೂ ಪ್ರವಾದಿಯ ಧರ್ಮಾಧಾರಿತ ನಿಲುವು-ಕರ್ಮಗಳ ಸುತ್ತಲೇ ಇದ್ದಿತ್ತು ಹೊರತು ಚಾರಿತ್ರ್ಯದ ಕುರಿತಾಗಿರಲಿಲ್ಲ.

ಜಾಗತಿಕ ಚರಿತ್ರೆಯ ಪುಟಗಳನ್ನು ತಿರುವಿ ನೋಡಿದರೆ ಮದುವೆಯನ್ನು ಪರಸ್ಪರ ಗೋತ್ರಗಳು, ಪಂಗಡಗಳು, ರಾಜ್ಯ, ಸಾಮ್ರಾಜ್ಯಗಳ ಸಂಬಂಧಗಳನ್ನು ಗಟ್ಟಿಗೊಳಿಸುವ ಉದ್ದೇಶದಲ್ಲೂ ನಡೆದ ಹೇರಳ ಉದಾಹರಣೆಗಳಿವೆ. ಇಂತಹ ವಿವಾಹಗಳು ಗೌರವಪೂರ್ಣವಾಗಿರುತ್ತಿದ್ದವು ಮಾತ್ರವಲ್ಲ ಪರಸ್ಪರ ಸಮ್ಮತವಾಗಿರುತ್ತಿದ್ದವು. ರಾಜನೋ, ರಾಜ ಕುಮಾರನೋ, ಮಂತ್ರಿಯೋ ಅಥವಾ ಸೇನಾಧಿಪತಿಯ ಅಭಿಮಾನಿಗಳಾಗಿ ಪ್ರಾಯಗಳ ಅಂತರ- ಪ್ರಭಾವವಿಲ್ಲದೆ ಅದೆಷ್ಟೋ ಮದುವೆಗಳು ಅಭಿಮಾನದ ಆಧಾರದ ಮೇಲೆ ನಡೆದಿವೆ. ಅದೆಷ್ಟೋ ಆಧುನಿಕ ಅರಸರು, ಆಡಳಿತಗಾರರು, ಅನುಕೂಲಸ್ಥರು ಹತ್ತಾರು ಮದುವೆಗಳಾಗಿರುವ ವಿಚಾರಗಳು ಎಲ್ಲರಿಗೂ ತಿಳಿದಿದೆ. ಬಹುಪತ್ನಿತ್ವವಾಗಲೀ ಅಥವ ಬಾಲ್ಯ ವಿವಾಹವಾಗಲಿ ಲೋಕ ಚರಿತ್ರೆಯ ಪ್ರತೀ ಕಾಲದಲ್ಲೂ ಅಸ್ತಿತ್ವದಲ್ಲಿತ್ತು. ಪುರಾಣಗಳನ್ನು ಪರಿಶೀಲಿಸಿದರೆ ಸ್ವತಃ ಸೃಷ್ಟಿ ಸ್ವರೂಪದ ತನ್ನ ಮಗಳಾದ ಸರಸ್ವತಿಯನ್ನು ಮದುವೆಯಾಗುವ ಪರಮಪಿತ ಬ್ರಹ್ಮ, ಅಬಾಲವೃದ್ಧರಾದಿಯಾಗಿ 16000 ಕ್ಕೂ ಹೆಚ್ಚು ಜನರನ್ನು ಮದುವೆಯಾದ ದ್ವಾಪರ ಯುಗಾವತಾರಿ ಶ್ರೀಕೃಷ್ಣ, 5 ಜನ ಗಂಡಂದಿರನ್ನು ಹೊಂದಿದ ದ್ರೌಪದಿ, ಮದುವೆಯಾದ ರಾಜ ಮನೆತನದ ಮಹಿಳೆ ಗಂಡನ ಬದಲಾಗಿ ಪರ ಪುರುಷನಿಂದ ಮಕ್ಕಳನ್ನು ಪಡೆಯುವ ನಿಯೋಗ ಪದ್ದತಿ, ತಾನು ಮದುವೆಯಾಗದೆ ತನಗೊಲಿದ ಹೆಣ್ಣನ್ನು ತಂದೆ ಶಂತನುವಿಗೆ ಮದುವೆ ಮಾಡುವ ದೇವವೃತ, ಹೀಗೆ ಹಲವಾರು ನಿದರ್ಶನಗಳನ್ನು ಕಾಣಬಹುದು. ಜಾಗತಿಕವಾದ ಯಹೂದಿ, ಕ್ರೈಸ್ತ, ಇಸ್ಲಾಮ್ ಧರ್ಮಗಳ ಇತಿಹಾಸದಲ್ಲೂ ಇಂತಹ ಆಧುನಿಕ ವಿವೇಚನೆಗೆ ನಿಲುಕದ ಮದುವೆ ಮತ್ತು ಸಹಚರ್ಯಗಳು ತುಂಬ ನಡೆದ ಉಲ್ಲೇಖಗಳಿವೆ. ಇವೆಲ್ಲ ಸಾಮಾನ್ಯ ಜ್ಞಾನ ಮತ್ತು ಲೌಕಿಕ ವಿವೇಚನೆಗಳಿಗೆ ಸುಲಭದಲ್ಲಿ ನಿಲುಕದ ವಿಚಾರಗಳು. ಈ ವಿದ್ಯಮಾನಗಳು ನಡೆದು ಅದೆಷ್ಟೋ ಕಾಲಘಟ್ಟಗಳ ನಂತರ ವಿವೇಚನೆಯ ವ್ಯಾಪ್ತಿಗೆ ತಂದು ಲೌಕಿಕ ಜ್ಞಾನದ ಆಧಾರದ ಮೇಲೆ ಇದನ್ನು ಮೂಗಿನ ನೇರಕ್ಕೆ ತಪ್ಪು ಎನ್ನುವುದು ಹಾರಿಕೆ ಅಥವ ಅಜ್ಞಾನವಾಗುತ್ತದೆ. ಆ ಕಾಲಕ್ಕೆ ಅದು ಸರಿಯಾಗಿರಬಹುದು ಅಥವ ಅಗತ್ಯವೂ ಆಗಿರಬಹುದು. ತೀರ ಒಂದು ಶತಮಾನದ ಹಿಂದಷ್ಟೆ ಜೀವಿಸಿದ್ದ ಮಹಾನ್ ಸಂತ ರಾಮಕೃಷ್ಣ ಪರಮಹಂಸರು ಕೇವಲ 5 ವರ್ಷದ ಸಾಧ್ವಿ ಶಾರದಾ ದೇವಿಯವರನ್ನು ಮದುವೆಯಾದದ್ದು ಇತಿಹಾಸದ ಪುಟಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಅದಕ್ಕಿಂತಲೂ ನಿಕಟಪೂರ್ವ ಇತಿಹಾಸದಲ್ಲಿ, ಲೋಕ ಕಂಡ ಮಹಾನ್ ಮಾನವತಾವಾದಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮದುವೆಯಾದಾಗ ಅವರ ಧರ್ಮಪತ್ನಿ ರಮಾದೇವಿಯವರ ವಯಸ್ಸು 8 ವರ್ಷ. ಜಗತ್ತಿನ ಸರ್ವ ಕಾಲಘಟ್ಟದಲ್ಲಿ, ಸರ್ವ ಪ್ರದೇಶ ಪಂಗಡ, ಪಕ್ಷಗಳಲ್ಲಿ ಇಂತಹ ಪ್ರಾಯ ಸೀಮೆಯಿಲ್ಲದ ಮದುವೆ ಸಂಬಂಧಿತ ವಿದ್ಯಮಾನಗಳು ಹೇರಳವಾಗಿ ನಡೆದಿರುವುದನ್ನು ಕಾಣಬಹುದು. ಸಾಮಾನ್ಯವಾಗಿ ಅದ್ಯಾವುದೇ ಧರ್ಮವಿರಲಿ ಅಲ್ಲಿ ವಿವಾಹವು ಸುದೀರ್ಘ ಕಾಲದ ಸಹಚರ್ಯದ ಸಂಕಲ್ಪ ಸೂತ್ರವೇ ಹೊರತು ಬರೀ ಕಾಮ ಸೂತ್ರವಲ್ಲ. ಮದುವೆಯ ಸಂದರ್ಭದಲ್ಲಿನ ಸನಾತನ ಧರ್ಮದ ಸಪ್ತಪದಿಯು ಭಾವೀ ಬದುಕಿನ ಸಪ್ತ ಸಂಕಲ್ಪಗಳ ಸಮುಚ್ಚಯ.

ಇಸ್ಲಾಮಿನಲ್ಲೂ ಮದುವೆ ಸಹಬಾಳ್ವೆಯ ಬದುಕಿನ ಸಮಷ್ಟಿತನವಿರುವ ಶಾಶ್ವತ ಕರಾರು. ಗಂಡಿಗೆಷ್ಟು ಹೆಣ್ಣಿನ ಮೇಲೆ ಅಧಿಕಾರವಿದೆಯೋ ಅದಕ್ಕಿಂತ ಹೆಚ್ಚಾದ ಕರ್ತವ್ಯಗಳಿವೆ. ಇಸ್ಲಾಮಿನಲ್ಲಿ ಪುರುಷನಾದವನಿಗೆ ಮದುವೆಯಾಗುವ ಮಹಿಳೆಯ ಮೇಲೆ ಬಹುವಿಧದ ಬಾಧ್ಯತೆಗಳಿವೆ. ಬದುಕಿನ ಸಾಂಗತ್ಯ ಮತ್ತು ಸಹಚರ್ಯವನ್ನು ಸರಾಗವಾಗಿ ನಿಭಾಯಿಸುವುದರ ಜೊತೆಗೆ ಮಹಿಳೆಯ ಹಕ್ಕುಗಳ ಸಂರಕ್ಷಣೆ ಮಾತ್ರವಲ್ಲ, ಕುಟುಂಬ ನಿರ್ವಹಣೆಯೂ ಕೂಡ ಪುರುಷನದ್ದೇ ಜವಾಬ್ದಾರಿಯಾಗಿದೆ. ಕಾಮವು ಮದುವೆಯ ಒಂದು ಅಂಗವೇ ಹೊರತು ಕಾಮವೇ ಮದುವೆಯಲ್ಲ. ಆಧುನಿಕ ಮದುವೆಗಳ ಪರಿಕಲ್ಪನೆಗಳಿಗೆ ಹೊರತಾಗಿರುವ ಮದುವೆಯನ್ನು ಘನಘೋರ ಅಪರಾಧವೆಂಬಂತೆ ಚಿತ್ರಿಸುವುದೂ ಕೂಡ ಪ್ರಬುದ್ಧತೆಯ ಲಕ್ಷಣವಲ್ಲ. ಆದರೆ ಈಗೀಗ ಪ್ರವಾದಿ ಮುಹಮ್ಮದರ ಮದುವೆಯ ವಿಚಾರ ಮಾತನಾಡುವಾಗ ಮದುವೆಯ ಉಳಿದೆಲ್ಲ ಸಂಕಲ್ಪ- ಪರಿಕಲ್ಪನೆಗಳನ್ನು ಬದಿಗೆ ಸರಿಸಿ ಕಾಮವನ್ನೇ ಕೇಂದ್ರೀಕರಿಸಿ ಚರ್ಚೆ ಮಾಡಲಾಗುತ್ತಿದೆ. ಪ್ರಸ್ತುತ ಧರ್ಮದಲ್ಲಿ ರಾಜಕೀಯ ಬಹಳ ಕೆಟ್ಟದಾಗಿ ಮಿಶ್ರಿತವಾಗಿದೆ. ಅಲೌಕಿಕ ಸಂಬಂಧಿತ ವಿದ್ಯಮಾನಗಳನ್ನು ಲೌಕಿಕ ದೃಷ್ಟಿಕೋನಗಳಿಂದ ಅವಲೋಕಿಸಿ ಅವಹೇಳನ, ಅಪಮಾನಗಳನ್ನು ಮಾಡುವ ಚಾಳಿ ವಿಪರೀತವಾಗಿ, ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿರುವುದು ಮತ್ತು ಅದು ದೇಶದ ಹಿತಾಸಕ್ತಿಗೆ ಮಾರಕವಾಗುತ್ತಿರುವುದನ್ನು ನಿತ್ಯ ಕಾಣುತ್ತಿದ್ದೇವೆ. ಶಾಂತಿಯಿಂದ ಕೂಡಿದ ಸ್ವಚ್ಛಂದ ಬದುಕಿಗಾಗಿ ಸಂವಿಧಾನ ಸದಾಶಯದಿಂದ ನೀಡಿದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳು ಅತೀ ಹೀನವಾಗಿ ಬಳಕೆಯಾಗುತ್ತಿದೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.

ಸದ್ಯ ಚರ್ಚೆಯಲ್ಲಿರುವ ಪ್ರವಾದಿ ಮುಹಮ್ಮದರ ಚಾರಿತ್ರ್ಯ ಮತ್ತು ವಿವಾಹದ ಬಗ್ಗೆ ಮಾತನಾಡುವುದಾದರೆ, ಪ್ರವಾದಿ ದೇವ ಸಂದೇಶವನ್ನು ಪಸರಿಸಲು ಆರಂಭಿಸಿದ ಮೊದಲ ವರ್ಷಗಳಲ್ಲೇ ಮಕ್ಕಾದ ಪ್ರಮುಖರು ಪ್ರವಾದಿಗೆ, ಧರ್ಮಪ್ರಚಾರವನ್ನು ಕೈಬಿಡುವುದಾದರೆ ನೀವು ಬಯಸುವ ಅದೆಷ್ಟು ಬೇಕಾದರೂ ಸುಂದರಿಯರಾದ ಹೆಣ್ಣು ಮಕ್ಕಳನ್ನು ನಿಮಗೆ ಮದುವೆ ಮಾಡಿಸುತ್ತೇವೆ, ಬದುಕಿಡೀ ಕುಳಿತು ತಿಂದರೂ ಕರಗದಷ್ಟು ಸಂಪತ್ತನ್ನು ನೀಡುತ್ತೇವೆ, ಮಕ್ಕಾದ ಸರದಾರನನ್ನಾಗಿ ನೇಮಿಸುತ್ತೇವೆ ಎಂದೆಲ್ಲ ಆಮಿಷವೊಡ್ಡಿದರು. ಆದರೆ ಪ್ರವಾದಿ ಅದ್ಯಾವ ಆಮಿಷಗಳಿಗೂ ಆಕರ್ಷಿತರಾಗದೆ ಅರೇಬಿಯಾದಾದ್ಯಂತ ಸತ್ಯ-ನ್ಯಾಯದ ಪ್ರಸರಣದಲ್ಲಿ ತೊಡಗಿದರು. ತಮ್ಮ 50ನೇ ವರ್ಷ ಪ್ರಾಯದವರೆಗೆ ತಮಗಿಂತ 15 ವರ್ಷ ಹಿರಿಯರಾದ, ಕಾಲಾನುಕ್ರಮಿಕೆಯಲ್ಲಿ ಇಬ್ಬರು ಗಂಡಂದಿರನ್ನು ಕಳೆದುಕೊಂಡ ವಿಧವೆ ಖದೀಜಾರವರನ್ನು ಮಾತ್ರವೇ ಪ್ರವಾದಿ ಮದುವೆಯಾದದ್ದು. ಪ್ರವಾದಿಗೆ 50 ವರ್ಷ ಪ್ರಾಯವಾದಾಗ ಪತ್ನಿ ಖದೀಜಾ ಇಹಲೋಕ ತ್ಯಜಿಸುತ್ತಾರೆ. ಧರ್ಮದ ವಿಚಾರದಲ್ಲಿ ರಣಕರ್ಮಠರಾಗಿದ್ದ ಅರಬ್ಬರು ಪ್ರವಾದಿಯನ್ನು ಕಪಟಿ, ದ್ರೋಹಿ, ಮಾಟಗಾರ, ವಂಚಕನೆಂದು ಜರೆಯುವುದು ಮಾತ್ರವಲ್ಲ ನಿತ್ಯ ಹಿಂಸಿಸುತ್ತಿದ್ದರು. ಆದರೆ ಖದೀಜಾ ಸಾವಿನ ನಂತರದ ದಿನಗಳಲ್ಲಿ ಪ್ರವಾದಿ ಮುಹಮ್ಮದರ ದೇವವಾಣಿಯು ಸತ್ಯವೆಂಬ ಅರಿವು ಅರೇಬಿಯಾದಾದ್ಯಂತ ವ್ಯಾಪಕವಾಗಿ ಪಸರಿಸತೊಡಗಿದಾಗ ಸಹಜವಾಗಿಯೇ ಅವರ ಮೇಲಿನ ಸರ್ವ ಸ್ವರೂಪದ ಅಭಿಮಾನ ಉಕ್ಕೇರತೊಡಗಿತು. ಪ್ರವಾದಿಯನ್ನು ನಖಶಿಖಾಂತ ವಿರೋಧಿಸಿ ಇಂದು ಹೇಗಾದರೂ ಮಾಡಿ ಕೊಂದೇ ತೀರುವೆನು ಎಂದು ಖಡ್ಗ ಹಿಡಿದು ಮುನ್ನುಗ್ಗಿ ಬಂದ ಅರಬ್ ಸರದಾರ ಉಮರ್ ಬಿನ್ ಖತ್ತಾಬ್ ದೇವವಾಣಿಯು ದೇವಸನ್ನಿಧಿಯಿಂದಲೇ ಪ್ರಸಾರವಾಗುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ಪ್ರವಾದಿಯಲ್ಲಿ ಕ್ಷಮೆಯಾಚಿಸುತ್ತಾರೆ. ಖಾಲಿದ್ ಬಿನ್ ವಲೀದ್ ಅರಬ್ಬರ ರಣಪ್ರಚಂಡ ಯುದ್ಧ ಕಮಾಂಡರ್ .ಪ್ರವಾದಿ ಸಂಗಡಿಗರ ಮೇಲೆ ಮಕ್ಕಾದ ಅರಬ್ಬರು ನಡೆಸಿದ ಊಹುದ್ ಯುದ್ಧದಲ್ಲಿ ಪ್ರವಾದಿ ಬೆಂಬಲಿಗರಿಗೆ ಸೋಲು ಕಾಣಿಸಿದ್ದು ಇದೇ ಖಾಲಿದ್ ಬಿನ್ ವಲೀದ್. ಪ್ರವಾದಿ ಮೊಹಮ್ಮದರನ್ನು ವಿರೋಧ ಮಾಡುವ ಮತ್ತು ಪ್ರಹಾರ ಮಾಡುವ ಯಾವ ಅವಕಾಶವನ್ನೂ ಖಾಲಿದ್ ಬಳಸದೇ ಬಿಟ್ಟವನಲ್ಲ. ಆದರೆ ಕಾಲಕಳೆದಂತೆ ಅಂತಹ ರಣಪ್ರತಾಪಿ ಖಾಲಿದ್ ಕೂಡ ಮಕ್ಕಾದಿಂದ ಮದೀನಾಗೆ ಓಡಿಬಂದು ಪ್ರವಾದಿಯ ಮುಂದೆ ತಲೆತಗ್ಗಿಸಿ ನಿಲ್ಲುತ್ತಾರೆ. ಅಮ್ರ್ ಬಿನ್ ಆಸ್ ಅರಬ್ ಜಗತ್ತಿನ ನಿಪುಣ ರಾಜತಾಂತ್ರಿಕ. ಅರಬ್ಬರ ಪಾಲಿನ ಹೊರಜಗತ್ತಿನ ಕೊಂಡಿ ಇದೇ ಅಮ್ರ್ ಬಿನ್ ಆಸ್ ಆಗಿದ್ದ. ವಿಪರೀತ ಚಾಣಾಕ್ಷ. ದೇವವಾಣಿಯನ್ನು ವಿಪರೀತ ಲೇವಡಿ ಮಾಡುತ್ತಿದ್ದ ಪ್ರವಾದಿಯ ಕಡು ವಿರೋಧಿ. ತನ್ನಲ್ಲಿರುವ ಸರ್ವ ತಂತ್ರಗಳನ್ನು ಬಳಸಿ ಪ್ರವಾದಿ ಮುಹಮ್ಮದರು ಹೊರ ಜಗತ್ತಿನೊಂದಿಗೆ ಸಂಪರ್ಕ ಸಾಧಿಸದಂತೆ ಮಾಡುವ ನಿರಂತರ ಪ್ರಯತ್ನ ಮಾಡುತಿದ್ದ. ಈತ ಕಡು ಕರ್ಮಠ ಬಹುದೇವಾರಾಧಕನಾಗಿದ್ದ. ಆದರೆ ಅರಬ್ ನೆಲದಲ್ಲಿ ಪ್ರವಾದಿ ಮುಹಮ್ಮದರ ಸುತ್ತ ನಡೆಯುತ್ತಿದ್ದ ವಿದ್ಯಮಾನಗಳಲ್ಲಿ ಅಲೌಕಿಕ ಸಂಪರ್ಕದ ಖಚಿತ ಕುರುಹುಗಳನ್ನು ಕಂಡು ದಂಗಾಗಿ ಹೋದ. ಅದಕ್ಕೆ ಸರಿಯಾಗಿ ಅವನ ಆಪ್ತ ಮಿತ್ರನಾಗಿದ್ದ ಆಗಿನ ಅಬಿಸೀನಿಯಾದ ದೊರೆ ನಜ್ಜಾಶಿ” ಅಮ್ರ್, ವಿಷಯ ನೀನೆಣಿಸಿದ ರೀತಿಯಲ್ಲಿಲ್ಲ. ಓದಲು ಬರೆಯಲು ಬಾರದ ನಿರಕ್ಷರಿ ಪ್ರವಾದಿ ಮುಹಮ್ಮದರ ಬಾಯಿಯಿಂದ ಹೊರಬರುತ್ತಿರುವುದು ಈವರೆಗೆ ಜಗತ್ತು ಪ್ರಕಟಿಸದ ಪರಮಶ್ರೇಷ್ಟ ಸಾಹಿತ್ಯದಿಂದ ಕೂಡಿದ ವಾಣಿಗಳು. ಇದು ದೇವವಾಣಿಯಲ್ಲದೆ ಮತ್ತೇನು? ಜಗತ್ತಿನ ಅದೆಂತಹ ಪಂಡಿತ ವಿದ್ವಾಂಸನೂ ಅವರ ವಾಣಿಯಂತಹ ಒಂದೇ ಒಂದು ವಾಕ್ಯವನ್ನು ರಚಿಸಲಾರ. ಅವರ ಬಾಯಿಯಿಂದ ಹೇಳಲ್ಪಟ್ಟ ವಿಚಾರಗಳೆಲ್ಲವೂ ಪ್ರಾಯೋಗಿಕವಾಗಿ ಸತ್ಯವೂ ಆಗುತ್ತಿವೆ. ಅದಕ್ಕೆ ಪೂರಕವಾಗಿ ಯಹೂದಿಗಳ ಧರ್ಮಗ್ರಂಥ ತೌರಾತ್ ಮತ್ತು ನನ್ನದೇ ಸಮುದಾಯ ಪಾಲಿಸುವ ಕ್ರೈಸ್ತ ಧರ್ಮಗ್ರಂಥದಲ್ಲಿ ಸರಿಯಾಗಿ ಇದೇ ಹೊತ್ತಿಗೆ ದೇವಸಂದೇಶಕಾರನೊಬ್ಬ ಅರೇಬಿಯಾ ನೆಲದಲ್ಲಿ ಅವತರಿಸುವ ಸ್ಪಷ್ಟ ಸುಳಿವೂ ಕೂಡ ನೀಡಲಾಗಿದೆ. ಪ್ರವಾದಿ ಮುಹಮ್ಮದರು ತೌರಾತ್, ಜಬೂರ್, ಬೈಬಲ್ ಮುಂತಾದ ಧರ್ಮಗ್ರಂಥಗಳು ಭವಿಷ್ಯವಾಣಿ ನುಡಿದಂತೆಯೇ ಮಾತನಾಡುತ್ತಿರುವುದು, ಹೇಳಿದಂತೆಯೇ ಆಗುತ್ತಿರುವುದು ಮತ್ತು ಆಗಮನದ ಕಾಲಘಟ್ಟವೂ ಹೊಂದಿಕೆಯಾಗುತ್ತಿರುವುದು ಇವರು ದೇವಸಂದೇಶಕಾರನೆಂಬುದು ಗ್ರಾಂಥಿಕ ಜ್ಞಾನವಿರುವ ಅದೆಂಥವರಿಗೂ ಮನವರಿಕೆಯಾಗುತ್ತದೆ. ಪ್ರವಾದಿಯನ್ನು ಅರಿಯಲು ಸಮಸ್ಯೆಯಿರುವುದು ದೈವಿಕ ಗ್ರಂಥ, ಚರ್ಯೆ, ಚರಿತ್ರೆಗಳ ಜ್ಞಾನ ಇಲ್ಲದಿರುವವರಿಗೇ ಹೊರತು ಜ್ಞಾನ ಇದ್ದವರಿಗಲ್ಲ. ಆಸ್ ನೀನು ಗಮನಿಸಿ ನೋಡು, ಅರೇಬಿಯಾ ನೆಲದ ಯಹೂದಿಗಳೂ ಕೂಡ ಸರಿಯಾಗಿ ಇದೇ ಕಾಲಘಟ್ಟದಲ್ಲಿ ತಮ್ಮ ಪಾಲಿಗೆ ದೇವದೂತ ಅವತರಿಸುವನು, ಆಗ ಅರಬ್ಬರನ್ನು ನೋಡಿಕೊಳ್ಳುತ್ತೇವೆ ಎಂದು ನಿತ್ಯವೂ ಬೆದರಿಸುತ್ತಿದ್ದಾರೆ. ಅವರು ನಿರೀಕ್ಷಿಸಿದ ಪ್ರವಾದಿ ಇವರೇ. ನೀನು ಚಾಣಾಕ್ಷ ರಾಜತಾಂತ್ರಿಕ ಹೌದು. ಆದರೆ ಪ್ರವಾದಿ ಮುಹಮ್ಮದರ ವಿಚಾರದಲ್ಲಿ ಅತಿರೇಕದ ಚಿಂತನೆ ಮಾಡಿ ಎಡವದಿರು. ಆರಂಭದಲ್ಲಿ ನೀನು ಆಲೋಚಿಸಿದಂತೆಯೇ ನಾನು ಆಲೋಚಿಸಿದ್ದು. ಆದರೆ ನಿನಗಿಂತ ಮುಂಚೆ ವಿಷಯ ಈಗ ನನಗೆ ಅರ್ಥವಾಗಿದೆ. ಪ್ರವಾದಿ ಮುಹಮ್ಮದರು ಖಂಡಿತ ಮನುಕುಲದ ಪಾಲಿನ ಅನುಗ್ರಹ. ನೇರ ಮದೀನಾ ತಲುಪಿ ಪ್ರವಾದಿಗೆ ಜೊತೆಯಾಗು” ಎಂದು ಸಲಹೆ ನೀಡುತ್ತಾನೆ. ಪರಮ ಧರ್ಮಿಷ್ಟ ಕ್ರೈಸ್ತ ದೊರೆ ನಜ್ಜಾಶಿಯ ಮಾತು ಕೇಳಿ ಅಮ್ರ್ ಆಳವಾಗಿ ಚಿಂತಿಸಲು ತೊಡಗುತ್ತಾನೆ. ನೇರ ಮದೀನಾ ತಲುಪಿದ ಅಮ್ರ್ ಪ್ರವಾದಿಯಲ್ಲಿ ತನ್ನ ಪೂರ್ವ ಕುಕೃತ್ಯಗಳಿಗಾಗಿ ಕ್ಷಮೆಯಾಚಿಸುತ್ತಾರೆ. ಹೀಗೆ ಅರೇಬಿಯಾ ನೆಲದಲ್ಲಿ ಕಡು ವಿರೋಧಿಗಳೂ ಕೂಡ ತಂಡೋಪತಂಡವಾಗಿ ಪ್ರವಾದಿಯ ಅಭಿಮಾನಿಗಳಾಗುತ್ತಾರೆ. ಪ್ರವಾದಿಯ ವ್ಯಕ್ತಿತ್ವ, ಉದ್ದೇಶ ಮತ್ತು ದೈವಿಕ ಸಂಪರ್ಕದ ಖಚಿತತೆಯು ವ್ಯಾಪಕವಾಗುತ್ತಿದ್ದಂತೆ ಅಕ್ಕಪಕ್ಕದ ಬುಡಕಟ್ಟುಗಳ ನಾಯಕರು, ಸಮುದಾಯ ಪ್ರಮುಖರು ಪ್ರವಾದಿಯವರೊಂದಿಗೆ ಸಂಬಂಧ ಬೆಸೆಯಲು ಹಾತೊರೆಯುತ್ತಾರೆ. ಪ್ರವಾದಿಯವರ ಜನಪ್ರಿಯತೆ ಮತ್ತು ಪ್ರಭೆಯು ವ್ಯಾಪಕವಾದಾಗ ಅವರೊಂದಿಗೆ ಬೆಸೆಯಲ್ಪಟ್ಟ ಸಂಬಂಧ ಸ್ವರೂಪಗಳಲ್ಲಿ ವೈವಾಹಿಕ ಸ್ವರೂಪದ ಸಂಬಂಧವೂ ಒಂದು. ಆಗಿನ ಕಾಲದ ಅರಬ್ಬರಲ್ಲಿ ಮಾತ್ರವಲ್ಲ ಸಾಮಾನ್ಯವಾಗಿ ಜಗತ್ತಿನ ಸರ್ವ ಪಂಗಡಗಳಲ್ಲಿಯೂ ವೈವಾಹಿಕ ಸಂಬಂಧವು ಸಂಬಂಧಗಳ ಶ್ರೀಮಂತಿಕೆಗೆ ಮತ್ತು ಗಟ್ಟಿತನಕ್ಕೆ ವೇದಿಕೆಯೊದಗಿಸುತ್ತಿದ್ದವು. ಜಾಗತಿಕ ಇತಿಹಾಸ ಮತ್ತು ಪ್ರಸ್ತುತ ಕಾಲಘಟ್ಟದಲ್ಲಿ ಮದುವೆಯು ರಾಜತಂತ್ರ, ಅಂತಸ್ತು, ಅಭಿಮಾನ, ಆಕಾಂಕ್ಷೆ, ಕೌಟುಂಬಿಕ ಸಂಬಂಧ, ಪ್ರತಿಷ್ಠೆ, ಪರಾಕ್ರಮಗಳ ಅಭಿವ್ಯಕ್ತಿಯ ವೇದಿಕೆ. ರಾಜನಿಗೆ ಮದುವೆಯಾಗಿ ರಾಜಪತ್ನಿ ಎಂದು ಅಭಿಮಾನ ಪಡುತ್ತಿದ್ದರು. ನಟ-ನಾಯಕನಿಗೆ ಮದುವೆಯಾಗಿ ಪ್ರತಿಷ್ಠೆ ಮೆರೆಯುವವರಿಗೂ ಕಮ್ಮಿಯಿಲ್ಲ. ಹೀಗೆ, ಮದುವೆಗೆ ಕಾಮದಿಂದ ಹೊರತಾದ ಅನೇಕ ಉದ್ದೇಶ-ಸಂಕಲ್ಪಗಳಿವೆ.

ಅಬೂಬಕ್ಕರ್ (ರ)ಎಂಬುವರು ಆ ಕಾಲದಲ್ಲಿ ಪ್ರವಾದಿ ಮುಹಮ್ಮದರ ಆಪ್ತ ಮತ್ತು ಅತ್ಯಂತ ಪ್ರಿಯ ಒಡನಾಡಿಯಾಗಿದ್ದವರು. ಪ್ರವಾದಿಯ ಮೇಲೆ ದೈವಿಕ ಸೂಕ್ತಗಳ ಅವತರಣಿಕೆಯನ್ನು ನಿರಂತರ ಕಣ್ಣಾರೆ ಕಂಡವರು ಅಬೂಬಕರ್. ಅವರಿಗೆ ಪ್ರವಾದಿಯ ಮೇಲೆ ಪ್ರೇಮ ಅದೆಷ್ಟು ಆಳವಿತ್ತು ಎಂದರೆ, ಪ್ರವಾದಿಯೊಂದಿಗೆ ಬರೀ ಸ್ನೇಹ ಮಾತ್ರವಲ್ಲ ವೈವಾಹಿಕ ಸ್ವರೂಪದ ಕೌಟುಂಬಿಕ ಸಂಬಂಧ ಬೆಸೆದು ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಮಹದಾಸೆಯಿತ್ತು. ಲೋಕಚರಿತ್ರೆಯಲ್ಲಿ ಪ್ರವಾದಿ ಮುಹಮ್ಮದರಿಗೆ ಬರೀ ಮಿತ್ರನಾಗಿ ಮಾತ್ರವಲ್ಲ ಹತ್ತಿರದ ಸಂಬಂಧಿಯಾಗಿಯೂ ತಾವು ಮತ್ತು ತಮ್ಮ ಕುಟುಂಬವಿರಬೇಕೆಂಬುದು ಅಬೂಬಕರ್ ರವರ ಈ ಆಸೆಯ ಹಿಂದಿನ ಕಾರಣವಾಗಿತ್ತು. ಹಾಗಾಗಿ ಅಬೂಬಕ್ಕರ್ ತಮ್ಮ ಮಗಳಾದ ಆಯೇಷಾರನ್ನು ಪ್ರವಾದಿಗೆ ಮದುವೆ ಮಾಡಿಸಿ ಅಭಿಮಾನ ಮೆರೆದಿದ್ದು. ಪ್ರವಾದಿಯವರ 11 ಪತ್ನಿಯರಲ್ಲಿ ಆಯೇಷಾರನ್ನು ಹೊರತುಪಡಿಸಿ ಉಳಿದ 9 ಪತ್ನಿಯರು ವಿಧವೆಯರು ಮತ್ತು ಒಬ್ಬರು ವಿಚ್ಛೇದಿತರು. ಬಹುಪತ್ನಿತ್ವ ಅರಬ್ಬರಲ್ಲಿ ಮಾತ್ರವಲ್ಲ ಸಾರ್ವಕಾಲಿಕವಾದ ಜಾಗತಿಕ ಇತಿಹಾಸದಲ್ಲಿ ಸಾಮಾನ್ಯ. ಪ್ರಾಕೃತಿಕ ಪ್ರಕ್ರಿಯೆಯನುಸಾರ ಹೆಣ್ಣು ಮಕ್ಕಳು ಹೆಚ್ಚು ಹುಟ್ಟುವುದರಿಂದ ಉಂಟಾಗುತ್ತಿದ್ದ ಅನುಪಾತ ವ್ಯತ್ಯಯ ಮತ್ತು ಯುದ್ಧ-ಯಾತ್ರೆಗಳಲ್ಲಿ ಹೇರಳವಾಗಿ ಸಂಭವಿಸುತ್ತಿದ್ದ ಸಾವುಗಳಿಂದಾಗಿ ಆಗಿನ ಸಮಾಜದಲ್ಲಿ ಮದುವೆಯಾಗದವರು ಮತ್ತು ವಿಧವೆಯರು ಬಹಳ ಇರುತ್ತಿದ್ದರು. ವಿಧವೆಯರು ಅಪಶಕುನವೆಂಬ ಅನಾಗರಿಕ ಕಲ್ಪನೆಯನ್ನು ತೊಡೆದುಹಾಕಲು ಪ್ರವಾದಿ ತಾವೇ ವಿಧವೆಯರನ್ನು ಮದುವೆಯಾಗುತ್ತಿದ್ದರು. ಆ ಕಾಲದ ಪ್ರವಾದಿಯವರ ಕಡು ಶತ್ರುಗಳೂ ಸಹ ಪ್ರವಾದಿಯ ಈ ಆದರ್ಶವನ್ನು ಗೌರವಿಸುತ್ತಿದ್ದರು. ಪ್ರವಾದಿಯ ಅನುಯಾಯಿಗಳು ಅವರ ಈ ಆದರ್ಶವನ್ನು ಅನುಸರಿಸಿ ವಿಧವೆಯರ ಬದುಕಿನ ಬೆಳಕಾಗುತ್ತಿದ್ದರು. ಸರಿಸುಮಾರು 1400 ವರ್ಷಗಳಿಂದ ಪ್ರವಾದಿಯಷ್ಟು ಪ್ರೀತಿ, ಅಭಿಮಾನ, ಚರ್ಚೆ, ಟೀಕೆ, ದ್ವೇಷಗಳಿಗೆ ಒಳಗಾದ ಮತ್ತೊಂದು ವ್ಯಕ್ತಿತ್ವ ಈ ಜಗತ್ತಿನಲ್ಲಿ ಇಲ್ಲ. ಪ್ರವಾದಿಯ ಮೂಲಕ ಸರ್ವಶಕ್ತನಿಂದ ಅವತೀರ್ಣಗೊಂಡ ಗ್ರಂಥ ಕುರ್ ಆನ್ ಜಗತ್ತಿನಲ್ಲಿ ಅತಿ ಹೆಚ್ಚು ಓದಲ್ಪಡುವ ಗ್ರಂಥ. ದೈವಿಕ ಪ್ರೇರಣೆಗಳಿಂದ ಅರುಹಲ್ಪಟ್ಟ ಅವರ ವಾಣಿಗಳ ಸಂಕಲನ ಹದೀತ್ ಗಳು ಜಗತ್ತಿನ ಅತಿ ಹೆಚ್ಚು ಜನರು ಅನುಸರಿಸುವ ಸಂಹಿತೆ-ಶಾಸನಗಳು. ಮುಹಮ್ಮದ್ ಎಂಬುದು ಜಗತ್ತಿನ ಅತಿ ಹೆಚ್ಚು ಜನರು ಇಟ್ಟುಕೊಂಡಿರುವ ಹೆಸರಾಗಿದೆ. ಆದರೆ ಅವರ ವೈವಾಹಿಕ ಜೀವನದ ಕುರಿತಾಗಿನ ಅಪಸ್ವರ ತೀರ ಇತ್ತೀಚಿನ ರಾಜಕೀಯದಿಂದ ಪ್ರೇರಿತವಾದ ಬೆಳವಣಿಗೆ. ಪ್ರವಾದಿ ಮುಹಮ್ಮದರು ಇಹಲೋಕ ತ್ಯಜಿಸಿದ ನಂತರ ಪತ್ನಿ ಆಯೇಷಾರವರು ಇಸ್ಲಾಮೀ ಇತಿಹಾಸದ ಅತಿ ಹೆಚ್ಚು ಹದೀಸ್ (ಪ್ರವಾದಿ ವಾಣಿ)ಗಳನ್ನು ವರದಿಸಿದವರು. ಇದು ಜಾಗತಿಕ ನಾಗರೀಕತೆ ಮತ್ತು ಶಾಸನಗಳಿಗೆ ಅತಿದೊಡ್ಡ ಕೊಡುಗೆಯಾಗಿ ಪರಿಣಮಿಸಿತು. ಆಯೇಷಾರವರಿಗೆ ಪ್ರವಾದಿಯ ಮೇಲೆ ಅದೆಷ್ಟು ಪ್ರೇಮವಿತ್ತೆಂದರೆ, ಪ್ರವಾದಿ ಲೋಕಕ್ಕೆ ವಿದಾಯ ಹೇಳಿದಾಗ ಪ್ರವಾದಿ ಸಮಾಧಿಯಾದ ಪಕ್ಕದ ಜಾಗದಲ್ಲೇ ತಾನು ಕೊನೆಯುಸಿರೆಳೆದಾಗ ಸಮಾಧಿಯಾಗಬೇಕು ಎಂದು ಬಯಕೆ ವ್ಯಕ್ತಪಡಿಸಿ ಸಾಯುವ 40 ವರ್ಷಗಳ ಮುಂಚೆಯೇ ಜಾಗವನ್ನು ಕಾಯ್ದಿರಿಸಿದವರು. ಬದುಕು ಮಾತ್ರವಲ್ಲ ಸಾವಿನಲ್ಲೂ ಪ್ರವಾದಿಯ ಜೊತೆಯಿರಬೇಕು ಎಂದು ಅನುದಿನವು ಆಶಿಸಿದವರು ಆಯೇಷಾ. ಪ್ರವಾದಿ ಮತ್ತು ಆಯೇಷಾರವರ ಪ್ರೀತಿಯ ಕುರಿತು ಬರೆದು ಮುಗಿಯಲಾರದಷ್ಟು ವಿಚಾರಗಳಿವೆ. ಆದರೂ ಈ ಜಗತ್ತಿನ ರಾಜಕೀಯ ಶಕ್ತಿಗಳು ಸಾವಿನ ನಂತರವೂ ಒಂದಾಗಿರಬೇಕಯ ಎಂದು ಆಶಿಸಿದ ಅವರಿಬ್ಬರ ಆದರ್ಶ ದಾಂಪತ್ಯವನ್ನು ಕೆಟ್ಟದಾಗಿ ಅವಹೇಳನ ಮಾಡುತ್ತಿರುವುದು ದುರಂತ. ಅಲೌಕಿಕ ಮೂಲವಾದ ಪ್ರತಿಯೊಂದು ವಿವಾಹ ಮತ್ತು ಸಹಚರ್ಯಕ್ಕೂ ಒಂದು ಕಾರಣವಿದ್ದೇ ಇರುತ್ತದೆ. ಸಮಸ್ತ ಸೃಷ್ಟಿಗೆ ಪರಮಪಿತ ಬೃಹ್ಮ ತಂದೆಯಂತೆ ಎಂಬ ಸಮಷ್ಟಿ ದೃಷ್ಟಿಕೋನದಿಂದ ಕೂಡಿದ ಧಾರ್ಮಿಕ ನಂಬಿಕೆಯು ಸರಸ್ವತಿಯೊಂದಿಗಿನ ವಿವಾಹವನ್ನು ನ್ಯಾಯವಾಗಿಸುತ್ತದೆ. ಕೃಷ್ಣನ ವ್ಯಕ್ತಿತ್ವ ಮತ್ತು ಆಕರ್ಷಣೆಯು ಅಭಿಮಾನಕರವಾದ್ದರಿಂದ 16000ದಷ್ಟು ಮಡದಿಯರ ವೈವಾಹಿಕ ಬಂಧನವು ಅದೊಂದು ಅಭಿಮಾನದ ಪ್ರತೀಕವೇ ಹೊರತು ಕೌಟುಂಬಿಕ ಜೀವನ ಮತ್ತು ಲೈಂಗಿಕ ಉದ್ದೇಶದ್ದಲ್ಲ ಎಂಬುದನ್ನು ಪೂರ್ವಾಗ್ರಹ ಪೀಡಿತ ಮನಸ್ಸು ಹೊಂದದೇ ಇದ್ದಾಗ ಸುಲಭದಲ್ಲಿ ಮನಗಾಣಬಹುದು. ಪರಮ ಶೂರರೂ, ನ್ಯಾಯಪರರೂ ಆದ ಪಂಚಪಾಂಡವರ ಪತ್ನಿಯಾಗುವುದು ಲೋಕದ ಹೆಣ್ಣೊಬ್ಬಳ ಪಾಲಿನ ಅನುಗ್ರಹವಾಗಿರಲೂಬಹುದು. ಬಹುಪತ್ನಿತ್ವವಿರುವಾಗ ಬಹುಪತಿತ್ವ ಏಕಿಲ್ಲ, ಯಾಕಿರಬಾರದು ಎಂಬ ಲೋಕದ ಜಿಜ್ಞಾಸೆಗೆ ದ್ರೌಪದಿಯ ಬದುಕಿನ ಬವಣೆಗಳು ಉದಾಹರಣೆಯಾಗಿಸುವ ಉದ್ದೇಶವೂ ಸೃಷ್ಟಿಕರ್ತನಿದ್ದಿರಬಹುದು. ತಂದೆಗೆ ಮದುವೆ ಮಾಡಿಸಿದ ದೇವವೃತ ಪಿತನಿಗಾಗಿ ಬದುಕು ತ್ಯಾಗ ಮಾಡಿದ ಮಗನಾಗಿ ಲೋಕಕ್ಕೆ ಆದರ್ಶನಾಗಬಾರದೇಕೆ? ಸನ್ಯಾಸವು ಸಂಗಾತಿಯಿದ್ದಾಗಲೂ ಸಾಧ್ಯ ಎಂಬುದನ್ನು ರಾಮಕೃಷ್ಣ ಪರಮಹಂಸರು ಮತ್ತು ಶಾರದಾದೇವಿಯವರು ಲೋಕಕ್ಕೆ ನಿರೂಪಿಸಲಿಕ್ಕಾಗಿಯೇ ಮದುವೆಯಾಗಿರಲೂಬಹುದು. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಕೂಡ ರಮಾದೇವಿಯವರನ್ನು ಮದುವೆಯಾದ ನಂತರವೇ ಲೋಕಕ್ಕೆ ಬೆಳಕಾದವರು. ಹಾಗೇಯೇ ತಿಳಿದು ಆ ಆದರ್ಶಗಳನ್ನು ಒಪ್ಪಿದರೆ ತಪ್ಪೇನಿದೆ?

ಅದೇ ರೀತಿಯಾಗಿ ಬದುಕಿನ ಬಲುದೊಡ್ಡ ಸಂಹಿತೆ, ಶಾಸನ, ಶಾಸ್ತ್ರಗಳನ್ನು ಸುದೀರ್ಘ ಕಾಲದವರೆಗೆ ಮನುಕುಲಕ್ಕೆ ಅರುಹುವ ಸದುದ್ದೇಶದ ಸಹಚರ್ಯ ಪ್ರವಾದಿ ಮುಹಮ್ಮದರು ಮತ್ತು ಆಯೇಷಾ ಬೀಬಿಯವರದ್ದು. ಸಣ್ಣ ಪ್ರಾಯದ ಆಯೇಷಾ ತಮ್ಮ ಕಾಲಾನಂತರ ಸುದೀರ್ಘ ಕಾಲ ಬದುಕಿ ತಮ್ಮ ವಾಣಿಗಳ ಸಾಕ್ಷಿಯಾಗಬೇಕೆಂಬ ಉದ್ದೇಶ ಪ್ರವಾದಿ ಮುಹಮ್ಮದರಿಗಿತ್ತು. ನಂತರದ ದಿನಗಳಲ್ಲಿ ಅದು ಹಾಗೆಯೇ ಆಯಿತು ಕೂಡ. ಆದರೆ ಆದರ್ಶ ದಾಂಪತ್ಯ ಕಂಡ ಇವರುಗಳ ಮಧ್ಯೆ ಲೋಕವೇಕೆ ನುಸುಳಿ ಅನಗತ್ಯ ವಿವಾದ ಸೃಷ್ಟಿಸುತ್ತಿದೆ ಎಂಬುದು ಸದ್ಯದ ಪ್ರಶ್ನೆ. ಎಲ್ಲ ಧರ್ಮದಲ್ಲಿ ಕಂಡುಬರುವ ಆಧುನಿಕ ವಿವೇಚನೆಗೆ ನಿಲುಕದ ಮದುವೆಗಳನ್ನು ಮರ್ಮಾಂಗಕ್ಕೆ ಸಮೀಕರಿಸಿ ನೋಡುವುದು ಎಷ್ಟರಮಟ್ಟಿಗೆ ಸರಿ? ಮಹಾ ಪುರುಷರ ಅವಹೇಳನ, ಅಪಮಾನ, ಅಪಪ್ರಚಾರ ಇದೇನು ಹೊಸತಲ್ಲ. ಈ ಜಗತ್ತು ಶ್ರೀರಾಮ, ಶ್ರೀಕೃಷ್ಣ, ಯೇಸು, ಪ್ರವಾದಿ ಮುಹಮ್ಮದರಿಂದ ಹಿಡಿದು ಸ್ವಾಮೀ ವಿವೇಕಾನಂದರು, ಗಾಂಧೀಜಿ, ಅಂಬೇಡ್ಕರರವರೆಗೆ ಯಾರನ್ನೂ ಬಿಟ್ಟಿಲ್ಲ. ಇನ್ನಿಲ್ಲದಂತೆ ಕಾಡಿ ಕಡುಕಷ್ಟವನ್ನು ನೀಡಿದೆ. ಇನ್ನೂ ಅವರಂತವರು ಯಾರಾದರೂ ಹುಟ್ಟಿದರೆ ಅವರನ್ನೂ ಬಿಡುವುದಿಲ್ಲ. ಈ ಜಗತ್ತಿನಲ್ಲಿ ಸುಳ್ಳನ್ನು ಸತ್ಯಕ್ಕಿಂತ ಬಲು ಅಂದ ಮತ್ತು ಆಕರ್ಷಕವಾಗಿ ಹೇಳಲಾಗಿದೆ. ಆದರೆ ಸುಳ್ಳು ಮೋಡವಾದರೆ ಸತ್ಯ ಸದಾಕಾಲದ ಸೂರ್ಯ. ಸೂರ್ಯ ಅದನ್ನು ಕರಗಿಸುತ್ತಲೇ ಇರುತ್ತದೆ. ದೇವರು, ಧರ್ಮ, ಮಹಾ ಪುರುಷರು, ಸಾಧಕರ ಅವಹೇಳನ ಯಾವ ಕಾಲಕ್ಕೂ ಸಲ್ಲದು. ಅವಹೇಳನ ನಿರಂತರವಾಗಿ ನಡೆಯುತ್ತಿದ್ದರೆ ಸಮಾಜ ಅಪ್ರಬುದ್ದವಾಗಿರುವ ಮತ್ತು ಆಡಳಿತ ನಿಷ್ಕ್ರಿಯವಾಗಿರುವುದರ ಸಂಕೇತವದು. ಹೀಗೆ ಅವಹೇಳನ ಮಾಡುವವರಿಗೆ ಪರಸ್ಪರರನ್ನು ಗೌರವಿಸಬೇಕೆಂಬ ಕನಿಷ್ಠ ಪ್ರಜ್ಞೆಯಿರಬೇಕಾದ್ದು ಅವಶ್ಯಕ.

ಎಮ್ ಎಫ್ ಹುಸೇನ್ ಎಂಬ ಅಂತರರಾಷ್ಟ್ರೀಯ ಖ್ಯಾತಿ ಹೊಂದಿದ ವಿಕೃತ ಚಿತ್ರಕಾರ ಒಂದು ಧರ್ಮದ ಭಾವನೆಗಳಿಗೆ ವಿರುದ್ಧವಾಗಿ ಅವರ ಆರಾಧ್ಯರ ಚಿತ್ರಗಳನ್ನು ಕೆಟ್ಟದಾಗಿ ಬಿಡಿಸುವಾಗ ಸುಮ್ಮನಿದ್ದವರು, ಪ್ರವಾದಿಗೆ ಅವಹೇಳನವಾಯಿತು ಎಂದು ಗುಲ್ಲೆಬ್ಬಿಸುವುದರಲ್ಲಿ ಅರ್ಥವಿಲ್ಲ. ಬಿಡಿಸುವವನು ಬಿಡಿಸದಂತೆ ಮಾಡಬೇಕಾದ್ದು ಆಡಳಿತದವರಾದರೂ, ಬಿಡಿಸಬಾರದು ಎಂಬ ಬುದ್ದಿ ಆತನಿಗೆ ಕೇಳದಿದ್ದರೂ ಹೇಳುವುದು ಸಮಾಜ ಬಯಸುವ ಸಮುದಾಯ ಪಾಲಿಸಬೇಕಾದ ಶಿಷ್ಟಾಚಾರ. ಸಮಾಜದ ಬಯಕೆಗೆ ವೇದಿಕೆ ನಿರ್ಮಿಸಿ ಶಿಷ್ಟಾಚಾರ ಪಾಲಿಸುವ ಕಾರ್ಯ ಸಮುದಾಯದಿಂದ ನಿರಂತರ ಆಗಬೇಕು ಮತ್ತು ಅದಕ್ಕೆ ಬೇಕಾದ ರಚನೆಗಳನ್ನು ಮಾಡಿಕೊಳ್ಳಬೇಕಿದೆ. ಪ್ರವಾದಿಗೆ ಅವಹೇಳನವಾಗಿರುವುದು ಹೌದು. ಮದುವೆಯನ್ನು ಮರ್ಮಾಂಗ ಸಂಬಂಧಿಸಿ ನೋಡುವುದು ವಿಕೃತಿ. ಮದುವೆಯಾದ ಪ್ರವಾದಿ ಮತ್ತು ಆಯೇಷಾರವರು ಲೋಕ ಮುಖಕ್ಕೆ ಆದರ್ಶರಾಗಿ ಮನಸಾರೆ ಪ್ರೀತಿಸಿಕೊಂಡು ಬದುಕಿದರು. ಆದರೆ ಅದಕ್ಕಾಗಿ ಸಮುದಾಯಗಳು ಪರಸ್ಪರ ದ್ವೇಷಿಸಿಕೊಂಡು ಬದುಕುತ್ತಿದೆ. ಇದೊಂದು ದೊಡ್ಡ ದುರಂತ. ಇದು ಖಂಡನೀಯ. ಆದರೆ ಅದಕ್ಕಾಗಿ ರಾಜಕಾರಣ ಹಣೆದ ಬಲೆಯೊಳಗೆ ಸಿಲುಕಿ ಹಿಂಸಾತ್ಮಕ ಪ್ರತಿಭಟನೆ ಸಲ್ಲದು. ಪ್ರವಾದಿ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದರೂ ಒಂದೂ ಕಲ್ಲೆಸೆದವರಲ್ಲ. ಕಡಿದ ಚೇಳನ್ನೂ ಕೂಡ ಕೊಲ್ಲದಿರು ಎಂದು ಅವರು ಲೋಕಕ್ಕೇ ಸಾರಿದವರು. ಕತ್ತಿ ಹಿಡಿದು ಕೊಲ್ಲಲು ಬಂದವನಿಗೆ ಮಾತ್ರ ಕತ್ತಿ ಹಿಡಿದು ಅವರು ತನ್ನನ್ನು ತಾನು ರಕ್ಷಿಸಿಕೊಂಡದ್ದು. ನಮ್ಮ ನಂತರವೂ ಈ ಜಗತ್ತು ನಮ್ಮ ನಂತರದವರಿಗೆ ಜೀವಂತವಿರಬೇಕಿದೆ. ಪ್ರಸ್ತುತ ಧಾರ್ಮಿಕ ಧ್ರುವೀಕರಣ, ದುಷ್ಟರ ಅಟ್ಟಹಾಸ, ಅಣಕಿಸುತ್ತಿರುವ ಆಯುಧ- ಅಧಿಕಾರಗಳು ನಮ್ಮನ್ನೆಲ್ಲ ಅದೆಲ್ಲಿಗೆ ಕೊಂಡೊಯ್ಯುತ್ತದೋ ಆ ದೇವರೇ ಬಲ್ಲ. ಅದು ಕೊಂಡೊಯ್ಯುವಲ್ಲಿಗೆ ಪ್ರತಿಯೊಬ್ಬರು ತಲುಪುತ್ತಾರೆ ಎಂಬ ಪರಿಜ್ಞಾನ ಸರ್ವರಿಗೂ ಮೂಡಿದರೆ ಆಗ ಸೌಹಾರ್ದ ಸಾಧ್ಯ. ಪರಸ್ಪರ ಆರೋಪ ಪ್ರತ್ಯಾರೋಪ ಬಿಟ್ಟು ಶಾಂತಿಯ ಆಶಯ ಸರ್ವರದ್ದಾಗಲಿ. ಮುಂದಿನ ಪೀಳಿಗೆಗಾಗಿ ಆಸ್ತಿ ಅಂತಸ್ತು ಮಾಡಿಡುವ ಮುಂಚೆ ಅವರುಗಳಿಗೆ ಬದುಕುವ ವಾತಾವರಣ ರೂಪಿಸಿದರೆ ಅದೇ ಜಾಣತನವಾದೀತು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …