Home / ಪ್ರಶ್ನೋತ್ತರ / ಇಸ್ಲಾಮ್ ಮತ್ತು ವಿಕಾಸವಾದ

ಇಸ್ಲಾಮ್ ಮತ್ತು ವಿಕಾಸವಾದ

ವಿಜ್ಞಾನ ಲೋಕಕ್ಕೆ ಇಸ್ಲಾಮ್‌ ವಿರುದ್ಧವಾಗಿಲ್ಲವೆಂದು ಹೇಳುತ್ತಾರೆ, ಹಾಗಿದ್ದರೆ ಇಸ್ಲಾಮ್ ಡಾರ್ವಿನ್‌ ನ ವಿಕಾಸವಾದವನ್ನು ಒಪ್ಪುತ್ತದೆಯೇ?

ವೈಜ್ಞಾನಿಕ ಸಂಶೋಧನೆಗಳಿಂದ ರುಜುವಾತಾದ ಸತ್ಯಗಳಿಗೆ ಇಸ್ಲಾಮ್ ವಿರುದ್ಧವಾಗಿಲ್ಲ. ಎಂಬುದು ಸರ್ವರಿಗೂ ತಿಳಿದ ವಿಚಾರ. ಆದರೆ ವೈಜ್ಞಾನಿಕ ನಿರೀಕ್ಷೆಗಳಿಗೋ, ಸಂಶಯಾಸ್ಪದ ಸಂಶೋಧನೆಗಳಿಗೋ ಇದು ಬಾಧಕವಲ್ಲ, ವಿಕಾಸವಾದ ಎಂಬುದು ವೈಜ್ಞಾನಿಕವಾಗಿ ಸಂಪೂರ್ಣ ಸರಿ ಎಂದು ಹೇಳುವ ಸಿದ್ಧಾಂತವಲ್ಲ, ಅದೊಂದು ಸಂಶಯ ಮಾತ್ರ.

ವಿಕಾಸವು ಎರಡು ವಿಧವೆಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಸೂಕ್ಷ್ಮ ಪರಿಣಾಮ ಮತ್ತು ಸ್ಥೂಲ ಪರಿಣಾಮ. ಒಂದು ವರ್ಗದಲ್ಲಿ (ಸ್ಪಿಶ್ಯಸ್) ನಡೆಯುವ ಆಂತರಿಕವಾದ ಕ್ಷುಲ್ಲಕ ಬದಲಾಣೆಗೆ ಸೂಕ್ಷ್ಮ ಪರಿಣಾಮಗಳು ಎನ್ನಲಾಗುತ್ತದೆ. ಮನುಷ್ಯರಲ್ಲಿ ಉದ್ದ ಗಿಡ್ಡ, ಬಿಳಿಯ, ಕರಿಯ, ಗಂಡು-ಹೆಣ್ಣು, ಪ್ರತಿಭಾವಂತರು ಹಾಗೂ ಮಂದ ಬುದ್ಧಿಗಳು ಇರುತ್ತಾರೆ. ಒಂದೇ ಕುಟುಂಬ ಒಂದೇ ತಂದೆ ತಾಯಿಯ ಮಕ್ಕಳಲ್ಲೂ ಈ ವೈವಿಧ್ಯತೆಗಳು ಕಂಡು ಬರುತ್ತದೆ. ಇಂತಹ ಬದಲಾವಣೆಗಳ ಸೂಕ್ಷ್ಮ ಪರಿಣಾಮವನ್ನು ಇಸ್ಲಾಮ್ ವಿರೋಧಿಸುವುದಿಲ್ಲ. ಆದರೆ ಒಂದು ಜೀವಿಯ ಇನ್ನೊಂದಾಗಿ ಪರಿವರ್ತನೆಗೊಳ್ಳುವುದೆಂಬ ಸ್ಥೂಲ ಪರಿಣಾಮದ ಕುರಿತು ವಿಭಿನ್ನ ಅಭಿಪ್ರಾಯಗಳಿವೆ. ಅದರಲ್ಲಿ ಸ್ವಲ್ಪವೂ ಸತ್ಯಾಂಶವಿಲ್ಲ. ಪರಸ್ಪರ ಹೊಂದಾಣಿಕೆಯಿಲ್ಲ. ಏಕೆಂದರೆ ಸ್ಥೂಲ ಪರಿಣಾಮಕ್ಕೆ ವೈಜ್ಞಾನಿಕವಾಗಿಯೂ, ಐತಿಹಾಸಿಕವಾಗಿಯೂ ಪುರಾವೆಯೇ ಇಲ್ಲ. ಕೇರಳದ ವಿಕಾಸವಾದದ ಪ್ರತಿಪಾದಕರಾದ ಡಾ| ಕುಂಞಣ್ಣಿ ವರ್ಮರವರು ಇದನ್ನು ಒಪ್ಪಿಕೊಳ್ಳುತ್ತಾರೆ. “ಸಂಶೋಧನಾತ್ಮಕವಾದ ಸಾಕ್ಷ್ಯವಿಲ್ಲವೆಂದು ಸ್ಥೂಲ ಪರಿಣಾಮದ ಕುರಿತು ಮಾತ್ರ ಹೇಳಲಾಗಿದೆ. ಅದೇ ವೇಳೆ ವಿಕಾಸವಾದದ ಹಲವು ತತ್ವಗಳ ಕುರಿತು ಸೂಕ್ಷ್ಮ ಪರಿಣಾಮಗಳ ಕುರಿತು ಪರೀಕ್ಷೆಗಳನ್ನು ನಡೆಸಿ ತಾವು ಆಶಿಸಿದ ವಿಚಾರಗಳನ್ನು ಪಡೆಯಲು ಶಾಸ್ತ್ರಜ್ಞರಿಗೆ ಸಾಧ್ಯವಾಗಿದೆ.” (ಉದ್ಧರಣೆ: ಸೃಷ್ಟಿವಾದವೂ, ಪರಿಣಾಮ ಸಿದ್ಧಾಂತವು ಪುಟ-33)

ವಿಕಾಸವಾದದ ಮೂಲ ಪುರುಷನೆಂದು ಹೇಳಲ್ಪಡುವ ಚಾರ್ಲ್ಸ್ ಡಾರ್ವಿನ್ ಕೂಡಾ ಅದನ್ನು ನಿಷೇಧಿಸಲಾಗದ ಸಿದ್ಧಾಂತವೆಂದು ದೃಢವಾಗಿ ಹೇಳುವುದಿಲ್ಲ. ಅವರು ಬರೆಯುತ್ತಾರೆ: ‘ವಿಶೇಷ ರೂಪಗಳ ವ್ಯತ್ಯಾಸವು ಅವು ಅನೇಕ ಪರಿವರ್ತನೆಗಳೊಂದಿಗೆ ಸೇರಿಕೊಂಡಿಲ್ಲ. ಎಂಬುದು ಬಹಳ ಸ್ಪಷ್ಟವಾದ ಸಮಸ್ಯೆಯಾಗಿದೆ.’

ಡಾರ್ವಿನ್ ಕೃತಿಯ ಒಂಭತ್ತನೇ ಅಧ್ಯಾಯದ ಶೀರ್ಷಿಕೆ ಭೂಗೋಳ ಶಾಸ್ತ್ರದ ಅಪೂರ್ಣತೆ ಎಂದು ಆಗಿದೆ. ಡಾರ್ವಿನ್ ನೀಡುವ ಪಾಸಿಬಲ್‌ ಅವಶೇಷಗಳ ವಿವರಣೆಯೇ ಅದರ ಮುಖ್ಯ ವಿಷಯ. ಅದರಲ್ಲಿ ಹೇಳಲಾಗಿದೆ. ಪೋಝಿಲ್ ಶೃಂಖಲೆಯ ಕುರಿತು ಡಾರ್ವಿನ್ ನೀಡುವ ವಿವರಣೆಗಳು ಎಂದು ಇದರ ಅರ್ಥ.

ಒಂದೇ ಗ್ರೂಪಿನ ವಿವಿಧ ಸ್ವಿಶ್ಯಸ್ ಗಳು ಹಳತಾದ ಪಾಲಿಯೋ ಸೋಯಿಕ್‌ನ ಮೊದಲ ಹಂತವಾದ ಸಿಲೂರಿಯನ್ ಅವಶೇಷಗಳಲ್ಲಿ ತಕ್ಷಣಕ್ಕೆ ಕಂಡು ಬರುತ್ತದೆಂದು ಆ ಕಾಲದ ಉತ್ಖನನಗಳು ತಿಳಿಸಿಕೊಟ್ಟಿತು. ಸಿಲೂರಿಯನ್‌ನ ಸ್ವಲ್ಪ ಮುಂದಿನ ಕ್ರಸೈಶ್ಯನ್ ಅವಶೇಷಗಳಲ್ಲಿ ಇವುಗಳ ಪೂರ್ವಿಕರನ್ನು ಕಾಣಬೇಕಾಗಿತ್ತು. ಆದರೆ ಅದೂ ಲಭಿಸಲಿಲ್ಲ. ಇದು ಅತ್ಯಂತ ನಿರಾಶಾದಾಯಕ ಸಮಸ್ಯೆಗಳೆಂದು ಒಪ್ಪಿಕೊಂಡು ಡಾರ್ವಿನ್ ಬರೆಯುತ್ತಾರೆ: ‘ಈ ವಿಶಾಲವಾದ ಕಾಲಘಟ್ಟಗಳ ಗುರುತುಗಳು ಏಕೆ ಕಾಣುತ್ತಿಲ್ಲವೆಂಬ ಪ್ರಶ್ನೆಗೆ ಸರಿಯಾದ ಉತ್ತರವನ್ನು ನೀಡಲು ನನಗೆ ಸಾಧ್ಯವಿಲ್ಲ.’ (ಒರಿಜಿನಲ್ ಆಫ್ ಸ್ಪೀಶ್ಯಸ್ ಪುಟ 313 ಉದ್ದರಣೆ ಡಾರ್ವಿನಿಝಂ ಪ್ರತೀಕ್ಷೆಯೂ, ಪ್ರತಿಸಂಧಿಯೂ ಪುಟ 30)

ಚಾರ್ಲ್ಸ್ ಡಾರ್ವಿನ್ ರ ಬಳಿಕ ವಿಕಾಸವಾದ ಸಿದ್ಧಾಂತಕ್ಕೆ ಬಲ ನೀಡುವ ಯಾವುದೇ ಸಾಕ್ಷ್ಯವು ಲಭಿಸಲಿಲ್ಲವೆಂಬುದು ಗಮನಾರ್ಹವಾಗಿದೆ. ಚಿಕಾಗೋ ವಿಶ್ವವಿದ್ಯಾನಿಲಯದ ಭೂಗರ್ಭಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡೇವಿಡ್ ಎಂ. ರೂಫ್ ಬರೆಯುತ್ತಾರೆ: ‘ನನ್ನ ಸಿದ್ಧಾಂತ ಹಾಗೂ ಪೋಸಿಲ್ (Fossil) ಸಾಕ್ಷ್ಯಗಳಿಗೂ ಮಧ್ಯೆ ಇರುವ ಗೊಂದಲಕ್ಕೆ ಸಾಮಾನ್ಯ ಪರಿಹಾರವಾಗಿ ಪೋಸಿಲ್ ರೇಖೆಯು ಬಹಳ ಅಪರೂಪವೆಂದು ಡಾರ್ವಿನ್ ಹೇಳಿದ್ದರು. ಡಾರ್ವಿನ್‌ರ ಬಳಿಕ 120 ವರ್ಷಗಳು ಕಳೆದು ಹೋಗಿದೆ. ಫೋಸಿಲ್ ರೇಖೆಗಳ ಕುರಿತು ವಿಜ್ಞಾನ ಬಹಳಷ್ಟು ತಿಳಿದುಕೊಂಡಿದೆ. ನಮ್ಮಲ್ಲಿ ಈಗ ಎರಡು ಲಕ್ಷದ ಐವತ್ತು ಸಾವಿರ ವರ್ಗದ ಪಳೆಯುಳಿಕೆಗಳಿದ್ದರೂ ಸ್ಥಿತಿ ಬದಲಾಗಿಲ್ಲ. ಪರಿಣಾಮರೇಖೆ ಈಗಲೂ ಆಶ್ಚರ್ಯ ಹುಟ್ಟಿಸುವಂತೆಯೇ ಇದೆ. ವಿರೋಧಾಬಾಸವೆಂಬಂತೆ ಡಾರ್ವಿನ್‌ ಕಾಲದಲ್ಲಿರುವುದಕ್ಕಿಂತ ಕಡಿಮೆ ಪರಿಣಾಮದ ಉದಾಹರಣೆಗಳು ನಮಗಿದೆ. (Conflicts Between Darwinism and Paloeantolagy Bullettin Field Museum of Natural History Vol.50, Jan 1979, P:22 ಉದ್ಧರಣೆ Ibid ಪುಟ 23)

ಡಾರ್ವಿನಿಝಂನಲ್ಲಿ ವಿಕಾಸವಾದಿಗಳೇ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು 1982 ರಲ್ಲಿ ಹೊರತಂದ ಪ್ರಮುಖ ಪ್ರಾಣಿಶಾಸ್ತ್ರಜ್ಞನೂ ಪರಿಣಾಮ ಸಿದ್ಧಾಂತವಾದಿಯೂ ಆದ ಹೊವಾಡ್‌ರ ಡಾರ್ವಿನ್‌ರ ಕುರಿತ ಜೀವನ ಚರಿತ್ರೆಯ ಕೃತಿಗಳಲ್ಲಿ ಹೀಗಿದೆ: ‘ಡಾರ್ವಿನ್‌ರ ಮರಣ ಶತಾಬ್ದಿಯೊಂದಿಗೆ ವಿಜ್ಞಾನರಂಗಕ್ಕೆ ಡಾರ್ವಿನ್ ನೀಡಿರುವ ಕೊಡುಗೆಗಳ ಕುರಿತು ವ್ಯಾಪಕ ಸಂಶಯಗಳು ಹಾಗೂ ಗೊಂದಲಗಳು ಹುಟ್ಟಿಕೊಳ್ಳುತ್ತದೆ.” (ಉದ್ಧರಣೆ: ಸೃಷ್ಟಿವಾದವೂ ಪರಿಣಾಮವಾದಿಗಳೂ, ಪುಟ 54)

ಪ್ರಮುಖ ಪಳೆಯುಳಿಕೆ ಶಾಸ್ತ್ರಜ್ಞರಾದ ಸ್ಟೀಫನ್ ಗೌಲ್ಡ್ ಮತ್ತು ನೀಲ್ಸ್ ಎಲ್. ಡ್ರೈಡ್ಜ್ ಡಾರ್ವಿನಿಝಂನ ಕುರಿತು ವಿಶ್ವಾಸ ಕಳೆದುಕೊಂಡಿದ್ದರಿಂದ ಹೊಸ ಸಿದ್ಧಾಂತವನ್ನು ಆವಿಷ್ಕರಿಸಿದರು. ವಿಶ್ವವಿಖ್ಯಾತ ವಿಕಾಸವಾದಿಗಳಿಗೆ ಕೂಡಾ ತಮ್ಮ ಸಿದ್ಧಾಂತದ ದೌರ್ಬಲ್ಯದ ಕುರಿತು ಚೆನ್ನಾಗಿ ತಿಳಿದಿದೆ. ಸತ್ಯವಂತರಾದ ಕೆಲವರು ಅದನ್ನು ಬಹಿರಂಗಪಡಿಸಿದ್ದಾರೆ. ಖ್ಯಾತ ಪುರಾತತ್ವ ತಜ್ಞರೂ, ಪರಿಣಾಮ ಸಿದ್ಧಾಂತವಾದಿಯೂ ಆದ ಡಾ| ಕೋಲಿನ್ ಪಾಟರ್ಸನ್ ಬರೆದ ಪತ್ರದಲ್ಲಿ ಹೀಗಿದೆ: ‘ಆರ್ಕಿಯೋಪ್‌ಟೆರಿಕ್ಸ್’ ಎಂಬುದು ಪಕ್ಷಿಸಂಕುಲದ ಪೂರ್ವಜ ಪಕ್ಷಿಯಾಗಿತ್ತೇ! ಬಹುಶಃ ಆಗಿರಬಹುದು. ಇಲ್ಲದಿರಲೂಬಹುದು. ಈ ಪ್ರಶ್ನೆಗೆ ಉತ್ತರಿಸಲು ಯಾವುದೇ ಮಾರ್ಗವಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ ಆದ ಕುರಿತು ಕಥೆ ಹೆಣೆಯಲು ಸುಲಭವಿದೆ. ಅದು ಯಾವ ರೀತಿ ಒಂದೊಂದು ಹಂತವನ್ನು ದಾಟಿತೆಂದೂ ಹೇಳಲು ಸಾಧ್ಯವಿದೆ. ಆದರೆ ಅಂತಹ ಕಥೆಗಳು ವಿಜ್ಞಾನದ ಭಾಗವಲ್ಲ ಕಾರಣವೇನೆಂದರೆ ಅದನ್ನು ಪರೀಕ್ಷೆಗೊಳಪಡಿಸಲು ಸಾಧ್ಯವಿಲ್ಲ (1979 ಎಪ್ರಿಲ್ 10 ರ ಪಾಟರ್ಸನ್ ರ ಪತ್ರ Scopes The Great Debatepp. 14-16 ಉದ್ಧರಣೆ: Ibid ಪುಟ 68)

ಪ್ರಖ್ಯಾತ ಸೃಷ್ಟಿವಾದದ ಬರಹಗಾರರಾಗಿದ್ದ ಸುನ್ದರ್ ಲ್ಯಾಂಡ್ ರ ಪತ್ರಕ್ಕೆ ಉತ್ತರವಾಗಿತ್ತದು. ಅದರಲ್ಲಿ ಅವರು ಹೀಗೂ ಬರೆದಿದ್ದರು: ‘ಪರಿಣಾಮ ಸಿದ್ಧಾಂತದ ರೀತಿಯು ಬದಲಾವಣೆಗಳಾದ ಪ್ರತ್ಯಕ್ಷವಾದ ಉದಾಹರಣೆಗಳು ನನ್ನ ಪುಸ್ತಕದಲ್ಲಿಲ್ಲದ ಕುರಿತು ತಮ್ಮ ಅಭಿಪ್ರಾಯವನ್ನು ನಾನು ಒಪ್ಪಿಕೊಂಡಿದ್ದೇನೆ. ಜೀವಂತವಿರುವ ಅಥವಾ ಪಳೆಯುಳಿಕೆ ರೂಪದಲ್ಲಿರುವ ಯಾವುದಾದರೂ ಒಂದರ ಕುರಿತು ನನಗೆ ತಿಳಿದಿರುತ್ತಿದ್ದರೆ ನಾನು ಖಂಡಿತ ಸೇರಿಸುತ್ತಿದ್ದೆ. ಅಂತಹ ಬದಲಾವಣೆಗಳನ್ನು ಓರ್ವ ಕಲಾಕಾರನ ಭಾವನೆಯಲ್ಲಿ ಚಿತ್ರೀಕರಿಸಬಹುದಿತ್ತೆಂದು ತಾವು ಹೇಳುತ್ತೀರಿ. ಆದರೆ ಅದರ ಕುರಿತು ಆತನಿಗೆ ವಿಷಯ ಎಲ್ಲಿಂದ ಲಭಿಸುತ್ತದೆ. ನಿಜ ಹೇಳಬೇಕೆಂದರೆ ನನ್ನಿಂದ ನೀಡಲು ಸಾಧ್ಯವಿಲ್ಲ.” (Ibid ಪುಟ 68)

ವೈಜ್ಞಾನಿಕ ಸಂಶೋಧನೆಗಳು ಡಾರ್ವಿನ್ ವಿಕಾಸವಾದಕ್ಕೆ ಪೂರಕವಾಗಿದೆಯೆಂದು ಇತ್ತೀಚಿಗಿನ ವರೆಗೂ ಪ್ರಬಲವಾಗಿ ವಾದಿಸುತ್ತಿದ್ದ ಡಾ| ಎ. ಎನ್. ನಂಬೂದರಿ ಈಗ ಮಾತು ಬದಲಿಸಲು ನಿರ್ಬಂಧಿತರಾಗಿದ್ದಾರೆ. ಅವರು ಬರೆದರು: ‘ವೈಜ್ಞಾನಿಕ ರಂಗದ ಹೊಸ ಬದಲಾವಣೆಗಳನ್ನು ತಾಳಿಕೊಳ್ಳಲು ಹಾಗೂ ತಮ್ಮ ನಿಲುವಿನಲ್ಲಿ ದೃಢವಾಗಿರಲು ಡಾರ್ವಿನಿಝಂಗೆ ಇದುವರೆಗೂ ಸಾಧ್ಯವಾಯಿತು. ಆದರೆ ಈಗ ಚಿತ್ರಣ ಬದಲಾಗಿದೆ. ಡಾರ್ವಿನ್ ಸಿದ್ಧಾಂತಕ್ಕೆ ಸಂಪೂರ್ಣ ಮಸುಕಾಗಿಲ್ಲ. ಆದರೆ ಜೈವಿಯು ಇತಿಹಾಸದ ಕೆಲವು ಹಂತಗಳಲ್ಲಿ ವಿಕಾಸದ ಬದಲಾವಣೆಯ ರೀತಿ ಡಾರ್ವಿನ್ ಸಿದ್ಧಾಂತಕ್ಕೆ ಪೂರಕವಾಗಿಲ್ಲ ಎಂಬ ಸೂಚನೆಯಿದೆ. ಇದು ಡಾರ್ವಿನಿಝಂ ಎದುರಿಸುತ್ತಿರುವ ಮೊದಲ ಸವಾಲು (ಡಾರ್ವಿನಿಝಂ, ತಿರುವಿನಲ್ಲಿ, ಕಲಾಕೌಮುದಿ 1076, ಪುಟ 19)

ವೈಜ್ಞಾನಿಕ ಸತ್ಯಗಳ ವಿರುದ್ಧ ಕೇಳಿ ಬರುವ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರ ಲಭಿಸುತ್ತದೆ. ಆದರೆ ಪರಿಣಾಮ ಸಿದ್ಧಾಂತಕ್ಕೆ ಎದುರಾಗಿ ಕೇಳಿ ಬಂದ ಪ್ರಶ್ನೆಗಳಿಗೆ ಇದುವರೆಗೂ ಸರಿಯುತ್ತರ ಲಭಿಸಿಲ್ಲ, ಉದಾಹರಣೆಗೆ ಒಂದನ್ನು ಮಾತ್ರ ಇಲ್ಲಿ ಪ್ರಸ್ತಾಪಿಸುತ್ತೇನೆ ‘ಜೀವಿಗಳಲ್ಲಿ ನಿರಂತರ ಬದಲಾವಣೆಗಳು ಸಂಭವಿಸುತ್ತಿರುತ್ತದೆ. ಬದಲಾವಣೆಗಳು ಪ್ರಾಕೃತಿಕವಾಗಿಯೇ ಉಂಟಾಗುವುದರಿಂದ ಆದು ವಂಶಪಾರಂಪರ್ಯವಾಗಿ ಮುಂದುವರಿಯುತ್ತದೆ. ಅನುಕೂಲ ಗುಣಗಳು ಒಂದುಗೂಡಿ ಹೊಸ ಜೀವ ವರ್ಗಗಳು ಉಂಟಾಗುತ್ತದೆ’ ಎಂಬುದು ಡಾರ್ವಿನರ ವಾದ, ಇದು ಸರಿಯೆಂದಾದರೆ ಸುಮಾರು ಮುನ್ನೂರು ಕೋಟಿ ವರ್ಷಗಳಿಗಿಂತ ಮೊದಲೇ ಈ ಭೂಮಿಯಲ್ಲಿದ್ದ (ಈಗಲೂ ಇರುವ) ಏಕಕೋಶ ಜೀವಿಗಳಾದ ಅಮೀಬಗಳು ಹೇಗೆ ಉಳಿದುಕೊಂಡವು? ಇಂದು ಕಾಣುವ ಅಮೀಬಾಗಳು ಹಿಂದಿನ ತಲೆಮಾರುಗಳಲ್ಲಿ ನಿರಂತರ ಬದಲಾವಣೆ ಸಂಭವಿಸಿಲ್ಲವೇ? ಇಲ್ಲದಿದ್ದರೆ ಏಕೆ? ಮುನ್ನೂರು ಕೋಟಿ ವರ್ಷಗಳ ಹಿಂದಿನ ಏಕಕೋಶ ಜೀವಿಗಳು ಅದೇ ಸ್ಥಿತಿಯಲ್ಲಿ ಮುಂದುವರಿದು ಇನ್ನೊಂದು ವಿಭಾಗ ಅಸಂಖ್ಯಾತ ಹೊಸ ಜೀವ ವರ್ಗಗಳಿಂದ ಸಸ್ತನಿಗಳಾಗಲು ಕಾರಣವೇನು? ಇಂತಹ ಪ್ರಶ್ನೆಗಳು ಡಾರ್ವಿನ್ ವಿಕಾಸವಾದದ ನೈಜತೆಯನ್ನು ಪ್ರಶ್ನಿಸುವಂತಹದ್ದಾಗಿದೆ. ಈ ವಾಸ್ತವಿಕತೆಗಳು ತನ್ನನ್ನು ಸೋಲಿಸುತ್ತದೆಯೆಂದು ಡಾರ್ವಿನ್ ಒಪ್ಪಿಕೊಂಡಿದ್ದಾರೆ. 1860 ಮೇ 22ಕ್ಕೆ ಡಾರ್ವಿನ್‌ರ ಹಿಂಗಾಮಿಯಾದ ಹಾರ್ವರ್ಡ್ ವಿಶ್ವವಿದ್ಯಾನಿಲಯದ ಸಸ್ಯಶಾಸ್ತ್ರಜ್ಞರಾಗಿದ್ದ ಅಸಗ್ರೇಕ್ ಬರೆದರು: ‘ಪತ್ರಗಳ ಮೂಲಕ ಬಂದ ಅಭಿಪ್ರಾಯಗಳಿಂದ ಅರ್ಥಮಾಡಿಕೊಂಡಂತೆ ನನ್ನ ಕೃತಿಯ ಅತ್ಯಂತ ದೊಡ್ಡ ದೌರ್ಬಲ್ಯವೇನೆಂದರೆ ಎಲ್ಲ ಜೀವ ವರ್ಗಗಳು ವಿಕಾಸವಾಗುತ್ತದೆಂದಾದರೆ, ಏಕಕೋಶ ಜೀವಿಗಳು ಏಕೆ ಹಾಗೇ ಉಳಿದುಕೊಂಡಿದೆ ಎಂಬುದು ವಿವರಿಸಲು ಸಾಧ್ಯವಾಗದಿರುವುದಾಗಿದೆ.’ (ಫ್ರಾನ್ಸಿಸ್ ಡಾರ್ವಿನ್ ಬರೆದ The Life and Letters of Charls Darwin ಎಂಬ ಕೃತಿಯಿಂದ ಎಸ್.ಎಮ್. ಹುಸೈನ್, ಡಾರ್ವಿನಿಝಂ, ಪ್ರತೀಕ್ಷೆಯೂ ಪ್ರತಿಸಂಧಿಯೂ ಪುಟ 18-19)

ವಿಕಾಸವಾದಿಗಳು ಆರಂಭ ಕಾಲದಲ್ಲಿ ತಮ್ಮ ವಾದಕ್ಕೆ ಪುರಾವೆಯಾಗಿ ಎತ್ತಿ ತೋರಿಸುತ್ತಿದ್ದ ಅರೆಮಾನವರೆಂದು ಹೇಳುವ ಪಳೆಯುಳಿಕೆಗಳು ಯಾವುದೋ ರೋಗದಿಂದ ಸಾವನ್ನಪ್ಪಿದ್ದ ಸಾಮಾನ್ಯ ಮನುಷ್ಯರ ಎಲುಬುಗಳನ್ನು ಸೇರಿಸಿದ್ದರೆಂದು ನಂತರ ತಿಳಿದು ಬಂತು. ಅದರೊಂದಿಗೆ ಮೃಗವನ್ನು ಹೋಲುವ ಅರೆಮಾನವೇತರ ಮನುಷ್ಯರ ಕಥೆಯೂ ಅಷ್ಟೆ. ಅದಕ್ಕೆ ಬದಲಿಯಾದುದೊಂದು ಹೇಳಲು ವಿಕಾಸವಾದಿಗಳಿಗೆ ಸಾಧ್ಯವಾಗಿಲ್ಲ.

ಅರೆಮನುಷ್ಯನ ಕಥೆಯೂ ಇದೇ ಆಗಿದೆ. ಡಾರ್ವಿನ್ ಸಿದ್ಧಾಂತದಂತೆ ಇಂದಿನ ಮಾನವನು ಮಾನವೇತರ ಮತ್ತು ಅರೆಮಾನವೇತರ(ಮಂಗನಿಂದ ಮಾನವ) ಹಂತಗಳ ಮೂಲಕ ವಿಕಾಸವಾಗಿದ್ದಾನೆ. ಈ ಅನುಕ್ರಮ ವಿಕಾಸದ ಸುದೀರ್ಘ ಶ್ರೇರ್ಣಿಯಲ್ಲಿ ಮಾನವೇತರ ಸ್ಥಿತಿ ಮುಗಿದು ‘ಮಾನವ ಕುಲ’ ಆರಂಭವಾದ ನಿರ್ದಿಷ್ಟ ಬಿಂದುವನ್ನು ಬೊಟ್ಟು ಮಾಡಲು ಸಾಧ್ಯವಾಗಿಲ್ಲ, ಅರೆಮಾನವನೆಂದು ಹೇಳಲಾಗುವ ಅಸ್ಥಿಗೆ ಮಂಗನ ಗಲ್ಲದ ಎಲುಬನ್ನು ಕೃತಕವಾಗಿ ತಲೆಬುರುಡೆಗೆ ಸೇರಿದೆಯೆಂದು ನಂತರದ ದಿನಗಳಲ್ಲಿ ತಿಳಿದುಬಂದಿತ್ತು. ಇವೆಲ್ಲಾ ಡಾರ್ವಿನ್‌ನ ಸಿದ್ಧಾಂತವನ್ನು ಕಥಾ ವಸ್ತುಗೊಳಿಸುವಲ್ಲಿ ಪ್ರಥಮ ಪಾತ್ರವನ್ನು ವಹಿಸಿದೆ.

ಸಂಕ್ಷಿಪ್ತವಾಗಿ ಹೇಳುವುದಿದ್ದರೆ ಡಾರ್ವಿನ್‌ ವಿಕಾಸವಾದಕ್ಕೆ ವೈಜ್ಞಾನಿಕ ಸಾಕ್ಷ್ಯವೋ, ಬೆಂಬಲವೋ ಇಲ್ಲ. ಕೆಲವು ದುರ್ಬಲ ಭಾವನೆಗಳು, ಅನುಮಾನಗಳು ಮಾತ್ರ ಈ ಸಿದ್ಧಾಂತದಲ್ಲಿ ಕಾಣಿಸಿಕೊಂಡಿದೆ. ಅದರ ವಿಶ್ವಾಸಾರ್ಹತೆಯೂ ದಿನೇ ದಿನೇ ನಷ್ಟವಾಗುತ್ತಿದೆ. ಇಂತಹ ಒಂದು ದುರ್ಬಲ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೋ? ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಡಾರ್ವಿನ್‌ ವಿಕಾಸವಾದವು ವೈಜ್ಞಾನಿಕವಾಗಿ ಸಾಬೀತಾದರೆ ಮಾತ್ರ ಇಸ್ಲಾಮ್‌ನ ದೃಷ್ಟಿಕೋನದೊಂದಿಗೆ ಹೋಲಿಸಲು ಸಾಧ್ಯ.

ದೇವರು- ಧರ್ಮ- ಧರ್ಮಗ್ರಂಥ ಸ್ನೇಹ ಸಂವಾದ ಎಂಬ ಕೃತಿಯಿಂದ”

SHARE THIS POST VIA

About editor

Check Also

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್ ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ …

Leave a Reply

Your email address will not be published. Required fields are marked *