Home / ಲೇಖನಗಳು / ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

ಮುಸ್ಲಿಮ್ ಜನಸಂಖ್ಯೆ: ಪ್ರಧಾನಿಯ ಹೇಳಿಕೆ ಮತ್ತು ವಾಸ್ತವ

✍️ ಏ.ಕೆ. ಕುಕ್ಕಿಲ

ಮುಸ್ಲಿಮರು ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಜಸ್ತಾನದ ಚುನಾವಣಾ ಭಾಷಣದಲ್ಲಿ ಅವರು ಹೇಳಿರುವ ಈ ಮಾತು ನಿಜವೇ? ಸರ್ಕಾರವೇ ಒದಗಿಸಿರುವ ಮಾಹಿತಿಗಳು ಏನನ್ನುತ್ತವೆ?

ಈ ಅಭಿಪ್ರಾಯವನ್ನು ವಿಶ್ಲೇಷಣೆಗೆ ಒಳಪಡಿಸುವುದಕ್ಕಿಂತ ಮೊದಲು, ಈ ದೇಶದಲ್ಲಿ ಅತೀ ಹೆಚ್ಚು ಮಾರಾಟವಾಗುವ ಆಂಗ್ಲ ದೈನಿಕ ಟೈಮ್ಸ್ ಆಫ್ ಇಂಡಿಯಾದಲ್ಲಿ 2021 ಅಕ್ಟೋಬರ್ 16ರಂದು ಪ್ರಕಟವಾದ ಬರಹವನ್ನು ಓದುವುದು ಉತ್ತಮ. ಅಂಕಿ-ಅಂಶಗಳ ಆಧಾರಿತವಾಗಿ ಬರೆಯಲಾದ ಆ ಬರಹದ ಶೀರ್ಷಿಕೆ:

Rate of Muslim population rise fell more than Hindus in 20 years (ಕಳೆದ 20 ವರ್ಷಗಳಲ್ಲಿ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರ ಹಿಂದೂಗಳಿಗಿಂತಲೂ ಕಡಿಮೆ.) ಗೂಗಲ್ ಮಾಡಿದರೆ ಈ ಬರಹ ಈಗಲೂ ಓದುವಿಕೆಗೆ ಲಭ್ಯ ಇದೆ. ಈ ಬರಹದ ಆರಂಭ ಹೀಗಾಗುತ್ತದೆ-

While India’s Muslim population grew faster than Hindu population between 1991 and 2001 and then between 2001 and 2011, the pace of growth declined more dramatically for muslims than hindus over thesetwo decades, census data shows-

– ಅಂದರೆ,

‘ಜನಗಣತಿ ಅಂಕಿ-ಅಂಶಗಳ ಪ್ರಕಾರ, 1991-2001ರ ನಡುವೆ ಈ ದೇಶದ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು ಹಿಂದೂ ಜನಸಂಖ್ಯಾ  ಬೆಳವಣಿಗೆ ದರಕ್ಕಿಂತ ವೇಗವಾಗಿತ್ತಾದರೂ 2001-2011ರ ನಡುವೆ ಮುಸ್ಲಿಮರ ಈ ಬೆಳವಣಿಗೆ ದರವು ಹಿಂದೂಗಳಿಗಿಂತಲೂ ವೇಗವಾಗಿ  ಕುಸಿಯಿತು.’

1991ರಿಂದ 2011- ಈ ಎರಡು ದಶಕಗಳಲ್ಲಿ ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರವು 19.9%ದಿಂದ 16.8%ಕ್ಕೆ ಕುಸಿಯಿತು.  ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಈ 20 ವರ್ಷಗಳಲ್ಲಿ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರ 3.1%ಕ್ಕೆ ಕುಸಿಯಿತು. ಇದೇ ಅವಧಿಯಲ್ಲಿ  ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರವು 29.5%ದಿಂದ 24.6%ಕ್ಕೆ ಕುಸಿಯಿತು. ಅಂದರೆ, ಈ ಎರಡು ದಶಕಗಳ ನಡುವೆ 4.7%ಕ್ಕೆ ಕುಸಿಯಿತು.  ಹಿಂದೂ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ ಕುಸಿತಕ್ಕೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆ ದರದಲ್ಲಿ ಕುಸಿತದ  ಪ್ರಮಾಣ ಹೆಚ್ಚು. 1991-2011- ಈ 20 ವರ್ಷಗಳ ನಡುವೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ ದರವು 3.1% ಕುಸಿದಿದ್ದರೆ ಮುಸ್ಲಿಮರ  ಕುಸಿತದ ಪ್ರಮಾಣವು 4.7% ಆಗಿತ್ತು. ಇದೇವೇಳೆ, ಇದೇ ಅವಧಿಯಲ್ಲಿ ಬೌದ್ಧ, ಜೈನ, ಕ್ರೈಸ್ತ ಸಮುದಾಯದ ಜನಸಂಖ್ಯಾ ಬೆಳವಣಿಗೆ ದರದ  ಇಳಿಕೆಯು ಇದಕ್ಕಿಂತಲೂ ಹೆಚ್ಚಾಗಿದೆ. ಅಂದಹಾಗೆ,

1991ರಿಂದ  2011ರ ನಡುವೆ ಭಾರತದ ವಿವಿಧ ಧರ್ಮಗಳ ಲೆಕ್ಕಾಚಾರ ಮಾಡುವುದಾದರೆ, ಅತೀ ನಿಧಾನವಾಗಿ ಜನಸಂಖ್ಯಾ ಬೆಳವಣಿಗೆಯಲ್ಲಿ  ಇಳಿಕೆ ಕಂಡಿರುವುದು ಹಿಂದೂ ಸಮುದಾಯದಲ್ಲಿ. ಅತೀ ವೇಗವಾಗಿ ಜನಸಂಖ್ಯಾ ದರ ಇಳಿದಿರುವುದು ಜೈನ ಮತ್ತು ಬೌದ್ಧ ಸಮುದಾಯದಲ್ಲಿ. ಭಾರತ ಸರ್ಕಾರ ನಡೆಸಿರುವ ಜನಗಣತಿ ವಿವರಗಳೇ ಇವೆಲ್ಲವನ್ನೂ ಸ್ಪಷ್ಟಪಡಿಸಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿ ಇನ್ನೂ ನಡೆಯದಿರುವುದರಿಂದ 2011ರ ಜನಗಣತಿಯನ್ನೇ ಜನಸಂಖ್ಯಾ ಲೆಕ್ಕಾಚಾರಕ್ಕೆ ಆಧಾರವಾಗಿ ಪರಿಗಣಿಸಲಾಗುತ್ತದೆ.

ಇನ್ನೂ ಒಂದಿಷ್ಟು ಅಂಕಿ-ಅಂಶಗಳು

1992ರಲ್ಲಿ ಓರ್ವ ಮುಸ್ಲಿಮ್ ಮಹಿಳೆಗೆ ಸರಾಸರಿ 4.4 ಮಕ್ಕಳು ಇದ್ದರೆ, 2015ಕ್ಕೆ ತಲುಪುವಾಗ ಇದು 2.6ಕ್ಕೆ ಕುಸಿಯಿತು. ಇದೇವೇಳೆ, 1992ರಲ್ಲಿ ಓರ್ವ ಹಿಂದೂ ಮಹಿಳೆಗೆ ಸರಾಸರಿ 3.3 ಮಕ್ಕಳು ಇದ್ದರೆ, 2015ಕ್ಕಾಗುವಾಗ ಇದು 1.2ಕ್ಕೆ ಕುಸಿಯಿತು. 2021ರ Pew Research Centreನ  ವರದಿಯ ಪ್ರಕಾರ,

1992ರಿಂದ 2015ರ ನಡುವೆ ಮುಸ್ಲಿಮ್ ಮಹಿಳೆಯರ ಫಲ ವತ್ತತೆಯ ಪ್ರಮಾಣವು 4.4ರಿಂದ 2.6ಕ್ಕೆ ಕುಸಿದಿದೆ. ಇದೇವೇಳೆ, ಹಿಂದೂ  ಮಹಿಳೆಯರಲ್ಲಿ ಇದು 3.3ರಿಂದ 2.1ಕ್ಕೆ ಕುಸಿದಿದೆ. The National Family health survey (ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ) 2019-21ರ ವರದಿ ಪ್ರಕಾರ,

ಹಿಂದೂ ಮತ್ತು ಮುಸ್ಲಿಮ್ ಮಹಿಳೆಯರ ನಡುವಿನ ಫಲವತ್ತತೆಯ ಅಂತರವು 0.42ರ ಪ್ರಮಾಣದಲ್ಲಿದೆ. ಅಂದರೆ, ಓರ್ವ ಹಿಂದೂ ಮಹಿಳೆ  ಸರಾಸರಿ 1.94 ಮಗುವನ್ನು ಹೊಂದುವಾಗ, ಮುಸ್ಲಿಮ್ ಮಹಿಳೆ ಸರಾಸರಿ 2.36 ಮಗುವನ್ನು ಹೊಂದುತ್ತಾಳೆ. 1992ರಲ್ಲಿ ಓರ್ವ ಮುಸ್ಲಿಮ್  ಮಹಿಳೆ ಹಿಂದೂ ಮಹಿಳೆಗಿಂತ ಸರಾಸರಿ 1.1 ಮಗುವನ್ನು ಹೆಚ್ಚು ಹೊಂದುತ್ತಿದ್ದಳು. ಆದರೆ, 3 ದಶಕಗಳಲ್ಲಿ ಈ ಅಂತರದಲ್ಲಿ ಭಾರೀ  ಇಳಿಕೆಯಾಗಿದೆ. ಹಾಗೆಯೇ,

1991-2011ರ ನಡುವೆ ಲೆಕ್ಕ ಹಾಕಿದರೆ, ಮುಸ್ಲಿಮ್ ಫಲವತ್ತತೆಯ ಪ್ರಮಾಣವು 35% ಕುಸಿದಿರುವಾಗ ಹಿಂದೂ ಫಲವತ್ತತೆಯ ಪ್ರಮಾಣವು  30% ಕುಸಿದಿದೆ. ಅಂದರೆ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರ ಫಲವತ್ತತೆಯ ಪ್ರಮಾಣವು ಹಿಂದೂಗಳಿಗಿಂತ  5% ಹೆಚ್ಚು ಕುಸಿದಿದೆ. ಇದು  ಹೀಗೆಯೇ ಮುಂದುವರಿದರೆ 2030ಕ್ಕಾಗುವಾಗ ಹಿಂದೂ-ಮುಸ್ಲಿಮ್ ಫಲವತ್ತತೆಯ ಪ್ರಮಾಣವು ಸಮಾನ ಮಟ್ಟಕ್ಕೆ ಬರಲಿದೆ ಎಂದು  ಅಂದಾಜಿಸಬಹುದು. ಅಂದಹಾಗೆ,

2021ರಲ್ಲಿ ಬಿಡುಗಡೆಯಾದ ಬಹುಚರ್ಚಿತ The Population Myth: Islam, Family Plannings and Politics inIndia ಎಂಬ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರ ಪುಸ್ತಕದಲ್ಲಿ ಈ ಕುರಿತಂತೆ ಸಾಕಷ್ಟು ವಿವರಗಳಿವೆ.

ಅವರು ಈ ಪುಸ್ತಕದಲ್ಲಿ ದೆಹಲಿ ವಿವಿಯ ಮಾಜಿ ವೈಸ್ ಚಾನ್ಸ್ಲರ್ ದಿನೇಶ್ ಸಿಂಗ್ ಮತ್ತು ಪ್ರೊ. ಅಜಯ್ ಕುಮಾರ್ ಅವರ ಲೆಕ್ಕಾಚಾರವನ್ನು  ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಅದರ ಪ್ರಕಾರ, 1951ರ ಜನಗಣತಿ ಪ್ರಕಾರ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 9.8% ಇತ್ತು. 2011ರ ಜ ನಗಣತಿಯಂತೆ ಇದು 14.2%ವಾಗಿ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಹಿಂದೂಗಳ ಜನಸಂಖ್ಯೆ 84.1%ದಿಂದ 79.8%ಕ್ಕೆ ಇಳಿಕೆಯಾಗಿದೆ.  ಅಂದರೆ ಕಳೆದ 60 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಕೇವಲ 4.4% ಮಾತ್ರವೇ ಏರಿಕೆಯಾಗಿದೆ. ಹೀಗಾದರೆ, ಮುಂದಿನ ಸಾವಿರ  ವರ್ಷಗಳಲ್ಲೂ ಮುಸ್ಲಿಮರ ಜನಸಂಖ್ಯೆ ಹಿಂದೂಗಳನ್ನು ಮೀರಿಸಲಾರದು ಎಂದವರು ಜನಗಣತಿ ಅಂಕಿ-ಸಂಖ್ಯೆಗಳ ಆಧಾರದಲ್ಲೇ  ಬರೆ ದಿದ್ದಾರೆ. ಅದರಲ್ಲೂ ಹಿಂದೂಗಳು ಇನ್ನು ಮುಂದೆ ಒಂದೇ ಒಂದು ಮಗುವನ್ನು ಹೆರದಿದ್ದರೂ 2070ರ ವರೆಗೆ ಮುಸ್ಲಿಮರು ಈ ದೇಶದಲ್ಲಿ  ಬಹುಸಂಖ್ಯಾತರಾಗಲಾರರು ಎಂದೂ ಖುರೇಶಿ ಬರೆದಿದ್ದಾರೆ. ನಿಜವಾಗಿ,

ಜನಸಂಖ್ಯಾ ಹೆಚ್ಚಳಕ್ಕೂ ಬಡತನ, ಅನಕ್ಷರತೆ ಮತ್ತು ಅಜ್ಞಾನಕ್ಕೂ  ನಡುವೆ ಗಾಢ ಸಂಬಂಧವಿದೆ. ಈ ಸಂಬಂಧಕ್ಕೆ ಹೋಲಿಸಿದರೆ, ಜನಸಂಖ್ಯಾ  ಹೆಚ್ಚಳಕ್ಕೂ ಧರ್ಮಕ್ಕೂ ನಡುವಿನ ಸಂಬಂಧ ತೀರಾ ತೆಳುವಾದುದು. ಕೇರಳ ಸಹಿತ ದಕ್ಷಿಣ ಭಾರತದ ಹಿಂದೂ ಮಹಿಳೆಯರ ಫಲವತ್ತತೆಯ  ಪ್ರಮಾಣವು ಉತ್ತರ ಭಾರತದ ರಾಜ್ಯಗಳ ಹಿಂದೂ ಮಹಿಳೆಯರಿಗೆ ಹೋಲಿಸಿದರೆ ತೀರಾ ಕಡಿಮೆ. ಬಿಹಾರದಲ್ಲಿ ಫಲವತ್ತತೆಯ ಪ್ರಮಾಣ  (TFR) 2.9, ರಾಜಸ್ತಾನ 2.8, ಉತ್ತರ ಪ್ರದೇಶ 2.6 ಇದೆ. ಓರ್ವ ತಾಯಿ ಮಗುವನ್ನು ಹೊಂದುವುದಕ್ಕೂ ಧರ್ಮಕ್ಕೂ ಸಂಬಂಧ  ಇರುತ್ತಿದ್ದರೆ ದಕ್ಷಿಣ ಭಾರತದ ಹಿಂದೂ ಮಹಿಳೆಯರಿಗೂ ಉತ್ತರ ಭಾರತದ ಹಿಂದೂ ಮಹಿಳೆಯರಿಗೂ ಮಕ್ಕಳನ್ನು ಹೊಂದುವ ವಿಷಯದಲ್ಲಿ  ಸಮಾನ ಹೋಲಿಕೆ ಇರಬೇಕಾಗಿತ್ತು. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಉತ್ತರ ರಾಜ್ಯಗಳಲ್ಲಿ ಸರಾಸರಿ ಮಕ್ಕಳ ಸಂಖ್ಯೆ ಹೆಚ್ಚು.  ಯಾಕೆ ಹೀಗೆ ಎಂದರೆ,

ದಕ್ಷಿಣ ಭಾರತಕ್ಕೆ ಹೋಲಿಸಿದರೆ ಉತ್ತರ ಭಾರತದ ರಾಜ್ಯಗಳು ಅಭಿವೃದ್ಧಿಯಲ್ಲಿ ಹಿಂದುಳಿದಿವೆ. ಬಿಹಾರ, ಒಡಿಸ್ಸಾ, ಉತ್ತರ ಪ್ರದೇಶ, ರಾಜಸ್ಥಾನ  ಇತ್ಯಾದಿ ರಾಜ್ಯಗಳಲ್ಲಿ ಪ್ರತಿ ಕುಟುಂಬದ ಶಿಕ್ಷಣ ಮತ್ತು ಆರ್ಥಿಕ ಸ್ಥಿತಿಯು ದಕ್ಷಿಣ ಭಾರತದ ಕುಟುಂಬಗಳಿಂದ  ತುಂಬಾ ಕೆಳಗಿದೆ. ಎಲ್ಲಿ ಆರ್ಥಿಕ  ಮತ್ತು ಶೈಕ್ಷಣಿಕ ಸ್ಥಿತಿ ತಳಮಟ್ಟದಲ್ಲಿದೆಯೋ ಆ ಪ್ರದೇಶಗಳಲ್ಲಿ ಮಕ್ಕಳ ಜನನ ಪ್ರಮಾಣ ಹೆಚ್ಚಿದೆ. ಇದಕ್ಕೆ ಹಿಂದೂ-ಮುಸ್ಲಿಮ್ ಎಂಬ ಬೇಧ  ಇಲ್ಲ. ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಓರ್ವ ತಾಯಿ ಹೊಂದಿರುವ ಮಕ್ಕಳ ಸರಾಸರಿ ಪ್ರಮಾಣವು ಅಭಿವೃದ್ಧಿ ಹೊಂದದ ಪ್ರದೇಶಗಳಿಗೆ  ಹೋಲಿಸಿದರೆ ತೀರಾ ಕಡಿಮೆ. ಇದು ಹಿಂದೂ ಮತ್ತು ಮುಸ್ಲಿಮರಲ್ಲೂ ಬಹುತೇಕ ಸಮಾನವಾಗಿದೆ. ಅಷ್ಟಕ್ಕೂ,

ಜನಸಂಖ್ಯೆಯನ್ನು ಹೊರೆಯಾಗಿ ನೋಡುವ ಸಿದ್ಧಾಂತವನ್ನು ಮೊದಲು ಪರಿಚಯಿಸಿದ್ದು ಥಾಮಸ್ ರಾಬರ್ಟ್ ಮಲ್ತಸ್ ಎಂಬ ಅರ್ಥತಜ್ಞ.  ಇಂಗ್ಲೆಂಡಿನವರಾದ ಮತ್ತು ಮೂರು ಮಕ್ಕಳ ತಂದೆಯಾದ ಇವರು 1798ರಲ್ಲಿ Principle of population– ಎಂಬ ಪ್ರಬಂಧವನ್ನು ಮಂಡಿಸಿದರು. 1803ರಲ್ಲಿ ಅದರ ಪರಿ ಷ್ಕೃತ ರೂಪವನ್ನು ಪ್ರಕಟಿಸಿದರು. ಅದರಲ್ಲಿ ಅವರು ಜನಸಂಖ್ಯೆಯನ್ನು ಹೊರೆಯಾಗಿ ವ್ಯಾಖ್ಯಾನಿಸಿದ್ದರು. ಜನಸಂಖ್ಯಾ ಹೆಚ್ಚಳವು ಬಡತನ, ನಿರಕ್ಷರತೆ, ಅನಾರೋಗ್ಯ ಇತ್ಯಾದಿಗಳಿಗೆ ಕಾರಣವಾಗುತ್ತದೆ ಎಂಬ ಥಿಯರಿಯನ್ನು ಮಂಡಿಸಿದರು.  ಈ ಥಿಯರಿಯ ಆಧಾರದಲ್ಲಿಯೇ 1973ರಲ್ಲಿ ವಿಶ್ವಸಂಸ್ಥೆಯು ಜನಸಂಖ್ಯಾ ನಿಯಂತ್ರಣವನ್ನು ಘೋಷಿಸಿತು. 1980ರಲ್ಲಿ ಚೀನಾವು  ಕುಟುಂಬಕ್ಕೊಂದೇ  ಮಗು ನೀತಿ ಯನ್ನು ಕಡ್ಡಾಯವಾಗಿ ಜಾರಿಗೊಳಿಸಿತು. ಇದಾಗಿ 36 ವರ್ಷಗಳ ಬಳಿಕ 2016ರಲ್ಲಿ ಇದೇ ಚೀನಾ ತನ್ನ ಈ  ನೀತಿಯನ್ನು ಪೂರ್ಣವಾಗಿ ರದ್ದುಗೊಳಿಸಿತು. ಕುಟುಂಬವೊಂದು  ಮೂರು ಮಗುವನ್ನು ಹೊಂದುವಂತೆ  ವಿನಂತಿ ಮಾಡಲಾಯಿತು. ಅದಕ್ಕಾಗಿ  ವಿವಿಧ ಪ್ರೋತ್ಸಾಹದ ವಿಧಾನಗಳನ್ನೂ ಅನುಸರಿಸಿತು. ಇದು ಏಕೆಂದರೆ,

ಒಂದೇ  ಮಗು ನೀತಿಯಿಂದಾಗಿ ಹಿರಿಯರ ಸಂಖ್ಯೆ ಹೆಚ್ಚಾಗುತ್ತಾ ಹೋಯಿತಲ್ಲದೇ, ದುಡಿಯುವ ಪ್ರಾಯದ ಯುವ ಸಮೂಹದ ಸಂಖ್ಯೆ ತೀವ್ರ ಪ್ರಮಾಣದಲ್ಲಿ ಕುಸಿಯತೊಡಗಿತು. 2022ರ ವೇಳೆಗೆ ಚೀನಾದಲ್ಲಿ ವೃದ್ಧರ ಸಂಖ್ಯೆ 20%ವನ್ನೂ ಮೀರಿ ಬೆಳೆ ಯಿತು. ಅಲ್ಲದೇ, ಒಂದೇ  ಮಗು ನೀತಿಗೆ ಚೀನಾ ನಾಗರಿಕರು ಎಷ್ಟು ಒಗ್ಗಿ ಹೋಗಿದ್ದಾರೆಂದರೆ, ಸರ್ಕಾರ ಇನಾಮು ಘೋಷಿಸಿ ದರೂ ಒಂದಕ್ಕಿಂತ  ಹೆಚ್ಚು ಮಗುವನ್ನು  ಹೊಂದಲು ಮುಂದೆ ಬರುತ್ತಿಲ್ಲ. ಶಿಕ್ಷಣ ವೆಚ್ಚ, ಪ್ರಸವ ವೆಚ್ಚ, ಜೀವನ ವೆಚ್ಚವನ್ನು ಪರಿಗಣಿಸಿಕೊಂಡು ಚೀನೀಯರು ಒಂದೇ ಮಗುವಿಗೆ ಆದ್ಯತೆ  ನೀಡುತ್ತಿರುವುದು ಸರ್ಕಾರದ ಕೈ ಕಟ್ಟಿದಂತಾಗಿದೆ. ಅಂದಹಾಗೆ,

ಜನಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆ ಎಂದಾದರೆ, ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನನ ಪ್ರಮಾಣದಲ್ಲಿ ವ್ಯತ್ಯಾಸ ಇರಬಾರದಾಗಿತ್ತು. ಅದರಲ್ಲೂ ಜನಸಂಖ್ಯಾ ಹೆಚ್ಚಳಕ್ಕೆ ಇಸ್ಲಾಮ್ ಪ್ರಚೋದಿಸುತ್ತಿದೆ ಎಂದಾದರೆ, ಅರಬ್ ರಾಷ್ಟ್ರಗಳಲ್ಲಿ ಜನರು ತುಂಬಿ ತುಳುಕಿರಬೇಕಿತ್ತು. ಕುರ್‌ಆನನ್ನೇ ಸಂವಿಧಾನವೆಂದು ಒಪ್ಪಿಕೊಂಡಿರುವ ಸೌದಿ ಅರೇಬಿಯಾ, ಯುಎಇ, ಕತಾರ್, ಒಮಾನ್, ಕುವೈಟ್, ಬಹರೈನ್ನ್   ಇತ್ಯಾದಿ ರಾಷ್ಟ್ರಗಳಲ್ಲಿ ಕಾಲಿಡುವುದಕ್ಕೂ ಸಾಧ್ಯವಾಗದಷ್ಟು ಜನರು ತುಂಬಿರಬೇಕಿತ್ತು. ಆದರೆ, ಆ ರಾಷ್ಟ್ರಗಳಲ್ಲಿ ಸ್ಥಳೀಯರ ಸಂಖ್ಯೆ ಎಷ್ಟು ಕಡಿಮೆ  ಇದೆ ಎಂದರೆ, ಭಾರತ ಸಹಿತ ಉದ್ಯೋಗಕ್ಕಾಗಿ ಅಲ್ಲಿಗೆ ಆಗಮಿಸಿರುವ ವಿದೇಶಿಯರ ಸಂಖ್ಯೆಯೇ ಹೆಚ್ಚಿದೆ. ಈ ಅರಬ್ ರಾಷ್ಟ್ರಗಳು  ಆರ್ಥಿಕವಾಗಿ ಸುಸ್ಥಿತಿಯಲ್ಲಿರುವುದು ಮತ್ತು ಪ್ರತಿ ಅರಬ್ ಕುಟುಂಬವೂ ಸುಶಿಕ್ಷಿತವಾಗಿರುವುದೇ ಇದಕ್ಕೆ ಕಾರಣ. ಹಾಗೆಯೇ, ಜನಸಂಖ್ಯೆಗೆ  ಸಂಬಂಧಿಸಿ ಜಗತ್ತಿನಲ್ಲಿಯೇ ನಂಬರ್ ವನ್ ಸ್ಥಾನದಲ್ಲಿರುವ ಚೀನಾ ಮುಸ್ಲಿಮ್ ರಾಷ್ಟ್ರವೇನೂ ಅಲ್ಲವಲ್ಲ. ಇಸ್ಲಾಮ್ ಎಂದೂ ಜನಸಂಖ್ಯೆಯನ್ನು ಏರಿಸಿ ರಾಷ್ಟ್ರವನ್ನು ತನ್ನ ವಶಪಡಿಸಿಕೊಳ್ಳುವ ಥಿಯರಿಯನ್ನು ಮಂಡಿಸಿಯೇ ಇಲ್ಲ. ಹಾಗೆಯೇ ಜ ನಸಂಖ್ಯೆಯನ್ನು ಹೊರೆ ಎಂದೂ ಹೇಳಿಯೂ ಇಲ್ಲ. ಕುರ್‌ಆನಿನ ಪ್ರಕಾರ,

ಓರ್ವ ತಾಯಿ ಒಂದು ಮಗುವನ್ನು ಹೆತ್ತು ಕನಿಷ್ಠ ಮೂರು ವರ್ಷಗಳಾದ ಬಳಿಕ ಇನ್ನೊಂದು ಮಗುವನ್ನು ಹೆರಬೇಕು. (ಅಧ್ಯಾಯ: 31, ವಚನ: 14) ಇದರ ಪ್ರಕಾರ ಇಬ್ಬರು ಮಕ್ಕಳನ್ನು ಓರ್ವ ತಾಯಿ ಹೊಂದುವಾಗ ಕನಿಷ್ಠ ಆರೇಳು ವರ್ಷಗಳಾದರೂ ಆಗುತ್ತದೆ.  ಹೆಣ್ಣನ್ನು ಮಗು ಹೆರುವ ಯಂತ್ರವೆಂದು ಇಸ್ಲಾಮ್ ಪರಿಗಣಿಸಿದ್ದಿದ್ದರೆ ಈ ಅಂತರವನ್ನು ಹೇರುವ ಅಗತ್ಯ ಇದ್ದಿರಲೇ ಇಲ್ಲ. ತಾಯಿಯ  ಆರೋಗ್ಯಕ್ಕೆ ಗರಿಷ್ಠ ಮಹತ್ವ ಕೊಡುವ ಇಸ್ಲಾಮ್, ಹೆಣ್ಣನ್ನು ಹೆರುವ ಯಂತ್ರವಾಗಿ ಕಾಣುವುದಕ್ಕೆ ಸಾಧ್ಯವೂ ಇಲ್ಲ.

ಇದೊಂದು ಮಿತ್.

ಲವ್ ಜಿಹಾದ್‌ನಂತೆ ಜನಸಂಖ್ಯಾ ಹೆಚ್ಚಳವೂ ಒಂದು ಪ್ರೊಪಗಂಡಾ. ಜನ ಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ, ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ಭಯ ಹುಟ್ಟಿಸುವುದೇ ಇದರ ಹಿಂದಿರುವ ಉದ್ದೇಶ. ಈ ದೇಶ ಭವಿಷ್ಯದಲ್ಲಿ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುತ್ತದೆ  ಎಂಬುದು ಬಹುದೊಡ್ಡ ಸುಳ್ಳು. ಈ ದೇಶ ಮುಸ್ಲಿಮ್ ಬಹುಸಂಖ್ಯಾತ ದೇಶವಾಗುವುದಕ್ಕೆ ಸಾಧ್ಯವೇ ಇಲ್ಲ. 2030ರ ವೇಳೆಗೆ ಹಿಂದೂ- ಮುಸ್ಲಿಮ್ ಮಹಿಳೆಯರ ಫಲವತ್ತತೆಯ ಪ್ರಮಾಣ ಏಕಪ್ರಕಾರ ವಾಗಬಹುದು ಎಂದು ತಜ್ಞರೇ ಹೇಳುತ್ತಾರೆ. ಹಾಗಂತ, 1951ರಿಂದ 1991ರ  ವರೆಗೆ ಮುಸ್ಲಿಮ್ ಜನಸಂಖ್ಯಾ ಬೆಳವಣಿಗೆ ದರವು ಹಿಂದೂಗಳಿಗೆ ಹೋಲಿಸಿದರೆ ಹೆಚ್ಚಿತ್ತು ಎಂಬುದು ನಿಜ. ಆದರೆ ಮುಂದಿನ ಎರಡು ದಶಕಗಳಲ್ಲಿ ಈ ಏರಿಕೆ ಪ್ರಮಾಣವು ದಿಢೀರ್ ಕುಸಿದಿರುವುದೂ ನಿಜ. ಈ ಕುಸಿತವೇ ಈ ಏರಿಕೆ-ಇಳಿಕೆಗೆ ಧರ್ಮ ಕಾರಣವಲ್ಲ ಎಂಬುದನ್ನು  ಸೂಚಿಸುತ್ತದೆ. ಬಡತನ-ನಿರಕ್ಷರತೆ, ಅಜ್ಞಾನ ಯಾವ ಪ್ರದೇಶಗಳಲ್ಲಿ ಹೆಚ್ಚಿದೆಯೋ ಅಲ್ಲಿನ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ  ಹೆಚ್ಚಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬಲಗೊಂಡಿರುವ ಪ್ರದೇಶಗಳ ಹಿಂದೂ-ಮುಸ್ಲಿಮ್ ಕುಟುಂಬಗಳಲ್ಲಿ ಜನಸಂಖ್ಯೆ ಕಡಿಮೆ ಇದೆ. ಒಂದುವೇಳೆ, ಮಕ್ಕಳ ಸಂಖ್ಯೆಗೂ ಧರ್ಮಕ್ಕೂ ಬಲವಾದ ಸಂಬಂಧ ಇದೆಯೆಂದಾದರೆ, ಈ ಸಹಜತೆ ಸಾಧ್ಯವೇ ಇರಲಿಲ್ಲ. ಅಂದಹಾಗೆ,

ಇಲ್ಲಿ ನೀಡಲಾದ ಎಲ್ಲ ಅಂಕಿ-ಅಂಶಗಳೂ ಜನಗಣತಿಯನ್ನು ಆಧರಿಸಿದ್ದಾಗಿದ್ದು, ಯಾರು ಬೇಕಾದರೂ ಗೂಗಲ್ ಮಾಡಿ ಪರಿಶೀಲಿಸಿಕೊಳ್ಳಬಹುದು.

SHARE THIS POST VIA

About editor

Check Also

ಶುಚಿತ್ವಕ್ಕೆ ಇಸ್ಲಾಮ್ ಕೊಡುವ ಮಹತ್ವ ಏನು?

✍️ ಖಾಲಿದ್ ಮೂಸಾ ನದ್ವಿ ಮಾನಸಿಕ ಶುಚಿತ್ವಕ್ಕೆ ಮಹತ್ವ ನೀಡುವ ಇಸ್ಲಾಮ್ ದೈಹಿಕ ಶುಚಿತ್ವಕ್ಕೂ ಮಹತ್ವ ನೀಡುತ್ತದೆ. ದೇಹ, ಉಡುಪು, …

Leave a Reply

Your email address will not be published. Required fields are marked *