Home / ಲೇಖನಗಳು / ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

ಫತ್ವಾ ಅಂದರೇನು? ಫತ್ವಾ ಹೇಗಿರಬೇಕು?

✍️ ಪಿ.ಕೆ. ಜಮಾಲ್

ಇಸ್ಲಾಮೀ ಶರೀಅತ್‌ನಲ್ಲಿ ಪಾಂಡಿತ್ಯವನ್ನು ಪಡೆದ ವಿದ್ವಾಂಸರು ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳ ಆಧಾರದಲ್ಲಿ ನೀಡುವ ಧಾರ್ಮಿಕ ವಿಧಿಗಳನ್ನು ಫತ್ವಾ ಎನ್ನಲಾಗುತ್ತದೆ.

ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ವಿಷಯಗಳಲ್ಲಿ ಸ್ಪಷ್ಟವಾದ ಉತ್ತರ ಅಥವಾ ಅಭಿಪ್ರಾಯ ಇಲ್ಲದಿರುವ ಸಂದರ್ಭದಲ್ಲಿ ಫತ್ವಾಗಳ ಅನಿವಾರ್ಯತೆ ಎದುರಾಗುತ್ತದೆ.

ಫತ್ವಾವನ್ನು ನೀಡುವುದು’ಎಂಬುದು ಬಹಳ ಜವಾಬ್ದಾರಿಯುತವಾಗಿ ಮಾಡಬೇಕಾದ ಗೌರವಾರ್ಹವಾದ ಕರ್ತವ್ಯವೆಂದು ಮುಸ್ಲಿಮ್ ಜಗತ್ತು ಪರಿಗಣಿಸುತ್ತದೆ.

ಪಾಶಾತ್ಯ ಜಗತ್ತು ‘ಫತ್ವಾ’ ಎಂಬ ಪದವನ್ನು ಮಾಧ್ಯಮಗಳಲ್ಲಿ ಉಪಯೋಗಿಸಲಾರಂಭಿಸಿದ್ದು ಮತ್ತು ಆ ಪದಕ್ಕೆ ಬಹಳ ಪ್ರಚಾರ ಲಭಿಸಿದ್ದು ಎರಡು ಫತ್ವಾಗಳ ಕಾರಣದಿಂದಾಗಿದೆ.

ಒಂದು 1989ರಲ್ಲಿ ಭಾರತೀಯ ವಂಶಜನಾದ ಬ್ರಿಟಿಷ್ ಕಾದಂಬರಿಕಾರ ಸಲ್ಮಾನ್ ರುಶ್ದಿಯ ವಿರುದ್ಧ ಖುಮೈನಿ ಹೊರಡಿಸಿದ ಫತ್ವಾ, ಎರಡು, 1998ರಲ್ಲಿ ಅಮೇರಿಕಾದ ವಿರುದ್ಧ ಯುದ್ಧವನ್ನು ಘೋಷಿಸಿ ಬಿನ್ ಲಾಡೆನ್ ಹೊರಡಿಸಿದ ಫತ್ವಾ, ವಿಶ್ವದೆಲ್ಲೆಡೆ ಫತ್ವಾಗಳ ಕುರಿತು ಕಾವೇರಿದ ಚರ್ಚೆ ಆರಂಭವಾಗಲು ಮತ್ತು ಬೆಂಕಿಯೇಳಲು ಈ ಎರಡು ಘಟನೆಗಳು ಹೇತುವಾಯಿತು.

ಪವಿತ್ರ ಕುರ್‌ಆನ್‌ನಲ್ಲಿ ಫತ್ವಾ’ಎಂಬ ಪದವನ್ನು ವ್ಯಾಖ್ಯಾನಿಸುವುದು, ಬಹಿರಂಗ ಪಡಿಸುವುದು’ ಎಂಬ ಅರ್ಥಗಳಲ್ಲಿ ಉಪಯೋಗಿಸಿರುವುದು ಕಂಡು ಬರುತ್ತದೆ.

ಪ್ರವಾದಿ ಯೂಸುಫ್(ಅ)ರ ಕಥೆಯಲ್ಲಿ, ರಾಜನು ಹೇಳಿದನು: “ಹೇ, ಅರಮನೆಯ ವಿದ್ವಾಂಸರೇ, ಈ ಸ್ವಪ್ನವನ್ನು ವ್ಯಾಖ್ಯಾನಿಸಿ ಹೇಳಿ” (ಯೂಸುಫ್: 43). ಅವನು ಯೂಸುಫರ ಬಳಿ ಹೋಗಿ ಹೇಳಿದನು: “ಯೂಸುಫ್, ಸತ್ಯವಂತನೇ, ನನಗೆ ಈ ಸ್ವಪ್ನದ ವ್ಯಾಖ್ಯಾನವನ್ನು ತಿಳಿಸಿಕೊಡು.” (ಯೂಸುಫ್: 46)

ಈ ಎರಡು ಕಡೆಗಳಲ್ಲೂ ಫತ್ವಾ’ಎಂಬ ಪದವನ್ನು ಉಪಯೋಗಿಸಲಾಗಿದೆ. ಸೂರಃ ಅನ್ನಿಸಾದಲ್ಲಿ: “ಪ್ರವಾದಿಯವರೇ(ಸ), ಜನರು ನಿಮ್ಮೊಂದಿಗೆ ಕಲಾಲ’ದ ಕುರಿತು ವಿಧಿಯನ್ನು ಕೇಳುತ್ತಿದ್ದಾರಲ್ಲವೇ? ಅವರೊಡನೆ ಹೇಳಿರಿ: ಅಲ್ಲಾಹನು ನಿಮಗೆ ತೀರ್ಪು ನೀಡುತ್ತಾನೆ.” (ಅನ್ನಿಸಾ: 176) ಈ ಸೂಕ್ತದಲ್ಲಿ ಫತ್ವಾದ ಅರ್ಥ ಸಹಾಬಿಗಳಲ್ಲಿ ಕೆಲವರ ಪ್ರಶ್ನೆಗೆ ಅಲ್ಲಾಹನು ಅದರಲ್ಲಿ ನೀಡುವ ವಿಧಿ’ ಆಗಿದೆಯೆಂದು ತಫ್ಸೀರ್ ಖುರ್ತುಬಿಯಲ್ಲಿ ಕಾಣಬಹುದು.

ಸೂರಃ ನಮ್ಲ್ ನಲ್ಲಿ ಸಬಾದ ರಾಣಿ ಹೇಳಿದುದನ್ನು ಪವಿತ್ರ ಕುರ್‌ಆನ್ ಉಲ್ಲೇಖಿಸುತ್ತದೆ: “ಜನಾಂಗದ ಸರದಾರರೇ, ನನಗೆ ಈ ವಿಷಯದ ಬಗ್ಗೆ ಸಲಹೆ ಕೊಡಿರಿ. ನಾನು ಯಾವ ವಿಷಯದಲ್ಲೂ ನಿಮ್ಮನ್ನು ಬಿಟ್ಟು ತೀರ್ಮಾನ ಕೈಗೊಳ್ಳುವುದಿಲ್ಲ.” (ಅನ್ನಮ್ಲ್- 32) ಈ ಸೂಕ್ತದಲ್ಲಿ ‘ಫತ್ವಾ’ ಎಂಬ ಪದಕ್ಕೆ ಸಲಹೆ, ಉಪದೇಶ ನೀಡುವುದು ಎಂಬ ಅರ್ಥವಿದೆಯೆಂದು ಇಬ್ನು ಜರೀರ ತ್ವಬರಿ ಬರೆದಿದ್ದಾರೆ.

ಅಂದಹಾಗೆ ಅಧಿಕ ಉಪದೇಶವಾದರೂ, ತೀರ್ಮಾನ ಅಥವಾ ತೀರ್ಪು ಆದರೂ ಫತ್ವಾ ವೆಂಬುದು ಬಹಳ ಗೌರವಪೂರ್ವಕವಾದ ಜವಾಬ್ದಾರಿಯುತವಾಗಿ ನಿರ್ವಹಿಸಬೇಕಾದ ಕಾರ್ಯವಾಗಿದೆ. ಅಬ್ದುಲ್ಲಾ ಹಿಬ್ನು ಜಅಫರ್‌ರಿಂದ ವರದಿಯಾಗಿದೆ. ಪ್ರವಾದಿ(ಸ)ರು ಹೇಳಿದರು: “ನೀವು ಫತ್ವಾ ನೀಡಲು ಮುಂದುವರಿಯುವವರು ನರಕದ ಕಡೆಗೆ ಮುಂದಡಿಯಿಡುತ್ತಾರೆ.” (ಸುನನುದ್ದಾರಿಮಿ) ಅಂದರೆ ಇದು ಬಹಳ ಸೂಕ್ಷ್ಮತೆ, ಕಾಳಜಿ, ಜಾಗ್ರತೆಯನ್ನು ವಹಿಸಬೇಕಾದ ಕಾರ್ಯವಾಗಿದೆ ಎಂದು ಅರ್ಥ.

ಬದ್ದಾಉಬ್ನು ಆಸಿಬ್ ಹೇಳುತ್ತಾರೆ, “ಪ್ರವಾದಿ(ಸ)ರ ಸಹಾಬಿಗಳಲ್ಲಿ 120 ಜನರನ್ನು ನಾನು ಕಂಡೆ. ಅವರಲ್ಲಿ ಯಾರೊಡನೆಯಾದರೂ ಪ್ರಶ್ನೆಯನ್ನು ಕೇಳಿದರೆ ಪ್ರತಿಯೊಬ್ಬರೂ ಇನ್ನೊಬ್ಬರ ಕಡೆಗೆ ಬೆರಳು ತೋರಿಸುತ್ತಿದ್ದರು. ಇನ್ನೊಬ್ಬನ ಬಳಿ ಹೋಗಲು ಹೇಳುತ್ತಿದ್ದರು. ಕೊನೆಗೆ ಈ ಪ್ರಶ್ನೆಯು ಮೊದಲು ತಲುಪಿದ ವ್ಯಕ್ತಿಯ ಬಳಿಗೆಯೇ ತಲುಪುವುದು.” (ಇಬ್ನು ಅಬ್ದಿಲ್ ಬದ್ರ್) ಫತ್ವಾದ ಗೌರವವನ್ನು ಪರಿಗಣಿಸಿ ಅವರು ಅದರಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದರು ಎಂದು ಇದರಿಂದ ತಿಳಿಯುವ ಪಾಠ.

ಇಸ್ಲಾಮೀ ಇತಿಹಾಸದ ವಿದ್ವಾಂಸರು, ಇಮಾಮರು ಬಹಳ ಸೂಕ್ಷ್ಮತೆ ಹಾಗೂ ಕಾಳಜಿಯಿಂದ ಫತ್ವಾ ನೀಡುತ್ತಾರೆ. ತಾವು ಈ ಕಾಲದ ಮುಜ್ತಿಹಿದ್ ಗಳು ಮತ್ತು ಮುಫ್ತಿಗಳು ಎಂದು ವಾದಿಸಿ ತಮ್ಮ ಮನದಿಂಗಿತದಂತೆ ಫತ್ವಾವನ್ನು ನೀಡಲು ಯಾವುದೇ ಮುಲಾಜು ತೋರದವರೂ ಇದ್ದಾರೆ. ಹೀಗೆ ಸಮುದಾಯದ ಒಂದು ವಿಭಾಗ ಮುಶ್ರಿಕ್ ಮತ್ತು ಕಾಫಿರ್ ಎಂದೆಲ್ಲಾ ಮುದ್ರೆಯೊತ್ತಲ್ಪಡುತ್ತದೆ. ಧಾರ್ಮಿಕ ವಿಧಿಗಳು ಈ ರೀತಿ ದುರುಪಯೋಗಕ್ಕೊಳಗಾಗಿ ಅಗ್ನಿಯನ್ನು ಸೇವಿಸಿದವರು ಹಿಂದಿನ ಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು ಎಂಬುದು ಇತಿಹಾಸ ಸತ್ಯವಾಗಿದೆ.

ಹಲವಾರು ಐತಿಹಾಸಿಕ ಹಂತಗಳನ್ನು ದಾಟಿ ಇಸ್ಲಾಮೀ ಕರ್ಮಶಾಸ್ತ್ರ ವಿಕಸನಗೊಂಡಿದೆ. ಕೇವಲ ಕರ್ಮಶಾಸ್ತ್ರದ ದೃಷ್ಟಿಕೋನದಿಂದ ಪ್ರಶ್ನೆಗಳಿಗೆ ಉತ್ತರಿಸುವ ಶುಷ್ಕವಾದ ವಿಧಾನವನ್ನು ಫತ್ವಾಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕೆ ಆಧ್ಯಾತ್ಮಿಕ ಅಥವಾ ಶೈಕ್ಷಣಿಕವಾದ ವಿಷಯಗಳಿರಲಿಲ್ಲ.

ಕಳೆದ ಶತಮಾನದಿಂದೀಚೆಗೆ ಈ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ವೀಕ್ಷಕರು ಹೇಳುತ್ತಾರೆ. ನಾವು ನೀಡುವ ಫತ್ವಾಗಳು ಕರ್ಮಶಾಸ್ತ್ರವನ್ನು ಮಾತ್ರವಲ್ಲ, ವ್ಯಕ್ತಿ ಹಾಗೂ ಸಮೂಹದ ಶೈಕ್ಷಣಿಕ-ಆಧ್ಯಾತ್ಮಿಕ ಪ್ರಶ್ನೆಗಳನ್ನೂ ಪರಿಹರಿಸಬೇಕೆಂಬ ಕಾಳಜಿ ಕೆಲವು ಫುಖಾರಗಳಿಗೂ, ಮುಫ್ತಿಗಳಿಗೂ ಉಂಟಾಯಿತೆಂಬುದು ಬಹಳ ಸಂತೋಷದ ಸಂಗತಿ.

ಫತ್ವಾವನ್ನು ತರಬೇತಿಯ ಸಾಧನವಾಗಿ ಮತ್ತು ಮಾಧ್ಯಮವಾಗಿ ಉಪಯೋಗಿಸಬೇಕು ಎಂದು ಬಯಸಿ, ಅದಕ್ಕಾಗಿ ಪ್ರಯತ್ನಿಸಿದ ವ್ಯಕ್ತಿಯಾಗಿದ್ದರು ಈಜಿಪ್ಟ್‌ನ ಮಾಜಿ ಮುಫ್ತಿಯಾಗಿದ್ದ ಶೈಖ್ ಹಸನೈನ್ ಮಖ್‌ಲೂಫ್. ಅವರಲ್ಲಿ ಅವರೇ ನೀಡುವ ಫತ್ವಾಗಳ ಎರಡು ಸಂಪುಟಗಳಿವೆ.

ಎರಡು ವಿಧಾನಗಳು:
ಶೈಖ್ ಹಸನೈನ್ ಮಖ್‌ಲೂಫ್‌ರೊಂದಿಗೆ ಓರ್ವರ ಪ್ರಶ್ನೆ: ನಿಷಿದ್ಧವಾದುದನ್ನು ನೋಡಲಾಗದ ಓರ್ವ ಅಂಧ ವ್ಯಕ್ತಿ, ಅವನು ಉತ್ತಮ ಭಕ್ತ. ಬಹಳ ದೇವಭಕ್ತಿಯಿಂದ ಆತನ ಜೀವನ ಸಂಪನ್ನವಾಗಿದೆ. ಇನ್ನೋರ್ವ ಕಣ್ಣು ಕಾಣುವ ವ್ಯಕ್ತಿ. ತನ್ನ ದೇಹೇಚ್ಛೆಗಳನ್ನು ನಿಯಂತ್ರಿಸಿ ಕಾಮನೆಗಳಿಗೆ ಕಡಿವಾಣ ಹಾಕಿ, ನಿಷಿದ್ಧದೆಡೆಗೆ ದೃಷ್ಟಿ ಹಾಯಿಸದೆ ಬಹಳ ಸೂಕ್ಷ್ಮತೆ ಹಾಗೂ ಜಾಗರೂಕತೆಯಿಂದ ಬದುಕುತ್ತಿರುವ ಧರ್ಮನಿಷ್ಠ ವ್ಯಕ್ತಿ. ಇವರಿಬ್ಬರಲ್ಲಿ ಅಲ್ಲಾಹನ ದೃಷ್ಟಿಯಲ್ಲಿ ಯಾರು ಶ್ರೇಷ್ಠರು?”

ತನ್ನ ಸೃಷ್ಟಿಗಳಲ್ಲಿ ಕೆಲವರನ್ನು ಅಂಧರಾಗಿಯೂ, ಕೆಲವರನ್ನು ದೃಷ್ಟಿಯುಳ್ಳವರಾಗಿಯೂ ಮಾಡಿರುವುದರ ಹಿಂದಿನ ಯುಕ್ತಿಯನ್ನು ವಿವರಿಸಿದ ಬಳಿಕ ಶೈಖ್ ಮಖ್‌ಲೂಫ್ ಮುಂದುವರಿಸುತ್ತಾರೆ: ಅಂಧನಾದ ವ್ಯಕ್ತಿಯು ಸಹನೆ ವಹಿಸಿ, ತಾಳ್ಮೆಯಿಂದಿದ್ದರೆ ಅವನಿಗೆ ಅಲ್ಲಾಹನು ದೊಡ್ಡ ಪ್ರತಿಫಲವನ್ನು ನೀಡುತ್ತಾನೆ. ಅದಲ್ಲದೆ ಸ್ವರ್ಗವನ್ನೂ ದಯಪಾಲಿಸುತ್ತಾನೆ.

ಅಲ್ಲಾಹನು ನನ್ನೊಡನೆ ಹೇಳಿರುವುದಾಗಿ ಪ್ರವಾದಿ(ಸ) ಹೇಳಿದ್ದಾರೆ: ನನ್ನ ಓರ್ವ ದಾಸನ ಎರಡು ಕಣ್ಣುಗಳ ದೃಷ್ಟಿ ತೆಗೆದು ನಾನು ಪರೀಕ್ಷಿಸಿಸಿದೆನೆಂದಿಟ್ಟುಕೊಳ್ಳಿ. ಆತ ಅದರಲ್ಲಿ ಸಹನೆ ವಹಿಸಿದರೆ ಅದಕ್ಕೆ ಬದಲಿಯಾಗಿ ಅವನಿಗೆ ಸ್ವರ್ಗ ನೀಡುತ್ತೇನೆ. (ಬುಖಾರಿ) ಈ ರೀತಿ ಅಂಧನು ಕಣ್ಣಿರುವವನಿಗಿಂತ ಹೆಚ್ಚಿನ ಪ್ರತಿಫಲಕ್ಕೆ ಅರ್ಹನಾಗುತ್ತಾನೆ.

ಆದರೆ ದೃಷ್ಟಿಯಿರುವವನೂ, ಇಲ್ಲದವನೂ ಇಚ್ಛೆಗಳ ಹೋರಾಟದಲ್ಲಿ ಇಬ್ಬರೂ ಭಿನ್ನ ಪ್ರತಿಫಲವನ್ನು ಹಂಚಿಕೊಳ್ಳುತ್ತಾರೆ. ಅಂಧನಿಗೆ ದೃಷ್ಟಿಹೀನತೆಯ ಹೊರತು ಶ್ರವಣ ಶಕ್ತಿಯೂ ಸೇರಿದಂತೆ ಎಲ್ಲಾ ಸಾಮರ್ಥ್ಯವೂ ಇದೆಯಲ್ಲವೇ? ಕಣ್ಣು ಕಾಣುವ ವ್ಯಕ್ತಿಯು ಯಾವುದೇ ಕೆಟ್ಟ ವಿಷಯವನ್ನು ನೋಡದೆ ತನ್ನ ಇಚ್ಛೆಗಳನ್ನೂ ಮೋಹಗಳನ್ನೂ ನಿಯಂತ್ರಿಸಿ ಪ್ರತಿಯೊಂದು ನಿಮಿಷವನ್ನೂ ಕಳೆಯುತ್ತಾನೆ. ಅದೊಂದು ಕ್ಷುಲ್ಲಕ ಕಾರ್ಯವೆಂದು ತಳ್ಳಿಹಾಕಬೇಕಿಲ್ಲ. ಮನಸ್ಸನ್ನು ಮೋಹದ ಬಲೆಯಲ್ಲಿ ಸಿಲುಕಿಸುವ ದೃಶ್ಯಗಳನ್ನು ನೋಡದೆ, ಬಹಳ ಜಾಗ್ರತೆ, ಸೂಕ್ಷ್ಮತೆಯಿಂದ ಜೀವಿಸುವವನಿಗೆ ಅಂಧನಾದ ವ್ಯಕ್ತಿಗಿಂತ ಹೆಚ್ಚಿನ ಪ್ರತಿಫಲ ಅಲ್ಲಾಹನಿಂದ ದೊರೆಯುತ್ತದೆ. ಅವರೀರ್ವರಲ್ಲೂ ಮಹತ್ವದ ಶ್ರೇಷ್ಠತೆಯ ವಿಶಿಷ್ಟ ಸ್ವಭಾವ ಇದೆ. ಅಂದರೆ ಪ್ರತಿಯೊಂದು ವಿಷಯವೂ ಒಂದು ಹಂತದಲ್ಲಿ ಶ್ರೇಷ್ಠವೂ, ಇನ್ನೊಂದು ಹಂತದಲ್ಲಿ ಅತಿ ಶ್ರೇಷ್ಠವೂ ಆಗುತ್ತದೆಂಬುದು ಇದರ ಅರ್ಥ.

ಅಂಧ ಮತ್ತು ದೃಷ್ಟಿಯುಳ್ಳವನ ನಡುವಿನ ವ್ಯತ್ಯಾಸವನ್ನು ಇಲ್ಲಿ ಶೈಖ್ ಮಖ್‌ಲೂಫ್ ಪರಿಗಣಿಸಲಿಲ್ಲ. ದೇಹೆಚ್ಛೆಗಳೊಂದಿಗಿನ ಹೋರಾಟದಲ್ಲಿ ವಿಜಯಿಯಾಗಬೇಕು ಎಂಬುದಕ್ಕಾಗಿ ಕಠಿಣ ಪ್ರಯತ್ನವನ್ನು ಕಣ್ಣು ಕಾಣುವವನಿಗೆ ಮಾಡಬೇಕಾಗಿತ್ತು. ಅಲ್ಲಾಹನೊಂದಿಗಿನ ಭಯ ಮತ್ತು ಆತ್ಮ ಸಂಯಮವು ಆತನಿಗೆ ಸಹಾಯವಾಯಿತು. ಅದೇವೇಳೆ ಅಂಧನೂ ಪ್ರತಿಫಲಕ್ಕೆ ಅರ್ಹ. ತನಗಾದ ವಿಪತ್ತಿನಲ್ಲೂ ಪರೀಕ್ಷೆಯಲ್ಲೂ ಆತ ಸಹನೆ ವಹಿಸಿದ. ಕಣ್ಣು ಕಾಣದಿದ್ದರೂ ಆತನಿಗೆ ಇತರೆಲ್ಲವೂ ಸಾಧ್ಯವಿತ್ತು. ಸ್ಪರ್ಶ, ಆಸ್ವಾದನೆ ಮುಂತಾದ ಎಲ್ಲವೂ. ಹಾಗಿದ್ದರೂ ಆತ ಹರಾಮ್‌ನ ಹಾದಿ ಹಿಡಿಯದೆ ಕೆಟ್ಟ ಕಾರ್ಯಗಳಿಂದ ದೂರ ನಿಂತ. ಆದ್ದರಿಂದ ಆತನಿಗೂ ಸ್ವರ್ಗವು ಕಡ್ಡಾಯವಾಗಿ ಲಭಿಸುತ್ತದೆಂಬ ವಾಗ್ದಾನ ನೀಡಲಾಯಿತು.

ಶೈಖ್ ಮಖ್‌ಲೂಫ್‌ರು ಶೈಖುಲ್ ಇಸ್ಲಾಮ್ ಇಬ್ನು ತೀಮಿಯಾರ ಶಿಷ್ಯ ಇಬ್ನುಲ್ ಖಯ್ಯಿಮ್‌ರ ಪಾಠ ಶಾಲೆಯಲ್ಲಿ ಕಲಿತ ಸಮಕಾಲೀನ ಅಝ್ಝರ್ ವಿದ್ವಾಂಸರ ಅಭಿಪ್ರಾಯಗಳಿಂದ ಪ್ರಭಾವಿತರಾದರು. ಅದೇ ರೀತಿ ಅನೇಕ ಹಂತದ ಅರ್ಥವನ್ನು ಹೊಂದಿರುವ ಫತ್ವಾಗಳಲ್ಲಿ ಒಂದನ್ನು ಉಲ್ಲೇಖಿಸುತ್ತೇನೆ.

ಅಲ್ಜೀರಿಯಾದ ಇಬ್ಬರು ವಿದ್ವಾಂಸರ ಮುಂದೆ ಈ ಸಮಸ್ಯೆಯನ್ನು ಪ್ರಸ್ತಾವಿಸಲಾಯಿತು. ಶೈಖ್ ಮೂಸಾ ಇಸ್ಮಾಯೀಲ್ ಮತ್ತು ಶೈಖ್ ತ್ವಾಹಿರ್ ಆಯತ್ ಅಜ್‌ಲತ್ ಎಂಬ ಹೆಸರು ಅವರದಾಗಿತ್ತು. ಮರೆಗುಳಿತನದಿಂದ ಬಳಲುತ್ತಿರುವ ನೆನಪು ಶಕ್ತಿ ಕಳೆದುಕೊಂಡ ತಂದೆಯ ಕುರಿತು ಪ್ರಶ್ನೆಯೊಂದಿಗೆ ಆ ಸಹೋದರರು ಬಂದಿದ್ದರು.

ಅವರು ಶೈಖ್ ಇಸ್ಮಾಯೀಲ್‌ರೊಂದಿಗೆ ಕೇಳುತ್ತಾರೆ: “ಮರೆಗುಳಿತನ ಬಾಧಿಸಿರುವ ನಮ್ಮ ತಂದೆ ರಮಝಾನ್‌ನ ಹಗಲಿನಲ್ಲಿ ಮರೆತು ಆಹಾರ ಸೇವಿಸಿ ಬಿಡುತ್ತಾರೆ. ನಾವು ಏನು ಮಾಡಬೇಕು?

ಆಗ ಅವರು ನೀಡಿದ ಉತ್ತರ ಹೀಗಿತ್ತು: “ನಿಮ್ಮ ತಂದೆ ಬುದ್ಧಿಶಕ್ತಿ ಕಳೆದುಕೊಂಡಿದ್ದಾರೆ. ಧಾರ್ಮಿಕ ನಿಯಮಗಳಿಗೆ ಬುದ್ಧಿಶಕ್ತಿಯು ಉಪಾಧಿಯಾಗಿದೆ. ಆದ್ದರಿಂದ ಉಪವಾಸ ಎಂಬ ಧಾರ್ಮಿಕ ಕರ್ಮ ಅನ್ವಯಿಸುವುದಿಲ್ಲ. ಆದ್ದರಿಂದ ನಿಮ್ಮ ಮೇಲೆ ಏನೂ ಹೊಣೆಗಾರಿಕೆಯೂ ಇಲ್ಲ.

ಇದೇ ಸಮಸ್ಯೆಯನ್ನು ಮಕ್ಕಳು ಶೈಖ್ ಆಯತ್ ಅಜಲತ್ ರೊಂದಿಗೆ ಕೇಳಿದರು. ಅವರ ಉತ್ತರ ಬಹಳ ಗಮನಾರ್ಹವಾಗಿತ್ತು: “ನೀವು, ಮಕ್ಕಳು ತಂದೆಗಾಗಿ ಪ್ರತಿದಿನವೂ ಓರ್ವ ಬಡವನಿಗೆ ಆಹಾರ ನೀಡಬೇಕು. ನೀವು ನಿಮ್ಮ ತಂದೆಯೊಂದಿಗೆ ರೋಗಿ ಎಂಬ ರೀತಿಯಲ್ಲಿ ವ್ಯವಹರಿಸುವುದು, ಮತಿಭ್ರಮೆಗೊಂಡ ಓರ್ವ ಹುಚ್ಚ ಎಂಬ ರೀತಿಯಲ್ಲಿ ವ್ಯವಹರಿಸುವುದಕ್ಕಿಂತ ಉತ್ತಮ. ಈ ಫತ್ವಾವನ್ನು ಕೇಳಿದ ಶೈಖ್ ಇಸ್ಮಾಯೀಲ್‌ರ ಪ್ರತಿಕ್ರಿಯೆ ಹೀಗಿತ್ತು: “ಶೈಖ್ ತ್ವಾಹಿತ್ ಅಜಲತ್‌ರನ್ನು ಅಲ್ಲಾಹನು ಸಂರಕ್ಷಿಸಲಿ. ಫತ್ವಾವೆಂದರೆ ಕೇವಲ ಫತ್ವಾ ಆಗುವುದಕ್ಕಿಂತ ಮೊದಲು ತಖ್ವಾ ಆಗಬೇಕು ಎಂದು ಅವರು ಸೂಚಿಸಿದರಲ್ಲವೇ?”

ಆಯತ್ ಅಜ್‌ಲತ್‌ರ ಫತ್ವಾ, ತಖ್ವಾ ಮತ್ತು ಮಾತಾಪಿತರ ಒಳಿತನ್ನು ಮುಂದಿಟ್ಟುಕೊಂಡಾಗಿತ್ತು. ಓರ್ವ ತಂದೆಯೊಂದಿಗಿರಬೇಕಾದ ಎಲ್ಲಾ ಶಿಷ್ಟಾಚಾರಗಳನ್ನು ಅದು ಒಳಗೊಂಡಿತ್ತು. ಒಂದೋ, ತಂದೆಗಾಗಿ ಉಪವಾಸ ಹಿಡಿಯುವುದು, ಅಥವಾ ಬಡವನಿಗೆ ಆಹಾರ ನೀಡುವುದು- ಇದು ರೋಗಿಯೊಂದಿಗಿನ ರೀತಿಯಾಗಿದೆ. ಇನ್ನು ಬದ್ಧಿ ಶಕ್ತಿ ಇಲ್ಲದ ವ್ಯಕ್ತಿಯಾಗಿ ಪರಿಗಣಿಸಿದರೆ ಹುಚ್ಚರೊಂದಿಗಿನ ನಿಲುವು ಆಗುತ್ತದೆ. ಅದೂ ಕೂಡಾ ಒಂದು ರೋಗವೇ ಆಗಿದೆ.

ಹೆತ್ತವರೊಂದಿಗೆ ಹುಚ್ಚರೊಂದಿಗಿನ ರೀತಿಯ ವರ್ತನೆ ಖಂಡಿತಾ ಖಂಡನಾರ್ಹ. ಇದು ಉಖೂಖುಲ್ ವಾಲಿದೈನ್ ಎಂಬ ಗಣಕ್ಕೆ ಸೇರುತ್ತದೆಂದು ಅವರು ಅಭಿಪ್ರಾಯ ಪಟ್ಟರು. ಆದ್ದರಿಂದ ಓರ್ವ ರೋಗಿಯೆಂಬ ರೀತಿಯಲ್ಲಿ ಉಪಚರಿಸಬೇಕೆಂದು ಅವರು ಫತ್ವಾ ನೀಡಿದರು. ಮಾನವೀಯತೆ ಮತ್ತು ಮನಃಶಾಸ್ತ್ರ ಪರವಾದ ನಿಲುವನ್ನು ಶೈಖ್ ತ್ವಾಹಿರ್ ಆಯತ್ ಅಜಲತ್ ಇಲ್ಲಿ ಸ್ವೀಕರಿಸಿದರು.

ಡಾ| ಯೂಸುಫುಲ್ ಖರ್ಝಾವಿಯವರು ಈ ನಿಲುವನ್ನು ಸ್ವೀಕರಿಸಿ, ಫತ್ವಾಗಳಿಗೆ ಶಿಕ್ಷಣ ಮತ್ತು ದಾವತ್‌ನ ಮಾನವೀಯತೆಯ ಮಾಪನವನ್ನು ನೀಡಿದ ಮಹಾರಥರಾಗಿದ್ದರು. ಅವರ ಫತ್ವಗಳೆಲ್ಲವೂ ಮಖಾಸ್ವಿದುಶ್ಶರೀಅ- ಶರೀಅತ್ ಉನ್ನತ ಗುರಿಗಳ ಸಾಕ್ಷ್ಯಾತ್ಕರಿಸುವುದರ ಮೇಲೆ ಕೇಂದ್ರೀಕೃತವಾಗಿತ್ತು.

 

SHARE THIS POST VIA

About editor

Check Also

ಶುಚಿತ್ವಕ್ಕೆ ಇಸ್ಲಾಮ್ ಕೊಡುವ ಮಹತ್ವ ಏನು?

✍️ ಖಾಲಿದ್ ಮೂಸಾ ನದ್ವಿ ಮಾನಸಿಕ ಶುಚಿತ್ವಕ್ಕೆ ಮಹತ್ವ ನೀಡುವ ಇಸ್ಲಾಮ್ ದೈಹಿಕ ಶುಚಿತ್ವಕ್ಕೂ ಮಹತ್ವ ನೀಡುತ್ತದೆ. ದೇಹ, ಉಡುಪು, …

Leave a Reply

Your email address will not be published. Required fields are marked *