Home / ಲೇಖನಗಳು / ಮಗಳು ಫಾತಿಮಾರ(ರ) ಬಗ್ಗೆ ಪ್ರವಾದಿಯ(ಸ) ನಿಲುವು ಮತ್ತು ವರ್ತಮಾನ

ಮಗಳು ಫಾತಿಮಾರ(ರ) ಬಗ್ಗೆ ಪ್ರವಾದಿಯ(ಸ) ನಿಲುವು ಮತ್ತು ವರ್ತಮಾನ

✍️ ಇಲ್ಯಾಸ್ ಮೌಲವಿ

ಪ್ರವಾದಿ ಮುಹಮ್ಮದ್(ಸ) ಮತ್ತು ಖದೀಜಾ ದಂಪತಿಗಳ ಪುತ್ರಿ ಫಾತಿಮಾ(ರ) ಇತಿಹಾಸದ ಪ್ರಮುಖ ಮಾದರೀ ಮಹಿಳೆಯಾಗಿದ್ದಾರೆ. ಪ್ರವಾದಿವರ್ಯರಿಂದ(ಸ) ತರಬೇತಿಯ ಅನುಗ್ರಹ ಪಡೆದ ಮಾದರೀ ಮಹಿಳೆ. ಇಸ್ಲಾಮನ್ನು ಅಪ್ಪಿ ಹಿಡಿದ ಶ್ರೇಷ್ಟ ಮಾತೆ ಖದೀಜಾ(ರ)ರ ಮಾದರೀ ಪುತ್ರಿ. ತನ್ನ ಮಾತೆಯಿಂದ ಶೈಶವಾವಸ್ಥೆಯಿಂದ ಹಿಡಿದು ಬಾಲ್ಯ ಎಲ್ಲವನ್ನೂ ಅನುಭವಿಸಿದರು. ಅದರ ಪ್ರತೀ ನಾಡಿ ಮಿಡಿತವನ್ನು ಆವಾಹಿಸಿಕೊಂಡ ಮಹಿಳೆ.

ಮಾತೆಯ ಮರಣದ ಬಳಿಕ ಹಲವು ಕಹಿ ಅನುಭವಗಳಿಗೆ ಗುರಿಯಾಗಬೇಕಾಯಿತು. ತಂದೆಯಾದ ಪ್ರವಾದಿವರ್ಯರು(ಸ) ಅನುಭವಿಸುತ್ತಿರುವ ಸಂಕಷ್ಟಗಳನ್ನು ಕಣ್ಣಾರೆ ಕಂಡು ಅತ್ತು ಬಿಡಲು ಮಾತ್ರ ಆ ಪುತ್ರಿಗೆ ಸಾಧ್ಯವಾಗಿತ್ತು. ಇತಿಹಾಸದಲ್ಲಿ ಅದಕ್ಕೆ ಧಾರಾಳ ಉದಾಹರಣೆಗಳಿವೆ.

ಅದರಲ್ಲಿ ಅತ್ಯಂತ ಕಳವಳಕಾರಿಯಾಗಿದ್ದು ಓರ್ವ ಕುರೈಶಿಯು ಪ್ರವಾದಿವರ್ಯರ(ಸ) ತಲೆಯ ಮೇಲೆ ಕೆಸರಿನಿಂದ ಅಭಿಶೇಕ ಮಾಡಿದ್ದನು! ಆಗ ಪ್ರವಾದಿವರ್ಯರು(ಸ) ಕೆಸರು ತುಂಬಿದ ರೀತಿಯಲ್ಲಿಯೇ ಮನೆಗೆ ಮರಳಿದರು. ಮಗಳು ಫಾತಿಮಾ ಅಳುತ್ತಾ ಆ ತಲೆಯನ್ನು ನೀರು ಹಾಯಿಸಿ ಶುಚಿಗೊಳಿಸಿದರು. ಮಕ್ಕಳು ಅತ್ತಾಗ ಹೆತ್ತವರು ತೀರಾ ಕಳವಳಗೊಳ್ಳುತ್ತಾರೆ. ಇನ್ನು ಹೆಣ್ಮಕ್ಕಳಾದರೆ ಅದು ಸ್ವಲ್ಪ ಹೆಚ್ಚೇ ಇರುತ್ತದೆ. ಹೆಣ್ಮಕ್ಕಳ ಕಣ್ಣಿಂದ ಸುರಿಯುವ ಕಣ್ಣೀರು ಹೃದಯವನ್ನೇ ಕಂಪಿಸುವಂತೆ ಮಾಡುತ್ತದೆ. ಹೆಣ್ಮಕ್ಕಳ ಅಳು ಓರ್ವ ತಂದೆಗೆ ಅಸಹನೀಯವಾದುದು.

ಪ್ರವಾದಿವರ್ಯ(ಸ)ರಿಗೆ ತನ್ನ ಕರುಳ ಕುಡಿಯೊಂದಿಗೆ ಅಗಾಧ ಪ್ರೀತಿ ವಾತ್ಸಲ್ಯವಿತ್ತು. ಈ ಸಂದರ್ಭದಲ್ಲಿ ಆ ತಂದೆ ಏನು ಮಾಡ ಬೇಕಾಗಿತ್ತು? ಹೃದಯವನ್ನು ಹೆಚ್ಚು ಅಲ್ಲಾಹನತ್ತ ವಾಲಿಸಿಕೊಂಡು ಆತನ ಸಹಾಯಕ್ಕಾಗಿ ಮೊರೆಯಿಟ್ಟರು. ತುಂಬಿದ ಕಣ್ಣುಗಳೊಂದಿಗೆ ನಿಂತ ಪುತ್ರಿಯನ್ನು ನೋಡುತ್ತಾ “ಮಗಳೇ ಅಳಬೇಡ! ಅಲ್ಲಾಹನು ನಿನ್ನ ತಂದೆಯನ್ನು ಸಂರಕ್ಷಿಸುವನು” ಎಂದು ಹೇಳಿದರು.

ತನ್ನ ಮಗಳಿಗೆ ಸೂಕ್ತ ವರನೊಬ್ಬನನ್ನೂ ಅರಿಸಿದರು. ತನ್ನ ಬಾಲ್ಯದಿಂದಲೇ ಜೊತೆಗಿದ್ದು ತನ್ನ ವಚನವನ್ನು ಸ್ವೀಕರಿಸಿ ಆದರ್ಶದ ಹಾದಿಯಲ್ಲಿ ಸ್ಥಿರವಾಗಿದ್ದುಕೊಂಡು ಎಲ್ಲಾ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ತ್ಯಾಗ ಸಹಿಸಿದ ಅಲೀ(ರ)ರವರನ್ನು ಆರಿಸಿದರು. ತನ್ನ ಮಗಳಿಗೆ ಯಾವೆಲ್ಲ ಗುಣಗಳನ್ನು ಒಳಗೊಂಡ ಗಂಡು ಬೇಕೋ ಆ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡ ಅಲಿ(ರ)ಗೆ ತನ್ನ ಪುತ್ರಿಯನ್ನು ವಿವಾಹ ಮಾಡಿ ಕೊಟ್ಟರು.

ವಿವಾಹವಾದ ಬಳಿಕ ಅವರು ಸ್ವಲ್ಪ ದೂರದಲ್ಲಿ ವಾಸವಾಗಿದ್ದರು. ತನ್ನ ಸಂದೇಶ ಪ್ರಚಾರದ ದೌತ್ಯದ ನಿಭಿಡತೆಯ ನಡುವೆಯೂ ಕುಟುಂಬದ ಜೊತೆ ಮಕ್ಕಳೊಂದಿಗೆ ಸೇರಿಕೊಳ್ಳಲು ಸಮಯ ಮೀಸಲಿಟ್ಟ ಪ್ರವಾದಿವರ್ಯರು(ಸ) ಮಗಳು ತನ್ನ ಪಕ್ಕದಲ್ಲಿಯೇ ವಾಸವಾಗಿದ್ದರೆ ಎಂದು ಆಶಿಸಿದ್ದರು. ಅದನ್ನು ಅರ್ಥೈಸಿದ ಫಾತಿಮಾ(ರ) ಹೇಳಿದರು; “ಪ್ರಿಯ ಅಪ್ಪಾ.. ಹಾಗಾದರೆ ನೀವು ಹಾರಿಸ್ ಬಿನ್ ನುಅಮಾನ್‌ರ ಜೊತೆ ಮಾತನಾಡಿರಿ. ಅವರ ಮನೆ ನಿಮಗೆ ಹೆಚ್ಚು ನಿಕಟವಾಗಿದೆಯಲ್ಲವೇ?

ಈ ವಿಚಾರ ಹಾರಿಸ್ ರವರಿಗೆ ಹೇಗೋ ತಿಳಿಯಿತು. ಅವರ ತಕ್ಷಣ ಪ್ರವಾದಿವರ್ಯ(ಸ)ರನ್ನು ಭೇಟಿಯಾಗಿ, ಪ್ರವಾದಿಗಳೇ, ತಾವು ತಮ್ಮ ಮನೆಯ ಸಮೀಪದಲ್ಲಿಯೇ ಪುತ್ರಿ ಫಾತಿಮಾ ವಾಸಿಸಲು ಬಯಸಿದ್ದೀರಿ ಎಂದು ತಿಳಿದು ಬಂತು. ಹಾಗಾದರೆ ನನ್ನ ಮನೆಯನ್ನು ನೀಡುತ್ತಿದ್ದೇನೆ. ಅವರು ಅದರಲ್ಲಿ ವಾಸ ಮಾಡಲಿ. ನನ್ನ ಸಂಪತ್ತು ಅಲ್ಲಾಹನಿಗೂ ಆತನ ರಸೂಲರಿಗೂ ಇರುವಂತಹದ್ದು. ಪ್ರೀತಿಯ ಪ್ರವಾದಿವರ್ಯರೇ, ನನ್ನ ಮನೆಯನ್ನು ಹೇಗೆ ಸ್ವೀಕರಿಸಲಿ ಎಂಬ ಚಿಂತೆ ಮಾಡಬೇಡಿ. ನನ್ನಿಂದ ಸ್ವೀಕರಿಸುವ ಸಂಪತ್ತು ನನ್ನಲ್ಲಿ ಉಳಿದಿರುವ ಸಂಪತ್ತಿಗಿಂತ ಹೆಚ್ಚು ಇಷ್ಟವಾದುದು. ನಿಮ್ಮ ಇಚ್ಚೆಯೇ ನನ್ನ ಇಚ್ಛೆಯಾಗಿದೆ. ತಮ್ಮ ಬಯಕೆಯ ಈಡೇರಿಕೆಯೇ ನನಗೆ ಮುಖ್ಯ. ಅದು ನನ್ನ ಗುರಿಯಾಗಿದೆ ಎಂದರು.

ಇದನ್ನು ಕೇಳಿದ ಪ್ರವಾದಿವರ್ಯರು(ಸ) ಸಂತೋಷಭರಿತರಾದರು. ಮತ್ತು ಅವರಿಗಾಗಿ ಪ್ರಾರ್ಥಿಸಿದರು. ತನ್ನ ಪ್ರಿಯ ಪುತ್ರಿ ವಿವಾಹದ ಬಳಿಕವೂ ಸಮೀಪದಲ್ಲಿಯೇ ವಾಸವಾದರು. ಈ ಘಟನೆಯಲ್ಲಿ ನಮಗೆ ಹಲವಾರು ಪಾಠಗಳಿವೆ. ಇಂದು ಸಾಮಾನ್ಯವಾಗಿ ಹಿಂದಿನಷ್ಟು ಕುಟುಂಬ ಸಂಬಂಧಗಳು ಸುಮಧುರವಾಗಿರುವುದಿಲ್ಲ. ಕಾಲಕ್ಕನುಗುಣವಾಗಿ ಜೀವನ ಶೈಲಿಯಲ್ಲಿ ಹಲವಾರು ಬದಲಾವಣೆಗಳುಂಟಾಗಿವೆ. ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಕೆಲವು ಸಮಸ್ಯೆಗಳು ನಿರ್ಲಕ್ಷತೆಯಿಂದ ದೂರದೃಷ್ಟಿಯಿಲ್ಲದ ಕಾರಣದಿಂದುಂಟಾಗುತ್ತದೆ.

ವಿವಾಹವಾಗುವುದರೊಂದಿಗೆ ಅವರು ಹೊಸ ಕುಟುಂಬವಾಗಿ ಬದಲಾಗಿ ಇತರ ಕುಟುಂಬಗಳಿಂದ ದೂರವಾಗುವುದು ಸಮಸ್ಯೆಗಳಿಗೆ ಕಾರಣವಾಗಿದೆ. ಇದರಿಂದ ಕುಟುಂಬ ಸಂಬಂಧಗಳಲ್ಲಿ ಸಂಬಂಧ ಕಡಿದು ಹೋಗುತ್ತದೆ. ಕೆಲವರು ಎಷ್ಟೋ ದೂರ ಹೋಗಿ ನೆಲೆಸುತ್ತಾರೆ. ಅವರನ್ನು ಭೇಟಿಯಾಗಲು ಒಂದೆರಡು ದಿನಗಳ ಪ್ರಯಾಣ ಮಾಡಬೇಕಾಗುತ್ತದೆ. ಈ ಕಾಲದಲ್ಲಿ ಅದು ಎಷ್ಟು ಸಾಧ್ಯವಾಗುತ್ತದೋ ಹೇಳಲಾಗದು. ಬಯಕೆಯಿದೆ, ಆದರೆ ಸಾಧ್ಯವಾಗುವುದಿಲ್ಲ. ಶಿಕ್ಷಣ, ಉದ್ಯೋಗ ಮುಂತಾದ ಕಾರಣಗಳಿಗಾಗಿ ತಕ್ಕ ವಧು-ವರರು ಸಿಗದ ಕಾರಣಗಳಿಗಾಗಿ ದೂರ ಹೋಗುತ್ತಾರೆ ಎಂಬುದನ್ನು ಅರ್ಥೈಸಬಹುದು.

ಆದರೆ ತಮ್ಮ ತಂದೆ-ತಾಯಿಯರ ಮತ್ತಿತರ ಬಂಧು ಮಿತ್ರಾಧಿಗಳು ಇರುವ ಕಡೆ ತಕ್ಕ ವಧು-ವರರು ಸಿಕ್ಕರೂ ತುಂಬ ದೂರದೂರಿನ ಪ್ರದೇಶಗಳಿಂದ ವಿವಾಹ ಮಾಡಿಕೊಳ್ಳುವ ಪ್ರಕ್ರಿಯೆಯ ಹೆಚ್ಚಾಗುತ್ತಿದೆ. ಈ ಕುರಿತು ಮರು ಚಿಂತನೆ ನಡೆಸಲು ಸಮುದಾಯ ಮುಂದಾಗಬೇಕು. ಮಕ್ಕಳ ಸಹಾಯ ಅಗತ್ಯವಾಗಿರುವಾಗ ಕನಿಷ್ಟ ಒಂದು ನೋಟವಾದರೂ ನೋಡಲು ಸಾಧ್ಯವಾಗದೆ ಅಳುವ ಸಂದರ್ಭವನ್ನೂ ನಾವು ನೋಡುತ್ತಿದ್ದೇವೆ.

SHARE THIS POST VIA

About editor

Check Also

ಶುಚಿತ್ವಕ್ಕೆ ಇಸ್ಲಾಮ್ ಕೊಡುವ ಮಹತ್ವ ಏನು?

✍️ ಖಾಲಿದ್ ಮೂಸಾ ನದ್ವಿ ಮಾನಸಿಕ ಶುಚಿತ್ವಕ್ಕೆ ಮಹತ್ವ ನೀಡುವ ಇಸ್ಲಾಮ್ ದೈಹಿಕ ಶುಚಿತ್ವಕ್ಕೂ ಮಹತ್ವ ನೀಡುತ್ತದೆ. ದೇಹ, ಉಡುಪು, …

Leave a Reply

Your email address will not be published. Required fields are marked *