Home / ಲೇಖನಗಳು / ಹಸಿದವರಿಗೆ ಉಣಿಸಿರಿ : ಕುರ್ ಆನ್ ಕಲಿಸುವ ಪಾಠ

ಹಸಿದವರಿಗೆ ಉಣಿಸಿರಿ : ಕುರ್ ಆನ್ ಕಲಿಸುವ ಪಾಠ

ಮಾನವನು ಜೀವಿಸಲು ಪೌಷ್ಠಿಕಾಂಶವಿರುವ ಉತ್ತಮ ಆಹಾರ ಸೇವಿಸುವುದು ಅಗತ್ಯವಾಗಿದೆ. ದರಿದ್ರರಿಗೆ ಮತ್ತು ಬಡವರಿಗೆ ಬೇಕಾದಂತಹ ಆಹಾರ ನೀಡಿ ತನ್ನ ಸಹ ಜೀವಿಗಳಿಗೆ ಸಹಾಯ ಮಾಡಬೇಕೆಂದು ಎಲ್ಲಾ ಧರ್ಮ ಗ್ರಂಥಗಳಲ್ಲಿ ತಿಳಿಸಲಾಗಿದೆ. ಮಾನವನ ಪರಲೋಕ ವಿಜಯವು ತನ್ನ ಸಹ ಜೀವಿಗಳಿಗೆ ಮಾಡುವ ಮಾನವೀಯತೆಯ ಸೇವೆಯನ್ನು ಅವಲಂಭಿಸಿದೆ. ತನ್ನ ಸಹಜೀವಿಗಳಿಗೆ ಅಗತ್ಯವಿರುವಾಗ ಮಾನವೀಯತೆಯ ಸೇವೆ ಮಾಡದೆ ನೆಮ್ಮದಿಯಿಂದ ಜೀವಿಸಲು ಸಾಧ್ಯವಿಲ್ಲ. ಹಸಿದವರಿಗೆ ಉಣಿಸುವುದನ್ನು ಇಸ್ಲಾಂ ಧರ್ಮವು ಒಂದು ಮಹತ್ವವಾದ ಪುಣ್ಯ ಕರ್ಮವೆಂದು ಕಲಿಸುತ್ತದೆ. ಬಡವರಿಗೆ, ದರಿದ್ರರಿಗೆ ಮಾತ್ರವಲ್ಲ ಸ್ವತಃ ತನಗೆ, ತನ್ನ ಮಾತಾಪಿತರು, ಪತ್ನಿ ಮಕ್ಕಳು, ಸಂಬಂಧಿಕರು, ನೆಂಟರು ಹೀಗೆ ಎಲ್ಲರಿಗೂ ಉಣಿಸುವುದು ಕೂಡ ಒಂದು ಪುಣ್ಯ ಕರ್ಮವಾಗಿದೆ.

ಪವಿತ್ರ ಕುರ್ ಆನ್ ಅವತೀರ್ಣವಾಗಲು ಆರಂಭವಾಗಿದ್ದ ಮಕ್ಕಾ ಕಾಲಘಟ್ಟದಲ್ಲಿ ನಮಾಝ್, ಝಕಾತ್ ಹಾಗೂ ಉಪವಾಸ ವ್ರತದಂತಹ ಆರಾಧನೆಗಳು ಕಡ್ಡಾಯವಾಗಿರದ ಆ ಸಮಯದಲ್ಲಿ ಹಸಿದವರಿಗೆ ಉಣಿಸಲು ಪ್ರೇರೇಪಿಸುವಂತಹ ಸೂಕ್ತಗಳು ಅವತೀರ್ಣವಾಗಿತ್ತು. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿ ಪಕ್ಷಿಗಳಿಗೆ ಕೂಡ ಅನ್ನ ಪಾನೀಯ ನೀಡುವುದು ಪುಣ್ಯ ಕರ್ಮವಾಗಿದೆ. ನಾಯಿಗೆ ನೀರು ಕುಡಿಸಿ ಸ್ವರ್ಗ ಪ್ರವೇಶಿಸಿದ ಹಾಗೂ ಬೆಕ್ಕಿಗೆ ಆಹಾರ ನೀಡದೆ ಹಿಂಸೆ ನೀಡಿ ನರಕಕ್ಕೆ ಹೋದ ಮಹಿಳೆಯ ಪ್ರಸ್ತಾಪ ಪ್ರವಾದಿ ವಚನಗಳಲ್ಲಿ ಕಾಣಬಹುದಾಗಿದೆ. ಮರವನ್ನು ನೆಡುವುದು ಕೂಡಾ ಪುಣ್ಯ ಕರ್ಮವಾಗಿದೆ. ಅದರಿಂದ ಪ್ರಾಣಿ ಪಕ್ಷಿಗಳು ಮತ್ತು ಮನುಷ್ಯರು ತಿನ್ನುವಾಗ ಪ್ರತಿಫಲ ಸಿಗುತ್ತಲೇ ಇರುವುದು.

ಪ್ರವಾದಿ (ಸ) ಹೀಗೆ ಹೇಳಿರುವರು:
“ ಒಬ್ಬ ಸತ್ಯ ವಿಶ್ವಾಸಿಯು ಹಸಿದಿರುವ ಇನ್ನೊಬ್ಬ ಸತ್ಯವಿಶ್ವಾಸಿಗೆ ಉಣಬಡಿಸಿದರೆ ಅಲ್ಲಾಹನು ಪುನರುತ್ಥಾನ ದಿನ ಆತನಿಗೆ ಸ್ವರ್ಗದ ಆಹಾರವನ್ನು ಉಣಿಸುವನು. ಒಬ್ಬ ಸತ್ಯ ವಿಶ್ವಾಸಿಯು ದಾಹದಿಂದ ನರಳುತ್ತಿರುವ ಓರ್ವ ಸತ್ಯ ವಿಶ್ವಾಸಿಗೆ ನೀರು ಕುಡಿಸಿದರೆ ಅಲ್ಲಾಹನು ಪುನರುತ್ಥಾನ ದಿನ , ಆತನಿಗೆ ಮುದ್ರೆ ಹಾಕಿರುವ ಅತ್ಯುನ್ನತ ಮಟ್ಟದ ಪಾನೀಯವನ್ನು ಕುಡಿಸುವನು. ಓರ್ವ ಸತ್ಯ ವಿಶ್ವಾಸಿಯು ಉಡಲು ಬಟ್ಟೆಯಿಲ್ಲದ ಒಬ್ಬ ಸತ್ಯವಿಶ್ವಾಸಿಗೆ ಬಟ್ಟೆ ಉಡಿಸಿದರೆ, ಅಲ್ಲಾಹನು ಪುನರುತ್ಥಾನ ದಿನ ಆತನಿಗೆ ಸ್ವರ್ಗದ ಪೋಷಾಕನ್ನು ಉಡಿಸುವನು .”

ದಾನ ಧರ್ಮವು ಹಲವಾರು ವಿಧಗಳಿವೆ. ಝಕಾತ್ ಎಂಬುದು ಸ್ಥಿತಿವಂತರ ಮೇಲಿರುವ ಕಡ್ಡಾಯ ದಾನಧರ್ಮ. ಸದಕ ಎಂಬುದು ಸ್ವ ಇಚ್ಛೆಯಿಂದ ನೀಡುವ ದಾನಧರ್ಮ. ಅದಕ್ಕೆ ಯಾವುದೇ ನಿಗದಿತ ಮೊತ್ತ, ಅವಧಿ ಎಂಬುದಿಲ್ಲ. ದೊಡ್ಡ ಮೊತ್ತ ನೀಡಲು ಸಾಧ್ಯವಾಗದಿದ್ದರೂ ಖರ್ಜೂರದಂತಹ ಸಣ್ಣ ಸಣ್ಣ ವಸ್ತುಗಳನ್ನು ದಾನ ಮಾಡಿದರೂ ಅಲ್ಲಾಹನು ಸ್ವೀಕರಿಸುತ್ತಾನೆ. ಫಿದಿಯಾ ಎಂಬುದು ಉಪವಾಸವಿರಲು ಸಾಧ್ಯವಾಗದಿದ್ದರೆ ಪ್ರಾಯಶ್ಚಿತವಾಗಿ ನೀಡುವ ಆಹಾರ. ಕಫ್ಫಾರ ಎಂಬುದು ಕೆಲವು ಸಣ್ಣಪುಟ್ಟ ಪಾಪಗಳಿಗೆ ಪ್ರಾಯಶ್ಚಿತವಾಗಿ ಬಡವರಿಗೆ ನೀಡುವ ಆಹಾರವಾಗಿದೆ. ನಾವು ಎರಡು ಹಬ್ಬಗಳನ್ನು ದಾನಧರ್ಮ ನೀಡಿಯೇ ಆಚರಿಸಬೇಕೆಂದು ಅಲ್ಲಾಹನ ಆದೇಶವಿದೆ. ಫಿತ್ರ್ ಝಕಾತ್ ಎಂಬುದು ಬಡವರು ಫಿತ್ರ್ ಹಬ್ಬವನ್ನು ಸಂತೋಷದಿಂದ ಆಚರಿಸಲು ನೀಡುವ ಆಹಾರ. ಬಕ್ರೀದ್ ಹಬ್ಬದ ದಿನದಂದು ಹಾಗೂ ಮಗು ಹುಟ್ಟಿದಾಗ ಅಕೀಕ ನೀಡುವ ಪ್ರಾಣಿ ಬಲಿದಾನದ ಮೂರನೇ ಒಂದಂಶವನ್ನು ಬಡವರಿಗೆ ನಿಶ್ಚಯಿಸಲಾಗಿದೆ.

” ಮತ್ತು ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ ”. ( ಅಲ್ ಜುಮುಅಃ :11)

ಬಡವರಿಗೆ ದಾನಧರ್ಮ ನೀಡುವುದರಿಂದ ಸಂಪತ್ತಿನಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ. ಬಡವರಿಗೆ ಏನೂ ನೀಡದೆ ಲಾಭ ಗಳಿಸಲು ಮತ್ತು ನಮ್ಮ ಸಂಪತ್ತು ವೃದ್ಧಿಯಾಗಲು ಸಾಧ್ಯವಿಲ್ಲ. ಮಾತ್ರವಲ್ಲ ಅಂತಹ ಸಂಪತ್ತು ಇಹಲೋಕದಲ್ಲಿ ನಾಶವಾಗುದೆಂದು ಪವಿತ್ರ ಕುರ್ ಆನ್ ನಲ್ಲಿ ತೋಟದವರ ಕಥೆಯ ಮೂಲಕ ಎಚ್ಚರಿಕೆ ನೀಡಲಾಗಿದೆ. ಬಡವರಿಗೆ ನೀಡದೆ ನಸುಕಿನಲ್ಲೇ ಫಲಗಳನ್ನು ಕೊಯ್ಯಲು ತೀರ್ಮಾನಿಸಿದಾಗ ಅವರ ತೋಟಕ್ಕೆ ವಿಪತ್ತೊಂದು ಎರಗಿತು. ಅದರ ಅವಸ್ಥೆಯು ಕೊಯ್ದ ಬೆಳೆಯಂತಾಗಿ ಬಿಟ್ಟಿತು. ಹಸಿದವರಿಗೆ ಉಣಿಸುವುದು ನಮ್ಮನ್ನು ಸ್ವರ್ಗದೆಡೆಗೆ ಕೊಂಡೊಯ್ಯುವುದು, ಉಣಿಸದಿದ್ದರೆ ಅವರೊಂದಿಗೆ ಅಲ್ಲಾಹನು ಅಂತ್ಯ ದಿನದಂದು ಪ್ರಶ್ನಿಸುವನು ಮತ್ತು ನರಕ ಪ್ರವೇಶಿಸಲಾಗುವುದು.

” ನಿಮ್ಮನ್ನು ನರಕಕ್ಕೆ ಒಯ್ದುದು ಯಾವುದು ? ” ಅವರು ಹೇಳುವರು; ನಾವು ನಮಾಝ್ ಮಾಡುವವರಾಗಿರಲಿಲ್ಲ – ಮತ್ತು ದರಿದ್ರರಿಗೆ ಉಣಿಸುತ್ತಿರಲಿಲ್ಲ. ( ಅಲ್ ಮುದ್ದಸ್ಸಿರ್ : 42-44)

ತೋರಿಕೆಗಾಗಿ, ಹೆಸರು ಗಳಿಸಲಿಕ್ಕಾಗಿ ಅಥವಾ ದಾನಧರ್ಮ ನೀಡಿ ಉಪಕಾರ ಭಾರವಿರಿಸಿದರೆ ಅದರ ಪ್ರತಿಫಲ ಪರಲೋಕದಲ್ಲಿ ಸಿಗಲಾರದು. ಬಡವರಿಗೂ ಅಭಿಮಾನ, ಘನತೆ ಗೌರವಗಳಿವೆ. ನಿಸ್ವಾರ್ಥವಾಗಿ ಅಲ್ಲಾಹನ ಮೆಚ್ಚುಗೆ ಮತ್ತು ಪರಲೋಕದ ಪ್ರತಿಫಲ ನಿರೀಕ್ಷಿಸಿ ಮಾತ್ರ ಸತ್ಕರ್ಮಗಳನ್ನು ಮಾಡಬೇಕು. ಮತ್ತು ನಿಮ್ಮ ಹಣದಿಂದ ಬಡವರನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಲು ಪ್ರಯತ್ನಿಸಬೇಡಿರಿ. ಈ ಮಾನವೀಯತೆಯ ಸೇವೆ ನಮ್ಮ ಪಾಲಿಗೆ ಇಹಲೋಕದಲ್ಲಿ ಸಮೃದ್ಧಿ ಭರಿತ ಜೀವನ ನಡೆಸಲು ಹಾಗೂ ಪರಲೋಕದಲ್ಲಿ ನಮ್ಮ ವಿಜಯಕ್ಕೆ ಕಾರಣವಾಗಬೇಕು.ನಿಮ್ಮ ಹಣದಿಂದ ಒಂದು ಕುಟುಂಬಕ್ಕೆ ಸ್ವ ಉದ್ಯೋಗಕ್ಕೆ ಸಹಾಯ ಮಾಡಿರಿ ಅಥವಾ ಹೂಡಿಕೆ ಮಾಡಿ ಉದ್ಯೋಗ ಸೃಷ್ಟಿಸಿರಿ. ಆಗ ಮಾತ್ರ ಬಡವರಿಗೆ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಸಾಧ್ಯ.

ಪ್ರವಾದಿವರ್ಯರು(ಸ) ಹೇಳಿದ್ದಾರೆ: ಅಲ್ಲಾಹನು ಪುನರುತ್ಥಾನ ದಿನದಂದು …….. “ಆದಮನ ಪುತ್ರನೇ! ನಾನು ನಿನ್ನಿಂದ ಆಹಾರ ಬೇಡಿದ್ದೆ. ಆದರೆ ನೀನು ನನಗೆ ಉಣ ಬಡಿಸಲಿಲ್ಲ” ಎಂದು ಹೇಳುವನು. ಆಗ ಮನುಷ್ಯನು “ನನ್ನ ಪ್ರಭೂ ನಿನಗೆ ನಾನು ಹೇಗೆ ಉಣಿಸಲಿ. ನೀನಂತೂ ಸಕಲ ವಿಶ್ವದ ಒಡೆಯನಾಗಿರುವೆ” ಎನ್ನುವನು. ಆಗ ಅಲ್ಲಾಹನು ‘ನಿನಗೆ ತಿಳಿದಿಲ್ಲವೇ? ನನ್ನ ಇಂತಿಂತಹ ದಾಸನು ನಿನ್ನಿಂದ ಆಹಾರ ಕೇಳಿದ್ದನು. ಆದರೆ ನೀನು ಅವನಿಗೆ ಆಹಾರ ನೀಡಲಿಲ್ಲ. ನೀನು ಅವನಿಗೆ ಉಣ ಬಡಿಸುತ್ತಿದ್ದರೆ ಅದನ್ನು (ಅದರ ಫಲವನ್ನು) ಇಂದು ನನ್ನ ಬಳಿ ಕಾಣುತ್ತಿದ್ದೆ.

ಭೂಮಿಯ ಮೇಲೆ ಅಲ್ಲಾಹನು ಅಲಂಕಾರ ಹಾಗೂ ಅತ್ಯಾಕರ್ಷಕವಾಗಿಟ್ಟ ವಸ್ತುಗಳಲ್ಲಿ ಹಣವೂ ಒಂದಾಗಿದೆ. ಹಣ ಎಂಬುದು ಎಷ್ಟೂ ಇದ್ದರೂ ಸಾಕಾಗದು ಇನ್ನೂ ಬೇಕು ಎಂದು ಆಶಿಸುವುದು ಮನುಷ್ಯರ ಸಹಜ ಗುಣವಾಗಿದೆ. ಹಣ ಅಲ್ಲಾಹನ ಒಂದು ದೊಡ್ಡ ಪರೀಕ್ಷೆಯೂ ಆಗಿದೆ. ಮಾನವನ ಎಲ್ಲ ಪರಿಶ್ರಮ, ದುಡಿಮೆ, ವಿದ್ಯಾಭ್ಯಾಸದ ಉದ್ದೇಶ ಹಣ ಸಂಪಾದಿಸುವುದಾಗಿದೆ. ಹಣವನ್ನು ಹೇಗೆ ಸಂಪಾದಿಸಬೇಕು ಮತ್ತು ಹೇಗೆ ಖರ್ಚು ಮಾಡಬೇಕೆಂದು ಸ್ಪಷ್ಟವಾದ ಆದೇಶಗಳನ್ನು ಪವಿತ್ರ ಕುರ್ ಆನ್ ನೀಡುತ್ತದೆ. ಹಲವಾರು ದುಂದುವೆಚ್ಚ, ಅನಗತ್ಯ ಖರ್ಚು, ದೊಡ್ಡ ದೊಡ್ಡ ಔತಣ ಕೂಟ ಮತ್ತು ಖರ್ಚು ಮಾಡುವುದರಲ್ಲಿ ಪೈಪೋಟಿ ನಡೆಯುತ್ತಿರುವ, ಐಶಾರಾಮಿ ಮತ್ತು ತೊರಿಕೆಯ ಜೀವನ ಇಷ್ಟಪಡುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ.

ಬಡವನಿಗೆ ಉಣಬಡಿಸುವಂತೆ ಪರಸ್ಪರರನ್ನು ಪ್ರೇರೇಪಿಸುವುದಿಲ್ಲ . ( ಅಲ್ ಫಜ್ರ್ : 18)

ಬಡವರ ತಟ್ಟೆಯ ಅನ್ನಕ್ಕಿಂತಲೂ ಹೆಚ್ಚು ಹಣ ಶ್ರೀಮಂತರ ಸೌಂದರ್ಯ ವರ್ಧಕ ವಸ್ತು, ನಾಯಿ ಬೆಕ್ಕುಗಳ ಆಹಾರ, ಅಲಂಕಾರ ವಸ್ತು, ಹೂವು, ಉಡುಗೊರೆ ಇತ್ಯಾದಿಗಳಿಗೆ ಖರ್ಚಾಗುತ್ತಿದೆ. ನೂರಾರು ಜನರಿಗೆ ಉಣಿಸಲು ಸಾಧ್ಯವಾಗದಿದ್ದರೆ ಒಬ್ಬರು ಇಬ್ಬರು ಅಥವಾ ಬೆರಳೆಣಿಕೆಯಷ್ಟು ಜನರಿಗೆ ಉಣಿಸಿರಿ. ಬಡವರಿಗೆ ಉಣಿಸಿ ಶ್ರೀಮಂತರಾಗಿರಿ. ಶ್ರೀಮಂತರಿಗೆ ಉಣಿಸಿ ದರಿದ್ರ, ಸಾಲಗಾರರಾಗುವ ಎಷ್ಟೋ ಜನರಿದ್ದಾರೆ. ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅಗತ್ಯವಿಲ್ಲದಂತಹ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಹಣವನ್ನು ವ್ಯರ್ಥ ಮಾಡಬೇಡಿರಿ.

ಕಳೆದ ಎರಡು ವರ್ಷಗಳಲ್ಲಿ ಜಗತ್ತಿನಲ್ಲಿ ದೊಡ್ಡ ವಿಭಾಗವು ಹಣಕಾಸಿನ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಿರುವಾಗ ನಿಮ್ಮ ಎಲ್ಲ ಖರ್ಚು ಕಳೆದು ಏನಾದರೂ ಉಳಿತಾಯವಾಗಿದ್ದರೆ ಅದು ಅಲ್ಲಾಹನು ನಿಮಗೆ ನೀಡಿದ ವಿಶೇಷ ಜೀವನಾಧಾರ ಮತ್ತು ಅನುಗ್ರಹವಾಗಿದೆ.

ಭೂಮಿಯ ಮೇಲೆ ಆಹಾರ ಬಿಕ್ಕಟ್ಟು ಇಲ್ಲ. ಆದರೆ ಕೆಲವು ಜನರ ಜಿಪುಣತೆ, ದುರಾಸೆ, ಅನಗತ್ಯ ಖರ್ಚುಗಳಿಂದ ಎಲ್ಲರಿಗೂ ಸಮಯಕ್ಕೆ ಆಹಾರ ಸಿಗುತ್ತಿಲ್ಲ. ಪ್ರತಿ ವರ್ಷ ಲಕ್ಷಾಂತರ ಜನರು ಹಸಿವೆಯಿಂದ ಸಾಯುತ್ತಾರೆ. ಕೊರೊನದ ನಂತರ ನಿರುದ್ಯೋಗ ಇನ್ನೂ ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಅಧಿಕಾರ ಮತ್ತು ಸಂಪತ್ತು ಕೆಲವು ಕೋಟ್ಯಾಧಿಪತಿಗಳ ಕೈಯಲ್ಲಿ ಸೀಮಿತವಾಗಿರುವುದು ಕೂಡಾ ಇದಕ್ಕೆ ಕಾರಣವಾಗಿದೆ. ಜಗತ್ತಿನಲ್ಲಿ ಸುಮಾರು 689 ಮಿಲಿಯನಷ್ಟು ಜನರು ಅತ್ಯಂತ ಕಡು ಬಡತನದಲ್ಲಿದ್ದಾರೆ ಎಂದು ವರ್ಲ್ದ್ ಬ್ಯಾಂಕ್ ನ ಅಂಕಿ ಅಂಶಗಳು ತಿಳಿಸುತ್ತದೆ. ಸಂಪತ್ತಿನ ಸರಿಯಾದ ಹಂಚಿಕೆಗಳಲ್ಲಿ ಎಲ್ಲಾ ಸರಕಾರಗಳು ವಿಫಲವಾಗುತ್ತಿದೆ.

ಪ್ರವಾದಿ ಮುಹಮ್ಮದ್(ಸ) ಹೇಳಿರುವರು:
” ತನ್ನ ನೆರೆಯವನು ಹಸಿದಿರುವಾಗ ತಾನು ಹೊಟ್ಟೆ ತುಂಬಾ ಉಂಡು ಮಲಗುವವನು ಸತ್ಯ ವಿಶ್ವಾಸಿಯಲ್ಲ .”

  • ಖದೀಜ ನುಸ್ರತ್
SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …