Home / ಲೇಖನಗಳು / ದುಲ್‍ಹಜ್ಜ್ ನ ಹತ್ತು ದಿನಗಳು: ಮಹತ್ವ ಮತ್ತು ವೈಶಿಷ್ಟ್ಯಗಳು

ದುಲ್‍ಹಜ್ಜ್ ನ ಹತ್ತು ದಿನಗಳು: ಮಹತ್ವ ಮತ್ತು ವೈಶಿಷ್ಟ್ಯಗಳು

ಇಸ್ಲಾಮಿನ ತಿಂಗಳುಗಳಲ್ಲಿ ದುಲ್‍ಹಜ್ಜ್ ಕೊನೆಯ ತಿಂಗಳಾಗಿದೆ. ಇಸ್ಲಾಮಿನ ಎಲ್ಲಾ ತಿಂಗಳುಗಳು ಬಹಳ ಮಹತ್ವ ಪೂರ್ಣವಾಗಿವೆ. ಆದರೆ ಅಲ್ಲಾಹನು ಕೆಲವೊಂದು ತಿಂಗಳುಗಳಿಗೆ ವಿಶೇಷ ಮಹತ್ವ ನೀಡಿದ್ದಾನೆ. ಅದರಲ್ಲಿ ಒಂದು ದುಲ್‍ಹಜ್ಜ್ ತಿಂಗಳಾಗಿದೆ. ಈ ತಿಂಗಳನ್ನು ಅನಾದಿ ಕಾಲದಿಂದಲೂ ಜನರು ಗೌರವಿಸುತ್ತಾ ಬಂದಿದ್ದಾರೆ. ಅಲ್ಲಾಹನು ಈ ತಿಂಗಳಲ್ಲಿ ಕೆಲವೊಂದು ಆರಾಧನೆಗಳನ್ನು ನಿಶ್ಚಯಿಸಿದ್ದಾನೆ. ಈ ಕಾರಣದಿಂದ ಇದರ ಮಹತ್ವವು ಇನ್ನೂ ಹೆಚ್ಚಾಗಿದೆ.

ದುಲ್‍ಹಜ್ಜ್ ತಿಂಗಳ ಮಹತ್ವ
ಈ ತಿಂಗಳಲ್ಲಿ ಇಸ್ಲಾಮಿನ ಐದು ಕಡ್ಡಾಯ ಕರ್ಮಗಳಲ್ಲಿ ಒಂದಾದ ಹಜ್ಜ್ ಕರ್ಮವನ್ನು ನಿರ್ವಹಿಸಲಾಗುತ್ತದೆ. ಆದುದರಿಂದ ಈ ತಿಂಗಳನ್ನು `ದುಲ್‍ಹಜ್ಜ್’ ಅಂದರೆ `ಹಜ್ಜ್ ನ ಮಾಸ’ ಎಂದು ಹೆಸರಿಸಲಾಗಿದೆ. ಅಜ್ಞಾನ ಕಾಲದಲ್ಲೂ ಹಜ್ಜ್ ಕರ್ಮ ನಿರ್ವಹಿಸಲಾಗುತ್ತಿತ್ತು. ಅಂದಿನ ಜನರೂ ಹಜ್ಜ್ ಕರ್ಮಕ್ಕೆ ಬಹಳ ಮಹತ್ವ ನೀಡುತ್ತಿದ್ದರು. ಅಲ್ಲಾಹನು ಇಸ್ಲಾಮಿನ ನಾಲ್ಕು ತಿಂಗಳುಗಳನ್ನು `ಶಹರುಲ್ ಹರಾಮ್’ ನಿಷಿದ್ಧ ತಿಂಗಳುಗಳು ಎಂದು ಕರೆದಿದ್ದಾನೆ. ರಜಬ್, ದುಲ್‍ಕಅದ್, ದುಲ್‍ಹಜ್ಜ್, ಮುಹರ್ರಮ್. ಈ ರೀತಿ ಕರೆಯಲು ಎರಡು ಕಾರಣಗಳಿವೆ. ಒಂದು; ಈ ತಿಂಗಳುಗಳಲ್ಲಿ ಕೊಲೆ-ಯುದ್ಧಗಳು ನಿಷಿದ್ಧವಾಗಿವೆ. ಎರಡನೆಯದ್ದು, ಇವು ಪವಿತ್ರ ತಿಂಗಳುಗಳಾಗಿವೆ. ಈ ತಿಂಗಳುಗಳಲ್ಲಿ ಮಾಡಿದ ಆರಾಧನೆಗಳಿಗೆ ಅಧಿಕ ಪುಣ್ಯ ಲಭಿಸುತ್ತದೆ. ಇದರಲ್ಲಿ ಮೊದಲನೇ ಆದೇಶವು ಇಸ್ಲಾಮೀ ಶರೀಅತ್‍ನಲ್ಲಿ ರದ್ದುಗೊಂಡಿದೆ. ಆದರೆ ಎರಡನೇ ಆದೇಶವು ಇಸ್ಲಾಮಿನಲ್ಲಿ ಬಾಕಿ ಉಳಿದಿದೆ. (ಮುಆಕಿಫುಲ್ ಕುರ್‍ಆನ್ 4/372) ಅಜ್ಞಾನ ಕಾಲದಲ್ಲಿ ನಿಷಿದ್ಧ ತಿಂಗಳುಗಳಲ್ಲಿ ಕೊಲೆ-ಯುದ್ಧವು ನಿಷಿದ್ಧವಾಗಿದ್ದರಿಂದ ಜನರು ಇದರಿಂದ ದೂರವಿರುತ್ತಿದ್ದರು. ಎಲ್ಲಿಯವರೆಗೆಂದರೆ ತಮ್ಮ ತಂದೆಯ ಹಂತಕ ತಮ್ಮ ಕಣ್ಣ ಮುಂದಿನಿಂದ ಹಾದು ಹೋದರೂ ಆತನನ್ನು ಕೊಲ್ಲದೆ ಬಿಟ್ಟು ಬಿಡುತ್ತಿದ್ದರು. ಇಂತಹ ಪವಿತ್ರ ತಿಂಗಳುಗಳಲ್ಲಿ ದುಲ್‍ಹಜ್ಜ್ ಒಂದಾಗಿದೆ.

ದುಲ್‍ಹಜ್ಜ್ ತಿಂಗಳ ಆರಂಭದ ಹತ್ತು ದಿನಗಳ ಮಹತ್ವ
ದುಲ್‍ಹಜ್ಜ್ ನ ಸಂಪೂರ್ಣ ತಿಂಗಳು ಪುಣ್ಯದಾಯಕವಾಗಿದೆ. ಆದರೆ ಅದರಲ್ಲಿ ಆರಂಭದ ಹತ್ತು ದಿನಗಳು ಬಹಳ ಮಹತ್ವವುಳ್ಳವು. ಅಲ್ಲಾಹನು ಕುರ್‍ಆನಿನಲ್ಲಿ ಈ ರೀತಿ ಹೇಳುತ್ತಾನೆ, “ಪ್ರಾತಃಕಾಲದ ಆಣೆ, ದಶರಾತ್ರಿಗಳ ಆಣೆ, ಸಮ ವಿಷಮಗಳ ಆಣೆ.” (89: 1-3) ಈ ಸೂಕ್ತದಲ್ಲಿ ಅಲ್ಲಾಹನು ವಿಶೇಷವಾಗಿ ಮೂರು ವಿಷಯಗಳ ಮೇಲೆ ಆಣೆ ಹಾಕಿದ್ದಾನೆ. ಒಂದು. ಫಜ್ರ್‍ನ ವೇಳೆ ಕೆಲವು ವ್ಯಾಖ್ಯಾನಕಾರರು ಈ ಸೂಕ್ತವನ್ನು ವಿಶೇಷವಾಗಿ ದುಲ್ ಹಜ್ಜ್ ನ ಪ್ರಾತಃಕಾಲದ ಸಮಯ ಎಂದು ವ್ಯಾಖ್ಯಾನಿಸಿದ್ದಾರೆ. (ತೌಝಿಹ್ಲ್ ಕುರ್‍ಆನ್: 3/1922) ಎರಡನೇ ಆಣೆ. ಹತ್ತು ರಾತ್ರಿಗಳದ್ದು. ಹೆಚ್ಚಿನ ವ್ಯಾಖ್ಯಾನಕಾರರು ಇದನ್ನು ದುಲ್‍ಹಜ್ಜ್ ತಿಂಗಳ ಆರಂಭದ ಹತ್ತು ದಿನಗಳೆಂದು ಹೇಳಿದ್ದಾರೆ.

ಪ್ರವಾದಿವರ್ಯರು(ಸ) ಹೇಳಿದ್ದಾರೆ, “ಹತ್ತು ದಿನಗಳೆಂದರೆ ದುಲ್‍ಹಜ್ಜ್ ನ ಆರಂಭದ ಹತ್ತು ದಿನಗಳು ಹಾಗೂ `ತಾಖ್’ ಎಂದರೆ ಅರಫಾತ್‍ನ ದಿನ ಹಾಗೂ `ಜಿಫ್ತ್’ ಅಂದರೆ ಈದುಲ್ ಅಝ್ಹದ ದಿನವಾಗಿದೆ.”
ಇನ್ನೊಂದು ಹದೀಸ್‍ನಲ್ಲಿ ಈ ರೀತಿ ಇದೆ. “ದುಲ್‍ಹಜ್ಜ್ ನ ಹತ್ತು ದಿನಗಳು ವರ್ಷದ ಎಲ್ಲಾ ದಿನಗಳಿಗಿಂತಲೂ ಶ್ರೇಷ್ಠ ದಿನಗಳಾಗಿವೆ.”
ಇನ್ನೊಂದು ಪ್ರವಾದಿ ವಚನದಲ್ಲಿ ಪ್ರವಾದಿವರ್ಯರು(ಸ) ದುಲ್‍ಹಜ್ಜ್ ನ ಹತ್ತು ದಿನಗಳ ಮಹತ್ವವನ್ನು ಹೇಳುತ್ತಾ, ಈ ರೀತಿ ಹೇಳಿರುವರು- “ಅಲ್ಲಾಹನ ಮುಂದೆ (ದುಲ್‍ಹಜ್ಜ್ ನ) ಹತ್ತು ದಿನಗಳಲ್ಲಿ ಮಾಡುವ ಸತ್ಕಾರ್ಯಗಳಿಗಿಂತ ಹೆಚ್ಚು ಪ್ರಿಯವಾದ ದಿನಗಳು ಬೇರಾವ ದಿನಗಳಲ್ಲಿ ಮಾಡಿದ ಪುಣ್ಯ ಕಾರ್ಯಗಳಿಗಿಲ್ಲ. ಆಗ ಸಹಾಬಿವರ್ಯರು(ಸ) ಪ್ರಶ್ನಿಸಿದರು, “ಓ ಅಲ್ಲಾಹನ ಸಂದೇಶವಾಹಕರೇ(ಸ)! ಇದು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆಯೇ?” ಆಗ ಪ್ರವಾದಿವರ್ಯರು(ಸ) ಹೇಳಿದರು, “ಇದು ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದಕ್ಕಿಂತಲೂ ಶ್ರೇಷ್ಠವಾಗಿದೆ. ಆದರೆ ಯಾವ ವ್ಯಕ್ತಿಯು ಜೀವ-ಸೊತ್ತುಗಳೊಂದಿಗೆ ಅಲ್ಲಾಹನ ಮಾರ್ಗದಲ್ಲಿ ಹೊರಟ ಬಳಿಕ ಅದರಿಂದ ಯಾವುದೇ ವಸ್ತುವಿಲ್ಲದೆ ಹಿಂದಿರುಗಿದರೆ, (ಅಂದರೆ ಎಲ್ಲವನ್ನೂ ಅಲ್ಲಾಹನ ಮಾರ್ಗದಲ್ಲಿ ತ್ಯಾಗ ಮಾಡಿ, ಹುತಾತ್ಮನಾದರೆ ಇದು ಆ ದಿನಗಳ ಸತ್ಕಾರ್ಯಗಳಿಗಿಂತಲೂ ಶ್ರೇಷ್ಠವಾಗಿದೆ.) [ತಿರ್ಮಿದಿ] ಇನ್ನೊಂದು ಪ್ರವಾದಿ ವಚನದಲ್ಲಿ ಈ ರೀತಿ ಹೇಳಲಾಗಿದೆ, “ವಿಶ್ವದ ದಿನಗಳಲ್ಲಿ ಎಲ್ಲಕ್ಕಿಂತಲೂ ಶ್ರೇಷ್ಠ ದಿನ ದುಲ್‍ಹಜ್ಜ್ ನ ಮೊದಲ ಹತ್ತು ದಿನಗಳಾಗಿವೆ” ಎಂದು ಮತ್ತೊಂದು ಪ್ರವಾದಿ ವಚನವು ಇದಕ್ಕೆ ಪುಷ್ಠಿ ನೀಡುತ್ತದೆ. (ಕಶಫ್ ಅಲ್‍ಅಸ್ತಾರ್)

ದುಲ್‍ಹಜ್ಜ್ ನ ಹತ್ತು ದಿನಗಳ ವೈಶಿಷ್ಟ್ಯಗಳು
ಕೆಲವೊಂದು ಆರಾಧನೆಗಳ ಮುಖಾಂತರ ಅಲ್ಲಾಹನು ದುಲ್‍ಹಜ್ಜ್ ನ ಹತ್ತು ದಿನಗಳಿಗೆ ಮಹತ್ವವನ್ನು ಕಲ್ಪಿಸಿದ್ದಾನೆ. ಈ ಹತ್ತು ದಿನಗಳಲ್ಲಿ ಇಸ್ಲಾಮಿನ ಪ್ರಮುಖ ಕರ್ಮಗಳನ್ನು ನೆರವೇರಿಸಲಾಗುತ್ತದೆ, ಆರಾಧನೆಗಳನ್ನು ಮಾಡಲಾಗುತ್ತದೆ. ಹಜ್ಜ್ ನ ಸಂದರ್ಭದಲ್ಲಿ ಉಪವಾಸಗಳನ್ನಾಚರಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕುರ್ಬಾನಿ ನೀಡುವವರಿಗೆ ಕೂದಲು-ಉಗುರುಗಳನ್ನು ಕತ್ತರಿಸುವುದನ್ನು ತಡೆಯಲಾಗಿದೆ. ತಕ್ಬೀರ್‍ ಗಳನ್ನು ಹೇಳಲು ಆದೇಶಿಸಲಾಗಿದೆ. ಹಜ್ಜ್ ಅನ್ನು ಸಂಪೂರ್ಣ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಗುತ್ತದೆ. ಕುರ್ಬಾನಿ ನೀಡಲಾಗುತ್ತದೆ. ಅದೇ ದಿನಗಳಲ್ಲಿ ಇಸ್ಲಾಮಿನ ಪ್ರಮುಖ ಹಬ್ಬವಾದ ಈದುಲ್ ಅಝ್ಝಾ(ಬಕ್ರೀದ್)ವನ್ನು ಆಚರಿಸಲಾಗುತ್ತದೆ. ಈ ಕಾರ್ಯಗಳನ್ನು ವಿವರವಾಗಿ ನೋಡೋಣ.

ಕೂದಲು ಹಾಗೂ ಉಗುರುಗಳನ್ನು ಕತ್ತರಿಸದಿರುವುದು
ದುಲ್‍ಹಜ್ಜ್ ನ ಈ ಹತ್ತು ದಿನಗಳಲ್ಲಿ ನೀಡಲಾಗಿರುವ ಮೊಟ್ಟ ಮೊದಲ ಆದೇಶ ಕುರ್ಬಾನಿ ಯಾರ ಹೆಸರಲ್ಲಿ ನೀಡಲಾಗುತ್ತದೆಯೋ ಅವರು ಕೂದಲು ಹಾಗೂ
ಉಗುರುಗಳನ್ನು ಕತ್ತರಿಸದಿರುವುದು.
ಪ್ರವಾದಿವರ್ಯರು(ಸ) ಹೇಳಿದ್ದಾರೆ, “ದುಲ್‍ಹಜ್ಜ್ ನ ಚಂದ್ರ ನೋಡಿ ಯಾರು ಕುರ್ಬಾನಿ ನೀಡಲು ನಿರ್ಧಾರ ಕೈಗೊಳ್ಳುತ್ತಾರೋ ಅವರು ಕೂದಲು ಹಾಗೂ ಉಗುರುಗಳನ್ನು ಕತ್ತರಿಸಬಾರದು.” ಕುರ್ಬಾನಿ ನೀಡುವವರ ಪಾಲಿಗೆ ಈ ಆದೇಶವು ಮುಸ್ತಹಬ್ ಆಗಿದೆ. ಚಂದ್ರದರ್ಶನದಿಂದ ಹಿಡಿದು ಕುರ್ಬಾನಿ ನೀಡುವವರೆಗೆ ಕೂದಲು ಉಗುರುಗಳನ್ನು ಕತ್ತರಿಸಬಾರದು. ಕುರ್ಬಾನಿ ನೀಡದವರಿಗೆ ಈ ಆದೇಶ ಅನ್ವಯಿಸುವುದಿಲ್ಲ. ಒಂದು ವೇಳೆ ಕುರ್ಬಾನಿ ನೀಡುವ ಮೊದಲು ಆ ವ್ಯಕ್ತಿಯು ಈ ರೀತಿ ಮಾಡಿಬಿಟ್ಟರೆ ಯಾವುದೇ ಪಾಪವಿಲ್ಲ. ಇದರಿಂದ ಕುರ್ಬಾನಿಯಲ್ಲಿ ಯಾವುದೇ ರೀತಿಯ ತೊಡಕುಂಟಾಗಲಾರದು. [ಮುಸ್ತಹಬ್: ಅಂದರೆ ಪ್ರವಾದಿವರ್ಯರು(ಸ) ನಿಯಮಿತವಾಗಿ ಮಾಡಿರದ ಆದರೆ ಕೆಲವೊಮ್ಮೆ ಮಾಡುತ್ತಿದ್ದಂತಹ ಕಾರ್ಯಗಳು. ಇವುಗಳನ್ನು ಮಾಡುವವನಿಗೆ ಪುಣ್ಯವಿದೆ ಮತ್ತು ತೊರೆದರೆ ಯಾವುದೇ ಪಾಪವಿಲ್ಲ.]

ದುಲ್‍ಹಜ್ಜ್ ನ ಹತ್ತು ದಿನಗಳ ಉಪವಾಸ
ಪ್ರವಾದಿವರ್ಯರು(ಸ) ಹೇಳಿದ್ದಾರೆ, “ಈ ಹತ್ತು ದಿನಗಳಲ್ಲಿ ಆಚರಿಸುವ ಪ್ರತೀ ದಿನದ ಉಪವಾಸವು ವರ್ಷಂಪ್ರತಿ ಆಚರಿಸುವ ಉಪವಾಸಗಳಿಗೆ ಸಮವಾಗಿದೆ. ಈ ದಿನಗಳ ರಾತ್ರಿಗಳಲ್ಲಿ ಮಾಡುವ ನಫೀಲ್ ಕಾರ್ಯಗಳು ಕದ್ರ್ ರಾತ್ರಿಯ ನಫೀಲ್ ಕಾರ್ಯಗಳಿಗೆ ಸಮವಾಗಿವೆ.” (ತಿರ್ಮಿದಿ)
ಇದೇ ರೀತಿಯಲ್ಲಿ ದುಲ್‍ಹಜ್ಜ್ ನ 9ನೇ ದಿನವಾದ ಅರಫಾದ ದಿನ ಆಚರಿಸುವ ಉಪವಾಸದ ಮಹತ್ವವನ್ನು ಪ್ರವಾದಿವರ್ಯರು(ಸ) ಬಹಳ ಸ್ಪಷ್ಟವಾಗಿ ವಿವರಿಸಿದ್ದಾರೆ.
ಅರಫಾದ ಉಪವಾಸದ ಕುರಿತು ಪ್ರವಾದಿವರ್ಯರೊಂದಿಗೆ(ಸ) ಪ್ರಶ್ನಿಸಲಾಯಿತು. ಆಗ ಪ್ರವಾದಿವರ್ಯರು(ಸ), “ಈ ದಿನದ ಉಪವಾಸವು ಹಿಂದಿನ ಹಾಗೂ ಮುಂದಿನ ವರ್ಷದ ಎಲ್ಲಾ ಸಣ್ಣ-ಪುಟ್ಟ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ.”

ಅರಫಾ ದಿನದ ಮಹತ್ವವನ್ನು ತಿಳಿಸುತ್ತಾ ಪ್ರವಾದಿವರ್ಯರು(ಸ) ಈ ರೀತಿ ಹೇಳಿದ್ದಾರೆ, “ಅರಫಾತ್‍ನ ದಿನ ಅಲ್ಲಾಹನು ಇತರ ದಿನಗಳಿಗಿಂತ ಹೆಚ್ಚು ಜನರ ಕೊರಳನ್ನು ನರಕಾಗ್ನಿಯಿಂದ ಮುಕ್ತಗೊಳಿಸುತ್ತಾನೆ. ಅವನು ತನ್ನ ದಾಸರ ಸಮೀಪ ಬಂದು ತನ್ನ ಮಲಕ್‍ಗಳೊಂದಿಗೆ ಹೆಮ್ಮೆಯಿಂದ ಹೇಳುತ್ತಾನೆ, “ಇವರನ್ನು (ನನ್ನ ಕರುಣೆ ಮತ್ತು ಸಂಪ್ರೀತಿಯ ಹೊರತು) ಯಾವ ವಸ್ತು ಇಲ್ಲಿಗೆ ತಂದಿದೆ.” (ವರದಿ: ಹ. ಆಯಿಶಾ(ರ)- ಮುಸ್ಲಿಮ್)

ಹೀಗೆ ಪ್ರವಾದಿವರ್ಯರು(ಸ) ಅರಫಾತ್‍ನ ದಿನ ಉಪವಾಸವನ್ನಾಚರಿಸುವುದಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. ಇದು ಪುಣ್ಯದಾಯಕವೂ ಆಗಿದೆ. ದುಲ್‍ಹಜ್ಜ್ ನ ಹತ್ತು ದಿನಗಳಲ್ಲಿ ಒಂಭತ್ತನೇ ದಿನದವರೆಗೆ ಮಾತ್ರ ಉಪವಾಸವನ್ನಾಚರಿಸಲು ಅವಕಾಶವಿದೆ. ಹತ್ತನೇ ದಿನ ಹಬ್ಬದ ದಿನವಾಗಿದೆ. ಹಬ್ಬದ ದಿನದಂದು ಉಪವಾಸ ಆಚರಿಸುವುದು ನಿಷಿದ್ಧವಾಗಿದೆ. ಇದೇ ರೀತಿ ಹಬ್ಬದ ಬಳಿಕ 11,12,13ನೇ ದಿನಗಳಂದೂ (ಅಯ್ಯಾಮು ತ್ತಶ್ರೀಕ್) ಕೂಡ ಉಪವಾಸವನ್ನಾಚರಿಸುವುದನ್ನು ನಿಷಿದ್ಧವಾಗಿದೆ. ವರ್ಷದ ಐದು ದಿನಗಳಲ್ಲಿ ಉಪವಾಸವನ್ನಾಚರಿಸುವುದು ನಿಷಿದ್ಧಗೊಳಿಸಲಾಗಿದೆ. 1. ಈದುಲ್ ಅಝ್ಹಾ (ಬಕ್ರೀದ್). 2. ಈದುಲ್ ಫಿತ್ರ್ (ರಮಝಾನ್). 3. ಅಯ್ಯಾಮುತ್ತಶ್ರೀಕ್‍ನ ಮೂರು ದಿನಗಳು (ಅಂದರೆ ದುಲ್‍ಹಜ್ಜ್ ತಿಂಗಳ 11, 12, 13ನೇ ತಾರೀಕು) (ಸನನ್-ಉಲ್-ದಾರುಕ್ತನಿ).

ತಕ್ಬೀರ್
ದುಲ್‍ಹಜ್ಜ್ ನ ಹತ್ತು ದಿನಗಳಲ್ಲಿ ನಿರಂತರವಾಗಿ ದಿಕ್ರ್, ತಕ್ಬೀರ್, ತಹ್ಲೀಲ್, ತೌಬಾ, ಇಸ್ತಿಗ್‍ಫಾರ್ ಮತ್ತು ದರೂದ್‍ಗಳನ್ನು ಹೇಳುತ್ತಿರಬೇಕು. ವಿಶೇಷವಾಗಿ ಅಯ್ಯಾಮುತ್ತಶ್‍ರೀಕ್‍ನ ದಿನಗಳಂದು ತಕ್ಬೀರ್‍ ಗಳನ್ನು ಹೇಳುತ್ತಿರಬೇಕೆಂದು ಆದೇಶಿಸಲಾಗಿದೆ. ಅಯ್ಯಾಮುತ್ತಶ್‍ರೀಕ್‍ನಲ್ಲಿ ಹೇಳುವ ತಕ್ಬೀರ್‍ ಗಳನ್ನು ದುಲ್‍ಹಜ್ಜ್ ನ ಒಂಭತ್ತನೇ ದಿನದ ಫಜ್ರ್ ನಮಾಝ್‍ನಿಂದ ಹಿಡಿದು ದುಲ್ ಹಜ್ಜ್ ನ ಹದಿಮೂರನೇ ದಿನದ ಅಸರ್‍ ನವರೆಗೆ ಪ್ರತೀ ನಮಾಝ್‍ನ ಬಳಿಕ ಒಂದು ಬಾರಿ ಉಚ್ಛ ಸ್ವರದಲ್ಲಿ ಪಠಿಸುವುದು ವಾಜಿಬ್ ಆಗಿದೆ. ಸಾಮೂಹಿಕ ಹಾಗೂ ಒಬ್ಬರೇ ನಮಾಝ್ ನಿರ್ವಹಿಸುವವರಿಗಿಬ್ಬರಿಗೂ ಇದು ಅನ್ವಯವಾಗುತ್ತದೆ. ಸ್ತ್ರೀ-ಪುರುಷರು ಇಬ್ಬರ ಮೇಲೂ ಕಡ್ಡಾಯವಾಗಿದೆ. ಆದರೆ ಸ್ತ್ರೀಯರು ಉಚ್ಛ ಸ್ವರದಲ್ಲಿ ಹೇಳಬಾರದು. ಈ ತಸ್ಬೀಹ್ ಅನ್ನು ಕೇವಲ ಒಂದು ಬಾರಿ ಹೇಳಬೇಕೆಂದು ಹದೀಸ್‍ಗಳಿಂದ ಸಾಬೀತಾಗುತ್ತದೆ. ಆದುದರಿಂದ ಒಂದೇ ಬಾರಿ ತಸ್ಬೀಹ್-ಎ-ತಶ್‍ರೀಕ್ ಅನ್ನು ಪಠಿಸಬೇಕು. ತಸ್ಬೀಹ್-ಎ-ತಶ್‍ರೀಕ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಪಠಿಸುವುದು ಸುನ್ನತ್‍ಗೆ ವಿರುದ್ಧವಾಗಿದೆ ಎಂದು ವಿದ್ವಾಂಸರಾದ ಶಾಮೀಯವರು ಅಭಿಪ್ರಾಯ ಪಟ್ಟಿದ್ದಾರೆ. (ಜವಾಹರ್ ಶರೀಅತ್) (ಅಯ್ಯಾಮುತ್ತಶ್‍ರೀಕ್‍ನ ತಸ್ಬೀಹ್: ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್, ಲಾ ಇಲಾಹ ಇಲ್ಲಲ್ಲಾಹು ವ ಅಲ್ಲಾಹು ಅಕ್ಬರ್. ಅಲ್ಲಾಹು ಅಕ್ಬರ್ ವಲ್ಲಾಹುಲ್ ಹಮ್ದ್)
– ಯಾವ ವ್ಯಕ್ತಿಯು ಇಮಾಮರೊಂದಿಗೆ ಮಾಡುವ ರಕಅತ್‍ಗಳು ಉಳಿದು ಬಿಟ್ಟಿದೆಯೋ, ಅವರು ಉಳಿದ ನಮಾಝ್ ಪೂರ್ಣಗೊಳಿಸಿ ಸಲಾಮ್ ಹೇಳಿದ ಬಳಿಕ
ತಕ್ಬೀರ್-ಎ-ತಶ್‍ರೀಕ್ ಹೇಳಬೇಕು.
– ಫರ್ಝ್ ನಮಾಝ್‍ನ ಸಲಾಮ್ ಹೇಳಿದ ಕೂಡಲೇ ಈ ತಕ್ಬೀರ್ ಅನ್ನು ಉಚ್ಚರಿಸಬೇಕು.
– ಒಂದು ವೇಳೆ ಇಮಾಮ್ ತಕ್ಬೀರ್ ಹೇಳಲು ಮರೆತು ಬಿಟ್ಟರೆ, ಮುಕ್ತದಿಗಳು ಇಮಾಮರನ್ನು ಕಾಯದೆ ಸ್ವತಃ ತಕ್ಬೀರ್ ಅನ್ನು ಉಚ್ಚರಿಸಬೇಕು.
– ತಕ್ಬೀರ್-ಎ-ತಶ್ರೀಕ್ ಅನ್ನು ಕೇವಲ ಫರ್ಝ್ ನಮಾಝ್‍ಗಳ ನಂತರ ಹೇಳಲು ಆದೇಶಿಸಲಾಗಿದೆ. ಸುನ್ನತ್ ಹಾಗೂ ನಫೀಲ್ ನಮಾಝ್‍ಗಳ ಬಳಿಕ ಹೇಳಬಾರದು.
– ಈದುಲ್ ಅಝ್ಹಾದ ನಮಾಝಿನ ಬಳಿಕವೂ ಈ ತಕ್ಬೀರ್ ಅನ್ನು ಉಚ್ಚರಿಸಬೇಕು.

ಕುರ್ಬಾನಿ
ದುಲ್‍ಹಜ್ಜ್ ನ ಹತ್ತನೇ ದಿನದಿಂದ ಹಬ್ಬ ಆಚರಿಸಲಾಗುತ್ತದೆ. ಹಬ್ಬದ ದಿನವು ಮುಸ್ಲಿಮರ ಪಾಲಿಗೆ ಬಹಳ ಐತಿಹಾಸಿಕ ಹಾಗೂ ಮಹತ್ವಪೂರ್ಣ ದಿನವಾಗಿದೆ. ಈ ದಿನವು ಕೇವಲ ಸಂತೋಷ-ಉಲ್ಲಾಸದಿಂದ ಕಳೆಯುವ ದಿನವಲ್ಲ ಬದಲಾಗಿ ಒಂದು ಮಹತ್ವಪೂರ್ಣ ಸಂದೇಶ ನೀಡುವ ಹಾಗೂ ಪಾಠವನ್ನು ಕಲಿಸುವ ದಿನವಾಗಿದೆ. ಈದುಲ್ ಅಝ್ಝಾದ ದಿನದಂದು ಮುಸ್ಲಿ ಮರು ಪ್ರಾಣಿ ಬಲಿ (ಕುರ್ಬಾನಿ) ನೀಡುತ್ತಾರೆ. ಸಾಮರ್ಥ್ಯಕ್ಕನುಸಾರ ಪ್ರತಿಯೊಬ್ಬ ಮುಸ್ಲಿಮನು ಅಂದು ಕುರ್ಬಾನಿ ನೀಡುತ್ತಾನೆ.

“ಅಝ್ಹಾ” ಎಂದರೆ ಕುರ್ಬಾನಿ ಎಂದರ್ಥ. ಬಕ್ರೀದ್ ಹಬ್ಬದಂದು ಪ್ರಾಣಿ ಬಲಿ ನೀಡುವುದರಿಂದ ಈ ಹಬ್ಬವನ್ನು ಈದುಲ್ ಅಝ್ಹಾ ಎಂದು ಕರೆಯಲಾಗುತ್ತದೆ. ವಾಸ್ತವಿಕವಾಗಿ ಕುರ್ಬಾನಿಯು ಹ. ಇಬ್ರಾಹೀಮ್(ಅ) ಹಾಗೂ ಇಸ್ಮಾಈಲ್(ಅ)ರ ತ್ಯಾಗದ ನೆನಪಿನಲ್ಲಿ ನೀಡಲಾಗುತ್ತದೆ. ಅಲ್ಲಾಹನ ಆದೇಶದಂತೆ ತಂದೆಯು [ಇಬ್ರಾಹೀಮ್(ಅ)] ತನ್ನ ಓರ್ವನೇ ಪುತ್ರನನ್ನು ಬಲಿ ನೀಡಲು ನಿರ್ಧರಿಸುತ್ತಾರೆ. ಪುತ್ರನೂ ಧೃತಿಗೆಡದೆ ತನ್ನ ಪ್ರಾಣವನ್ನು ಅಲ್ಲಾಹನ ಮಾರ್ಗದಲ್ಲಿ ಅರ್ಪಿಸಲು ಸಿದ್ಧರಾಗುತ್ತಾರೆ. ಅಲ್ಲಾಹನು ತಂದೆ-ಮಗನ ಈ ತ್ಯಾಗದಿಂದ ಸಂಪ್ರೀತನಾಗಿ, ಪ್ರಾಯೋಗಿಕ ರೂಪವೆಂಬಂತೆ ಪುನರುತ್ಥಾನ ದಿನದವರೆಗೆ ಪ್ರತಿಯೊಬ್ಬ ಮುಸ್ಲಿಮನು ಕುರ್ಬಾನಿ ನೀಡುವಂತೆ ಆದೇಶಿಸಿದನು.

ಸಹಾಬಿಗಳು ಪ್ರವಾದಿವರ್ಯರನ್ನುದ್ದೇಶಿಸಿ(ಸ), “ಕುರ್ಬಾನಿ ಎಂದರೇನು?” ಎಂದು ಪ್ರಶ್ನಿಸಿದರು. ಆಗ ಪ್ರವಾದಿವರ್ಯರು(ಸ), “ಇದು ನಿಮ್ಮ ಮತ್ತು ಅಲ್ಲಾಹನ ಆಪ್ತ ಸಂಗಾತಿಯಾದ ಇಬ್ರಾಹೀಮ್(ಅ)ರ ಸ್ಮರಣೆಯಾಗಿದೆ” ಎಂದರು.

ಯಾರಿಗೆ ಅಲ್ಲಾಹನು ಸಾಮರ್ಥ್ಯ ನೀಡಿದ್ದಾನೋ ಅವರು ತಮ್ಮ ಪರವಾಗಿ ಕುರ್ಬಾನಿ ನೀಡುವುದು ಕಡ್ಡಾಯವಾಗಿದೆ. ಪ್ರವಾದಿವರ್ಯರು(ಸ) ಹೇಳಿದ್ದಾರೆ, “ಸಾಮರ್ಥ್ಯವಿದ್ದೂ ಕುರ್ಬಾನಿ ನೀಡದವರು ನಮ್ಮ ಈದ್‍ಗಾಹ್‍ಗೆ ಬರದಿರಲಿ” ಹಾಗೂ ಇನ್ನೊಂದು ಹದೀಸ್‍ನಲ್ಲಿ ಪ್ರವಾದಿವರ್ಯರು(ಸ) ಹೇಳಿದ್ದಾರೆ- “ಅಲ್ಲಾಹನ ಮುಂದೆ ಹಬ್ಬದ ದಿನ ಮಾಡುವ ಕುರ್ಬಾನಿಯ ಕಾರ್ಯಕ್ಕಿಂತ ಹೆಚ್ಚು ಪ್ರಿಯವಾದ ಕಾರ್ಯ ಬೇರಾವುದೂ ಇಲ್ಲ. ಕುರ್ಬಾನಿಯ ಪ್ರಾಣಿಯನ್ನು ಪುನರುತ್ಥಾನದ ದಿನದಂದು ಕೊಂಬುಗಳು, ಗೊರಸುಗಳು ಹಾಗೂ ರೋಮಗಳೊಂದಿಗೆ ತರಲಾಗುವುದು (ಅಂದರೆ ತೂಕ ಮಾಡಲಾಗುವುದು) ಹಾಗೂ ಅಲ್ಲಾಹನು ಕುರ್ಬಾನಿಯಾದ ಪ್ರಾಣಿಯ ರಕ್ತ ನೆಲದ ಮೇಲೆ ಬೀಳುವ ಮುನ್ನವೇ ಆ ಕುರ್ಬಾನಿಯನ್ನು ಸ್ವೀಕರಿಸುವನು. ಆದುದರಿಂದ ಸಂತುಷ್ಟರಾಗಿ ಕುರ್ಬಾನಿ ನೀಡಿರಿ.” (ತಿರ್ಮಿದಿ)

ಈದುಲ್ ಅಝ್ಹಾದ ರಾತ್ರಿ
ಮುಸ್ಲಿಮರ ಅತ್ಯಂತ ದೊಡ್ಡ ಹಬ್ಬ ಬಕ್ರೀದ್ (ಈದುಲ್ ಅಝ್ಹಾ). ಇದನ್ನು ದುಲ್‍ಹಜ್ಜ್ ನ ಹತ್ತನೇ ತಾರೀಕಿನಂದು ಆಚರಿಸಲಾಗುತ್ತದೆ. ಉಲ್ಲಾಸ-ಉತ್ಸಾಹದಿಂದ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ. ಹಬ್ಬದ ದಿನ ಸಂತಸದ ದಿನವಾದರೆ, ರಾತ್ರಿಯು ಪುರಸ್ಕಾರದ ದಿನವಾಗಿದೆ. ಅಲ್ಲಾಹನ ವಿಶೇಷ ಅನುಗ್ರಹಗಳು ಹಬ್ಬದ ರಾತ್ರಿಯಂದು ವರ್ಷಿಸುತ್ತವೆ. ಅದು ಈದುಲ್ ಫಿತ್ರ್‍ನ ರಾತ್ರಿಯಾಗಿರಲಿ-ಈದುಲ್ ಅಝ್ಹಾದ ರಾತ್ರಿಯಾಗಿರಲಿ. ಇವೆರಡು ರಾತ್ರಿಗಳೂ ಮಹತ್ವಪೂರ್ಣ ರಾತ್ರಿಗಳಾಗಿವೆ ಹಾಗೂ ಮುಸ್ಲಿಮರ ಪಾಲಿಗೆ ಸೌಭಾಗ್ಯಯುತವಾಗಿದೆ. ಈದುಲ್ ಅಝ್ಹಾದ ರಾತ್ರಿಯು ಪುಣ್ಯವನ್ನು ಗಳಿಸುವ ರಾತ್ರಿಯಾಗಿದೆ. ಆದುದರಿಂದ ನಾವು ಈ ರಾತ್ರಿಗೂ ಹೆಚ್ಚಿನ ಮಹತ್ವವನ್ನು ನೀಡಬೇಕು.

ಕೊನೆಯ ಮಾತು
ದುಲ್‍ಹಜ್ಜ್ ನ ಹತ್ತು ದಿನಗಳು ಬಹಳ ಮಹತ್ವಪೂರ್ಣವಾದುವು. ಇದರ ಮಹತ್ವ ಹಾಗೂ ವೈಶಿಷ್ಟ್ಯಗಳು ಕುರ್‍ಆನ್ ಹಾಗೂ ಪ್ರವಾದಿ ವಚನದ ಆಧಾರದಲ್ಲಿ ನಮ್ಮ ಮುಂದಿದೆ. ಇಸ್ಲಾಮಿನ ಅತ್ಯಂತ ಪ್ರಮುಖ ಭಾಗವಾದ ಹಜ್ಜ್ ಕರ್ಮವು ಇದೇ ದಿನಗಳಲ್ಲಿ ನಡೆಯುತ್ತದೆ. ಯಾವ ರೀತಿ ಈ ದಿನಗಳಲ್ಲಿ ಅಲ್ಲಾಹನು ಅತ್ಯಧಿಕ ಪುಣ್ಯಗಳನ್ನು ವರ್ಷಿಸುತ್ತಾನೋ, ಒಂದು ವೇಳೆ ನಾವು ಈ ದಿನಗಳಲ್ಲಿ ಕೆಡುಕುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ನಮಗೆ ಅಲ್ಲಾಹನು ನೀಡುವ ಶಿಕ್ಷೆಯೂ ವೃದ್ಧಿಸುತ್ತದೆ. ಆದುದರಿಂದ ನಾವು ದುಲ್‍ಹಜ್ಜ್ ನ ಪಾವನ ದಿನಗಳನ್ನು ಗೌರವಿಸಿ, ಅತ್ಯಧಿಕ ಪುಣ್ಯಗಳನ್ನು ಗಳಿಸುವಲ್ಲಿ ಶ್ರಮಿಸಬೇಕಾಗಿದೆ.
(ಕೃಪೆ: ದಾವತ್)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …