– ಶೈಖ್ ಮುಹಮ್ಮದ್ ಕಾರಕುನ್ನು
ನಮ್ಮ ಸಮಾಜದಲ್ಲಿ ವ್ಯಾಪಕವಾಗುತ್ತಿರುವ ಮಾದಕ ವ್ಯಸನಿಗಳ ಬಗ್ಗೆ ಎಲ್ಲರೂ ಪ್ರಜ್ಞಾವಂತರಾಗಬೇಕಾಗಿದೆ. ಶಿಕ್ಷಣ ಕೇಂದ್ರಗಳಲ್ಲಿ ಹುಡುಗರು ಹುಡುಗಿಯರು ಹಾಗೂ ಸಮಾಜದ ಯುವ ಜನಾಂಗವು ಈ ಮಾದಕ ಪಿಡುಗಿನ ದಾಸರಾಗುತ್ತಿದ್ದಾರೆ. ಆದರೂ ಈ ಬಗ್ಗೆ ಸಮಾಜವು ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ ಎಂಬುದು ಕಳವಳಕಾರಿ ಹಾಗೂ ಅಪಾಯಕಾರಿಯಾಗಿದೆ.
ಸಮಾಜದಲ್ಲಿರುವ ಎಲ್ಲಾ ಜನರೂ ಒಂದಾಗಿ ಈ ಪಿಡುಗಿನ ವಿರುದ್ದ ಹೋರಾಡಿದರೆ ಮಾತ್ರ ಯಶಸ್ಸು ಕಾಣಬಹುದು. ಮಾದಕ ವಸ್ತುಗಳು ವ್ಯಾಪಕವಾಗುವುದನ್ನು ತಡೆಯಲು ಕೆಲವೊಂದು ಸೂತ್ರಗಳು ಹೀಗಿವೆ:
1. ಪ್ರತೀ ಪ್ರದೇಶದಲ್ಲಿ ಹತ್ತು ಮನೆಗಳು ಸೇರಿ ಒಂದು ಕ್ಲಸ್ಟರ್ ಸ್ಥಾಪಿಸಬೇಕು. ಅದಕ್ಕೆ ಅರ್ಹರಾದ ಓರ್ವರಿಗೆ ನಾಯಕತ್ವ ವಹಿಸಿಕೊಡಬೇಕು. ಅಲ್ಲಿ ಯಾವುದೇ ಗಾಂಜಾ ಮತ್ತಿತರ ಮಾದಕ ವಸ್ತುಗಳು ತಲುಪುವುದಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು. ಅದನ್ನು ಬಳಸುವವರಿದ್ದರೆ ಅಂತಹವರನ್ನು ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು.
2. ಆಯಾ ಪ್ರದೇಶದ ಶಿಕ್ಷಣ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಅಧ್ಯಾಪಕರನ್ನು ಭೇಟಿ ಮಾಡಿ ಗಾಂಜಾ ಮತ್ತಿತರ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿ ಗಳಿಗೆ ತಿಳುವಳಿಕೆ ನೀಡುವಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು.
3. ಸರ್ವಧರ್ಮೀಯರ ಆರಾಧನಾಲಯಗಳನ್ನು ಕೇಂದ್ರೀಕರಿಸಿ ಅಲ್ಲಿನ ಭಕ್ತರಲ್ಲಿ ವಿಷಯದ ಗಂಭೀರತೆಯ ಬಗ್ಗೆ ಮನವರಿಕೆ ಮಾಡಬೇಕು. ತಂದೆ ತಾಯಂದಿರು ತಮ್ಮ ಮಕ್ಕಳ ವಿಚಾರದಲ್ಲಿ ಅಗತ್ಯವಾಗಿ ಬಹಳ ಎಚ್ಚರಿಕೆಯಿಂದ ನಿಗಾ ವಹಿಸಬೇಕು.
4. ಮಾದಕ ವಸ್ತುಗಳ ವ್ಯಾಪಾರ ಮತ್ತು ವಿತರಣೆಯನ್ನು ಯಾವುದಾದರೂ ನೆಲೆಯಲ್ಲಿ ಬೆಂಬಲಿಸುವ ಅಥವಾ ಸಹಕಾರ ನೀಡುವವರನ್ನು ಭೇಟಿ ಮಾಡಿ ನಾವು ನಮ್ಮ ತಲೆಮಾರುಗಳನ್ನು ನಮ್ಮ ಭವಿಷ್ಯವನ್ನು ನಾಶ ಪಡಿಸುತ್ತೇವೆ. ನಮ್ಮ ಮಕ್ಕಳು ಈ ದುರಂತದ ಬಲಿಪಶುಗಳಾಗಬೇಕಾಗಿ ಬರಬಹುದು ಎಂಬ ಪ್ರಜ್ಞೆ ಅವರಲ್ಲಿ ಮೂಡಿಸಬೇಕು. ಅವರು ಅದಕ್ಕೆ ಸಿದ್ಧರಿಲ್ಲ ಎಂದಾದರೆ ಅವರನ್ನು ಕಾನೂನಿನ ಸುಪರ್ದಿಗೆ ಒಳಪಡಿಸಬೇಕು.
5 ವಿವಿಧ ವಿಭಾಗಗಳಲ್ಲಿ ಗುರುತಿಸಲ್ಪಡುವವರನ್ನು ಭಾಗವಹಿಸುವಂತೆ ಮಾಡಿ ಪೋಷಕರಿಗೆ ಈ ಪಿಡುಗಿನಿಂದಾಗುವ ಹಾನಿಯ ಬಗ್ಗೆ ಪ್ರಜ್ಞಾವಂತರಾಗಿಸುವ ತರಗತಿಗಳನ್ನು ನೀಡಬೇಕು. ಆ ತರಗತಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಧಾರ್ಮಿಕ ಗುರುಗಳನ್ನು ಪಾಲ್ಗೊಳ್ಳುವಂತೆ ಮಾಡಿ ಅವರಿಂದಲೂ ಉಪದೇಶ ಮಾಡಿಸಬೇಕು.
6. ಆರೋಪಿಗಳೊಂದಿಗೆ ಯಾವುದೇ ರೀತಿಯಲ್ಲಿ ಸಹಕರಿಸುವುದಿಲ್ಲವೆಂದು ಧಾರ್ಮಿಕ ಮುಖ್ಯಸ್ಥರು, ಸಂಘಟನಾ ನಾಯಕರು, ರಾಜಕೀಯ ನೇತಾರರು, ಆಡಳಿತಗಾರರು, ಅಧಿಕಾರಿಗಳು ತೀರ್ಮಾನ ಕೈಗೊಳ್ಳಬೇಕು.
7. ಮಾದಕ ವ್ಯಸನಿಗಳಿಗೆ ನಮ್ಮ ಮಕ್ಕಳನ್ನು ವಿವಾಹ ಮಾಡಿ ಕೊಡುವುದಿಲ್ಲವೆಂಬ ನಿರ್ಧಾರವನ್ನು ಪೋಷಕರು ತೆಗೆದುಕೊಳ್ಳಬೇಕು. ಅಂತಹವರ ವಿವಾಹದಲ್ಲಿ ಭಾಗಿಯಾಗುವುದಿಲ್ಲವೆಂಬ ನಿರ್ಧಾರ ತಾಳಬೇಕು.
8. ಮಕ್ಕಳು ಎಲ್ಲೆಲ್ಲಿಯೋ ಅಲೆದಾಡುತ್ತಿಲ್ಲವೆಂದೂ ಮನೆಗೆ ಕ್ಲಪ್ತ ಸಮಯಕ್ಕೆ ತಲುಪುತ್ತಿದ್ದಾರೆಂಬ ಕುರಿತು ಪೋಷಕರು ನಿಗಾ ವಹಿಸಬೇಕು.
9. ಮಕ್ಕಳಲ್ಲಿ ಅಸಾಮಾನ್ಯವಾದ ಅಥವಾ ಅನುಮಾನಾಸ್ಪದ ನಡವಳಿಕೆ ಕಂಡು ಬಂದರೆ ಕಾಲ ಹರಣಮಾಡದೆ ತಕ್ಷಣ ಅಗತ್ಯವಾದ ಕ್ರಮ ಕೈಗೊಳ್ಳಬೇಕು.
10. ಅಗತ್ಯವೆಂದಾದಲ್ಲಿ ಕಾನೂನು ತಜ್ಞರ ಸಹಾಯವನ್ನು ಪಡೆಯಿರಿ. ಕಾನೂನು ಪಾಲಕರು ಏನಾದರೂ ಆರೋಪಿಗಳಿಗೆ ನೆರವಾಗುತ್ತಿದ್ದಾರೆಂದಾದರೆ ಅವರ ವಿರುದ್ಧ ಸಾರ್ವಜನಿಕರು ಒಟ್ಟಾಗಿ ಪ್ರತಿಭಟಿಸಿ ಹೋರಾಟ ಸಂಘಟಿಸಬೇಕು.
IslamKannada News Portal
