Home / ಲೇಖನಗಳು / ಶವ ಭಕ್ಷಕರು

ಶವ ಭಕ್ಷಕರು

ಸಂಗ್ರಹ: ಎನ್.ಎಂ. ಪಡೀಲ್

ಅಬೂ ಹುರೈರ(ರ)ರಿಂದ ವರದಿಯಾಗಿದೆ. “ಪರದೂಷಣೆ ಎಂದರೆ ಏನೆಂದು ನಿಮಗೆ ತಿಳಿದಿದೆಯೇ?” ಎಂದು ಪ್ರವಾದಿ(ಸ) ಕೇಳಿದರು. ಅಲ್ಲಾಹ್ ಮತ್ತು ಅವನ ಸಂದೇಶವಾಹಕರಿಗೆ ಮಾತ್ರ ಚೆನ್ನಾಗಿ ತಿಳಿದಿರುವುದೆಂದು ಅವರು ಉತ್ತರಿಸಿದರು. “ನಿನ್ನ ಸಹೋದರನ ಬಗ್ಗೆ ಅವನಿಗಿಷ್ಟವಿಲ್ಲದ್ದನ್ನು ಹೇಳುವುದಾಗಿದೆ” ಎಂದು ತಿಳಿಸಿದರು. ಆಗ ಓರ್ವ ವ್ಯಕ್ತಿ ಪ್ರವಾದಿಯೊಂದಿಗೆ, “ನಾನು ಹೇಳುವ ವಿಷಯ ಸಹೋದರನಲ್ಲಿದ್ದರೆ ಕೂಡಾ ಅದು ಪರದೂಷಣೆಯಾಗುತ್ತದೆಯಾ?” ಎಂದು ಪ್ರಶ್ನಿಸಿದರು. ಆ ಸ್ವಭಾವ ಅವನಲ್ಲಿದ್ದರೆ ಅದು ಪರದೂಷಣೆಗೆ ಸೇರುತ್ತದೆ. ಇಲ್ಲದಿದ್ದರೆ ಸುಳ್ಳು ಹೇಳಿ ಸಹೋದರನ ಬಗ್ಗೆ ಅಪವಾದ ಹಬ್ಬಿಸಿದಂತಾಗುವುದು ಎಂದು ಪ್ರವಾದಿ(ಸ) ಉತ್ತರಿಸಿದರು. (ಮುಸ್ಲಿಮ್)

ಪರದೂಷಣೆ ಎಂಬುದು ಸಾಂಕ್ರಾಮಿಕ ರೋಗದಂತೆ. ಹೇಳುವವನನ್ನು ನಾಶಗೊಳಿಸುತ್ತದೆ. ಕೇಳುವವನ ಮನಸ್ಸನ್ನು ಕೆಡಿಸುತ್ತದೆ. ಹೇಳಲ್ಪಡುವ ವ್ಯಕ್ತಿಯ ತೇಜೋವಧೆಗೈಯ್ಯುತ್ತದೆ. ಸಂಬಂಧಗಳನ್ನು ಮುರಿಯುತ್ತದೆ. ಮಾನವರ ಬಹಳ ನೀಚ ಸ್ವಭಾವ ಇದಾಗಿದೆ.

ಈರ್ವರು ಸಂಧಿಸಿದಾಗ ಮೂರನೇ ವ್ಯಕ್ತಿಯ ಬಗ್ಗೆ ಅಪವಾದ ಹೇಳುತ್ತಾರೆ. ಅದು ಹೇಳುವ ವ್ಯಕ್ತಿಗೂ ಯಾವುದೇ ಪ್ರಯೋಜನವಿರುವುದಿಲ್ಲ. ಕೇಳುವವನಿಗೂ ಯಾವ ಲಾಭವನ್ನೂ ನೀಡುವುದಿಲ್ಲ. ಇಬ್ಬರೂ ಮೂರನೇ ವ್ಯಕ್ತಿಯ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಾರೆ. ಇದರಿಂದ ಪರದೂಷಣೆ ಎಂಬುದು ಯಾರಿಗೂ ಲಾಭ ಉಂಟು ಮಾಡುವುದಲ್ಲ ಬದಲಿಗೆ ಅವರಿಗೆ ಅದು ಪಾಪ ಕಾರ್ಯವಾಗುತ್ತದೆ.

ಹೆಚ್ಚಿನ ಜನರಿಗೆ ಇತರರ ತಪ್ಪುಗಳನ್ನು ಹುಡುಕುವುದೇ ಕೆಲಸ. ಬೇರೆಯವರ ಕುಂದು-ಕೊರತೆಗಳನ್ನು ಕಂಡು ಹಿಡಿದು ಅದನ್ನು ಪ್ರಚಾರ ಮಾಡುವುದೆಂದರೆ ಎಲ್ಲಿಲ್ಲದ ಸಂತೋಷ. ಕೆಲವರು ಉಸಿರಾಡುವುದೇ ಪರಿಸರದಲ್ಲಿರುವ ದುರ್ಗಂಧವನ್ನು ಆಸ್ವಾದಿಸಲು ಎಂದು ಹೇಳಿದ ಓರ್ವ ಮಹನೀಯರ ಮಾತು ನೈಜವಾದುದು. ಇತರರ ಬಗ್ಗೆ ಚಾಡಿ ಹೇಳುತ್ತಾ, ಅವರ ಕೆಲಸಗಳಲ್ಲಿ ತಪ್ಪುಗಳನ್ನು ಹುಡುಕುತ್ತಾ, ಅದನ್ನು ಅತಿ ರಂಜಿತವಾಗಿ ವರ್ಣಿಸುವುದೇ ಕೆಲವರ ಹವ್ಯಾಸ.

ನಮ್ಮ ಮನೆಗೆ ಹೊಲಸನ್ನು ಹಾಕುವವರನ್ನು ಯಾರೂ ಪ್ರೀತಿಸಲಾರರು. ಅದೇ ರೀತಿ ಮನಸ್ಸಿಗೆ ಕೆಟ್ಟ ವಿಚಾರಗಳನ್ನು ತುಂಬಿಸುವವರನ್ನು ಯಾರು ತಾನೇ ಇಷ್ಟಪಡುವರು? ಮನೆಯನ್ನು ಗಲೀಜು ಮಾಡುವುದಕ್ಕಿಂತ ಅನೇಕ ಪಟ್ಟು ಅಧಿಕ ಅಪಾಯಕಾರಿ ಮನ ಕಲುಷಿತಗೊಳ್ಳುವುದು. ಪರದೂಷಣೆಯು ಮಾಲಿನ್ಯವಾಗಿದೆ. ಹೊಲಸು ಮನೆಗೆಸೆಯುವ ಹಾಗೆ ಪರದೂಷಣೆ ಮಾಡುವವ ಕೇಳುವವನ ಮನಸ್ಸನ್ನು ಕೆಡಿಸುತ್ತಾನೆ.

ಪರದೂಷಣೆಯಿಂದ ಅನೇಕ ವಿಪತ್ತುಗಳು ಸಂಭವಿಸುತ್ತವೆ. ಅಸೂಯೆ, ಮತ್ಸರ, ಹಗೆತನ, ದ್ವೇಷ ಸಂಬಂಧದಲ್ಲಿ ಒಡಕು, ಕಲಹ, ಜಗಳ ಉಂಟಾಗುತ್ತದೆ. ಕೆಲವೊಮ್ಮೆ ಕೊಲೆಗೂ ಕಾರಣವಾಗುತ್ತದೆ. ಸಂಬಂಧಿಕರ ಮಾತು ಕೇಳಿ ತನ್ನ ತಾಯಿಯನ್ನು ತಂದೆಯೇ ಕೊಂದದ್ದೆಂದು ಭಾವಿಸಿ ಅವರನ್ನು ದೂರುತ್ತಾ ಶಪಿಸುತ್ತಾ ಹಿರಿ ಪ್ರಾಯದ ತಂದೆಯನ್ನು ನಿರ್ಲಕ್ಷಿಸಿದ ಓರ್ವ ಮಗನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಕಸ್ಮಾತ್ ಒಂದು ದಿನ ತಂದೆಯ ಡೈರಿಯನ್ನು ಓದಿದಾಗ ನಿಜಸ್ಥಿತಿ ಅರಿವಾದರೂ ತಂದೆಗೆ ಮಂಚದಿಂದ ಏಳಲಾರದಂತಹ ಮಾತಾಡಲಾರದಂತಹ ಸಮಯವಾಗಿತ್ತು. ತಾಯಿಯು ಕ್ಯಾನ್ಸರಿನಿಂದ ನಿಧನ ಹೊಂದಿದ್ದೆಂದೂ ಅವರನ್ನು ಅತ್ಯಂತ ಪ್ರೀತಿಯಿಂದ ಆರೈಕೆ ಮಾಡುತ್ತಾ ಅವರು ಜೀವಿಸಿದ್ದರೆಂಬ ವಿಷಯ ತಿಳಿದು ಆ ಮಗ ತುಂಬ ವ್ಯಥೆ ಪಟ್ಟನು.

ಒಮ್ಮೆ ಪ್ರವಾದಿ(ಸ)ರೊಂದಿಗೆ ಪ್ರಿಯ ಪತ್ನಿ ಆಯಿಶಾ(ರ) ಇನ್ನೋರ್ವ ಪತ್ನಿ ಸಫಿಯ್ಯ(ರ)ರ ಬಗ್ಗೆ, “ಆ ಕುಳ್ಳಿ ಹೆಣ್ಣಲ್ಲವೇ?” ಎಂದು ಹೇಳಿದರು. ಸಫಿಯ(ರ)ರ ಅನುಪಸ್ಥಿತಿಯಲ್ಲಿ ಆಯಿಶಾ ಹೇಳಿದ ಪರದೂಷಣೆಯಿಂದ ಪ್ರವಾದಿ(ಸ)ಗೆ ಅತ್ಯಧಿಕ ಬೇಸರವಾಯಿತು. ಅವರು ಹೇಳಿದರು, “ಆಯಿಶಾ, ಇದು ಭಯಂಕರ ಮಾತಾಗಿದೆ. ಸಮುದ್ರಕ್ಕೆ ಇದನ್ನು ಬೆರೆಸಿದರೆ ಅದರ ಇಡೀ ನೀರು ವಿಷಮಯವಾಗಬಹುದು.”

ಪವಿತ್ರ ಕುರ್‌ಆನಿನಲ್ಲಿ ಅನೇಕರ ಬಗ್ಗೆ ವಿಮರ್ಶಿಸುತ್ತಾ, ಟೀಕಿಸುತ್ತಾ ಆಕ್ಷೇಪಿಸಿದ ಆಯತ್‌ಗಳಿವೆ. ಆದರೆ ತೀವ್ರವಾಗಿ ಕಟು ಶಬ್ದಗಳಿಂದ ವಿಮರ್ಶಿಸಿರುವುದು ಪರದೂಷಣೆ ಮಾಡುವವರ ಕುರಿತಾಗಿದೆ. ಜೀವಿಸಿರುವ ಸಹೋದರನ ಹಸಿ ಮಾಂಸ ತಿನ್ನುವ ಶವ ಭಕ್ಷಕ ಎಂದು ಅವರನ್ನು ಅಭಿಸಂಬೋಧಿಸಲಾಗಿದೆ. “ನಿಮ್ಮಲ್ಲಿ ಯಾರೂ ಯಾರ ಬಗ್ಗೆಯೂ ಪರದೂಷಣೆ ಮಾಡಬಾರದು. ನಿಮ್ಮಲ್ಲಿ ಯಾರಾದರೂ ತನ್ನ ಮೃತ ಸಹೋದರನ ಮಾಂಸ ತಿನ್ನುವುದನ್ನು ಇಷ್ಟಪಡುವನೇ? ನೀವು ಸ್ವತಃ ಇದನ್ನು ಅಸಹ್ಯ ಪಡುತ್ತೀರಿ.” (ಕುರ್‌ಆನ್ 49: 12)

ಪರದೂಷಣೆ ಮಾಡುವವರ ಸತ್ಕರ್ಮಗಳೆಲ್ಲ ವ್ಯರ್ಥವಾಗುವುದು. ಅವರ ಪ್ರಾರ್ಥನೆ, ಆರಾಧನೆಗಳು, ದಾನ-ಧರ್ಮಗಳೆಲ್ಲ ಪರಲೋಕದಲ್ಲಿ ನಿಷ್ಫಲವಾಗುವುದು. ಅದು ಯಾರ ಬಗ್ಗೆ ಪರದೂಷಣೆ ಮಾಡಿದ್ದಾರೋ ಅವರ ಖಾತೆಗೆ ಜಮೆಯಾಗುವುದು. ಒಳಿತುಗಳೆಲ್ಲ ಮುಗಿದ ಬಳಿಕ ಆ ವ್ಯಕ್ತಿಯ ಬಳಿಯಿರುವ ಕೆಡುಕುಗಳನ್ನು ಪರದೂಷಣೆ ಮಾಡಿದ ವ್ಯಕ್ತಿಗೆ ನೀಡಲಾಗುವುದು. ಆಗ ಆ ಪಾಪಗಳನ್ನು ಹೊತ್ತು ಅವನು ನರಕಕ್ಕೆ ಅರ್ಹನಾಗುತ್ತಾನೆ.

ಜನರ ಕುಂದು ಕೊರತೆಗಳನ್ನು ಅನ್ವೇಷಿಸಿ ಪ್ರಚಾರ ಪಡಿಸಿದರೆ ಅದು ಇತರರನ್ನು ಆ ನೀಚ ಕೆಲಸಗಳಿಗೆ ಪ್ರೇರೇಪಿಸುತ್ತದೆ. ಅದು ಸಮಾಜವನ್ನು ಅಧೋಗತಿಗಿಳಿಸುತ್ತದೆ. ಆದ್ದರಿಂದ ನಮ್ಮ ಸಮಾಜ, ಊರು ಉತ್ತಮವಾಗಬೇಕೆಂಬ ಆಶೆಯಿದ್ದರೆ ಇತರ ವ್ಯಕ್ತಿಗಳ ಬಗ್ಗೆ, ಸಂಘಟನೆಗಳ ಬಗ್ಗೆ ಅವರ ಒಳಿತಿನ ಕಾರ್ಯಗಳನ್ನು, ಅವರ ಉತ್ತಮ ಸ್ವಭಾವಗಳನ್ನು ಪ್ರಚಾರಪಡಿಸಬೇಕು. ಪರದೂಷಣೆಯು ಇಹಪರ ಎರಡೂ ಲೋಕಕ್ಕೂ ನಷ್ಟವಲ್ಲದೆ ಲಾಭವನ್ನು ನೀಡುವುದಿಲ್ಲ. ಅಲ್ಲಾಹನು ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ಜೀವಿಸಲು ಅನುಗ್ರಹಿಸಲಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …