ಡಾ| ಬಿ. ಎನ್. ಪಾಂಡೆ
ಮುಹಮ್ಮದ್ರ ಮಕ್ಕಾ ಜೀವನ ಮತ್ತು ಅವರೊಂದಿಗೆ ನಡೆಸಿದ ಪೈಶಾಚಿಕ ವರ್ತನೆಗಳು ಪ್ರಚುರವಾಗಿವೆ. ಪ್ರವಾದಿಯ ಮದೀನಾ ಜೀವನವು ಗೃಹಸ್ಥ ಮತ್ತು ಸನ್ಯಾಸ ಜೀವನದ ಅದ್ಭುತ ಸಂಕಲನವಾಗಿತ್ತು. ಸಾದ್ಯಂತ ಅವರ ಜೀವನವು ಶ್ರಮದಾಯಕ ಮತ್ತು ಸರಳವಾಗಿತ್ತು. ಸರಕಾರಿ ತೆರಿಗೆ, ಝಕಾತ್, ಅಥವಾ ಸದಕ(ದಾನ)ದ ಬಾಬ್ತಿನಲ್ಲಿ ತನ್ನ ಅಥವಾ ಕುಟುಂಬದ ಅಗತ್ಯಗಳಿಗಾಗಿ ಪಡೆಯುವುದು ಪಾಪವೆಂದು ಅವರು ಪರಿಗಣಿಸಿದ್ದರು. ಕೆಲವು ಆಪ್ತ ಮಿತ್ರರಿಂದ ಏನಾದರೂ ಉಪಾಹಾರ ಅಥವಾ ಕೊಡುಗೆಗಳನ್ನು ಸ್ವೀಕರಿಸಿದ್ದರು. ಅದನ್ನು ಕೂಡಾ ಅಗತ್ಯಕ್ಕಿಂತ ಹೆಚ್ಚು ಒಮ್ಮೆಯೂ ಸ್ವೀಕರಿಸಲಿಲ್ಲ. ಅವರ ಒಡೆತನದಲ್ಲಿ ಕೇವಲ ಕೆಲವು ಖರ್ಜೂರದ ಮರಗಳು ಮತ್ತು ಕೆಲವಾರು ಆಡು ಮತ್ತು ಒಂಟೆಗಳಿದ್ದುವು. ಅವುಗಳಿಂದ ಖರ್ಜೂರ ಹಾಗೂ ಹಾಲು ಇತ್ಯಾದಿ ದೊರೆಯುತ್ತಿದ್ದುವು. ರಾತ್ರಿಯಲ್ಲಿ ಮನೆಯಲ್ಲಿ ಮಿಗತೆಯಿರುವ ವಸ್ತುಗಳನ್ನು ಬಡವರಿಗೆ ವಿತರಿಸುತ್ತಿದ್ದರು. ನಾಳೆಗಾಗಿ ಕಾದಿರಿಸುವುದಕ್ಕೆ ಅಲ್ಲಾಹನಲ್ಲಿರುವ ವಿಶ್ವಾಸದ ಕೊರತೆಯೇ ಕಾರಣವೆಂದು ಅವರು ವ್ಯಾಖ್ಯಾನಿಸಿದ್ದರು.
ಪರಿಣಾಮವೇನಾಯಿತು? ಖರ್ಜೂರದ ಮರಗಳಲ್ಲಿ ಬೆಳೆಯಾಗದಿದ್ದರೆ ಅಥವಾ ಪ್ರಾಣಿಗಳಿಂದ ಹಾಲು ದೊರೆಯದಿದ್ದರೆ ಹಲವೊಮ್ಮೆ ಅವರು ಮತ್ತು ಮನೆಯವರು ಮೂರ್ನಾಲ್ಕು ದಿನ ಹಸಿದಿರಬೇಕಾಗುತ್ತಿತ್ತು. ಕೇವಲ ಖರ್ಜೂರ ಮತ್ತು ತಣ್ಣೀರು ಕುಡಿದು ಅನೇಕ ತಿಂಗಳುಗಳನ್ನು ಕಳೆದಿದ್ದರು. ಅವರ ಮರಣಾನಂತರ ಆಯಿಶಾ(ರ) ಒಮ್ಮೆ ಹೇಳಿದ್ದರು- ‘ಒಲೆಯಲ್ಲಿ ಬೆಂಕಿ ಹಚ್ಚದೆ ಹಲವು ತಿಂಗಳುಗಳೇ ಕಳೆದಿವೆ.’ ಆಗ ಯಾರೋ ವಿಚಾರಿಸಿದಾಗ: “ಆಗ ನೀವು ಹೇಗೆ ಜೀವಿಸುತ್ತಿದ್ದಿರಿ?” ಆ ಎರಡು ಕಪ್ಪು ವಸ್ತುಗಳ (ಖರ್ಜೂರ ಮತ್ತು ತಣ್ಣೀರು) ನೆರವಿನಿಂದ” ಎಂಬುದಾಗಿತ್ತು ಆಯಿಶಾರ ಉತ್ತರ. ಅವರು ಮುಂದುವರಿಸಿದರು “ನಮಗೆ ವಿವಿಧ ವಸ್ತುಗಳನ್ನು ಕಳುಹಿಸಿದ ಮದೀನದವರನ್ನು ಅಲ್ಲಾಹನು ಅನುಗ್ರಹಿಸಲಿ. ಹಾಲು ಕೊಡುವ ಪ್ರಾಣಿಗಳ ಮಾಲಕರು ನಮಗೆ ಹಾಲು ಕಳುಹಿಸುತ್ತಿದ್ದರು.” ಪ್ರವಾದಿಯವರು ಒಮ್ಮೆಯೂ ದಿನದಲ್ಲಿ ಎರಡು ಹೊತ್ತು ಆಹಾರ ಸೇವಿಸಿರಲಿಲ್ಲ. ನಮ್ಮ ಮನೆಯಲ್ಲಿ ಜಾಲರಿಯಿರಲಿಲ್ಲ. ಧಾನ್ಯಗಳನ್ನು ಹುಡಿ ಮಾಡಿ ಅದರ ಹೊಟ್ಟನ್ನು ಬಾಯಿಂದ ಊದಿ ಹಾರಿಸುತ್ತಿದ್ದೆವು. ರಾತ್ರೆಯಲ್ಲಿ ದೀಪ ಹಚ್ಚಲು ಮನೆಯಲ್ಲಿ ಎಣ್ಣೆಯಿರುತ್ತಿರಲಿಲ್ಲ. ಹಸಿವೆಯಿಂದಾಗಿ ಮುಹಮ್ಮದ್ರು ಹಲವೊಮ್ಮೆ ಹೊಟ್ಟೆಗೆ ಕಲ್ಲು ಬಿಗಿದು ನಡೆದಾಡುತ್ತಿದ್ದರೆಂದು, ಹದೀಸ್ಗಳಲ್ಲಿ (ಮುಹಮ್ಮದ್ರ ವಚನಗಳನ್ನು ಸಂಗ್ರಹಿಸಿರುವ, ಕುರ್ಆನ್ ನಲ್ಲಿ ಹೇಳಿಲ್ಲದ ವಿಷಯಗಳ ಬಗ್ಗೆ ಅಧಿಕೃತವೆಂದು ಭಾವಿಸಲಾಗುವ ಗ್ರಂಥ) ಬರೆಯಲಾಗಿದೆ. ಹೊರಗಿನವರಿಗೆ ಮನೆಯ ವಿಚಾರ ತಿಳಿಯಬಾರದೆಂದು ಬಿಗಿ ನಿಯಂತ್ರಣವಿತ್ತು, ಹಸಿವೆಯಿಂದ ಬಳಲಿ ಓರ್ವ ಪತ್ನಿಯು ಸಂಕಟವನ್ನು ತೋಡಿ ಕೊಂಡರು. ಪ್ರವಾದಿಯವರು ಶಾಂತವಾಗಿ ಉತ್ತರಿಸಿದರು. ಈ ಕಷ್ಟವನ್ನು ಸಹಿಸಲಾಗದಿದ್ದರೆ ನಿಮಗೆ ನನ್ನಿಂದ ವಿವಾಹ ವಿಚ್ಛೇದನ ಪಡೆಯುವ ಹಕ್ಕಿದೆ. ಎಲ್ಲಿ ಬೇಕಾದರೂ ಹೋಗಿ ವಾಸಿಸಬಹುದು. ಆದರೆ ಯಾವೊಬ್ಬ ಪತ್ನಿಯೂ ಕೊನೆಯ ತನಕ ವಿಚ್ಛೇದನ ಬಯಸಲಿಲ್ಲ. ಯಾರೂ ಅವರನ್ನು ತೊರೆದು ಹೋಗಲಿಲ್ಲ.
ಮುಹಮ್ಮದ್ರು ಹಲವೊಮ್ಮೆ ತಮ್ಮ ಮನೆಯನ್ನು ಒರೆಸಿ ಸ್ವಚ್ಛಗೊಳಿಸುತ್ತಿದ್ದರು. ಆಡುಗಳ ಹಾಲು ಕರೆಯುತ್ತಿದ್ದರು. ತಮ್ಮ ಬಟ್ಟೆಗಳಿಗೆ ತೇಪೆಯಿರಿಸಿ ಹೊಲಿಯುತ್ತಿದ್ದರು. ತಮ್ಮ ಕೈಗಳಿಂದಲೇ ಚಪ್ಪಲಿ ರಿಪೇರಿ ಮಾಡುತ್ತಿದ್ದರು. ಸೋಗೆಯ ಚಾಪೆ ಅಥವಾ ಬರಿ ನೆಲದಲ್ಲಿ ಮಲಗುತ್ತಿದ್ದರು. ಕೊನೆಯ ರೋಗ ಕಾಲದಲ್ಲಿ ಅವರ ಬೆನ್ನಿನಲ್ಲಿ ಚಾಪೆಯ ಅಚ್ಚು ನೋಡಿದ ಯಾರೋ ಒಬ್ಬರು ಹಾಸಿಗೆ ಹಾಸುವ ಒಪ್ಪಿಗೆ ಕೇಳಿದರು. ನಾನು ಸುಖ ಪಡಲಿಕ್ಕಾಗಿ ಹುಟ್ಟಿದವನಲ್ಲವೆಂದು ಮುಹಮ್ಮದ್ ಅದನ್ನು ತಿರಸ್ಕರಿಸಿದರು.
ಮರಣದ ವೇಳೆಯಲ್ಲಿ ಒಂದೂವರೆ ಮನ್ನ್ ಜೋಳಕ್ಕಾಗಿ ಅವರ ಯುದ್ಧ ಕವಚವು ಓರ್ವ ಯಹೂದಿಯ ಬಳಿ ಅಡವಿತ್ತು. ವಿಶೇಷವೇನೆಂದರೆ, ಹಾಗಿದ್ದರೂ ತಾವು ಮತ್ತು ಕೆಲವೊಮ್ಮೆ ಮನೆಯವರೂ ಹಸಿವೆಯಿಂದಿದ್ದು ಮನೆಗೆ ಅತಿಥಿಗಳನ್ನು ಆಹ್ವಾನಿಸಿ ಸತ್ಕರಿಸುತ್ತಿದ್ದರು. ಇರಾನ್, ರೋಮ್, ಇಥಿಯೋಪಿಯಾ ಮುಂತಾದ ಸ್ಥಳಗಳಿಂದ ರಾಯಭಾರಿಗಳು ಮುಹಮ್ಮದ್ರ ದರ್ಬಾರಿಗೆ ಬಂದು ಹೋಗುತ್ತಿದ್ದ ಕಾಲದಲ್ಲಿಯೂ, ಅಂದಿನ ಅರಬರ ಈ ಮಹಾ ಚಕ್ರವರ್ತಿ ಯಾವುದೇ ರೀತಿಯ ಸಿಂಹಾಸನ, ಗದ್ದುಗೆ ಅಥವಾ ಉನ್ನತ ಪೀಠವನ್ನು ಬಳಸಿರಲಿಲ್ಲ. ಜನಸಾಮಾನ್ಯರೊಂದಿಗೆ ನೆಲದಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ಯಾವುದೇ ರೀತಿಯ ಭಿನ್ನತೆ ಕಾಣಿಸಬಾರದು. ಅವರು ಬರುವಾಗ ಯಾರಾದರೂ ಗೌರವ ಸೂಚಕವಾಗಿ ಎದ್ದು ನಿಲ್ಲುವುದು ಅವರಿಗೆ ಅಸಂತೃಪ್ತಿ ಮತ್ತು ದುಃಖದ ವಿಷಯವಾಗಿತ್ತು.
ರೇಷ್ಮೆ ಬಟ್ಟೆಗಳನ್ನು ಧರಿಸುತ್ತಿರಲಿಲ್ಲ. ಅವರು ಹೇಳುತ್ತಿದ್ದರು: “ಧರ್ಮ ವಿಶ್ವಾಸಿ ಪುರುಷರು ಎಂದಿಗೂ ರೇಷ್ಮೆ ವಸ್ತ್ರ ಧರಿಸಬಾರದು.” ಕೆಲವೊಮ್ಮೆ ಬಣ್ಣದ ವಸ್ತ್ರ ಧರಿಸುತ್ತಿದ್ದರು. ಆದರೂ ದೊರಗು ಬಿಳಿ ಬಟ್ಟೆಯು ಅವರಿಗೆ ಹೆಚ್ಚು ಇಷ್ಟವಾಗಿತ್ತು. ಅವರು ಹೆಚ್ಚಾಗಿ ಹೊಲಿಯದ ವಸ್ತ್ರಗಳನ್ನು ಧರಿಸುತ್ತಿದ್ದರು. ಸಾಮಾನ್ಯವಾಗಿ ಒಂದು ಬಿಳಿ ಶಾಲು ಹೊದೆದು ಕೊಳ್ಳುತ್ತಿದ್ದರು. ಅದರ ಎರಡೂ ತುದಿಗಳನ್ನು ಕೊರಳಿನ ಹಿಂದೆ ಭುಜದ ಮೇಲೆ ಕಟ್ಟಿಕೊಳ್ಳುತ್ತಿದ್ದರು. ಹೆಚ್ಚಾಗಿ ನಗ್ನಶಿರ ಮತ್ತು ನಗ್ನಪಾದರಾಗಿರುತ್ತಿದ್ದರು. ಕೆಲವೊಮ್ಮೆ ಅರ್ಧ ಕೈಯ ಸಡಿಲ ಜುಬ್ಬ ಧರಿಸುತ್ತಿದ್ದರು. ಲುಂಗಿ ಮತ್ತು ಪೇಟಾ ಧರಿಸುತ್ತಿದ್ದರು. ಜೀವನದಲ್ಲಿ ಒಮ್ಮೆಯೂ ಪೈಜಾಮ ಧರಿಸಿರಲಿಲ್ಲ. ಒಂದು ಚೆಂಬಿಗಿಂತ ಹೆಚ್ಚು ಪಾತ್ರೆಗಳನ್ನು ಜತೆಯಲ್ಲಿರಿಸುತ್ತಿರಲಿಲ್ಲ. ಅದು ಕೂಡಾ ಮಣ್ಣು ಅಥವಾ ಮರದ್ದಾಗಿರುತ್ತಿತ್ತು. ನೀರುಳ್ಳಿ ಮತ್ತು ಬೆಳ್ಳುಳಿಯೂ ಅವರಿಗೆ ಇಷ್ಟವಿರಲಿಲ್ಲ. ಅವು ಸೇರಿಸಿದ ಆಹಾರ ಸೇವಿಸುತ್ತಿರಲಿಲ್ಲ, ಹಾಗೆಯೇ ಅವುಗಳ ವಾಸನೆ ಬರುವವರ ಹತ್ತಿರ ಕುಳಿತು ಕೊಳ್ಳಲೂ ಇಷ್ಟಪಡುತ್ತಿರಲಿಲ್ಲ. ನೀರುಳ್ಳಿ ಅಥವಾ ಬೆಳ್ಳುಳ್ಳಿ ತಿಂದು ಮಸೀದಿಗೆ ಹೋಗಬಾರದೆಂಬ ಆದೇಶವೂ ಇತ್ತು.
ಕಿರಿಯರು ಮತ್ತು ಹಿರಿಯರೊಡನೆ ಅವರ ವರ್ತನೆಯು ಏಕಪ್ರಕಾರವಾಗಿತ್ತು. ಮಕ್ಕಳಲ್ಲಿ ಅವರಿಗೆ ವಿಶೇಷ ಪ್ರೀತಿಯಿತ್ತು. ದಾರಿಯಲ್ಲಿ ಹೋಗುವಾಗ ಮಕ್ಕಳ ಜತೆಯಲ್ಲಿ ಆಟವಾಡುತ್ತಿದ್ದರು. ರೋಗಿಗಳನ್ನು ಸಂದರ್ಶಿಸುತ್ತಿದ್ದರು. ಮುಸ್ಲಿಮರು ಅಥವಾ ಮುಸ್ಲಿಮೇತರರ ಶವ ಯಾತ್ರೆ ಹೋಗುವಾಗ ಸ್ವಲ್ಪ ದೂರ ಹಿಂಬಾಲಿಸುತ್ತಿದ್ದರು. ಅತಿ ಸಾಮಾನ್ಯ ಗುಲಾಮ ಆಮಂತ್ರಿಸಿದರೂ ಸಂತೋಷದಿಂದ ಹೋಗುತ್ತಿದ್ದರು. ಇವು ಅವರ ಗುಣವೈಶಿಷ್ಠ್ಯಗಳಾಗಿವೆ. ಅತಿ ಸಾಮಾನ್ಯನೊಂದಿಗೂ ಪ್ರೀತ್ಯಾದರಗಳ ವರ್ತನೆ, ವಿನಮ್ರ ನಡಿಗೆ, ಇತರರ ಪರಿಶ್ರಮ ಮತ್ತು ಅಭಿಪ್ರಾಯಗಳ ಪರಿಗಣನೆ, ಆತ್ಮ ನಿಯಂತ್ರಣ, ಉದಾರತೆ, ವಿಶಾಲ ಮನೋಭಾವ ಇತ್ಯಾದಿ ಅವರ ವೈಶಿಷ್ಠ್ಯಗಳಾಗಿದ್ದುವು. ಈ ಗುಣ ಮಹಾತ್ಮೆಯು ಅವರಲ್ಲಿ ಸದಾ ಶೋಭಿಸುತ್ತಿತ್ತು. ಈ ಕಾರಣದಿಂದಲೇ ನಿಕಟವರ್ತಿಗಳು ಅವರನ್ನು ಪ್ರೀತಿಸುತ್ತಿದ್ದರು.
ಆ ಕಾಲದಲ್ಲಿ ಅರೇಬಿಯಾ ಹಾಗೂ ಜಗತ್ತಿನ ಇತರೆಡೆಗಳಲ್ಲಿಯೂ ಗುಲಾಮಗಿರಿ ರೂಢಿಯಲ್ಲಿತ್ತು. ಮುಹಮ್ಮದ್ರ ಬಗ್ಗೆ ವರದಿಯಾಗಿರುವಂತೆ ತಮಗೆ ದೊರೆತ ಎಲ್ಲ ಗುಲಾಮರನ್ನು ಅವರು ಸ್ವತಂತ್ರಗೊಳಿಸಿದ್ದರು. ಗುಲಾಮರನ್ನು ಸ್ವತಂತ್ರಗೊಳಿಸುವುದು ಮತ್ತು ವಿಮೋಚನೆಗೆ ಪ್ರೋತ್ಸಾಹಿಸುವುದು ಮಹಾ ಪುಣ್ಯ ಕರ್ಮವೆಂದು ಕುರ್ಆನ್ ಪದೇ ಪದೇ ಹೇಳಿದೆ. ಈ ಬಗ್ಗೆ ಅವರು ಜನರಿಗೆ ಸಾಕಷ್ಟು ಸಹಾಯ ಮಾಡಿದರು, ಅವರಿಗೆ ಧೈರ್ಯ ನೀಡಿದರು. ಅವರು ಯಾವಾಗಲೂ ಚಿಂತಾಮಗ್ನ ಮತ್ತು ನಿರ್ಲಿಪ್ತರಾಗಿ ಕಾಣುತ್ತಿದ್ದರು. ಕೆಲವೊಮ್ಮೆ ಪ್ರೀತಿ ತುಂಬಿದ ಮಂದಹಾಸವು ಅವರ ಮುಖದಲ್ಲಿ ಎದ್ದು ತೋರುತ್ತಿತ್ತು. ಕಾಲ್ನಡಿಗೆಯಲ್ಲಿ ಹೋಗುವುದಿದ್ದರೆ ಅವರ ಜತೆಯಿರಲು ಇತರರು ಅವರ ಹಿಂದೆ ಧಾವಿಸಬೇಕಾಗುತ್ತಿತ್ತು.
‘ನಾನು ನಿಮ್ಮಂತೆಯೇ ಓರ್ವ ಮಾನವ’ ಎಂದು ತನ್ನ ಉಪದೇಶಗಳಲ್ಲಿ ಅವರು ಆಗಾಗ್ಗೆ ಒತ್ತಿ ಹೇಳುತ್ತಿದ್ದರು. ಆಗಿರಬಹುದಾದ ಲೋಪಗಳಿಗಾಗಿ ಅವರು ಪದೇ ಪದೇ ಅತ್ತು ಕಣ್ಣೀರು ಸುರಿಸಿ ದೇವನೊಡನೆ ಪ್ರಾರ್ಥಿಸುತ್ತಿದ್ದರು. ಈ ಎರಡು ವಿಷಯಗಳನ್ನು ಕುರ್ಆನ್ನಲ್ಲಿ ಹಲವು ಬಾರಿ ಸೂಚಿಸಲಾಗಿದೆ.
ಕುರ್ಆನ್ನಲ್ಲಿ ಒಂದೆಡೆ ಹೀಗಿದೆ: “ನಾನು (ಮುಹಮ್ಮದ್) ತಪ್ಪು ಮಾಡಿದರೆ ಉಪದೇಶಿಸಿ. ನನ್ನನ್ನು ಸನ್ಮಾರ್ಗದಲ್ಲಿ ನಡೆಸುವ ದೇವನು ವಸ್ತುತಃ ಎಲ್ಲವನ್ನೂ ಆಲಿಸುವವನೂ ಮತ್ತು ಅತ್ಯಂತ ನಿಕಟನೆಂದೂ ಹೇಳಿರಿ.”
ಖ್ಯಾತ ಇಂಗ್ಲಿಷ್ ದಾರ್ಶನಿಕ ಕಾರ್ಲೈಲ್, ಮುಹಮ್ಮದ್ರ ಕುರಿತು ಹೀಗೆ ಬರೆದಿದ್ದಾರೆ. “ಅವರು ವಿಶಾಲವಾದ ನಿಸರ್ಗದ ಮಡಿಲಿನಿಂದ ಹೊರಟ, ಪ್ರಕಾಶ ಕಿರಣಗಳನ್ನು ಸೂಸುವ ಜ್ಯೋತಿಯಾಗಿದ್ದರು. ಜಗತ್ತಿನ ಸೃಷ್ಟಿಕರ್ತನ ಆಜ್ಞೆಯಂತೆ ಜಗತ್ತನ್ನು ಬೆಳಗಿಸಲು ಬಂದ ಮಹಾತ್ಮರು.”
ಮುಹಮ್ಮದ್ರ ಪರಿಶ್ರಮ ಮತ್ತು ಫಲ ಪ್ರಾಪ್ತಿಗಳನ್ನು ವರ್ಣಿಸಿ ಮತ್ತೋರ್ವ ವಿದ್ವಾಂಸರು ಹೀಗೆ ಬರೆದಿದ್ದಾರೆ: “ನನ್ನ ದೇಶಕ್ಕೆ ಮುಹಮ್ಮದ್ರು ತುಂಬಾ ಉಪಕಾರ ಮಾಡಿದ್ದಾರೆ. ಅದನ್ನು ಅನುಗ್ರಹಿಸಿದ್ದಾರೆ. ಸೂಕ್ತ ಆಡಳಿತ ಕ್ರಮ, ವಿವೇಕ ಪೂರ್ಣ ಧರ್ಮ ಅಥವಾ ಸುಸಂಸ್ಕ್ರತ ಜೀವನ ಸಂಪ್ರದಾಯವಿಲ್ಲದ ದೇಶದಲ್ಲಿ ಅವರು ಹುಟ್ಟಿದರು. ಈ ಮೂರು ವಿಷಯಗಳ ಬಗ್ಗೆ ಅವರಿಗೆ ಯಾವ ತಿಳುವಳಿಕೆಯೂ ಇರಲಿಲ್ಲ. ಈ ಮೂರು ವಿಷಯಗಳನ್ನು ಮುಹಮ್ಮದ್ರೇ ಅಲ್ಲಿ ಜಾರಿಗೊಳಿಸಿದರು.
ತನ್ನ ದಿವ್ಯ ಜ್ಞಾನದ ಏಕೈಕ ಪ್ರಯೋಗದಿಂದ ಆಡಳಿತ ರಂಗ, ಧರ್ಮ, ಮತ್ತು ಸ್ವಭಾವದಲ್ಲಿ ಸಮಗ್ರ ಬದಲಾವಣೆಯನ್ನು ಮಾಡಿದರು. ಬಹಳ ವಿಭಿನ್ನ ಮತ್ತು ವಿಚ್ಛಿದ್ರವಾಗಿದ್ದ ಗೋತ್ರಗಳ ಸ್ಥಾನದಲ್ಲಿ ಪರಸ್ಪರ ಸೌಹಾರ್ದದ ಒಂದು ರಾಷ್ಟ್ರವನ್ನು ಕಟ್ಟಿದರು. ಅಸಂಖ್ಯಾತ ದೇವದೇವಿಯರ ಬಗೆಗಿನ ಅಂಧ ವಿಶ್ವಾಸದ ಸ್ಥಾನದಲ್ಲಿ ಸಕಲಾಧಿಪತಿ ಮತ್ತು ಸರ್ವಶಕ್ತ ಹಾಗೂ ಬುದ್ಧಿಯಿಂದ ಗ್ರಹಿಸಬಹುದಾದ ದಯಾಳುವಾದ ಓರ್ವ ಪರಮಾತ್ಮನಲ್ಲಿ ವಿಶ್ವಾಸ ಹುಟ್ಟಿಸಿದರು. ಆ ಪರಮಾತ್ಮನು ನಮ್ಮನ್ನು ಪ್ರತಿಕ್ಷಣವೂ ನೋಡುತ್ತಿದ್ದಾನೆ. ಆತನು ಪಾಪ ಪುಣ್ಯಗಳಿಂದ ತುಂಬಿದ ನಮ್ಮ ಎಲ್ಲ ಕರ್ಮಗಳ ಪ್ರತಿಫಲವನ್ನು ನೀಡುವನೆಂದು ಜನರಿಗೆ ಬೋಧಿಸಿದರು. ಈ ವಿಶ್ವಾಸಗಳ ನೆರವಿನಿಂದಲೇ ಅವರು ಜನರಿಗೆ ಸರಿಯಾದ ಜೀವನ ಸಾಗಿಸಲು ಕಲಿಸಿದರು.
‘ಇನ್ನೋರ್ವ ವಿದ್ವಾಂಸರು ಬರೆದಿದ್ದಾರೆ:’ ಈ ತನಕ ಆಗತರಾದ ಮಹಾತ್ಮರಲ್ಲಿ ಮುಹಮ್ಮದ್ರು ನಿಜಾರ್ಥದಲ್ಲಿ ಅತ್ಯಧಿಕ ಪ್ರೀತಿ ಮತ್ತು ಭಕ್ತಿ ತುಂಬಿದ ವ್ಯಕ್ತಿಯಾಗಿದ್ದರು. ಅವರು ಕೇವಲ ಓರ್ವ ಮಹಾ ಪುರುಷರಾಗಿರಲಿಲ್ಲ, ಮಹಾತ್ಮರಲ್ಲಿಯೇ ಮಹಾತ್ಮರು, ಸತ್ಯ ಸಂಧರಲ್ಲಿಯೇ ಓರ್ವ ಸತ್ಯ ಸಂಧರಾಗಿದ್ದರು. ಮಹಾನ್ ಪ್ರವಾದಿಯಾಗಿ, ದೇವ ಭಕ್ತರಾಗಿ, ರಾಜ ತಾಂತ್ರಿಕನಾಗಿ; ಜಗತ್ತು ಮತ್ತು ಧರ್ಮವನ್ನು ಸಂಸ್ಕರಿಸಿ ಉನ್ನತಗೊಳಿಸಿದವರಾಗಿದ್ದರು. ಒಂದು ರಾಷ್ಟ್ರವನ್ನು ಕಟ್ಟಿ ಬೆಳೆಸಿದರು. ಅದಕ್ಕಿಂತ ದೊಡ್ಡ ಸಾಮ್ರಾಜ್ಯವನ್ನು ನಿರ್ಮಿಸಿದರು. ಒಂದು ವಿಶಾಲವಾದ ಧರ್ಮವನ್ನು ಸ್ಥಾಪಿಸಿ ಅದಕ್ಕಿಂತ ದೊಡ್ಡ ಕೆಲಸ ಮಾಡಿದರು. ಭವಿಷ್ಯದಲ್ಲಿ ಎಂದಾದರೂ, ಈ ಕಾಲದಲ್ಲಿ ಧರ್ಮದ ಹೆಸರಲ್ಲಿ ವಿವಿಧ ಪಂಗಡಗಳನ್ನು ನಿರ್ಮಿಸಿರುವವರು ಆ ಪಂಗಡಗಳಿಂದ ಹೊರಬಂದು ಬಹಳ ವ್ಯಾಪಕ ಮತ್ತು ವಿವೇಕ ಪೂರ್ಣವಾದ ಮಾನವೀಯ ಧರ್ಮವನ್ನು ಗೌರವಿಸಲಾರಂಭಿಸುವಾಗ, ಅವರು (ಮುಹಮ್ಮದ್) ಇಂದಿಗಿಂತ ಎಷ್ಟೋ ಅಧಿಕ ಗೌರವದಿಂದ ಸ್ಮರಿಸಲ್ಪಡುವರು. ವಸ್ತುತಃ ಮುಹಮ್ಮದ್ರು ಅತಿದೊಡ್ಡ ಮಹಾ ಪುರುಷರಿಗಿಂತ ಅತಿದೊಡ್ಡ ಮಹಾನ್ ವ್ಯಕ್ತಿಯಾಗಿದ್ದರು. ಮುಹಮ್ಮದ್ರ ನಿಧನದ ನೂರು ವರ್ಷಗಳಲ್ಲಿ ಅರೇಬಿಯನ್ ಸಾಮ್ರಾಜ್ಯವು ವಿಶಾಲ ಮತ್ತು ವಿಸ್ತಾರಗೊಂಡಂತೆ ರೋಮನ್ ಸಾಮ್ರಾಜ್ಯವು ಅದರ ಪರ್ವಕಾಲದಲ್ಲಿಯೂ ವಿಸ್ತರಿಸಿರಲಿಲ್ಲ. ಕ್ರಿ.ಶ. 20ನೇ ಶತಮಾನದ ಆರಂಭದಲ್ಲಿ ಜಗತ್ತಿನಲ್ಲಿ ಸುಮಾರು 30 ಕೋಟಿ ಜನರು ಇಸ್ಲಾಮ್ ಧರ್ಮದಲ್ಲಿ ವಿಶ್ವಾಸವಿರಿಸಿದ್ದರು.
IslamKannada News Portal



