- ಸಂಗ್ರಹ: ಎನ್.ಎಂ. ಪಡೀಲ್
ಅಬ್ದುಲ್ಲಾ ಇಬ್ನು ಅಮ್ರ್ ರಿಂದ ವರದಿಯಾಗಿದೆ. ಓರ್ವರು ಪ್ರವಾದಿ(ಸ)ರೊಡನೆ, ಅಲ್ಲಾಹನ ಮಾರ್ಗದಲ್ಲಿ ಧರ್ಮ ಯುದ್ಧ ನಡೆಸಲು ಅನುಮತಿ ಕೇಳಿದರು. ಆಗ ಪ್ರವಾದಿಯವರು(ಸ) ಅವರೊಡನೆ ಕೇಳಿದರು: “ನಿಮ್ಮ ತಂದೆ-ತಾಯಿಗಳು ಜೀವಂತವಿದ್ದಾರೆಯೆ?” ಆತ “ಹೌದು” ಎಂದು ಉತ್ತರಿಸಿದರು. ಆಗ ನೀವು ಅವರೊಡನೆ ಜಿಹಾದ್ ಮಾಡಿರಿ. (ಸ್ವಹೀಹ್ ಮುಸ್ಲಿಮ್)
ಮಾನವ ಸಂಬಂಧಗಳು ಪವಿತ್ರ ಎಂಬ ಭಾವನೆಗಳಿಂದ ದೂರ ಓಡಿ ಹೋಗುತ್ತಿರುವ ಕಾಲದಲ್ಲಿ ನಾವಿದ್ದೇವೆ. ನಮ್ಮಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಲ್ಲಿರುವ ಹಿರಿಯರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಬದುಕಿನ ವಸಂತ ಕಾಲದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿದವರು ಈಗ ಬದುಕಿನ ಸಂಜೆಯಲ್ಲಿ ಪಂಜರದಲ್ಲಿ ಬಂಧಿಯಾದ ಗಿಣಿಗಳಂತೆ, ತಾವು ಯಾರಿಗಾಗಿ ಬದುಕಿದೆವೋ, ಯಾರಿಗಾಗಿ ತಮ್ಮ ಅಮೂಲ್ಯ ಜೀವನವನ್ನು ಸವೆಸಿದೆವೋ ಅವರನ್ನು ಕಣ್ತುಂಬಾ ನೋಡಲು ಸಾಧ್ಯವಾಗದಂತಹ ರೀತಿಯಲ್ಲಿ ದಿನ ದೂಡುತ್ತಿದ್ದಾರೆ. ಇನ್ನೊಂದೆಡೆ ಇದಕ್ಕಿಂತ ಭಯಾನಕವಾದ ಅಂದರೆ ತನ್ನ ಹೆತ್ತವರಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಹೇಳಿ ಹುಚ್ಚಾಸ್ಪತ್ರೆಗಳಿಗೋ, ತೀರ್ಥ ಕ್ಷೇತ್ರಗಳಲ್ಲೋ ಬಿಡುತ್ತಿದ್ದಾರೆ. ತಮ್ಮ ನಿಕಟ ಸಂಬಂಧಿಗಳನ್ನು ಕೊಲೆಗೈಯುವ ವಾರ್ತೆಗಳನ್ನು ನಾವು ಕೇಳುತ್ತಿದ್ದೇವೆ.
ಆದ್ದರಿಂದ ಇಂದಿನ ಶೋಚನೀಯ ಪರಿಸ್ಥಿತಿಯಲ್ಲಿ ನಿಂತುಕೊಂಡು ಇಸ್ಲಾಮ್ ಮಾನವೀಯ ಸಂಬಂಧಗಳಿಗೆ ನೀಡಿದ ಬೆಲೆಯನ್ನು ಅಂದಾಜಿಸಬಹುದು. ಮನುಷ್ಯರಿಗೆ ಈ ಭೂಮಿಯಲ್ಲಿ ನಿರ್ವಹಿಸಲು ಸಾಧ್ಯವಿರುವ ಎರಡನೇ ಮಹತ್ತರವಾದ ಹೊಣೆಗಾರಿಕೆ ಸ್ವಂತ ತಂದೆ-ತಾಯಿಗಳನ್ನು ನೋಡಿಕೊಳ್ಳುವುದಾಗಿದೆ. ಇದನ್ನು ಕುರ್ಆನ್ ಸ್ವತಃ ಸಂಶಯಗಳಿಗೆ ಆಸ್ಪದವೇ ಇಲ್ಲದ ರೀತಿಯಲ್ಲಿ ಘೋಷಿಸಿದೆ.
ಮನುಷ್ಯನ ಒಂದನೆಯ ಕರ್ತವ್ಯ ದೇವನ ಇಚ್ಛೆಯಂತೆ ಬದುಕುವುದು ಎಂದಾದರೆ, ಎರಡನೇ ಕರ್ತವ್ಯ ತನ್ನ ತಂದೆ-ತಾಯಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂಬುದಾಗಿದೆ.
ಈ ಹದೀಸ್ ಪ್ರತಿಪಾದಿಸುವ ವಿಷಯವೂ ಅದುವೇ ಆಗಿದೆ. ಓರ್ವ ಸತ್ಯವಿಶ್ವಾಸಿಗೆ ಸಂಬಂಧಿಸಿದಂತೆ ಆತ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದ ಒಂದು ಹೊಣೆಗಾರಿಕೆಯಾಗಿದೆ. ದೇವ ಮಾರ್ಗದಲ್ಲಿ ಹೋರಾಟ. ಅದಕ್ಕೆ ಅನುಮತಿ ಪಡೆಯಲು ಪ್ರವಾದಿ(ಸ)ರ ಬಳಿ ವೀರನಾದ ಸಹಾಬಿಯೋರ್ವರು ಬರುತ್ತಾರೆ. ನಿಮ್ಮ ಹೆತ್ತವರು ಜೀವಂತವಿದ್ದಾರೆಯೇ ಎಂದು ಪ್ರವಾದಿ ಪ್ರಶ್ನಿಸುತ್ತಾರೆ. ಹೌದೆಂದು ಉತ್ತರಿಸಿದಾಗ ಕೂಡಲೇ ನಿಮ್ಮ ಜಿಹಾದ್ ಅವರಲ್ಲಿದೆ ಎಂದು ಉತ್ತರಿಸುತ್ತಾರೆ.
ನಮಗೆ ತಂದೆ-ತಾಯಿಗಳಿಂದ ಅನುಭವಿಸಿದ ಪ್ರೀತಿ, ಸ್ನೇಹ, ಅನುಕಂಪ, ವಾತ್ಸಲ್ಯ, ಕರುಣೆಯನ್ನು ನಾವೆಷ್ಟೇ ಆದರ ಯಾ ಗೌರವ ತೋರಿದರೂ ನಮಗೆ ದೊರೆತದ್ದಕ್ಕೆ ಬದಲಿಯಾಗಲು ಸಾಧ್ಯವಿಲ್ಲ. ಆದ್ದರಿಂದ ಅವರಿಗಾಗಿ ಜೀವನದ ಕೊನೆಯವರೆಗೆ ಪ್ರಾರ್ಥಿಸಬೇಕೆಂದು ಆದೇಶಿಸಲಾಗಿದೆ. ಇದೇ ಆಶಯ ಹೊಂದಿರುವ ಹಲವಾರು ಪ್ರವಾದಿ ವಚನಗಳನ್ನು ಕಾಣಬಹುದು. ಅಬೂಹುರೈರಾರಿಂದ ವರದಿಯಾಗಿದೆ: ಓರ್ವರು ಪ್ರವಾದಿ(ಸ)ರ ಬಳಿ ಬಂದು ಸದ್ವರ್ತನೆಗೆ ಯಾರು ಅರ್ಹರು? ಎಂದು ಕೇಳುತ್ತಾರೆ. ಪ್ರವಾದಿ(ಸ) ಹೇಳಿದರು, ನಿನ್ನ ತಾಯಿ. ಹೀಗೆ ಮೂರು ಬಾರಿ ಪ್ರವಾದಿವರ್ಯರು(ಸ) ನಿನ್ನ ತಾಯಿ ಎಂದೇ ಉತ್ತರಿಸಿದರು. ನಾಲ್ಕನೇ ಬಾರಿಗೆ ನಿನ್ನ ತಂದೆ ಎಂದು ಉತ್ತರಿಸಿದರು.
ಮಾತಾಪಿತರು ತಮ್ಮ ಧರ್ಮದಲ್ಲಿಲ್ಲದಿದ್ದರೂ ಅವರೊಂದಿಗೆ ಅತ್ಯಂತ ಪ್ರೀತಿಯಿಂದ ವ್ಯವಹರಿಸಬೇಕು. ಇದು ಕುರ್ಆನ್ನ ಬೋಧನೆಯಾಗಿದೆ. ಒಮ್ಮೆ ಪ್ರವಾದಿಯವರು(ಸ) ನಷ್ಟ ಹೊಂದಿರುವನು ಯಾರು ಎಂಬುದನ್ನು ತಮ್ಮ ಅನುಚರರಿಗೆ ಹೇಳಿಕೊಡುತ್ತಿದ್ದರು. ತಾಯಿಯೋ ಅಥವಾ ತಂದೆಯೋ ಅವರೀರ್ವರೂ ವಾರ್ಧಕ್ಯದಲ್ಲಿ ನಿಮ್ಮ ಬಳಿ ಇದ್ದು ಅವರಿಗೆ ಯಾವುದೇ ರೀತಿಯ ಸೇವೆಗಳನ್ನು ಸಲ್ಲಿಸದಿದ್ದರೆ ಆತನ ಸ್ವರ್ಗ ಪ್ರವೇಶಕ್ಕೆ ನಿರ್ಬಂಧ ಹೇರಲಾಗುವುದು.
ಇದು ಆಧುನಿಕ ಕಾಲ. ಹಲವರು ಉದ್ಯೋಗಕ್ಕಾಗಿ ಕುಟುಂಬ ಸಮೇತ ಬೇರೆ ಬೇರೆ ದೇಶಗಳಿಗೆ ಹೋಗಿ ಬದುಕುತ್ತಾರೆ. ಇಲ್ಲಿ ತಂದೆ-ತಾಯಿಗಳನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದಾದರೆ ಅವರನ್ನು ತಮ್ಮೊಂದಿಗೆ ಕರೆದೊಯ್ಯಬೇಕು. ಅದು ಅವರ ಕರ್ತವ್ಯವಾಗಿದೆ. ಏನೆಲ್ಲಾ ನೆವನವನ್ನು ಹೇಳಿ ಹಲವರು ಇದರಿಂದ ವಿಮುಖರಾಗುತ್ತಿದ್ದಾರೆ. ಇದು ಕುರ್ಆನ್, ಹದೀಸ್ ಮತ್ತು ಇಸ್ಲಾಮೀ ಶಿಷ್ಟಾಚಾರಕ್ಕೆ ವಿರುದ್ಧವಾದುದೆಂಬುದನ್ನು ಅಂತಹವರು ತಿಳಿದುಕೊಳ್ಳಬೇಕು.
IslamKannada News Portal


