ಉಳ್ಳಾಲ: ಇತ್ತೀಚೆಗೆ ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ಶಾಖೆಯ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಡಾ| ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ‘ಮಾನವ ಏಕತೆ ಮತ್ತು ಘನತೆ’ ಎಂಬ ವಿಷಯದಲ್ಲಿ ಕನ್ನಡದಲ್ಲಿ ಸಾರ್ವಜನಿಕ ಕುರ್ಆನ್ ಪ್ರವಚನ ಕಾರ್ಯಕ್ರಮ ಜರಗಿತು.
ಮುಖ್ಯ ಪ್ರವಚನಕಾರರಾಗಿ ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬರಾದ ಮುಹಮ್ಮದ್ ಕುಂಞಿ ಯವರು- ಮನುಷ್ಯನು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಾ ಇದ್ದಾನೆ. ಆದರೆ ಮನುಷ್ಯನು ತನ್ನನ್ನು ಪೋಷಿಸಿ ಬೆಳೆಸಿದ ಮಾತಾಪಿತರನ್ನು ಆರೈಕೆ ಮಾಡುತ್ತಿಲ್ಲ. ಅವರನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾನೆ ಎಂದರು. ದೇವನು ಮನುಷ್ಯನನ್ನು ಒಳ್ಳೆಯ ಪ್ರಕೃತಿಯಲ್ಲಿ ಹುಟ್ಟಿಸಿದ್ದಾನೆ. ಮನುಷ್ಯನು ಈ ಭೂಮಿಯಲ್ಲಿ ಶ್ರೇಷ್ಠ ಜೀವಿಯಾಗಿದ್ದಾನೆ. ಕಷ್ಟದಲ್ಲಿರುವ ಮನುಷ್ಯನಿಗೆ ಸಹಾಯ ಹಸ್ತ ಚಾಚುವ ಮನುಷ್ಯನು ದೇವನಿಗೆ ಇಷ್ಟವಾಗಿದ್ದಾನೆ. ಮನುಷ್ಯನ ಹೃದಯದಲ್ಲಿ ಕಠೋರವಾದ, ಉಗ್ರವಾದ, ಲಜ್ಜೆರಹಿತ, ಅಪ್ರಾಮಾಣಿಕತೆ ಮತ್ತು ಉತ್ತಮ ಮನುಷ್ಯತ್ವದ ಗುಣಗಳು ಇರುತ್ತವೆ. ಮನುಷ್ಯನು ಉತ್ತಮವಾದ ಗುಣಗಳನ್ನು ಅಳವಡಿಸಿದರೆ ದೇವನಿಗೆ ಇಷ್ಟವಾಗುತ್ತಾನೆ. ದೇವನ ಕರುಣೆ ಮತ್ತು ದಯೆಯಿಂದ ಮನುಷ್ಯನ ಬದುಕು ಉತ್ತಮವಾಗುತ್ತದೆ. ಮನುಷ್ಯರೆಲ್ಲರೂ ಒಂದೇ ತಾಯಿಯ ಮಕ್ಕಳು. ದೇವಭಯ ಮತ್ತು ಸಚ್ಚಾರಿತ್ರ್ಯ ಮನುಷ್ಯನ ಶ್ರೇಷ್ಠತೆಯ ಮಾನದಂಡ ಎಂದರು.
ಬಂಡವಾಳಶಾಹಿ ವ್ಯವಸ್ಥೆಯು ಮಹಿಳೆಯರನ್ನು ಅಶ್ಲೀಲವಾಗಿ ಬದುಕುವಂತೆ ಪ್ರೇರೇಪಿಸುತ್ತಿದೆ. ಮಹಿಳೆಯರ ಬಗ್ಗೆ ಇರುವ ಅಸಮಾನತೆ ದೂರವಾಗಬೇಕು. ಅವರಿಗೆ ಗೌರವ ಸಿಗಬೇಕಾದ ಅಗತ್ಯವಿದೆ ಎಂದರು. ಮನುಷ್ಯನು ಸೋಮಾರಿಯಾಗದೆ ಸ್ವಾಭಿಮಾನಿಯಾಗಿ ಭೂಮಿಯಲ್ಲಿ ಬದುಕಬೇಕೆಂದು ತಿಳಿಸಿದರು.
ಕೊಲ್ಯ ಶ್ರೀ ನಾಗಬ್ರಹ್ಮ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ವೇದಮೂರ್ತಿ ಶ್ರೀ ಭಾಸ್ಕರ್ ಐತಾಳ್ ಮಾತಾಡಿ, ಇಂತಹ ಕಾರ್ಯಕ್ರಮ ಶ್ಲಾಘನೀಯ ಎಂದರು. ಪರಸ್ಪರ ಅರಿಯಲು, ಭ್ರಾತೃತ್ವದಲ್ಲಿ ಬದುಕಲು, ಶಾಂತಿ ಸೌಹಾರ್ದತೆಯಿಂದ ಬಾಳಲು ಸಲಹೆ ನೀಡಿದರು.
ಬಬ್ಬುಕಟ್ಟೆ ಸರ್ಗೆಂಟ್ ಮೆಮೋರಿಯಲ್ ಚರ್ಚ್ನ ಬಿಷಪ್ ರೆವರೆಂಡ್ ಎಂ. ಪ್ರಭುರಾಜ್ ಈ ಕಾರ್ಯಕ್ರಮದಿಂದ ಇಸ್ಲಾಮಿನ ಬಗ್ಗೆ ತಿಳಿಯಲು ಸಾಧ್ಯವಾಯಿತು. ಧರ್ಮಗ್ರಂಥಗಳಲ್ಲಿ ಮನುಷ್ಯನಿಗೆ ಬೇಕಾದ ಉತ್ತಮ ಬೋಧನೆಗಳಿವೆ. ಬೈಬಲ್ನಲ್ಲಿಯೂ ಕೂಡಾ ಮನುಷ್ಯನಿಗೆ ಬೇಕಾದಂತಹ ಮಾರ್ಗದರ್ಶನಗಳಿವೆ ಎಂದರು.
ಅಳೇಕಲ ಮದನಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಇಸ್ಮಾಯಿಲ್ ಟಿ. ರವರು ತಮಗೆ ಶಿಕ್ಷಣ ಕಲಿಸಿದ ಧಾರ್ಮಿಕ ಗುರುವನ್ನು ಹಾಗೂ ಶಾಲಾ ಶಿಕ್ಷಕರನ್ನು ಸ್ಮರಿಸಿದರು. ಬಾಲ್ಯ ಮತ್ತು ಯುವಕರಾಗಿದ್ದಾಗ ಹಬ್ಬದ ದಿನಗಳಲ್ಲಿ ಹಿಂದು ಕ್ರೈಸ್ತರೊಟ್ಟಿಗೆ ಸಂಭ್ರಮಿಸಿದ್ದನ್ನು ತಿಳಿಸಿದರು. ಸೌಹಾರ್ದಯುತ, ಭಾತೃತ್ವದ ನೆನಪುಗಳನ್ನು ತಿಳಿಸಿದರು.
ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್ ಹಾಗೂ ಜ.ಇ.ಹಿಂದ್ ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್ ರವರು ಉಪಸ್ಥಿತರಿದ್ದರು.
ಕೊಣಾಜೆ ನಡುಪದವು ಪಿ.ಎ.ಫಾರ್ಮಸಿ ಕಾಲೇಜಿನ ಉಪನ್ಯಾಸಕರಾದ ಡಾ| ಮುಹಮ್ಮದ್ ಮುಬೀನ್ ಮಾತಾಡುತ್ತಾ, ನಾವು ಬದುಕುತ್ತಿರುವ ಭಾರತವು ದೈವಿಕ ಮತ್ತು ಆಧ್ಯಾತ್ಮಿಕ ಭೂಮಿಯಾಗಿದೆ. ಆದರೆ ನಮ್ಮ ದೇಶದಲ್ಲಿ ಧರ್ಮದ ಅನುಯಾಯಿಗಳಿಗೆ ತಿಳುವಳಿಕೆಯ ಕೊರತೆ ಇದೆ. ತಿಳುವಳಿಕೆಯ ಕೊರತೆಯಿಂದ ಕೆಲವೊಮ್ಮೆ ಸಂಘರ್ಷವೂ ನಡೆದಿದೆ. ಹಿಂದೂ ಧರ್ಮವನ್ನು ಅರಿಯಬೇಕಾದರೆ ಭಗವದ್ಗೀತೆ, ವೇದ, ರಾಮಾಯಣವನ್ನು ಅಧ್ಯಯನ ನಡೆಸಬೇಕು. ಕ್ರೈಸ್ತ ಧರ್ಮವನ್ನು ತಿಳಿಯಬೇಕಾದರೆ ಬೈಬಲನ್ನು ಅಧ್ಯಯನ ಮಾಡಬೇಕು. ಇಸ್ಲಾಮನ್ನು ತಿಳಿಯಬೇಕಾದರೆ ಪವಿತ್ರ ಕುರ್ಆನ್ ಮತ್ತು ಪ್ರವಾದಿ ಮುಹಮ್ಮದ್(ಸ) ರವರ ಜೀವನ ಚರಿತ್ರೆಯನ್ನು ಅಧ್ಯಯನ ನಡೆಸಬೇಕೆಂದು ತಿಳಿಸಿದರು.
ಕೋಮುವಾದ, ಉಗ್ರವಾದ ನಮ್ಮ ದೇಶದ ಬೃಹತ್ ಸಮಸ್ಯೆಯಾಗಿದೆ. ಕೋಮುವಾದವನ್ನು ಯಾವ ಧರ್ಮವೂ ಪ್ರತಿಪಾದಿಸುವುದಿಲ್ಲ. ಧರ್ಮದ ಅನುಯಾಯಿಗಳಲ್ಲಿರುವ ಸಂಘರ್ಷ, ಅಪನಂಬಿಕೆ, ತಿಳುವಳಿಕೆಯ ಕೊರತೆ ನೀಗಬೇಕು. ಇದಕ್ಕಾಗಿ ಜಮಾಅತೆ ಇಸ್ಲಾಮೀ ಸಂಘಟನೆಯು ದೇಶಾದ್ಯಂತ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದೆ ಎಂದು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ಪ್ರವಚನಕಾರರಿಗೆ ಮತ್ತು ಅತಿಥಿಗಳಿಗೆ ಗೌರವ ಸ್ಮರಣಿಕೆಗಳನ್ನು ನೀಡಿ ಸತ್ಕರಿಸಲಾಯಿತು. ಮುಝಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
IslamKannada News Portal
