@ ಖಾಲಿದ್ ಮೂಸಾ ನದ್ವಿ
ಮನಸ್ಸಿನ ಶುದ್ಧಿಗೆ ಪ್ರಾಮುಖ್ಯತೆ ನೀಡುವ ಇಸ್ಲಾಂ ಶರೀರದ ಶುಚಿತ್ವದ ಕಡೆಗೂ ಹೆಚ್ಚಿನ ಗಮನ ನೀಡುತ್ತದೆ. ದೇಹ, ವಸ್ತ್ರ, ವಾಸಿಸುವ ಸ್ಥಳ, ಪ್ರಯಾಣಿಸುವ ವಾಹನ, ಚಪ್ಪಲಿ ಎಲ್ಲವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ಇಸ್ಲಾಮ್ ಸ್ಪಷ್ಟವಾಗಿ ಆದೇಶಿಸುತ್ತದೆ. ಬಾಹ್ಯ ಶುದ್ಧಿಯ ಪ್ರಾಧಾನ್ಯತೆಯ ಕುರಿತು ಪ್ರವಾದಿಯವರ(ಸ) ಮಾತುಗಳು ಬಹಳ ಪ್ರಸಿದ್ಧವಾಗಿವೆ. ಶುಚಿತ್ವವು ಈಮಾನ್‍ನ ಅರ್ಧಾಂಶವಾಗಿದೆ ಎಂಬುದೇ ಆ ವಚನದ ಸಾರ.
ಮನೆ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಲಿನ್ಯವನ್ನು ಸರಿಯಾಗಿ ಸಂಸ್ಕರಿಸುವುದು, ಉಗುರು ಕತ್ತರಿಸುವುದು, ದಂತ ಶುದ್ಧಿ ಮಾಡುವುದು, ಸ್ನಾನ ಮಾಡುವುದು, ಬಟ್ಟೆ ಒಗೆಯುವುದು, ಕೂದಲುಗಳನ್ನು ಕತ್ತರಿಸುವುದು… ಮುಂತಾದ ಹಲವಾರು ಕಾರ್ಯಗಳು ಇಸ್ಲಾಮೀ ಶಿಷ್ಟಾಚಾರ ಭಾಗವಾಗಿ ನಾವು ಗಮನಿಸಬೇಕೆಂದು ಪ್ರವಾದಿ ಪಾಠಗಳಿಂದ ತಿಳಿದು ಬರುತ್ತದೆ.
ಶುಚಿತ್ವದ ಪ್ರಜ್ಞೆ: ನಮಾಝ್‍ನ ಸಿದ್ಧತೆಯಲ್ಲಿ ಶುಚಿತ್ವಕ್ಕೆ ಬಹಳ ಪ್ರಾಧಾನ್ಯತೆ ಇದೆ. ಎರಡು ಮಾಲಿನ್ಯಗಳು ಬಂದು ಮುಟ್ಟಿರುವ ಸ್ಥಿತಿಯಲ್ಲಿ ನಮಾಝ್ ಮಾಡಬಾರದೆಂದು ಪ್ರವಾದಿವರ್ಯರು(ಸ) ಉಪದೇಶಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಮನದಲ್ಲಿ ಭಕ್ತಿ ಭಾವ ಮೂಡಲು ಸಾಧ್ಯವಿಲ್ಲ. ನಮಾಝ್‍ಗೆ ಏಕಾಗ್ರತೆ ಸಿಗುವುದಿಲ್ಲ. ದೇಹವು ನಮಾಝ್‍ಗೆ ಸಿದ್ಧವಾದರೆ ಮಾತ್ರ ಮನದಲ್ಲಿ ಭಕ್ತಿ ಮೂಡಲು ಸಾಧ್ಯ.
ಮಸೀದಿಗಳ ಭಾಗವಾಗಿ ಮಲ-ಮೂತ್ರ ವಿಸರ್ಜನೆಗಾಗಿ ಸೌಕರ್ಯಗಳನ್ನು ಒದಗಿಸಿ ಕೊಡಲು ಮಸೀದಿಗಳ ಆಡಳಿತ ಸಮಿತಿ ತೋರುವ ಕಾಳಜಿಯು ಧಾರ್ಮಿಕ ಪ್ರಜ್ಞೆಯ ಭಾಗವಾಗಿದೆ. ನಮಾಝ್ ಮಾತ್ರ ಇಬಾದತ್ ಅಲ್ಲ. ಮಲ ಮೂತ್ರ ವಿಸರ್ಜನೆ ಮಾಡಿ ದೇಹವನ್ನು ನಮಾಝ್‍ಗಾಗಿ ಸೆಟ್ ಮಾಡುವುದು ಪ್ರತಿ ಫಲಾರ್ಹವಾದ ಆರಾಧನೆಯ ಭಾಗವಾಗಿದೆ. ಆ ಸ್ಥಳಗಳಿಗೆ ಹೋಗುವಾಗಲೂ ಪ್ರಾರ್ಥನೆಯಿದೆ. (ಅಲ್ಲಾಹನೇ, ಮ್ಲೇಚ್ಛತೆಯಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ) ಅಲ್ಲಿಂದ ಹೊರ ಬರುವಾಗಲು ಪ್ರಾರ್ಥನೆಯಿದೆ. (ಅಲ್ಲಾಹನೇ, ಕ್ಷಮಿಸು, ನನ್ನ ತೊಂದರೆಗಳನ್ನು ನೀಗಿಸಿ ಸೌಖ್ಯ ನೀಡಿದ ಅಲ್ಲಾಹನಿಗೆ ಸ್ತುತಿ.)
ನಮಾಝ್‍ಗೆ ಪ್ರವೇಶಿಸುವ ಮೊದಲು ಸ್ನಾನ/ವುಝೂ ಮಾಡಿ ಶುದ್ಧಿಯಾಗಬೇಕು. ಇಸ್ಲಾಮೀ ಕರ್ಮಶಾಸ್ತ್ರದಲ್ಲಿ ವಿವರಿಸಿದಂತೆ ದೊಡ್ಡ ಅಶುದ್ಧಿಯಿಂದ ಹೊರಬರಲು ಸ್ನಾನವು ಕಡ್ಡಾಯವಾಗಿರುತ್ತದೆ. ದಂಪತಿಗಳ ಮಿಲನ, ಋತುಸ್ರಾವ, ಹೆರಿಗೆಯ ರಕ್ತಸ್ರಾವ.. ಇವು ಇಂತಹ ಸಂದರ್ಭಗಳಾಗಿವೆ. ಸ್ನಾನ ಕಡ್ಡಾಯ ಸಂದರ್ಭದಲ್ಲಿ ಸ್ನಾನ ಮಾಡಿಯೂ, ಅಲ್ಲದಿದ್ದರೆ ವುಝೂ ಮಾಡಿ ಶುದ್ಧಿಯಾಗಿ ನಮಾಝ್‍ಗೆ ಪ್ರವೇಶಿಸಬೇಕು.
ಸ್ನಾನ ಮತ್ತು ವುಝೂ(ಅಂಗಸ್ನಾನ) ಅಲ್ಲಾಹನ ಆದೇಶಗಳಾಗಿವೆ. ಮುಖ, ಕೈ, ಕಾಲುಗಳನ್ನು ತೊಳೆಯುವುದು, ತಲೆ ಸವರುವ ಒಂದು ಪ್ರಕ್ರಿಯೆಯೇ ವುಝೂ. ನಮಾಝ್ ಸ್ವೀಕಾರಾರ್ಹವಾಗಲು ವುಝೂ ಅನಿವಾರ್ಯವಾಗಿದೆ. ಮುಖ ಸಂಪೂರ್ಣವಾಗಿ ತೊಳೆಯಬೇಕು. ಎರಡು ಕೈಗಳನ್ನು ಮೊಣಗಂಟಿನವರೆಗೆ ತೊಳೆಯುವುದು, ತಲೆ ಸಂಪೂರ್ಣ ಸವರುವುದು, ಎರಡು ಕಾಲುಗಳ ಪಾದಗಳನ್ನು ಚೆನ್ನಾಗಿ ತೊಳೆಯುವುದು. ವುಝೂವಿನ ಅಪೂರ್ಣತೆಯು ನಮಾಝನ್ನು ಅ ಪೂರ್ಣಗೊಳಿಸುತ್ತದೆ.
ಒಮ್ಮೆ ಪ್ರವಾದಿ(ಸ) ಹೀಗೆ ಹೇಳಿದರು, ಕಾಲಿನ ಹಿಂದಿನ ಭಾಗವನ್ನು ಅವಗಣಿಸುವವರಿಗೆ ನಾಶ.
ಸಾಮಾನ್ಯವಾಗಿ ವುಝೂ ಮಾಡುವಾಗ ನಾವು ನಿರ್ಲಕ್ಷಿಸುವಂತಹ ಭಾಗಗಳು- ಕೈ, ಮೊಣಕಾಲು ಹಾಗೂ ಕಾಲಿನ ಹಿಂಭಾಗ. ಇದು ನಮ್ಮ ವುಝೂವನ್ನು ಅಪೂರ್ಣಗೊಳಿಸುತ್ತದೆ.
ವುಝೂ ಎಂಬುದು ಹೊರಗೆ ತೋರುವಂತೆ ಕೇವಲ ತೊಳೆದು ಶುದ್ಧೀಕರಿಸುವ ಪ್ರಕ್ರಿಯೆ ಮಾತ್ರ ಅಲ್ಲ. ವುಝೂವಿನಿಂದ ಅವಯವಗಳು ಶುದ್ಧವಾಗುತ್ತದೆಯೆಂಬುದು ಸತ್ಯ. ವುಝೂವಿನ ನೀರು ಅವಯವಗಳಿಂದ ಹರಿದು ಹೋಗುವಾಗ ಅದರೊಂದಿಗೆ ನಮ್ಮ ಪಾಪಗಳು ಮಾಯವಾಗುತ್ತದೆಂದು ಪ್ರವಾದಿ(ಸ) ಹೇಳಿರುವರು. ನಮ್ಮ ಮನಸ್ಸನ್ನು ಕೂಡಾ ಶುದ್ಧೀಕರಿಸುವ ಕರ್ಮವಿದು.
ವುಝೂವಿನ ಮಹತ್ವವನ್ನು ಪ್ರವಾದಿ(ಸ)ರು ವಿವರಿಸಿರುವರು. ಅಬೂಹುರೈರ(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿರುವುದಾಗಿ ನಾನು ಕೇಳಿದ್ದೇನೆ. ಅಂತ್ಯ ದಿನದಲ್ಲಿ ನನ್ನ ಜನತೆ ವುಝೂವಿನ ಕಾರಣದಿಂದ ಮುಖ, ಕೈ ಕಾಲುಗಳು ಶುಭ್ರವಾಗಿ ಪ್ರಕಾಶವನ್ನು ಹೊರ ಸೂಸುತ್ತಿರುವಂತೆ ಹಾಜರಾಗುತ್ತಾರೆ. ಆದ್ದರಿಂದ ಸಾಧ್ಯವಾಗುವವರೆಲ್ಲರೂ ಅವಯವಗಳನ್ನು ಪೂರ್ತಿಯಾಗಿಯೇ ತೊಳೆಯಬೇಕು. (ಇಮಾಮ್ ಬುಖಾರಿ, ಮುಸ್ಲಿಮ್, ಇದು ಅಧಿಕೃತವೆಂದು ಹೇಳಿದ್ದಾರೆ)
`ಪ್ರಕಾಶ’ ಎಂಬ ಅರ್ಥ ಬರುವ (ಅದಾಅಃ) ಎಂಬ ಪದದಿಂದ ವುಝೂಅï ಎಂಬ ಪದ ಉದ್ಭವಿಸಿದೆ. ಮಾನವ ಶರೀರದ ಒಳಗೂ ಹೊರಗೂ ಪ್ರಕಾಶವನ್ನು ಸ್ಪುರಿಸುವ ಒಂದು ಕರ್ಮವಿದು. ಅಬೂಹುರೈರಾ(ರ) ವರದಿ ಮಾಡಿದ ಇನ್ನೊಂದು ಪ್ರವಾದಿ ವಚನ ಹೀಗಿದೆ, ಒಂದು ದಿನ ಮುಹಮ್ಮದ್(ಸ) ಸಹಾಬಿಗಳೊಂದಿಗೆ ಕೇಳಿದರು, ಸಣ್ಣ ಪಾಪಗಳನ್ನು ತೊಳೆಯುವ, ನಿಮ್ಮ ಸ್ಥಾನಮಾನ ಉನ್ನತವಾಗುವ ಒಂದು ವಿಷಯದ ಕುರಿತು ನಿಮಗೆ ತಿಳಿಸಿಕೊಡಲೇ? ಅನುಚರರು ಆಗಬಹುದು ಹೇಳಿ ಪ್ರವಾದಿವರ್ಯರೇ(ಸ) ಎಂದರು. ಆಗ ಪ್ರವಾದಿ(ಸ)ರು ಹೇಳಿದರು, “ಕಷ್ಟದ ಸಂದರ್ಭದಲ್ಲೂ ವುಝೂವನ್ನು ಪೂರ್ತಿಗೊಳಿಸಿರಿ.”
ಒಂದು ನಮಾಝ್‍ನ ಬಳಿಕ ಇನ್ನೊಂದು ನಮಾಝನ್ನು ನಿರೀಕ್ಷಿಸುತ್ತಿರಿ. ಪ್ರವಾದಿ(ಸ) ಹೇಳಿರುವರು, ಈ ಒಂದು ಜಾಗ್ರತೆಯು ಸೈನಿಕರ ಸಿದ್ಧತೆಯಂತಿದೆ. (ಮುಸ್ಲಿಮ್)
ವುಝೂ ಪೂರ್ತಿಗೊಳಿಸಿದ ಬಳಿಕ ಹೇಳುವ ಪ್ರಾರ್ಥನೆಯನ್ನು ಪ್ರವಾದಿ(ಸ)ರು ಕಲಿಸಿದ್ದಾರೆ. ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲವೆಂದು ನಾನು ಸಾಕ್ಷ್ಯ ವಹಿಸುತ್ತೇನೆ. ಅವನು ಏಕೈಕನು. ಅವನಿಗೆ ಸಹಭಾಗಿಗಳು ಯಾರೂ ಇಲ್ಲ. ಪ್ರವಾದಿ ಮುಹಮ್ಮದ್(ಸ) ರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆಂದು ಸಾಕ್ಷ್ಯವಹಿಸುತ್ತೇನೆ. ಅಲ್ಲಾಹನೇ, ನೀನು ನನ್ನನ್ನು ಪಶ್ಚಾತ್ತಾಪ ಪಡುವವರಲ್ಲಿ, ಶುದ್ಧಿ ಉಳ್ಳವರಲ್ಲಿ ಸೇರಿಸು. ಅಲ್ಲಾಹನೇ ನೀನು ಪರಿಶುದ್ಧನು, ಸ್ತುತಿಗಳೆಲ್ಲವೂ ನಿನಗೆ ಮಾತ್ರ. ನೀನಲ್ಲದೆ ಆರಾಧ್ಯನಿಲ್ಲ. ನಿನ್ನೊಂದಿಗೆ ಕ್ಷಮೆ ಬೇಡುತ್ತೇನೆ. ನಿನ್ನೆಡೆಗೆ ಮರಳುತ್ತೇನೆ.
ಅರಬಿ ಪ್ರಾರ್ಥನೆಯ ಅರ್ಥವನ್ನು ಮನದಟ್ಟು ಮಾಡಿಕೊಂಡು, ಹೃದಯ ಸಾನಿಧ್ಯದೊಂದಿಗೆ ಈ ಪ್ರಾರ್ಥನೆಯನ್ನು ರೂಢಿಸಿಕೊಂಡರೆ, ಪ್ರತಿ ವುಝೂವಿನ ಬಳಿಕವೂ ಅಳೆಯಲು ಅಸಾಧ್ಯವಾದ, ಆಧ್ಯಾತ್ಮಿಕ ಅನುಭೂತಿ ಉಂಟಾಗುತ್ತದೆ.
ನಮಾಝ್‍ನ ಮುನ್ನುಡಿಯಾಗಿ ನಡೆಸಬೇಕಾದ ಇನ್ನೆರಡು ಕರ್ಮಗಳು ಬಾಂಗ್ ಮತ್ತು ಇಕಾಮತ್ ಬಾಂಗ್ ಎಂದರೆ ಎಚ್ಚರಗೊಳಿಸುವುದಾಗಿದೆ. ದಿನಂಪ್ರತಿ ಐದು ಬಾರಿ ಪುನರಾವರ್ತಿಸಲ್ಪಡುವ ಕರೆ. ಇಸ್ಲಾಮೀ ಸಮೂಹದ ಸಾನಿಧ್ಯವನ್ನು ತಿಳಿಸುವ ಉಜ್ವಲವಾದ ಒಂದು ಘೋಷಣೆಯದು. ಆಲಸ್ಯ, ಉದಾಸೀನತೆಯಿಂದ ಕರ್ಮ ಲೋಕದೆಡೆಗೆ ಮನುಷ್ಯನನ್ನು ವಿಶ್ವಾಸಿಯನ್ನು ಮುಸ್ಲಿಮನನ್ನು ಕರೆದುಕೊಂಡು ಹೋಗುವ ಒಂದು ಉನ್ನತ ಧ್ವನಿಯದು.
“ಅಲ್ಲಾಹು ಅಕ್ಬರ್” ಎಂಬ ವಾಕ್ಯವು ನಮಗೆ ನೀಡುವ ಜೀವನದ ದೃಷ್ಟಿಕೋನವು ಪರಮ ಪ್ರಧಾನವಾಗಿದೆ. ಅಲ್ಲಾಹನೇ ಎಲ್ಲಕ್ಕಿಂತಲೂ ದೊಡ್ಡವನು ಎಂದು ಹೇಳುವಾಗ ಉಳಿದೆಲ್ಲವೂ ಸಣ್ಣದೆನಿಸುತ್ತದೆ. ಯಾರೂ ತಾನು ದೊಡ್ಡವನೆಂದು ಸಮಾಜದಲ್ಲಿ ಕೊಚ್ಚಿಕೊಳ್ಳಬಾರದೆಂಬ ಎಚ್ಚರಿಕೆ ತಕ್ಬೀರ್ ನಲ್ಲಿದೆ. ಅಲ್ಲಾಹನ ಏಕತೆ ಮತ್ತು ಪ್ರವಾದಿತ್ವವನ್ನು ನಿರಂತರ ನೆನಪಿಸುತ್ತದೆ. ಸತ್ಯದರ್ಶನವನ್ನು ನಿರಂತರವಾಗಿ ಮಾನವರಿಗೆ ಕೇಳಿಸುತ್ತಿರಬೇಕೆಂಬುದೂ ಬಾಂಗ್ ಕರೆಯಲ್ಲಿ ಅಡಗಿದೆ.
ವಿಜಯದ ಹಾದಿ, ಪ್ರಾರ್ಥನೆಯ ಹಾದಿ, ನಮಾಝ್‍ನ ಹಾದಿಯೆಂದು ಬಾಂಗ್ ಕರೆ ತಿಳಿಸುತ್ತದೆ. ದೇಹಕ್ಕೂ, ದೇಹದ ಕಾಮನೆಗಳಿಗೂ ಆಚೆ ಆಧ್ಯಾತ್ಮಿಕತೆಯ ಅಗಾಧ ಲೋಕದೆಡೆಗೆ ಕರೆಯುವ ಘೋಷಣೆಯಾಗಿ ಬಾಂಗ್ ಮತ್ತು ಇಕಾಮತ್ ನಮ್ಮನ್ನು ಪ್ರಚೋದಿಸುತ್ತಲೇ ಇರುತ್ತದೆ.
IslamKannada News Portal





