Home / ಲೇಖನಗಳು / ಇಸ್ಲಾಮ್ ಮತ್ತು ಪ್ರಜಾತಂತ್ರ

ಇಸ್ಲಾಮ್ ಮತ್ತು ಪ್ರಜಾತಂತ್ರ

  • ಮುಹಮ್ಮದ್ ಇಸ್ಲಾಮ್

ಇಸ್ಲಾಮ್ ಧರ್ಮದ ವಿರುದ್ಧ ಹಲವಾರು ವರ್ಷಗಳಿಂದ ತಪ್ಪುಕಲ್ಪನೆಗಳ ಪ್ರಚಾರ ನಡೆಯುತ್ತಾ ಬಂದಿದೆ. ಇಂದಿಗೂ ಕೆಲವು ವರ್ತುಲಗಳಲ್ಲಿ ಇಸ್ಲಾಮ್ ಧರ್ಮವು ನಿರಂಕುಶ ಸಿದ್ಧಾಂತದ ವಾಹಕವೆಂದು ಭಾವಿಸಲಾಗುತ್ತಿದೆ. ಕೆಲವು ನಾಮಧಾರಿ ಮುಸ್ಲಿಮರ ದುಷ್ಕ್ರತ್ಯಗಳನ್ನು ಎತ್ತಿ ಹಿಡಿದು ಈ ಸತ್ಯ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಜೋಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಬರಹ.

ಯಾವ ಧರ್ಮವು ಭೂಲೋಕಕ್ಕೆ ಮೊತ್ತ ಮೊದಲು ಪ್ರಜಾ ಪ್ರಭುತ್ವದ ಸಿದ್ಧಾಂತಗಳನ್ನು ಪರಿಚಯಿಸಿತೋ, ಇಂದು ಅದೇ ಧರ್ಮವನ್ನು ನಿರಂಕುಶ ಪ್ರಭುತ್ವದ ಪ್ರತಿಪಾದಕ ಎನ್ನುತ್ತಾ ಅದರ ಅನುಯಾಯಿಗಳನ್ನು ಭಯೋತ್ಪಾದನೆಯ ಜತೆ ಜೋಡಿಸಲಾಗುತ್ತಿದೆ. ನಿಜವೇನೆಂದರೆ, ಇಸ್ಲಾಮ್ ಧರ್ಮವು ನಿರಂಕುಶ ಪ್ರಭುತ್ವವನ್ನು ಕೊನೆಗೊಳಿಸಿ, ಜನತೆಯನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಸಮಾನತೆ ಮತ್ತು ನ್ಯಾಯದ ಮೇಲೆ ಪ್ರಜಾ ರಾಜ್ಯವನ್ನು ಸ್ಥಾಪಿಸುವ ಮಹತ್ಕಾರ್ಯವನ್ನು ಮಾಡಿದ ಮೊತ್ತ ಮೊದಲನೆಯ ಧರ್ಮವಾಗಿದೆ.

ಪ್ರವಾದಿ ಮುಹಮ್ಮದ್‍ರ ಕಾಲದಲ್ಲಿ ಭೂಲೋಕದ ಬಹುತೇಕ ಎಲ್ಲಾ ಭಾಗಗಳಲ್ಲೂ ನಿರಂಕುಶ ಪ್ರಭುಗಳು ಕಾಲ್ಪನಿಕ ದೇವರುಗಳಾಗಿ ಪ್ರಜೆಗಳನ್ನು ತಮ್ಮ ಗುಲಾಮಗಿರಿಯ ಸಂಕೋಲೆಯಲ್ಲಿ ಬಂಧಿಸಿಟ್ಟಿದ್ದರು. ನಿಜವಾಗಿ, ಇಸ್ಲಾಮ್ ತನ್ನ ರಾಜ್ಯಾಡಳಿತ ವ್ಯವಸ್ಥೆಯನ್ನು ‘ಪ್ರಜಾಪ್ರಭುತ್ವ’ ಎಂದು ಘೋಷಿಸಲಿಲ್ಲ. ಆ ಸಮಯದಲ್ಲಿ ಭೂಲೋಕದಲ್ಲಿ ಎಲ್ಲೂ ಪ್ರಜಾಪ್ರಭುತ್ವ ಎಂಬ ರಾಜ್ಯಾಡಳಿತ ವ್ಯವಸ್ಥೆಯ ಕಲ್ಪನೆಯೇ ಇರಲಿಲ್ಲ. ಇಸ್ಲಾಮ್ ತಂದಿರುವ ಆಡಳಿತ ಕ್ರಮದಲ್ಲಿ ಪ್ರಜಾಪ್ರಭುತ್ವದಲ್ಲಿರಬೇಕಾದ ತಾತ್ವಿಕ, ಸೈದ್ಧಾಂತಿಕ, ಕೌಟುಂಬಿಕ, ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನೂ ದೇಶೀಯ, ಅಂತಾರಾಷ್ಟ್ರೀಯ ಹಾಗೂ ಮಾನವೀಯ ಮೌಲ್ಯಗಳನ್ನೂ ಕಾಣಬಹುದಾಗಿದೆ.

ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗಾಗಿರುವ, ಜನರ ರಾಜ್ಯಾಡಳಿತ ವ್ಯವಸ್ಥೆಯಾಗಿದೆ. ಒಂದು ರಾಜ್ಯದ ವ್ಯವಸ್ಥೆಯಲ್ಲಿ ಜಾತಿಯ ಉಚ್ಚ-ನೀಚತೆ, ಮನೆತನದ ಹಿರಿಮೆ, ಸಮುದಾಯಗಳ ಭೇದ, ಶ್ರೀಮಂತ-ಬಡವನೆಂಬ ವ್ಯತ್ಯಾಸ, ಬಹುಸಂಖ್ಯಾತರು-ಅಲ್ಪಸಂಖ್ಯಾತರು ಎಂಬ ತಾರತಮ್ಯವಿದ್ದರೆ ಅಂತಹ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎಂದು ಕರೆಯುವುದಾದರೂ ಹೇಗೆ ಸಾಧ್ಯ?

ನಿಜವೇನೆಂದರೆ, ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನಿಗೆ ವರ್ಗ, ವರ್ಣ, ಜಾತಿ, ಧರ್ಮದ ಭೇದವಿಲ್ಲದೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ನಾಗರಿಕ ಹಕ್ಕುಗಳು ಸಿಗುವಂತಾಗಬೇಕು. ಪ್ರಭಾವಶಾಲಿಗಳು ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುವರು ಎಂಬ ಶಂಕೆ ಅಶಕ್ತರಲ್ಲಿ ಇರಕೂಡದು.
ಈ ಮಾನದಂಡದಂತೆ, ಪ್ರಜಾಪ್ರಭುತ್ವವನ್ನು ಹೆಸರಿಸದೆ ಅತ್ಯುತ್ತಮ ಪ್ರಜಾಡಳಿತ ಕ್ರಮವನ್ನು ಸ್ಥಾಪಿಸಿದ ಮೊತ್ತ ಮೊದಲಿನ ಧರ್ಮವೇ ಇಸ್ಲಾಮ್.

ಮುಹಮ್ಮದ್‍ರು(ಸ) ಪ್ರವಾದಿ ಮಾತ್ರವಲ್ಲ, ಜನರು ಪರಸ್ಪರ ಸೌಹಾರ್ದ, ಸಮಾನತೆ, ಪ್ರೀತಿ-ವಿಶ್ವಾಸದಿಂದ ಜೀವನ ನಡೆಸಲು ಪ್ರೇರೇಪಿಸುವುದರ ಜೊತೆಗೆ ಅವರ ಕೌಟುಂಬಿಕ, ಸಾಮಾಜಿಕ ಮತ್ತು ನೈತಿಕ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಶಿಕ್ಷಣ ಕೊಡುವ ಮಾರ್ಗದರ್ಶಕರೂ ನಾಯಕರೂ ಆಗಿದ್ದರು.

ಮದೀನ ಪಟ್ಟಣದಲ್ಲಿ ಇಸ್ಲಾವಿೂ ರಾಜ್ಯವನ್ನು ಸ್ಥಾಪಿಸಿ, ತಮ್ಮ ಮೇಲೆ ಅವತೀರ್ಣಗೊಳ್ಳುತ್ತಿದ್ದ ದೇವಾದೇಶಗಳಂತೆ ಸಮಾನತೆ ಮತ್ತು ನ್ಯಾಯದ ತಳಹದಿಯ ಮೇಲೆ ಆಡಳಿತ ವ್ಯವಸ್ಥೆಯನ್ನು ಪ್ರವಾದಿಯವರು(ಸ) ನೆಲೆಗೊಳಿಸಿದರು. ಇಸ್ಲಾವಿೂ ಸಂವಿಧಾನದಂತೆ ಪ್ರತಿಯೊಬ್ಬ ಪ್ರಜೆಯು ಹಿರಿಯ-ಕಿರಿಯ, ಧನಿಕ-ಬಡವ, ಮಾಲಕ-ಸೇವಕ, ಸ್ತ್ರೀ-ಪುರುಷ ಎಂಬ ಭೇದವಿಲ್ಲದೆ ತಮ್ಮ ಹಕ್ಕುಗಳನ್ನು ಪಡೆದು ಗೌರವದಿಂದ ಬದುಕುವಂತಾಗಲು ಸೂಕ್ತ ಕಾಯಿದೆ ಕಾನೂನುಗಳನ್ನು ಜಾರಿಗೊಳಿಸಿದರು. ಪ್ರಜೆಗಳ ಜೀವ ಗೌರವ ಮತ್ತು ಸೊತ್ತುಗಳ ದಮನ ಮತ್ತು ಆಕ್ರಮಣವನ್ನು ನಿಷೇಧಿಸಿದರು. ಮಹಿಳೆಗೆ ಹಕ್ಕು, ಅಧಿಕಾರಗಳನ್ನು ನೀಡಿ ಅದನ್ನು ಪಾಲಿಸುವಂತೆ ಕ್ರಮಗಳನ್ನು ಕೈಗೊಂಡರು. ಪತಿ-ಪತ್ನಿ, ಹೆತ್ತವರು-ಮಕ್ಕಳು, ಮಾಲಕ-ಸೇವಕ, ಅಧಿಕಾರಿ-ಜನಸಾಮಾನ್ಯ, ವ್ಯಾಪಾರಿ-ಗಿರಾಕಿ ಹೀಗೆ ವಿವಿಧ ವರ್ಗಗಳ ನಡುವಿನ ಸಂಬಂಧವು ಸಮಾನತೆ, ನ್ಯಾಯ ಮತ್ತು ಗೌರವಾದರದಿಂದ ಕೂಡಿರಬೇಕೆಂದು ಪ್ರವಾದಿ(ಸ) ತನ್ನ ಅನುಯಾಯಿಗಳಿಗೆ ಶಿಕ್ಷಣ ಕೊಟ್ಟರು. ಅವರ ಮಾರ್ಗದರ್ಶನಕ್ಕಾಗಿ ಉದಾತ್ತ ತತ್ವ ವಿಧಿಗಳನ್ನು ಸೂಕ್ತ ರೂಪದಲ್ಲಿ ವ್ಯಕ್ತಪಡಿಸಿದರು. ಇದರಿಂದ ಸಮಾಜದಲ್ಲಿ ಕ್ಷೇಮಕರವಾದ ವಾತಾವರಣ ಉಂಟಾಯಿತು. ನಾಗರಿಕರೆಲ್ಲರೂ ಪರಸ್ಪರ ಸಹಕಾರದಿಂದ ಬಡವರಿಗೂ ನೊಂದವರಿಗೂ ಸಹಾಯಕರಾಗಿ ಒಂದುಗೂಡಿ ಕೆಲಸ ಮಾಡುವಂತೆ ರಾಜ ನೀತಿಯನ್ನು ರೂಪಿಸಿದರು.

ಇಂತಹ ಸತ್ಯ, ಧರ್ಮ, ನ್ಯಾಯ-ನೀತಿ ಮತ್ತು ಮಾನವೀಯ ಸಮಾನತೆಯಿಂದ ಕೂಡಿದ ಇಸ್ಲಾವಿೂ ಆಡಳಿತ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವದ ಅತ್ಯುತ್ತಮ ಸಿದ್ಧಾಂತಗಳನ್ನು ಕಾಣಬಹುದಾಗಿದೆ.

ಪ್ರವಾದಿಯವರ(ಸ) ನಿಧನದ ಬಳಿಕ ಜನರಿಂದ ಆರಿಸಲ್ಪಟ್ಟ ಪ್ರಥಮ ಆಡಳಿತಾಧಿಕಾರಿ (ಖಲೀಫ) ಅಬೂಬಕರ್ ಸಿದ್ದೀಕ್(ರ) ತಮ್ಮ ಮೊತ್ತ ಮೊದಲಿನ ಪ್ರವಚನದಲ್ಲಿ ಹೇಳಿದ ಮಾತುಗಳನ್ನು ಗಮನಿಸಿ-  “ಜನರೇ, ನಾನು ನಿಮ್ಮ ನಾಯಕನಾಗಿ ಆರಿಸಲ್ಪಟ್ಟಿರುವೆನು. ನಾನು ನಿಮಗಿಂತ ಉತ್ತಮನಲ್ಲ. ನಾನು ಒಳ್ಳೆಯ ಕೆಲಸ ಮಾಡಿದರೆ ನನಗೆ ಸಹಾಯ ಮಾಡಿ. ನಾನು ತಪ್ಪು ಮಾಡಿದರೆ ನನ್ನನ್ನು ತಿದ್ದಿ ಸರಿಪಡಿಸಿರಿ. ಸತ್ಯವು ‘ಅಮಾನತ್’ ಆಗಿದೆ. ಮಿಥ್ಯವು ವಂಚನೆಯಾಗಿದೆ. ನಿಮ್ಮಲ್ಲಿ ಯಾರು ದುರ್ಬಲನೋ ಅವನು ನನ್ನ ಬಳಿ ಬಲಶಾಲಿ. ಅವನಿಗಾದ ಹಕ್ಕುಚ್ಯುತಿಯನ್ನು ನಿವಾರಿಸಿ ಅವನಿಗೆ ನ್ಯಾಯ ಕೊಡಿಸುವ ಹೊಣೆಗಾರಿಕೆ ನನ್ನದು. ನಿಮ್ಮಲ್ಲಿ ಬಲಶಾಲಿಯಾದವನು ನನ್ನ ಬಳಿ ದುರ್ಬಲನು. ಅವನು ಕಸಿದಿರುವ ಇತರರ ಹಕ್ಕುಗಳನ್ನು ಅವನಿಂದ ಪಡೆದು ಹಕ್ಕುದಾರನಿಗೆ ಕೊಡುವ ತನಕ ನಾನು ವಿರಮಿಸಲಾರೆ.” ಖಲೀಫರ ಪ್ರವಚನದಲ್ಲಿ ಅವರು ಜನತೆಗೆ ಕೊಟ್ಟ ವಾಗ್ದಾನವು ಇಸ್ಲಾವಿೂ ವ್ಯವಸ್ಥೆಯಲ್ಲಿರುವ ಪ್ರಜಾಪ್ರಭುತ್ವದ ತತ್ವ ಸಿದ್ಧಾಂತಗಳನ್ನು ಸಾರುತ್ತವೆ.

ನಾವು ಗಮನಿಸಬೇಕಾದ ವಿಷಯವೆಂದರೆ ಇಸ್ಲಾವಿೂ ಸಂವಿಧಾನವು ಸೃಷ್ಟಿಕರ್ತನ ಕೊಡುಗೆಯಾಗಿದೆ. ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿ ಮಾನವ ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರವಿದೆ. ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಅಲ್ಲಿಯ ಆಡಳಿತ ಕ್ರಮವು ನ್ಯಾಯಯುತವಾಗಿರಬೇಕು. ಇದಕ್ಕೆ ಬೇಕಾದ ಶಾಸನಗಳು ಇಸ್ಲಾವಿೂ ಸಂವಿಧಾನದಲ್ಲಿದೆ. ಇದರಲ್ಲಿ ಬದಲಾವಣೆ ತರಲು ಯಾರಿಂದಲೂ ಸಾಧ್ಯವಿಲ್ಲ. ಸ್ವತಃ ಪ್ರವಾದಿ(ಸ) ಶಾಸನಬದ್ಧರಾಗಿರುತ್ತಾ ಅನುಯಾಯಿಗಳಿಗೆ ಮಾರ್ಗದರ್ಶಕರಾಗಿದ್ದರು.

ಇಸ್ಲಾವಿೂ ಪ್ರಜಾಪ್ರಭುತ್ವದಲ್ಲಿ ಎಲ್ಲ ಪ್ರಜೆಗಳು ಸಮಾನವಾಗಿ ಭಾಗಿಗಳಾಗುತ್ತಾರೆ. ವ್ಯವಸ್ಥಾಪಕನಲ್ಲಿ ಕುಂದು ಕೊರತೆ ಕಂಡು ಬಂದರೆ ಯಾರೂ ಅದನ್ನು ಆಕ್ಷೇಪಿಸಿ, ಕೊರತೆಯನ್ನು ಸರಿಪಡಿಸಬಹುದಾಗಿದೆ. ನಾಯಕನ ತಪ್ಪನ್ನು ಕಂಡು ಅದನ್ನು ಕಣ್ಣು ಮುಚ್ಚಿ ಸಹಿಸಿದವನು ಪಾಪ ಕಟ್ಟಿಕೊಳ್ಳುತ್ತಾನೆಂದು ಹೇಳಲಾಗಿದೆ.
ಇಸ್ಲಾವಿೂ ಗಣ ರಾಜ್ಯದಲ್ಲಿ ಮುಸ್ಲಿಮೇತರಿಗೆ ಅವರ ಧಾರ್ಮಿಕ ಮತ್ತು ಸಾಮಾಜಿಕ ವ್ಯವಹಾರಗಳಲ್ಲಿ ಅಡ್ಡಿಯಾಗಲೂ ಯಾರಿಗೂ ಅನುಮತಿ ಇಲ್ಲ. ರಾಜ್ಯದ ಕಾರ್ಯಾಂಗದ ಕಾರ್ಯ ವ್ಯವಸ್ಥೆಗೆ ಸಂಬಂಧಿಸಿದ ವಿಷಯದಲ್ಲಿ ಅವರಿಂದ ಸಲಹೆ ಪಡೆಯಬಹುದಾಗಿದೆ. ಎರಡನೇ ಖಲೀಫ ಹ. ಉಮರ್(ರ) ಇರಾಕಿನ ಭೂಕಂದಾಯದ ಸವಿೂಕ್ಷೆಯ ಸಂದರ್ಭದಲ್ಲಿ ಅಲ್ಲಿಯ ಕ್ರೈಸ್ತ ನಾಗರಿಕರ ಸಲಹೆ ಪಡೆದಿದ್ದರೆಂದು ಇಸ್ಲಾವಿೂ ಚರಿತ್ರೆಯಲ್ಲಿ ಕಂಡು ಬರುತ್ತದೆ.

ಇಸ್ಲಾವಿೂ ಗಣರಾಜ್ಯದ ವೈಶಿಷ್ಟ್ಯವೇನೆಂದರೆ ಅದು ಅಲ್ಪಸಂಖ್ಯಾತರನ್ನು ಬಹುಸಂಖ್ಯಾತರ ಅಧೀನರಾಗಿರುವಂತೆ ಬಯಸುವುದಿಲ್ಲ. ಮಾತ್ರವಲ್ಲ, ಧಾರ್ಮಿಕ, ಸಾಮಾಜಿಕ ಅಥವಾ ಭಾಷಾವಾರು ಗುಂಪು ಅದು ಅಲ್ಪಸಂಖ್ಯಾತವಾದ ಕಾರಣಕ್ಕಾಗಿ ಬಹುಸಂಖ್ಯಾತರ ತೀರ್ಪುಗಳನ್ನು ಸ್ವೀಕರಿಸಲು ಒತ್ತಾಯಿಸುವುದಿಲ್ಲ. ಅಲ್ಪಸಂಖ್ಯಾತ ಗುಂಪುಗಳು ತಮ್ಮ ತಮ್ಮ ನಂಬಿಕೆ ಮತ್ತು ಸಂಪ್ರದಾಯಗಳನ್ನು ಆಚರಿಸಲು ಸ್ವತಂತ್ರರಾಗಿರುತ್ತಾರೆ. ಆದರೆ ಅವರು ದೇಶದ ಆಡಳಿತ ವ್ಯವಸ್ಥೆಯ ಕಾನೂನುಗಳನ್ನು ಪಾಲಿಸಲು ಬದ್ಧರಾಗಿರುತ್ತಾರೆ. ಆಡಳಿತ ವ್ಯವಸ್ಥೆಯ ಶಾಸನ ಕಾಯಿದೆ ಕಾನೂನುಗಳ ಪಾಲನೆಯಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರಲ್ಲಿ ಯಾವ ತಾರತಮ್ಯವೂ ಇರುವುದಿಲ್ಲ.

ಉಮರ್‍ ರನ್ನು(ಸ) ಎರಡನೇ ಖಲೀಫರಾಗಿ ಆರಿಸಲಾದಾಗ, ಅವರು ಕಠಿಣ ಸ್ವಭಾವದವರೆಂದು ಕೆಲವು ಹಿರಿಯ ಅನುಯಾಯಿಗಳಲ್ಲಿ ಆತಂಕ ಉಂಟಾಯಿತು. ಆದರೆ ಉಮರ್(ರ) ತಮ್ಮ ಪ್ರವಚನದಲ್ಲಿ ಪ್ರಜೆಗಳ ಹಕ್ಕು-ಬಾಧ್ಯತೆಗಳನ್ನು ವಿವರಿಸುತ್ತಾ, “ಜನರೇ, ನೀವು ನನಗೆ ಒಳಿತಿನ ಆದೇಶ ಕೊಡುವವರೂ ಕೆಡುಕಿನಿಂದ ತಡೆಯುವವರೂ ಆಗಬೇಕು. ದೇವನು ನನ್ನ ಮೇಲೆ ಹೇರಿದ ಹೊಣೆಗಾರಿಕೆಯನ್ನು ನಿಭಾಯಿಸಲು ನೀವೇ ನನ್ನ ಹಿತಚಿಂತಕರಾಗಿ ನನಗೆ ಉಪದೇಶ ಕೊಡಬೇಕು” ಎಂದು ಹೇಳಿದರು.

ಇಸ್ಲಾಮ್ ತನ್ನ ರಾಜ್ಯದ ಆಡಳಿತ ವ್ಯವಸ್ಥೆಯನ್ನು ಪ್ರಜಾ ಪ್ರಭುತ್ವವೆಂದು ನಾಮಕರಣ ಮಾಡಲಿಲ್ಲ. ಇಸ್ಲಾವಿೂ ಸಂವಿಧಾನವು ತನ್ನ ಸ್ವಭಾವ, ಸಿದ್ಧಾಂತ ಮತ್ತು ಕಾರ್ಯವಿಧಾನಗಳಿಂದಾಗಿ ಅತೀ ಉತ್ತಮ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಾಗಿದೆ. ನಿಜವೇನೆಂದರೆ, ಭೂಲೋಕವು ಪ್ರಜಾಪ್ರಭುತ್ವದ ಪಾಠವನ್ನು ಇಸ್ಲಾಮಿನಿಂದಲೇ ಕಲಿಯಿತು. ಇದರ ಮೊದಲು ಇಂತಹ ಒಂದು ವ್ಯವಸ್ಥೆಯ ಕಲ್ಪನೆಯೇ ಜನರಲ್ಲಿ ಇರಲಿಲ್ಲ.

ಯುರೋಪಿನ ಗಣ ರಾಜ್ಯಗಳ ಮುತ್ಸದ್ಧಿಗಳೂ ರಾಜ ನೀತಿಜ್ಞರೂ ಇಸ್ಲಾಮ್ ಧರ್ಮವು ಲೋಕಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪರಿಚಯಿಸಿತೆಂದು ಅಭಿಪ್ರಾಯ ವ್ಯಕ್ತಪಡಿಸಿರುವರು. ಲಂಡನ್‍ನ ಪ್ರಸಿದ್ಧ ಇತಿಹಾಸಕಾರರೂ ರಾಜ ನೀತಿಶಾಸ್ತ್ರ ಪ್ರವೀಣರೂ ಆದ ಹಾರ್ಡಿಯವರು, “ಒಂದು ವೇಳೆ ಇಸ್ಲಾಮ್ ಧರ್ಮವು ಪ್ರಜಾಡಳಿತ ಕ್ರಮವನ್ನು ಲೋಕದ ಜನತೆಗೆ ಪರಿಚಯಿಸದೆ ಇರುತ್ತಿದ್ದರೆ ಈ ಲೋಕವು ನಿರಂಕುಶ ಪ್ರಭುತ್ವದ ಹಿಡಿತದಿಂದ ಬಿಡುಗಡೆ ಹೊಂದಲು ಅಸಾಧ್ಯವಾಗುತ್ತಿತ್ತು” ಎಂದಿರುವರು.

 

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …