@ ಎಸ್ಸೆಮ್ಕೆ
ಅನುವಾದ: ಸಲ್ಪಿತ
ಪುರಾತನ ಕಾಲದಲ್ಲಿ ಈಜಿಪ್ಟ್ ಭಾರೀ ಪ್ರಸಿದ್ಧಿ ಪಡೆದ ದೇಶವಾಗಿತ್ತು. ಆ ದೇಶವನ್ನು ಆಳುತ್ತಿದ್ದ ರಾಜರನ್ನು`ಫರೋವ’ ಎಂದು ಕರೆಯುತ್ತಿದ್ದರು. ಈ ಫರೋವಗಳು ಸೂರ್ಯನ ಅವತಾರವೆಂದೂ, ಪ್ರತಿರೂಪವೆಂದೂ ಜನರು ನಂಬಿದ್ದರು. ಹಾಗೆಯೇ ವಿಶ್ವಾಸ ತಾಳುವಂತೆ ಈ ದೊರೆಗಳು ಮಾಡಿದ್ದರು. ಒತ್ತಾಯಿಸಿದ್ದರು. ಇಂತಹ ಓರ್ವ ಫರೋವನ ಕತೆ ಪವಿತ್ರ ಕುರ್ಆನ್ ವಿವರಿಸಿದೆ.
ತೀವ್ರವಾದ ಕೋಮು, ಮತಾಂಧತೆ ಹೊಂದಿದ್ದ ಕೋಪ್ಟ್ ವಂಶಸ್ತರು ಈಜಿಪ್ಟ್ ನಲ್ಲಿ ಮೇಧಾವಿತ್ವ ಹೊಂದಿದ್ದರು. ಈ ದೇಶದ ನೈಜ ಹಕ್ಕುದಾರರು ನಾವು ಎಂದು ಅವರು ಹೇಳುತ್ತಿದ್ದರು. ಅಲ್ಲಿ ವಾಸಿಸುತ್ತಿದ್ದ ಇಸ್ರಾಈಲರು ಹೊರ ದೇಶದಿಂದ ಬಂದವರೆಂದು ಹೇಳುತ್ತಾ ಅವರ ಮೇಲೆ ತೀವ್ರ ದೌರ್ಜನ್ಯ ಹಿಂಸೆ ನಡೆಸ ತೊಡಗಿದರು. ಹೀಗೆ ಅವರ ಸಂಪೂರ್ಣ ದಮನಕ್ಕೆ ಈ ಫರೋವಗಳು ನೇತೃತ್ವ ವಹಿಸಿದ್ದರು. ಇಸ್ರಾಈಲರು ತನ್ನ ಹಾಗೂ ತನ್ನ ವಂಶದ ನಾಶಕ್ಕೆ ಕಾರಣವಾಗಬಹುದೆಂದು ಅವರು ಭಯ ಪಟ್ಟರು. ಅದಕ್ಕಾಗಿ ಅವರು ಅಲ್ಲಿ ಹುಟ್ಟುವ ಗಂಡು ಮಕ್ಕಳನ್ನು ಕೊಂದು ಹಾಕತೊಡಗಿದರು.
ಅತ್ಯಂತ ಕೆಟ್ಟ ಆಡಳಿತಗಾರ ಸರ್ವಾಧಿಕಾರಿಯಾಗಿದ್ದ ಮರ್ದಕ ಫರೋವ ಒಮ್ಮೆ ತನ್ನ ಜನರೊಂದಿಗೆ “ಈಜಿಪ್ಟ್ ನ ಸಂಪೂರ್ಣ ಒಡೆತನ ನನ್ನದು ಅಲ್ಲವೇ? ಈ ನದಿಗಳು ನನ್ನ ಅಧೀನದಲ್ಲಿ ಹರಿಯುತ್ತಿದೆಯಲ್ಲವೇ? ನನ್ನ ಹೊರತು ಬೇರೆ ಯಾವ ದೇವರು ನಿಮಗಿರುವುದಾಗಿ ನನಗೆ ತಿಳಿದಿಲ್ಲ. ನಾನು ನಿಮ್ಮ ಪರಮೋಚ್ಚ ನಾಯಕ” ಎಂದು ಅಹಂಕಾರದಿಂದ ಹೇಳಿದ್ದನು.
ಇಂತಹ ಸಂದರ್ಭದಲ್ಲಿ ಫರೋವ ಸಹಿತ ಅಲ್ಲಿನ ಜನರಿಗೆ ಸತ್ಯ ಏನೆಂಬುದನ್ನು ತಿಳಿಸಿಕೊಡಲು ಮತ್ತು ಇಸ್ರಾಈಲರನ್ನು ಅವನಿಂದ ವಿಮೋಚಿಸಲು ಸಂದೇಶವಾಹಕರಾಗಿ ಅಲ್ಲಾಹನು ಪ್ರವಾದಿ ಮೂಸಾ(ಅ)ರನ್ನು ನಿಯೋಜಿಸಿದನು. ತಾನು ದೇವ ಸಂದೇಶವಾಹಕನೆಂದು ಜನರಿಗೆ ಮನನ ಮಾಡಲು ಅಲ್ಲಾಹನು ಅವರಿಗೆ ಕೆಲವು ವಿಶೇಷ ಪವಾಡದ ಸಾಮಥ್ರ್ಯವನ್ನು ಕಲ್ಪಿಸಿದನು. ಅವರು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸಿ ಅದರತ್ತ ಜನರನ್ನು ಆಹ್ವಾನಿಸಿದರು. ಆದರೆ ಇದು ಯಾವುದನ್ನೂ ಫರೋವ ಮತ್ತು ಆತನ ಸಹಚರರು ಸ್ವೀಕರಿಸಲಿಲ್ಲ. ಅವರು ಪ್ರವಾದಿ ಮೂಸಾರನ್ನು(ಅ) ನಿಂದಿಸಿ ಸುಳ್ಳನೆಂದು ಅವಮಾನಿಸಿದರು.
ಒಮ್ಮೆ ಒಂದು ಸಂವಾದ ಏರ್ಪಡಿಸಿದ ಪರೋವ, ಪ್ರವಾದಿ ಮೂಸಾ(ಅ)ರ ಪವಾಡಕ್ಕೆ ಸವಾಲು ಹಾಕಿದನು. ಕೊನೆಗೆ ಅದೊಂದು ಸ್ಪರ್ಧೆಯ ಹಂತಕ್ಕೆ ತಲುಪಿತು. ಒಂದೆಡೆ ಫರೋವನ ಪರವಾಗಿ ಜಾದೂಗಾರರ ತಂಡವೇ ಆಗಮಿಸಿತ್ತು. ಮತ್ತೊಂದೆಡೆ ಪ್ರವಾದಿ, ಮೂಸಾ(ಅ) ಇದ್ದರು. ಬಹಳ ಬೇಗ ಪ್ರವಾದಿ ಮೂಸಾ ಗೆದ್ದು ಜಯಶಾಲಿಯಾದರು. ಇದರೊಂದಿಗೆ ಫರೋವನ ಪರವಾಗಿದ್ದ ಜಾದೂಗಾರರು ಮೂಸಾರ ಜೊತೆ ಸೇರಿ ವಿಶ್ವಾಸವಿಟ್ಟರು. ಇದು ಫರೋವನನ್ನು ತೀವ್ರವಾಗಿ ಕೆರಳಿಸಿತು. ಆತ ಅವಮಾನದಿಂದ ಕುದಿಯ ತೊಡಗಿದ. ಸತ್ಯ ಸಂದೇಶ ಸ್ವೀಕರಿಸಿದ ಜಾದೂಗಾರರ ಕೈಕಾಲುಗಳನ್ನು ಕಡಿದು ಹಾಕುವೆನೆಂದೂ, ನೇಣಿಗೆ ಹಾಕುವೆನೆಂದೂ ಘೋಷಿಸಿದನು. ಗುಲಾಮರಂತೆ ತಾನು ಹೇಳಿದ್ದೆಲ್ಲವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದ ಆ ಜಾದೂಗಾರರು ಫರೋವನ ಆದೇಶಗಳನ್ನು ತಳ್ಳಿ ಹಾಕಿ ಧಿಕ್ಕರಿಸಿದರು. ಪರಲೋಕ ವಿಶ್ವಾಸ ಮತ್ತು ದೇವನಲ್ಲಿ ದೃಢವಾದ ನಂಬಿಕೆ ನೀಡುವ ಧೈರ್ಯವು ಅಸಾಮಾನ್ಯವಾದುದು. ಜಾದೂಗಾರರು ಹೇಳಿದರು, “ನಿನಗೇನು ಮಾಡಲು ಸಾಧ್ಯವೋ ಅದನ್ನು ಮಾಡು. ನೀನು ಈ ಇಹಲೋಕದಲ್ಲಿ ಮಾತ್ರ ಶಿಕ್ಷಿಸಬಲ್ಲೆ.”
ಫರೋವ ನಿಂದ್ಯನಾದನು. ಕೊನೆಗೆ ತನ್ನ ಬಾಳ ಸಂಗಾತಿ ಪತ್ನಿಯನ್ನು ಕೂಡಾ ತನ್ನ ಪರ ನಿಲ್ಲಿಸಲು ಅವನಿಂದ ಆಗಲಿಲ್ಲ. ಅವರೆಲ್ಲರೂ ಪ್ರವಾದಿ ಮೂಸಾ(ಅ)ರನ್ನು ಬೆಂಬಲಿಸಿದರು. ಇದರಿಂದ ಕ್ರುದ್ಧನಾದ ಫರೋವ ಅವರನ್ನು ತೀವ್ರವಾಗಿ ಹಿಂಸಿಸಿದನು. ಆದರೂ ಅವರು ಯಾರೂ ಇದಕ್ಕೆ ಬಗ್ಗಲಿಲ್ಲ. ಫರೋವನ ಬೆದರಿಕೆ, ಹಿಂಸೆ ದೌರ್ಜನ್ಯಗಳೆಲ್ಲವನ್ನೂ ಅವರು ತಿರಸ್ಕರಿಸಿದರು. ಸ್ವತಃ ದೇವನೆಂದು ಘೋಷಿಸಿದ ಫರೋವ ಕೊನೆಗೆ ತನ್ನ ಪತ್ನಿ ಕೂಡಾ ತನ್ನ ಪರ ಇರದಂತೆ ನಿಂದ್ಯನಾದನು.
ಕೊನೆಗೆ ಮುಳುಗಿ ಸಾಯುವಾಗ ಕೊನೆಯ ನಿಮಿಷದವರೆಗೂ ಪ್ರವಾದಿ ಮೂಸಾರ(ಅ) ಕಠಿಣ ಶತ್ರುವಾಗಿದ್ದ ಆತ ಅಂತಿಮವಾಗಿ ಮೂಸಾ(ಅ)ರಲ್ಲಿ ವಿಶ್ವಾಸವಿಡುವುದಾಗಿ ಘೋಷಿಸಿದ. ಆದರೆ ಅದು ವ್ಯರ್ಥವಾಯಿತು. ಹೀಗೇ ಭೂಮಿಯಲ್ಲಿ ಫರೋವ ಅಹಂಕಾರದಿಂದ ವರ್ತಿಸಿ ಅತ್ಯಂತ ನಿಂದಿತನಾದನು. ಅಂದಿನಿಂದ ಇಂದಿನ ತನಕದ ಸಜ್ಜನರ ಕೋಪ ಶಾಪಕ್ಕೆ ಗುರಿಯಾದನು. ಇನ್ನು ಪರಲೋಕದಲ್ಲಿಯೂ ಆತ ಅಲ್ಲಾಹನ ಕಠಿಣ ಶಿಕ್ಷೆಗೆ ಗುರಿಯಾಗುವನು.
IslamKannada News Portal
