Home / ಲೇಖನಗಳು / ಭಯ ಆತಂಕ ಹೆಚ್ಚಾದಾಗ…

ಭಯ ಆತಂಕ ಹೆಚ್ಚಾದಾಗ…

  • @ ಮುಹಮ್ಮದ್ ಯೂಸುಫ್ ಇಸ್ಲಾಹಿ

ಮಾನವೀಯ ವಿರೋಧಿಗಳು ಕೊಲೆ, ಅತಿಕ್ರಮ ನಡೆಸಿ ಬೆದರಿಸುವಾಗ ಅಥವಾ ಪ್ರಕೃತಿ ದುರಂತಗಳು ನಮ್ಮನ್ನು ಭಯವಿಹ್ವಲಗೊಳಿಸುವಾಗ ನಮ್ಮ ವಿಶ್ವಾಸದ ಆಂತರಿಕ ದೃಷ್ಟಿಕೋನದೊಂದಿಗೆ ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳಬೇಕು. ಬಳಿಕ ಕೆಲವು ಔಪಚಾರಿಕ ಯೋಜನೆಗಳಿಗಾಗಿ ಸಮಯ ವ್ಯಯಿಸುವ ಬದಲು ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯು ನೀಡುವ ಮಾರ್ಗದರ್ಶನದೆಡೆಗೆ ನಮ್ಮ ಗಮನ ಕೇಂದ್ರೀಕರಿಸಬೇಕು.

ಕುರ್‍ಆನ್ ಹೇಳುತ್ತದೆ: “ನಿಮಗೆ ಒದಗಿರುವ ಯಾವುದೇ ಸಂಕಷ್ಟವು ನಿಮ್ಮ ಕೈಗಳ ಗಳಿಕೆಯಿಂದಲೇ ಆಗಿದೆ. ಅನೇಕ ಪಾಪಗಳನ್ನೂ ಅವನು ಹಾಗೆಯೇ ಕ್ಷಮಿಸಿ ಬಿಡುತ್ತಾನೆ.” (ಅಶ್ಶೂರಾ: 30) ಅದಕ್ಕೆ ಚಿಕಿತ್ಸೆಯೆಂದು ಕುರ್‍ಆನ್ ಹೇಳುವುದು ಹೀಗೆ: “ಸತ್ಯವಿಶ್ವಾಸಿಗಳೇ ನೀವೆಲ್ಲರೂ ಸೇರಿ ಅಲ್ಲಾಹನೊಡನೆ ಕ್ಷಮಾಯಾಚನೆ ಮಾಡಿರಿ. ನಿಮಗೆ ಯಶಸ್ಸು  ಪ್ರಾಪ್ತಿಯಾಗಲೂಬಹುದು.

ತಾನು ಮಾಡಿರುವ ಪಾಪಗಳ ಕಾರಣದಿಂದ ಅಧಃಪತನವಾಗಿರುವ ಸಮುದಾಯವು, ತಾನು ಮಾಡಿರುವ ಪಾಪಗಳನ್ನು ಮನವರಿಕೆ ಮಾಡಿ ಕೊಂಡು, ಅಲ್ಲಾಹನೆಡೆಗೆ ದುಃಖಿಸಿ,  ಪಶ್ಚಾತ್ತಾಪ ಪಟ್ಟು ಜೀವನವನ್ನು ಪಾಪ ಮುಕ್ತಗೊಳಿಸಿ, ದೇವನೊಂದಿಗಿನ ಕರಾರನ್ನು ಪೂರ್ತಿಗೊಳಿಸುವುದನ್ನು ಪವಿತ್ರ ಕುರ್‍ಆನ್ ತೌಬಾ ಎಂದು ವಿಶ್ಲೇಷಿಸಿದೆ. ಆ ತೌಬಾ ಮತ್ತು ಪಾಪ ವಿಮೋಚನೆಯೇ  ಎಲ್ಲಾ ರೀತಿಯ ಭಯ, ಹೆದರಿಕೆಯಿಂದ ನಮ್ಮನ್ನು ಮುಕ್ತಗೊಳಿಸುವ ನೈಜ ದೇವ ಚಿಕಿತ್ಸೆಯಾಗಿದೆ.

ಶತ್ರುಗಳು ಸೃಷ್ಟಿಸುವ ಅನ್ಯಾಯ ಅಕ್ರಮಗಳಿಂದ ಪರಿಭ್ರಾಂತರಾಗಿ ನಮ್ಮ ಮನೋಸ್ಥೈರ್ಯ ಕೆಟ್ಟು ಕರುಣೆ ಇಲ್ಲದ ಜನರೊಂದಿಗೆ ಅನುಕಂಪವನ್ನು ಬೇಡುವ ಹೀನ ಜೀವನ ನಮ್ಮದಾಗಬಾರದು. ಅಂತಹ  ದೌರ್ಬಲ್ಯಗಳನ್ನು ನಿಯಂತ್ರಿಸುವ ಶತ್ರುವಿಗೆ ನಮ್ಮನ್ನು ಸೋಲಿಸಲು ಸಾಧ್ಯವಾಗದ ರೀತಿಯಲ್ಲಿ ಇಚ್ಛಾಶಕ್ತಿಯನ್ನು ಗಳಿಸಿಕೊಳ್ಳಬೇಕು. ಇಹಲೋಕ ಪ್ರೇಮ ಮತ್ತು ಮರಣದ ಭಯ ಇದುವೇ ಸತ್ಯವಿಶ್ವಾಸಿಯನ್ನು ಬಾಧಿಸುವ ಮುಖ್ಯ ದೌರ್ಬಲ್ಯ ಗಳೆಂದು ಪ್ರವಾದಿ(ಸ)ರು ಹೇಳಿರುವರು. ಆ ರೋಗಗಳನ್ನು ಸ್ವಂತವಾಗಿಯೂ ಮತ್ತು ಸಮುದಾಯದಿಂದಲೂ ಹೋಗಲಾಡಿಸಬೇಕು.

ಪ್ರವಾದಿಯವರು (ಸ) ಹೇಳಿದರು! “ಅನ್ನದ ಪಾತ್ರೆಗೆ ಹಸಿದವರು ಮುಗಿ ಬೀಳುವಂತೆ ನಿಮ್ಮ ಮೇಲೆ ಇತರ ಸಮುದಾಯಗಳು ಮುಗಿ ಬೀಳಲಿವೆ.” ಓರ್ವರು ಪ್ರಶ್ನಿಸಿದರು, ಅಂದು ನಾವು ಕಡಿಮೆ ಸಂಖ್ಯೆಯಲ್ಲಿರುವೆವೇ?  ಆಗ ಪ್ರವಾದಿಯವರು(ಸ) ಹೇಳಿದರು, “ಸಂಖ್ಯೆಯಲ್ಲಿ ಕಡಿಮೆ ಇರುವುದಿಲ್ಲ. ಆದರೆ ನೀರಿನಲ್ಲಿ ಹರಿದು ಹೋಗುವ ಕಸಕಡ್ಡಿಗಳಂತೆ ಸ್ವಲ್ಪವೂ ಬೆಲೆಯಿಲ್ಲದವರಾಗಿರುವಿರಿ. ನಿಮ್ಮನ್ನು ಒಂದು ರೀತಿಯ ಭಯ ಮತ್ತು ದೌರ್ಬಲ್ಯವು ಆವರಿಸಿರುವುದು.” ಪ್ರವಾದಿ(ಸ) ರೊಡನೆ ಓರ್ವರು ಕೇಳಿದರು, “ಆ ದೌರ್ಬಲ್ಯವು ಹೇಗೆ ಉಂಟಾಗುತ್ತದೆ?” ಇಹಲೋಕ ಪ್ರೇಮ ಮತ್ತು ಮರಣ ಭಯವೇ ಆ ದೌರ್ಬಲ್ಯ ಉಂಟಾಗಲು ಕಾರಣ ಎಂದು ಪ್ರವಾದಿಯವರು(ಸ) ಉತ್ತರಿಸುತ್ತಾರೆ.

ಸಂಘಟನಾತ್ಮಕ ಶಕ್ತಿಯಾಗಲು ಪ್ರಯತ್ನಿಸಬೇಕು. ಅದರಿಂದ ಸಮಸ್ಯೆಗಳು ಅನ್ಯಾಯ ಅಕ್ರಮಗಳು ಕೊನೆಗೊಳ್ಳಲು ಸಾಧ್ಯವಾಗುತ್ತದೆ. ಸಮುದಾಯಕ್ಕೆ ಧೈರ್ಯವನ್ನು ಗಳಿಸಿಕೊಡಬೇಕು.

ಪರಿಸ್ಥಿತಿ ಎಷ್ಟೇ ಪ್ರತಿಕೂಲವಾದರೂ ಸತ್ಯಕ್ಕಾಗಿ ಹೋರಾಡುವುದರಿಂದ ಸ್ವಲ್ಪವೂ ಹಿಂಜರಿಯಬಾರದು. ಅಭಿಮಾನ ಮತ್ತು ಧರ್ಮವನ್ನು ಬಿಟ್ಟು ಬದುಕುವುದಕ್ಕಿಂತ ಹುತಾತ್ಮರಾಗುವುದೇ ಹೆಚ್ಚು ಮಹತ್ವದ್ದು. ಕಷ್ಟಕರ ಪರೀಕ್ಷೆಗಳು, ಅತ್ಯಂತ ಭಯಾನಕ ವಾತಾವರಣ ಸೃಷ್ಟಿಯಾದರೂ ಸತ್ಯದ ಹಾದಿಯಲ್ಲೇ ದೃಢವಾಗಬೇಕು. ಯಾರಾದರೂ ಕೊಲ್ಲುತ್ತೇವೆಂದು ಭಯಪಡಿಸಿದರೆ ಹಸನ್ಮುಖಿಯಾಗಿ ಸತ್ಯ ಧರ್ಮಕ್ಕಾಗಿ ಅವರೊಂದಿಗೆ ಹೋರಾಟ ನಡೆಸಿರಿ.

ಪ್ರವಾದಿಯವರು(ಸ) ಹೇಳಿರುವರು, ಇಸ್ಲಾಮಿನ ಹಾರ ನಿಮ್ಮ ಕೊರಳಿಗೆ ಬೀಳುವುದು. ಕುರ್‍ಆನ್ ಯಾವ ದಿಕ್ಕಿಗೆ ಚಲಿಸಲು ಹೇಳಿದೆಯೋ ಅದೇ ದಿಕ್ಕಿಗೆ ಚಲಿಸಿರಿ.  ಪ್ರಜ್ಞಾವಂತರಾಗಿ ಬಾಳಿ. ಕುರ್‍ಆನ್ ಮತ್ತು ಅಧಿಕಾರ ಹೆಚ್ಚು ಸಮಯವಿಲ್ಲದೆಯೇ ಬೇರ್ಪಡುವ ಸಾಧ್ಯತೆಯಿದೆ. ಭವಿಷ್ಯದಲ್ಲಿ ಬರಲಿರುವ ಆಡಳಿತಗಾರರು ನೀವು ಅವರನ್ನು ಅನುಸರಿಸುವವರೆಗೆ ಸತ್ಯಮಾರ್ಗದಿಂದ ನಿಮ್ಮನ್ನು ಹಾದಿ ತಪ್ಪಿಸುತ್ತಲಿರುತ್ತಾರೆ. ಇನ್ನು ನೀವು ಅವರನ್ನು ಅನುಸರಿಸದಿದ್ದರೆ ಮರಣದ ಶಿಕ್ಷೆಯನ್ನು ನಿಮಗೆ ನೀಡುವರು.

ಆಗ ಓರ್ವ ಅನುಚರರು ಪ್ರಶ್ನಿಸಿದರು: “ಆಗ ನಾವು ಏನು ಮಾಡಬೇಕು ಪ್ರವಾದಿವರ್ಯರೇ(ಸ)?” ಅವರು ಹೇಳಿದರು: “ಈಸಾ(ಅ)ರ ಅನುಯಾಯಿಗಳು ಮಾಡಿದ ಕಾರ್ಯವನ್ನು ನೀವು ಮಾಡಬೇಕು. ಅವರು ಗರಗಸದಿಂದ ಛೇದಿಸಲ್ಪಟ್ಟರು. ಶವ  ಮಂಚಕ್ಕೆ ತಲುಪಲ್ಪಟ್ಟರು.” ದೇವ ಧಿಕ್ಕಾರಿಯೊಂದಿಗೆ ಬದುಕುವುದಕ್ಕಿಂತ ದೇವನನ್ನು ಅನುಸರಿಸಿ ಆ ಮಾರ್ಗದಲ್ಲಿ ಜೀವವನ್ನು ಅರ್ಪಿಸುವುದು ಉತ್ತಮ. ಸಮೂಹದಲ್ಲಿ ಭಯ, ಆತಂಕ ವ್ಯಾಪಕಗೊಳಿಸುವ ಸಾಮಾಜಿಕ ರೋಗಗಳ ವಿರುದ್ಧ ನಾವು ನಿರಂತರ ಹೋರಾಡುತ್ತಲೇ ಇರಬೇಕು. ಇಲ್ಲದಿದ್ದರೆ ದಾರಿದ್ರ್ಯ, ಬರಗಾಲ, ಸೋಂಕು, ಶತ್ರುವಿನ ದಬ್ಬಾಳಿಕೆ ಎಲ್ಲವೂ ಈ ಸಮೂಹವನ್ನು ಹಿಡಿದುಕೊಳ್ಳುವುದು. ಅಬ್ದುಲ್ಲಾ ಇಬ್ನು ಅಬ್ಬಾಸ್(ರ) ಹೇಳಿದರು: “ಪರಸ್ಪರ ವಂಚನೆ ತುಂಬಿದ ಸಮೂಹದ ಹೃದಯದಲ್ಲಿ ಶತ್ರುಗಳ ಭಯ ಮತ್ತು ಭೀತಿಯೂ ವರ್ಧಿಸುತ್ತದೆ.”

ವ್ಯಭಿಚಾರ ವ್ಯಾಪಕವಾಗಿರುವ ಒಂದು ಸಮೂಹ ವಿನಾಶದೆಡೆಗೆ ಸಾಗುವುದು. ಕೊಡು ಕೊಳ್ಳುವಿಕೆಯಲ್ಲಿ ಪ್ರಾಮಾಣಿಕತೆ ಕಳಕೊಂಡ ಸಮೂಹವನ್ನು ದಾರಿದ್ರ್ಯವು ಹಿಡಿದುಕೊಳ್ಲುವುದು. ಕರಾರು  ಉಲ್ಲಂಘಿಸುವ ಸಮೂಹದಲ್ಲಿ ಶತ್ರುಗಳು ಹಿಡಿತ ಸಾಧಿಸುವರು. (ಮಿಶ್ಕಾತ್)

ಶತ್ರುಗಳಿಂದ ಭಯ ಉಂಟಾದರೆ ಹೀಗೆ ಪ್ರಾರ್ಥಿಸಿ: “ಅಲ್ಲಾಹುಮ್ಮ ಇನ್ನಾ ನಜ್ ಅಲುಕ ಫೀ ನುಹೂರಿಹಿಮ್, ವನವೂಝುಬಿಕ ಮಿನ್ ಶುರೂರಿಹಿಂ” (ಅಬೂದಾವೂದ್) ನಸಾಈ- ಅಲ್ಲಾಹನೇ, ಈ  ಶತ್ರುಗಳ ವಿರುದ್ಧ ನಾವು ನಿನ್ನೊಡನೆ ಮಾತ್ರ ಅಭಯ ಯಾಚಿಸುತ್ತೇವೆ. ಅವರ ಕೇಡಿನಿಂದಲೂ, ಕುತಂತ್ರದಿಂದಲೂ ರಕ್ಷಣೆ ಹೊಂದಲು ನಿನ್ನೊಂದಿಗೆಯೇ ಸಹಾಯ ಬೇಡುತ್ತೇವೆ.

ಶತ್ರುಗಳ ಕುತಂತ್ರಕ್ಕೆ ಬಲಿಯಾಗುವಾಗ, “ಅಲ್ಲಾಹುಮ್ಮ ಇಸ್ತುರ್ ಔರಾತಿನಾ ವ ಆಮಿನ್ ರೌಆತಿನಾ” (ಅಹ್ಮದ್-ದೇವನೇ) ನಮ್ಮ ಅಭಿಮಾನ, ಸ್ಥಾನ ಮಾನವನ್ನು ಸಂರಕ್ಷಿಸಬೇಕು. ದುಃಖ ಹಾಗೂ ಭಯದಿಂದ ನಮಗೆ ಶಾಂತಿ ಸಮಾಧಾನವನ್ನು ನೀಡಬೇಕು ಎಂದು ಪ್ರಾರ್ಥಿಸಬೇಕು.

ಬಿರುಗಾಳಿ ಮತ್ತು ಪ್ರಳಯ ನಮ್ಮಲ್ಲಿ ಆತಂಕ ಸೃಷ್ಟಿಸಬೇಕು. ಆಯಿಶಾ(ರ)ರು ಉಲ್ಲೇಖಿಸಿದ್ದಾರೆ. ಬಾಯಿ ಸಂಪೂರ್ಣವಾಗಿ ತೆರೆದು ಪ್ರವಾದಿ(ಸ)ರು ನಗುವುದನ್ನು ನಾನು ನೋಡಿಲ್ಲ. ಅವರು ಕೇವಲ ಮುಗುಳ್ನಗುತ್ತಿದ್ದರು. ಆದರೆ ಬಿರುಗಾಳಿಯೋ ಅಥವಾ ಇನ್ನೇನಾದರೂ ಅಪಾಯ ಕಂಡರೆ ಪ್ರಾರ್ಥನೆಯಲ್ಲಿ ಮುಳುಗುತ್ತಿದ್ದರು. ಭಯದಿಂದ ಒಮ್ಮೊಮ್ಮೆ ಕುಳಿತುಕೊಳ್ಳುತ್ತಿದ್ದರು. ಇನ್ನು ಕೆಲವೊಮ್ಮೆ ನಡೆದಾಡುತ್ತಿದ್ದರು. ಮಳೆ ಸುರಿಯುವವರೆಗೂ ಅವರು ಇದೇ ಅವಸ್ಥೆಯಲ್ಲಿ ಇರುತ್ತಿದ್ದರು. ನಾನು ಕೇಳಿದೆ, ಪ್ರವಾದಿವರ್ಯರೇ, ಮೋಡಗಳನ್ನು ಕಾಣುವಾಗ ಮಳೆ ಬರುತ್ತದೆ ಎಂಬ ನಿರೀಕ್ಷೆಯಿಂದ ಜನರ ಮುಖ ಸಂತಸಗೊಳ್ಳುವುದನ್ನು ನಾನು ಕಂಡಿದ್ದೇನೆ. ಆದರೆ ಅಂತಹ ಸಂದರ್ಭದಲ್ಲಿ ನಿಮ್ಮ ಮುಖದಲ್ಲಿ ಅಸ್ವಸ್ಥತೆಯೇಕೆ ಗೋಚರಿಸುತ್ತದೆ? ಏನು ಇದಕ್ಕೆ ಕಾರಣ? ಅವರು ಹೇಳಿದರು, ಆಯಿಶಾ, ಈ  ಮೋಡಗಳಲ್ಲಿ ಶಿಕ್ಷೆಯ ಅಂಶ ಇರಲಾರದೆಂದು ನಾನು ಹೇಗೆ ತಿಳಿಯಲಿ? ಆದ್ ಸಮೂಹವನ್ನು ಭೀಕರ ಬಿರುಗಾಳಿಯಿಂದ ಅಲ್ಲಾಹನು ನಾಶಗೊಳಿಸಿದ್ದಾನೆ. ಆ ಜನಾಂಗವೂ ಕೂಡಾ ಆಕಾಶದ  ಕಾರ್ಮೋಡ ಕಂಡು ಮಳೆ ಬರುತ್ತದೆಯೆಂದು ಭಾವಿಸಿದ್ದರು.” (ಬುಖಾರಿ, ಮುಸ್ಲಿಂ)

ಇಂತಹ ಗಾಳಿಯನ್ನು ಕಾಣುವಾಗ ಅಲ್ಲಾಹುಮ್ಮ ಇಜ್‍ಅಲ್‍ಹಾ ರಿಯಾಹನ್ ವಲಾ ತಜ್‍ಅಲ್‍ಹಾ ಅದಾಬನ್  (ತ್ವಬ್ರಾನಿ) – ಅಲ್ಲಾಹನೇ, ಇದನ್ನು ಅನುಗ್ರಹದ ಗಾಳಿಯನ್ನಾಗಿ ಮಾಡು. ಆಪತ್ತಿನದ್ದಾಗಿಸಬೇಡ. ಅಲ್ಲಾಹನೇ ಈ ಗಾಳಿಯನ್ನು ನೀನು ಕಾರುಣ್ಯವನ್ನಾಗಿ ಮಾಡು. ಶಿಕ್ಷೆಯ ಗಾಳಿಯಾಗಿಸಬೇಡ.

ಬಿರುಗಾಳಿಯೊಂದಿಗೆ ಕಾರ್ಮೋಡವೂ ದಟ್ಟವಾಗಿದ್ದರೆ ಖುಲ್ ಅಊಝು ಬಿರಬ್ಬಿಲ್ ಫಲಖ್, ಕುಲ್ ಅಊಜು ಬಿರಬ್ಬಿನ್ನಾಸ್ ಎಂಬ ಅಧ್ಯಾಯಗಳನ್ನು ಓದಬೇಕು.

ಮಳೆ ಕಾರಣದಿಂದ ವಿವಿಧ ನಾಶ ನಷ್ಟಗಳ ಕುರಿತು ಭಯವುಂಟಾದರೆ, ಅಲ್ಲಾಹುಮ್ಮ ಹವಾಲೈನಾ ಲಾ ಅಲೈನಾ, ಅಲ್ಲಾಹುಮ್ಮ ಅಲಲ್ ಅಕ್ಕಾಮಿ ವಲ್ಲಿರಾಬಿ ವ ಬುತೂನಿಲ್ ಔದಿಯತ್ತಿ ವಮನಾಬಿತಿಶ್ಶಜರ್.  (ಬುಖಾರಿ, ಮುಸ್ಲಿಮ್) (ಅಲ್ಲಾಹನೇ, ನಮ್ಮ ಪರಿಸರದಲ್ಲಿ ಅದನ್ನು ಸುರಿಸು. ನಮ್ಮ ಮೇಲೆ ಸುರಿಸಬೇಡ. ಪರ್ವತ, ಬೆಟ್ಟಗಳಲ್ಲೂ ಮರಗಳು ಮೊಳಕೆಯೊಡೆಯುವಲ್ಲಿಯೂ ನೀನು ಅದನ್ನು ವರ್ಷಿಸು)  ಎಂದೂ ಪ್ರಾರ್ಥಿಸಬೇಕು.

ಮಳೆ ರೌದ್ರಾವತಾರ ತಾಳುವಾಗ, ಗುಡುಗು ಮಿಂಚು ಜೋರಾಗುವಾಗ ಮಾತು ನಿಲ್ಲಿಸಿ ಕುರ್‍ಆನ್‍ನ ವಯುಸಬ್ಬಿಹುರ್ರಅïದು ಬಿಹಮ್‍ದಿಹೀ ಮಲಾಇಕತು ಮಿನ್ ಖೀಫತಿಹೀ ಎಂದು ಪ್ರಾರ್ಥಿಸಬೇಕು. (ಅರ್ರಅದ್: 13)

ಮೋಡಗಳ ಘರ್ಜನೆಯು ಅವನ ಸ್ತೋತ್ರ ದೊಂದಿಗೆ ಅವನ ಕೀರ್ತನೆ ಮಾಡುತ್ತದೆ ಮತ್ತು ದೇವಚರರು ಅವನ ಭೀತಿಯಿಂದ ನಡುಗುತ್ತ ಅವನ ಕೀರ್ತನೆ ಮಾಡುತ್ತದೆ. ಕಅಬ್(ರ) ಹೇಳುತ್ತಾರೆ,  “ಗುಡುಗು ಮಿಂಚು ಬರುವಾಗ ಈ ಸೂಕ್ತವನ್ನು 3 ಬಾರಿ ಓದಿದರೆ ಅವುಗಳ ಉಪದ್ರವದಿಂದ ಮುಕ್ತರಾಗುತ್ತಾರೆ.”

ಬೆಂಕಿಯುಂಟಾದರೆ ಕೂಡಲೇ ಅದನ್ನು ನಂದಿಸಲು ಬೇಕಾದ ಕ್ರಮ ಕೈಗೊಳ್ಳಬೇಕು ಮತ್ತು ಅದರೊಂದಿಗೆ ಅಲ್ಲಾಹು ಅಕ್ಬರ್ ಎಂದು ಹೇಳುತ್ತಿರಬೇಕು. ಪ್ರವಾದಿ(ಸ)ರು ಹೇಳಿರುವರು, “ಬೆಂಕಿ ಹಿಡಿದದ್ದು  ಕಂಡರೆ ಅಲ್ಲಾಹು ಅಕ್ಬರ್ ಎಂದು ಉಚ್ಚರಿಸಬೇಕು. ತಕ್ಬೀರ್ ಬೆಂಕಿಯನ್ನು ನಂದಿಸುತ್ತದೆ.”

ಭಯವು ದಿಗ್ಭ್ರಾಂತಿಯೂ ಹೆಚ್ಚಿದಾಗ ಸುಬ್ಹಾನಲ್ಲಾಹ್ ಮಲಿಕಿಲ್ ಖುದ್ದೂಸಿ ರಬ್ಬಲ್ ಮಲಾಇಕತಿ ವರ್ರೂಹಿ ಜಲ್ಲಲ್ ತಸ್ಸಮಾವಾತಿ ವಲ್‍ಅರ್‍ಳ ಬಿಲ್ ಉಸ್ಸತಿ ವಲ್ ಜಬ್‍ರೂತ್ (ದೌರ್ಬಲ್ಯಗಳಿಂದ  ಮುಕ್ತನಾದ ನೈಜ ಒಡೆಯನು ಪರಿಶುದ್ಧನಾಗಿದ್ದಾನೆ. ದೇವಚರರ ಮತ್ತು ಜಿಬ್ರೀಲರ ರಕ್ಷಕನೇ, ಆಕಾಶದಲ್ಲೂ ಭೂಮಿಯಲ್ಲೂ ನಿನ್ನ ಪ್ರತಾಪದ ಆಧಿಪತ್ಯದ ಛಾಯೆಯು ವ್ಯಾಪಿಸಿದೆ) ಎಂದು ಪ್ರಾರ್ಥಿಸಬೇಕು.  ತನ್ನ ಆತಂಕ ಮತ್ತು ವ್ಯಥೆಯನ್ನು ಪ್ರವಾದಿ(ಸ)ರ ಬಳಿ ಹೇಳಿಕೊಂಡ ವ್ಯಕ್ತಿಯೋರ್ವರೊಡನೆ ಈ ಪ್ರಾರ್ಥನೆಯನ್ನು ಉಚ್ಚರಿಸುತ್ತಿರಲು ಹೇಳಿದ್ದರು.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …