ಮಹಿಳೆಯರ ನೈಸರ್ಗಿಕವಾದ ಕೆಲವು ಅಡೆ-ತಡೆ, ಇತಿ-ಮಿತಿಗಳು, ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳಿಂದಾಗಿ ಇಸ್ಲಾಮ್ ಆಕೆಗೆ ಅನೇಕ ಧಾರ್ಮಿಕ, ವಿಧಿ-ಕರ್ತವ್ಯಗಳಿಂದ ವಿನಾಯಿತಿ ನೀಡಿದೆ.
ಮಹಿಳೆಯರಿಗೆ ಆಗುವ ಮಾಸಿಕ ಆರ್ತವ, ಪ್ರಸವಾನಂತರದ ರಕ್ತಸ್ರಾವಗಳ ವೇಳೆ ನಮಾಝ್ ಮತ್ತು ಉಪವಾಸ ವ್ರತಗಳಂತಹ ಕಡ್ಡಾಯ ಕರ್ತವ್ಯಗಳಿಂದ ಆಕೆಗೆ ವಿನಾಯಿತಿ ಇದೆ. ಆರ್ತವ ಕಾಲದಲ್ಲಿ ಆಕೆಯ ಮೇಲೆ ನಮಾಝ್ ಕಡ್ಡಾಯವಲ್ಲವೆಂಬುದು ಮಾತ್ರವಲ್ಲ, ಆ ಕಾಲಾವಧಿಯಲ್ಲಿ ಆಕೆ ನಮಾಝ್ ಮಾಡಬಾರದೆಂದೇ ವಿಧಿಸಲಾಗಿದೆ. ಹಾಗೆ ಬಿಟ್ಟು ಹೋದ ನಮಾಝ್ಗಳನ್ನು ಆಕೆ ಮತ್ತೆ ಆಚರಿಸಿ ಸಾಲ ತೀರಿಸಬೇಕಾಗಿಯೂ ಇಲ್ಲ. ಅಂತೆಯೇ ಪ್ರಸವಾನಂತರದ ಅಶುದ್ಧಿಯ ಕಾಲದಲ್ಲಿಯೂ ಆಕೆಗೆ ನಮಾಝ್ ನಿಂದ ವಿನಾಯಿತಿ ಇದೆ.
ಪ್ರಸ್ತುತ ಅಶುದ್ಧಿಯ ಅವಧಿಗಳಲ್ಲಿ ರಮಝಾನ್ ತಿಂಗಳು ಬಂದರೆ ಆ ದಿನಗಳ ಉಪವಾಸ ವ್ರತವನ್ನು ಆಕೆ ಆಚರಿಸಬೇಕಾಗಿಲ್ಲ. ಆದರೆ ಹಾಗೆ ಬಿಟ್ಟು ಹೋದ ಉಪವಾಸ ವ್ರತದ ಸಂಖ್ಯೆಯನ್ನು ಮಹಿಳೆಯರು ಇತರ ಹನ್ನೊಂದು ತಿಂಗಳಲ್ಲಿ ಮುಂದಿನ ರಮಝಾನ್ ತಿಂಗಳಿಗೆ ಮುಂಚಿತವಾಗಿ ಪೂರ್ತಿಗೊಳಿಸಬೇಕು. ಇದೇ ರೀತಿ ಆ ಅವಧಿಯಲ್ಲಿ ಪವಿತ್ರ ಕುರ್ಆನಿನ ಪಾರಾಯಣವನ್ನೂ ಆಕೆಗೆ ನಿಷೇಧಿಸಲಾಗಿದೆ. ಆದರೆ ಇದರರ್ಥ ಆರ್ತವ ಕಾಲದಲ್ಲಿ ಕೆಲವು ಧರ್ಮ ಮತ್ತು ಜಾತಿಗಳಲ್ಲಿ ರೂಢಿಯಲ್ಲಿರುವಂತೆ ಮಹಿಳೆಯರನ್ನು ಅಸ್ಪೃಶ್ಯಳೆಂದು ತಿಳಿದುಕೊಳ್ಳಬೇಕೆಂದು ಖಂಡಿತ ಅಲ್ಲ. ಪ್ರವಾದಿವರ್ಯರು(ಸ) ವಿವರಿಸಿದ ಪ್ರಕಾರ ಆರ್ತವಾವಸ್ಥೆಯಲ್ಲಿ ಅವರ ಜೊತೆ ಸಂಭೋಗ ಮಾತ್ರ ಮಾಡಬಾರದೆಂದೂ ಇತರ ಎಲ್ಲ ವ್ಯವಹಾರಗಳನ್ನು ಎಂದಿನಂತೆ ಉಳಿಸಿ ಕೊಂಡಿರಬೇಕೆಂದೂ ತಿಳಿದು ಬರುತ್ತದೆ.
ಪುರುಷರಿಗೆ ಧರ್ಮ ಯುದ್ಧವು ಕಡ್ಡಾಯವಾಗಿರುವ ಸಂದರ್ಭಗಳಲ್ಲಿಯೂ ಸ್ತ್ರೀಯರಿಗೆ ಅದರಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹಾಗೆಯೇ ಪತಿ ಅಥವಾ ವಿವಾಹ ನಿಷಿದ್ಧ ಬಂಧು ಒಬ್ಬರು ಜೊತೆಯಲ್ಲಿಲ್ಲದೆ ಹಜ್ಜ್ ಯಾತ್ರೆಯನ್ನು ಆಕೆ ಕೈಗೊಳ್ಳಬೇಕಾಗಿಲ್ಲ.
ಪ್ರವಾದಿವರ್ಯರು(ಸ) ಸಾಮಾನ್ಯವಾಗಿ ಮಧ್ಯಾಹ್ನದ ನಮಾಝ್ನ ಬಳಿಕದ ಸಮಯವನ್ನು ಮಹಿಳೆಯರಿಗೆ ಧರ್ಮದ ಬಗ್ಗೆ ತಿಳುವಳಿಕೆ ನೀಡುವುದಕ್ಕಾಗಿ ವಿೂಸಲಿರಿಸುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾದಿವರ್ಯರ ಪತ್ನಿಯರ ಪೈಕಿ ಯಾರಾದರೊಬ್ಬರು ಅವರ ಜೊತೆಗಿರುತ್ತಿದ್ದರು.
ಮಹಿಳೆಯರ ಪ್ರವಾದಿ!
ಒಮ್ಮೆ ಮದೀನಾದ ಮಹಿಳೆಯರು ಪರಸ್ಪರ ಸಮಾಲೋಚಿಸಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಲು ಹ. ಅಸ್ಮಾ ಬಿಂತ್ ಯಝೀದ್ ಅನ್ಸಾರಿಯಾ ಅವರನ್ನು ಪ್ರವಾದಿವರ್ಯರ(ಸ) ಬಳಿಗೆ ರವಾನಿಸಿದರು. ಹ. ಅಸ್ಮಾರವರು ಮಾತುಕತೆಯಲ್ಲಿ ಬಹಳ ನಿಪುಣೆಯಾಗಿದ್ದು ಯಾರ ಮುಂದೆಯೂ ತಮ್ಮ ವಾದವನ್ನು ಸಮರ್ಥವಾಗಿ ಇಡುತ್ತಿದ್ದರು. ಅವರು ಪ್ರವಾದಿ ವರ್ಯರ(ಸ) ಸನ್ನಿಧಿಯಲ್ಲಿ, “ಪ್ರವಾದಿವರ್ಯರೇ ತಾವು ಸ್ತ್ರೀ-ಪುರುಷರಿಬ್ಬರಿಗೂ ಪ್ರವಾದಿಯಾಗಿ ನಿಯೋಗಿಸಲ್ಪಟ್ಟವರಲ್ಲವೇ?” ಎಂದು ಪ್ರಶ್ನಿಸಿದರು. ಪ್ರವಾದಿ(ಸ) “ಹೌದು, ಖಂಡಿತವಾಗಿಯೂ” ಎಂದುತ್ತರಿಸಿದರು.ಆಗ ಹ. ಅಸ್ಮಾ(ರ) ಈ ರೀತಿ ನಿವೇದಿಸಿಕೊಂಡರು: “ಹಾಗಾದರೆ ಪುರುಷರಿಗೆ ಸಮಾನವಾಗಿ ಪುಣ್ಯ ಸಂಪಾದಿಸುವ ಅವಕಾಶ ಸ್ತ್ರೀಯರಿಗೆ ಏಕಿಲ್ಲ?” ಅದಕ್ಕೆ ಪ್ರವಾದಿ(ಸ) “ಯಾವ ಪುಣ್ಯ ಸಂಪಾದನೆಯ ಅವಕಾಶವಿಲ್ಲದುದಕ್ಕಾಗಿ ನೀವು ವಿಷಾದಿಸುತ್ತಿರುವಿರಿ?” ಎಂದು ಮರು ಪ್ರಶ್ನಿಸಿದರು. ಆಗ ಹ. ಅಸ್ಮಾ(ರ), “ಪ್ರವಾದಿವರ್ಯರೇ! ಪುರುಷರಿಗೆ ಜುಮಾ ನಮಾಝ್ (ಶುಕ್ರವಾರದ ಸಾಮೂಹಿಕ ಪ್ರಾರ್ಥನೆ) ಇದೆ. ಜೊತೆಗೆ ಈದುಲ್ ಫಿತ್ರ್ ಮತ್ತು ಈದುಲ್ ಅಝ್ಹಾ ಹಬ್ಬಗಳ ನಮಾಝ್ ಕೂಡಾ ಇದೆ. ನಮಗೆ ಇವುಗಳ ಪೈಕಿ ಯಾವುದಕ್ಕೂ ಅವಕಾಶವಿಲ್ಲ. ಮುಸ್ಲಿಮನೊಬ್ಬ ಮೃತಪಟ್ಟರೆ ನಾವು ಆತನ ಪಾರ್ಥಿವ ಶರೀರವನ್ನು ಹೊತ್ತುಕೊಂಡು ಹೋಗುವಂತಿಲ್ಲ. ದಫನ ಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ. ರೋಗಿಗಳ ಸಂದರ್ಶನಕ್ಕೆ ಕೂಡಾ ಕೇವಲ ಪುರುಷರೇ ಹೋಗುತ್ತಾರೆ. ನಾವಾಗಿ ಹೋದರೆ ಅದು ಬೇರೆ ಮಾತು (ಆದರೆ ಪುರುಷರಂತೆ ನಮ್ಮನ್ನು ರೋಗಿಗಳ ಸಂದರ್ಶನಕ್ಕೆ ಹೋಗಲು ಪ್ರೋತ್ಸಾಹಿಸಲಿಲ್ಲ.) ಪುರುಷರಾದರೆ ತಾವಾಗಿಯೇ ಹಜ್ಜ್ ಯಾತ್ರೆಗೆ ಹೋಗಬಹುದು. ಆದರೆ ನಾವು ವಿವಾಹ ನಿಷಿದ್ಧವಾದ ಆಪ್ತ ಬಂಧುಗಳ ಜೊತೆಗಲ್ಲದೆ ಹೋಗುವಂತಿಲ್ಲ” ಎಂದು ತಮ್ಮ ದೂರುಗಳನ್ನು ನಿವೇದಿಸಿಕೊಂಡರು.
ಅತ್ಯುತ್ತಮ ಪ್ರಶ್ನೆಗಳು
ಪ್ರವಾದಿ(ಸ) ಹ. ಅಸ್ಮಾರವರ(ರ) ಮಾತುಗಳನ್ನು ಮಂದಸ್ಮಿತರಾಗಿ ಮೌನವಾಗಿ ಆಲಿಸುತ್ತಿದ್ದರು. ಪುಣ್ಯ ಸಂಪಾದನೆಯ ಬಗ್ಗೆ ಹ. ಅಸ್ಮಾರಿಗಿರುವ(ರ) ಕಳಕಳಿಯ ಬಗ್ಗೆ ಅವರು ಸಂತೋಷಗೊಂಡಿದ್ದರೆಂಬುದು ಅವರ ಮುಖಭಾವದಿಂದ ಸ್ಪಷ್ಟವಾಗುತ್ತಿತ್ತು. ಹ. ಅಸ್ಮಾ(ರ) ತಮ್ಮ ಮಾತನ್ನು ಮುಂದುವರಿಸುತ್ತಾ “ಅಲ್ಲಾಹನ ಪ್ರವಾದಿಗಳೇ! ಎಲ್ಲಕ್ಕಿಂತಲೂ ಮಿಗಿಲಾಗಿ ಪುರುಷರಿಗೆ ಧರ್ಮ ಯುದ್ಧದಲ್ಲಿ ಭಾಗವಹಿಸಿ ಪುಣ್ಯ ಸಂಪಾದಿಸುವ ಅವಕಾಶವಿದೆ. ಆದರೆ ನಾವು ಶಸ್ತ್ರ ಹಿಡಿದು ರಣರಂಗಕ್ಕೆ ಹೋಗುವಂತಿಲ್ಲ” ಎನ್ನುತ್ತಾ ತಮ್ಮ ಮಾತನ್ನು ಮುಗಿಸಿದರು. ಆಗ ಪ್ರವಾದಿವರ್ಯರು ಅಲ್ಲಿದ್ದವರೊಡನೆ, “ನೀವು ಧರ್ಮದ ಬಗ್ಗೆ ಯಾರಾದರೂ ಇವರಿಗಿಂತ ಉತ್ತಮ ಪ್ರಶ್ನೆಗಳನ್ನು ಕೇಳಿದ್ದನ್ನು ಆಲಿಸಿದ್ದೀರಾ?” ಎನ್ನುತ್ತಾ ತಮ್ಮ ಪ್ರಸನ್ನತೆಯನ್ನು ವ್ಯಕ್ತಪಡಿಸಿ, ಹ.ಅಸ್ಮಾ ಬಿಂತ್ ಯಝೀದ್ ಅನ್ಸಾರಿಯಾರ(ರ) ಪ್ರಶ್ನೆಗಳಿಗೆ ಉತ್ತರಿಸಿದರು. ಅದರ ತಾತ್ಪರ್ಯ ಹೀಗಿದೆ:
“ಮಹಿಳೆಯರು ಮನೆಯಲ್ಲಿ ನಮಾಝ್ ಮಾಡಿದರೆ ಅದು ಪುರುಷರು ಮಸೀದಿಯಲ್ಲಿ ಸಾಮೂಹಿಕವಾಗಿ ಮಾಡುವ ನಮಾಝ್ಗೆ ಸಮಾನವಾದ ಪುಣ್ಯಕ್ಕೆ ಅರ್ಹವಾಗಿದೆ. ಮನೆಯಲ್ಲೇ ಅವರಿಗೆ ಜುಮಾ ನಮಾಝ್ನ ಪುಣ್ಯವೂ ದೊರೆಯುತ್ತದೆ. ಈದ್ ನಮಾಝಿನಿಂದಲೂ ಅವರಿಗೆ ವಿನಾಯಿತಿ ನೀಡಲಾಗಿದೆ. ಮಹಿಳೆ ತನ್ನ ಮನೆಯ ವಾತಾವರಣವನ್ನು ಹರ್ಷದಾಯಕವಾಗಿರಿಸಿದರೆ, ತನ್ನ ಪತಿಯ ಆದೇಶಗಳನ್ನು ಪಾಲಿಸುತ್ತಿದ್ದರೆ ಮತ್ತು ಮಕ್ಕಳ ಪಾಲನೆ ಪೋಷಣೆ ಹಾಗೂ ತರಬೇತಿ ಮಾಡುತ್ತಿದ್ದರೆ ಆಕೆಗೆ ಮನೆಯಲ್ಲಿದ್ದುಕೊಂಡೇ ಜಿಹಾದ್(ಧರ್ಮ ಯುದ್ಧ) ಮತ್ತು ಹಜ್ಜ್ ಮಾಡಿದ ಪುಣ್ಯ ಲಭಿಸುತ್ತದೆ. ಜಿಹಾದ್ನಲ್ಲಿ ಸ್ವತಃ ಭಾಗವಹಿಸಲಸಾಧ್ಯವಾದವರು ಜಿಹಾದ್ಗೆ ಬೇಕಾದ ಸಾಧನಗಳನ್ನು ಒದಗಿಸಿದರೆ, ಜಿಹಾದ್ ಮಾಡುವವರಿಗೆ ನೆರವಾದರೆ ಅಥವಾ ಅವರ ಗೈರು ಹಾಜರಿಯಲ್ಲಿ ಅವರ ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸಿದರೆ ಅವರಿಗೂ ಜಿಹಾದ್ನ ಪುಣ್ಯ ದೊರೆಯುತ್ತದೆ. ಮಹಿಳೆಯು ಜಿಹಾದ್ ಮಾಡುವವನ ತಾಯಿ, ಸೋದರಿ ಅಥವಾ ಪತ್ನಿಯಾಗಿದ್ದರೆ ಆಕೆ ಜಿಹಾದ್ನ ಪುಣ್ಯಕ್ಕೆ ಇನ್ನೂ ಹೆಚ್ಚು ಅರ್ಹಳಾಗುತ್ತಾಳೆ.”
ವಿನಾಯಿತಿಯ ಕಾರಣಗಳು
ಒಮ್ಮೆ ಪ್ರವಾದಿ(ಸ) ಹೀಗೆ ಹೇಳಿದ್ದರು: “ಮಹಿಳೆಯರ ಹಜ್ಜ್ ಅವರ ಮಟ್ಟಿಗೆ ಜಿಹಾದ್ ಆಗಿದೆ.”ಮಹಿಳೆಯರಿಗೆ ಮನೆಯಲ್ಲಿದ್ದುಕೊಂಡೇ ಪುರುಷರಿಗೆ ಸಮಾನವಾದ ಪುಣ್ಯ ಸಿಗುವುದು ಅಲ್ಲಾಹನ ಒಂದು ಅನುಗ್ರಹವಾಗಿದೆ. ಜನಾಝಾ(ಮೃತ ಶರೀರ)ವನ್ನು ಹೊರುವುದು ಸ್ತ್ರೀಯರಿಗೆ ಭೂಷಣವಾದ ಕೆಲಸವಲ್ಲದುದರಿಂದ ಅವರಿಗೆ ಅದರಿಂದ ಪೂರ್ಣ ವಿನಾಯಿತಿ ನೀಡಲಾಗಿದೆ. ಜನಾಝಾ ಯಾತ್ರೆಯಲ್ಲಿ ಭಾಗವಹಿಸುವುದರಿಂದ ಪರ್ದಾದ ನಿಯಮವನ್ನು ಪೂರ್ಣವಾಗಿ ಪಾಲಿಸಲು ಸಾಧ್ಯವಾಗದೆ ಇರಬಹುದು. ಅಪರಿಚಿತ ಸ್ತ್ರೀ-ಪುರುಷರ ಮಧ್ಯೆ ನೂಕುನುಗ್ಗಲಾಗಬಹುದು. ಮೃತರ ಆಪ್ತರಾದ ಸ್ತ್ರೀಯರು ದುಃಖ ತಾಳಲಾರದೆ ಬಹಿರಂಗವಾಗಿ ರೋದಿಸಬಹುದು. ಈ ಎಲ್ಲ ಕಾರಣಗಳಿಗಾಗಿ ಮಹಿಳೆಯರು ಜನಾಝಾ ಯಾತ್ರೆಯಲ್ಲಿ ಪಾಲ್ಗೊಳ್ಳುವುದನ್ನು ನಿಷೇಧಿಸಲಾಗಿದೆ. ಸ್ತ್ರೀಯರಿಗೆ
ಮಸೀದಿಗೆ ಹೋಗುವುದರಿಂದ ವಿನಾಯಿತಿ ನೀಡಲು ಇನ್ನೊಂದು ಪ್ರಮುಖ ಕಾರಣವೂ ಇದೆ. ಯಾವ ಸ್ತ್ರೀಯೂ ತನ್ನ ಮಾಸಿಕ ಆರ್ತವ ಇತ್ಯಾದಿ ಸ್ತ್ರೀ ಸಹಜ ಪ್ರಕ್ರಿಯೆಗಳನ್ನು ತಮ್ಮಂತಹ ಇತರ ಸ್ತ್ರೀಯರ ಮುಂದೆಯೂ ಬಹಿರಂಗಪಡಿಸಲು ಇಷ್ಟಪಡುವುದಿಲ್ಲ. ಮಹಿಳೆಯರಿಗೆ ಸಾಮೂಹಿಕ ನಮಾಝ್ ಮತ್ತು ಜುಮಾ ಕಡ್ಡಾಯವಾದರೆ ಈ ವಿಷಯಗಳು ಇತರ ಮಹಿಳೆಯರ ಗಮನಕ್ಕೆ ಬಾರದೆ ಇರುವುದಿಲ್ಲ. ಆದುದರಿಂದ ಇಸ್ಲಾಮ್ನಲ್ಲಿ ಸ್ತ್ರೀ-ಪುರುಷರಿಗೆ ಅವರವರ ಶಾರೀರಿಕ ಮತ್ತು ಮಾನಸಿಕ ಸ್ವಭಾವ-ಪ್ರಕೃತಿಗಳಿಗೆ ಅನುಗುಣವಾದ ಹಕ್ಕು ಬಾಧ್ಯತೆಗಳನ್ನು ಹಾಗೂ ಕರ್ತವ್ಯಗಳನ್ನು ಮಾತ್ರ ನಿಶ್ಚಯಿಸಲಾಗಿದೆ.
‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ
IslamKannada News Portal



