Home / ಲೇಖನಗಳು / ಪ್ರವಾದಿ ಇಬ್ರಾಹೀಮ್‍ರ ಕಾಲದ ವಿಗ್ರಹಗಳು

ಪ್ರವಾದಿ ಇಬ್ರಾಹೀಮ್‍ರ ಕಾಲದ ವಿಗ್ರಹಗಳು

ಟಿ. ಮುಹಮ್ಮದ್ ವೇಳಂ

ಪ್ರವಾದಿ ಇಬ್ರಾಹೀಮ್(ಅ)ರ ಕಾರ್ಯಚಟುವಟಿಕೆಯ ಕೇಂದ್ರ ಬಿಂದು ವಿಗ್ರಹಗಳಾಗಿತ್ತು. ಇಬ್ರಾಹೀಮ್(ಅ)ರು ಇತಿಹಾಸದ ಅತ್ಯಂತ ದೊಡ್ಡ ವಿಗ್ರಹ ಆರಾಧನೆಯ ವಿರೋಧಿಯಾಗಿದ್ದರು. ಇಬ್ರಾಹೀಮರ ಈ ರೀತಿಯ ವಿಗ್ರಹ ವಿರೋಧಕ್ಕೆ ವಿಗ್ರಹಾರಾಧನೆಯ ವಿರುದ್ಧದ ಸಂದೇಶ ಪ್ರಚಾರದ ಹೊರತಾದ ಪ್ರಾಯೋಗಿಕ ವರ್ತನೆಗಳಿಗೆ ವಿವಿಧ ಕಾರಣಗಳಿವೆ. ಅವುಗಳಲ್ಲಿ ಒಂದನ್ನು ಅನಾವರಣಗೊಳಿಸುವುದು ಈ ಲೇಖನದ ಉದ್ದೇಶ.

ವಿಗ್ರಹವು ಇಬ್ರಾಹೀಮ್(ಅ)ರ ಸಮೂಹದ ಅಡಿಪಾಯವಾಗಿತ್ತು. ಅಲ್ಲಾಹನು ಹೇಳುತ್ತಾನೆ: ಇಬ್ರಾಹೀಮ್ ಹೇಳಿದರು, “ನೀವು ಲೌಕಿಕ ಜೀವನದಲ್ಲಂತೂ ಅಲ್ಲಾಹನನ್ನು ಬಿಟ್ಟು ವಿಗ್ರಹಗಳನ್ನು ಪರಸ್ಪರ ಪ್ರೇಮದ ಸಾಧನವನ್ನಾಗಿ ಮಾಡಿಕೊಂಡಿರುವಿರಿ. ಆದರೆ ಪುನರುತ್ಥಾನ ದಿನ ನೀವು ಪರಸ್ಪರರನ್ನು ನಿರಾಕರಿಸುವಿರಿ ಮತ್ತು ಪರಸ್ಪರರನ್ನು ಶಪಿಸುವಿರಿ. ನರಕಾಗ್ನಿಯು ನಿಮ್ಮ ನಿವಾಸವಾಗುವುದು. ನಿಮಗೆ ಬೇರೆ ಸಹಾಯಕರಾರೂ ಲಭಿಸುವುದಿಲ್ಲ. (ಅಲ್ ಅಂಕಬೂತ್- 25)

ಅಬುಲ್ ಆಲಾ ಮೌದೂದಿ  ವಿವರಿಸುತ್ತಾರೆ. (ಅಂದರೆ ದೇವಾರಾಧನೆಗೆ ಬರಲು ವಿಗ್ರಹಾರಾಧನೆಯ ಆಧಾರದಲ್ಲಿ ನೀವು ಸಾಮಾಜಿಕ ಜೀವನ ಹಾಗೂ ಸಾಮೂಹಿಕ ಸಂಬಂಧಗಳನ್ನು ಬೆಳೆಸುತ್ತೀರಿ.  ಸರಿಯಾಗಿರಲಿ, ತಪ್ಪಾಗಿರಲಿ, ಯಾವುದೇ ಒಂದು ಆದರ್ಶವನ್ನು ಆಧಾರವಾಗಿರಿಸಿಯೂ ಜನರು ಸಂಘಟಿತರಾಗಲು ಸಾಧ್ಯವಿದೆ. ತಪ್ಪಾದ ಆದರ್ಶಗಳ ಆಧಾರದಲ್ಲಿ ಸಂಘಟನೆಯೂ, ಐಕ್ಯತೆಯೂ ಇರುತ್ತದೆ. ಅವುಗಳನ್ನು ಸೌಹಾರ್ದ, ಸಹೋದರತೆ, ಧರ್ಮ-ನಾಗರಿಕತೆ-ರಾಜಕೀಯ-ಸಾಮಾಜಿಕ ಸಂಬಂಧಗಳನ್ನು ಸ್ಥಾಪಿಸುವ ಉಪಕರಣವನ್ನಾಗಿಸಬಹುದು.” (ತಫ್ಹೀಮುಲ್ ಕುರ್‍ಆನ್- ಸೂರ ಅಂಕಬೂತ್ ವ್ಯಾಖ್ಯಾನ- 42)

ಪ್ರವಾದಿ ಇಬ್ರಾಹೀಮ್(ಅ)ರು ಜನಿಸಿದ ಇರಾಕ್‍ನಲ್ಲಿ ವಿಗ್ರಹಾರಾಧನೆ ಮಾಡುವ ನಮ್ರೂದ್‍ನ ಆಡಳಿತವಿತ್ತು. ರಾಜಕೀಯ, ಆರ್ಥಿಕ, ಸಂಸ್ಕ್ರತಿಯನ್ನೆಲ್ಲಾ ವಿಗ್ರಹಗಳು ನಿಯಂತ್ರಿಸುತ್ತಿತ್ತು ಅಥವಾ ವಿಗ್ರಹದ ಹೆಸರಿನಲ್ಲಾಗಿತ್ತು. ಆ ಸಮೂಹದ ಮುಖ್ಯ ದೈವವಾದ ನನ್ನಾರ್‍ ನ ಕುರಿತು ಸರ್. ಲಿಯೋನಾರ್ಡ್‍ವುಳ್ಳಿ ಎಂಬ ಪುರಾತತ್ವ ಸಂಶೋಧಕನ `ಅಬ್ರಹಾಂ’ ಎಂಬ ಕೃತಿಯನ್ನು ಆಧಾರವಾಗಿಟ್ಟು ಕೊಂಡು ಅಬುಲ್ ಆಲಾ ಮೌದೂದಿ ಹೇಳುತ್ತಾರೆ, “ನನ್ನಾರ್ ಕೇವಲ ದೇವ ಮಾತ್ರವಾಗಿರಲಿಲ್ಲ. ಊರಿನ ದೊಡ್ಡ ಜಮೀನ್ದಾರರೂ, ವ್ಯಾಪಾರಿಯೂ, ವ್ಯವಸಾಯಿಯೂ ಆಗಿದ್ದರು. ದೇಶದ ರಾಜಕೀಯದಲ್ಲಿ ಮಹಾ ಅಧಿಪತಿಯೂ ಆಗಿದ್ದನು. ಒಟ್ಟು ಮುಕ್ಕಾಲು ಪಾಲು ಭೂಮಿಯೂ ಮಜರಾಯಿ`ದೇವಸ್ಥಾನ’ದ್ದಾಗಿತ್ತು. ತೋಟ, ಕಟ್ಟಡಗಳು, ಭೂಮಿಯ ಸೊತ್ತುಗಳು ಹೀಗೆ ಧಾರಾಳ  ಸಂಪತ್ತು ನನ್ನಾರ್‍ ನ ಹೆಸರಲ್ಲಿ ವಕ್ಫ್ ಆಗಿತ್ತು. ಇದರ ಆದಾಯವಲ್ಲದೆ ಕೃಷಿಕರು, ಜಮೀನ್ದಾರರು, ವ್ಯಾಪಾರಿಗಳೆಲ್ಲರೂ ವಿವಿಧ ಧಾನ್ಯಗಳು, ಹಾಲು, ಚಿನ್ನ, ವಸ್ತ್ರ ಮೊದಲಾದ ಸಾಧನಗಳನ್ನು ಕ್ಷೇತ್ರಗಳಿಗೆ ಅರ್ಪಿಸುತ್ತಿದ್ದರು. ಅವುಗಳನ್ನೆಲ್ಲಾ ಸ್ವೀಕರಿಸಲು ಪುರೋಹಿತರ ನ್ನೊಳಗೊಂಡ ತಂಡ ರಚನೆಯಾಗಿತ್ತು. ಕ್ಷೇತ್ರಗಳ ವತಿಯಿಂದ  ಅಸಂಖ್ಯಾತ ಉದ್ಯೋಗಿಗಳು, ವ್ಯಾಪಾರ ಸಂಸ್ಥೆಗಳು ಇದ್ದವು. ದೇವನನ್ನು  ಪ್ರತಿನಿಧೀಕರಿಸಿಕೊಂಡು ಪೂಜಾರಿಗಳು ಅವೆಲ್ಲವನ್ನೂ ನಡೆಸುತ್ತಿದ್ದರು. ದೇಶದ ದೊಡ್ಡ ನ್ಯಾಯಾಲಯವೂ ಕ್ಷೇತ್ರವೇ ಆಗಿತ್ತು. ಪುರೋಹಿತರೇ ಜಡ್ಜ್. ಆತ ನೀಡುವ ತೀರ್ಪು ದೇವನ ತೀರ್ಪು ಎಂದು ಪರಿಗಣಿಸಲ್ಪಟ್ಟಿತ್ತು. ರಾಜ ಕುಟುಂಬದ ಆಧಿಪತ್ಯವೂ ನನ್ನಾರ್ ನಿಂದ ಲಭಿಸಿದ್ದಾಗಿತ್ತು. ಸಾಕ್ಷಾತ್ ರಾಜ ನನ್ನಾರ್ ಆಗಿದ್ದ. ಆಡಳಿತಗಾರರಿಗೆ ಅಧಿಕಾರವನ್ನು ನೀಡುವವನೂ ಅವನೇ ಆಗಿದ್ದ. ಈ ಕಾರಣದಿಂದ ರಾಜನೂ ಆರಾಧ್ಯರಲ್ಲಿ ಒಬ್ಬನಾಗಿದ್ದ. ರಾಜನನ್ನು ದೇವರಂತೆ ಆರಾಧಿಸುತ್ತಿದ್ದರು.

ಇದುವರೆಗೆ ಲಭಿಸಿರುವ ಪುರಾತತ್ವ ಸಂಶೋಧನಾ ವರದಿಗಳು ಸರಿಯೆಂದಾದರೆ ಬಹುದೇವತ್ವವು ಇಬ್ರಾಹೀಮ್(ಅ)ರ ಸಮುದಾಯದಲ್ಲಿ ಒಂದು ಧಾರ್ಮಿಕ  ಆಚರಣೆಯೋ, ವಿಗ್ರಹಾರಾಧನೆಯ ಸಂಪ್ರದಾಯವೋ ಆಗಿರಲಿಲ್ಲವೆಂದು ಮನವರಿಕೆಯಾಗುತ್ತದೆ. ಆ ಜನತೆಯ ಆರ್ಥಿಕ, ರಾಜಕೀಯ, ನಾಗರಿಕ, ಸಾಮೂಹಿಕ  ಜೀವನ ವ್ಯವಸ್ಥೆಗಳೆಲ್ಲವೂ ಅದೇ ಬಹುದೇವತ್ವದ ವಿಶ್ವಾಸದಲ್ಲಿ ಅದಿಷ್ಠಿತವಾಗಿತ್ತು.

ಇದರ ವಿರುದ್ಧ ಇಬ್ರಾಹೀಮ(ಅ)ರು ಎತ್ತಿದ ತೌಹೀದ್‍ನ ಧ್ವನಿಯು ವಿಗ್ರಹಾರಾಧನೆಯನ್ನು ಮಾತ್ರವಲ್ಲ, ರಾಜ ಕುಟುಂಬದ ತಾವು ಆರಾಧ್ಯರೆಂಬ, ಆಧಿಪತಿಗಳೆಂಬ ಮನೋಭಾವವನ್ನೂ, ಪುರೋಹಿತರ, ಉನ್ನತ ಜಾತಿಯವರ, ರಾಜಕೀಯ-ಆರ್ಥಿಕ-ಸಾಮಾಜಿಕ ದೃಷ್ಟಿಕೋನಗಳನ್ನು, ದೇಶದ ಸಾರ್ವಜನಿಕ ಜೀವನವನ್ನೇ ಬದಲಿಸುವಂತಹುದ್ದಾಗಿತ್ತು. ಅವರ ಸಂದೇಶವನ್ನು ಸ್ವೀಕರಿಸುವುದು ಎಂಬುದು ಪ್ರಸಕ್ತ ಸಮಾಜದ ಆಗು-ಹೋಗುಗಳನ್ನು ಬುಡಮೇಲುಗೊಳಿಸಿ ಏಕದೇವತ್ವದ ಅಡಿಪಾಯದಲ್ಲಿ ಪುನಃ ಸಂಘಟಿತವಾಗುವುದಾಗಿತ್ತು. ಆದ್ದರಿಂದ ಇಬ್ರಾಹೀಮ್(ಅ)ರ ಧ್ವನಿ ಮೊಳಗುವುದರೊಂದಿಗೆ ವಿದ್ವಾಂಸರು, ಪುರೋಹಿತರು, ಶ್ರೀ ಸಾಮಾನ್ಯರು,  ನಮ್ರೂದ್ ಎಲ್ಲರೂ ಒಗ್ಗಟ್ಟಾಗಿ ಇದನ್ನು ಅದುಮಲು ಯತ್ನಿಸಿದರು. (ತಫ್ಹೀಮುಲ್ ಕುರ್‍ಆನ್ ಸೂರಃ ಅಲ್‍ಅನ್‍ಆಮ್ ವ್ಯಾಖ್ಯಾನ 52)

ಈ ವಿಗ್ರಹಗಳ ವಿಶ್ವಾಸವು ಕೇವಲ ಒಂದು ವಿಶ್ವಾಸವಾಗಿ, ಧಾರ್ಮಿಕ ಕಾರ್ಯವಾಗಿ ಮಾತ್ರ ಇರಲಿಲ್ಲ. ಅದು ಇಡೀ ಸಮಾಜವನ್ನು ತನ್ನ ಹಿಡಿತದಲ್ಲಿಟ್ಟಿತ್ತು. ಮಹಿಳೆಯ  ಸ್ಥಾನಮಾನ, ಸದಾಚಾರ, ಕೋಮು ಭಾವನೆಗಳನ್ನು ನಿರ್ಣಯಿಸಿದ್ದು ವಿಗ್ರಹದಲ್ಲಿ ಆದಿಷ್ಠಿತವಾದ ಧರ್ಮವಾಗಿದೆ. ಅಬುಲ್ ಆಲಾ ಮೌದೂದಿ ಮುಂದುವರಿಸುತ್ತಾರೆ. `ಉರ್’ನ ಶಿಲಾ ಶಾಸನಗಳಿಂದ ಸುಮಾರು 5000 ದೇವಂದಿರ ಹೆಸರು ಲಭಿಸುತ್ತದೆ. ದೇಶದ ಬೇರೆ ಬೇರೆ ಪಟ್ಟಣಗಳಿಗೆ ಬೇರೆ ಬೇರೆ ದೇವರಿದ್ದರು. ಪ್ರತಿಯೊಂದು ನಗರಕ್ಕೂ ಕಾವಲುಗಾರರಾಗಿ ಬೇರೆ ಬೇರೆ ದೇವರಿದ್ದರು. ಆತ ನಗರದ ದೇವನಾಗಿಯೂ ಮಹಾದೇವನಾಗಿಯೂ ಪರಿಗಣಿಸಲ್ಪಡುತ್ತಿದ್ದ. ಇತರ ದೇವರುಗಳಿಗಿಂತ  ಈತ ಹೆಚ್ಚು ಗೌರವವನ್ನು ಪಡೆದುಕೊಳ್ಳುತ್ತಿದ್ದ.

ಈ ನಗರದ ದೇವನ ಹೆಸರು ನನ್ನಾರ್ (ಚಂದ್ರ ದೇವ) ಎಂದಾಗಿತ್ತು. ಪ್ರಸ್ತುತ ನಗರಕ್ಕೆ ಖಮರೀನ ಎಂಬ ಹೆಸರು ಕೊಡಲು ಅದೇ ಕಾರಣವಾಗಿರಬಹುದು. ಉರ್  ಪಟ್ಟಣದ ನಂತರದ ಪ್ರಮುಖ ನಗರ ಲರ್ಸ ಆಗಿತ್ತು. ನಂತರದ ರಾಜಧಾನಿಯೂ ಅದೇ. ಅಲ್ಲಿನ ನಗರ ದೇವ ಶಮ್ಮಾಝ್ (ಸೂರ್ಯ) ಆಗಿದ್ದ. ಈ ಮಹಾದೇವರ  ಕೈಕೆಳಗೆ ಅಸಂಖ್ಯಾತ ದೇವರುಗಳಿದ್ದರು.

ದೇವರಲ್ಲಿ ದೊಡ್ಡ ವಿಭಾಗವು ಆಕಾಶದ ಗೋಳಗಳಿಂದಲೂ, ಕೆಲವರು ಭೂಮಿಯಿಂದಲೂ ಆಯ್ಕೆಗೊಂಡವರಾಗಿದ್ದರು. ಸಣ್ಣ ಪುಟ್ಟ ಅಗತ್ಯಗಳಿಗಾಗಿಯೂ ಜನರು  ಇವುಗಳ ಮೊರೆ ಹೋಗುತ್ತಿದ್ದರು. ಇವರು ವಿವಿಧ ಮೂರ್ತಿಗಳನ್ನು ರಚಿಸಲಾಯಿತು. ಅದರ ಮುಂದೆ ಎಲ್ಲಾ ಆರಾಧನಾ ಕರ್ಮಗಳನ್ನು ನೆರವೇರಿಸುತ್ತಿದ್ದರು.

ಎತ್ತರದ ಗುಡ್ಡದ ಮೇಲೆ ಅತ್ಯಂತ ಸುಂದರವಾದ ಒಂದು ದೇವಸ್ಥಾನವನ್ನು ಮಾಡಿ ಅದರಲ್ಲಿ ನನ್ನಾರ್‍ ನ ಪ್ರತಿಮೆಯನ್ನು ಇರಿಸಲಾಗಿತ್ತು. ಸಮೀಪವೇ ನನ್ನಾರ್‍ ನ ದೇವಿ  ನಿನ್‍ಗತ್‍ನ ಕ್ಷೇತ್ರವಿತ್ತು. ನನ್ನಾರ್ ದೇವಸ್ಥಾನವು ಭವ್ಯ ಅರಮನೆಯಂತೆ ಕಂಗೊಳಿಸುತ್ತಿತ್ತು. ಅಲ್ಲಿ ನಿತ್ಯ ರಾತ್ರಿ ಓರ್ವ ಅರ್ಚಕಿ ನನ್ನಾರ್ ಗಾಗಿ ವಧುವಾಗಿ ಸಿಂಗರಿಸಿಕೊಳ್ಳುತ್ತಿದ್ದಳು. ಕ್ಷೇತ್ರದಲ್ಲಿ ಹಲವಾರು ದೇವದಾಸಿಯರಿದ್ದರು. ತನ್ನ ಕನ್ಯತ್ವವನ್ನು ದೇವ ನಾಮಕ್ಕೆ ಬಲಿಯರ್ಪಿಸುವ ಯುವತಿಗೆ ಬಹಳ ಗೌರವವಿತ್ತು.

ಸಂಕ್ಷಿಪ್ತದಲ್ಲಿ ಒಮ್ಮೆಯಾದರೂ ತನ್ನ ಚಾರಿತ್ರ್ಯವನ್ನು ದೇವ ಮಾರ್ಗದಲ್ಲಿ ಪರ ಪುರುಷನಿಗೆ ಹನನ ಮಾಡುವುದು ಮಹಿಳೆಯರಿಗೆ ಸಂಬಂಧಿಸಿ ಮೋಕ್ಷ ಮಾರ್ಗವೆಂದು ಪರಿಗಣಿಸಲಾ ಗುತ್ತಿತ್ತು. ಈ ಧಾರ್ಮಿಕ ವೇಶ್ಯಾವೃತ್ತಿಯಿಂದ ಹೆಚ್ಚಿನ ಲಾಭ ಗಳಿಸಿದ್ದು ಪುರೋಹಿತರೆಂಬುದನ್ನು ಬೇರೆ ವಿವರಿಸಬೇಕಿಲ್ಲವಲ್ಲ (ಅದೇ ವಿವರ).

ದೇವನ ಪ್ರತಿನಿಧಿ ವಿಗ್ರಹ, ವಿಗ್ರಹದ ಪ್ರತಿನಿಧಿ ಪುರೋಹಿತ ಎಂಬ ರೀತಿಯಲ್ಲಿ ಅವರು ಮಹಿಳೆಯರನ್ನು ಶೋಷಿಸಿದರು. ಆ ಸಮೂಹದ ವರ್ಗಗಳ ಕುರಿತು ಮೌದೂದಿ(ರ) ಬರೆಯುತ್ತಾರೆ, “ಜನರಲ್ಲಿ ಮುಖ್ಯವಾಗಿ ಮೂರು ವರ್ಗಗಳಿದ್ದುವು. ಒಂದನೆಯದು ಅಮೇಲು, ಇವರು ಅತ್ಯಂತ  ಉನ್ನತ ವರ್ಗ. ಪುರೋಹಿತರು, ಸರಕಾರಿ ನೌಕರರು, ಸೈನಿಕ ಆಫೀಸರ್‍ ಗಳು ಈ ವರ್ಗಕ್ಕೆ ಸೇರಿದವರಾಗಿದ್ದರು. ಎರಡನೆಯದು ಮುಷ್‍ಕಮ್ಮು. ಇವರು ವ್ಯಾಪಾರಿಗಳು,  ಉದ್ಯಮಿಗಳು, ಕೃಷಿಕರು ಆಗಿದ್ದರು. ಮೂರನೆಯವರು ಅರ್‍ದು, ಅಂದರೆ ದಾಸರು. ಇವರಲ್ಲಿ ಮೊದಲನೆಯ ವರ್ಗ ಅಥವಾ ಅಮೇಲು ಅವರು ವಿಶೇಷ ಪರಿಗಣನೆಯಾಗಿತ್ತು. ಅವರ ಪೌರ ಹಕ್ಕು ಹಾಗೂ ಅವಕಾಶಗಳು ಇತರರಿಗಿಂತ  ಭಿನ್ನವಾಗಿತ್ತು. ಅವರ ಧನ ಹಾಗೂ ಜೀವಕ್ಕೆ ಹೆಚ್ಚಿನ ಬೆಲೆ ಇರುತ್ತಿತ್ತು. (ಅದೇ ಟಿಪ್ಪಣಿ)

ಈ ವರ್ಗಗಳ ವಿಂಗಡನೆಗೂ ವಿಗ್ರಹದಲ್ಲಿ ಅಧಿಷ್ಠಿತವಾದ ದೇವ ವಿಶ್ವಾಸವೇ ಮೂಲ ಆಧಾರವಾಗಿತ್ತು. ಅವರು ಹುಟ್ಟಿನಿಂದಲೇ ದೇವನಿಂದ ಪ್ರತ್ಯೇಕವಾದವರೆಂದೂ, ಅನುಗ್ರಹಿಸಲ್ಪಟ್ಟವರೆಂಬುದೂ ಆಗಿತ್ತು. ವಿಗ್ರಹವು ಒಡೆಯುವಾಗ ರಾಜನ ಅಧಿಕಾರವೂ ಒಡೆಯುತ್ತದೆ. ಕಾರಣವೇನೆಂದರೆ ರಾಜನು ಕೇವಲ ರಾಜನಲ್ಲ. ವಿಗ್ರಹಗಳು ಧ್ವಂಸವಾಗುವಾಗ ಶ್ರೀಮಂತರ ವಿಶೇಷ ಹಕ್ಕುಗಳು ಕೂಡ ಧ್ವಂಸವಾಗುತ್ತವೆ. ಏಕೆಂದರೆ ಇದು ಸ್ವಯಂಭುವೋ ಅಥವಾ ಪ್ರಕೃತಿದತ್ತವೋ ಅಲ್ಲ. ವಿಗ್ರಹದಲ್ಲಿ ಅಧಿಷ್ಠಿತವಾದ ಧರ್ಮವು ನೀಡಿರುವುದಾಗಿದೆ.

ಇಬ್ರಾಹೀಮ್(ಅ)ರ ಸಂದೇಶ ಪ್ರಚಾರ ವಿಗ್ರಹಗಳ ವಿರುದ್ಧವಾಗಲು ಇದ್ದ ಒಂದು ಕಾರಣ ಇದುವೇ ಆಗಿತ್ತು. ಅಲ್ಲಿನ ಸಾಮಾಜಿಕ ಜೀವನವು ವಿಗ್ರಹದಲ್ಲಿ ನೆಲೆನಿಂತಿತ್ತು. ಆ ಸಮಾಜದಲ್ಲಿ ಬದಲಾವಣೆಗಳು ನಡೆಯಬೇಕಾದರೆ ಆ ವಿಗ್ರಹಗಳು ಪ್ರತಿನಿಧಿಸುವ ಆದರ್ಶದ ಮೇಲೆ ಕೈ ಇಡಬೇಕಾಗಿತ್ತು.

ಮೂಸಾ(ಅ)ರ ಸಮೂಹದಲ್ಲೂ ವಿಗ್ರಹಗಳಿದ್ದವು. ಸೂರಃ ಅಅïರಾಫ್‍ನ 127ನೇ ವಾಕ್ಯದಲ್ಲಿ ಹೀಗಿದೆ: “ಫಿರ್‍ಔನ್‍ನೊಡನೆ ಅವನ ಜನಾಂಗದ ಸರದಾರರು ಹೀಗೆ  ಹೇಳಿದರು, “ನೀನು ಮೂಸಾ ಮತ್ತು ಅವನ ಜನಾಂಗವನ್ನು ದೇಶದಲ್ಲಿ ಗೊಂದಲ ಹಬ್ಬಿಸುತ್ತಿರಲಿಕ್ಕೂ ನಿನ್ನ ಹಾಗೂ ನಿನ್ನ ಆರಾಧ್ಯರ ಆರಾಧನೆಯನ್ನು ತೊರೆದು ಬಿಡಲಿಕ್ಕಾಗಿ ಹೀಗೆಯೇ ಬಿಟ್ಟು ಬಿಡುವೆಯಾ?” ಫಿರ್‍ಔನನು ಹೇಳಿದನು: “ನಾನು ಅವರ ಗಂಡು ಮಕ್ಕಳನ್ನು ಕೊಲೆ ಮಾಡಿಸುವೆನು ಮತ್ತು ಅವರ ಹೆಣ್ಮಕ್ಕಳನ್ನು  ಜೀವಂತವಿರಲು ಬಿಡುವೆನು. ಅವರ ಮೇಲೆ ನಮ್ಮ ಅಧಿಕಾರ ಮುಷ್ಠಿಯು ಬಿಗಿಯಾಗಿದೆ.

ಫರೋವ ಸ್ವಯಂ ದೇವನೆಂದು ಹೇಳುವವನಾಗಿದ್ದ. ಆದರೆ ಫರೋವನು ಆರಾಧಿಸುತ್ತಿದ್ದ ಬೇರೆ ದೇವರುಗಳು ಅಥವಾ ವಿಗ್ರಹಗಳು ಅಲ್ಲಿತ್ತು. ಮೂಸಾ(ಸ)ರ ಸಂದೇಶವು ವಿಗ್ರಹದ ವಿರುದ್ಧವಾಗಿರಲಿಲ್ಲ. ಫರೋವನ ವಿರುದ್ಧವಾಗಿತ್ತು. ಕಾರಣವೇನೆಂದರೆ ಅಲ್ಲಿನ ಕೇಂದ್ರ ಬಿಂದು (ಅಡಿಪಾಯ) ವಿಗ್ರಹಗಳಾಗಿರಲಿಲ್ಲ. ಫರೋವನೇ ಆಗಿದ್ದ.  ದೇವರು ಮತ್ತು ವಿಗ್ರಹವು ಫಿರ್‍ಔನನ್ನು ಹಿಂಬಾಲಿಸುತ್ತಿತ್ತು. ಆದರೆ ಫರೋವನೇ ಅಲ್ಲಿ ಎಲ್ಲವೂ ಆಗಿದ್ದ. ಒಂದು ಸಮಾಜದ ಸಂದೇಶ ಪ್ರಚಾರದ ಕೇಂದ್ರೀಯ ವಿಷಯ  ನಿಶ್ಚಯಿಸಲ್ಪಡಬೇಕಾದುದು ಈ ಸಮಾಜದ ತಳಹದಿ ಯಾವುದು ಎಂಬ ಆಧಾರದಲ್ಲಾಗಿರಬೇಕು. ಆ ಸಮಾಜದ ಬೇರನ್ನು ಅರಿಯದ ಸಂದೇಶ ಪ್ರಚಾರ ಕಾರ್ಯಗಳಿಗೆ  ಸೂಕ್ತ ಸಾಮಾಜಿಕ ಪರಿವರ್ತನೆ ಸಾಧ್ಯವಿಲ್ಲ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …