Home / ಲೇಖನಗಳು / ಹಜ್ಜ್ ನ ಬಳಿಕ ಹೊಸ ಜೀವನ

ಹಜ್ಜ್ ನ ಬಳಿಕ ಹೊಸ ಜೀವನ

ಸಂಗ್ರಹ: ಎನ್.ಎಂ. ಪಡೀಲ್

ಅಬೀ ಹುರೈರ(ರ): ಕಾ ಅನ್ನ ರಸೂಲುಲ್ಲಾಹಿ(ಸ) ಕಾಲ; ಅಲ್ ಉಮ್ರತು ಇಲಲ್ ಉಮ್ರತಿ ಕಫ್ಪಾರತುನ್ ಲಿಮಾ ಬೈನಹುಮಾ, ವಲ್‍ಹಜ್ಜುಲ್ ಮಬ್‍ರೂರು ಲೈಸ  ಲಹೂ ಜಝಾಉನ್ ಇಲ್ಲಲ್ ಜನ್ನತು. (ಮುತ್ತಫಕುನ್ ಅಲೈಹಿ)
ಅಬೂ ಹುರೈರಾ(ರ) ವರದಿ ಹೀಗೆ ಮಾಡಿದ್ದಾರೆ- ಪ್ರವಾದಿ(ಸ) ಹೇಳುತ್ತಾರೆ, ಒಂದು ಉಮ್ರವು ಇನ್ನೊಂದು ಉಮ್ರದ ವರೆಗಿನ ಪಾಪಗಳನ್ನು ತೊಳೆಯುತ್ತದೆ. ಇನ್ನು ಸ್ವೀಕಾರಾರ್ಹ ಹಜ್ಜ್ ನ ಬದಲಿ ಸ್ವರ್ಗವಲ್ಲದೆ ಇನ್ನೇನೂ ಇಲ್ಲ.

ಇಸ್ಲಾಮ್‍ನ ಐದು ಆಧಾರ ಸ್ತಂಭಗಳಲ್ಲಿ ನಾಲ್ಕನೆಯದೇ ಹಜ್ಜ್. ಆರ್ಥಿಕ ಹಾಗೂ ಎಲ್ಲಾ ಸೌಕರ್ಯಗಳಿರುವ ಸತ್ಯವಿಶ್ವಾಸಿಗಳು ಜೀವನದಲ್ಲಿ ಒಮ್ಮೆ ಹಜ್ಜ್ ಕಡ್ಡಾಯವಾಗಿ  ನಿರ್ವಹಿಸಬೇಕು. ಅಬ್ದುಲ್ಲಾ ಇಬ್ನು ಉಮರ್(ರ)ರಿಂದ ವರದಿಯಾಗಿದೆ. ಇಸ್ಲಾಮ್ ಐದು ಕಾರ್ಯಗಳನ್ನು ಒಳಗೊಂಡಿದೆ.
1. ಅಲ್ಲಾಹನಲ್ಲದೆ ಆರಾಧ್ಯನಿಲ್ಲ. ಮುಹಮ್ಮದ್(ಸ) ಅಲ್ಲಾಹನ ಸಂದೇಶ ವಾಹಕನೆಂಬ ಸತ್ಯಸಾಕ್ಷ್ಯ.
2. ನಮಾಝ್.
3. ಝಕಾತ್.
4. ಹಜ್ಜ್ ನಿರ್ವಹಿಸುವುದು.
5. ರಮಝಾನ್‍ನಲ್ಲಿ ಉಪವಾಸ ಆಚರಿಸುವುದು. (ಬುಖಾರಿ ಮುಸ್ಲಿಮ್)

ಹಜ್ಜ್ ಕಡ್ಡಾಯವಲ್ಲವೆಂದು ಹೇಳುವವರ ವಾದಕ್ಕೆ ಇಸ್ಲಾಮಿನಲ್ಲಿ ಯಾವ ಬೆಲೆಯೂ ಇಲ್ಲ. ಅಂತಹವರು ಧರ್ಮಭ್ರಷ್ಟರಾಗಿದ್ದಾರೆ. ಈ ಭವನದವರೆಗೆ ತಲಪಲು ಸಾಧನಾನುಕೂಲತೆಗಳಿರುವವನು ಅದರ `ಹಜ್ಜ್’ ಯಾತ್ರೆ ಕೈಗೊಳ್ಳಬೇಕೆಂಬುದು ಜನರ ಮೇಲೆ ಅಲ್ಲಾಹನ ಹಕ್ಕಾಗಿರುತ್ತದೆ. ಈ ಆಜ್ಞೆಯ ಅನುಸರಣೆಯನ್ನು ಯಾರಾದರೂ ನಿರಾಕರಿಸಿದರೆ ಅಲ್ಲಾಹನು ಸಕಲ ಜಗತ್ತಿನವರಿಂದ ನಿರಪೇಕ್ಷನಾಗಿರುತ್ತಾನೆ ಎಂಬುದನ್ನು ಅವನು ಅರಿತಿರಬೇಕು. (ಪವಿತ್ರ ಕುರ್‍ಆನ್- 3:97)

ಈ ಸೂಕ್ತದಲ್ಲಿ ಕುರ್‍ಆನ್ ಉಪಯೋಗಿಸಿದ ಮೂಲ ಪದ `ಕಫರ’ (ನಿಷೇಧ) ಎಂದಾಗಿದೆ. ಹಜ್ಜ್ ನಿರ್ವಹಿಸಲು ಅನುಕೂಲತೆ ಇದ್ದರೂ ನಿರ್ವಹಿಸದೆ ಮರಣ ಹೊಂದಿದವರ ಸ್ಥಿತಿಯನ್ನು ಇದು ಸೂಚಿಸುತ್ತದೆ. ಆರೋಗ್ಯ, ಸುಗಮ ಸಂಚಾರ ವ್ಯವಸ್ಥೆ, ಸುರಕ್ಷಿತ ದಾರಿ ಇದನ್ನು `ಇಸ್‍ತಿತ್ವಾಅï'(ಸಾಮರ್ಥ್ಯ) ವೆಂದು ಸೂಚಿಸಿರುವುದು.

ಪ್ರವಾದಿ ಇಬ್ರಾಹೀಮ್(ಅ) ತ್ಯಾಗೋಜ್ವಲವಾದ ಕುಟುಂಬ ಜೀವನದ ಸ್ಮರಣೆಯೇ ಈ ಹಜ್ಜ್. ಅಲ್ಲಾಹನಿಗಾಗಿ ತನಗಿಷ್ಟವಾದ ಎಲ್ಲವನ್ನೂ ತ್ಯಾಗ ಮಾಡುತ್ತೇನೆಂಬ ನಿರ್ಧಾರವೇ ಹಜ್ಜ್ ಮೂಲಕ ಪ್ರತಿಬಿಂಬಿಸುತ್ತದೆ. ಅಲ್ಲಾಹನ ಅನುಸರಣೆಗೆ ಕುಟುಂಬ, ಮಗ ಯಾವುದೂ ಅವರಿಗೆ ಅಡ್ಡಿಯಾಗಲಿಲ್ಲ. ಅಂತಿಮವಾಗಿ ದೇವನ ಆದೇಶಕ್ಕೆ  ಶಿರ ಬಾಗಿ ತನ್ನ ಕರುಳಕುಡಿಯನ್ನು ಬಲಿಯ ರ್ಪಿಸಲು ಸಿದ್ಧರಾದರು. ತಂದೆಯ ಕೆಲಸಕ್ಕೆ ಕೊರಳೊಡ್ಡಲೂ ಮಗನೂ ಉತ್ಸುಕನಾದನು.

ಸಫಾ-ಮರ್ವ ನಡುವಿನ ಓಟ, ಬಲಿಯರ್ಪಣೆ- ಇದು ಇಬ್ರಾಹೀಮ್(ಅ) ಮತ್ತು ಕುಟುಂಬದ ಕ್ರಿಯಾಶೀಲತೆಯನ್ನು ಸ್ಮರಿಸುವುದಾಗಿದೆ. ಈ ಕ್ರಿಯಾಶೀಲತೆಯೇ ಹಜ್ಜನ್ನು ಒಂದು ವಿಶಿಷ್ಟ ಆರಾಧನೆಯಾಗಿ ಮಾರ್ಪಡಿಸಿದೆ. ಅಬೂಹುರೈರ(ರ)ರಿಂದ ವರದಿಯಾಗಿದೆ: ಜನರು ಪ್ರವಾದಿಯೊಂದಿಗೆ ಅತ್ಯುತ್ತಮ ಕೆಲಸ ಯಾವುದು ಎಂದು  ಪ್ರಶ್ನಿಸಿದಾಗ ಅಲ್ಲಾಹ್ ಮತ್ತು ಅವನ ಪ್ರವಾದಿಯೊಂದಿಗಿನ ವಿಶ್ವಾಸವೆಂದರು. ಆ ಬಳಿಕ ಯಾವುದೆಂದು ಕೇಳಿದಾಗ ಅಲ್ಲಾಹನ ಮಾರ್ಗದಲ್ಲಿ ಮಾಡುವ ಧರ್ಮ ಯುದ್ಧ.  ಆ ನಂತರವೇನೆಂದು ವಿಚಾರಿಸಿದಾಗ ಪುಣ್ಯದಾಯಕವಾದ ಹಜ್ಜ್ ಕರ್ಮವೆಂದರು.

ಆಯಿಶಾ(ರ) ಹೇಳುತ್ತಾರೆ- ನಾನು ಹೇಳಿದೆ, ಪ್ರವಾದಿವರ್ಯರೇ(ಸ)! ಜಿಹಾದ್ ಅತ್ಯುತ್ತಮ ಕರ್ಮವೆಂದು ನಾವು ಭಾವಿಸುತ್ತೇವೆ. ನಾವು ಜಿಹಾದ್ ಮಾಡಬಾರದೇ?  ಪ್ರವಾದಿ(ಸ) ಹೇಳಿದರು, ಅಲ್ಲ, ಸ್ವೀಕಾರಾರ್ಹ ಹಜ್ಜ್ ಅತಿ ದೊಡ್ಡ ಜಿಹಾದ್ ಆಗಿದೆ.

ಅಬೂ ಹುರೈರ(ರ) ಹೇಳುತ್ತಾರೆ, ಪ್ರವಾದಿ(ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ. ಯಾರು ಅಲ್ಲಾಹನಿಗಾಗಿ ಹಜ್ಜ್ ಮಾಡುವವನು ಅದರಲ್ಲಿ ಸಂಸರ್ಗವಾಗಲಿ,  ಅಶ್ಲೀಲ ಮಾತುಕತೆಯಾಗಲಿ, ಯಾವುದೇ ಪಾಪ ಕಾರ್ಯವಾಗಲಿ ಮಾಡದೆ ಇದ್ದರೆ, ಅವನು ಆಗ ತಾನೇ ಹುಟ್ಟಿದ ಮಗುವಿನಂತೆ ಪರಿಶುದ್ಧನಾಗಿ ಮರಳುತ್ತಾನೆ.

ಜಗತ್ತಿನ ಅಷ್ಟ ದಿಕ್ಕುಗಳಿಂದ ಪ್ರತಿ ವರ್ಷ ತಂಡೋಪತಂಡವಾಗಿ ಲಕ್ಷಾಂತರ ಜನರು ಮಕ್ಕಾ ನಗರಕ್ಕೆ ಬಂದು ಸೇರುತ್ತಾರೆ. ಅಲ್ಲಿ ಶ್ರೀಮಂತ-ಬಡವವೆಂಬ ವ್ಯತ್ಯಾಸವಿಲ್ಲ.  ದೇಶ, ಭಾಷೆ, ವರ್ಗ, ವರ್ಣವೆಂಬ ಭೇದ ಭಾವವಿಲ್ಲ. ಅಲ್ಲಿ ಅವರನ್ನು ಬೇರ್ಪಡಿಸುವ ಜಾಗತಿಕ ಶಕ್ತಿಗಳಿಲ್ಲ. ಇಸ್ಲಾಮಿನ ಸಮಾನತೆ, ಸಹೋದರತೆಯನ್ನು ಸಾರಿ ಹೇಳುವ  ಜಾಗತಿಕ ಮಹಾ ಸಂಗಮವೇ ಹಜ್ಜ್.

ಹಜ್ಜ್ ಮುಗಿಸಿ ಪಾಪಗಳಿಂದ ಮುಕ್ತನಾಗಿ ಬರುವ ವ್ಯಕ್ತಿಯು ಆ ಬಳಿಕ ವಿರಾಗಿಯಂತೆ ಇಹಲೋಕದ ಕರ್ಮಗಳಿಂದ ವಿಮುಖನಾಗಿ ಜೀವಿಸಬೇಕೆಂದಿಲ್ಲ. ಪ್ರವಾದಿ ಇಬ್ರಾಹೀಮ್(ಅ) ರಂತೆ ಸದಾ ಕರ್ಮನಿರತ, ಶ್ರಮದಾಯಕ, ಸದಾ ಚಟುವಟಿಕೆಯಿಂದ ಕೂಡಿರುವ ಕ್ರಿಯಾಶೀಲ ವ್ಯಕ್ತಿಯಾಗಿ ಬದಲಾಗಬೇಕಿದೆ. ಇಬ್ರಾಹೀಮ್(ಅ)ರಂತೆ  ಉನ್ನತ ಧ್ಯೇಯಗಳ ಸಾಧನೆಗೆ ಜೀವನ ಪರ್ಯಂತ ಹೋರಾಟ ಮತ್ತು ತ್ಯಾಗಗಳನ್ನು ಮಾಡಬೇಕಿದೆ. ಅಲ್ಲಾಹನ ನಿರ್ದೇಶಗಳನ್ನು ಚಾಚೂ ತಪ್ಪದೆ ಪಾಲಿಸಿ ಅವನ ಇಷ್ಟ ದಾಸರಲ್ಲಿ ಸೇರಲು ಪ್ರಯತ್ನಿಸಬೇಕಿದೆ. ಅಲ್ಲಾಹನು ನಮ್ಮನ್ನು ಅವನ ಪ್ರೀತಿ ಪಾತ್ರರಲ್ಲಿ ಸೇರಿಸಲಿ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …