@ ಎಂ.ಎಸ್. ಶೈಜು
ಈ ವಿಶ್ವದ ನಿಗೂಢತೆಗಳ ಹಿಂದೆ ಒಂದು ಮಹಾನ್ ಶಕ್ತಿಯಿದೆ ಎಂದು ಮನುಷ್ಯರಲ್ಲಿ ಬಹುಸಂಖ್ಯೆಯ ಜನರ ನಂಬಿಕೆಯಾಗಿದೆ. ಆ ಶಕ್ತಿಯೊಂದಿಗೆ ಮಾನವ ಕುಲದೊಂದಿಗೆ ಪ್ರತ್ಯಕ್ಷ ವಾದ ಸಂಬಂಧವನ್ನು ದೇವ ಗ್ರಂಥಗಳು ಪ್ರತಿನಿಧಿಸುತ್ತವೆ. ದೇವನ ಮಾರ್ಗದರ್ಶನವಾಗಿ ಮನುಷ್ಯರಿಗೆ ಲಭಿಸಿದ ಮಾರ್ಗದರ್ಶನವದು. ಅದರಲ್ಲಿ ಅಂತಿಮ ದೇವಗ್ರಂಥವೇ ಪವಿತ್ರ ಕುರ್ಆನ್.
ಕುರ್ಆನ್ ತನ್ನನ್ನು ಆ ರೀತಿ ಪರಿಚಯಿಸುತ್ತದೆ. ಮಾನವನ ಜೀವನಕ್ಕೆ ಅಗತ್ಯವಾದ ಸೂಚನೆಗಳನ್ನು ಕುರ್ಆನ್ ಮುಂದಿರಿಸುತ್ತದೆ. `ನ್ಯಾಯ’ ಎಂಬ ಒಂದು ಅಳತೆಗೋಲಿನಿಂದ ಮಾನವ ಜೀವನವನ್ನೂ, ಅದರ ಹಿನ್ನಲೆಯನ್ನೂ ತಿಳಿದುಕೊಳ್ಳಲು ಮನುಷ್ಯನಿಗೆ ಸಾಮರ್ಥ್ಯವನ್ನು ನೀಡುವ ಗ್ರಂಥವೆಂದು ಹೇಳಬಹುದು. ದೇವಗ್ರಂಥಗಳು ದೇವನ ವಚನಗಳ ಸಮಾಹಾರವಾಗಿದೆ. ಮಾನವನೊಂದಿಗೆ ಅವನ ಭಾಷೆಯಲ್ಲಿ ಅದು ಮಾತನಾಡುತ್ತದೆ. ಅದನ್ನು ಅತ್ಯಂತ ಧನಾತ್ಮಕವಾಗಿ ಕೃತಜ್ಞತಾಪೂರ್ವಕವಾಗಿ, ಚಿಂತನಾ ಶೈಲಿಯಿಂದ ಅಧ್ಯಯನ ನಡೆಸಬೇಕು. ಹಲವು ಆದರ್ಶಗಳನ್ನು ಆಳವಾಗಿ ಒಳಗೊಂಡಿರುವುದು ದೇವಗ್ರಂಥಗಳ ವಿಶೇಷತೆಯಾಗಿದೆ.
ಕುರ್ಆನ್ನ ಕುರಿತು ಹೇಳುವುದಾದರೆ, ಓದುವವನ ಜ್ಞಾನ ಹಾಗೂ ಅನುಭವಗಳ ಸಾಮರ್ಥ್ಯಗಳಿಂದ ಮಾತ್ರ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾಗುವಂತಹ ವಿವರಗಳು ಅದರ ಲ್ಲಿದೆ. ಅತ್ಯಂತ ಆಳವಾಗಿ ಅಧ್ಯಯನ ನಡೆಸುವಾಗ ಮಾತ್ರ ಬಹಿರಂಗವಾಗುವ ಆಂತರಿಕ ಜ್ಞಾನವನ್ನು ಎಲ್ಲರಿಗೂ ಕಂಡುಕೊಳ್ಳಲು ಸಾಧ್ಯವಾಗಬೇಕಾಗಿಲ್ಲ. ಓದುವಾಗ ಅದು ಎಲ್ಲರಲ್ಲೂ ಸೃಷ್ಟಿಸುವ ಜ್ಞಾನದ ವ್ಯಾಪ್ತಿ ಅವರ ವೈಯಕ್ತಿಕ ಸಾಮರ್ಥ್ಯಕ್ಕೆ ತಕ್ಕುದಾಗಿರುತ್ತದೆ ಎಂದರ್ಥ. ಕುರ್ಆನ್ ಇದನ್ನು ಬುದ್ಧಿವಂತರಿಗೂ ಚಿಂತನೆ ನಡೆಸುವವರಿಗೂ ಪರಿಮಿತಗೊಳಿಸಿದೆ.
ಕುರ್ಆನ್ ಆಳವಾದ ಅಧ್ಯಯನಗಳಿಂದ ಅದರ ಆಶಯಗಳು ಜೀವನದ ಆದರ್ಶಗಳೆಡೆಗೂ ಬದುಕುತ್ತಿರುವ ಸಮಾಜದ ವಾತಾವರಣಗಳಿಗೂ ನಿರಂತರವಾಗಿ ತಲುಪುವುದರೊಂದಿಗೆ ಅದರ ಅಧ್ಯಯನ ಸಾಕ್ಷಾತ್ಕಾರಗೊಳ್ಳುತ್ತದೆ. ಪವಿತ್ರ ಕುರ್ಆನ್ನ ಅವತೀರ್ಣವಾಗಿ ಹದಿನಾಲ್ಕು ಶತಮಾನಗಳು ಕಳೆದಿದೆ. ಪರಮ ಸತ್ಯದೆಡೆಗಿನ ಬೆಳಕು ಹಾಗೂ ಮಾರ್ಗದರ್ಶನವೆಂಬ ವಾದದೊಂದಿಗೆ ಅದು ಇಂದಿಗೂ ಉಳಿದುಕೊಂಡಿದೆ. ಲೋಕಾಂತ್ಯದವರೆಗೆ ಅದರ ಆಶಯ, ಆದರ್ಶಗಳಿಗೆ ಸ್ವಲ್ವವೂ ಧಕ್ಕೆಯಾಗದಂತೆ ಉಳಿಯುತ್ತದೆಂಬ ಆತ್ಮವಿಶ್ವಾಸದೊಂದಿಗೆ ತಲೆಮಾರುಗಳನ್ನು ದಾಟಿ ಕುರ್ಆನ್ ಇಂದಿನವರೆಗೆ ತಲುಪಿದೆ. ಹದಿನಾಲ್ಕು ಶತಮಾನಗಳ ನಿರಂತರ ಅಧ್ಯಯನದ ಬೆಂಬಲ ಕುರ್ಆನ್ಗಿದೆ. ಈ ಅಧ್ಯಯನದ ಅನುಭವಗಳು ಎಲ್ಲಾ ಕಾಲದಲ್ಲೂ ಒಂದೇ ಆಗಿರುವ ಸಾಧ್ಯತೆಯಿಲ್ಲ. ಪ್ರತಿಯೊಬ್ಬರ ಓದುವ ಅನುಭವವು ಬೇರೆ ಬೇರೆ ಆಲೋಚನೆ, ಚಿಂತನೆಯಾಗಿ ಸಾಗುತ್ತಿರುತ್ತದೆ. ಜೀವನದಲ್ಲಿ ಅರಿವು ಹಾಗೂ ಅನುಭವಗಳು ಹೆಚ್ಚುವಾಗ ನಾವು ನಡೆಸುವ ಅಧ್ಯಯನಗಳು ಹೊಸತನ, ಹೊಸ ಆಶಯದಡೆಗೆ ನಮ್ಮನ್ನು ತಲುಪಿಸುತ್ತದೆ.
ವಾಸ್ತವಿಕತೆಗಳ ಬೆಂಬಲಗಳಿಂದ ಮಾತ್ರವೇ ಒಬ್ಬರಿಗೆ ಅಧ್ಯಯನಗಳನ್ನು ನಿರೀಕ್ಷಿಸಲು ಸಾಧ್ಯ. ಪರಿಸ್ಥಿತಿಗಳು ಬದಲಾವಣೆಯಾಗುವಾಗ ಓದುವ ಆಶಯಗಳೂ ಬದಲಾವಣೆಗೊಳ್ಳುತ್ತದೆ. ಈ ಬದಲಾವಣೆಗಳು ಏಳಿಗೆಗೆ ಕಾರಣವಾಗುತ್ತದೆಯೇ ಎಂಬುದನ್ನು ಅವಲಂಬಿಸಿ ಪ್ರತಿಯೊಂದೂ ಅಧ್ಯಯನ ಪ್ರಸ್ತುತತೆ ಪಡೆದುಕೊಳ್ಳುತ್ತದೆ. ಇದರ ಹೊರತಾದ ಅಧ್ಯಯನಗಳು ಕಾಲಗಳನ್ನು ಜಯಿಸಿ ಹೆಚ್ಚು ಕಾಲ ಮುಂದುವರಿಯುವುದು ಸಾಧ್ಯವಿಲ್ಲ. ಅದು ಬಹಳ ವೇಗವಾಗಿ ತಿರಸ್ಕರಿಸಲ್ಪಡುತ್ತದೆ. ಕುರ್ಆನ್ನ ಕುರಿತು ಹೇಳುವುದಾದರೆ ಮನುಷ್ಯನ ಸಾಮೂಹಿಕವಾದ ಶಿಕ್ಷಣದ ಪರಿಧಿಗಳು ವ್ಯತ್ಯಾಸವಾಗುತ್ತಿರುವಂತೆಯೇ ಅಥವಾ ಲೋಕ ಬದಲಾವಣೆಗೊಳ್ಳುತ್ತಿದ್ದಂತೆಯೇ ಕುರ್ಆನ್ನ ಒಂದೊಂದು ಆಶಯಗಳಿಗೂ ಹಲವು ವ್ಯಾಖ್ಯಾನಗಳು ಸಾಧ್ಯವಾಗುತ್ತದೆ. ಕುರ್ಆನ್ ಎಂದೆಂದೂ ಉಳಿದುಕೊಳ್ಳುವುದೆಂದು ನಾವು ವಾದಿಸುವಾಗ ಅದರೊಂದಿಗೆ ಕುರ್ಆನನ್ನು ಸಕಾಲಿಕ ಚಿಂತನೆಗಳಿಗೆ ಒಳಪಡಿಸಬೇಕೆಂಬುದು ಅದು ನಮ್ಮೊಂದಿಗೆ ಸೂಚಿಸುತ್ತದೆ.
ಮಾನವ ವೈಜ್ಞಾನಿಕವಾಗಿ ಶೈಕ್ಷಣಿಕವಾಗಿ ಮುಂದುವರಿಯುತ್ತಿರುವಂತೆಯೇ ಅವನು ಅದುವರೆಗೆ ತಿಳಿದುಕೊಂಡಿದ್ದ ಹಿಂದಿನವುಗಳನ್ನು ತಿದ್ದಿಕೊಳ್ಳುತ್ತಾ ವರ್ತಮಾನವನ್ನು ತಿಳಿದುಕೊಂಡು ಮಾನವ ಕುಲವು ಇದುವರೆಗೆ ಮುಂದುವರಿದುಕೊಂಡು ಬಂದಿದೆ. ಮನುಷ್ಯನ ಭೂತಕಾಲದಿಂದ ವರ್ತಮಾನ ಕಾಲದವರೆಗಿನ ಪರಿಣಾಮಗಳನ್ನು ಅವುಗಳಿಗೆ ಆಧಾರವಾಗುವ ಶಾಸ್ತ್ರವನ್ನು ಸಾಮಾಜಿಕ ಶಾಸ್ತ್ರ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಕಾಲಕ್ಕೂ ಅದರದೇ ಆದ ಸಾಮಾಜಿಕ ಶಾಸ್ತ್ರವಿದೆ. ಆ ಕಾಲದ ಸಾಮಾಜಿಕ ಪರಿಸ್ಥಿತಿಯೆಂದರೆ ಅಂದಿನ ಸಮಾಜ ಶಾಸ್ತ್ರವಾಗಿದೆ. ಸಮಾಜ ಶಾಸ್ತ್ರದ ಬೆಳವಣಿಗೆಯೂ, ಅದರಿಂದ ರೂಪುಗೊಳ್ಳುವ ದೃಷ್ಟಿಕೋನಗಳೂ ಮಾನವನ ಎಲ್ಲಾ ಅಭಿವೃದ್ಧಿಗೂ ಆಧಾರವಾಗಿದೆ. ಮಾನವನ ಜೀವನವನ್ನು ಸಂಪೂರ್ಣ ಬದಲಾಯಿಸುತ್ತಿರುವ ಸಮಾಜ ಶಾಸ್ತ್ರವು ಕುರ್ಆನ್ ಅಧ್ಯಯನದ ಆಧಾರದಲ್ಲಿ ಪರಿಗಣಿಸಬೇಕೇ ಎಂಬುದು ಒಂದು ವಿಷಯ. ಹಾಗೆಂದಾದರೆ ಇನ್ನೊಂದು ಕಾಲದ ಸಮಾಜ ಶಾಸ್ತ್ರವನ್ನು, ಅಂದಿನ ಸಾಮಾಜಿಕ ವಿಶೇಷತೆಗಳನ್ನು ಮುಂದಿರಿಸಿ ಆದೇಶಿಸಲಾದ ಆಜ್ಞೆಗಳನ್ನು ಹೇಗೆ ಹೊಸ ಸಾಮಾಜಿಕ ಪರಿಸ್ಥಿತಿಯಲ್ಲಿ ಸ್ವೀಕರಿಸಬೇಕು ಎಂಬುದು ಮುಖ್ಯ ಚಿಂತನಾರ್ಹ ವಿಷಯವಾಗುತ್ತದೆ.
ಉದಾಹರಣೆ, ಒಂದು ಸಂದಿಗ್ಧ ರಾಜಕೀಯ ಪರಿಸ್ಥಿತಿಯಲ್ಲಿ ಕರಾರುಗಳನ್ನು ಉಲ್ಲಂಘಿಸಿ ಸಹಪಕ್ಷವನ್ನು ಒಂದು ಮಹಾ ವಿಪತ್ತಿಗೆ ದೂಡಿದಾಗ ಒಂದು ವಿಭಾಗವನ್ನು ಪ್ರವಾದಿ(ಸ)ರು ಆಯುಧದಿಂದ ಎದುರಿಸಿದರು. ಅನುಯಾಯಿಗಳೊಂದಿಗೆ ಅವರ ವಿರುದ್ಧ ಯುದ್ಧ ಮಾಡಿ, ಅವರು ಮಾಡಿದಂತಹ ಸಾಮಾಜಿಕ ದ್ರೋಹಕ್ಕೆ, ಅಕ್ರಮಣ ಅನ್ಯಾಯಗಳಿಗಾಗಿ ಅವರನ್ನು ಆಕ್ರಮಿಸಿ ಅಂದಿನ ಕಾಲದ ಜನರಿಗೆ ನ್ಯಾಯದ ಪಾಠವನ್ನು ತೋರಿಸಿಕೊಟ್ಟರು. ಪ್ರವಾದಿಯವರ(ಸ) ಜೀವನವೇ ಸಂಪೂರ್ಣ ಕುರ್ಆನ್ನಂತೆ ಇತ್ತು ಎಂದು ಹೇಳುವಾಗ, ಅವರು ಕುರ್ಆನ್ನ ಆದೇಶಗಳನ್ನು ಅಂದಿನ ಸಾಮಾಜಿಕ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಆ ನಿಲುವನ್ನು ಸ್ವೀಕರಿಸಿದ್ದರೆಂದು ಹೇಳಬಹುದು. ದೇಶ, ಅಂತಾರಾಷ್ಟ್ರೀಯ ಸಂಬಂಧ ಗಳು, ದೇಶದ ಗಡಿಗಳು, ದೇಶಗಳ ನಡುವಿನ ಒಪ್ಪಂದಗಳು ವಿಕಾಸ ಹೊಂದಿಲ್ಲದಂತಹ, ಅಂದಿನ ಗೋತ್ರ ಪ್ರಾಬಲ್ಯ ಜನಾಂಗಗಳ ಅಧಿಕಾರಿಗಳ ಸಾಮಾಜಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ, ಇಂದು ಕೂಡಾ ಒಪ್ಪಂದವನ್ನು ಉಲ್ಲಂಘಕರು, ವಂಚಕರೂ ಆದ ಸಮೂಹಗಳೊಂದಿಗೆ, ಒಂದು ದೇಶದ ಮುಸ್ಲಿಮರಿಗೋ ಅಥವಾ ಮುಸ್ಲಿಮ್ ರಾಜ್ಯಗಳಿಗೋ ಹಾಗೆ ಮಾಡಬಹುದೋ ಎಂಬುದು ಮುಖ್ಯ ಪ್ರಶ್ನೆ. ಆಗಬಾರದು ಎಂಬುದು ನಿಮ್ಮ ಉತ್ತರವೆಂದಾದರೆ ಅದಕ್ಕೆ ಕಾರಣವೇನು? ಮುಹಮ್ಮದ್(ಸ) ತೋರಿಸಿಕೊಟ್ಟ ನ್ಯಾಯ ಸಂಸ್ಥಾಪನೆಯ ವಿಧಾನಗಳನ್ನು ಅವರ ಕುರ್ಆನಿನ ಕುರಿತ ನಿಲುವುಗಳನ್ನು ನಿರಾಕರಿಸುವಂತಾಗುವುದಿಲ್ಲವೇ? ಇಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ಅದರ ಪರಿಧಿಯಲ್ಲಿ ಒಪ್ಪಂದ ಉಲ್ಲಂಘನೆ, ವಂಚನೆ, ಗೂಢಾಲೋಚನೆ, ರಾಜಕೀಯ ಅಪರಾಧಗಳ ಕುರಿತು ನಿಲುವು ತೆಗೆದು ಕೊಳ್ಳಬೇಕೆಂಬುದು ನಮ್ಮ ಉತ್ತರವೆಂದಾದರೆ ಕುರ್ಆನ್ನ ಎಲ್ಲಾ ವಿಷಯಗಳನ್ನು ಈ ರೀತಿಯೇ ತೆಗೆದುಕೊಳ್ಳಬಹುದು ಎಂದು ನಮಗೆ ಒಪ್ಪಿಕೊಳ್ಳಬೇಕಾಗುತ್ತದೆ. ಕೆಡುಕುಗಳು ಎಲ್ಲಾ ಕಾಲಗಳಲ್ಲೂ ಕೆಡುಕೇ ಆಗಿದೆ. ಒಳಿತು ಯಾವ ಕಾಲದಲ್ಲೂ ಒಳಿತೇ ಆಗಿದೆ. ಆದರೆ ಆ ಕೆಡುಕುಗಳನ್ನು ಆಳಿಸುವ ಹಾಗೂ ಒಳಿತನ್ನು ಸ್ವೀಕರಿಸಬೇಕಾದ ರೀತಿಗಳು ಎಲ್ಲಾ ಕಾಲದಲ್ಲೂ ಒಂದೇ ಆಗಿರಬೇಕೆಂದಿಲ್ಲ. ನೈಜ ಗುರಿಯನ್ನು ಅಪ್ರಸಕ್ತಗೊಳಿಸದೆ ಅವುಗಳೆಡೆಗೆ ಸಾಗುವ ಹಾದಿಗಳನ್ನು ಕುರ್ಆನ್ ಅಧ್ಯಯನಗಳ ಮೂಲಕ ಕಂಡುಕೊಳ್ಳಬೇಕು.
ಪ್ರತಿಯೋರ್ವ ವ್ಯಕ್ತಿಗೂ ಕುರ್ಆನ್ನಲ್ಲಿ ಒಂದೊಂದು ಪ್ರತ್ಯೇಕ ಅನುಭವಗಳಿವೆ. ಕುರ್ಆನ್ ಆಲೋಚನೆ, ಚಿಂತನೆಗಳಿಂದ ಓದಬೇಕಾದ ಗ್ರಂಥವಾಗಿದೆ ಎಂದು ಒಪ್ಪಿಕೊಳ್ಳುವವರಿಗೆ ಈ ನಿಲುವನ್ನು ನಿರಾಕರಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಯ ಚಿಂತನೆ, ಆಲೋಚನೆಗಳು ಭಿನ್ನವಾಗಿದೆ. ಓರ್ವರ ಬುದ್ಧಿ ಸಾಮರ್ಥ್ಯ ಸಂಶೋಧನಾತ್ಮಕ ಗುಣಗಳನ್ನು ಇತರರಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮನ್ನೇ ಸಂಪೂರ್ಣವಾಗಿ ಕಂಡುಕೊಳ್ಳುವಂತಹ ಒಂದು ಶ್ರಮದಾಯಕ ಯಜ್ಞವೇ ಈ ಇಹಲೋಕವಾಗಿರುವಾಗ, ಅದರಲ್ಲೂ ನಾವು ವಿಜಯಿಯಾಗಲು ಸಾಧ್ಯವಾಗುತ್ತಿಲ್ಲ ಎಂಬುದು ವಾಸ್ತವಿಕತೆಯಾಗಿರುವಾಗ ನಾನು ಇತರರನ್ನು ತಿಳಿಯುವುದಾದರೂ ಹೇಗೆ? ಆದ್ದ ರಿಂದಲೇ ಕುರ್ಆನ್ ವೈಯಕ್ತಿಕವಾದ ಕುರ್ಆನ್ ಅಧ್ಯಯನಗಳು ನಮ್ಮಲ್ಲಿ ಪ್ರತಿಯೊಬ್ಬರ ಜೀವನವನ್ನು ರೂಪಿಸಬೇಕಾಗಿದೆ.
ಓರ್ವರು ಕುರ್ಆನ್ ಓದುವಾಗ ಅದರ ಹಿನ್ನಲೆಯಾಗಿ ಅವನ ಮುಂದೆ ಅವನ ಸುತ್ತಮುತ್ತಲಿನ ಪರಿಸ್ಥಿತಿ, ಆತನ ಜ್ಞಾನ, ಅದನ್ನು ಕುರ್ಆನ್ನೊಂದಿಗೆ ಹೋಲಿಸಿಕೊಳ್ಳುವ ಪ್ರಜ್ಞೆಯಾಗಿದೆ. ಇವೆಲ್ಲ ಮನುಷ್ಯರಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಪ್ರತಿಯೊಬ್ಬರಲ್ಲಿ ವಿಭಿನ್ನವಾಗಿರುವ ಈ ಸಾಮರ್ಥ್ಯಗಳು ಓರ್ವರಿಗೆ ಲಭಿಸುವುದು ದೇವನ ವರದಾನವಾಗಿದೆ. ಓರ್ವ ಪ್ರವಾದಿಯು ಬಂದು ದೇವಗ್ರಂಥಗಳನ್ನು ನ್ಯಾಯ ಪಾಲಿಸುವುದರೊಂದಿಗೆ ವಿಶ್ವದ ಎಲ್ಲಾ ಕುರ್ಆನ್ ವ್ಯಾಖ್ಯಾನಗಳಿಗೂ, ಅದರ ಆಧಾರಗಳಲ್ಲಿ ರಚಿಸಲ್ಪಡುವ ವೈಜ್ಞಾನಿಕ ಗ್ರಂಥಗಳಿಗೂ ಅಧ್ಯಯನ ಹಾಗೂ ವ್ಯಾಖ್ಯಾನದ ಕೆಲವು ಪರಿಮಿತಿಗಳು ಬಾಧಕವಾಗುತ್ತದೆ. ಓರ್ವರು ತನ್ನ ಬದುಕಿನಲ್ಲಿ ಕಳೆದ ಸಮಯ ಹಾಗೂ ಆಯಸ್ಸು ಎಂಬ ಎರಡರಿಂದ ಅವರು ಗಳಿಸಿದ ಅನುಭವಗಳು, ದೃಷ್ಟಿಕೋನಗಳು, ಜ್ಞಾನದ ಸಾಧನೆಗಳು, ಪರಿಮಿತಿಗಳು ಹಾಗೂ ಪರಿಣಾಮಗಳು ಎಲ್ಲಾ ಗ್ರಂಥಗಳಲ್ಲೂ ಕಾಣಸಿಗುತ್ತದೆ. ಓರ್ವರಿಗೆ ಕುರ್ಆನ್ನೆಡೆಗೆ ತಾನು ಸಾಗಿದ ಹಾದಿಯನ್ನು ಮಾತ್ರ ಮಾತನಾಡಲು ಸಾಧ್ಯ. ಒಂದು ವೇಳೆ ಆ ದಾರಿಗಳು ಇತರರ ದಾರಿಗಳಿಗೆ ಇರುವ ಕಾಲುದಾರಿಯಾಗಬಹುದು. ಆತನ ಧರ್ಮದ ಕಡೆಗಿನ ನಡಿಗೆ ಅದಾಗಬೇಕೆಂದು ಹಠ ಹಿಡಿಯಲು ಎರಡನೆಯವನಿಗೆ ಯಾವ ಹಕ್ಕೂ ಇಲ್ಲ. ಅಂತಹ ಹಠಗಳಿಗೆ ಧಾರ್ಮಿಕವಾಗಿ ಸಾಧ್ಯತೆಯೂ ಇಲ್ಲ. ಒಂದು ಆಶಯದ ಮೂಲ ಹಾಗೂ ಅದರ ಓದುಗನ ನಡುವಿರುವ ಬಾಂಧವ್ಯವನ್ನು ವ್ಯಾಖ್ಯಾನವೆಂದು ಹೇಳಬಹುದು. ಓದುವವನು ಸ್ವೀಕರಿಸುವ ಶಕ್ತಿ ಹಾಗೂ ನಿಪುಣತೆಯೊಂದಿಗೆ ನೇರವಾಗಿ ಸಂವಾದ ನಡೆಸಬೇಕಾದ ಮೂಲ ಗ್ರಂಥವು ಒಂದು ಮಾಧ್ಯಮಕ್ಕೆ ವಿಧೇಯವಾಗುತ್ತದೆ ಎಂಬ ಒಂದು ಮಿತಿಯೂ ವ್ಯಾಖ್ಯಾನಗಳನ್ನು ಅಧಿಕೃತ ಮಾಡಿಕೊಳ್ಳುವಾಗ ಸಂಭವಿಸುತ್ತದೆ.
ವ್ಯಾಖ್ಯಾನಗಾರನಿಗೆ ಪುನಃ ಓದುಗರು ಉಂಟಾಗುವಾಗ ಮೂಲ ಗ್ರಂಥವು ನಿರ್ವಹಿಸಬೇಕಾದ ಕಾರ್ಯಕ್ಕೆ ಕೆಲವು ಶಿಥಿಲತೆ ಸಂಭವಿಸುತ್ತದೆ. ವ್ಯಾಖ್ಯಾನಗಾರನ ನಂತರ ದೀರ್ಘ ಅವಧಿ ಬದುಕುವ ಅವಕಾಶ ಸಿಕ್ಕಿದರೆ, ಅವನು ತನ್ನದೇ ಜೀವನದ ಹಲವು ಹೊಸ ಅನುಭವಗಳು, ಅರಿವು, ತಾನು ಕಂಡುಕೊಂಡ ಸತ್ಯಗಳು ಸಾಮಾಜಿಕ ಪರಿಸ್ಥಿತಿಗಳನ್ನು ತಿಳಿದುಕೊಳ್ಳುವ ಅವಕಾಶವಿದ್ದರೆ ತನ್ನ ನಿಲುವುಗಳಲ್ಲಿ ಹೊಸತನವನ್ನು ತರಲು ಸಾಧ್ಯವಾಗುತ್ತಿತ್ತು. ಮಹಾನ್ ವಿದ್ವಾಂಸರಾದ ಇಮಾಮ್ ಶಾಫೀ(ರ)ರ ಜೀವನ ಧರ್ಮದ ಇಂತಹ ಹೊಸ ವ್ಯಾಖ್ಯಾನಗಳಿಗೆ ಒಂದು ಉದಾಹರಣೆಯಾಗಿದೆ. ಕೂಫಾದಲ್ಲಿನ ತನ್ನ ಸುದೀರ್ಘ ವಾಸದ ಸಂದರ್ಭದಲ್ಲಿ ಅವರು ಕುರ್ಆನ್, ಪ್ರವಾದಿ ಚರ್ಯೆಗಳ ಅಧ್ಯಯನ ನಡೆಸಿ ಆ ಜ್ಞಾನದ ಆಧಾರದಲ್ಲಿ ಹಲವು ನಿಲುವನ್ನು ಕೈಗೊಂಡರು. ಧಾರ್ಮಿಕ ಪ್ರಜ್ಞೆ, ಸಾಮೂಹಿಕ, ಕರ್ಮಶಾಸ್ತ್ರ, ಪರವಾದ ಶಾಸ್ತ್ರಗಳ ಬಗ್ಗೆಯೂ ಧಾರಾಳವಾಗಿ ಮಾತನಾಡಿದರು. ಹಲವು ಮಂದಿಯ ಸಂಶಯವನ್ನು ನಿವಾರಿಸಿ, ಸ್ವಂತದ ಅರಿವಿಗಾಗಿ ತನ್ನ ಅಧ್ಯಯನವನ್ನು ಮುಂದುವರಿಸಿದರು. ನಂತರ ಈಜಿಪ್ಟ್ ಗೆ ನಿವಾಸವನ್ನು ಬದಲಿಸಿದ ಒಂದು ಹಂತದಲ್ಲಿ ಇಮಾಮ್ರಿಗೆ ಕೂಫಾಕ್ಕಿಂತ ಅತ್ಯಂತ ಭಿನ್ನವಾದ ಸಾಮಾಜಿಕ ಪರಿಸ್ಥಿತಿ ಎದುರಾಯಿತು. ಹೊಸ ಲೋಕ, ಹೊಸ ಕಾಲ, ಹೊಸ ಸಂಸ್ಕ್ರತಿ, ಹೊಸ ಸಮಾಜ ಹೀಗೆ ಎಲ್ಲವುಗಳಿಂದಲೂ ಹೊಸ ಜೀವನ ಅನುಭವಗಳು ಅವರಿಗೆ ಈಜಿಪ್ಟ್ನಲ್ಲಿ ದೊರೆಯಿತು. ಅವರ ದೇವಗ್ರಂಥದ ಅಧ್ಯಯನದಲ್ಲೂ, ಧಾರ್ಮಿಕ ಅಧ್ಯಯನದಲ್ಲೂ
ಹೊಸ ಹಿನ್ನೆಲೆಗಳು ರೂಪುಗೊಂಡಿತು. ಅದು ಅವರ ಫಿಕ್ಹ್ ನಲ್ಲಿ ಕೂಡಾ ತುಂಬಾ ಬದಲಾವಣೆಯನ್ನು ತಂದಿತು. ಇಮಾಮ್ ಶಾಫೀ(ರ)ರ ಹೊಸ ಅಭಿಪ್ರಾಯಗಳು ಎಂಬ ಹೆಸರಿನಲ್ಲಿ ಒಂದು ವೈಜ್ಞಾನಿಕ ಶಾಖೆಯೇ ರೂಪುಗೊಂಡಿತು. ಹೀಗೆ ಸಾಮಾಜಿಕ ಪರಿಸ್ಥಿತಿಗಳ ಹಿನ್ನಲೆಯು ಅವರ ಅಭಿಪ್ರಾಯಗಳ ಬದಲಾವಣೆಗೆ ಕಾರಣವಾಯಿತು. ಅವರಿಗೆ ಇನ್ನು ಬೇರೆಯೇ ಸಾಮಾಜಿಕ ಪರಿಸ್ಥಿತಿಯಲ್ಲಿ ಬದುಕುವ ಅವಕಾಶ ಸಿಗದಿರುವುದು ಇನ್ನೊಂದು ಪುನರ್ ವ್ಯಾಖ್ಯಾನ ಅವರಿಂದಾಗಲಿಲ್ಲ.
ಓದಿರಿ ಎಂಬ ಕರೆಯೊಂದಿಗೆ ಆರಂಭಗೊಂಡ ಕುರ್ಆನ್ ಯಾಕಾಗಿ ಓದಲ್ಪಡಬೇಕು ಎಂಬಂತ ಆಲೋಚನೆಗಳು ಅವರ ಅಧ್ಯಯನವನ್ನು ಸಂಪನ್ನಗೊಳಿಸುವ ವೈವಿಧ್ಯತೆಗಳೆಡೆಗೆ ನಮ್ಮನ್ನು ಕರೆದೊಯ್ಯುತ್ತದೆ. ಹದಿನಾಲ್ಕು ಶತಮಾನಗಳಿಂದ ತನ್ನ ಆಶಯ, ಆದರ್ಶಗಳಿಗೆ ಯಾವುದೇ ಬದಲವಣೆಯಿಲ್ಲದೆ ಉಳಿದುಕೊಂಡಿರುವ ದೇವಗ್ರಂಥವು ನಿರಂತರವಾಗಿ ಬದಲಾವಣೆಗೊಳ್ಳುತ್ತಿರುವ ಸಾಮಾಜಿಕ ವ್ಯವಸ್ಥೆ ಹಾಗೂ ಪ್ರತಿದಿನ ಅಭಿವೃದ್ಧಿ ಹೊಂದುತ್ತಿರುವ ಮಾನವ ಕುಲಕ್ಕೆ ನಿತ್ಯ ಪ್ರಸ್ತುತವಾಗಿ ಉಳಿಯಬೇಕಾದುದು ಹೇಗೆ ಎಂಬ ಸಂಶೋಧನೆಗಳು, ಕಡಿಮೆ ಪಕ್ಷ ಮುಸ್ಲಿಮರ ನಡುವೆ ನಡೆಯಬೇಕು. ಮನುಷ್ಯ ಕುಲದ ಸಂಶೋಧನೆಗಳ ಮುಂದೆ ಒಂದು ಬೆಳಕಾಗಿ ನಿಲ್ಲಬೇಕಾದ ಕುರ್ಆನನ್ನು ಉಪಯೋಗಿಸುವವರು ಹಾಗೂ ಪ್ರಚಾರಕರಾಗಿ ಇಂದು ಉಳಿದಿರುವವರು ಅವರೇ. ಅವರು ಈ ಮಹಾ ಹೊಣೆಗಾರಿಕೆಯನ್ನು ನಿರ್ವಹಿಸುವವರೆಗೆ ಕುರ್ಆನ್ನೊಂದಿಗಿನ ಜವಾಬ್ದಾರಿ ನಿರ್ವಹಿಸಲಾಗದೆ ಉಳಿಯುತ್ತದೆ.
ಪವಿತ್ರ ಕುರ್ಆನ್ನ ಒಳಿತುಗಳೊಂದಿಗೆ ಮುಂದೆ ಸಾಗಲು ಕುರ್ಆನ್ ನಮ್ಮೊಂದಿಗೆ ಆದೇಶಿಸುತ್ತದೆ. ಪ್ರತಿ ಕಾಲದಲ್ಲೂ ಒಂದು ಓದುವಿಕೆ ಇದೆ. ಅದು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳು ಹಾಗೂ ಆ ಕಾಲದ ಶೈಕ್ಷಣಿಕ ಮಟ್ಟದ ಆಹಾರದಲ್ಲಿರಬೇಕು. ಅದು ಆಯಾ ಕಾಲದ ಪರಿಸ್ಥಿತಿಯನ್ನು ಕುರ್ಆನ್ನ ಮೌಲ್ಯಗಳೊಂದಿಗೆ ಸಮೀಕರಿಸಿ, ಸಮೂಹಗಳಿಗೆ ಕೆಲವು ಗುರಿಗಳನ್ನು ಆವಿಷ್ಕರಿಸುತ್ತದೆ. ಸ್ವಚಿತ್ತದಿಂದ ಆರಂಭಿಸಿ ಆ ವಿಶ್ವದ ವ್ಯವಸ್ಥೆಗಳನ್ನು, ಅಲ್ಲಿನ ಖಲೀಫ ಎಂಬ ನೆಲೆಯಲ್ಲಿ ಮನುಷ್ಯನು ನಿರ್ವಹಿಸಲು, ಅಭಿವೃದ್ಧಿ ಹೊಂದಲು ಇರುವ ಮಾರ್ಗಗಳನ್ನು ಕಂಡುಹಿಡಿಯಲು ಪ್ರೇರೇಪಿಸುವ ಒಂದು ದೇವಗ್ರಂಥವು ಅಪ್ರಸಕ್ತವಾಗುವಂತಹ ಮಾರ್ಗಗಳಲ್ಲಿ ನಾವು ಮರಳಿ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ದೇವಗ್ರಂಥವನ್ನು ಅವಗಣಿಸಿದ ಬುದ್ಧಿ ಶೂನ್ಯರ ಸಾಲಿನಲ್ಲಿ ನಾವು ಸೇರುವೆವು.
ಸೂಚನೆಗಳು:
1. ಪವಿತ್ರ ಕುರ್ಆನ್- ಇಬ್ರಾಹೀಮ್- 52, ಸ್ವಾದ್- 29, ಅಲ್ಅನ್ಆಮ್- 105, ಯೂಸುಫ್- 2, ಅನ್ನಹ್ಲ್- 44
2. ಅಲ್ಕಹ್ಫ್- 109,
3. ಅಲ್ಫಾತಿರ್- 32
IslamKannada News Portal



