Home / ಲೇಖನಗಳು / ಆತ್ಮಚಿಂತನೆ

ಆತ್ಮಚಿಂತನೆ

ಇಬ್ರಾಹೀಮ್ ಸಈದ್
(ನೂರೆಂಟು ಚಿಂತನೆಗಳು ಕೃತಿಯಿಂದ)

ಸೃಷ್ಟಿಕರ್ತನು ಮನುಷ್ಯನಿಗೆ ಪಂಚೇಂದ್ರಿಯಗಳನ್ನು ದಯಪಾಲಿಸಿರುವನು. ಅವು ಪದಾರ್ಥಗಳನ್ನು ಅನುಭವಿಸುವ ಮಾಧ್ಯಮಗಳಾಗಿವೆ. ಇಂದ್ರಿಯ ಅನುಭವಗಳನ್ನು ವಿಶ್ಲೇಷಿಸಿ ಪದಾರ್ಥಗಳ ಹಿಂದಿರುವ ವಾಸ್ತವಿಕತೆಗಳನ್ನು ಕಂಡುಕೊಳ್ಳಲು ಬೇಕಾದ ಬುದ್ಧಿ ಶಕ್ತಿಯನ್ನೂ ದೇವನು ನಮಗೆ ನೀಡಿರುವನು. ಪಂಚೇಂದ್ರಿಯಗಳು ಮತ್ತು ಬುದ್ಧಿ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ ಮನುಷ್ಯನು ಭೌತಿಕವಾಗಿಯಾಗಲಿ, ಅಧ್ಯಾತ್ಮಿಕವಾಗಿಯಾಗಲಿ ದಾರಿ ತಪ್ಪಲಿಕ್ಕಿಲ್ಲ. ಅವನ ನಂಬಿಕೆ, ನಡವಳಿಕೆ, ಅನುಕರಣೆ ಮತ್ತು ಆವಿಷ್ಕಾರಗಳೆಲ್ಲವೂ ಸ್ಪಷ್ಟ ಜ್ಞಾನ ಮತ್ತು ಚಿಂತನೆಯ ಆಧಾರದಲ್ಲಿರುವುವು. ಅದು ಅವನಿಗೆ ಎಲ್ಲ ವಿಷಯಗಳಲ್ಲೂ ಸ್ಪಷ್ಟವಾದ ದಿಕ್ಕನ್ನು ತೋರಿಸುವುವು. ಕಣ್ಣು, ಕಿವಿಗಳ ಮಹತ್ವವನ್ನರಿಯದೆ ಮುನ್ನಡೆಯುವವರು ಪಥಭ್ರಷ್ಟರಾಗುವರು. ಕಟ್ಟ ಕಡೆಗೆ ವಿನಾಶಕೂಪಕ್ಕೆ ಬೀಳುವರು. ಹಾಗೆ ಪಥಭ್ರಷ್ಟರಾಗುವವರಿಗೆ ಎಚ್ಚರಿಕೆ ನೀಡುತ್ತಾ ಪವಿತ್ರ ಕುರ್‍ಆನ್ ಹೀಗೆ ಹೇಳಿದೆ:”ನಿಮಗೆ ಜ್ಞಾನವಿಲ್ಲದಂತಹ ವಿಷಯಗಳನ್ನು ಬೆಂಬತ್ತಬೇಡಿರಿ. ನಿಶ್ಚಯವಾಗಿಯೂ ಶ್ರವಣ, ದೃಷ್ಟಿ ಮತ್ತು ಮನಸ್ಸು ಇವೆಲ್ಲವುಗಳ ವಿಚಾರಣೆ ನಡೆಯಲಿದೆ.”(ಪವಿತ್ರ ಕುರ್‍ಆನ್, 17:36)

ಒಬ್ಬನಿಗೆ ಗ್ರಹಿಸಲು ಸಾಧ್ಯವಿಲ್ಲದ ವಿಷಯವನ್ನು ಮಾಡಲು ಆತನ ತಂದೆ ತಾಯಿಗಳು ಆದೇಶಿಸಿದರೂ ಅದನ್ನು ಪಾಲಿಸಬೇಕಾಗಿಲ್ಲವೆಂದು ಕುರ್‍ಆನ್ ಹೇಳುತ್ತದೆ. ಒಬ್ಬ ನಾಯಕನು ಅಥವಾ ಒಂದು ಪಕ್ಷ ಮುಂದಿಡುವ ತತ್ವ ಸಿದ್ಧಾಂತಗಳ ವಾಸ್ತವಿಕತೆಯ ಕುರಿತು ವಿವೇಚಿಸದೆ ಅದನ್ನು ಅಳವಡಿಸಿಕೊಳ್ಳುವುದು, ಒಬ್ಬನು ಒಂದು ಸಲಹೆಯನ್ನು ಮುಂದಿಟ್ಟಾಗ ಅದರ ಸಾಧಕ ಬಾಧಕಗಳನ್ನು ಅವಲೋಕಿಸದೆ ಅದನ್ನು ಅಂಗೀಕರಿಸುವುದು ಅಥವಾ ತಿರಸ್ಕರಿಸುವುದು ಒಂದು ವಾರ್ತೆಯನ್ನು ಕೇಳಿದ ಕೂಡಲೇ ನಿಜ ಸ್ಥಿತಿಯನ್ನು ಕಂಡುಕೊಳ್ಳದೆ ಪ್ರತಿಕ್ರಿಯಿಸಲು ಮುಂದಾಗುವುದು ಮತ್ತು ತನ್ನ ಬುದ್ಧಿಯನ್ನು ಇತರರಿಗೆ ಅಡವಿಡುವುದು ಜ್ಞಾನವಿಲ್ಲದ ವಿಷಯಗಳನ್ನು ಬೆಂಬತ್ತುವುದಾಗಿದೆ.

ವಿಶ್ವಾಸಿಗಳು ಎಲ್ಲ ವಿಷಯಗಳಲ್ಲೂ ವೈಜ್ಞಾನಿಕ ನಿಲುವು ತಾಳಬೇಕೆಂದು ದೇವನು ಆದೇಶಿಸುತ್ತಾನೆ. ವೈಜ್ಞಾನಿಕ ನಿಲುಮೆಯೆಂದರೆ ಇಂದ್ರಿಯಗಳಿಗೆ ನಿಲುಕುವ ವಿಷಯಗಳನ್ನು ಮಾತ್ರ ಅಂಗೀಕರಿಸಿ ಉಳಿದವುಗಳನ್ನು ನಿರಾಕರಿಸುವುದಲ್ಲ. ಗ್ರಾಹ್ಯವಾದುದನ್ನು ಮಾತ್ರ ಅಂಗೀಕರಿಸಿ ಪ್ರತಿಕ್ರಿಯಿಸುವುದು ಬುದ್ಧಿಯಿಲ್ಲದ ಪ್ರಾಣಿಗಳ ಸ್ವಭಾವವಾಗಿದೆ. ಬುದ್ಧಿಯನ್ನು ಬಳಸಿ ಸ್ಥೂಲದಿಂದ ಸೂಕ್ಷ್ಮವಾದ ಸಾಕ್ಷ್ಯಗಳನ್ನು ಅಥವಾ ಇಂದ್ರಿಯ ಗೋಚರವಾದ ವಸ್ತುಗಳಲ್ಲಿರುವ ಅಗೋಚರ ವಾಸ್ತವಿಕತೆಗಳ ದೃಷ್ಟಾಂತಗಳನ್ನು ಕಂಡುಕೊಳ್ಳುವುದೇ ನಿಜವಾದ ವೈಜ್ಞಾನಿಕ ನಿಲುವಾಗಿದೆ.

ತಿಳಿಯದ ವಿಷಯದಲ್ಲಿ ಸಿಲುಕಿ ಹೋದೆನೆನ್ನುವುದು ಪ್ರಮಾದಗಳಿಗೆ ಸಮರ್ಥನೆಯಾಗುವುದಿಲ್ಲ. ತಿಳಿಯದ ವಿಷಯದಲ್ಲಿ ಕೈಹಾಕುವುದೇ ಗಂಭೀರ ಅಪರಾಧವಾಗಿದೆ.  ಇದು ದೃಷ್ಟಿ, ಶ್ರವಣ, ಬುದ್ಧಿ ಇತ್ಯಾದಿ ದೇವಾನುಗ್ರಹಗಳನ್ನು ಉಪಯೋಗಿಸದೆ  ಇರುವುದು ಅಥವಾ ದುರುಪಯೋಗ ಮಾಡುವುದಾಗಿದೆ. ಸೃಷ್ಟಿಕರ್ತನು ಜ್ಞಾನೇಂದ್ರಿಯಗಳನ್ನೂ ಬುದ್ಧಿಯನ್ನೂ ದಯಪಾಲಿಸಿ ಅವುಗಳಿಗೆ ಸ್ಪಷ್ಟವಾದ ಕೆಲವು ಕರ್ತವ್ಯಗಳನ್ನು ನಿಶ್ಚಯಿಸಿರುವನು. ಈ ಕರ್ತವ್ಯ ಪಾಲನೆಗೆ ಅವುಗಳನ್ನು ದುಡಿಸಿಕೊಳ್ಳಲಾಗುತ್ತಿದೆಯೋ ಎಂಬುದನ್ನು ಅವನು ವೀಕ್ಷಿಸುತ್ತಿದ್ದಾನೆ. ನಿರ್ಣಾಯಕ ದಿನದಂದು ವಿಚಾರಣೆ ವೇಳೆ ಬುದ್ಧಿ, ಕಣ್ಣು, ಕಿವಿಗಳನ್ನು ಹೇಗೆ ಉಪಯೋಗಿಸಲಾಗಿತ್ತೆಂಬ ಬಗ್ಗೆ ಉತ್ತರ ನೀಡಬೇಕಾದೀತು. ಇಂತಹ ಕುರ್‍ಆನ್ ವಚನಗಳಿಂದ ಪ್ರೇರಿತರಾಗಿ ಜನರು ಮಧ್ಯಯುಗದಲ್ಲಿ ಅಪಾರ ವೈಜ್ಞಾನಿಕ ಪ್ರಗತಿಯನ್ನು ಸಾಧಿಸಿದ್ದರು. ಯಾವುದನ್ನೂ ಕುರುಡಾಗಿ ಅನುಕರಿಸಬಾರದು. ಹಾಗೆ ಮಾಡುವುದು ಒಂದು ಅಪರಾಧವೆಂದು ಇದರಿಂದ ತಿಳಿದು ಬರುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …