ಸಂಗ್ರಹ: ಎನ್.ಎಂ. ಪಡೀಲ್
ಅನ್ ಜಾಬಿರ್(ರ) ಅನ್ಹು ಅನ್ನನ್ನಬಿಯ್ಯ(ಸ) ಕಾಲ ಇನ್ನಲ್ಲಾಹ ತಆಲಾ ಲಮ್ ಯಬ್ಅದ್ನೀ ಮುಅನ್ನಾತನ್ ವಲಾ ಮುತನ್ನಾತನ್ ವಲಾಕಿನ್ ಬಅಸನೀ ಮುಅಲ್ಲಮನ್ ಮುಯಸ್ಸಿರನ್.
ಜಾಬಿರ್(ರ)ರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು, ಕಠಿಣ ಹೃದಯ ಮತ್ತು ದಬ್ಬಾಳಿಕೆ ನಡೆಸುವವನಾಗಿ ಅಲ್ಲಾಹನು ನನ್ನನ್ನು ಸೃಷ್ಟಿಸಲಿಲ್ಲ. ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಅಧ್ಯಾಪಕನಾಗಿ ನನ್ನನ್ನು ನಿಯೋಗಿಸಿದ್ದಾನೆ. (ಮುಸ್ಲಿಮ್)
ಇಸ್ಲಾಮ್ನಲ್ಲಿ ಶಿಕ್ಷಕರಿಗೆ ಅತ್ಯಂತ ಗೌರವಾನ್ವಿತ ಸ್ಥಾನಮಾನಗಳಿವೆ. ತಾನೋರ್ವ ಒಳ್ಳೆಯ ಶಿಕ್ಷಕನೆಂದು ಪ್ರವಾದಿ(ಸ) ತನ್ನ ಬಗ್ಗೆ ವರ್ಣಿಸಿದ್ದಾರೆ.
ನಿಮ್ಮಲ್ಲಿ ವಿದ್ಯೆಯನ್ನು ಕಲಿಸುವ ಸತ್ಯವಿಶ್ವಾಸಿಗಳಿಗೆ ಉತ್ತಮ ಸ್ಥಾನವಿದೆಯೆಂಬ ಸಂತೋಷ ವಾರ್ತೆಯನ್ನು ಅಲ್ಲಾಹನು ನೀಡಿದ್ದಾನೆ. ಅಧ್ಯಾಪಕನೆಂಬುದು ಕೇವಲ ಒಂದು ನೌಕರಿ ಎಂದು ಭಾವಿಸುವುದಕ್ಕಿಂತ ದೇವನು ತಮಗೆ ನೀಡಿದ ದೌತ್ಯವೆಂದು ತಿಳಿದರೆ ಅಂತಹ ಪುಣ್ಯಕರವಾದ ಕೆಲಸದ ಮಹತ್ವ ಅರಿವಾಗುತ್ತದೆ.
ಶಿಕ್ಷಕರು ವಿದ್ಯಾಭ್ಯಾಸ ಜ್ಞಾನ ಸಂಪಾದನೆಗಿರುವ ಚಾಲಕ ಶಕ್ತಿಯಾಗಿದ್ದಾರೆ. ವಿದ್ಯೆಯನ್ನು ನೀಡುವ ಶಿಕ್ಷಣದ ಬೆನ್ನೆಲುಬು ಅವರು. ಅವರು ಕೇವಲ ಜ್ಞಾನ ನೀಡುವುದಲ್ಲ ಒಂದು ಮಗುವಿನ ವ್ಯಕ್ತಿತ್ವವನ್ನು ರೂಪಿಸಲು ಶ್ರಮಿಸುವ ಓರ್ವ ಶಿಲ್ಪಿ. ಸೂಕ್ಷ್ಮ ರೀತಿಯಲ್ಲಿ ಮಕ್ಕಳೊಂದಿಗೆ ಬೆರೆಯದಿದ್ದರೆ ಮಕ್ಕಳ ಬಾಳು ಹಾಳಾಗಬಹುದು. ಪ್ರತಿಯೊಂದು ಮಗುವಿನಲ್ಲಿ ಅಡಕವಾಗಿರುವ ಪ್ರತಿಭೆಗಳನ್ನು ಬೆಳಗಿಸಲು ಅಧ್ಯಾಪಕರು ಅನಿವಾರ್ಯ. ಶಾಲೆಯನ್ನು ಬಿಟ್ಟು ಹೋಗುವಾಗ ಅವರಲ್ಲಿ ನೈತಿಕ ಪ್ರಜ್ಞೆ ಜಾಗೃತವಾಗಿರಲು ಅಧ್ಯಾಪಕರು ಕಾರಣರಾಗುತ್ತಾರೆ.
ಒಳ್ಳೆಯ ಶಿಕ್ಷಕನೆನಿಸಿಕೊಳ್ಳಲು ಅವರು ಓರ್ವ ವಿದ್ಯಾರ್ಥಿಯೂ ಆಗಿರಬೇಕು. ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಅದನ್ನು ಮಕ್ಕಳಿಗೆ ಕಲಿಸುವ ಛಾತಿ ಅವರಿಗಿರಬೇಕು. ಜ್ಞಾನ ಸಂಪಾದನೆ ನಿರಂತರ ನಡೆಯುತ್ತಿರಬೇಕು.
ವಿದ್ಯೆಯು ಒಳ್ಳೆಯ ಸಂಪತ್ತಾಗಿದೆ. ಅದನ್ನು ವಿತರಿಸುವ ಕೆಲಸ ಶಿಕ್ಷಕರದ್ದಾಗಿದೆ. ಆದ್ದರಿಂದ ಶಿಕ್ಷಕರಲ್ಲಿ ಅನಿವಾರ್ಯವಾಗಿ ಇರಲೇಬೇಕಾದ ಕೆಲವು ಸ್ವಭಾವ ವಿಶೇಷತೆಗಳಿರುತ್ತವೆ. ಧೈರ್ಯ, ಅಚ್ಚುಕಟ್ಟು, ಸರಳತೆ ಕರ್ತವ್ಯ ಬದ್ಧತೆ, ಸಹಿಷ್ಣುತೆ, ಕ್ಷಮಾಶೀಲ ಸ್ವಭಾವ, ಸಮರ್ಪಣಾ ಭಾವ, ಸಮಾನತೆ, ಸರಿ-ತಪ್ಪುಗಳನ್ನು ತಿಳಿದು ಸರಿಯಾದ ಮಾರ್ಗದರ್ಶಿಯಾಗಿರಬೇಕು.
ಇಂದು ಸಮಾಜದಲ್ಲಿ ಕ್ರಿಮಿನಲ್ಗಳು ಮತ್ತು ಮಾಫಿಯಾಗಳು ಬೆಳೆದು ಬರಲು ಅವರು ಬಾಲ್ಯದಲ್ಲಿ ವೈಜ್ಞಾನಿಕ, ಧಾರ್ಮಿಕ, ನೈತಿಕ ಮೌಲ್ಯಗಳ ಶಿಕ್ಷಣದಿಂದ ವಂಚಿತರಾಗಿರುವುದೇ ಕಾರಣ. ಮೌಲ್ಯಾಧಾರಿತ ಶಿಕ್ಷಣವನ್ನು ಅಧ್ಯಾಪಕರಿಂದ ಪಡೆದರೆ ಸಮಾಜವು ಬದಲಾಗುತ್ತದೆ.
ಇಮಾಮ್ ಗಝ್ಝಾಲಿ(ರ) ಹೇಳುತ್ತಾರೆ, ಶಿಕ್ಷಕರೆಂದರೆ ಬೇರೆಯವರಿಗೆ ಪ್ರಕಾಶ ನೀಡುವ ಒಂದು ದೀಪವಾಗಿದ್ದಾರೆ.
ಪ್ರವಾದಿ(ಸ) ಹೇಳಿದರು, “ನನ್ನಿಂದ ಒಂದು ಒಳ್ಳೆಯ ಉಪದೇಶವನ್ನು ಕೇಳಿ ಅದನ್ನು ಜೀವನದಲ್ಲಿ ಆಳವಡಿಸಲು ತಾನು ಹೇಳಿದ್ದನ್ನು ಯಥಾಪ್ರಕಾರ ಇನ್ನೊಬ್ಬರಿಗೆ ತಿಳಿಸಿದರೆ ಆ ವ್ಯಕ್ತಿಯನ್ನು ಅಲ್ಲಾಹನು ಅನುಗ್ರಹಿಸಲಿ.”
ಮುಸ್ಲಿಮ್ ಅಧ್ಯಾಪಕರ ಜವಾಬ್ದಾರಿಯು ಮಹತ್ವಪೂರ್ಣವಾದದ್ದು. ಅವರು ಓರ್ವ ಸಂದೇಶ ಪ್ರಚಾರಕರಾಗಿದ್ದಾರೆ. ತನ್ನ ಶಿಷ್ಯಂದಿರನ್ನು ಒಳಿತಿನೆಡಗೆ ಆಹ್ವಾನಿಸಲು ಮತ್ತು ಅವರನ್ನು ಕೆಡುಕಿನಿಂದ ತಡೆಯುವ ಗುರುತರವಾದ ಹೊಣೆಗಾರಿಕೆಗಳಿವೆ. ಒಂದು ಹದೀಸ್ನಲ್ಲಿ ಈ ರೀತಿ ಹೇಳಲಾಗಿದೆ, ಓರ್ವನು ಒಂದು ಉತ್ತಮ ವಿಷಯವನ್ನು ಕಲಿಸಿದರೆ ಅವನು ಬೇರೊಬ್ಬನಿಗೆ ಅದನ್ನು ತಿಳಿಸಿದರೆ ಅದರ ಪುಣ್ಯ ಮೊದಲಿನ ವ್ಯಕ್ತಿಗೂ ಲಭಿಸುವುದು.
ಇಲ್ಮ್ (ಜ್ಞಾನ) ಅಲ್ಲಾಹನ ದಾನವಾಗಿದೆ. ತನಗೆ ಲಭಿಸಿದ ಜ್ಞಾನವನ್ನು ಇತರರಿಗೆ ತಲುಪಿಸುವುದು ಪ್ರತಿಯೋರ್ವನ ಕರ್ತವ್ಯವಾಗಿದೆ. ಇತರರಿಗೆ ತಿಳಿಸದವರ ಕುರಿತು ಅಲ್ಲಾಹನು ಕುರ್ಆನಿನಲ್ಲಿ ಅನೇಕ ಕಡೆ ಎಚ್ಚರಿಕೆಯನ್ನು ನೀಡಿದ್ದಾನೆ, “ನಾವು ಅವತೀರ್ಣಗೊಳಿಸಿದ ಸುವ್ಯಕ್ತ ದೃಷ್ಟಾಂತ ಗಳನ್ನೂ ಮಾರ್ಗದರ್ಶನಗಳನ್ನೂ- ನಾವು ಅವುಗಳನ್ನು ಸಮಸ್ತ ಮಾನವರಿಗಾಗಿ ನಮ್ಮ ಗ್ರಂಥದಲ್ಲಿ ವಿವರಿಸಿದ ಬಳಿಕವೂ- ಯಾರು ಮರೆಮಾಚುತ್ತಾರೋ ಅವರನ್ನು ಅಲ್ಲಾಹನು ಅಭಿ ಶಪಿಸುತ್ತಾನೆ ಮತ್ತು ಶಪಿಸುವವರೆಲ್ಲರೂ ಅವರನ್ನು ಅಭಿಶಪಿಸುತ್ತಾರೆ.” (2:159)
ಅಲ್ಲಾಹನು ತನ್ನ ಗ್ರಂಥದಲ್ಲಿ ಅವತೀರ್ಣಗೊಳಿಸಿದ ಆದೇಶಗಳನ್ನು ಬಚ್ಚಿಟ್ಟು, ಅವುಗಳನ್ನು ಲೌಕಿಕ ಲಾಭಕ್ಕಾಗಿ ಬಲಿಕೊಡುವವರು ವಾಸ್ತವದಲ್ಲಿ ತಮ್ಮ ಹೊಟ್ಟೆ ಅಗ್ನಿಯಿಂದ ತುಂಬುತ್ತಿದ್ದಾರೆ. ನಿರ್ಣಾಯಕ ದಿನದಂದು ಅಲ್ಲಾಹನು ಅವರೊಡನೆ ಮಾತನಾಡನು, ಅವರನ್ನು ಪವಿತ್ರಗೊಳಿಸನು ಅವರಿಗೆ ವೇದನಾಜನಕ ಶಿಕ್ಷೆ ಕಾದಿದೆ.” (2: 174)
ಆದ್ದರಿಂದ ಸತ್ಯಸಂಧರಾಗಿ ಆತ್ಮಾರ್ಥವಾಗಿ ತನ್ನ ಶಿಷ್ಯರಿಗೆ ಜ್ಞಾನವನ್ನು ನೀಡದಿದ್ದರೆ ಅಂತಹವರಿಗೆ ಮೇಲಿನ ಸೂಕ್ತದಲ್ಲಿ ಹೇಳಿರುವ ಅವಸ್ಥೆ ಎರಗುವುದು. ಮಕ್ಕಳಿಗೆ ನಿಸ್ವಾರ್ಥವಾಗಿ ಕಲಿಸಿರಿ. ಅವರ ಸಂಶಯಗಳನ್ನು ದೂರೀಕರಿಸಿ ವಿಷಯಗಳನ್ನು ಚೆನ್ನಾಗಿ ಮನವರಿಕೆ ಮಾಡಿಸಿ. ಇದು ಓರ್ವ ಶಿಕ್ಷಕನ ಕರ್ತವ್ಯವಾಗಿದೆ.
IslamKannada News Portal

