ಧರ್ಮದ ಹುಟ್ಟು ಮನುಷ್ಯನನ್ನು ಕೆಡುಕಿನಿಂದ ತಪ್ಪಿಸಿ ಒಳಿತಿನೆಡೆಗೆ ಕರೆತರುವುದಕ್ಕಾಗಿದೆ. ಅವನನ್ನು ಸಾತ್ವಿಕನಾಗಿ ಮಾಡುವುದಾಗಿದೆ. ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದಕ್ಕಾಗಿದೆ. ಆದ್ದರಿಂಧ ಈ ವಿಚಾರದಲ್ಲಿ ಸಕಲ ಧರ್ಮಗಳ ಮೂಲಭೂತ ಸಿದ್ಧಾಂತ ಹೆಚ್ಚು ಕಮ್ಮಿ ಒಂದೇ ತೆರನಾಗಿದೆ. ಯಾವುದೇ ಧರ್ಮ ಕಳ್ಳತನ ಮಾಡಲು, ಸುಳ್ಳು ಹೇಳಲು, ಇತರರನ್ನು ಅವಮಾನಿಸಲು, ಕಷ್ಟ ಕೊಡಲು, ಕೆಡುಕು ಮಾಡಲು, ಅತ್ಯಾಚಾರವೆಸಗಲು ಅನುಮತಿಸುವುದಿಲ್ಲ. ಪ್ರತಿಯೊಂದು ಧರ್ಮದಲ್ಲಿ ಪ್ರೀತಿ, ವಿಶ್ವಾಸ, ಅಹಿಂಸೆ, ದಯೆ, ಮಮತೆ, ಸ್ನೇಹ, ಒಳಿತು, ಸಹಾನುಭೂತಿ, ಸಹಕಾರ ಸದ್ವತ್ತಿ ಮತ್ತು ಸದ್ವರ್ತನೆಯನ್ನು ತಮ್ಮದಾಗಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಇಸ್ಲಾಮ್ ಧರ್ಮದಲ್ಲಿ ಅಹಿಂಸೆಯ ಬಗ್ಗೆ ಚರ್ಚಿಸುವ ಮೊದಲು ಅದರ ವಿಷಯವನ್ನು ಅರಿತುಕೊಳ್ಳೋಣ. ಇಸ್ಲಾಮ್ನ ಅರ್ಥ ಶಾಂತಿ. ಶಾಂತಿಗೆ ಪ್ರವೇಶಿಸುವುದು. ಪರಿಹಾರ, ವಿನಮ್ರತೆ, ಪರಿತ್ಯಾಗ, ಆತ್ಮಸಮರ್ಪಣೆ, ಕೌಶಲ ಮತ್ತು ಆಜ್ಞಾಪಾಲನೆಯೊಂದಿಗೆ ಅಲ್ಲಾಹನ ಮುಂದೆ ತಮ್ಮ ಶಿರವನ್ನು ಬಾಗಿಸುವುದು ಎಂದಾಗಿದೆ. ಏಕ ಅಲ್ಲಾಹನ ಅಧೀನವನ್ನು ಸ್ವೀಕರಿಸಿ ಅವನಲ್ಲಿ ಸರ್ವೋಪರಿ ವಿಶ್ವಾಸವಿಡುವುದು. ಇಸ್ಲಾಮ್ ಧರ್ಮದಲ್ಲಿ ಮನುಷ್ಯ ಸಂಪೂರ್ಣವಾಗಿ ಅಲ್ಲಾಹನಿಗೆ ಶರಣು ಹೋಗುತ್ತಾನೆ. ಅವನ ಪ್ರತಿಯೊಂದು ಕೆಲಸ ಅಲ್ಲಾಹನಿಗಾಗಿರುತ್ತದೆ.
ಇಸ್ಲಾಮ್ನ ಮೂಲ ಸಿದ್ಧಾಂತ ಅಲ್ಲಾಹ್ ಮತ್ತು ಅವನ ಪ್ರವಾದಿಗಳ ಮೇಲೆ ವಿಶ್ವಾಸವಿಡುವುದು ಮತ್ತು ಸಾಕ್ಷ್ಯ ವಚನ, ನಮಾಝ್, ಉಪವಾಸ, ಹಜ್ ಮತ್ತು ಝಕಾತ್ ಆಗಿದೆ. ಸಾಕ್ಷ್ಯ ವಚನವೆಂದರೆ, ಅಲ್ಲಾಹನ ಹೊರತು ಬೇರೆ ಯಾವ ಆರಾಧ್ಯನಿಲ್ಲ, ಮುಹಮ್ಮದ್ ಅಲ್ಲಾಹನ ಪ್ರವಾದಿಯಾಗಿದ್ದಾರೆ ಎಂದು ಸಾಕ್ಷ್ಯವಹಿಸುವುದು. ಒಂದು ದಿನದಲ್ಲಿ ಐದು ಹೊತ್ತಿನ ನಮಾಝ್ ನೆರವೇರಿಸುವುದು. ರಮಝಾನ್ ತಿಂಗಳ ಉಪವಾಸ ವೃತವನ್ನು ಆಚರಿಸುವುದು. ಸಾಮರ್ಥ್ಯವಿರುವವನು ಜೀವನದಲ್ಲೊಮ್ಮೆ ಹಜ್ ಕರ್ಮ ನೆರವೇರಿಸುವುದು. ತನ್ನ ಆದಾಯದಲ್ಲಿ ಶೇ. ಎರಡೂವರೆಯಷ್ಟು ಮೊತ್ತವನ್ನು ಝಕಾತ್(ಕಡ್ಡಾಯ ದಾನ) ಬಡವರಿಗೆ ನೀಡುವುದು.
ಇಸ್ಲಾಮ್ ಧರ್ಮದ ಮಹತ್ವಪೂರ್ಣ ಗ್ರಂಥ ಪವಿತ್ರ ಕುರ್ಆನ್ ಆರಂಭ ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್ನಿಂದ ಆಗುತ್ತದೆ. ಇದರ ಅರ್ಥ ಅಲ್ಲಾಹನ ನಾಮದಲ್ಲಿ ಪ್ರಾರಂಭಿಸುತ್ತೇನೆ. ಅಲ್ಲಾಹನ ಹೆಸರಲ್ಲಿ ಅಡಕವಾದ ದಯೆ ನೀಡುವವನು, ಕೃಪಾಳು ಎಂದಾಗುತ್ತದೆ. ಪವಿತ್ರ ಕುರ್ಆನ್ನಲ್ಲಿ ದಯೆ ಮತ್ತು ಕೃಪೆಯನ್ನು ಅಲ್ಲಾಹನ ಗುಣ ಎಂದು ತಿಳಿಸಲಾಗಿದೆ.
ಮನುಷ್ಯ ಭೂಮಿಯಲ್ಲಿ ಅಲ್ಲಾಹನ ಪ್ರತಿನಿಧಿಯಾಗಿದ್ದಾನೆ. ಆದ್ದರಿಂದ ಮನುಷ್ಯ ಸದಾ ದಯೆ ಮತ್ತು ಕೃಪೆಯ ಸ್ವಭಾವವನ್ನು ತಮ್ಮದಾಗಿಸಿಕೊಳ್ಳಬೇಕಾಗಿದೆ. ಅಹಿಂಸೆಯಲ್ಲಿ ದಯೆಗೆ ಹೆಚ್ಚು ಒತ್ತು ನೀಡಲಾಗಿದೆ. ಇಸ್ಲಾಮ್ನ ಪವಿತ್ರ ಗ್ರಂಥ ಪವಿತ್ರ ಕುರ್ಆನ್ ಆರಂಭವೇ ಇದೇ ಭಾವದಲ್ಲಿ ಆಗುತ್ತದೆ.
ಪವಿತ್ರ ಕುರ್ಆನ್ನ ಪ್ರಥಮ ಅಧ್ಯಾಯ ಅಲ್ ಫಾತಿಹಾದಲ್ಲಿ ಅಲ್ಲಾಹನನ್ನು ಕೇವಲ ಮುಸ್ಲಿಮರ ಪ್ರಭು ಎನ್ನದೆ ಸಕಲ ಜಗತ್ತಿನ ಪ್ರಭು ಎಂದು ಹೇಳಲಾಗಿದೆ. ಇದು ಸಕಲ ಜಗತ್ತಿಗೆ ಮಾರ್ಗದರ್ಶನ ಮತ್ತು ಮಾನವರ ಒಳಿತಿನ ಸಂದೇಶವಾಗಿದೆ. ಪ್ರತೀ ಬಾರಿ ನಮಾಝ್ನಲ್ಲಿ ಫಾತಿಹಾವನ್ನು ಪಠಿಸಲಾಗುತ್ತದೆ. ಇದರರ್ಥ ಸಕಲ ಸ್ತುತಿ ಸ್ತೋತ್ರಗಳು ಸಕಲ ಲೋಕದ ಪರಿಪಾಲಕ ಪ್ರಭುವಿಗೆ ಮೀಸಲು ಎಂದಾಗಿದೆ. ಪರಮ ದಯಾಳು, ಕರಣಾನಿಧಿ ನಿರ್ಣಾಯಕ ದಿನದ ಅಧಿಪತಿ (ಆದ ಪ್ರಭುವೇ) ನಾವು ನಿಮಗೆ ಮಾತ್ರ ಇಬಾದತ್ ಮಾಡುತ್ತೇವೆ. ಮತ್ತು ನಿನ್ನಿಂದ ಮಾತ್ರ ಸಹಾಯ ಬೇಡುತ್ತೇವೆ. ನಮಗೆ ಸನ್ಮಾರ್ಗ ತೋರಿಸು. ನೀನು ಅನುಗ್ರಹಿಸಿದವರ ಮಾರ್ಗ ನಿನ್ನ ಕ್ರೋಧಕ್ಕೆ ಪಾತ್ರರಾದವರ ಮಾರ್ಗವಲ್ಲ. (ನೀನು ತೋರಿದ) ದಾರಿಯನ್ನು ತಪ್ಪಿ ನಡೆದವರ ಮಾರ್ಗವೂ ಅಲ್ಲ.
ಪವಿತ್ರ ಕುರ್ಆನ್ನಲ್ಲಿ ಅಹಿಂಸೆಯ ವರ್ಣನೆಯನ್ನು ಅನೇಕ ಸ್ಥಳಗಳಲ್ಲಿ ಮಾಡಲಾಗಿದೆ. ಕಾರಣವಿಲ್ಲದೆ ವ್ಯರ್ಥವಾಗಿ ರಕ್ತ ಹರಿಸುವುದು, ವಧಿಸುವುದು, ಮತ್ತು ಕ್ಷೋಭೆ ಜಗಳ ಮಾಡುವುದನ್ನು ನಿಷೇಧಿಸಲಾಗಿದೆ. ಸೂರ ಅಲ್ಬಕರಾ 84,188,205 ವಚನಗಳಲ್ಲಿ ಕಾರಣವಿಲ್ಲದೆ ರಕ್ತ ಹರಿಸಬಾರದು. ಜನರನ್ನು ನಿರ್ವಸಿತರನ್ನಾಗಿ ಮಾಡಬಾರದು. ದಾಂಧಲೆ ಮಾಡಿ ಇತರರ ಹಕ್ಕನ್ನು ಕಬಳಿಸಬಾರದು. ಅಲ್ಲಾಹನು ಕ್ಷೋಭೆಯನ್ನು ಇಚ್ಛಿಸುವುದಿಲ್ಲ. ಸೂರಾ ಅನ್ನಿಸಾದ 29ನೇ ವಚನದಲ್ಲಿ ಇತರರ ಸಂಪತ್ತನ್ನು ಅನುಚಿತ ರೀತಿಯಿಂದ ಕಬಳಿಸಬಾರದು ವಿನಾ ಕಾರಣ ವಧಿಸಿಕೊಳ್ಳಬೇಡಿರಿ ಎನ್ನಲಾಗಿದೆ.
ಸೂರಾ ಬನಿ ಇಸ್ರಾಇಲ್ನ 33ನೇ ವಚನದಲ್ಲಿ ವಿನಾ ಕಾರಣ ಯಾರದೆ ಹತ್ಯೆ ನಡೆಸಬೇಡಿರಿ ಎಂದು ಉಪದೇಶಿಸಲಾಗಿದೆ. ಮಾನವರ ಪ್ರಾಣ ಹರಣ ಮಾಡುವುದು ನಿಷಿದ್ಧ ಎನ್ನಲಾಗಿದೆ. ಸೂರಾ ಅಲ್ಮಾಯಿದಾದ 32ನೆ ವಚನದಲ್ಲಿ ಯಾರನ್ನಾದರೂ ವಿನಾಕಾರಣ ವಧಿಸಿದರೆ ಅವನು ಸಕಲ ಮಾನವರನ್ನು ವಧಿಸುವುದಕ್ಕೆ ಸಮಾನವಾಗುವುದು ಎನ್ನಲಾಗಿದೆ. ಯಾರದಾದರೂ ಜೀವ ಉಳಿಸಿದರೆ ಅವನು ಸಕಲ ಮಾನವ ಕೋಟಿಯ ಜೀವವನ್ನು ಉಳಿಸಿದಂತೆ ಎನ್ನಲಾಗಿದೆ. ಈ ರೀತಿ ಪವಿತ್ರ ಕುರ್ಆನ್ ಓರ್ವ ಮಾನವ ಹತ್ಯೆಯನ್ನು ಸಕಲ ಮಾನವರ ಹತ್ಯೆಯೆಂದು ಪರಿಗಣಿಸುತ್ತದೆ ಮತ್ತು ಯಾರದಾದರೂ ಪ್ರಾಣ ಉಳಿಸಿದರೆ ಅವನು ಸಕಲ ಮಾನವ ಕೋಟಿಯ ಪ್ರಾಣ ಉಳಿಸಿದುದಕ್ಕೆ ಸಮಾನ ಎಂದು ಉಲ್ಲೇಖಿಸಿದೆ.
ಪವಿತ್ರ ಕುರ್ಆನ್ ಪ್ರಕಾರ ಅಲ್ಲಾಹ್ ಕ್ಷೋಭೆ ಜಗಳ ಹಿಂಸೆ ಮಾಡುವವರನ್ನು ಇಚ್ಛಿಸುವುದಿಲ್ಲ. ಪವಿತ್ರ ಕುರ್ಆನ್ ಹೇಳಿದೆ ಯುದ್ಧ ವೇಳೆಯಲ್ಲಿ ಕೂಡಾ ಯುದ್ಧ ಕ್ಷೇತ್ರದ ಹೊರಗೆ ಯಾರದೆ ಹತ್ಯೆ ಎಸಗಬಾರದು. ಹೊಲ ಪೈರುಗಳನ್ನು ಹಾಳು ಮಾಡಬಾರದು. ಮರ ಗಿಡಗಳನ್ನು ಸುಮ್ಮನೆ ಕಡಿದುರುಳಿಸಬಾರದು. ಪವಿತ್ರ ಕುರ್ಆನ್ ಕೆಡುಕಿನಿಂದ ಪಾರಾಗಲು ಮತ್ತು ಒಳಿತಿನೆಡೆಗೆ ಸಾಗುವುದು ಬಹುದೊಡ್ಡ ಪುಣ್ಯವೆಂದು ಹೇಳಿದೆ. ಸೂರಾ ಅರ್ರಅದ್ 22ನೇ ವಚನದಲ್ಲಿ ಕೆಡುಕನ್ನು ಒಳಿತಿನಿಂದ ನಿವಾರಿಸುತ್ತಾರೆ. ಸೂರಾ ಹಾಮೀಮ್ ಅಸ್ಸಜ್ದದ 34ನೇ ವಚನದಲ್ಲಿ ಒಳಿತು ಮತ್ತು ಕೆಡುಕು ಸರಿಸಮಾನವಲ್ಲ. ನೀವು ಕೆಡುಕನ್ನು ಅತ್ತ್ಯುತ್ತಮ ಒಳಿತಿನ ಮೂಲಕ ದೂರಿಕರಿಸಿರಿ ಎಂದು ಕರೆ ನೀಡಿದೆ. ಸೂರಾ ಅಲ್ ಮೂಮಿನೂನ್ನ 61ನೆ ವಚನದಲ್ಲಿ ಅವರು ಒಳಿತಿನೆಡೆಗೆ ಧಾವಿಸುವವರು ಮತ್ತು ಸ್ಪರ್ದಿಸಿ ಅವುಗಳನ್ನು ಪಡೆದುಕೊಳ್ಳುವರು ಎನ್ನಲಾಗಿದೆ.
ಇಸ್ಲಾಮ್ನ ಪ್ರವಾದಿ ಮುಹಮ್ಮದ್ರು(ಸ) ಅಹಿಂಸೆ ಮತ್ತು ಪ್ರೇಮದ ಸಂದೇಶವನ್ನು ನೀಡಿದ್ದಾರೆ. ಅವರು ತಮ್ಮ ವ್ಯಕ್ತಿತ್ವ ಮತ್ತು ಜೀವನದ ವ್ಯವಹಾರದಲ್ಲಿ ಅಹಿಂಸೆಯನ್ನು ತೋರಿಸಿದ್ದಾರೆ. ಯಾರು ಅವರೊಂದಿಗೆ ಕೆಡುಕು ಮಾಡುತ್ತಿದ್ದರೋ ಅವರಿಗೆ ಅವರು ಒಳಿತನ್ನೇ ಮಾಡುತ್ತಿದ್ದರು. ಕಷ್ಟ ಕೊಡುತ್ತಿದ್ದವರ ಒಳಿತಿಗಾಗಿ ಅವರು ಅಲ್ಲಾಹನಲ್ಲಿ ಪ್ರಾರ್ಥಿಸುತ್ತಿದ್ದರು. ಮುಸ್ಲಿಮರ ನೈಜ ಆಂದೋಲನ ಅಲ್ಲಾಹನಿಂದ ಸೃಷ್ಟಿಸಲ್ಪಟ್ಟ ಸಕಲ ಸೃಷ್ಟಿಗಳ ಮೇಲೆ ದಯೆ ತೋರಿಸುವುದಾಗಿದೆ. ಹೀಗೆ ಇಸ್ಲಾಮ್ ಎಂದು ಹಿಂಸೆಯನ್ನು ಉಚಿತವೆಂದು ಭಾವಿಸಲಿಲ್ಲ. ಇಸ್ಲಾಮ್ ಪ್ರಾಣ, ಮಾನ, ಸೊತ್ತುಗಳ ಮೇಲೆ ಆಕ್ರಮಣ ನಡೆಸುವುದನ್ನು ಒಪ್ಪುವುದಿಲ್ಲ. ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡುತ್ತದೆ. ಹಿಂಸೆ ಮತ್ತು ದೌರ್ಜನ್ಯವನ್ನು ಇಸ್ಲಾಮ್ ಪಾಪ ಎಂದು ಸಾರಿದೆ.
IslamKannada News Portal



