Home / ಲೇಖನಗಳು / ಲಿಬರಲಿಸಂನ ಜೀವನ ವ್ಯಾಖ್ಯಾನ ಮತ್ತು ಇಸ್ಲಾಮ್

ಲಿಬರಲಿಸಂನ ಜೀವನ ವ್ಯಾಖ್ಯಾನ ಮತ್ತು ಇಸ್ಲಾಮ್

@ ಅಫೀದ ಅಹ್ಮದ್

ಸಂತೋಷದಿಂದ ಜೀವನದ ಮಾಧುರ್ಯವನ್ನು ಆಸ್ವಾಧಿಸುವವರು ಯಾರಿದ್ದಾರೆ? ಜೀವನದ ಪ್ರತೀ ನಿಮಿಷವನ್ನೂ ನನಗಾಗಿ ಸೃಷ್ಟಿಕರ್ತನು ನೀಡಿರುವನು ಎಂಬ ಭರವಸೆಯುಳ್ಳವನು? ಸೃಷ್ಟಿಕರ್ತನ ವಿಧಿ ಬರಹ ಮಾತ್ರ ಜೀವನದಲ್ಲಿ ನಡೆಯುವುದು ಎಂದು ಭಾವಿಸಿ ಜಗದೇಕ ಸೃಷ್ಟಿಕರ್ತನನ್ನು ಮನಸಾರೆ ಪ್ರೀತಿಸಿದವನು? ಈ ಭರವಸೆಯೇ ಜೀವನದ ಸೌಂದರ್ಯವಾಗಿದೆ.

ಇತಿಹಾಸದಲ್ಲಿ ಇಂತಹ ಭರವಸೆಯ ಜೀವನದ ವ್ಯಕ್ತಿಯೋರ್ವರಿದ್ದಾರೆ. ತಂದೆಯನ್ನು ಕಾಣದ, ಬಾಲ್ಯದಲ್ಲಿಯೇ ತಾಯಿಯನ್ನು ಕಳಕೊಂಡ, ಒಡಹುಟ್ಟಿದವರ ವಾತ್ಸಲ್ಯ ದೊರೆಯದ, ಪ್ರೀತಿ ಪಾತ್ರ ಪತ್ನಿಯು ಅಕಾಲ ಮರಣಗೊಂಡಾಗಲೂ ಪ್ರವಾದಿ ಮುಹಮ್ಮದ್(ಸ) ಈ ಎಲ್ಲ ಹಂತಗಳನ್ನು ಅಲ್ಲಾಹನ ಮೇಲಿನ ಅಚಲವಾದ ಭರವಸೆಯಿಂದಲೇ ಯಶಸ್ವಿಯಾಗಿ ದಾಟಿದರು. ಈ ಸ್ಥೈರ್ಯವು ಜೀವನದ ಯಶಸ್ಸಿಗೆ ಮುಖ್ಯ ಕಾರಣವಾಗುತ್ತದೆಯೆಂಬುದನ್ನು ನಾವು ಹೇಳುತ್ತಿದ್ದೇವೆ.

ಜೀವನವನ್ನು ನಾವು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಜೀವನ ಒಂದೇ ಇರುವುದು. ಅದನ್ನು ಸುಖಲೋಲುಪತೆಯಿಂದ ಕಳೆದು ಆನಂದಿಸಿ ಆಸ್ವಾದಿಸಿ ಮುಗಿಸಬಹುದು ಎಂಬುದು ಮೋದಲನೆಯದ್ದು. ಅದರಲ್ಲಿ ಸೌಂಧರ್ಯವಿರದು. ತಾತ್ಕಾಲಿಕವಾದ ಸುಖ ಮಾತ್ರ ಲಭಿಸುವುದು.

“ಜೀವನವೆಂಬುದು ಒಂದು ಮಾತ್ರ ಇರುವುದು. ಅದರಲ್ಲಿ ಸಾಧ್ಯವಾದಷ್ಟು ಒಳಿತುಗಳನ್ನು ಮಾಡಿ ಇಹಪರವಾದ ಎರಡೂ ಲೋಕಕ್ಕೂ ಪ್ರಯೋಜನಕಾರಿಯಾಗುವಂತೆ ಮಾಡಬೇಕು” ಎಂಬುದು ಎರಡನೆಯದ್ದಾಗಿದೆ. ಅದು ಸಂಪೂರ್ಣ ಆನಂದಮಯವಾಗಿರುವುದು. ಆ  ಜೀವನಕ್ಕೆ ಒಂದು ಇತಿಮಿತಿಯಿದೆ. ಮೇರೆಯಿದೆ. ಅದಕ್ಕೊಂದು ಗುರಿಯಿದೆ.

ಈ ಎರಡರಲ್ಲಿ ಯಾವುದನ್ನು ಬೇಕಾದರೂ ಆರಿಸುವ ಸ್ವಾತಂತ್ರ್ಯ ಮನುಷ್ಯನಿಗಿದೆ. ತಾತ್ಕಾಲಿಕವಾದ ಸುಖ ಸಂತೋಷಕ್ಕಿಂತ ಶಾಶ್ವತವಾದ¸ ಸುಖ ಸಂತೋಷವನ್ನು ಕೆಲವೇ ಜನರು ಬಯಸುತ್ತಾರೆ. ಪ್ರತಿಯೋರ್ವನ ಆಯ್ಕೆಯು ಅವನು ನಂಬಿದ ಸಿದ್ಧಾಂತಕ್ಕನುಗುಣವಾಗಿರುತ್ತದೆ. ಭೌತಿಕತೆಯನ್ನು ಆರಿಸುವವರಿಗೆ ಆಧ್ಯಾತ್ಮಿಕತೆಯ ಸೌಂದರ್ಯದ ಪರಿಮಳ ಆಸ್ವಾದಿಸಲಾಗದು.

ಚಿಂತಿಸುವವರಿಗೆ ದೃಷ್ಟಾಂತಗಳಿವೆ ಎಂಬ  ಕುರ್‍ಆನ್ ವಚನದಂತೆ ಚಿಂತಿಸುವವರಿಗೆ ಇಲ್ಲಿ ಧಾರಾಳ ದೃಷ್ಟಾಂತಗಳಿವೆ. ಅಮಿತವಾದ ಸಂತೋಷ ಎಂಬುದು ಲಿಬರಲ್‍ಗಳ (ಉದಾರವಾದಿಗಳ) ಘೋಷಣೆಯಾಗಿದೆ. ಸುಖ ಸಂತೋಷಕ್ಕೆ ಇತಿಮಿತಿಯ ರೇಖೆಯನ್ನು ಧರ್ಮ ಎಳೆದಿದೆ. ಆದ್ದರಿಂದ ಧರ್ಮದಿಂದ ದೂರವಿದ್ದರೆ ಸುಂದರವಾದ ಜೀವನ ನಡೆಸಬಹುದೆಂಬುದು ಅವರ ಕಲ್ಪನೆಯಾಗಿದೆ. ವೈಯಕ್ತಿಕ ಸ್ವಾತಂತ್ರ್ಯ, ಬಹಿರಂಗ ಲೈಂಗಿಕತೆ, ಇವುಗಳ ಕುರಿತ ವ್ಯಾಪಕವಾದ ಚರ್ಚೆ ನಡೆದು ನೈತಿಕತೆ ಮತ್ತು ಧಾರ್ಮಿಕ  ಮೌಲ್ಯಗಳು ಮುಂತಾದ ಪದಗಳು ಕಾಣದಾಗಿದೆ. ಅನೈತಿಕತೆಯೆಂಬುದು ಈಗ ಕ್ಯಾಂಪಸ್‍ಗಳಲ್ಲಿ ಮತ್ತು ಸಾರ್ವಜನಿಕ ವಲಯಗಳಲ್ಲಿಯೂ ಪ್ರತಿಫಲಿಸ ತೊಡಗಿದೆ.

ಇಸ್ಲಾಮ್ ಎಂಬುದು ಒಂದು ಪ್ರಕೃತಿ ಧರ್ಮವಾಗಿದೆ. ಈ ಪ್ರಕೃತಿಯನ್ನು ಸೃಷ್ಟಿಸಿದವನಿಗೆ ಇದರೊಳಗಿರುವ ಎಲ್ಲಾ ವಿಚಾರಗಳ ಅರಿವಿದೆ. ಅವನು ಸಕಲ ಚರಾಚರಗಳ ಪರಿಪಾಲಕನೂ ನಿಯಂತ್ರಕನೂ ಆಗಿದ್ದಾನೆ. ಸೃಷ್ಟಿಯ ಸಂಪೂರ್ಣವಾದ ವಿಜಯಕ್ಕೆ ಯಾವುದೆಲ್ಲಾ ಅಗತ್ಯವಿದೆಯೋ ಅವೆಲ್ಲವೂ ಆತನಿಗೆ ತಿಳಿದಿದೆ. ಆದರೆ ಲಿಬರಲಿಸಂ ಸಿದ್ಧಾಂತವು ಸ್ವೇಚ್ಚೆಯನ್ನೇ ದೇವನನ್ನಾಗಿಸಿದೆ. ತನ್ನ ದೇಹ ಯಾವುದನ್ನು ಹೇಳುತ್ತದೋ ಅವೆಲ್ಲವನ್ನೂ ಅವನು ಮಾಡುತ್ತಾನೆ. ಅದಕ್ಕೆ ಹೊರತಾದುದನ್ನು ತಳ್ಳಿ ಹಾಕುತ್ತಾನೆ.

ಲಿಬರಲಿಸಂ ಇಸ್ಲಾಮನ್ನು ಯಾವತ್ತೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಎಲ್ಲಾ ರೀತಿಯ ನಿಷೇಧಾತ್ಮಕವಾದ ಧರ್ಮ ಇಸ್ಲಾಮ್ ಎಂದು ಉದಾರವಾದಿಗಳು ಟೀಕಿಸುತ್ತಾರೆ. ವಿಶೇಷವಾಗಿ ಮುಸ್ಲಿಮ್ ಮಹಿಳೆಯನ್ನು ಇಸ್ಲಾಮ್ ಶೋಷಿಸುತ್ತದೆ, ಇಸ್ಲಾಮ್ ಅವಳ ಹಕ್ಕುಗಳನ್ನು ಕಸಿಯುವ ಸಂಕೋಲೆಯೆಂದು ಆರೋಪಿಸಿ ಪ್ರಚುರ ಪಡಿಸುತ್ತಾರೆ. ಆದರೆ ಇಸ್ಲಾಮ್ ಮಹಿಳೆಗೆ ನೀಡಿದ ಸ್ವಾತಂತ್ರ್ಯ, ಹಕ್ಕುಗಳನ್ನು ಅವರು ನಿರ್ಣಯಿಸಿದ ಅಳತೆಗೋಲಿನಿಂದ ಅಳೆಯಲು ಸಾಧ್ಯವಿಲ್ಲ. ಜನನದ ನಂತರ ಮಹಿಳೆಯು ಹಾದು ಹೋಗುವ ಸಮಾಜ, ಕುಟುಂಬ ಮುಂತಾದ ವಿವಿಧ ರಂಗಗಳಲ್ಲಿ ಆಕೆಗೆ ಇಸ್ಲಾಮ್ ಮಹತ್ತರವಾದ ಸ್ಥಾನ ಕಲ್ಪಿಸಿದೆ. ಅವಳ ಅಸ್ತಿತ್ವವನ್ನು ನಿರ್ಣಯಿಸುವ ಅತ್ಯುತ್ತಮ ಸಂಕೇತವಾದ ಪರ್ದಾ ವನ್ನು ಕೂಡಾ ಗುಲಾಮಗಿರಿ ಮತ್ತು ಪಾರತಂತ್ರ್ಯದ ಸಂಕೇತವೆಂದು ಬಿಂಬಿಸುವುದು ಲಿಬರಲ್‍ಗಳ ಮೂರ್ಖತನದ  ಪರಮಾವಧಿಯಾಗಿದೆ.

ಗಂಡು-ಹೆಣ್ಣಿನ ಅನಿಯಂತ್ರಿತ ಬೆರೆಯುವಿಕೆಯು ಲಿಬರಲಿಸಂನ ತಳಹದಿಯಾಗಿದೆ. ಆದರೂ ಆರೋಗ್ಯಕರವಾದ ಸೌಹಾರ್ದವನ್ನು ಕೂಡಾ ಲೈಂಗಿಕತೆಯ ದೃಷ್ಟಿಯಿಂದ ಮಾತ್ರ ಉದಾರವಾದದ ವಕ್ತಾರರಿಗೆ ನೋಡಲು ಸಾಧ್ಯವೆಂಬುದು ಅನುಭವ ಸತ್ಯ. ವೈಯುಕ್ತಿಕ ಸ್ವಾತಂತ್ರ್ಯಕ್ಕೆ  ಹೆಚ್ಚು ಮಹತ್ವ ನೀಡುವ ಉದಾರವಾದಿಗಳು ಮಹಿಳೆಯನ್ನು ಕೇವಲ ಒಂದು ಭೋಗ ವಸ್ತುವಾಗಿ ಕಾಣುತ್ತಾರೆಂಬುದು ವಾಸ್ತವವಾಗಿದೆ,. ಲಿಬರಲಿಸಂ ಸ್ತ್ರೀ-ಪುರುಷ ಲಿಂಗ ಸಮಾನತೆಯ ಕುರಿತು ಮಾತನಾಡುವಾಗ ಇಸ್ಲಾಮ್ ಎರಡೂ ಪ್ರಕೃತಿದತ್ತವಾದ ಮಾನಸಿಕ ಮತ್ತು ದೈಹಿಕ  ವ್ಯತ್ಯಾಸಗಳನ್ನು ಅರ್ಥೈಸುವ ನಿಯಮವನ್ನು ಸ್ಪಷ್ಟಪಡಿಸುತ್ತದೆ. ಇದರಿಂದ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ  ಮುಂದಕ್ಕೆ ಕೊಂಡು ಹೋಗಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ ಓರ್ವ ಸತ್ಯವಿಶ್ವಾಸಿ ತನ್ನ ಪಾಲಕ ಪ್ರಭುವಿನೊಂದಿಗಿನ ಜವಾಬ್ದಾರಿಕೆಯನ್ನು ನಿಭಾಯಿಸುವುದು ಮಾತ್ರವಲ್ಲ  ಬದಲಾಗಿ ಅವನು ತನ್ನ ಸಹ ಜೀವಿಗಳೊಂದಿಗೆ, ಪ್ರಕೃತಿಯೊಂದಿಗೆ ಮತ್ತು ಸಾಮಾಜಿಕ ವ್ಯವಸ್ಥೆಯೊಂದಿಗೆ ನ್ಯಾಯಬದ್ಧವಾದ ಸಂಬಂಧ ಬೆಳೆಸುವುದಾಗಿದೆ ಇಸ್ಲಾಮ್. ಅದಕ್ಕಾಗಿ ನಾವು ಕೆಲವು ನಿಯಮ ನಿರ್ದೇಶನಗಳನ್ನು ಅನುಸರಿಸಬಹುದು. ಅದು ಒತ್ತಾಯ ಪೂರ್ವಕವಾದ  ಹೇರುವಿಕೆಯೋ, ಸ್ವಾತಂತ್ರ್ಯ ಹರಣವೋ ಆಗದು. ಇತರರ ಸ್ವಾತಂತ್ರ್ಯವನ್ನು ಗೌರವಿಸಿ ತನ್ನ ಸಾಮಾಜಿಕ ವ್ಯವಸ್ಥೆಯನ್ನು ಸುಂದರಗೊಳಿಸಿ ನೆಲೆ ನಿಲ್ಲುವಂತೆ ಮಾಡಿ ನ್ಯಾಯ ಸ್ಥಾಪಿಸಲ್ಪಡುವ ದಿಟ್ಟ ಹೆಜ್ಜೆಯಾಗಿದೆ ಇದು.

ಆದಮ್(ಅ)ರಿಗೆ ಒಂದು ಹಣ್ಣು ಮಾತ್ರ ನಿಷೇಧಿಸಲಾಗಿತ್ತು. ಮತ್ತಿತರ ಎಲ್ಲಾ ಹಣ್ಣುಗಳನ್ನು ತಿನ್ನುವ ಸ್ವಾತಂತ್ರ್ಯವಿತ್ತು. ಕೇವಲ ಒಂದು ವಿಷಯದಲ್ಲಿ ಮಾತ್ರ ಅಲ್ಲಾಹನು ಆದಮ್‍ರನ್ನು ಪರೀಕ್ಷಿಸ ಬಯಸಿದ್ದನು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಎಲ್ಲ ತಡೆಗಳನ್ನೂ ಸ್ವಾತಂತ್ರ್ಯ ಹರಣವೆಂದು ಭಾವಿಸಬಾರದು. ಬದಲಾಗಿ ಅದು ನಮಗೆ  ಹಿತಕಾರಿಯಾದ ನಿಯಂತ್ರಣಗಳಾಗಿವೆ. ಅದು ಮನುಷ್ಯನ ಸಂತೋಷವನ್ನು ಇಲ್ಲದಂತೆ ಮಾಡಲಿಕ್ಕಲ್ಲ. ಅದು ಶಾಶ್ವತವಾದ ಸಂತೋಷದ  ದ್ವಾರವನ್ನು ತೆರೆಯುವುದಾಗಿದೆ.

ಧರ್ಮವೆಂಬುದು ಕ್ಲಿಷ್ಟಕರವಾದ ಜೀವನವೆಂಬ ಚಿಂತೆಯಿರುವವರೊಂದಿಗೆ ಜೀವನದ ಚಿತ್ರಗಳಿಗೆ ಹೊಳಪು ನೀಡುವವನು ಸತ್ಯವಿಶ್ವಾಸಿ. ಜೀವನದಲ್ಲಿ ರಸಾನುಭವವನ್ನು ಆಸ್ವಾದಿಸಬೇಕೆಂದು ಬಯಸುವವನಿಗೆ ಜೀವನದಲ್ಲಿ ಹೊಣೆಗಾರಿಕೆಯ ಕರ್ತವ್ಯ ಪ್ರಜ್ಞೆಯ ಸೌಂದರ್ಯವನ್ನು ಸತ್ಯವಿಶ್ವಾಸಿ ತೋರಿಸಿಕೊಡುತ್ತಾನೆ. ಅಲ್ಲಾಹನ ಸಂದೇಶವಾಹಕರು ಹೇಳಿದಂತೆ ಅದ್ಭುತವೆನಿಸುವ ಆ ನಂಬಿಕೆಯಲ್ಲಿ ಮಾತ್ರ ಸುಂದರವಾದ ಜೀವನದ ಕನಸನ್ನು ಪೋಣಿಸಲು ಸಾಧ್ಯವಾಗುತ್ತದೆ.

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …