@ ಬಶೀರ್ ಹಸನ್
ಕಬ್ಬಿಣ, ಹೊಯ್ಗೆ, ಸಿಮೆಂಟು ಮುಂತಾದವುಗಳನ್ನು ಅಗತ್ಯಕ್ಕೆ ಬೇಕಾದಷ್ಟು ಬಳಸಿ ಮನೆಯನ್ನು ನಿರ್ಮಿಸುತ್ತಾರೆ. ಇದೇ ರೀತಿ ಇಸ್ಲಾಮೀ ಸಮಾಜದ ನಿರ್ಮಾಣಕ್ಕೆ ಒಂದು ಮಾದರಿಯಿದೆ. ಅದು ಪುರುಷ ಮತ್ತು ಮಹಿಳೆಯ ಅಂಶಗಳನ್ನು ಒಂದು ನಿರ್ದಿಷ್ಟ ಸಂಖ್ಯೆಯಲ್ಲಿ ಬಳಸಿ ಇಸ್ಲಾಮೀ ಸಮಾಜದ ಸೌಧವನ್ನು ನಿರ್ಮಿಸುತ್ತದೆ. ಸಮಾಜದ ಬೆಳವಣಿಗೆಗೆ ಪೂರಕವಾಗಿ ಪುರುಷ, ಮಹಿಳೆ ಮತ್ತು ಇಸ್ಲಾಮ್ ವಿಧೇಯವಾಗುತ್ತದೆ. ವಿಶ್ವಾಸ ಮತ್ತಿತರ ಆರಾಧನಾ ಕರ್ಮಗಳು ಅದರ ಇತರ ಶುದ್ಧೀಕರಣ ಪ್ರಕ್ರಿಯೆಗಳಾಗಿವೆ. ಇದಕ್ಕೆ ಪ್ರಥಮವಾಗಿ ಇಸ್ಲಾಮ್ ಮನಸ್ಸನ್ನು ಶುಶ್ರೂಷೆಗೈಯುತ್ತದೆ. ಸಮಾಜದ ಭಾಗವಾಗುವುದಕ್ಕಿಂತ ಮೊದಲು ಈ ಶುದ್ಧೀಕರಣ ಪ್ರಕ್ರಿಯೆಗಳು ನಡೆದು ಸುಸಂಸ್ಕ್ರತರಾಗಿರಿ ಎಂದು ಇಸ್ಲಾಮ್ ಮನುಷ್ಯರೊಂದಿಗೆ ಕರೆ ನೀಡುತ್ತದೆ.
ಪವಿತ್ರ ಕುರ್ಆನಿನ ಸೂರ ಅಲ್ ಅಅïಲಾದ ೧೪ ಮತ್ತು ೧೫ನೇ ಸೂಕ್ತಗಳು ಇದನ್ನು ಸ್ಪಷ್ಟಪಡಿಸುತ್ತವೆ.
“ಪಾವಿತ್ರ್ಯವನ್ನು ಕೈಗೊಂಡವನು ಯಶಸ್ವಿಯಾಗಿ ಬಿಟ್ಟನು. ತನ್ನ ಪ್ರಭುವಿನ ನಾಮವನ್ನು ಸ್ಮರಿಸಿದವನು ಮತ್ತು ನಮಾಝ್ ಮಾಡಿದವನು.” (87: 14-15)
ವಿಶ್ವಾಸ, ಆರಾಧನೆಯ ದಾರಿಯಲ್ಲಿ ಅಸೂಯೆ, ಅಹಂಕಾರ, ಹಗೆ, ನಿರಾಸೆ, ಅಪಹಾಸ್ಯ, ಪರದೂಷಣೆ ಮುಂತಾದ ಮಾನಸಿಕ ರೋಗಗಳಿಗೆ ಚಿಕಿತ್ಸೆ ನೀಡಿ ಉತ್ತಮ ಸಮಾಜದ ನಿರ್ಮಾಣಕ್ಕೆ ಬೇಕಾಗುವ ತರಬೇತಿಯ ಹಂತದಲ್ಲಿ ಪ್ರಮುಖವಾದುದನ್ನು ಮನುಷ್ಯನಲ್ಲಿ ಜೋಡಿಸುತ್ತಾನೆ. ನಂತರದ್ದು ಶರೀರ ಶುದ್ಧಿಯಾಗಿದೆ. ತಲೆ, ಗಡ್ಡ, ಗುಹ್ಯ ಭಾಗಗಳು, ಕೈ, ಕಾಲು, ಬೆರಳುಗಳು ಮುಂತಾದವುಗಳನ್ನು ಶುದ್ಧಗೊಳಿಸಬೇಕು. ಬಳಿಕ ಸ್ನಾನ ಮಾಡಿ ಸ್ವಚ್ಛವಾಗಬೇಕು. ದೇಹಕ್ಕೆ ಅನುಗುಣವಾದ ವಸ್ತ್ರ ಧರಿಸಿ ಸುಗಂಧವನ್ನು ಪೂಸಿ ಮನುಷ್ಯನು ಸಮಾಜದ ಭಾಗವಾಗಬೇಕು. ಮನೆಯಲ್ಲಿ ಆಗಲಿ ಹೊರಗಡೆಯಾಗಲಿ ಮನುಷ್ಯನು ಇತರರೊಂದಿಗೆ ಬೆರೆಯುವಾಗ ಇವೆಲ್ಲ ನಿಬಂಧನೆಯನ್ನು ಪಾಲಿಸಬೇಕು.
“ಪುರುಷನಾಗಿರಲಿ ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯವಿಶ್ವಾಸಿಯಾಗಿದ್ದರೆ ಅವನಿಗೆ ನಾವು ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ (ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು.” (ಅನ್ನಹ್ಲ್: 97)
ಇವೆಲ್ಲವನ್ನೂ ಪೂರ್ತಿಗೊಳಿಸಿದ ಬಳಿಕ ಪುರುಷ ಮತ್ತು ಮಹಿಳೆ ಅವರಿಗಾಗಿ ಇಸ್ಲಾಮ್ ನಿರ್ದೇಶಿಸಿದ ದೌತ್ಯವನ್ನು ನಿರ್ವಹಿಸಲು ಅವರು ಮುಂದಾಗಬೇಕು. ಹೆಚ್ಚು ಪರಿಶ್ರಮವಿರುವುದನ್ನು ಪ್ರಕೃತಿದತ್ತವಾಗಿ ಪುರುಷರಿಗೆ ನೀಡಲಾಗಿದೆ. ಸಂಪಾದನೆ, ಗಳಿಕೆ, ಯುದ್ಧ, ಆಡಳಿತ ನಿರ್ವಹಣೆ ಮುಂತಾದವುಗಳಿಂದ ಪ್ರಾರಂಭವಾಗಿ ಎಲ್ಲಾ ಸಮಯ ಮನೆಯಿಂದ ದೂರ ಸಂಚರಿಸಿ ತೀವ್ರ ಪರಿಶ್ರಮ ಅನಿವಾರ್ಯವಾದ ಜವಾಬ್ದಾರಿಕೆಯನ್ನು ನೀಡಲಾಗಿದೆ. ಖರ್ಚು ಮಾಡಬೇಕಾದ ಯಾವ ಜವಾಬ್ದಾರಿಕೆಯನ್ನು ಮಹಿಳೆಯರಿಗೆ ಕಡ್ಡಾಯಗೊಳಿಸಿಲ್ಲ. ಮಾನಸಿಕವಾದ, ದೈಹಿಕವಾದ ಒತ್ತಡಗಳನ್ನು ಲೆಕ್ಕಿಸದೆ ತೀರ್ಮಾನಗಳನ್ನು ಕೈಗೊಳ್ಳುವ ಕುಟುಂಬದ ಯಜಮಾನನೆಂಬ ಜವಾಬ್ದಾರಿಕೆ ಪುರುಷನ ಹೆಗಲಿಗೆ ವಹಿಸಿಕೊಡಲಾಗಿದೆ.
“ಪುರುಷರು ಸ್ತ್ರೀಯರ ಮೇಲೆ (ಮೇಲ್ವಿಚಾರಕ) ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರದಾನ ಮಾಡಿದುದರಿಂದ ಮತ್ತು ಪುರುಷರು ತಮ್ಮ ಸಂಪತ್ತನ್ನು ಖರ್ಚು ಮಾಡುವುದರಿಂದ. ಸುಶೀಲೆಯರಾದ ಸ್ತ್ರೀಯರು ಅನುಸರಣಾಶೀಲರಾಗಿರುತ್ತಾರೆ ಮತ್ತು ಅವರು ಪುರುಷರ ಅನುಪಸ್ಥಿತಿಯಲ್ಲಿ ಅಲ್ಲಾಹನ ರಕ್ಷಣೆಯಲ್ಲಿ ಅವರ ಹಕ್ಕು ಬಾಧ್ಯತೆಗಳ ರಕ್ಷಣೆ ಮಾಡುತ್ತಾರೆ. ನಿಮ್ಮ ಸ್ತ್ರೀಯರಿಂದ ಆಜ್ಞೋಲ್ಲಂಫನೆಯ ಆಶಂಕೆ ನಿಮಗಿದ್ದರೆ ಅವರಿಗೆ ನೀವು ಉಪದೇಶ ನೀಡಿರಿ. ಮಲಗುವಲ್ಲಿಂದ ಅವರಿಂದ ದೂರವಿರಿ ಮತ್ತು ಅವರಿಗೆ ಹೊಡೆಯಿರಿ. ಅನಂತರ ಅವರು ನಿಮಗೆ ವಿಧೇಯರಾಗಿ ನಡೆದರೆ, ಅವರ ಮೇಲೆ ಕೈಯೆತ್ತಲು ಬೇಕು ಬೇಕೆಂದೇ ನೆಪ ಹುಡುಕ ಬೇಡಿರಿ. ನಿಶ್ಚಯವಾಗಿಯೂ ಅಲ್ಲಾಹನು ಅತ್ಯುನ್ನತನೂ ಮಹಾನನೂ ಆಗಿರುತ್ತಾನೆ.” (ಸೂರಾ ಅನ್ನಿಸಾ: 34)
ಭೂಮಿಯಲ್ಲಿ ಮನೆಯನ್ನು ಸ್ವರ್ಗವಾಗಿಡಲು ಬಯಸುವವರಿಗೆ ಪರಲೋಕದಲ್ಲಿ ಸ್ವರ್ಗವಿದೆ. ಓರ್ವರು, ಒಳಗೆ ಮತ್ತೋರ್ವರು ಹೊರಗೆ ನಿಂತು ತಮ್ಮ ಮಕ್ಕಳಿಗೆ ಮತ್ತು ಹೊರಗಿಂದ ನೋಡುವವರಿಗೂ ಕಣ್ಣು ತಂಪುಗೊಳಿಸುವಂತಹ ಸ್ವರ್ಗಕ್ಕೆ ಸಮಾನವಾದ ಕುಟುಂಬವನ್ನು ನಿರ್ಮಿಸಲು ಇಸ್ಲಾಮ್ ಆದೇಶಿಸುತ್ತದೆ. ಆದ್ದರಿಂದಲೇ ಸಂಪತ್ತು ಸಂಪಾದನೆ ಮುಂತಾದ ದೌತ್ಯಗಳಿಂದ ಮಹಿಳೆಗೆ ವಿನಾಯಿತಿ ನೀಡಲಾಗಿದೆ. ಹೊರ ಜಗತ್ತಿನ ಎಲ್ಲ ದೌತ್ಯವನ್ನು ಪುರುಷನಿಗೆ ನೀಡಲಾಗಿದೆ.
“ಅವರು, `ನಮ್ಮ ಪ್ರಭೂ, ನಮ್ಮ ಪತ್ನಿಯರಿಂದಲೂ ಮಕ್ಕಳಿಂದಲೂ ನಮ್ಮ ಕಣ್ಮನಗಳನ್ನು ತಣಿಸು ಮತ್ತು ನಮ್ಮನ್ನು ಧರ್ಮನಿಷ್ಠರ ನಾಯಕರಾಗಿ ಮಾಡು’ ಎಂದು ಪ್ರಾರ್ಥಿಸುತ್ತಾರೆ.” (ಅಲ್ಫುರ್ಕಾನ್: 74)
ಮನೆಯನ್ನು ಹೊಳೆಯುವಂತೆ ಕಣ್ಮನ ತಣಿಸುವಂತೆ ಆನಂದ ತುಂದಿಲರಾಗುವಂತೆ ಮಾಡುವ ಮಹಿಳೆಯ ಮಾನಸಿಕ ಸ್ಥಿತಿಯನ್ನು ಕಾನೂನು ಬದ್ಧವಾಗಿ ಧಾರ್ಮಿಕ ಶಿಷ್ಟಾಚಾರಗಳ ಸರ್ವ ತರಬೇತಿಯನ್ನು ಇಸ್ಲಾಮ್ ನೀಡುತ್ತದೆ. ಮಾತೃತ್ವಕ್ಕೆ ಇಸ್ಲಾಮ್ ನೀಡುವ ಗೌರವವನ್ನು ಇದರಿಂದ ಅರ್ಥೈಸಬಹುದು.
“ಅಲ್ಲಾಹನ ಹೊರತು ಬೇರೆ ಯಾರ ದಾಸ್ಯ ಆರಾಧನೆಯನ್ನೂ ಮಾಡಬಾರದೆಂದೂ ಮಾತಾಪಿತರು, ಬಂಧು ಬಳಗದವರು, ಅನಾಥರು ಮತ್ತು ನಿರ್ಗತಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದೂ ಜನರೊಡನೆ ಒಳ್ಳೆಯ ಮಾತುಗಳನ್ನಾಡಬೇಕೆಂದೂ ನಮಾಝನ್ನು ಸಂಸ್ಥಾಪಿಸಬೇಕೆಂದೂ `ಝಕಾತ್’ (ಕಡ್ಡಾಯ ದಾನ) ಕೊಡಬೇಕೆಂದೂ ನಾವು ಇಸ್ರಾಈಲ್ ಸಂತತಿಯವರಿಂದ ಬಲವಾದ ಕರಾರನ್ನು ಪಡೆದ ಆ ಸಂದರ್ಭವನ್ನು ಸ್ಮರಿಸಿರಿ. ಆದರೆ ಕೆಲವೇ ಮಂದಿಯ ಹೊರತು ನೀವೆಲ್ಲರೂ ಆ ಕರಾರಿನಿಂದ ವಿಮುಖರಾದಿರಿ. ಇಂದಿಗೂ ವಿಮುಖರಾಗಿಯೇ ಇದ್ದೀರಿ.” (ಅಲ್ಬಕರ: 83)
ಅಲ್ಲಾಹನ ಹೊರತು ಅನ್ಯರನ್ನು ಆರಾಧಿಸಬೇಡಿ. ಸಂಬಂಧಿಕರಿಗೆ, ಅನಾಥರಿಗೆ ಬಡವರಿಗೆ ಒಳಿತನ್ನೇ ಮಾಡಿರಿ. ಜನರೊಂದಿಗೆ ಉತ್ತಮ ಮಾತುಗಳನ್ನು ಆಡಿರಿ, ಇದು ಅವರಿಂದ ಪಡೆದ ಪ್ರಬಲಕರಾರು ಜಗತ್ತಿನಲ್ಲಿ ಇಸ್ಲಾಮಿನ ಬೆಳಕು ಇಲ್ಲದ ಒಂದೇ ಒಂದು ಮನೆಯೂ ಇರಬಾರದು ಎಂಬುದು ಪ್ರವಾದಿವರ್ಯರ(ಸ) ಕನಸಾಗಿತ್ತು. ಮಾತಾಪಿತರನ್ನು ಗೌರವಿಸದ ಅನಾಥರ, ಬಡವರ ಹಕ್ಕುಗಳನ್ನು ಸಂರಕ್ಷಿಸದ ಒಂದೇ ಒಂದು ಮನೆಯೂ ಈ ಭೂಮಿಯಲ್ಲಿರಬಾರದು ಎಂಬುದು ಪ್ರವಾದಿವರ್ಯರ(ಸ) ಉದ್ದೇಶವಾಗಿತ್ತು. ಕ್ಷೋಭೆ ಕಲಹವು ಇಲ್ಲವಾಗಿ ಧರ್ಮವು ಅಲ್ಲಾಹನಿಗೆ ಮಾತ್ರ ಎನ್ನುವ ತನಕ ಅವರೊಂದಿಗೆ ಯುದ್ಧ ಮಾಡಿರಿ ಎಂಬ ಕುರ್ಆನಿನ ಆದೇಶವನ್ನು ಗಮನಿಸಬೇಕು. ವಿಶ್ವದ ಎಲ್ಲ ತಂದೆ ತಾಯಿಯರಿಗೆ ಉತ್ತಮವಾದ ವರ್ತನೆ ಲಭ್ಯವಾಗುವ ತನಕ ನೀವು ಅವರೊಂದಿಗೆ ಯುದ್ಧ ನಡೆಸಿರಿ ಎಂಬುದು ಇದರ ಸಾರಾಂಶವಾಗಿದೆ. ಇಸ್ಲಾಮಿನ ಯುದ್ಧಗಳ ವಿರುದ್ಧ ಕತ್ತಿ ಮಸೆಯುವವರು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು.
ನಮಗೆ ಆಧಾರವಾಗಿ ನೆರಳಾಗಿ ನಿಂತಿದ್ದಂತಹ ತಂದೆ ತಾಯಿಯರನ್ನು ಯಾವ ಕಾರಣಕ್ಕೂ ನಾವು ನಿಂದಿಸಬಾರದು. ತಂದೆ-ತಾಯಿಯೊಂದಿಗೆ “ಛೇ” ಎಂಬ ಪದ ಕೂಡಾ ಬಳಸಬಾರದು ಎಂದು ಕುರ್ಆನ್ ಹೇಳುತ್ತದೆ. ಅವರು ಅವಿಶ್ವಾಸಿಯಾದರೂ ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ ಎಂದು ಕುರ್ಆನ್ ತಿಳಿಸುತ್ತದೆ.
ತಂದೆ ತಾಯಂದಿರಲ್ಲಿ ತಾಯಿಗೆ ಇಸ್ಲಾಮ್ ಮೊದಲ ಪ್ರಾಶಸ್ತ್ಯ ನೀಡಿದೆ. ಒಮ್ಮೆ ಪ್ರವಾದಿವರ್ಯರ(ಸ) ಬಳಿ ಓರ್ವರು ಬಂದರು. ಅತ್ಯಂತ ಹೆಚ್ಚು ಪ್ರೀತಿ ಪೂರ್ವಕವಾಗಿ ನಾನು ಯಾರೊಂದಿಗೆ ವರ್ತಿಸಬೇಕು ಎಂದು ಕೇಳಿದರು. ಆಗ ಪ್ರವಾದಿವರ್ಯರು(ಸ) “ನಿನ್ನ ತಾಯಿ” ಎಂದು ಉತ್ತರಿಸಿದರು. ಆನಂತರ ಯಾರು ಎಂದು ಕೇಳಿದಾಗ, “ನಿನ್ನ ತಾಯಿ” ಎಂದು ಉತ್ತರಿಸಿದರು. ಆನಂತರ ಯಾರು ಎಂದಾಗಲೂ “ನಿನ್ನ ತಾಯಿ” ಎಂದು ಉತ್ತರಿಸಿದರು. ಆನಂತ ರವೂ ಯಾರು ಎಂದು ಕೇಳಿದಾಗ, “ನಿನ್ನ ತಂದೆ” ಎಂದು ಉತ್ತರಿಸಿದರು. (ಬುಖಾರಿ ಮುಸ್ಲಿಮ್)
ಯುದ್ಧ, ಕುಟುಂಬದ ಪಾಲನೆ ಪೋಷಣೆಗೆ ಅಗತ್ಯವಾದ ಸೊತ್ತು ಸಂಪಾದನೆ ಮುಂತಾದ ಕಡ್ಡಾಯ ನಿರ್ವಹಣೆಯೂ ಮಹಿಳೆಗೆ ಅನ್ವಯಿಸುವುದಿಲ್ಲ ಎಂದು ನಾವು ಮೊದಲೇ ಸೂಚಿಸಿದ್ದೆವು ಅಲ್ಲವೇ. ಆದರೂ ಇಸ್ಲಾಮಿನ ಆದರ್ಶ ಸಂರಕ್ಷಣೆಯಿಂದ ಮಹಿಳೆಯರು ದೂರ ನಿಂತ ಇತಿಹಾಸ ಇಸ್ಲಾಮಿನಲ್ಲಿ ಕಾಣಸಿಗದು. ಆದರ್ಶ ಸಿದ್ಧಾಂತಗಳಿಗೆ ಸರ್ವ ರೀತಿಯ ತ್ಯಾಗ ಮಾಡಿದ ಮಾದರಿ ಮಹಿಳೆಯ ಉದಾಹರಣೆ ಪವಿತ್ರ ಕುರ್ಆನಿನಲ್ಲಿದೆ.
ಮರ್ಯಮ್(ಅ)ರ ಜೀವನವು ಸ್ಪಷ್ಟ ಉದಾಹರಣೆಯಾಗಿದೆ. ದಿವ್ಯ ಸಂದೇಶದೊಂದಿಗೆ ಪ್ರತ್ಯಕ್ಷವಾದ ದೇವದೂತರನ್ನು ಒಬ್ಬಂಟಿಯಾಗಿ ಭೇಟಿಯಾಗಿ ದೃಢವಾಗಿ ನಿಂತ ವಿವಾಹಿತರಾಗದೆ ಗರ್ಭಧಾರಣೆಯನ್ನು ರಹಸ್ಯವಾಗಿರಿಸಿದ ಬಳಿಕ ಅಲ್ಲಾಹನ ಆಜ್ಞೆಯಂತೆ ಜನರ ಮುಂದೆ ನಿಂತು ದೃಢ ಚಿತ್ತದಿಂದ ಅಲ್ಲಾಹನ ಮಾರ್ಗದಲ್ಲಿ ನಿಂತ ಉದಾಹರಣೆಯಿದೆಯಲ್ಲಾ ಅದು ಬಹಳ ಮಹತ್ತರವಾದುದಾಗಿದೆ.
ಫರೋವನ ಪತ್ನಿ ಪ್ರವಾದಿ ಮೂಸಾ(ಅ)ರ ಸಾಕು ತಾಯಿ ಆಸಿಯಾರ(ರ) ಜೀವನ ಚರಿತ್ರೆಯೂ ಸಾಮಾನ್ಯವಲ್ಲ. ಹಾಗೆಯೇ ಪ್ರವಾದಿ ಮೂಸಾರ ಮಾತೆ, ಸಹೋದರಿ ಮೂಸಾರ ಜೀವನದ ಒಂದು ಘಟ್ಟದಲ್ಲಿ ಪತ್ನಿಯಾಗಿದ್ದ ಶುಐಬ್(ಅ)ರ ಪುತ್ರಿ ಸಫೂರ. ಪ್ರವಾದಿ ಇಬ್ರಾಹೀಮರ ಪತ್ನಿ ಸಾರಾ, ಇಸ್ಮಾಈಲರ ತಾಯಿ ಹಾಜಿರಾ ಮುಂತಾದ ಮಾದರಿ ವೀರ ಮಹಿಳೆಯರ ಇತಿಹಾಸವು ಇಸ್ಲಾಮಿನಲ್ಲಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ, ಇಸ್ಲಾಮಿನಲ್ಲಿ ಮಾತೆಗೆ ಬಹಳ ಗೌರವಾದರವಿದೆ. ಅವರು ಮನೆಯ ಸಂಪತ್ತು ಮತ್ತು ನೆರಳಾಗಿದ್ದಾರೆ. ಅವರು ಮನೆಯಲ್ಲಿ ಅತೀ ಹೆಚ್ಚು ಗೌರವಿಸಲ್ಪಡುವವರು ಆಗಿದ್ದಾರೆ.
ಎಲ್ಲರಲ್ಲಿಯೂ ಎಲ್ಲರಿಂದಲೂ ಗೌರವಿಸಲ್ಪಡುವ ಛೇ ಎಂಬ ಪದ ಕೂಡಾ ಉಚ್ಚರಿಸಲ್ಪಡದಂತಹ ಓರ್ವರು ಮನೆಯಲ್ಲಿದ್ದರೆ ಖಂಡಿತವಾಗಿಯೂ ಆ ಮನೆಯಲ್ಲಿ ಗೌರವ, ಸತ್ಯ ಬೆಳಗುವುದು. ಈ ಅರ್ಥದಲ್ಲಿ ಮಾತೃತ್ವಕ್ಕೆ ಮಹತ್ವ ನೀಡಿದ ಇಸ್ಲಾಮ್ ಮನೆಯನ್ನೇ ಬೆಳಗಿಸುತ್ತದೆ.
IslamKannada News Portal

