ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ವ್ಯಾಪಕಗೊಳಿಸಲಾಗುತ್ತಿರುವ ಇನ್ನೊಂದು ಸಂಶಯ ಇಸ್ಲಾಮ್ ಪರಧರ್ಮ ಸಹಿಷ್ಣುತೆಯ ಧರ್ಮವಲ್ಲವೆಂಬುದೂ ಮುಸ್ಲಿಮರು ಅತ್ಯಧಿಕ ಅಸಹಿಷ್ಣುಗಳೆಂಬುದೂ ಆಗಿದೆ. ವಾಸ್ತವದಲ್ಲಿ ಇದು ಬ್ರಿಟಿಷ್ ಸಾಮ್ರಾಜ್ಯಶಾಹಿ ಶಕ್ತಿಯು ಭಾರತದಲ್ಲಿ ತನ್ನ ಆಡಳಿತವನ್ನು ಭದ್ರಪಡಿಸಲು ಸೃಷ್ಟಿಸಿ ಪ್ರಚಾರ ಪಡಿಸಿದ ಮಿಥ್ಯ ಹಾಗೂ ಒಡೆದು ಆಳುವ ಕುಟಿಲ ತಂತ್ರವಾಗಿದೆ. ಬ್ರಿಟಿಷ್ ಆಧಿಪತ್ಯವು ಭಾರತದಲ್ಲಿ ಸ್ಥಾಪಿತವಾಗುವುದಕ್ಕೆ ಮುಂಚೆ ಸುಮಾರು ಒಂದು ಸಹಸ್ರ ವರ್ಷಗಳ ಕಾಲ ಇಲ್ಲಿನ ಬಹುದೊಡ್ಡ ಭಾಗದಲ್ಲಿ ಮುಸ್ಲಿಮ್ ಅರಸರ ಆಳ್ವಿಕೆ ಇತ್ತೆಂಬುದು ಸ್ಮರಣೀಯ. ಭಾರತದಲ್ಲಿ ಮಾತ್ರವಲ್ಲ ಇಂಡೋನೇಶ್ಯಾ, ಮಲೇಶ್ಯಾಗಳಿಂದ ಹಿಡಿದು ಟರ್ಕಿ, ಈಜಿಪ್ಟ್ ಮತ್ತು ಮೊರೊಕ್ಕೊ ವರೆಗಿರುವ ಹತ್ತಾರು ಮುಸ್ಲಿಮ್ ರಾಷ್ಟ್ರಗಳಲ್ಲಿ ಮುಸ್ಲಿಮೇತರ ಅಲ್ಪಸಂಖ್ಯಾತರು ಅನೇಕ ಶತಮಾನಗಳಿಂದ ಜೀವಿಸುತ್ತಿದ್ದಾರೆ. ಆದರೆ ಇಂದಿನ ತನಕ ಅವರ ವಿರುದ್ಧ ಅಲ್ಲಿಯ ಮುಸ್ಲಿಮರು ಪಕ್ಷಪಾತವನ್ನಾಗಲೀ ಅಸಹಿಷ್ಣುತೆಯನ್ನಾಗಲೀ ತೋರಿಸಿದ್ದಿಲ್ಲ. ಇಸ್ಲಾಮ್ ಸ್ವೀಕರಿಸಲು ನಿರಾಕರಿಸಿದುದಕ್ಕೆ ಯಾರನ್ನಾದರೂ ಕೊಂದ ಉದಾಹರಣೆ ಎಲ್ಲೂ ಸಿಗುವುದಿಲ್ಲ. ಮುಸ್ಲಿಮೇತರರ ಮಾನ, ಪ್ರಾಣ, ಸೊತ್ತು-ವಿತ್ತಗಳನ್ನು ನಾಶಪಡಿಸುವ ಯಾವ ಪ್ರಯತ್ನವೂ ಅಲ್ಲಿ ನಡೆಯಲಿಲ್ಲ. ಎಲ್ಲಿಯೂ ಅವರನ್ನು ಬಲಾತ್ಕಾರ ಮತ್ತು ಹಿಂಸೆಯ ಮೂಲಕ ಮತಾಂತರಿಸಲಾಗಿಲ್ಲ. ಅವರ ವಿರುದ್ಧ ಆರ್ಥಿಕ ಕ್ಷೇತ್ರಗಳಲ್ಲಿ ತಾರತಮ್ಯ ತೋರಿ ಅವರನ್ನು ಹಿಂದುಳಿದವರಾಗಿ ಮಾಡಲಾಗಿಲ್ಲ.
ಇಸ್ಲಾವಿೂ ಸಮಾಜದಲ್ಲಿ ಮುಸ್ಲಿಮೇತರರಿಗೆ ಧಾರ್ಮಿಕ ವಿಶ್ವಾಸ, ನಂಬಿಕೆಗಳ ಸ್ವಾತಂತ್ರ್ಯ, ಆರಾಧನೆ-ಆಚಾರಗಳ ಸ್ವಾತಂತ್ರ್ಯ ಮತ್ತು ತಂತಮ್ಮ ಪರ್ಸನಲ್ ಲಾ (ವ್ಯಕ್ತಿ ನಿಯಮ)ದ ಪ್ರಕಾರ ನಡೆಯುವ ಸ್ವಾತಂತ್ರ್ಯವನ್ನು ಪರಿಪೂರ್ಣವಾಗಿ ನೀಡಲಾಗಿದೆ. ಒಂದು ಇಸ್ಲಾವಿೂ ಸರಕಾರವು ಮುಸ್ಲಿಮರಂತೆ ಇತರೆಲ್ಲ ಧರ್ಮಿಯರ ವೈಯಕ್ತಿಕ ವ್ಯವಹಾರಗಳಲ್ಲಿಯೂ ಅವರ ಪರ್ಸನಲ್ ಲಾ ಅಥವಾ ಧಾರ್ಮಿಕ ವಿಧಿಗಳಂತೆಯೇ ತೀರ್ಮಾನಿಸುತ್ತದೆ. ಇಸ್ಲಾವಿೂ ಆಡಳಿತ ವ್ಯವಸ್ಥೆಗಳಲ್ಲಿ ನಾಗರಿಕ ಮತ್ತು ಆರ್ಥಿಕ ವ್ಯವಹಾರಗಳಿಗೆ ಸಂಬಂಧ ಪಟ್ಟ ಕಾನೂನುಗಳ ಬುನಾದಿಯು ಎಲ್ಲ ಧರ್ಮಗಳೂ ಒಪ್ಪುವಂತಹ ಸರ್ವಸಮ್ಮತ ತತ್ವಗಳ ಮೇಲೆ ಆಧಾರಿತವಾಗಿರುತ್ತದೆ.
ಇಸ್ಲಾಮ್ ಖಡ್ಗದಿಂದ ಪಸರಿಸಿತೇ?
ವೈಯಕ್ತಿಕವಾಗಿಯಾಗಲೀ ಸರಕಾರೀ ಮಟ್ಟದಲ್ಲಾಗಲೀ ಇಸ್ಲಾಮ್ ಯಾರಿಗೂ ಇತರರ ಮೇಲೆ ತಮ್ಮ ಧರ್ಮವನ್ನು ಒತ್ತಾಯಪೂರ್ವಕ ಹೇರುವ ಅಥವಾ ಯಾರನ್ನೂ ಬಲಾತ್ಕಾರ, ಒತ್ತಡ ಮತ್ತು ವಂಚನೆ-ಮೋಸಗಳ ಮೂಲಕ ಮತಾಂತರಿಸುವ ಹಕ್ಕನ್ನು ನೀಡುವುದಿಲ್ಲ. ಇದು ಪವಿತ್ರ ಕುರ್ಆನಿನ ಈ ಕೆಳಗಿನ ವಚನಗಳಲ್ಲಿ ಸ್ಪಷ್ಟವಾಗಿ ಆದೇಶಿಸಲ್ಪಟ್ಟಿದೆ:
“ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ.” (2:256)
ವಾಸ್ತವದಲ್ಲಿ ಯಾವುದೇ ವಿಚಾರವನ್ನು ಮನುಷ್ಯನ ಮೇಲೆ ಬಲಾತ್ಕಾರವಾಗಿ ಹೇರಲು ಸಾಧ್ಯವೇ ಇಲ್ಲ. ಖಡ್ಗದ ಬಲದಿಂದ ಜನರ ಶರೀರವನ್ನು ಮಣಿಸಬಹುದೇ ವಿನಾ ಅವರ ಮನ ವನ್ನು ಪರಿವರ್ತಿಸಲು ಮತ್ತು ಅದನ್ನು ಜಯಿಸಲು ಸಾಧ್ಯವಿಲ್ಲ. ಇಸ್ಲಾಮಿನ ವೈಚಾರಿಕ, ನೈತಿಕ ಮತ್ತು ಆಚಾರ ಪದ್ಧತಿಯನ್ನು ಯಾರ ಮೇಲೂ ಬಲಾತ್ಕಾರವಾಗಿ ಹೇರುವ ಪ್ರಶ್ನೆಯೇ ಇಲ್ಲ.
“ಹೇಳಿರಿ, ನಿಮಗೆ ನಿಮ್ಮ ಧರ್ಮ ಮತ್ತು ನನಗೆ ನನ್ನ ಧರ್ಮ.” (ಪವಿತ್ರ ಕುರ್ಆನ್, 109:6)
ನನ್ನ ಧರ್ಮವನ್ನು ನಾನು ನಿಮ್ಮ ಮೇಲೆ ಒತ್ತಾಯ-ಬಲಾತ್ಕಾರಗಳಿಂದ ಹೇರುವುದಿಲ್ಲ. ಅಂತೆಯೇ ನೀವೂ ನಿಮ್ಮ ಧರ್ಮವನ್ನು ಬಲಾತ್ಕಾರದಿಂದ ಹೇರಲು ಪ್ರಯತ್ನಿಸಬೇಡಿ. ನಿಮ್ಮಿಂದ ಅದು ಸಾಧ್ಯವೂ ಅಲ್ಲ ಎಂಬುದನ್ನು ಅಲ್ಲಾಹನು ಮೇಲಿನ ಚಿಕ್ಕ ವಾಕ್ಯದ ಮೂಲಕ ಮಕ್ಕಾದ ಸತ್ಯನಿಷೇಧಿಗಳಿಗೆ ತಿಳಿಸುವಂತೆ ಆಜ್ಞಾಪಿಸಿದ್ದಾನೆ. ನಿಮ್ಮ ಯಾವುದೇ ಬೆದರಿಕೆ ಅಥವಾ ಆಮಿಷ ನಮ್ಮನ್ನು ನಮ್ಮ ಧರ್ಮದಿಂದ ಹಿಂಜರಿಸಲಾರದೆಂಬ ಘೋಷಣೆಯೂ ಈ ಸೂಕ್ತದಲ್ಲಿ ಅಡಕವಾಗಿದೆ.
ಸರ್ವ ಸಮಾನತೆ
ತೌಹೀದ್ ಅಥವಾ ಏಕದೇವಾರಾಧನೆಯು ಇಸ್ಲಾವಿೂ ವಿಚಾರಧಾರೆಯ ತಿರುಳಾಗಿದೆ ಎಂಬುದನ್ನು ನಾವು ಈಗಾಗಲೇ ಕಂಡುಕೊಂಡಿದ್ದೇವೆ. ಇಸ್ಲಾವಿೂ ಜೀವನ ವ್ಯವಸ್ಥೆಯ ಸಂಪೂರ್ಣ ಸೌಧವು ಏಕದೇವ ವಿಶ್ವಾಸದ ಬುನಾದಿಯ ಮೇಲೆ ನಿಂತಿದೆ. ಮಾನವೀಯ ಏಕತೆ ಮತ್ತು ಸಮಾನತೆಯು ಈ ವಿಶ್ವಾಸದ ಅನಿವಾರ್ಯ ಬೇಡಿಕೆಯಾಗಿದೆ. ಅದು ಎಲ್ಲ ಮನುಷ್ಯರನ್ನೂ ಏಕದೇವನ ಸೃಷ್ಟಿಯೆಂದೂ ಎಲ್ಲರೂ ಸಮಾನರೆಂದೂ ಪ್ರತಿಪಾದಿಸುತ್ತದೆ. ಮಾನವಕುಲವು ಅಲ್ಲಾಹನ ಏಕ ಕುಟುಂಬವಾಗಿದ್ದು ಬಡವ-ಬಲ್ಲಿದ, ಬಿಳಿಯ-ಕರಿಯ, ಆರ್ಯ-ದ್ರಾವಿಡ, ಪಾಶ್ಚಾತ್ಯ-ಪೌರ್ವಾತ್ಯ ಎಂಬ ನೆಲೆಯಲ್ಲಿ ಆ ಕುಟುಂಬದ ಸದಸ್ಯರ ಮಧ್ಯೆ ತಾರತಮ್ಯಕ್ಕೆ ಅವಕಾಶವೇ ಇಲ್ಲ. ಮಾನವರನ್ನು ಮಾನವರೆಂಬ ನೆಲೆಯಲ್ಲಿಯೇ ಗೌರವಿಸಬೇಕೆಂದು ಪವಿತ್ರ ಕುರ್ಆನ್ ಆಜ್ಞಾಪಿಸುತ್ತದೆ:
“ಖಂಡಿತವಾಗಿಯೂ ನಾವು ಆದಮರ ಸಂತತಿಯನ್ನು ಗೌರವಾನ್ವಿತ ಗೊಳಿಸಿದ್ದೇವೆ.” (17:70)
ಇಸ್ಲಾಮಿನ ಮಾನವೀಯ ಏಕತೆ ಮತ್ತು ಸಮಾನತೆಯ ತತ್ವದ ಕುರಿತು ಪ್ರಖ್ಯಾತ ಚಿಂತಕರಾದ ಸರ್ ಸಿ.ಪಿ. ರಾಮಸ್ವಾಮಿ ಅಯ್ಯರ್ ಈ ರೀತಿ ಬರೆದಿರುವರು:
“ನಾನು ಮತ್ತು ಎಲ್ಲ ವಿಚಾರವಂತರು ಇಸ್ಲಾಮನ್ನು ಇಂದು ಜಗತ್ತಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಏಕೈಕ ಪ್ರಜಾಸತ್ತಾತ್ಮಕ ಧರ್ಮವೆಂದು ಪರಿಗಣಿಸುತ್ತೇವೆ. ಓರ್ವ ನಿಷ್ಠಾವಂತ ಹಿಂದುವಾಗಿಯೂ ನಾನು ಇದನ್ನು ಧೈರ್ಯದಿಂದ ಹೇಳಬಲ್ಲೆ. ನನ್ನ ಧರ್ಮವು ಅದರ ಮೂಲಭೂತ ಸಿದ್ಧಾಂತದ ಹೊರತಾಗಿಯೂ ಮಾನವ ಏಕತೆಯ ತತ್ವವನ್ನು ಕಾರ್ಯರೂಪಕ್ಕೆ ತರುವಲ್ಲಿ ಸಫಲವಾಗಿಲ್ಲ. ಇಸ್ಲಾಮಿನ ಹೊರತು ಬೇರಾವ ಧರ್ಮವೂ ಅದರ ಸಿದ್ಧಾಂತ ಏನೇ ಆಗಿರಲಿ- ದೇವನ ಮುಂದೆ ಮನುಷ್ಯ ಸಮಾನತೆ ಮತ್ತು ಏಕತೆಯ ಮೂಲ ತತ್ವವನ್ನು ಕಾರ್ಯರೂಪಕ್ಕೆ ತಂದಿಲ್ಲ.” (Eastern Times 22:12-44)
ಮಾನವ ಪ್ರಾಣದ ಪಾವಿತ್ರ್ಯ
ಮಾನವ ಪ್ರಾಣವನ್ನು ಇಸ್ಲಾಮ್ ಅತ್ಯಧಿಕ ಪವಿತ್ರವೆಂದು ಪರಿಗಣಿಸುತ್ತದೆ. ನ್ಯಾಯ ಸಮ್ಮತ ಕಾರಣವಿಲ್ಲದೆ ಯಾರ ಪ್ರಾಣ ಹರಣವನ್ನೂ ಅದು ಸಮ್ಮತಿಸುವುದಿಲ್ಲ.
“ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ವಧಿಸಿದರೆ ಅವನು ಸಕಲ ಮಾನವ ಕೋಟಿಯನ್ನು ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಅವನು ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ.” (ಪವಿತ್ರ ಕುರ್ಆನ್, 5:32)
ಇನ್ನೊಂದೆಡೆ ಪವಿತ್ರ ಕುರ್ಆನ್ ಸತ್ಯವಿಶ್ವಾಸಿಗಳ ವೈಶಿಷ್ಟ್ಯಗಳನ್ನು ವಿವರಿಸುತ್ತಾ ಈ ರೀತಿ ಹೇಳಿದೆ:
“ಅಲ್ಲಾಹನ ಜೊತೆ ಇನ್ನಾವ ಆರಾಧ್ಯರನ್ನೂ ಅವರು ಕರೆದು ಪ್ರಾರ್ಥಿಸುವುದಿಲ್ಲ. ಅಲ್ಲಾಹನು ನಿಷಿದ್ಧಗೊಳಿಸಿದ ಯಾವ ಜೀವವನ್ನೂ ಅನ್ಯಾಯವಾಗಿ ವಧಿಸುವುದಿಲ್ಲ.” (25:68)
ಪ್ರವಾದಿ(ಸ) ಈ ರೀತಿ ಹೇಳಿರುವರು:
ಮಹಾ ಪಾಪಗಳಲ್ಲಿ ಅತಿದೊಡ್ಡದು ದೇವ ಸಹಭಾಗಿತ್ವವಾಗಿದೆ. ಅನಂತರ ಮಾನವ ಪ್ರಾಣಹರಣ, ಅನಂತರ ತಂದೆ ತಾಯಿಗಳಿಗೆ ತೋರುವ ಅವಿಧೇಯತೆ, ಅನಂತರ ಸುಳ್ಳು ಹೇಳುವುದಾಗಿದೆ. (ಬುಖಾರಿ)
ಇಸ್ಲಾಮ್ ತನ್ನ ಅನುಯಾಯಿಗಳಿಗೆ ಎಲ್ಲ ಸಂದರ್ಭಗಳಲ್ಲಿಯೂ ಪೂರ್ಣ ನ್ಯಾಯವನ್ನು ಪಾಲಿಸುವಂತೆ ಆಜ್ಞಾಪಿಸುತ್ತದೆ. ಎಲ್ಲ ಸಮಸ್ಯೆಗಳನ್ನೂ ಅದರ ಪರಿಣಾಮವನ್ನು ಲೆಕ್ಕಿಸದೆ ನ್ಯಾಯಪೂರ್ಣವಾಗಿ ಬಗೆಹರಿಸಬೇಕೆಂದು ಆದೇಶಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಇಸ್ಲಾಮ್ ನ್ಯಾಯದ ವಿಷಯದಲ್ಲಿ ಮುಸ್ಲಿಮರು ಮತ್ತು ಮುಸ್ಲಿಮೇತರರು ಎಂಬ ಯಾವುದೇ ತಾರತಮ್ಯ ಮಾಡುವುದಿಲ್ಲ.
“ಜನರ ಮಧ್ಯೆ ತೀರ್ಪು ನೀಡುವಾಗ ನ್ಯಾಯದೊಂದಿಗೆ ತೀರ್ಪು ನೀಡಿರಿ… ಎಂದು ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ.” (ಪವಿತ್ರ ಕುರ್ಆನ್, 4:58)
“ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಬಗ್ಗೆ ಸೌಜನ್ಯದ ಆಜ್ಞೆ ನೀಡುತ್ತಾನೆ.” (ಪವಿತ್ರ ಕುರ್ಆನ್, 16:90)
“ನಮ್ಮ ಸಂದೇಶವಾಹಕರನ್ನು ನಾವು ಸುಸ್ಪಷ್ಟ ಪ್ರಮಾಣಗಳ ಸಹಿತ ಕಳುಹಿಸಿಕೊಟ್ಟೆಮ. ಜನರು ನ್ಯಾಯದಲ್ಲಿ ಸ್ಥಿರಗೊಳ್ಳಲೆಂದು ಅವರ ಜೊತೆಯಲ್ಲಿ ಗ್ರಂಥವನ್ನೂ ನ್ಯಾಯದ ತಕ್ಕಡಿ ಯನ್ನೂ ಇಳಿಸಿದೆವು.” (ಪವಿತ್ರ ಕುರ್ಆನ್, 57:25)
“ಸತ್ಯವಿಶ್ವಾಸಿಗಳೇ! ನೀವು ನ್ಯಾಯದ ಧ್ವಜವಾಹಕರೂ ಅಲ್ಲಾಹನಿಗಾಗಿ ಸಾಕ್ಷ್ಯ ವಹಿಸುವವರೂ ಆಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. ಕಕ್ಷಿಯು ಧನಿಕನಿರಲಿ ಬಡವನಿರಲಿ ನಿಮಗಿಂತ ಹೆಚ್ಚಾಗಿ ಅಲ್ಲಾಹನು ಅವರ ಹಿತಚಿಂತಕನಾಗಿರುತ್ತಾನೆ. ಆದುದರಿಂದ ನಿಮ್ಮ ಚಿತ್ತಾಸಕ್ತಿಯ ಅನುಸರಣೆಯಲ್ಲಿ ನ್ಯಾಯಪಾಲನೆಯಿಂದ ಸರಿಯ ಬೇಡಿರಿ. ನೀವು ಗೂಢಾರ್ಥದ ಮಾತುಗಳನ್ನಾಡಿದರೆ ಅಥವಾ ಸತ್ಯದಿಂದ ನುಣುಚಿಕೊಂಡರೆ ನಿಶ್ಚಯವಾಗಿಯೂ ನೀವು ಮಾಡುತ್ತಿರುವ ಕರ್ಮಗಳ ಅರಿವು ಅಲ್ಲಾಹನಿಗಿದೆ ಎಂಬುದು ಚೆನ್ನಾಗಿ ತಿಳಿದಿರಲಿ.” (ಪವಿತ್ರ ಕುರ್ಆನ್, 4:135)
ಸಾರ್ವತ್ರಿಕ ನ್ಯಾಯ
ತನ್ನವರು, ಪರರು, ಸ್ವಧರ್ಮಿಯರು, ಪರಧರ್ಮಿಯರು ಎಂಬ ಭೇದವಿಲ್ಲದೆ ಎಲ್ಲರೊಂದಿಗೂ ನ್ಯಾಯ ಪರಿಪಾಲಿಸುವಂತೆ ಪವಿತ್ರ ಕುರ್ಆನ್ ಸತ್ಯವಿಶ್ವಾಸಿಗಳಿಗೆ ಆಜ್ಞೆ ನೀಡಿದೆ. ಮಾತ್ರವಲ್ಲ ನಿಮ್ಮ ಶತ್ರುಗಳೊಂದಿಗೂ ನ್ಯಾಯ ಪಾಲಿಸಿರಿ ಎಂದು ಪವಿತ್ರ ಕುರ್ಆನ್ ಆಜ್ಞಾಪಿಸುತ್ತದೆ.
“ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗಾಗಿ ಸತ್ಯದಲ್ಲೇ ನೆಲೆ ನಿಲ್ಲುವವರೂ ನ್ಯಾಯದ ಸಾಕ್ಷ್ಯ ವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವಭಯಕ್ಕೆ ಹೆಚ್ಚು ಅನುಗುಣವಾಗಿದೆ. ಅಲ್ಲಾಹನನ್ನು ಭಯಪಟ್ಟು ವರ್ತಿಸಿರಿ ನೀವು ಮಾಡುತ್ತಿರುವುದನ್ನೆಲ್ಲಾ ಅಲ್ಲಾಹ್ ಚೆನ್ನಾಗಿ ಬಲ್ಲವನಾಗಿದ್ದಾನೆ.” (5:8)
ಮುಸ್ಲಿಮರು ಈ ಆಜ್ಞೆಗಳನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದಾರೆಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಪ್ರವಾದಿವರ್ಯರು(ಸ) ಕಳ್ಳತನದ ಒಂದು ಅಪರಾಧಕ್ಕಾಗಿ ಫಾತಿಮಾ ಎಂಬ ಓರ್ವ ಅತ್ಯಂತ ಪ್ರಭಾವಶಾಲೀ ಮಹಿಳೆಯ ಕೈ ಕಡಿಯುವ ಆಜ್ಞೆ ನೀಡಿದ್ದರು. ಕೆಲವು ಪುರ ಪ್ರಮುಖರು ಆಕೆಯನ್ನು ಕ್ಷಮಿಸಬೇಕೆಂದು ಪ್ರವಾದಿವರ್ಯರಲ್ಲಿ(ಸ) ವಿನಂತಿಸಿದಾಗ ಅವರು ಈ ರೀತಿ ಹೇಳಿದರು:
“ಸಾಕ್ಷಾತ್ ಮುಹಮ್ಮದ್ರ(ಸ) ಪುತ್ರಿ ಫಾತಿಮಾ ಕೂಡಾ ಈ ಅಪರಾಧವೆಸಗಿದ್ದರೆ ಅವಳಿಗೂ ತಪ್ಪದೆ ಇದೇ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು.”
ಹಝ್ರತ್ ಉಮರ್ ರವರ(ರ) ಆಡಳಿತ ಕಾಲದಲ್ಲಿ ಬಕ್ರ್ ಬಿನ್ ವಾಇಲ್ ಗೋತ್ರದ ಒಬ್ಬ ವ್ಯಕ್ತಿ ಹಿರಾದ ಓರ್ವ ಮುಸ್ಲಿಮೇತರನನ್ನು ವಧಿಸಿದನು. ಹ. ಉಮರ್(ರ) ಮೃತನ ವಾರೀಸುದಾರರಿಗೆ ಆ ವ್ಯಕ್ತಿಯನ್ನು ಒಪ್ಪಿಸಿದರು ಮತ್ತು ಅವರು ಆ ಮುಸ್ಲಿಮನನ್ನು ವಧಿಸಿದರು.
ಮೂರನೆಯ ಖಲೀಫ ಹ. ಉಸ್ಮಾನ್ರವರ(ರ) ಕಾಲದಲ್ಲಿ ಹ. ಉಮರ್ ರ(ರ) ಓರ್ವ ಪುತ್ರನಿಗೆ ಓರ್ವ ಮುಸ್ಲಿಮೇತರ ಪ್ರಜೆಯ ಕೊಲೆಗಾಗಿ ಮರಣದಂಡನೆ ವಿಧಿಸಲಾಯಿತು.
ನಾಲ್ಕನೆಯ ಖಲೀಫ ಹ. ಅಲೀಯವರ(ರ) ಕಾಲದಲ್ಲಿಯೂ ಓರ್ವ ದಿಮ್ಮಿ (ಇಸ್ಲಾವಿೂ ರಾಷ್ಟ್ರದ ಮುಸ್ಲಿಮೇತರ ಪ್ರಜೆ)ಯನ್ನು ಕೊಂದ ಅಪರಾಧಕ್ಕಾಗಿ ಓರ್ವ ಮುಸ್ಲಿಮನಿಗೆ ಮರಣ ದಂಡನೆಯನ್ನು ವಿಧಿಸಲಾಗಿತ್ತು. ಆದರೆ ಮೃತರ ವಾರೀಸುದಾರರು ಆ ಮುಸ್ಲಿಮ್ ವ್ಯಕ್ತಿಯಿಂದ ಪರಿಹಾರ ಧನ ಪಡೆದು ಅವನನ್ನು ಕ್ಷಮಿಸಿದರು. ಆಗ ಹ. ಅಲೀ(ರ) ಹೇಳಿದ ಮಾತು ಅತ್ಯಂತ ಗಮನಾರ್ಹವಾಗಿತ್ತು:
“ನಮ್ಮ ದಿಮ್ಮಿ (ಇಸ್ಲಾವಿೂ ರಾಷ್ಟ್ರದ ಮುಸ್ಲಿಮೇತರ ಪ್ರಜೆ)ಯ ರಕ್ತ ನಮ್ಮ ರಕ್ತದಷ್ಟೇ ಪವಿತ್ರವಾಗಿದೆ ಮತ್ತು ಆತನ ಸೊತ್ತು ನಮ್ಮ ಸೊತ್ತಿನಂತೆಯೇ ಅತಿಕ್ರಮಿಸಲಾಗದ ಸೊತ್ತಾಗಿದೆ.”
ಮುಸ್ಲಿಮರು ಧಾರ್ಮಿಕವಾಗಿ ಅವನತಿಯ ಪಥವನ್ನು ತುಳಿಯಲಾರಂಭಿಸಿದ ಬಳಿಕವೂ ಈ ನ್ಯಾಯನಿಷ್ಠೆಯ ನಿದರ್ಶನಗಳು ಅಪರೂಪವಾಗಿರಲಿಲ್ಲ.
ಓರ್ವ ಹಿಂದೂ ಪ್ರಜೆಯ ದೂರಿನ ಮೇರೆಗೆ ನ್ಯಾಯಾಧೀಶರು ಮುಹಮ್ಮದ್ ಬಿನ್ ತುಗ್ಲಕನಿಗೆ ಸಮನ್ಸ್ ಜಾರಿಗೊಳಿಸಿ, ಅವರು ನ್ಯಾಯಾಧೀಶರ ಮುಂದೆ ಹಾಜರಾದ ಘಟನೆ, ಓರ್ವ ಬನಿಯನ ಹೆಂಡತಿಯೊಡನೆ ಅಸಭ್ಯವಾಗಿ ವರ್ತಿಸಿದುದಕ್ಕೆ ಶೇರ್ಶಾ ಸೂರಿ ತನ್ನ ಮಗನನ್ನೇ ದಂಡಿಸಿದ ಘಟನೆ, ಔರಂಗಝೇಬನು ತನ್ನ ಪ್ರಧಾನಿಯ ಪುತ್ರನಾದ ಮಿರ್ಝಾ ತಫಕ್ಕುರ್ನನ್ನು ಓರ್ವ ಮುಸ್ಲಿಮೇತರ ಮಹಿಳೆಯ ಮಾನಭಂಗ ಮಾಡಿದುದಕ್ಕೆ ಶಿಕ್ಷಿಸಿದ ಘಟನೆ ನಮ್ಮ ದೇಶದ ಮುಸ್ಲಿಮ್ ರಾಜರ ಆಳ್ವಿಕೆಯ ಕಾಲದಲ್ಲಿದ್ದ ಇಸ್ಲಾವಿೂ ನ್ಯಾಯನಿಷ್ಠೆಯ ಉಜ್ವಲ ನಿದರ್ಶನಗಳಾಗಿವೆ.
ಧ್ಯೇಯದಂತೆ ಮಾರ್ಗ
ಈ ವಿಷಯದಲ್ಲಿ ಇನ್ನೊಂದು ವಿಚಾರವೂ ಗಮನಾರ್ಹವಾಗಿದೆ. “ಧ್ಯೇಯ ಉತ್ತಮವಿದ್ದರೆ ಸಾಕು, ಅದನ್ನು ಸಾಧಿಸುವ ಮಾರ್ಗ ಯಾವುದಾದರೂ ಸರಿಯೆ” ಎನ್ನುವ ವಾದವನ್ನು ಇಸ್ಲಾಮ್ ಅಂಗೀಕರಿಸುವುದಿಲ್ಲ. ಅದು ತನ್ನ ಅನುಯಾಯಿಗಳಿಗೆ ಧರ್ಮ ಪ್ರಚಾರದ ಆಜ್ಞೆ ನೀಡುತ್ತದೆ. ಆದರೆ ಅದಕ್ಕಾಗಿ ಹಿಂಸೆ, ಬಲಾತ್ಕಾರ, ಒತ್ತಾಯ, ಆಮಿಷಗಳಂತಹ ವಾಮ ಮಾರ್ಗಗಳನ್ನು ಅನುಸರಿಸಲು ಅನುಮತಿಸುವುದಿಲ್ಲ. ಬದಲಾಗಿ ತಾವು ನೆಚ್ಚಿಕೊಂಡ ವಿಚಾರಧಾರೆ ಮತ್ತು ಜೀವನ ವ್ಯವಸ್ಥೆಯನ್ನು ಪ್ರಚಾರಪಡಿಸಲು ಅತ್ಯುತ್ತಮ, ನ್ಯಾಯಸಮ್ಮತ ಮತ್ತು ಗೌರವಾನ್ವಿತ ಮಾರ್ಗವನ್ನೇ ಅನುಸರಿಸಬೇಕೆಂದು ಅದು ಆಜ್ಞಾಪಿಸುತ್ತದೆ.
ಪವಿತ್ರ ಕುರ್ಆನ್ ಈ ರೀತಿ ಹೇಳುತ್ತದೆ:
“ಒಳಿತು- ಕೆಡುಕುಗಳು ಸರಿಸಮವಾಗಲಾರವು. ಕೆಡುಕನ್ನು ಅತ್ಯುತ್ತಮ ವಿಧಾನದಿಂದ ದೂರೀಕರಿಸಿರಿ. ಆಗ ನಿಮ್ಮ ಜೊತೆ ವೈರ ಇರಿಸಿಕೊಂಡವನೂ ನಿಮ್ಮ ಆಪ್ತ ಮಿತ್ರನಾಗಿ ಮಾರ್ಪಡುವನು.” (41:34)
ಪವಿತ್ರ ಕುರ್ಆನ್ ಒಳಿತನ್ನು ಪ್ರಚಾರಪಡಿಸುವ ಮತ್ತು ಕೆಡುಕಿನ ನಿರ್ಮೂಲನ ಮಾಡುವ ಕಾರ್ಯವನ್ನು ಸತ್ಯವಿಶ್ವಾಸಿಗಳಿಗೆ ವಹಿಸಿಕೊಟ್ಟಿದೆಯಾದರೂ ಅದಕ್ಕಾಗಿ ಶಾಂತಿಯುತ ಪ್ರಚಾರದ ಮಾರ್ಗವನ್ನು ಮಾತ್ರ ಅವಲಂಬಿಸಬೇಕೆಂದು ಅದು ಈ ಸೂಕ್ತದಲ್ಲಿ ಆಜ್ಞಾಪಿಸಿದೆ. ಅಲ್ಲಾಹನ ಧರ್ಮದ ಕಡೆಗೆ ಜನರನ್ನು ಯಾವ ರೀತಿ ಕರೆಯಬೇಕೆಂದು ಪವಿತ್ರ ಕುರ್ಆನಿನ ಈ ಸೂಕ್ತದಲ್ಲಿ ಆದೇಶಿಸಲಾಗಿದೆ:
“ಯುಕ್ತಿ ಮತ್ತು ಸದುಪದೇಶದ ಮೂಲಕ ನಿಮ್ಮ ಪ್ರಭುವಿನ ಮಾರ್ಗಕ್ಕೆ ಜನರನ್ನು ಆಹ್ವಾನಿಸಿರಿ ಮತ್ತು ಜನರೊಂದಿಗೆ ಅತ್ಯುತ್ತಮ ರೀತಿಯಿಂದ ಚರ್ಚಿಸಿರಿ.” (16:25)
ಪರಧರ್ಮ ದೂಷಣೆ
ಇತರರ ಧಾರ್ಮಿಕ ವಿಶ್ವಾಸ ಮತ್ತು ಆಚಾರಗಳು ನಮ್ಮ ದೃಷ್ಟಿಯಲ್ಲಿ ಎಷ್ಟೇ ತಪ್ಪಾಗಿದ್ದರೂ ಅವರ ಆರಾಧ್ಯರನ್ನಾಗಲೀ ಅವರ ಪೂಜಾ ವಿಧಾನವನ್ನಾಗಲೀ ಅವರ ಆಚಾರ ಸಂಪ್ರದಾಯಗಳನ್ನಾಗಲೀ ಗೇಲಿ ಮಾಡುವುದನ್ನು ಇಸ್ಲಾಮ್ ನಿಷೇಧಿಸುತ್ತದೆ:
“ಅವರು ಅಲ್ಲಾಹನ ಹೊರತು ಯಾರನ್ನು ಪ್ರಾರ್ಥಿಸುತ್ತಿರುವರೋ ಅವರನ್ನು ತೆಗಳಬೇಡಿರಿ. ಇದರಿಂದ ಅವರು ಶಿರ್ಕ್ಗಿಂತಲೂ ಮುಂದುವರಿದು ಅಜ್ಞಾನದಿಂದ ಅಲ್ಲಾಹನನ್ನು ತೆಗಳತೊಡಗುವರು. ನಾವು ಇದೇ ರೀತಿಯಲ್ಲಿ ಪ್ರತಿಯೊಂದು ಸಮುದಾಯಕ್ಕೆ ಅದರ ಕರ್ಮವನ್ನು ಚೆಲುವಾಗಿಸಿದ್ದೇವೆ. ಅನಂತರ ಅವರಿಗೆ ತಮ್ಮ ಪ್ರಭುವಿನ ಕಡೆಗೇ ಮರಳಿ ಸಾಗಲಿಕ್ಕಿದೆ. ಆಗ ಅವನು, ಅವರೇನು ಮಾಡುತ್ತಿದ್ದರೆಂಬುದನ್ನು ಅವರಿಗೆ ತೋರಿಸಿ ಕೊಡುವನು.” (ಪವಿತ್ರ ಕುರ್ಆನ್, 6:108)
ಪ್ರವಾದಿ ಮುಹಮ್ಮದ್(ಸ) ಈ ಆದೇಶವನ್ನು ಕೃತಿಗಿಳಿಸಿ ತೋರಿಸಿದರು. ಅವರ ನಿಕಟ ಅನುಯಾಯಿಗಳು ಈ ವಿಷಯದಲ್ಲೂ ಅವರನ್ನು ಸಂಪೂರ್ಣವಾಗಿ ಅನುಸರಿಸಿದರು. ಪ್ರವಾದಿ ಮುಹಮ್ಮದ್(ಸ) ಮದೀನಾದಲ್ಲಿ ಒಂದು ಇಸ್ಲಾವಿೂ ರಾಷ್ಟ್ರದ ಬುನಾದಿ ಹಾಕಿದೊಡನೆಯೇ ಜನರಿಗೆ ನೀಡಿದ ಆಶ್ವಾಸನೆ ಈ ರೀತಿಯಿತ್ತು:
“ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಎಲ್ಲ ಯಹೂದಿಗಳನ್ನು ಎಲ್ಲ ರೀತಿಯ ಅವಹೇಳನದಿಂದ ರಕ್ಷಿಸಲಾಗುವುದು. ನಮ್ಮ ಜನರಂತೆಯೇ ಅವರಿಗೂ ನಮ್ಮ ಸಹಾಯ ಸಹಕಾರಗಳು ಲಭಿಸುವುವು. ಅವರು ತಮ್ಮ ಧರ್ಮವನ್ನು ಮುಸ್ಲಿಮರಷ್ಟೇ ಸ್ವತಂತ್ರವಾಗಿ ಆಚರಿಸಬಹುದು. ಯಹೂದಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವವರು ಕೂಡಾ ಅದೇ ರಕ್ಷಣೆ ಮತ್ತು ಸ್ವಾತಂತ್ರ್ಯವನ್ನು ಪಡೆಯುವರು. ಅಪರಾಧಿಯು ಯಾರೇ ಆದರೂ ಅವನನ್ನು ಶಿಕ್ಷಿಸಲಾಗುವುದು. ಅಪರಾಧವೆಸಗಿದವನನ್ನು, ಅನ್ಯಾಯ-ಅಕ್ರಮವೆಸಗಿದವನನ್ನು ಯಾವನೇ ನೈಜ ಮುಸ್ಲಿಮನು ಬೆಂಬಲಿಸಬಾರದು. ಅವರು ಎಷ್ಟೇ ನಿಕಟ ಬಂಧುಗಳಾದರೂ ಸರಿಯೆ.”
ಪ್ರಥಮ ಖಲೀಫಾ ಹ. ಅಬೂಬಕರ್ ರವರು(ರ) ಸಿರಿಯಾಕ್ಕೆ ಕಳುಹಿಸಿದ ಸೇನಾ ತುಕಡಿಗೆ ಹೇಳಿದ ಮಾತು ಈ ವಿಷಯದಲ್ಲಿರುವ ಇಸ್ಲಾವಿೂ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ:
“ನಿಮ್ಮ ಪ್ರಭುವಿಗಾಗಿ ನೀವು ಹೋರಾಟ ನಿರತರಾದಾಗ ವೀರಾವೇಶದಿಂದ ಹೋರಾಡಿರಿ. ಬೆನ್ನು ತಿರುಗಿಸದಿರಿ. ಆದರೆ ನಿಮ್ಮ ವಿಜಯವು ಸ್ತ್ರೀಯರ ಮತ್ತು ಮಕ್ಕಳ ರಕ್ತದಿಂದ ಕಳಂಕಿತವಾಗದಿರಲಿ. ಮರಗಳನ್ನು ನಾಶ ಮಾಡದಿರಿ. ಹೊಲಗಳನ್ನು ಸುಡದಿರಿ. ಫಲಭರಿತ ಮರಗಳನ್ನು ಕಡಿಯದಿರಿ. ಸಾಕು ಪ್ರಾಣಿಗಳಿಗೆ ಕಿರುಕುಳ ಕೊಡಬೇಡಿರಿ. ಕೊಟ್ಟ ಮಾತಿಗೆ ಮತ್ತು ಆಶ್ವಾಸನೆಗೆ ಭಂಗ ತರಬೇಡಿರಿ. ಧಾರ್ಮಿಕ ವ್ಯಕ್ತಿಗಳು ತಮ್ಮದೇ ಆದ ವಿಧಾನದಲ್ಲಿ ದೇವ ಮಾರ್ಗದಲ್ಲಿ ಸೇವೆ ಸಲ್ಲಿಸುತ್ತಿರಬಹುದು. ಅವರನ್ನು ಅವರಷ್ಟಕ್ಕೇ ಬಿಟ್ಟು ಬಿಡಿ. ಅವರನ್ನು ವಧಿಸದಿರಿ. ಅವರ ಮಠ ಮಂದಿರಗಳನ್ನು ಹಾಳುಗೆಡಹದಿರಿ.”
(The History of the Decline and fall of the Roman Empire 309 – 10)
ಈ ಮಾನವೀಯ ನಿಲುವಿನ ಬಗ್ಗೆ ಪ್ರೊ| ಟಿ. ಡಬ್ಲ್ಯೂ. ಅರ್ನಾಲ್ಡ್ ಈ ರೀತಿ ಬರೆದಿರುವರು:
“ದಿಗ್ವಿಜಯಿಗಳ ಈ ಆತ್ಮಸಂಯಮ ಮತ್ತು ತಮ್ಮ ದಂಡಯಾತ್ರೆಗಳಲ್ಲಿ ಅವರು ಪ್ರದರ್ಶಿಸಿದ ಮಾನವೀಯತೆಯಿಂದಾಗಿ ಅವರು ಜಯಿಸಿದ ಪ್ರದೇಶದ ನಿವಾಸಿಗಳಲ್ಲಿ ಅವರ ಬಗ್ಗೆ ಗೌರವಾದರಗಳ ಭಾವನೆ ಬೆಳೆದು ಅವರು ಹ. ಅಬೂಬಕರ್(ರ) ಬೋಧಿಸಿದ ಇಂತಹ ಉನ್ನತ ನ್ಯಾಯ ಮತ್ತು ಸಂಯಮಗಳಿಂದಾಗಿ ಆಕ್ರಮಣಕಾರಿ ಸೇನೆಯನ್ನು ಹಾರ್ದಿಕವಾಗಿ ಸ್ವಾಗತಿಸುವಂತಾಯಿತು.”
ಅನುಪಮ ಸಹಿಷ್ಣುತೆ
ಜೆರೂಸಲೇಮ್ ನಗರವು ಖಲೀಫಾ ಉಮರ್ ರವರಿಗೆ(ರ) ಶರಣಾದಾಗ ಈ ಕೆಳಗಿನ ಒಪ್ಪಂದ ಏರ್ಪಟ್ಟಿತ್ತು:
“ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ. ನಾನು, ಅಲ್ಲಾಹನ ದಾಸನೂ ಸತ್ಯವಿಶ್ವಾಸಿಗಳ ನಾಯಕನೂ ಆದ ಉಮರ್ ಜೆರೂಸಲೇಮ್ ನಿವಾಸಿಗಳಿಗೆ ಕೊಡುವ ಆಶ್ವಾಸನೆಗಳು: ನಾನು ಅವರ ಪ್ರಾಣ, ಸೊತ್ತು, ಸಂತಾನ, ಇಗರ್ಜಿಗಳು, ಶಿಲುಬೆಗಳು ಮತ್ತು ಅವರಿಗೆ ಹಾಗೂ ಅವರ ಧರ್ಮಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನೂ ಸಂರಕ್ಷಿಸುವ ಭರವಸೆ ನೀಡುತ್ತೇನೆ. ಅದರಲ್ಲಿರುವ ಅವರ ಇಗರ್ಜಿಗಳನ್ನು ಹಾಳುಗೆಡಹಲಾಗದು, ನಾಶ ಮಾಡಲಾಗದು, ಹಾನಿ ಮಾಡಲಾಗದು. ಅವುಗಳ ದತ್ತಿ ಸೊತ್ತುಗಳನ್ನಾಗಲೀ, ಘನತೆಯನ್ನಾಗಲೀ, ಇತರ ಸೊತ್ತುಗಳನ್ನಾಗಲೀ ನಾಶ ಮಾಡಲಾಗದು. ತಮ್ಮ ಧರ್ಮವನ್ನು ಅನುಸರಿಸಿದ ಕಾರಣಕ್ಕಾಗಿ ಜರೂಸಲೇಮ್ನ ಯಾವ ನಿವಾಸಿಯನ್ನೂ ಪೀಡಿಸಲಾಗದು, ಮರ್ದಿಸಲಾಗದು.” (The Preaching of Islam P. 57)
ಹ. ಉಮರ್(ರ) ಜೆರೂಸಲೇಮ್ನಲ್ಲಿರುವ ಅನೇಕ ಪುಣ್ಯ ಕ್ಷೇತ್ರಗಳಿಗೆ ಸಂದರ್ಶನ ನೀಡಿದರು. ಅವರು ಚರ್ಚ್ ಆಫ್ ರಿಸರ್ರೆಕ್ಷ ನ್ನಲ್ಲಿದ್ದಾಗ ನಮಾಝ್ನ ವೇಳೆಯಾಯಿತು. ಅದರ ಪುರೋಹಿತರು ಅವರನ್ನು ಅಲ್ಲಿಯೇ ನಮಾಝ್ ಮಾಡುವಂತೆ ಕೇಳಿಕೊಂಡರು. ಆದರೆ ಹ. ಉಮರ್(ರ) ಅದಕ್ಕೆ ಉತ್ತರವಾಗಿ, “ನನ್ನ ಅನುಯಾಯಿಗಳು ಅನಂತರ ಇದನ್ನು ತಮ್ಮ ಖಲೀಫಾ ನಮಾಝ್ ಮಾಡಿದ ಸ್ಥಳವೆಂದು ಇದರ ಬಗ್ಗೆ ದಾವೆ ಹೂಡಬಹುದು” ಎಂದು ಹೇಳಿ ಅಲ್ಲಿ ನಮಾಝ್ ಮಾಡಲು ನಿರಾಕರಿಸಿದರು. ಇದು ಇಸ್ಲಾಮ್ ಕಲಿಸಿದ ಉದಾತ್ತವಾದ ಪರಧರ್ಮ ಸಹಿಷ್ಣುತೆ. ಇದನ್ನು ವಿೂರಿಸುವುದಂತಿರಲಿ, ಇದಕ್ಕೆ ಸರಿಸಾಟಿ ಎನಿಸಬಲ್ಲ ಪರಧರ್ಮ ಸಹಿಷ್ಣುತೆಯ ನಿದರ್ಶನವೂ ಮಾನವ ಇತಿಹಾಸದಲ್ಲಿ ಬೇರೆ ಸಿಗದು.
‘ತಪ್ಪು ಕಲ್ಪನೆಗಳು’ ಎಂಬ ಕೃತಿಯಿಂದ
IslamKannada News Portal





