@ ಏ.ಕೆ. ಕುಕ್ಕಿಲ
ಆ ಮಾತುಕತೆ ಹೀಗೆ ಸಾಗಿತ್ತು-
ಅಬೂಜಹಲ್: ಅಲ್ಲಾಹನಾಣೆ, ಆತ ಸತ್ಯಸಂಧನೆಂಬುದು ನನಗೆ ಚೆನ್ನಾಗಿ ಗೊತ್ತಿದೆ.
ವಲೀದ್ ಬಿನ್ ಮುಗೀರಾ: ಹೌದೇ, ಯಾವ ಆಧಾರದಲ್ಲಿ ನೀನು ಹೀಗೆ ಹೇಳುತ್ತೀ?
ಅಬೂಜಹಲ್: ಓ ಅಬೂ ಅಬ್ದುಶ್ಶಮ್ಸ್, ಚಿಕ್ಕಂದಿನಲ್ಲಿ ನಾವು ಆತನನ್ನು ಅಸ್ಸಾದಿಖುಲ್ ಅಮೀನ್ (ವಿಶ್ವಾಸಾರ್ಹ ಸತ್ಯವಂತ) ಎಂದೇ ಕರೆಯುತ್ತಿದ್ದೆವು. ಆದರೂ ಆತ ಬೌದ್ಧಿಕವಾಗಿ ಬೆಳವಣಿಗೆ ಹೊಂದಿದ ಬಳಿಕ ನಾವು ಆತನನ್ನು ಸುಳ್ಳ ಮತ್ತು ವಂಚಕನೆಂದು ಕರೆಯುತ್ತಿದ್ದೇವೆ. ಆದರೆ ಆತ ಸತ್ಯವಂತನೆಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ.
ವಲೀದ್: ಹಾಗಿದ್ದರೆ ಆತನನ್ನು ಸತ್ಯವಂತನೆಂದು ಒಪ್ಪುವುದಕ್ಕೆ ಮತ್ತು ಆತನ ಮೇಲೆ ವಿಶ್ವಾಸ ತಾಳುವುದಕ್ಕೆ ನಿಮಗೆ ಅಡ್ಡಿಯೇನು?
ಅಬೂಜಹಲ್: ಏನೆಂದರೆ, ಅಬೂತಾಲಿಬ್ರ ಅನಾಥನನ್ನು ಅನುಸರಿಸಿದವನೆಂದು ಕುರೈಶ್ ಗೋತ್ರದ ಯುವತಿಯರು ಹಂಗಿಸಿಯಾರೆಂಬ ಭಯ ನನ್ನದು. ನಾನು ನಂಬುವ ಲಾತ್ ಮತ್ತು ಉಝ್ಝಾದ ಆಣೆ, ನಾನೆಂದಿಗೂ ಆತನ ಅನುಯಾಯಿಯಾಗಲಾರೆ.
ಮಕ್ಕಾದ ಕಾಬಾಕ್ಕೆ ಪ್ರದಕ್ಷಿಣೆ ಹಾಕುತ್ತಾ ಈ ಇಬ್ಬರ ನಡುವೆ ನಡೆದ ಸಂಭಾಷಣೆಯಿದು. ಇವರ ಸಂಭಾಷಣೆಯ ಕೇಂದ್ರ ಬಿಂದು ಪ್ರವಾದಿ ಮುಹಮ್ಮದ್(ಸ). ಸತ್ಯ ಏನೆಂದು ಗೊತ್ತಿದ್ದೂ ತನ್ನದೇ ಸ್ವೇಚ್ಛೆಯ ಕಾರಣಕ್ಕಾಗಿ ಸತ್ಯವನ್ನು ಅಡಗಿಸಿಡುವ ಮತ್ತು ಸುಳ್ಳನ್ನು ತೇಲಿ ಬಿಡುವ ಈ ಸಂಭಾಷಣೆಗೆ ಉತ್ತರವಾಗಿ ಪ್ರವಾದಿ ಮುಹಮ್ಮದರಿಗೆ(ಸ) ಈ ಕೆಳಗಿನ ಪವಿತ್ರ ಕುರ್ಆನಿನ ವಚನ ಅವತೀರ್ಣವಾಯಿತೆಂದು ಇಮಾಮ್ ಖುರ್ತುಬಿ ಹೇಳುತ್ತಾರೆ-
‘ತನ್ನ ಸ್ವೇಚ್ಛೆಗಳನ್ನೇ ತನ್ನ ದೇವರಾಗಿ ಮಾಡಿಕೊಂಡವನ ಕುರಿತು ನೀವೆಂದಾದರೂ ವಿವೇಚಿಸಿದಿರಾ? ಅಲ್ಲಾಹನು, ಜ್ಞಾನದ ಹೊರತಾಗಿಯೂ ಅವನನ್ನು ಪಥಭ್ರಷ್ಟತೆಗೆ ಎಸೆದು ಬಿಟ್ಟನು. ಅವನ ಹೃದಯ ಹಾಗೂ ಕಿವಿಗಳಿಗೆ ಮುದ್ರೆಯನ್ನು ಒತ್ತಿಬಿಟ್ಟನು ಮತ್ತು ಅವನ ದೃಷ್ಟಿಗಳ ಮೇಲೆ ತೆರೆ ಎಳೆದುಬಿಟ್ಟನು. ಅಲ್ಲಾಹನ ಬಳಿ ಅವನಿಗೆ ಸನ್ಮಾರ್ಗ ನೀಡಲು ಇನ್ನಾರಿದ್ದಾರೆ? ನೀವು ಪಾಠ ಕಲಿಯುವುದಿಲ್ಲವೇ?’ (ಅಲ್ ಜಾಸಿಯ: 23)
ಇನ್ನೊಂದು ಸಂಭಾಷಣೆ ಹೀಗಿದೆ,
ಹಿರಕ್ಕಲ್: ಮುಹಮ್ಮದ್ರ ಗೋತ್ರ ಯಾವುದು?
ಅಬೂಸುಫ್ಯಾನ್: ಉತ್ತಮ ಮತ್ತು ಉನ್ನತವಾದ ಗೋತ್ರ.
ಹಿರಕ್ಕಲ್: ಈ ಮುಹಮ್ಮದ್ರಿಗಿಂತ ಮೊದಲು ನಿಮ್ಮ ಪೈಕಿ ಯಾರಾದರೂ ಪ್ರವಾದಿತ್ವವನ್ನು ಘೋಷಿಸಿದ್ದಿದೆಯೇ?
ಅಬೂಸುಫ್ಯಾನ್: ಇಲ್ಲ.
ಹಿರಕ್ಕಲ್: ಮುಹಮ್ಮದ್ರ ಪೂರ್ವಿಕರಲ್ಲಿ ಯಾರಾದರೂ ರಾಜರಿದ್ದಾರೆಯೇ?
ಅಬೂಸುಫ್ಯಾನ್: ಇಲ್ಲ.
ಹಿರಕ್ಕಲ್: ಅವರನ್ನು ಅನುಸರಿಸುವವರು ಯಾರು? ಶ್ರೀಮಂತರೋ ಬಡವರೋ ಅಥವಾ ದುರ್ಬಲರೋ ಪ್ರಬಲರೋ?
ಅಬೂಸುಫ್ಯಾನ್: ದುರ್ಬಲರು.
ಹಿರಕ್ಕಲ್: ಈ ಅನುಯಾಯಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆಯೇ ಅಥವಾ ಇಳಿಕೆಯಾಗುತ್ತಿದೆಯೇ?
ಅಬೂಸುಫ್ಯಾನ್: ಏರಿಕೆಯಾಗುತ್ತಿದೆ.
ಹಿರಕ್ಕಲ್: ಮುಹಮ್ಮದರು ಯಾರನ್ನಾದರೂ ಬಲವಂತದಿಂದ ಧರ್ಮತ್ಯಾಗ ಮಾಡಿಸಿದರೋ?
ಅಬೂಸುಫ್ಯಾನ್: ಇಲ್ಲ.
ಹಿರಕ್ಕಲ್: ಪ್ರವಾದಿತ್ವವನ್ನು ಘೋಷಿಸುವುದಕ್ಕಿಂತ ಮೊದಲು ಅವರು ಸುಳ್ಳು ಹೇಳಿದ್ದರೇ?
ಅಬೂಸುಫ್ಯಾನ್: ಇಲ್ಲ.
ಹಿರಕ್ಕಲ್: ಮುಹಮ್ಮದ್ ವಂಚಿಸಿದ್ದಾರೆಯೇ?
ಅಬೂಸುಫ್ಯಾನ್: ಇಲ್ಲ. ಈಗ ನಾವು ಮತ್ತು ಮುಹಮ್ಮದ್ ಒಂದು ಒಪ್ಪಂದ ಮಾಡಿಕೊಂಡಿದ್ದೇವೆ. ಈ ಒಪ್ಪಂದದಲ್ಲಿ ಅವರು ಏನು ಮಾಡುವರೋ ಗೊತ್ತಿಲ್ಲ.
ಹಿರಕ್ಕಲ್: ನೀವು ಅವರ ಜೊತೆ ಯುದ್ಧ ಮಾಡಿರುವಿರೇ?
ಅಬೂಸುಫ್ಯಾನ್: ಹೌದು.
ಹಿರಕ್ಕಲ್: ಯುದ್ಧ ಯಾವ ರೀತಿಯಲ್ಲಾಗಿತ್ತು?
ಅಬೂಸುಫ್ಯಾನ್: ಯುದ್ಧದಲ್ಲಿ ಕೆಲವೊಮ್ಮೆ ಅವರು ಜಯಗಳಿಸುತ್ತಿದ್ದರು. ಕೆಲವೊಮ್ಮೆ ನಾವು.
ಹಿರಕ್ಕಲ್: ಅವರು ಏನನ್ನು ಬೋಧಿಸುತ್ತಿದ್ದಾರೆ?
ಅಬೂಸುಫ್ಯಾನ್: ಅಲ್ಲಾಹನನ್ನು ಮಾತ್ರ ಆರಾಧಿಸಬೇಕು. ಅಲ್ಲಾಹನಿಗೆ ಯಾರನ್ನೂ ಯಾವುದನ್ನೂ ಭಾಗಿದಾರಿ ಮಾಡಬಾರದು. ಪೂರ್ವಜರ ಸಂಪ್ರದಾಯಗಳನ್ನು ತೊರೆಯಬೇಕು. ನಮಾಝ ಮಾಡಬೇಕು. ಸತ್ಯವನ್ನೇ ಹೇಳಬೇಕು. ಧರ್ಮಿಷ್ಠರಾಗಬೇಕು. ಕುಟುಂಬ ಸಂಬಂಧವನ್ನು ಗಟ್ಟಿಗೊಳಿಸಬೇಕು.. ಇತ್ಯಾದಿ ಬೋಧಿಸುತ್ತಾರೆ..
ರೋಮ್ ಸಾಮ್ರಾಜ್ಯದ ಅರಸರಾಗಿದ್ದ ಹಿರಕ್ಕಲ್ ಮತ್ತು ಮಕ್ಕಾದ ಪ್ರಮುಖ ವ್ಯಾಪಾರಿ ಮತ್ತು ಮಹಾನ್ ನಾಯಕರಾಗಿದ್ದ ಅಬೂಸುಫ್ಯಾನ್ರ ನಡುವೆ ಈ ಮಾತುಕತೆ ನಡೆಯುತ್ತಿದ್ದಾಗ ಪ್ರವಾದಿ ಮುಹಮ್ಮದ್ ಮದೀನಾದಲ್ಲಿ ಇದ್ದರು. ಮಕ್ಕಾ ಮತ್ತು ಮದೀನಾಗಳ ನಡುವೆ ಸಂಘರ್ಷದ ಸ್ಥಿತಿ ಇತ್ತು. ಮದೀನಾದ ಮೇಲೆ ದಾಳಿ ಮಾಡುವುದಕ್ಕೆ ಸರಣಿ ತಂತ್ರಗಳು ಮಕ್ಕಾದಲ್ಲಿ ನಡೆಯುತ್ತಿದ್ದುವು. ಇಂಥ ಸಂದರ್ಭದಲ್ಲಿ ಅಬೂಸುಫ್ಯಾನರು ರೋಮ್ಗೆ ವ್ಯಾಪಾರ ನಿಮಿತ್ತ ಹೋಗಿದ್ದರು. ರೋಮ್ ಅರಸರಾಗಿದ್ದುದು ಹಿರಕ್ಕಲ್. ಅವರಿಗೆ ಪ್ರವಾದಿ ಮುಹಮ್ಮದರ ಬಗ್ಗೆ ಅರಿವಿತ್ತು ಮತ್ತು ಆ ಬಗ್ಗೆ ಕುತೂಹಲವೂ ಇತ್ತು. ಮಕ್ಕಾದಲ್ಲಿ ಪ್ರವಾದಿ(ಸ) ಎದುರಿಸಿದ ಸವಾಲು, ಅವರ ಅನುಯಾಯಿಗಳು ವಿರೋಧಿಗಳ ಕಾಟ ತಾಳಲಾರದೇ ಇತಿಯೋಪಿಯಾಕ್ಕೆ ವಲಸೆ ಹೋಗಿರುವುದು ಮತ್ತು ಕೊನೆಗೆ ಪ್ರವಾದಿ ಮುಹಮ್ಮದರು ಮತ್ತು ಅನುಯಾಯಿಗಳು ಮದೀನಾಕ್ಕೆ ವಲಸೆ ಹೋದುದು ಎಲ್ಲವುಗಳೂ ಅವರಿಗೆ ಗೊತ್ತಿರುವ ಸಾಧ್ಯತೆಯಿದೆ. ಇಲ್ಲದಿದ್ದರೆ, ಮಕ್ಕಾದಿಂದ ವ್ಯಾಪಾರದ ಉದ್ದೇಶದಿಂದ ಆಗಮಿಸಿದ ಅಬೂ ಸುಫ್ಯಾನ್ರನ್ನು ಹಿರಕ್ಕಲ್ ಚಕ್ರವರ್ತಿ ತನ್ನ ಆಸ್ಥಾನಕ್ಕೆ ಆಹ್ವಾನಿಸುವು ದಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ, ಅಬೂಸುಫ್ಯಾನ್ರು ಪ್ರವಾದಿ ಮುಹಮ್ಮದ್ರ ಪ್ರಬಲ ವಿರೋಧಿಯಾಗಿದ್ದರು. ಮಕ್ಕಾ ವಿಜಯಕ್ಕಿಂತ ಮೊದಲು ಪ್ರವಾದಿ ಮುಹಮ್ಮದ್ರ ವಿರುದ್ಧ ಮಾಡಲಾದ ಯುದ್ಧಗಳಲ್ಲಿ ಮುಂಚೂಣಿಯಲ್ಲಿದ್ದುದು ಅವರೇ. ಇಂಥವರನ್ನೇ ಹಿರಕ್ಕಲ್ ತನ್ನ ಆಸ್ಥಾನಕ್ಕೆ ಕರೆದು ವಿಚಾರಿಸಿರುವುದರಲ್ಲಿ ಕುತೂಹಲವೂ ಇದೆ. ಈ ಇಡೀ ಮಾತುಕತೆಯನ್ನು ಬುಖಾರಿಯರು ಉಲ್ಲೇಖಿಸಿದ್ದಾರೆ.
ಇನ್ನೊಂದು ಘಟನೆ
ಪ್ರವಾದಿ ಮುಹಮ್ಮದ್ರಿಗೆ ಸುಮಾರು 35 ವರ್ಷ. ಅವರಿನ್ನೂ ಪ್ರವಾದಿತ್ವವನ್ನು ಘೋಷಿಸಿರಲಿಲ್ಲ. ಆಗ ಕಅಬಾದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಮಕ್ಕಾದ ಎಲ್ಲ ಗೋತ್ರಗಳಿಗೂ ಕಅಬಾ ಪವಿತ್ರ. ಅವರೆಲ್ಲ ಆ ಪುನರ್ ನಿರ್ಮಾಣ ಕಾರ್ಯದಲ್ಲಿ ಆರಾಧನಾ ಭಾವದಿಂದ ಪಾಲ್ಗೊಂಡಿದ್ದರು. ಅಂತಿಮವಾಗಿ ಹಜರುಲ್ ಅಸ್ವದ್ ಎಂಬ ಕಪ್ಪು ಕಲ್ಲನ್ನು ತನ್ನ ಮೂಲ ಸ್ಥಾನದಲ್ಲಿ ಮರುಸ್ಥಾಪಿಸುವ ಸಂದರ್ಭ ಬಂತು. ಹಜರುಲ್ ಅಸ್ವದನ್ನು ಎಲ್ಲ ಗೋತ್ರಗಳೂ ಗೌರವಭಾವದಿಂದ ನೋಡುತ್ತಿದ್ದುದರಿಂದ ಅದನ್ನು ಎತ್ತಿ ನಿಗದಿತ ಜಾಗದಲ್ಲಿ ಕೂರಿಸುವುದನ್ನು ಎಲ್ಲ ಗೋತ್ರಗಳೂ ಪ್ರತಿಷ್ಠೆಯನ್ನಾಗಿ ಮಾಡಿ ಕೊಂಡವು. ಅದನ್ನು ಮರುಸ್ಥಾಪಿಸಿದವರ ಪಟ್ಟಿಯಲ್ಲಿ ನಾವು ಮಾತ್ರ ಇರಬೇಕು ಎಂದು ಪ್ರತಿ ಗೋತ್ರವೂ ಭಾವಿಸಿತು. ತರ್ಕಗಳಾದುವು. ವಾಗ್ವಾದವು ಸಂಘರ್ಷ ಸ್ಥಿತಿಗೆ ತಲುಪಿತು. ಯುದ್ಧ-ರಕ್ತಪಾತದ ದಟ್ಟ ಅನುಭವವಿದ್ದ ಆ ಗೋತ್ರಗಳು ಯುದ್ಧಕ್ಕೆ ಸಿದ್ಧವಾದುವು. ಬನೂ ಅಬ್ದುದ್ದಾರ್ ಎಂಬ ಗೋತ್ರವು ತೊಡೆ ತಟ್ಟಿ ನಿಂತಿತಲ್ಲದೆ, ರಕ್ತ ಇದ್ದ ಒಂದು ಪಿಂಗಾಣಿಯನ್ನು ತಂದಿತು. ಬನೂ ಅದಿಯ್ಯ್ ಎಂಬ ಇನ್ನೊಂದು ಗೋತ್ರವೂ ಸಂಘರ್ಷಕ್ಕೆ ಸಿದ್ಧವಾಯಿತು. ಅವೆರಡೂ ಆ ಪಿಂಗಾಣಿಗೆ ಕೈ ಹಾಕಿ ರಕ್ತದಲ್ಲಿ ಕೈಗಳನ್ನು ಅದ್ದಿಕೊಂಡವಲ್ಲದೇ, ಮರಣದವರೆಗೆ ಯುದ್ಧ ಮಾಡುವುದಾಗಿ ಘೋಷಿಸಿಕೊಂಡವು.
ಹಜರುಲ್ ಅಸ್ವದ್ ಎಂಬುದು ಎಲ್ಲ ಗೋತ್ರಗಳಿಗೂ ಪವಿತ್ರವಾದುದರಿಂದಾಗಿ ಒಂದೊಮ್ಮೆ ಇವುಗಳಲ್ಲಿ ಒಂದಕ್ಕೆ ಜಯ ಲಭ್ಯವಾದರೂ ವಿವಾದ ಮುಗಿಯುತ್ತಿರಲಿಲ್ಲ. ಈ ಯುದ್ಧದಲ್ಲಿ ಗೆದ್ದ ಗೋತ್ರವೊಂದೇ ಹಜರುಲ್ ಅಸ್ವದ್ನ ಮೇಲೆ ಹಕ್ಕು ಸ್ಥಾಪಿಸುವುದಕ್ಕೆ ಉಳಿದ ಅನೇಕಾರು ಗೋತ್ರಗಳು ಒಪ್ಪುವುದಕ್ಕೆ ಸಾಧ್ಯವೂ ಇರಲಿಲ್ಲ. ಆದ್ದರಿಂದ, ಅದೊಂದು ಮುಗಿಯದ ಯುದ್ಧವಾಗಿ ಮತ್ತು ಅಪಾರ ನಾಶ-ನಷ್ಟಕ್ಕೆ ಕಾರಣವಾಗಿ ಮಕ್ಕಾದ ವಿನಾಶಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇತ್ತು. ಇದನ್ನು ಅಲ್ಲಿ ಸೇರಿದ್ದ ವಿವಿಧ ಗೋತ್ರಗಳ ವಿವೇಕವಂತರು ಅರಿತರು. ಯುದ್ಧವನ್ನು ತಪ್ಪಿಸುವುದಕ್ಕೆ ಪೂರಕವಾಗಿ ವಾತಾವರಣವನ್ನು ಬದಲಾಯಿಸಿದರು. ಕೊನೆಗೆ ಅವರೊಂದು ತೀರ್ಮಾನಕ್ಕೆ ಬಂದರು- ಈ ಕ್ಷಣದಿಂದ ಈ ಮಸ್ಜಿದುಲ್ ಹರಾಮ್ಗೆ ಯಾರು ಮೊದಲು ಪ್ರವೇಶಿಸುತ್ತಾರೋ ಅವರು ಈ ವಿಷಯದಲ್ಲಿ ತೀರ್ಮಾನ ಮಾಡಲಿ.
ಆದ್ದರಿಂದ ಅವರೆಲ್ಲ ಕುತೂಹಲದಿಂದ ಆ ಭಾಗ್ಯವಂತ ವ್ಯಕ್ತಿಗಾಗಿ ಕಾದರು. ಆಗ ಮಸ್ಜಿದುಲ್ ಹರಾಮ್ಗೆ ಪ್ರವೇಶಿಸಿದ್ದು ಮುಹಮ್ಮದ್. ಅವರನ್ನು ಕಂಡ ಕೂಡಲೇ ಅವರು ಏಕಸ್ವರದಲ್ಲಿ ಹೇಳಿದ್ದು ಹೀಗೆ:
ಇದು ಅಲ್ ಅಮೀನ್ (ಸತ್ಯಸಂಧ) ಆಗಿರುವ ಮುಹಮ್ಮದ್. ಅವರ ವಿಷಯದಲ್ಲಿ ನಮಗೆ ಸಂಪೂರ್ಣ ತೃಪ್ತಿಯಿದೆ.
ಮುಹಮ್ಮದ್ ಏನು ಮಾಡಿದರೆಂದರೆ, ಬಟ್ಟೆಯಂತಹ ಗಟ್ಟಿ ವಸ್ತುವೊಂದನ್ನು ತರುವಂತೆ ಹೇಳಿದರು. ತಾನೇ ಆ ಬಟ್ಟೆಯ ಮೇಲೆ ಹಜರುಲ್ ಅಸ್ವದನ್ನು ಎತ್ತಿ ಇಟ್ಟರಲ್ಲದೆ, ಆ ಬಟ್ಟೆಯ ಅಂಚುಗಳಲ್ಲಿ ಹಿಡಿದು ಕಲ್ಲನ್ನು ಎತ್ತುವಂತೆ ಎಲ್ಲಾ ಗೋತ್ರಗಳೊಂದಿಗೂ ಕೇಳಿಕೊಂಡರು. ಎಲ್ಲರೂ ಆ ಬಟ್ಟೆಯ ಅಂಚನ್ನು ಹಿಡಿದು ಕಲ್ಲನ್ನು ಎತ್ತಿದ ಬಳಿಕ ಮುಹಮ್ಮದರೇ ಆ ಕಲ್ಲನ್ನು ಬಟ್ಟೆಯಿಂದ ಎತ್ತಿ ನಿಗದಿತ ಜಾಗದಲ್ಲಿ ಸ್ಥಾಪಿಸಿದರು.
ಇಲ್ಲಿ ಉಲ್ಲೇಖಿಸಲಾಗಿರುವ ಮೂರೂ ಘಟನೆಗಳಲ್ಲೂ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಪ್ರವಾದಿ ಮುಹಮ್ಮದರ(ಸ) ವ್ಯಕ್ತಿತ್ವ. ಅವರು ಸತ್ಯವಂತರು ಮತ್ತು ವಿಶ್ವಾಸಾರ್ಹರು ಎಂಬುದನ್ನು ಅವರ ಬೆಂಬಲಿಗರಷ್ಟೇ ಅಲ್ಲ, ಅವರು ಕಟು ವಿರೋಧಿಗಳೂ ಒಪ್ಪಿಕೊಂಡಿದ್ದರು. ಅವರನ್ನು ವಿರೋಧಿಸುವ ಯಾರಿಗೂ ಅವರ ಪ್ರಾಮಾಣಿಕತೆ, ಸತ್ಯದ ಮೇಲಿನ ಬದ್ಧತೆಯನ್ನು ಅಲ್ಲಗಳೆಯಲು ಸಾಧ್ಯವಾಗುತ್ತಿರಲಿಲ್ಲ. ಪ್ರವಾದಿ(ಸ)ಯವರು ಎರಡು ದಶಕಗಳ ಸಣ್ಣ ಅವಧಿಯಲ್ಲಿ ಬಹುದೊಡ್ಡ ಅನುಯಾಯಿ ವರ್ಗವನ್ನು ಹೇಗೆ ಪಡೆದುಕೊಂಡರು ಎಂಬ ಪ್ರಶ್ನೆಗೆ ಇರುವ ಉತ್ತರಗಳಲ್ಲಿ ಇದು ಬಹುಮುಖ್ಯವಾದುದು. ಅವರೆಂದರೆ ಸತ್ಯ. ಅವರೆಂದರೆ ಪ್ರಾಮಾಣಿಕತೆ. ಅವರೆಂದರೆ ವಿಶ್ವಾಸಾರ್ಹತೆ. ಮುಸ್ಲಿಮರು ಬಹುವಾಗಿ ಪ್ರೀತಿಸಬೇಕಾದ ಮತ್ತು ಯಾವ ಸಂದರ್ಭದಲ್ಲೂ ಕೈ ಬಿಡಬಾರದ ಗುಣಗಳಿವು.
IslamKannada News Portal


