Home / ಲೇಖನಗಳು / ಪ್ರವಾದಿ ನಿಂದನೆ: ನಮ್ಮ ನಿಲುವು- ಕುರ್‍ಆನಿನ ಬೆಳಕಿನಲ್ಲಿ

ಪ್ರವಾದಿ ನಿಂದನೆ: ನಮ್ಮ ನಿಲುವು- ಕುರ್‍ಆನಿನ ಬೆಳಕಿನಲ್ಲಿ

ಎಸ್. ಅಮೀನುಲ್ ಹಸನ್‍ರ ಜುಮಾ ಖುತ್ಬಾದ ಅನುವಾದ

ಪ್ರವಾದಿಯವರನ್ನು(ಸ) ಹಾಗೂ ಕುರ್ ಆನನ್ನು ಅವಹೇಳನ ಮಾಡಿದಾಗ ಮುಸ್ಲಿಮ್ ಸಮುದಾಯ ಆಕ್ರೋಶಗೊಂಡು ಬೀದಿಗಿಳಿಯುತ್ತದೆ. ಆ ಮೂಲಕ ಮುಸ್ಲಿಮರನ್ನು ಸದೆಬಡಿಯಲು ಸಂಚು ರೂಪಿಸಿದವರ ಉದ್ದೇಶವು ಈಡೇರುತ್ತದೆ.

ಇತ್ತೀಚೆಗೆ ಪ್ಯಾರಿಸ್‍ನಲ್ಲಿ ಒಬ್ಬ ಮುಸ್ಲಿಮ್ ಮತಾಂಧನಿಂದ ಕಾಲೇಜಿನ ಓರ್ವ ಇತಿಹಾಸ ಅಧ್ಯಾಪಕರ ಕೊಲೆ ನಡೆಯಿತು. ಅವರು ತರಗತಿಯಲ್ಲಿ ಪ್ರವಾದಿ(ಸ) ಬಗ್ಗೆ ವ್ಯಂಗ್ಯ ಚಿತ್ರವನ್ನು ಪ್ರದರ್ಶಿಸಿದಂತೆ. ಇದನ್ನು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ  ಮೂಲಕ ಅವರು ಸಮರ್ಥಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಚಾರ್ಲಿ ಹೆಬ್ಡೋ ಎಂಬ ಪತ್ರಿಕೆಯು ಪ್ರವಾದಿಯ ವ್ಯಂಗ್ಯ ಚಿತ್ರ  ಮತ್ತು ಕಾರ್ಟೂನ್‍ಗಳನ್ನು ಪ್ರಕಟಿಸಿ ದೊಡ್ಡ ಅನಾಹುತವನ್ನು ಎದುರಿಸಬೇಕಾಯಿತು. ಪತ್ರಿಕಾ ಕಚೇರಿಗೆ ದಾಳಿ ನಡೆಸಿದ ಮತಾಂಧರು  ಅಲ್ಲಿಯ ನೌಕರರನ್ನೂ ಕೊಲೆ ಮಾಡಿದರು. ಇತ್ತೀಚೆಗೆ ಬೆಂಗಳೂರಿನ ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿಗಳಲ್ಲಿ ನಡೆದ ಘಟನೆಯು ಇದಕ್ಕೆ  ಜ್ವಲಂತ ನಿದರ್ಶನವಾಗಿದೆ. ಒಬ್ಬ ವ್ಯಕ್ತಿ ಪ್ರವಾದಿ(ಸ) ಬಗ್ಗೆ ಮಾಡಿದ ಒಂದು ಪೋ ಸ್ಟ್ ನ ಕಾರಣ ಎಂತಹ ದುರಂತ ಸಂಭವಿಸಿತೆಂದು ನಾವು ನೋಡಿದೆವು. ನಮ್ಮ ಯುವಕರು ಸರಿಯಾಗಿ ಯೋಚಿಸದೆ ಯಾರದೋ ಪ್ರಚೋದನೆಯಿಂದ ಅಮಾಯಕರ ಸೊತ್ತುಗಳನ್ನು ನಾಶ ಮಾಡಿದರು. ಈ ಕಾರಣಕ್ಕಾಗಿ ಸಮಾಜದ ನಿರಪರಾಧಿ ಯುವಕರು ಯಾರದೋ ತಪ್ಪಿಗಾಗಿ ಜೈಲು ಸೇರುವಂತಾಯಿತು. ಆ ಪೋಸ್ಟ್ ಹಾಕಿದ ನವೀನ ಎಂಬ ವ್ಯಕ್ತಿ ಜಾಮೀನು ಪಡೆದು ಬಿಡುಗಡೆಯಾದ ಬಳಿಕ ನೀಡಿದ ಸಂದರ್ಶನದಲ್ಲಿ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟು ಹೇಳಿದ ವಿಷಯಗಳು ಎಲ್ಲರನ್ನೂ ನಾಚಿಸುವಂತಿದೆ. ಅವನ ಪೋಸ್ಟ್ ಗೆ ಉದ್ರೇಕಗೊಳ್ಳದೆ ಅವನನ್ನು ಭೇಟಿಯಾಗಿ ಪ್ರವಾದಿ(ಸ) ಬಗ್ಗೆ ಸರಿಯಾದ ತಿಳುವಳಿಕೆ ನೀಡಿರುತ್ತಿದ್ದರೆ ಅದರ ಸ್ವರೂಪವೇ ಬೇರೆಯಾಗುತ್ತಿತ್ತು. ಈ ಮೊದಲು ಕೂಡಾ ಬೆಂಗಳೂರಿನ ಡೆಕ್ಕಲ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರವಾದಿ(ಸ)ರ ಬಗ್ಗೆ ವಿವಾದಾತ್ಮಕ ಲೇಖನ ಪ್ರಕಟವಾದಾಗಲೂ ಜನರು ಬೀದಿಗಿಳಿದು  ಪ್ರತಿಭಟಿಸಿ ದೊಡ್ಡ ನಾಶ-ನಷ್ಟವನ್ನು ಮಾಡಿದ್ದರು. ಈ ನಿಟ್ಟಿನಲ್ಲಿ ನಮ್ಮ ನಿಲುವು ಏನಾಗಿರಬೇಕು ಎಂಬುದನ್ನು ಪವಿತ್ರ ಕುರ್‍ಆನಿನ  ಬೆಳಕಿನಲ್ಲಿ ಪರಿಹಾರ ಕಂಡುಕೊಳ್ಳಬೇಕಾಗಿದೆ.

ಪ್ರವಾದಿಯವರು(ಸ) ಪ್ರವಾದಿಯಾಗುವುದಕ್ಕಿಂತ ಮುಂಚೆ ನಲವತ್ತು ವರ್ಷಗಳ ಕಾಲ ಮಕ್ಕಾದಲ್ಲಿ ವಾಸವಾಗಿದ್ದರು. ಅಲ್ಲಿಯ ಕುರೈಶರು ಹಾಗೂ ಸರದಾರರು ಅವರನ್ನು ಬಹಳ ಗೌರವದಿಂದ ಕಾಣುತ್ತಿದ್ದರು. ಅವರನ್ನು ಸಾದಿಕ್ ಮತ್ತು ಅಮೀನ್ ಎಂದು ಅಭಿಸಂಬೋಧಿಸುತ್ತಿದ್ದರು. ಅವರು ಅವರ ಕಣ್ಮನ ತಣಿಸುವವರಾಗಿದ್ದರು. ಜಟಿಲ ಸಮಸ್ಯೆ ಎದುರಾದಾಗ ಅವರಿಂದ ಪರಿಹಾರ  ಪಡೆಯುತ್ತಿದ್ದರು. ಇಂಥ ವ್ಯಕ್ತಿಯು ಪ್ರವಾದಿಯಾಗಿ ನೇಮಕಗೊಂಡು ಅಲ್ಲಾಹನ ಸಂದೇಶವನ್ನು ಅವರ ಮುಂದಿಟ್ಟಾಗ ಆ ಜನಾಂಗವು ಅವರ ವಿರುದ್ಧ ಸೆಟೆದು ನಿಂತು ಎಂತಹ ವರ್ತನೆ ನಡೆಸಿತು ಎಂಬುದನ್ನು ಪ್ರವಾದಿ ಚರಿತ್ರೆ ಮತ್ತು ಕುರ್‍ಆನಿನ ಅಧ್ಯಯನದಿಂದ ತಿಳಿಯಬಹುದು.

ಮೊದಲನೆಯದಾಗಿ ಮಕ್ಕಾದ ಕುರೈಶರು ಅವರನ್ನು ವೈಯಕ್ತಿಕ ನೆಲೆಯಲ್ಲಿ ಧೂಷಿಸ ತೊಡಗಿದರು. ಪ್ರವಾದಿ(ಸ) ಪ್ರಥಮವಾಗಿ ತನ್ನ ಆಪ್ತ ಕುಟುಂಬದವರಿಗೆ ಇಸ್ಲಾಮಿನ ಸಂದೇಶವನ್ನು ವೈಯಕ್ತಿಕವಾಗಿ ನೀಡ ತೊಡಗಿದರು. ಹ. ಖತೀಜ, ಹ. ಅಬೂಬಕರ್ ಸಿದ್ದೀಕ್  ಹಾಗೂ ಅಲಿ ಮೊದಲಾದ ಬೆರಳೆಣಿಕೆಯ ಮಂದಿ ಇಸ್ಲಾಮ್ ಸ್ವೀಕರಿಸಿ ಅವರ ಸಂಗಾತಿಗಳಾದರು. ಆ ಬಳಿಕ ಅಲ್ಲಾಹನ ಆಜ್ಞೆಯಂತೆ ಅದನ್ನು ಸ್ವಲ್ಪ ವ್ಯಾಪಕಗೊಳಿಸಿ ಹತ್ತಿರದ ಸಂಬಂಧಿಕರಿಗೆ ಔತಣ ಕೂಟ, ಚಹಾ ಕೂಟದ ಮೂಲಕ ಸಂದೇಶವನ್ನು ನೀಡಿದರು. ಆ  ಬಳಿಕ ಪ್ರವಾದಿಯವರಿಗೆ(ಸ) ಸಾರ್ವತ್ರಿಕವಾಗಿ ಸಂದೇಶ ನೀಡುವ ಆಜ್ಞೆ ನೀಡಲಾಯಿತು. ಮಕ್ಕಾದ ಪಟ್ಟಣದಲ್ಲಿ ಹಾಗೂ ಹಜ್ಜ್ ಸಂದರ್ಭದಲ್ಲಿ ಡೇರೆಗಳಿಗೆ ಭೇಟಿ ನೀಡಿ ಸಂದೇಶ ನೀಡಿದರು. ಅವರ ವಿರೋಧಿಗಳು ಅವರನ್ನು ಹಿಂಬಾಲಿಸುತ್ತಾ, ತಮಾಷೆ  ಮಾಡುತ್ತಿದ್ದರು. ಅಲ್ಲಾಹನು ಅವರಿಗೆ ನೀವು ನಿಮ್ಮ ಕಾರ್ಯ ಮುಂದುವರಿಸುತ್ತಾ ಸಾಗಿರಿ, ಈ ತಮಾಷೆ ಮಾಡುವವರನ್ನು ನಾವು ನೋಡಿ ಕೊಳ್ಳುವೆವು ಎಂದು ಸಮಾಧಾನಪಡಿಸಿದನು. ಅಬೂಲಹಬ್, ಅಬೂಜಹಲ್, ಶೈಬಾ, ಉತ್ಬಾ ಹಾಗೂ ಇತರ ಕುರೈಶ್  ಸರದಾರರು ಪ್ರವಾದಿ ಯನ್ನು(ಸ) ವಿರೋಧಿಸುವವರಲ್ಲಿ ಅಗ್ರ ಪಂಕ್ತಿಯಲ್ಲಿದ್ದರು. ಒಮ್ಮೆ ಪ್ರವಾದಿಯವರು(ಸ) ತವಾಫ್  ಮಾಡುವಾಗ ಜಿಬ್ರೀಲ್‍ರವರೊಂದಿಗಿದ್ದರು. ಅದೇ ಸಂದರ್ಭದಲ್ಲಿ 5 ಮಂದಿ ಸರದಾರರೂ ಕೂಡಾ ಅವರೊಂದಿಗಿದ್ದರು.

ಆ ಬಳಿಕ ಆ ಸರದಾರರು ರೋಗಪೀಡಿತರಾಗಿ ನಿಧನ ಹೊಂದಿದರು. ಅಲ್ಲಾಹನು ಪ್ರವಾದಿಯವರಿಗೆ(ಸ) ನಿಮಗೆ ಏನಾದರೂ ಮಾನಸಿಕ ಹಿಂಸೆಯಾದರೆ ನೀವು ಅಲ್ಲಾಹನ ತಸ್ಬೀಹ್ ಮಾಡಿ ಮತ್ತು ನಮಾಝ್ ನಿರ್ವಹಿಸಿರಿ ಎಂದು ಆಜ್ಞಾಪಿಸುತ್ತಾನೆ. ಇದನ್ನೇ  ಅವರು ತಮ್ಮ ಜೀವನದಲ್ಲಿ ನೆಚ್ಚಿಕೊಂಡಿದ್ದರು. ಇಂದು ನಾವು ಕೂಡಾ ಅದನ್ನೇ ಮಾಡಬೇಕಾಗಿದೆ. ಅಲ್ಲಾಹನ ಸಂದೇಶವನ್ನು ಜನರಿಗೆ  ತಲುಪಿಸುವಾಗ ಬರುವ ಎಲ್ಲಾ ಸಂಕಷ್ಟಗಳನ್ನು ಅಲ್ಲಾಹನು ಪ್ರವಾದಿಗೆ ನೀಡಿದ ಪರಿಹಾರವನ್ನೇ ಅನುಸರಿಸಬೇಕಾಗಿದೆ.

ಎರಡನೆಯದಾಗಿ ಜನರನ್ನು ಸೇರಿಸಿ ಪ್ರವಾದಿ(ಸ) ಇಸ್ಲಾಮಿನ ಶಿಕ್ಷಣ ನೀಡುತ್ತಿದ್ದಾಗ, ಅವರ ವಿರೋಧಿಗಳು ಅವರ ಸನಿಹದಲ್ಲೇ  ನೃತ್ಯ ಗಾಯನದ ಕೂಟಗಳನ್ನು ಏರ್ಪಡಿಸಿ ಯುವಕರನ್ನು ಆಕರ್ಷಿಸುವಂತೆ, ಕುರ್‍ಆನಿನ ಸೂಕ್ತಗಳು ಜನರ ಕಿವಿಗೆ ಬೀಳದಂತೆ ಗೊಲ್ಲೆಬ್ಬಿಸುತ್ತಿದ್ದರು. ಪ್ರವಾದಿಯವರು(ಸ) ಏಕದೇವತ್ವ, ಪ್ರವಾದಿತ್ವ ಮತ್ತು ಪರಲೋಕದ ಬಗ್ಗೆ ಜನರ ಮುಂದೆ ಪ್ರಸ್ತಾವಿಸಿದಾಗ,  ಅದರ ಬಗ್ಗೆ ಜನರಲ್ಲಿ ಸಂಶಯ ಉಂಟು ಮಾಡುತ್ತಿದ್ದರು. ನಮ್ಮ ಪೂರ್ವಜರು ದೀರ್ಘಕಾಲದಿಂದ ತಿಳಿಗೇಡಿತನದ ಕಾರಣ ವಿಗ್ರಹಗಳನ್ನು ಪೂಜಿಸುತ್ತಿದ್ದರೋ ಎಂದು ಪ್ರಶ್ನಿಸುತ್ತಿದ್ದರು. ನಾವು ಸತ್ತು ಮಣ್ಣಾದ ಬಳಿಕ ನಮ್ಮ ಎಲುಬುಗಳನ್ನು ಜೋಡಿಸಿ ಪುನಃ  ಜೀವಂತಗೊಳಿಸುವುದು ಅಸಂಭವ ಎಂದು ವಾದಿಸುತ್ತಿದ್ದರು. ಪರಲೋಕ ಜೀವನದ ಬಗ್ಗೆ ಅವರು ಹೆಚ್ಚು ತಲೆ ಕೆಡಿಸುತ್ತಿರಲಿಲ್ಲ. ಆದರೆ ಅಲ್ಲಾಹನು ಅವರ ಎಲ್ಲಾ ಆಕ್ಷೇಪಗಳಿಗೆ ಪ್ರವಾದಿ(ಸ)ರ ಮೂಲಕ ಮಾರ್ಮಿಕವಾಗಿ ಮನಸೊರೆಗೊಳ್ಳುವ ರೀತಿಯಲ್ಲಿ ಕುರ್‍ಆನಿನ  ಸೂಕ್ತಗಳ ಮೂಲಕ ಉತ್ತರ ನೀಡಿರುತ್ತಾರೆ.

ಮಕ್ಕಾದ ಮುಶ್ರಿಕರು ಕುರ್‍ಆನಿನ ಬಗ್ಗೆ ಜನರಲ್ಲಿ ನಾನಾ ತರದ ಸಂದೇಹಗಳನ್ನುಂಟು ಮಾಡುತ್ತಿದ್ದರು. ಇದು ಸ್ವತಃ ಪ್ರವಾದಿಯ ರಚನೆಯಾಗಿದ್ದು ಯಾರೋ ಅದನ್ನು ರಚಿಸಿ ಓದಿ ಕೇಳಿಸುತ್ತಾರೆ ಎಂದು ಪ್ರಚುರಪಡಿಸುತ್ತಿದ್ದರು. ಅವರನ್ನು ಹುಚ್ಚ, ಮಾಟಗಾರ,  ಕವಿ, ಜಾದುಗಾರ ಎಂದೆಲ್ಲಾ ಅಪವಾದ ಹೊರಿಸುತ್ತಿದ್ದರು. ಆದರೆ ಅವರ ವಿರೋಧಿಗಳ ದೊಡ್ಡ ದೊಡ್ಡ ಕವಿಗಳು ಪವಿತ್ರ ಕುರ್‍ಆನಿನ  ಮುಂದೆ ತಲೆಬಾಗುವ ದೃಷ್ಟಾಂತಗಳನ್ನು ನೋಡಬಹುದು. ಪವಿತ್ರ ಕುರ್‍ಆನಿನ ಸೂಕ್ತಗಳು ಮಾನವ ನಿರ್ಮಿತವಾಗಿರಲು ಸಾಧ್ಯವಿಲ್ಲವೆಂದು ಅವರು ಘಂಟಾಘೋಷವಾಗಿ ಸಾರಿದರು.

ಇಂದು ನಾವು ಪವಿತ್ರ ಕುರ್‍ಆನಿನ ಶಿಕ್ಷಣದ ಆಧಾರದಲ್ಲಿ ಪ್ರವಾದಿಯವರ(ಸ) ಕುರ್‍ಆನಿನ ಬಗ್ಗೆ ವ್ಯಂಗ್ಯ ಚಿತ್ರಗಳು ಹಾಗೂ ಕಾರ್ಟೂನ್‍ಗಳು, ಲೇಖನಗಳು ಪ್ರಕಟಗೊಂಡಾಗ ಉದ್ರೇಕಗೊಳ್ಳದೆ, ಕಾನೂನನ್ನು ಕೈಗೆತ್ತಿಕೊಳ್ಳದೆ ಶಾಂತವಾಗಿ ಇರಬೇಕಾಗಿದೆ.  ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಅವರಿಗೆ ಮನವರಿಕೆ ಮಾಡಿ ಕಾನೂನು ಕ್ರಮ ಜರಗಿಸುವಂತೆ ಒತ್ತಾಯಿಸಬೇಕು. ಮಹಾ ಪುರುಷರನ್ನು ಅವಹೇಳನ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ರಚಿಸುವಂತೆ ಒತ್ತಡ ಹೇರಬೇಕು. ಶಾಂತಿಯುತ ರ್ಯಾಲಿ,  ಸಭೆ, ಮೌನ ಪ್ರತಿಭಟನೆಗಳ ಮೂಲಕ ಜನರ ಗಮನ ಸೆಳೆಯಬೇಕು. ಈ ಮೂಲಕ ಜನರಿಗೆ ನೈಜ ವಿಷಯವನ್ನು ತಲಪಿಸುವ ಪ್ರಯತ್ನ ಮಾಡಬೇಕು.

ಕೊನೆಯದಾಗಿ ಮುಸ್ಲಿಮರು ರಬೀವಲ್ ತಿಂಗಳನ್ನು ಬಹಳ ಗೌರವಿಸುತ್ತಾರೆ. ಪ್ರವಾದಿ(ಸ)ಯನ್ನು ಹಾಡಿ ಹೊಗಳುವ ತಿಂಗಳಾಗಿದೆ.  ಇದನ್ನು ಕೇವಲ ದರೂದ್, ನಾಥ್‍ಗಳಿಗೆ ಸೀಮಿತಗೊಳಿಸದೆ ಅವರ ನೈಜ ಸಂದೇಶ ಮತ್ತು ಪರಿಚಯವನ್ನು ದೇಶ ಬಾಂಧವರಿಗೆ ತಲುಪಿಸಬೇಕಾಗಿದೆ. `ಮನುಕುಲದ ವಿಮೋಚಕ, ಮಹಾನ್ ಮಾನವ ಹಕ್ಕುಗಳ ಹೋರಾಟಗಾರ, ಸ್ತ್ರೀ ವಿಮೋಚಕ ಮುಂತಾದ ವಿಷಯಗಳಲ್ಲಿ ಸೆಮಿನಾರ್‍ ಗಳನ್ನು ಜರಗಿಸಿ ಜನರಿಗೆ ಅವರ ನೈಜ ಶಿಕ್ಷಣವನ್ನು ಸಾರ್ವತ್ರಿಕಗೊಳಿಸಬೇಕಾಗಿದೆ. ಪ್ರವಾದಿ ಯವರ(ಸ)  ಶಿಕ್ಷಣದಿಂದ ಪ್ರಭಾವಿತರಾಗಿ ಯುರೋಪ್‍ನಲ್ಲಿ ಎಷ್ಟೋ ಜನರು ಇಸ್ಲಾಮನ್ನು ಸ್ವೀಕರಿಸುವುದನ್ನು ನಾವು ನೋಡುತ್ತಿದ್ದೇವೆ. ಬಳಿಕ ಅವರು ಸ್ವತಃ ಜಾಲತಾಣಗಳಲ್ಲಿ ಆ ಸಂದೇಶವನ್ನು ಹರಿಯ ಬಿಟ್ಟಿದ್ದಾರೆ. ಈ ದೇಶದಲ್ಲೂ ಇಸ್ಲಾಮಿನ ಸಂದೇಶ ಅರಿತು ಅದನ್ನು  ಸ್ವೀಕರಿಸುವವರನ್ನು ನಾವು ನೋಡುತ್ತೇವೆ. ಇಂದಿಗೂ ಈ ದೇಶದಲ್ಲಿ ಒಳ್ಳೆಯದನ್ನು ಕೊಳ್ಳುವ, ಓದುವ ಸಾಕಷ್ಟು ಜನರಿದ್ದಾರೆ.  ಪ್ರವಾದಿ(ಸ)ರ ಸಂದೇಶವನ್ನು ಸಾರುವ ಕೃತಿಗಳನ್ನು ವಿತರಿಸುವ ಮೂಲಕ ಜನರಲ್ಲಿರುವ ತಪ್ಪುಕಲ್ಪನೆಗಳನ್ನು ದೂರೀಕರಿಸಲು ಈ  ತಿಂಗಳಲ್ಲಿ ಶ್ರಮಿಸಿದರೆ ಅದುವೇ ನಾವು ಪ್ರವಾದಿ(ಸ)ರಿಗೆ ನೀಡುವ ಅತ್ಯುತ್ತಮ ಕೊಡುಗೆಯಾಗಬಹುದು. ಈ ಮೂಲಕ  ಸಂಘರ್ಷಾತ್ಮಕ ವಾತಾವರಣ ತಿಳಿಗೊಂಡು, ಒಂದು ಶಾಂತಿಯುತ ವಾತಾವರಣ ನಿರ್ಮಾಣವಾಗಲಿ ಎಂದು ಹಾರೈಸೋಣ.
[ಲೇಖಕರು: ಜಮಾಅತೆ ಇಸ್ಲಾಮೀ ಹಿಂದ್, ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಾರೆ]

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …