Home / ಲೇಖನಗಳು / ದೇವಾಸ್ತಿತ್ವವನ್ನು ನಿರಾಕರಿಸಲಾದೀತೆ?

ದೇವಾಸ್ತಿತ್ವವನ್ನು ನಿರಾಕರಿಸಲಾದೀತೆ?

ದೇವವಿಶ್ವಾಸ ಮಾನವನ ನೈಸರ್ಗಿಕ ಬೇಡಿಕೆಯಾಗಿದೆ. ಈ ಕುರಿತು ನಮ್ಮ ದೇಶದ ಜನರು ವೈವಿಧ್ಯಮಯ ದೃಷ್ಟಿಕೋನವನ್ನು ಹೊಂದಿದವರಿದ್ದಾರೆ. ಆಸ್ತಿಕರೂ ಇದ್ದಾರೆ. ನಾಸ್ತಿಕರೂ ಇದ್ದಾರೆ. ಹಾಗಿದ್ದರೂ ಈ ಪ್ರಪಂಚವನ್ನು ಇಲ್ಲಿ ಇರುವಂತಹ ಸೃಷ್ಟಿ ಜಾಲಗಳನ್ನು ಅವುಗಳ ಪ್ರಕ್ರಿಯೆಯನ್ನು ವೀಕ್ಷಿಸಿದಾಗ ಒಂದು ಮಹಾಶಕ್ತಿಯು ಅದರ ಹಿಂದೆ ಸಕ್ರಿಯವಾಗಿರುವುದು ವ್ಯಕ್ತವಾಗುತ್ತದೆ. ಲೋಕಕ್ಕೆ ಬಂದ ಪ್ರವಾದಿಗಳೆಲ್ಲರೂ ದೇವಾಸ್ತಿತ್ವದ ಬಗ್ಗೆ ಜನರಿಗೆ ತಿಳಿಸಿ ಹೇಳಿದ್ದಾರೆ. ಪ್ರಾಚೀನ ಗ್ರಂಥಗಳೂ ಅದನ್ನು ಸಮರ್ಥಿಸುತ್ತವೆ.

ದೇವನ ಕಲ್ಪನೆಯು ಮಾನವನ ಜನ್ಮ ಸಿದ್ಧ ಬೇಡಿಕೆಯೆಂದು ನಂಬುವವರಿದ್ದಾರೆ. ತನಗಿಂತ ಉನ್ನತವಾದ ಒಂದು ಶಕ್ತಿಯನ್ನು ಹುಡುಕುವ ಅಭಿಲಾಷೆ ಮಾನವರಲ್ಲಿ ಸದಾ ಕಂಡು ಬರುತ್ತದೆ. ದೇವನ ಕುರಿತು ನೈಜ ತಿಳುವಳಿಕೆಯಿಲ್ಲದವರು ತಮಗಿಂತ ಪ್ರಬಲವಾದವುಗಳನ್ನು ಕಂಡಾಗಲೆಲ್ಲ ಅವುಗಳಲ್ಲಿ ದೇವತ್ವವನ್ನು ಕಲ್ಪಿಸುತ್ತಾರೆ. ಕೆಲವರು ಈ ಹಿನ್ನೆಲೆಯಲ್ಲಿ ನಿಜವಾದ ದೇವ ಯಾರು? ಅದ್ಭುತ ಶಕ್ತಿ ಯಾವುದು? ಅವನ ವೈಶಿಷ್ಟ್ಯಗಳೇನು? ಇವುಗಳನ್ನು ತಿಳಿಯುವುದು ಅತೀ ಆವಶ್ಯಕವಾಗಿದೆ. ದೇವವಿಶ್ವಾಸದ ವಾಸ್ತವಿಕತೆಯನ್ನು ಸಾಕ್ಷ್ಯಾಧಾರಗಳ ಸಹಿತ ಗ್ರಹಿಸಲು ಆಸ್ತಿಕರಿಗೂ, ನಾಸ್ತಿಕರಿಗೂ ಸಹಾಯವಾಗಬೇಕು. ಇವತ್ತು ದೇವನಿದ್ದಾನೆಯೇ ಎಂಬ ಪ್ರಶ್ನೆ ನಮ್ಮನ್ನು ಗಂಭೀರವಾಗಿ ಕಾಡುತ್ತಿದೆ. ಇದರ ಸಲುವಾಗಿ ಅಧ್ಯಯನ ಸಂಶೋಧನೆಗಳು ನಡೆಯುತ್ತಿವೆ. ಆದ ಕಾರಣ ಈ ಮುಖ್ಯ ಪ್ರಶ್ನೆಯನ್ನು ನಿರ್ಲಕ್ಷಿಸುವುದು, ವಿವೇಕವಂತರಿಗೆ ಭೂಷಣವಲ್ಲ.

ನಾವು ಕ್ಷಣ ಕಾಲ ಆಲೊಚಿಸಿದರೆ ಮಾನವನೇ ಸ್ವತಃ ದೇವಾಸ್ತಿತ್ವದ ಒಂದು ಜೀವಂತ ಮಾದರಿಯಾಗಿದ್ದಾನೆ. ನೀವೊಮ್ಮೆ ಸುತ್ತಲೂ ಕಣ್ಣು ಹಾಯಿಸಿರಿ. ದೇವಾನುಗ್ರಹಗಳ ಅನಂತ ನಿದರ್ಶನಗಳೇ ಕಾಣಿಸುತ್ತವೆ.

ಮಾನವನಿಗೆ ಆಮ್ಲಜನಕ ಅರ್ಥಾತ್ ಪ್ರಾಣ ವಾಯುವಿನ ಆವಶ್ಯಕತೆ ಇದೆ. (79% ನೈಟ್ರೋಜನ್ ಮತ್ತು 21% ಆಮ್ಲಜನಕ) ನಿಸರ್ಗದಲ್ಲಿ, ವಾಯುವಿನಲ್ಲಿ ಈ ಶೇಕಡಾ ದರ ಮಾಡಿದವರು ಯಾರು? ತನ್ನಿಂತಾನೆ ಆಗಲು ಸಾಧ್ಯವಿಲ್ಲ. ನಮ್ಮ ಸುತ್ತಲಿನ ವರ್ಷಂಪ್ರತಿ 40 ಕೋಟಿ ಟನ್ ಆಮ್ಲಜನಕವನ್ನು ವಾತಾವರಣದಲ್ಲಿ ವಿಲೀನಗೊಳಿಸಲಾಗುತ್ತಿದೆ. ಒಂದು ವೇಳೆ ಈ ವ್ಯವಸ್ಥೆಯಿಲ್ಲದಿರುತ್ತಿದ್ದರೆ ಮಾನವ ಮತ್ತು ಪ್ರಾಣಿಗಳ ಉಸಿರಾಟದಿಂದ ವಾಯುವಿನಲ್ಲಿ ಆಮ್ಲಜನಕವು ಮುಗಿದು ನಮ್ಮ ಜೀವನವೇ ಅಸಾಧ್ಯವಾಗುತಿತ್ತು. ವಾಯುವಿನಲ್ಲಿ ಅಂಗಾರಾಮ್ಲವು (CO2) ಇಲ್ಲದಿರುತ್ತಿದ್ದರೆ ಗಿಡಗಳಿಗೆ ಆಹಾರವನ್ನು ತಯಾರಿಸಲು ಸಾಧ್ಯವಾಗುತ್ತಿರಲಿಲ್ಲ. ಗಿಡಗಳು ರಾತ್ರಿ ವೇಳೆ ಅಂಗಾರಾಮ್ಲವನ್ನು ಮತ್ತು ಹಗಲಿನಲ್ಲಿ ಆಮ್ಲಜನಕವನ್ನು ವಿಲೀನಗೊಳಿಸುತ್ತವೆ.

ಸೂರ್ಯನಿಂದ ಹೊರಬರುವ ಮಾರಕವಾದ ಅಲ್ಟ್ರಾವಾಯ್ಲೆಟ್ ಕಿರಣಗಳನ್ನು ವಾತಾವರಣವು ತಡೆ ಹಿಡಿದು (ಓಝೋನ್ ಪದರ) ಜೀವಜಾಲಗಳಿಗೆ ಅಗತ್ಯವಿರುವ ಕಿರಣಗಳನ್ನು ಮಾತ್ರ ಬಿಡುತ್ತದೆ. ನೋಡಿರಿ ರಕ್ಷಣಾ ಕ್ರಮ ಯಾವ ರೀತಿ ಕೆಲಸ ಮಾಡುತ್ತಿವೆ. ಬಾಹ್ಯಾಕಾಶದಿಂದ ಪ್ರತಿದಿನ ಸಾವಿರಾರು ಉಲ್ಕೆಗಳು ವಾಯುವಿನೊಂದಿಗೆ ಘರ್ಷಿಸಿ ಬೂದಿಯಾಗುತ್ತವೆ. ಒಂದು ವೇಳೆ ಅದಿರದಿದ್ದರೆ ಅವುಗಳ ಹೊಡೆತದಿಂದ ಎಲ್ಲವೂ ನಾಶವಾಗುತ್ತಿತ್ತು. ವಾಯು ಮಂಡಲವಿರುವುದರಿಂದ ನಮಗೆ ಕೇಳುವ ಶಕ್ತಿ ದೊರೆತಿದೆ. ಗುರುತ್ವಾಕರ್ಷಣೆಯ ಶಕ್ತಿಯಿಂದಲೇ ಸೌರ ಮಂಡಳಿ ಕಾರ್ಯ ಮಾಡುತ್ತಿದೆ. ಸೂರ್ಯನ ತಾಪವು 13% ಕಡಿಮೆಯಾದರೆ ಭೂಮಿಯ ಮೇಲೆ ಒಂದು ಮೈಲು ದಪ್ಪದಲ್ಲಿ ಮಂಜುಗಡ್ಡೆ ಆವರಿಸುವುದು. ಸೂರ್ಯನ ತಾಪವು 30% ಹೆಚ್ಚಾದರೆ ಜೀವ ಜಂತುಗಳೆಲ್ಲವೂ ನಾಶವಾಗುವವು.

ಭೂಮಿ-ಆಕಾಶಗಳ ಸೃಷ್ಟಿಯಲ್ಲಿಯೂ ರಾತ್ರಿ ಹಗಲುಗಳು ಅನುಕ್ರಮವಾಗಿ ಬರುತ್ತಿರುವುದರಲ್ಲಿಯೂ ಬುದ್ಧಿಜೀವಿಗಳಿಗೆ ಸಾಕಷ್ಟು ನಿದರ್ಶನಗಳಿವೆ. ಅವರು ಎದ್ದಾಗಲೂ ಕುಳಿತಾಗಲೂ ಮಲಗಿದಾಗಲೂ ಎಲ್ಲ ಸ್ಥಿತಿಗಳಲ್ಲೂ ಅಲ್ಲಾಹನನ್ನು ಸ್ಮರಿಸುತ್ತಾರೆ ಮತ್ತು ಭೂಮಿ ಆಕಾಶಗಳ ನಿರ್ಮಾಣದ ಬಗ್ಗೆ ಪರ್ಯಾಲೋಚಿಸುತ್ತಾರೆ. (ಪ.ಕು. 2:190-191) ಆಕಾಶಗಳಲ್ಲೂ ಭೂಮಿಯಲ್ಲೂ ಎಷ್ಟೋ ನಿದರ್ಶನಗಳಿವೆ. (ಪ.ಕು. 12:105)

ಭಗವದ್ಗೀತೆಯಲ್ಲಿ ಈ ರೀತಿ ಹೇಳಲಾಗಿದೆ, “ನಶ್ವರ ಮತ್ತು ಸರ್ವೋಚ್ಚವಾದ ನನ್ನ ನಿಜ ತತ್ವವನ್ನು ತಿಳಿಯದ ಅವಿವೇಕಿಗಳು ಅಪ್ರಾಕೃತ ಸ್ವರೂಪವಾದ ನನ್ನನ್ನು ಹುಟ್ಟು ಸಾವುಗಳಿಗೆ ಬದ್ಧವಾಗಿರುವ ಜಡದೇಹಿ ಎಂದು ತಿಳಿಯುತ್ತಾರೆ. “ಎಲ್ಲಕ್ಕೂ ಹಿರಿಯ ಒಡೆಯನಾದ ನನ್ನ ನಿಜ ಸ್ವರೂಪವನ್ನು ತಿಳಿಯದ ಅವಿವೇಕಿಗಳು ನನ್ನನ್ನು ಮಾನವರಂತೆ ಭೌತಿಕ ದೇಹವುಳ್ಳವನೆಂದು ಅವಮಾನಗೊಳಿಸುತ್ತಾರೆ. ಇವತ್ತಿನ ವಿಜ್ಞಾನಿಗಳು ಸಾಕಷ್ಟು ಸಾಧನೆಗಳನ್ನು ಮತ್ತು ಹೊಸ ಹೊಸ ಶೋಧನೆಗಳನ್ನು ಕಂಡು ಹಿಡಿದಿದ್ದಾರೆ. ಆದರೆ ಮೂಲ ವಸ್ತುಗಳನ್ನು ಹುಟ್ಟಿಸಿದವರು ಯಾರು?

ಉದಾಹರಣೆಗೆ ವಿದ್ಯುತ್ ಹರಿಯಲು ಎಲೆಕ್ಟ್ರಾನ್ಸ್‍ಗಳನ್ನು ಹುಟ್ಟಿಸಿದವರು ಯಾರು?
ದೇವನೆಂದರೆ ಮಾನಸಿಕ ಮತ್ತು ಶಾರೀರಿಕ ಆವಶ್ಯಕತೆಗಳಿಂದ ಮುಕ್ತನಾಗಿರಬೇಕು. ಮಾನಸಿಕ ಮತ್ತು ಶಾರೀರಿಕ ಆವಶ್ಯಕತೆಗಳೆಂದರೆ ಹುಟ್ಟು ಸಾವು ಬದುಕುಗಳಿಂದ ಅತೀತನಾಗಿರಬೇಕು. ಹೆತ್ತ ತಾಯಿಯಾಗಲಿ ಹುಟ್ಟಿಗೆ ಕಾರಣನಾದ ತಂದೆಯಾಗಲಿ, ವಿದ್ಯೆ ಕಲಿಸಿದ ಗುರುಗಳಾಗಲಿ, ಮಾರ್ಗದರ್ಶನ ಮಾಡುವ ನಾಯಕರಾಗಲಿ, ಮುಸ್ಲಿಮ್ ಮಹಾತ್ಮರಾಗಲಿ, ಪುಣ್ಯ ಕ್ಷೇತ್ರಗಳಲ್ಲಿರುವ ಪುಣ್ಯ ಪುರುಷರಾಗಲಿ, ಭರತ ಖಂಡದ ಸೂಫೀ ಸಂತರಾಗಲಿ, ಕ್ರೈಸ್ತ ಪಾದ್ರಿಗಳಾಗಲಿ, ಗೌತಮ ಬುದ್ಧನ, ಮಹಾವೀರ ಜೈನರ ಖ್ಯಾತ ಪುರುಷರಾಗಲಿ, ಗುರು ನಾನಕರ ಶಿಷ್ಯರಾಗಲಿ ಇವರೆಲ್ಲರನ್ನು ಗೌರವಿಸಬೇಕು. ಏಕೆಂದರೆ ಇವರೆಲ್ಲರೂ ವಿಶ್ವದ ಮಹಾ ಪುರುಷರು, ಆದರೆ ದೇವ ಸಮಾನರು ಖಂಡಿತ ಅಲ್ಲ. ಏಕೆಂದರೆ ಇವರೆಲ್ಲರಿಗೂ ಮಾನಸಿಕ ಮತ್ತು ಶಾರೀರಿಕ ಆವಶ್ಯಕತೆಗಳು ಇರುವ ಕುರಿತು ಇಡೀ ಜಗತ್ತೇ ಸಾಕ್ಷಿ ನೀಡುತ್ತದೆ.

ಆದ ಕಾರಣ ನಾವು ಸಮಸ್ತ ಮಹಾತ್ಮರಿಗೆ ದೇವನ ಸ್ಥಾನ ನೀಡದೇ ಅವರನ್ನು ಗೌರವ ಸ್ಥಾನದಲ್ಲಿ ಯೋಗ್ಯ ಸ್ಥಾನವನ್ನು ನೀಡುತ್ತಾ ಅವರನ್ನು ಗೌರವಿಸುತ್ತಾ ಸರ್ವಶಕ್ತನಾದ ಏಕೈಕ ದೇವನಾದ ಸೃಷ್ಟಿಕರ್ತನನ್ನು ಮಾತ್ರ ಆರಾಧಿಸಿದರೆ ನಾವು ನಿಜವಾದ ಭಕ್ತರು ಇದುವೇ ಸತ್ಯ.

ದೇಹವು ನೀರ ಮೇಲಿನ ಗುಳ್ಳೆಯಂತೆ ಅಸ್ಥಿರವಾದುದು, ಇದಕ್ಕೆ ಕಬ್ಬಿಣದ ಕಟ್ಟು ನಿರ್ಮಿಸಿ ಶಾಶ್ವತವಾಗಿರಿಸುವ ಪ್ರಯತ್ನ ಮೂರ್ಖತನದ್ದು. ದೇಹವನ್ನು ನಂಬದೇ ದೇವನನ್ನು ನಂಬಿ ಬದುಕಬೇಕು. ದೇವನ ಅನುಗ್ರಹವಾದರೆ ಯಾವುದಕ್ಕೂ ಕೊರತೆ ಇಲ್ಲ. ಅವನ ಅನುಗ್ರಹಕ್ಕಾಗಿ ನಾವು ಅವನನ್ನು ನಿತ್ಯವೂ ಮರೆಯದೇ ಸ್ಮರಿಸಬೇಕು. ಕ್ರಾಂತಿಕಾರಿ ಬಸವಣ್ಣನವರು ಹೇಳಿದ್ದಾರೆ, “ಪರಮಾತ್ಮನು ಸರ್ವವ್ಯಾಪಿ, ಪರಮಾತ್ಮ ಕೇವಲ ಒಂದು ಜಾತಿ ಅಥವಾ ಮತಕ್ಕೆ ಸೀಮಿತವಾಗಿಲ್ಲ.”

ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂಬ ಹಿಂದೂ ಧರ್ಮದ ನಾಲ್ಕು ಗ್ರಂಥಗಳಲ್ಲಿ ಎಲ್ಲ ದೇವಂದಿರನಾಥನಾದ, ಪರಮಾಧಿಕಾರಿಯಾದ ಏಕ ದೇವನ ಕುರಿತು ಹೇಳುವ ಅನೇಕ ವಾಕ್ಯಗಳಿವೆ. ಮನುಸ್ಮತಿ ಆರಂಭಗೊಳ್ಳುವುದು ಮತ್ತು ಕೊನೆಗೊಳ್ಳುವುದು ಏಕದೇವಸ್ತುತಿಯೊಂದಿಗಾಗಿದೆ. ಭಗವದ್ಗೀತೆ ಕೂಡಾ ಇದನ್ನೇ ಹೇಳುತ್ತದೆ. ದೇವತೆಗಳನ್ನು ಆರಾಧಿಸುವವರು ಅಲ್ಪ ಬುದ್ಧಿ ಇರುವವರು ಆದುದರಿಂದ ಸಿಗುವ ಫಲ ನಶ್ವರವಾಗಿದೆ. ಎಲ್ಲ ಉಪನಿಷತ್‍ಗಳು ಬಹುದೇವಾರಾಧನೆಯನ್ನು ತಿರಸ್ಕರಿಸುತ್ತವೆ.

ಉಪನಿಷತ್ ಹೇಳುತ್ತದೆ- ಏಕಂ ವಿವಾದಿತಿಯಂ (ಅವನು ಒಬ್ಬನೇ ಹೊರತು ಬೇರೆ ಇಲ್ಲ)
ನಾತಸ್ಯಯಾ ಪ್ರತಿಮಾ ಅಸತಿ (ಅವನ ತರಹ ಬೇರೆ ಯಾರೂ ಇಲ್ಲ)
ಸಿಖ್ ಧರ್ಮ – (ಗ್ರಂಥ ಸಾಹೆಬ್) ದೇವನು ಒಬ್ಬನೇ
ಫಾರ್ಸಿ ಧರ್ಮ – ಅವನು ಒಬ್ಬನೇ. (ದಸತಿರ್)
ಯಹೂದಿ ಧರ್ಮ – ನಮ್ಮ ಲೋರ್ಡ್ ಒಬ್ಬನೇ. (ಬೈಬಲ್ ಡಿಯುಟ್ 6:4)
ಕ್ರೈಸ್ತ ಧರ್ಮ – ನನ್ನ ತಂದೆಯು ಎಲ್ಲಕ್ಕಿಂತಲೂ ಹೆಚ್ಚು. (ಜಾನ್- 10: 29)
ಲಿಂಗಾಯತ ಧರ್ಮ – ಕ್ರಾಂತಿಕಾರಿ ಬಸವಣ್ಣನವರು ಹೇಳಿದ್ದಾರೆ. ಪರಮಾತ್ಮನು ಸರ್ವವ್ಯಾಪಿ.
ಇಸ್ಲಾಮ್ ಧರ್ಮ- “ಹೇಳಿರಿ ಅವನು ಅಲ್ಲಾಹನು ಏಕೈಕನು.” (ಪ.ಕು. 112:1)
ಜಗತ್ತಿನ ಎಲ್ಲ ಧರ್ಮಗಳು ದೇವನು ಒಬ್ಬನೇ ಅವನ ಹೊರತು ಬೇರೆ ಯಾರೂ ಇಲ್ಲ ಎಂದು ಸಾರಿ ಹೇಳುತ್ತವೆ. ಆದ ಕಾರಣ ಒಬ್ಬ ದೇವನು ಇದ್ದಾನೆ. ದೇವಾಸ್ತಿತ್ವವನ್ನು ನಿರಾಕರಿಸಲು ಸಾಧ್ಯವಿಲ್ಲ.

ನಝೀರ್ ಅಹ್ಮದ್ ಕಾಝಿ
(ಲೇಖಕರು: ಉಪನ್ಯಾಸಕರು ಸಿಕ್ಯಾಬ, ವಿಜಯಪುರ)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …