Home / ಲೇಖನಗಳು / ನೊಣ: ಕುರ್‌ಆನ್ ನ ದೈವಿಕತೆಗೆ ಮತ್ತೊಂದು ಸಾಕ್ಷಿ!

ನೊಣ: ಕುರ್‌ಆನ್ ನ ದೈವಿಕತೆಗೆ ಮತ್ತೊಂದು ಸಾಕ್ಷಿ!

ಕುರ್‌ಆನ್ ಒಂದು ದೈವಿಕ ಗ್ರಂಥವಾಗಿದೆ. 1400 ವರ್ಷಗಳ ಹಿಂದೆ ಅರಬ್ ದೇಶದ ಮುಹಮ್ಮದ್(ಸ) ಎಂಬ ನಿರಕ್ಷರಿಯನ್ನು ತನ್ನ ಪ್ರವಾದಿಯಾಗಿ ಆರಿಸಿಕೊಂಡ ಅಲ್ಲಾಹು ಅವರ ಮೂಲಕ ತನ್ನ ಸಂದೇಶವನ್ನು ಮನುಷ್ಯ ಕೋಟಿಗೆ ತಲಪಿಸಿದ್ದನು. ತನ್ನ ಅಧರಗಳಿಂದ ಹೊರಬರುವ ಸೂಕ್ತಗಳು ತನ್ನ ಮಾತಲ್ಲ; ಬದಲಾಗಿ ಅದು ಸರ್ವಲೋಕ ಸೃಷ್ಟಿಕರ್ತನಾದ ಅಲ್ಲಾಹನ ವಚನಗಳು ಎಂದು ಸ್ವತಃ ಪ್ರವಾದಿಯವರು ನುಡಿಯುತ್ತಿದ್ದರು. ಅದನ್ನು ಅವರು ಸ್ವಂತ ರಚನೆಯೆಂದು ಒಪ್ಪಿಕೊಂಡಿದ್ದಲ್ಲಿ ಅವರನ್ನು ತಮ್ಮ ಅಮೀರನನ್ನಾಗಿ ಸ್ವೀಕರಿಸಲು ಅವರ ಜನತೆಯು ಸಿದ್ಧವಾಗಿತ್ತು.

ಕೆಲವು ಕಣ್ಕಟ್ಟು ವಿದ್ಯೆಗಳ ಮೂಲಕ ತಮ್ಮನ್ನು ದೈವಾಂಶಸಂಭೂತರೆಂದು ಸಾರಿಕೊಂಡು ಸಂಪತ್ತನ್ನು ಶೇಖರಿಸುವ ಜನರಿಗೆ ವಿರುದ್ಧವಾಗಿ ಪ್ರವಾದಿ ಮುಹಮ್ಮದ್(ಸ)ಜನರು ತಮ್ಮ ಮೇಲೆ ಲೇಪಿಸಲು ಯತ್ನಿಸಿದ ದೈವಾಂಶದ ವಿಭೂತಿಯನ್ನು ಕೊಡವಿ, ನಾನು ಅಲ್ಲಾಹನ ನಿಷ್ಟದಾಸನು ಮಾತ್ರ ಎಂದು ಸಾರಿದ್ದರು. ಗತಿಸಿ ಹೋದ ಪ್ರವಾದಿ ಸಜ್ಜನರು ಸಾರಿದ- ನಿಮ್ಮೆಲ್ಲರ ಸೃಷ್ಟಿಕರ್ತನಾದ ಅಲ್ಲಾಹುವನ್ನು ಮಾತ್ರ ಆರಾಧಿಸಬೇಕು ಎಂಬ ಸಂದೇಶವನ್ನೇ ಅವರು ಪುನರಾವರ್ತಿಸಿದ್ದರು. ಮೋಶೆ, ಯೇಸು ಮುಂತಾದ ಪೂರ್ವ ಪ್ರವಾದಿಗಳು ತಮ್ಮ ಪ್ರವಾದಿತ್ವಕ್ಕೆ ಪುರಾವೆಯಾಗಿ ಕೆಲವು ಅಮಾನುಷಿಕ, ಪ್ರಕೃತಿ ನಿಯಮಕ್ಕೆ ಅತೀತವಾದ ಕಾರ್ಯಗಳನ್ನು ಮಾಡಿ ತೋರಿಸಿದ್ದರು. ಅಂತಿಮ ಹಾಗೂ ಕೊನೆಯ ಪ್ರವಾದಿಯಾದ ಪ್ರವಾದಿ ಮುಹಮ್ಮದ್(ಸ)ರಿಗೆ ನೀಡಲ್ಪಟ್ಟ ಅಪೌರುಷೇಯ ದೃಷ್ಟಾಂತಗಳ ಪೈಕಿ ಕುರ್‌ಆನ್ ಎಂಬುದು ಕಾಲಸೀಮಿತವಲ್ಲದ ಒಂದು ಪವಾಡಸದೃಶ ಸಾರ್ವಕಾಲಿಕ ಗ್ರಂಥವಾಗಿದೆ.
ಪ್ರವಾದಿಗಳೆಲ್ಲರಿಗೂ ಜನರು ಅವರ ಮೇಲೆ ವಿಶ್ವಾಸ ತಾಳುವಂತಹ ಪವಾಡಗಳನ್ನು ನೀಡಲಾಗುತ್ತದೆ. ನನಗೆ ನೀಡಲ್ಪಟ್ಟ ಪವಾಡ ಕುರ್‌ಆನ್ ಆಗಿದೆ. (ಬುಖಾರಿ)

ಕುರ್‌ಆನಿನಲ್ಲಿ ಸಾಮಾಜಿಕ, ಸಾಹಿತ್ಯಿಕ, ವೈಜ್ಞಾನಿಕ, ಪುರಾತತ್ವ, ಐತಿಹಾಸಿಕ ಮುಂತಾದ ಎಲ್ಲಾ ವಿಭಾಗಗಳಿಗೂ ಸಂಬಂಧಪಟ್ಟ ವಿಷಯಗಳ ಸಂಕ್ಷಿಪ್ತ ಹೇಳಿಕೆಗಳಿವೆ. ಆದುದರಿಂದ ಕುರ್‌ಆನಿನ ಹೇಳಿಕೆಗಳ ಸತ್ಯಾಸತ್ಯತೆಯನ್ನು ಅರಿಯ ಬಯಸುವವರು ಆಯಾ ವಿಭಾಗಗಳ ಪರಿಣಿತರ ಮೂಲಕ ಒರೆಗೆ ಹಚ್ಚಿ ಅದನ್ನು ಪರೀಕ್ಷಿಸಬಹುದಾಗಿದೆ.

ಕುರ್‌ಆನಿನ ಚಿಕ್ಕದೊಂದು ಅಧ್ಯಾಯಕ್ಕೆ ಸಮಾನವಾದ ಅಧ್ಯಾಯವೊಂದನ್ನು ರಚಿಸಿ ತರುವ ಸವಾಲೊಂದು ಕುರ್‌ಆನಿನಲ್ಲಿದೆ. ಕುರ್‌ಆನ್ ಈ ಸವಾಲನ್ನು 14 ಶತಮಾನಗಳ ಹಿಂದೆ, ಸಾಹಿತ್ಯ ಕ್ಷೇತ್ರವು ಜೀವಂತವಾಗಿದ್ದು ಅರಬ್ ದೇಶವು ಅರಬೀ ಸಾಹಿತ್ಯದ ಉತ್ತುಂಗತೆಯನ್ನು ತಲಪಿದ್ದ, ಸಾಹಿತಿಗಳು ಜನಾದರಣೀಯವಾಗಿದ್ದ ಕಾಲದಲ್ಲಿ ಮಾಡಿತ್ತು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು.

ಆದರೆ ಇದು ಸಾಹಿತ್ಯದ ಕಾಲವಲ್ಲ ಸ್ವಾಮೀ, ವೈಜ್ಞಾನಿಕ ಯುಗ ಎಂದು ಯಾರಾದರೂ ಹೇಳಿದಲ್ಲಿ ಅವನ ಆಕ್ಷೇಪಕ್ಕೆ ಉತ್ತರವೆಂಬಂತೆ ಕುರ್‌ಆನಿನ 6000ಕ್ಕಿಂತಲೂ ಮಿಗಿಲಾದ ಸೂಕ್ತಗಳು ಅವನ ಮುಂದೆ ತೆರೆದುಕೊಳ್ಳುತ್ತವೆ. ಮತ್ತು ಅವುಗಳ ಪೈಕಿ ಯಾವುದಾದರೊಂದು ಸೂಕ್ತವನ್ನು ವೈಜ್ಞಾನಿಕವಾಗಿ ತಪ್ಪೆಂದು ಸಾಬೀತು ಪಡಿಸುವ ಹೊಣೆಗಾರಿಕೆಯು ಅವನ ಮೇಲೆ ಹೇರಲ್ಪಡುತ್ತದೆ. ಆದರೆ ಕುರ್‌ಆನಿನ ಯಾವುದೇ ಒಂದು ಸೂಕ್ತವನ್ನು ವೈಜ್ಞಾನಿಕವಾಗಿ ತಪ್ಪೆಂದು ಸಾಬೀತು ಪಡಿಸಲು ಈವರೆಗೂ ಯಾರಿಗೂ ಸಾಧ್ಯವಾಗಿಲ್ಲ ಎಂಬುದು ವಾಸ್ತವಿಕತೆಯಾಗಿದೆ.

ಇಲ್ಲಿ ನಾವು ನೀಡಲಿರುವ ವಿವರಣೆಯು ನೊಣದ ಕುರಿತಾಗಿದೆ. ನೊಣಕ್ಕೂ ಪವಾಡಕ್ಕೂ ಏನಪ್ಪಾ ಸಂಬಂಧ ಎಂದು ಯಾರಾದರೂ ಹುಬ್ಬೇರಿಸಬಹುದು.
ಅಲ್ಲಾಹು ಹೇಳುತ್ತಾನೆ: ಖಂಡಿತವಾಗಿಯೂ ಅಲ್ಲಾಹು ಒಂದು ಸೊಳ್ಳೆಯ ಅಥವಾ ಅದಕ್ಕಿಂತಲೂ ಚಿಕ್ಕದಾದ ಉದಾಹರಣೆಯನ್ನು ನೀಡಲು ನಾಚುವುದಿಲ್ಲ…. (ಕುರ್‌ಆನ್ 2:26)

ಕುರ್‌ಆನಿನಲ್ಲಿರುವ ವೈಜ್ಞಾನಿಕ ಹೇಳಿಕೆಗಳು ವಿಜ್ಞಾನದ ಪ್ರಗತಿಯೊಂದಿಗೆ ಒಂದೊಂದಾಗಿ ಜನರ ಮುಂದೆ ತೆರೆಯಲ್ಪಡುತ್ತಿವೆ ಮತ್ತು ಪ್ರವಾದಿ ಮುಹಮ್ಮದ್(ಸ)ರ ಪ್ರವಾದಿತ್ವಕ್ಕೆ ಪುರಾವೆಯಾಗಿ ಸಾಬೀತಾಗುತ್ತಿವೆ. ಅಲ್ಲಾಹು ಕುರ್‌ಆನನ್ನು ಪ್ರವಾದಿ ಮುಹಮ್ಮದ್(ಸ)ರ ಪ್ರವಾದಿತ್ವಕ್ಕೆ ಶಾಶ್ವತ ಪುರಾವೆಯನ್ನಾಗಿ ಮಾಡಿರುವನು. ನಿರಕ್ಷರಿ ಮನುಷ್ಯನು ಅಂತಹ ವಚನಗಳನ್ನು ರಚಿಸುವ ವಿಷಯವಂತೂ ಹಾಗಿರಲಿ, ಸಕಲ ವಿದ್ಯಾಪಾರಂಗತನಿಂದಲೂ ಅಂತಹದ್ದೊಂದು ಕಾರ್ಯ ಅಸಾಧ್ಯ. 1400 ವರ್ಷಗಳ ಹಿಂದೆ ವೈಜ್ಞಾನಿಕ ಕ್ಷೇತ್ರಕ್ಕೆ ಅಪರಿಚಿತವಾಗಿದ್ದ ವಿಷಯಗಳೆಲ್ಲವೂ ವೈಜ್ಞಾನಿಕ ಸಂಶೋಧನೆಯೊಂದಿಗೆ ಬೆಳಕಿಗೆ ಬಂದು ಕುರ್‌ಆನಿನ ಹೇಳಿಕೆಯೊಂದಿಗೆ ಅತ್ಯಂತ ನಿಖರವಾಗಿ ತಾಳೆಹೊಂದುತ್ತಿವೆ.

ಕುರ್‌ಆನಿನಲ್ಲಿ ಅಲ್ಲಾಹು ವಿಷಯದ ಗಾಂಭೀರ್ಯತೆಯನ್ನು ಮನದಟ್ಟು ಮಾಡಿ ಕೊಡುವ ಸಲುವಾಗಿ ಹಲವಾರು ಉದಾಹರಣೆಗಳನ್ನು ಬಳಸಿರುವನು. ಉದಾಹರಣೆಗಳಲ್ಲಿರುವ ವಿಷಯಗಳನ್ನು ಒಂದು ನಿರ್ದಿಷ್ಠ ಉದ್ದೇಶದೊಂದಿಗೆ ಮನಸ್ಸಿಗೆ ನಾಟುವಂತೆ ಬಳಸಲಾಗಿದೆಯೇ ಹೊರತು ಅದೊಂದು ಉದ್ದೇಶರಹಿತ ಅಕಸ್ಮಿಕ ಬಳಕೆಯಲ್ಲ. ಅಲ್ಲಾಹುವಿನ ಹೊರತಾದವರೊಂದಿಗೆ ಪ್ರಾರ್ಥಿಸಿಕೊಂಡು ಸಹಾಯ ಯಾಚಿಸುವ ವ್ಯಕ್ತಿಗಳನ್ನು ಅಭಿಸಂಬೋಧಿಸುತ್ತಾ ಕುರ್‌ಆನ್ ಒಂದು ಸೂಕ್ತಿಯನ್ನು ನಮ್ಮ ಮುಂದಿಡುತ್ತದೆ.
ಓ ಜನರೇ! ಒಂದು ಉದಾಹರಣೆಯನ್ನು ನಿಮ್ಮ ಮುಂದಿಡಲಾಗಿದೆ. ಆದುದರಿಂದ ಗಮನವಿಟ್ಟು ಆಲಿಸಿರಿ: ಖಂಡಿತವಾಗಿಯೂ ಅಲ್ಲಾಹುವಿನ ಹೊರತು ನೀವು ಯಾರನ್ನು ಕರೆದು ಪ್ರಾರ್ಥಿಸುತ್ತಿರುವಿರೋ ಅವರು ಒಂದು ನೊಣವನ್ನು ಕೂಡಾ ಸೃಷ್ಟಿಸಲಾರರು; ಅದಕ್ಕಾಗಿ ಅವರು ಪರಸ್ಪರ ಒಟ್ಟುಗೂಡಿದರೂ ಕೂಡಾ. ನೊಣವು ಅವರಿಂದೇನನ್ನಾದರೂ ಕಸಿದುಕೊಂಡರೆ ಅದನ್ನು ಅದರಿ(ನೊಣ)ರಿಂದ ಮರಳಿ ಪಡೆಯುವ ಸಾಮರ್ಥ್ಯ ಕೂಡಾ ಅವರಲ್ಲಿಲ್ಲ. ಪ್ರಾರ್ಥಿಸುವವನು ಮತ್ತು ಪ್ರಾರ್ಥಿಸಲ್ಪಡುವವನು (ಇಬ್ಬರೂ) ಬಲಹೀನರಾಗಿರುವರು. (ಕುರ್‌ಆನ್ 22:73)

ನೊಣದ ಉದಾಹರಣೆಯನ್ನು ಬಳಸುವುದು ಮತ್ತು ನೊಣವು ಪ್ರಾರ್ಥಿಸುವವರ ಕೈಯಿಂದ ಅಥವಾ ಪ್ರಾರ್ಥಿಸಲ್ಪಡುವವರ ನೈವೇದ್ಯ ಅಥವಾ ಪ್ರಸಾದದಿಂದ ಏನನ್ನಾದರೂ ಸೆಳೆದುಕೊಂಡರೆ ಅದನ್ನು ಹಿಂಪಡೆಯುವುದು ಅಸಂಭವ ಎಂದಿರುವುದರ ಹಿಂದೆ ನಿರ್ಧಿಷ್ಟ ಉದ್ದೇಶ ಮತ್ತು ಯುಕ್ತಿಯಿದೆ. ನಮ್ಮ ಕೈಯಲ್ಲಿರುವ ಲಡ್ಡಿನ ತುಣುಕನ್ನು ಸೆಳೆದುಕೊಂಡ ನೊಣವನ್ನು ಹಿಡಿದು ಅದನ್ನೇಕೆ ಹಿಂಪಡೆಯಲು ಸಾಧ್ಯವಿಲ್ಲ ಎಂದು ಯಾರಾದರೂ ಯೋಚಿಸಿರಲೂ ಸಾಕು. ಆದರೆ ಅದು ಅಸಾಧ್ಯ. ವೈಜ್ಞಾನಿಕ ಕ್ಷೇತ್ರವು ಕೂಡಾ ಆ ಕಾರ್ಯವನ್ನು ಅಸಾಧ್ಯವೆಂದು ಇತ್ತೀಚೆಗೆ ಒಪ್ಪಿಕೊಂಡಿದೆ.

ವಿಜ್ಞಾನವು ಅದಕ್ಕೆ ಕೊಡುವ ಕಾರಣಗಳು ಹೀಗಿವೆ:
1. ನೊಣವು ಆಹಾರವನ್ನು ಜಗಿಯಲಾರದು.
2. ನೊಣವು ತನ್ನ ಆಹಾರವನ್ನು ಕೇವಲ ಹೀರಿಕೊಳ್ಳಬಲ್ಲುದು.
3. ದ್ರವ ರೂಪದ ಆಹಾರವನ್ನು ಮಾತ್ರವೇ ನೊಣವು ಹೀರಿಕೊಳ್ಳಬಲ್ಲುದು.
4. ನೊಣವು ತಾನು ಕುಳಿತುಕೊಂಡ ಆಹಾರದ ಅಲ್ಪ ಭಾಗದ ಮೇಲೆ ಒಂದು ರೀತಿಯ ದ್ರವವನ್ನು ಉಗುಳುತ್ತದೆ.
5. ಈ ಉಗುಳಿನಲ್ಲಿರುವ ಜೀರ್ಣರಸ, ಎನ್‌ಝೈಮ್ಸ್ ಮತ್ತು ಜೊಲ್ಲುರಸಗಳು ಆಹಾರ ಕಣವನ್ನು ಒಡೆದು ಅದನ್ನು ಕರಗಿಸುತ್ತದೆ.
6. ಸ್ಪಂಜಿನಂತಿರುವ ಬಾಯಿಯ ಭಾಗಗಳು ಮತ್ತು ಮೂತಿಯ ಮೂಲಕ ನೊಣವು ದ್ರವರೂಪಕ್ಕಿಳಿದ ಆಹಾರವನ್ನು ಹೀರಿಕೊಳ್ಳುತ್ತದೆ.
ಇದನ್ನೇ ಹೋಲುವ ಇನ್ನೊಂದು ವೈಜ್ಞಾನಿಕ ವಿವರಣೆಯು ಹೀಗಿದೆ.
ತಾನು ತಿನ್ನಲಿಚ್ಛಿಸುವ ಆಹಾರದ ಮೇಲೆ ನೊಣವು ಉಗುಳುತ್ತದೆ ಮತ್ತು ತನ್ನ ನಾಲಗೆಯ ಮೂಲಕ ಅದನ್ನು ಹೀರಿಕೊಳ್ಳುತ್ತದೆ. ನೊಣಕ್ಕೆ ಹಲ್ಲುಗಳಿರುವುದಿಲ್ಲ. ಅದು ಜಠರ ದ್ರವವನ್ನು ತನ್ನ ಆಹಾರದ ಮೇಲೆ ಉಗುಳುತ್ತದೆ. ಗಟ್ಟಿ ಪದಾರ್ಥವನ್ನು ಆ ದ್ರವವು ಜೀರ್ಣಿಸಿ ದ್ರವರೂಪಕ್ಕಿಳಿಸುತ್ತದೆ ಮತ್ತು ನೊಣವು ಅದನ್ನು ತನ್ನ ಮೂತಿಯಿಂದ ಹೀರಿಕೊಳ್ಳುತ್ತದೆ.
ದಿ ಫ್ಲೈ (The Fly) ಎಂಬ ವೈಜ್ಞಾನಿಕ ಚಿತ್ರವನ್ನು ವೀಕ್ಷಿಸಿದವರು ನೊಣವಾಗಿ ರೂಪಾಂತರಗೊಂಡ ಮನುಷ್ಯನು ತನ್ನ ಊಟದ ತಟ್ಟೆಯ ಮೇಲೆ ಉಗುಳುವ ದೃಶ್ಯವನ್ನು ಬಹುಷಃ ಮರೆತಿರಲಾರರು.

ಇನ್ನು ಕುರ್‌ಆನಿನ ವಚನದ ತಾತ್ಪರ್ಯವನ್ನು ನೋಡಿರಿ. ನಿಮ್ಮ ಅಥವಾ ನಿಮ್ಮ ಆರಾಧ್ಯರಿಗೆ ಸೇರಿದ ಯಾವುದಾದರೂ ಭಕ್ಷ್ಯವಸ್ತುವನ್ನು ನೊಣವು ಕಸಿದುಕೊಂಡಲ್ಲಿ ಅದನ್ನು ಮರಳಿ ಪಡೆಯಲು ನಿಮ್ಮಿಂದಲೂ ಸಾಧ್ಯವಲ್ಲ ನಿಮ್ಮ ಆರಾಧ್ಯರಿಂದಲೂ ಸಾಧ್ಯವಿಲ್ಲ. ಬಲಹೀನನೊಂದಿಗೆ ಪ್ರಾರ್ಥಿಸುವುದು ನಿರರ್ಥಕ ಮತ್ತು ನಿಷ್ಫಲ. ನೊಣವನ್ನು ಹಿಡಿದು ಕೂಲಂಕುಶ ತಪಾಸಣೆ ನಡೆಸಿದರೂ ನಿಮಗೆ ಮತ್ತು ನಿಮ್ಮ ಆರಾಧ್ಯರಿಗೆ ನಿಮ್ಮ ಲಡ್ಡಿನ ತುಣುಕು ಅಸಲು ರೂಪದಲ್ಲಿ ಕಂಡು ಬರಲಾರದು. ಏಕೆಂದರೆ ಅದಾಗಲೇ ಜೀರ್ಣಗೊಂಡಿರುತ್ತದೆ.
ನೊಣವು ಸೆಳೆದುಕೊಂಡ ವಸ್ತುವನ್ನು ಹಿಂಪಡೆಯಲು ಅಸಾಧ್ಯ ಎಂಬ ಕುರ್‌ಆನ್ ನೀಡುವ ಉದಾಹರಣೆಯು ಆರಾಧ್ಯರ ಮತ್ತು ಆರಾಧಿಸುವವರ ಬಲಹೀನತೆಯನ್ನು ಸರಳ ರೀತಿಯಲ್ಲಿ ಮನದಟ್ಟು ಮಾಡಿಕೊಡುತ್ತದೆ. ಅದರೊಂದಿಗೆ ಕುರ್‌ಆನಿನ ದೈವಿಕತೆಗೆ ಸಾಕ್ಷಿಯಾಗುವ ದೃಷ್ಠಾಂತವಾಗಿ ಸಾಬೀತಾಗುತ್ತದೆ. ಅನ್ಯಥಾಃ ಇತ್ತೀಚೆಗೆ ಸಂಶೋಧಿಸಲ್ಪಟ್ಟ ಇಂತಹ ವೈಜ್ಞಾನಿಕ ಮಾಹಿತಿಗಳು 1400 ವರ್ಷಗಳ ಹಿಂದಿನ ಒಬ್ಬ ನಿರಕ್ಷರಿ ಮನುಷ್ಯನ ಅಧರಗಳಿಂದ ಹೊರ ಬರಲು ಸಾಧ್ಯವಿತ್ತೇ?
ಅವರು [ಮುಹಮ್ಮದ್] ತನ್ನಿಚ್ಛೆಯಂತೆ ಮಾತನಾಡುವುದಿಲ್ಲ. ಅದೊಂದು ದಿವ್ಯ ವಾಣಿಯ ಹೊರತು ಇನ್ನೇನೂ ಅಲ್ಲ (ಕುರ್‌ಆನ್ 53:3-4)

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …