@ ಎಂ.ಎಸ್.ಎ. ರಝಾಕ್
ಕುಟುಂಬವು ಸಮಾಜದ ಆಧಾರ ಸ್ತಂಭ. ಭದ್ರವಾದ ತಳಹದಿಯಿಂದ ನಿರ್ಮಿಸಲ್ಪಟ್ಟ ಕುಟುಂಬದಲ್ಲಿ ಜನಿಸುವ ಸಂತಾನಗಳು ಸುಸಂಸ್ಕ್ರತರೂ ಸಜ್ಜನರೂ ಆಗಿರುತ್ತಾರೆ. ಕುಟುಂಬವೆಂಬುದು ಸಂಸ್ಕಾರದ ತೊಟ್ಟಿಲು. ಪ್ರಶಾಂತವಾದ ಕುಟುಂಬದ ವಾತಾವರಣದಲ್ಲಿ ಬೆಳೆದು ಬರುವ ಮಕ್ಕಳು ಉನ್ನತ ವ್ಯಕ್ತಿತ್ವದ ಒಡೆಯರಾಗಿರುತ್ತಾರೆ. ಸಮಾಜದ ಅತ್ಯಂತ ಸಣ್ಣ ಘಟಕವಾದ ಕುಟುಂಬದಿಂದ ಸಂತಾನಗಳು ಪಡೆಯುವ ಶಿಕ್ಷಣವು ಅವರ ಭಾವೀ ಜೀವನ ಉಜ್ವಲಗೊಳ್ಳಲು ಪರ್ಯಾಪ್ತವಿರಬೇಕು. ಯುವಜನಾಂಗ ದಾರಿ ತಪ್ಪುವುದರ ಮುಖ್ಯ ಕಾರಣ, ಮುಖ್ಯ ಜವಾಬ್ದಾರಿ ಕುಟುಂಬವಾಗಿದೆ. ಆದ್ದರಿಂದ ತತ್ವ ಚಿಂತಕರು, ರಾಜಕೀಯ ನಾಯಕರು, ಸಾಮಾಜಿಕ ಶಾಸ್ತ್ರಜ್ಞರು ಶಿಕ್ಷಣಕ್ಕೆ ಮುಖ್ಯ ಸ್ಥಾನವನ್ನು ನೀಡುತ್ತಾರೆ. ವ್ಯಕ್ತಿಯ ಅಭಿವೃದ್ಧಿಗೆ, ಕುಟುಂಬದ ಭದ್ರತೆಗೆ, ಸಮಾಜದ ಉನ್ನತಿಗೆ, ರಾಷ್ಟ್ರದ ಏಳಿಗೆಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಬದುಕನ್ನು ನಿರ್ಣಯಿಸುವುದರಲ್ಲಿ ಕುಟುಂಬದ ಪಾತ್ರವು ದೊಡ್ಡದಾಗಿದೆ. ಸಾಮಾಜಿಕೀಕರಣ (ಸೋಶಿಯಲೈಝೇಶನ್) ಆರಂಭವಾಗುವುದು ಕುಟುಂಬದಿಂದ. ಚಿಂತನೆಗಳು, ಆದರ್ಶಗಳು, ಜೀವನದ ಮೌಲ್ಯಗಳು, ವ್ಯವಹಾರ ಮರ್ಯಾದೆಗಳು ಎಲ್ಲವೂ ಕೌಟುಂಬಿಕ ವಾತಾವರಣದಲ್ಲಿ ಪಡೆಯುತ್ತೇವೆ.
ಮಕ್ಕಳು ಭವಿಷ್ಯದ ಸಂಪತ್ತು. ಆದ್ದರಿಂದ ಮಕ್ಕಳನ್ನು ಉತ್ತಮ ಶಿಕ್ಷಣದೊಂದಿಗೆ ಬೆಳೆಸಬೇಕು. ಬದುಕಿಗೆ ಅನಿವಾರ್ಯವಾದ ನೈತಿಕ ಮೌಲ್ಯಗಳನ್ನು ಕಲಿಸುವಂತಹ ಶಿಕ್ಷಣ, ಸತ್ಯ, ನ್ಯಾಯ, ನೀತಿ, ದಯೆ, ಕಾರುಣ್ಯ ಮೊದಲಾದುವುದಗಳನ್ನು ಒಳಗೊಂಡ ಶಿಕ್ಷಣವನ್ನು ನೀಡಬೇಕು. ಧರ್ಮದ ಬೋಧನೆಗಳಿಂದ ಸಂಪನ್ನವಾದ ಶಿಕ್ಷಣ ಹೆತ್ತವರಿಗೆ ನೀಡಲು ಸಾಧ್ಯವಾಗಬೇಕು. ಕುಟುಂಬವು ರೂಪುಗೊಳ್ಳುವುದು ಒಂದು ಗಂಡು ಮತ್ತು ಹೆಣ್ಣಿನಿಂದ. ಆದ್ದರಿಂದ ಆ ಸಮಾಗಮವು ಪವಿತ್ರವಾದುದು. ಪ್ರೀತಿ, ಸುಂದರವಾದ ಜೀವನ ಅದರ ಯಶಸ್ಸಿಗೆ ಅನಿವಾರ್ಯವಾಗಿದೆ.
ವಿವಾಹ ಇಸ್ಲಾಮಿನಲ್ಲಿ
ಕುಟುಂಬದ ಪ್ರಾಧಾನ್ಯತೆಯ ಕುರಿತು ಪವಿತ್ರ ಕುರ್ಆನ್ ಹೇಳುತ್ತದೆ, “ಮನುಷ್ಯರೇ, ನಿಮ್ಮನ್ನು ಒಂದೇ ಆತ್ಮದಿಂದ ಸೃಷ್ಟಿಸಲಾಗಿದ್ದು, ಅದರಿಂದಲೇ ಅದರ ಜೋಡಿಯನ್ನು ಸೃಷ್ಟಿಸಿದನು. ಅವರೀರ್ವರಿಂದ ಧಾರಾಳ ಸ್ತ್ರೀ ಪುರುಷರನ್ನು ಭೂಮಿಯಲ್ಲಿ ಹಬ್ಬಿಸಿದನು. ಕುಟುಂಬ ಸಂಬಂಧಗಳನ್ನು ಕೆಡಿಸಬೇಡಿ. ಅಲ್ಲಾಹನು ನಿಮ್ಮ ಮೇಲೆ ಮೇಲ್ನೋಟವನ್ನಿರಿಸಿಕೊಂಡಿರುವನೆಂಬುದನ್ನು ಚೆನ್ನಾಗಿ ಅರಿತುಕೊಳ್ಳಿರಿ.” (4:1)
ಪ್ರವಾದಿ(ಸ) ಹೇಳಿದರು, ಯುವ ಸಮೂಹವೇ, ನಿಮಗೆ ಸಾಮರ್ಥ್ಯವಿದ್ದರೆ ನೀವು ವಿವಾಹವಾಗಿರಿ. ಅದು ಸಾಧ್ಯವಿಲ್ಲದವನು ಉಪವಾಸ ವ್ರತವನ್ನು ಆಚರಿಸಲಿ. ಅದು ಭಾವ ವಿಕಾರಗಳನ್ನು ಶಮನಗೊಳಿಸಲು ಸಾಧ್ಯಗೊಳಿಸುತ್ತದೆ. (ಬುಖಾರಿ) ಸಾಮರ್ಥ್ಯವುಳ್ಳವರು ಅಂದರೆ ದಾಂಪತ್ಯ ಜೀವನ ನಡೆಸಲು ದೈಹಿಕವಾಗಿಯೂ ಮಾನಸಿಕವಾಗಿಯೂ ಆರ್ಥಿಕವಾದ ಸಾಮರ್ಥ್ಯ ಹಾಗೂ ಪಕ್ವತೆಯಾಗಿದೆ. ಪ್ರವಾದಿ(ಸ)ರು ಹೇಳಿದರು, “ವಿವಾಹವು ನನ್ನ ಚರ್ಯೆಯಾಗಿದೆ. ನನ್ನ ಚರ್ಯೆಯನ್ನು ಪಾಲಿಸದವನು ನನ್ನವನಲ್ಲ.” (ಇಬ್ನು ಮಾಜ)
ಅನೈತಿಕ ಜೀವನ ಹಾಗೂ ದುರ್ಮಾರ್ಗದಿಂದ ವ್ಯಕ್ತಿಯನ್ನು ಸಂರಕ್ಷಿಸಲು ಸಾಧ್ಯವಿರುವ ಒಂದು ವಿಷಯವಾಗಿದೆ ವಿವಾಹ. ವ್ಯಕ್ತಿಗಳ ಮಾನಸಿಕ ಹಾಗೂ ಶಾರೀರಿಕ ವಿಕಾರತೆಯ ಬೆಳವಣಿಗೆಗೂ ಅಭಿವೃದ್ಧಿಗೂ ವಿವಾಹವು ಅತ್ಯಂತ ಅಪೇಕ್ಷಣೀಯವಾಗಿದೆ. ಸದಾಚಾರವುಳಿಸಿಕೊಳ್ಳಲು ಚಾರಿತ್ರ್ಯ ಸಂರಕ್ಷಣೆಗೆ ವ್ಯಕ್ತಿಗಳಿಗೆ ಸಹಾಯ ಮಾಡುವ ಪ್ರಬಲವಾದ ಒಂದು ಕರ್ಮವದು. ಮಾನವ ವಂಶದ ವರ್ಧನೆಗೆ ಸಮಾಜದ ಸಾಂಸ್ಕಾರಿಕ ಅಭಿವೃದ್ಧಿಗೆ, ವ್ಯಕ್ತಿಗಳ ಸಂಘಟಿತ ವಿಕಸನಕ್ಕೆ ವಿವಾಹವನ್ನು ಇಸ್ಲಾಮ್ ಅಪೇಕ್ಷಣೀಯವೆಂದು ಪರಿಗಣಿಸಿದೆ.
ಪ್ರಸಿದ್ಧ ಇಸ್ಲಾಮೀ ದಾರ್ಶನಿಕರೂ ವಿದ್ವಾಂಸರೂ ಆದ ಇಮಾಮ್ ಗಝ್ಝಾಲಿ(ರ) ವಿವಾಹದ 5 ಪ್ರಯೋಜನಗಳನ್ನು ವಿವರಿಸಿದ್ದಾರೆ.
1. ಸಂತಾನೋತ್ಪತ್ತಿ
ಮನುಷ್ಯ ವರ್ಗದ ಅಸ್ತಿತ್ವ ಉಳಿದುಕೊಳ್ಳಲು ಸಂತಾನೋತ್ಪತ್ತಿ ಅನಿವಾರ್ಯವಾಗಿದೆ. ಮಾನವ ವರ್ಗದ ಅಸ್ತಿತ್ವಕ್ಕಾಗಿ ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪಾಲುದಾರರಾಗುವ ಮೂಲಕ ದೇವನ ಪ್ರೀತಿಗೆ ಪಾತ್ರರಾಗುತ್ತಾರೆ. ಉತ್ತಮ ಸಜ್ಜನ ಸಂತಾನಗಳ ಪ್ರಾರ್ಥನೆಯ ಪ್ರತಿಫಲ ಮರಣಾನಂತರವೂ ಮಾತಾಪಿತರಿಗೆ ಲಭಿಸುತ್ತದೆ. ಶಿಶುವಾಗಿರುವಾಗ ಮರಣ ಹೊಂದುವ ಸಂತಾನಗಳ ಹೆಸರಿನಲ್ಲಿ ಹೆತ್ತವರಿಗೆ ಅಲ್ಲಾಹನ ಶಿಫಾರಸು ದೊರೆಯುವುದು. ನರಕದಿಂದ ಅವರಿಗೆ ರಕ್ಷಣಾ ಖೋಟಾವಾಗಿರುತ್ತದೆ ಅಂತಹ ಸಂತಾನಗಳು.
2. ಚಾರಿತ್ರ್ಯ ಸಂರಕ್ಷಣೆ
ಚಾರಿತ್ರ್ಯ ರಂಗದ ಪರಾಜಯವೇ ವ್ಯಕ್ತಿ ಮತ್ತು ಸಮೂಹದ ಧಾರ್ಮಿಕ ಅಧಃಪತನಕ್ಕೆ ಕಾರಣ. ವಿಕಾರ ನಿಗ್ರಹಕ್ಕೆ ಬದಲು ವಿಕಾರ ನಿಯಂತ್ರಣವೇ ಇಸ್ಲಾಮಿನ ಪಾಠ.
3. ಮಾನಸಿಕ ಶಾಂತಿ
“ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.” (ಅರ್ರೂಮ್ 21) ಬುದ್ಧಿವಂತರಿಗೆ ಜೀವನದಲ್ಲಿ ಮೂರು ಸಂದರ್ಭಗಳಿವೆ. ಒಂದು, ದೇವನೊಂದಿಗೆ ರಹಸ್ಯ ಸಂಭಾಷಣೆಗಿರುವ ಅವಕಾಶ. ಎರಡು, ಆತ್ಮಾವಲೋಕನದ ಸಂದರ್ಭ. ಮೂರು, ಮಾನಸಿಕ ಬೆಳವಣಿಗೆಗೆ ಹಾಗೂ ಶಾರೀರಿಕ ಪೋಷಣೆಗೆ ಅಗತ್ಯವಾದ ಆಹಾರ ಭೋಜನ ಹಾಗೂ ಸುಖಭೋಗ ಆಸ್ವಾದನೆಯ ಅವಕಾಶ. ಈ ಮೂರು ಸಂದರ್ಭಗಳನ್ನು ಸೂಕ್ತ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದು ಇಸ್ಲಾಮ್ ಕಲಿಸಿದೆ.
4. ಹೊಣೆಗಾರಿಕೆಯ ವಿಕೇಂದ್ರೀಕರಣ
ಕುಟುಂಬದಲ್ಲಿರುವ ಹೊಣೆಗಾರಿಕೆಗಳನ್ನು ದಂಪತಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೆ ಉದ್ಯೋಗ ರಂಗದಲ್ಲೂ ಶಿಕ್ಷಣ ರಂಗದಲ್ಲೂ ಇತರ ಕ್ಷೇತ್ರಗಳಲ್ಲೂ ಹೆಚ್ಚಿನ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ. ಈ ಅರ್ಥದಲ್ಲಿ ಉತ್ತಮ ಪತಿ-ಪತ್ನಿಯರು ಪರಸ್ಪರ ಸಹಾಯಿಗಳಾಗಿದ್ದಾರೆ. ಧಾರ್ಮಿಕ ಹಾಗೂ ಲೌಕಿಕ ಜೀವನಕ್ಕೂ ಪಾರತ್ರಿಕ ವಿಜಯಕ್ಕೂ ಉತ್ತಮ ಪತಿ-ಪತ್ನಿಯರು ಪರಸ್ಪರ ಸಹಕಾರಿಗಳಾಗಿದ್ದಾರೆ.
5. ಹೊಣೆಗಾರಿಕೆಯ ನಿರ್ವಹಣೆ ಮತ್ತು ಹಕ್ಕುಗಳನ್ನು ನೀಡುವುದು
ಹೊಣೆಗಾರಿಕೆಗಳನ್ನು ವಹಿಸಿಕೊಳ್ಳಲು ಹಾಗೂ ಇತರರ ಹಕ್ಕುಗಳನ್ನು ಹಂಚಿಕೊಡಲು ವೈವಾಹಿಕ ಜೀವನದಿಂದ ಸಾಧ್ಯವಾಗುತ್ತದೆ. ಮುಖ್ಯವಾಗಿ ಸಂಗಾತಿಯೊಂದಿಗೂ ಬಳಿಕ ಸಂತಾನಗಳೊಂದಿಗಿನ ನಿಯಮಿತವಾದ ಹೊಣೆಗಾರಿಕೆಗಳನ್ನು ಯಥಾವತ್ ನಿರ್ವಹಿಸಲು ಹಾಗೂ ಮನಸ್ಸನ್ನು ಸಜ್ಜುಗೊಳಿಸುವುದರಲ್ಲಿ ವಿವಾಹಕ್ಕೆ ಸ್ವಲ್ಪ ಪಾಲಿದೆ. ಸಂಗಾತಿಯೊಂದಿಗಿನ ಕರ್ತವ್ಯಗಳನ್ನು ನಿರ್ವಹಿಸುವುದು, ಅವರ ಹಕ್ಕುಗಳನ್ನು ಹಂಚಿಕೊಳ್ಳುವುದು, ಅವನ ದೌರ್ಬಲ್ಯಗಳನ್ನು ತಪ್ಪುಗಳನ್ನು ಕ್ಷಮಿಸುವುದು, ಅವರ ತರಬೇತಿಗೆ ಪ್ರಯತ್ನಿಸುವುದು, ಅವರನ್ನು ಧಾರ್ಮಿಕ ಶಿಷ್ಟಾಚಾರಗಳೊಂದಿಗೆ ಬಳಸುವುದು, ಅವರಿಗಾಗಿ ಧರ್ಮಬದ್ಧ ಸಂಪಾದನೆ, ಮಕ್ಕಳ ಪರಿಪಾಲನೆ ಉತ್ತಮ ರೀತಿಯಿಂದ ನಿರ್ವಹಿಸುವುದು ಎಂಬುದೆಲ್ಲಾ ವಿವಾಹದಿಂದ ನಿರ್ವಹಿಸಲು ಸಾಧ್ಯವಾಗುವ ಮಹತ್ವದ ಕರ್ಮಗಳಾಗಿವೆ. (ಇಹ್ಯಾಉಲೂಮುದ್ದೀನ್)
ಪ್ರವಾದಿ(ಸ)ರು ಹೇಳಿದರು, “ಓರ್ವನು ವಿವಾಹಿತನಾದರೆ ಅವನು ಧರ್ಮದ ಮೂರರಲ್ಲಿ ಎರಡು ಭಾಗವನ್ನು ಪೂರ್ತೀಕರಿಸಿದನು.” ವಿವಾಹಕ್ಕೆ ಇಸ್ಲಾಮ್ ನೀಡುವ ಪ್ರಾಧಾನ್ಯತೆ ಇದರಿಂದ ವ್ಯಕ್ತವಾಗುತ್ತದೆ.
ವಧು-ವರರ ಆಯ್ಕೆ
ವಿವಾಹವು ಬಹಳ ಪ್ರಜ್ಞಾವಂತಿಕೆಯಿಂದ ನಿರ್ವಹಿಸಲ್ಪಡಬೇಕಾದ ಒಂದು ಕರ್ಮವಾಗಿದೆ. ಉತ್ತಮ ಸಮಾಜದ ನಿರ್ಮಾಣಕ್ಕೆ ಸುಭದ್ರ ಕುಟುಂಬ ಅನಿವಾರ್ಯವಾಗಿದೆ. ಆದ್ದರಿಂದ ದಂಪತಿಗಳ ಆಯ್ಕೆಗೆ ಇಸ್ಲಾಮ್ ಸ್ಪಷ್ಟವಾದ ಮಾರ್ಗನಿರ್ದೇಶನಗಳನ್ನು ಸಮರ್ಪಿಸಿದೆ. ಕಲ್ಪನಾ ಲೋಕದಲ್ಲಿ ಭಾವನೆಗಳ ಸಾಮ್ರಾಜ್ಯದಲ್ಲಿ ಸ್ವಪ್ನಗಳನ್ನು ಕಂಡು ವಿವಾಹ ನಡೆಸುವುದಲ್ಲ. ಜೀವನದ ವಾಸ್ತವಿಕತೆಗಳನ್ನು ಅರಿತುಕೊಂಡಾಗಿರಬೇಕು. ಉಭಯ ಸಮ್ಮತಿಯೊಂದಿಗಿನ ಒಂದು ಒಪ್ಪಂದವಾಗಿರಬೇಕು ಅದು. ಜೀವನದ ಸಂಗಾತಿಯನ್ನು ಆಯ್ಕೆ ಮಾಡಲು ನಿಶ್ಚಿತ ಮಾಪನವನ್ನು ಇಸ್ಲಾಮ್ ಸೂಚಿಸಿದೆ. ಅದು ದಾಂಪತ್ಯ ಜೀವನದ ಯಶಸ್ಸಿಗೆ ಅನಿವಾರ್ಯವೂ ಆಗಿದೆ. ಪ್ರವಾದಿ(ಸ)ರು ಹೇಳಿದರು, “ಸಮ್ಮತಿ ಕೇಳದೆ ಮಹಿಳೆಯನ್ನು ವಿವಾಹ ಮಾಡಿಸಬಾರದು. ಆಕೆಯ ಅನುಮತಿಯಿಲ್ಲದೆ ಕನ್ಯೆಯನ್ನು ವಿವಾಹ ಮಾಡಬಾರದು.” ಕನ್ಯೆಯ ಸಮ್ಮತಿ ಮೌನವೆಂದೂ ಅವರು ವಿವರಿಸಿದ್ದಾರೆ. (ಬುಖಾರಿ)
ವಿವಾಹದ ಮಾನದಂಡ
ಇಸ್ಲಾಮೀ ಜೀವನ ನಡೆಸಲು, ಇಸ್ಲಾಮೀ ಶಿಷ್ಟಾಚಾರದಂತೆ ಮಕ್ಕಳನ್ನು ಬೆಳೆಸ ಬಯಸುವವರ ದಂಪತಿಗಳ ಆಯ್ಕೆಯಲ್ಲಿ ಪ್ರಥಮ ಪ್ರಾಶಸ್ತ್ಯವನ್ನು ಧಾರ್ಮಿಕತೆಗೂ ಸಚ್ಚಾರಿತ್ರ್ಯಕ್ಕೂ ನೀಡಬೇಕು. ಪ್ರವಾದಿ(ಸ) ಹೇಳಿದರು, “ಧರ್ಮ ಮತ್ತು ಉತ್ತಮ ಸ್ವಭಾವವುಳ್ಳವರು ವಿವಾಹದ ಪ್ರಸ್ತಾಪದೊಂದಿಗೆ ಬಂದರೆ ಅವರಿಗೆ ವಿವಾಹ ಮಾಡಿಕೊಡಿ. ಅಲ್ಲದಿದ್ದರೆ ಭೂಮಿಯಲ್ಲಿ ನಾಶ, ತೊಂದರೆ ಬಾಧಿಸುವುದು.” (ತಿರ್ಮಿದಿ) ನಂತರ ಹೇಳಿದರು, “ನಾಲ್ಕು ಕಾರಣಗಳಿಂದ ಸ್ತ್ರೀ ವಿವಾಹಿತಳಾಗುತ್ತಾಳೆ. ಸಂಪತ್ತು, ಕುಟುಂಬ ಮಹಿಮೆ, ಸೌಂದರ್ಯ, ಧರ್ಮನಿಷ್ಠೆ. ಧರ್ಮನಿಷ್ಠೆ ಉಳ್ಳವಳನ್ನು ವಿವಾಹವಾಗಿ. ಧಾರ್ಮಿಕ ನಿಷ್ಠಳೂ ಉತ್ತಮ ಗುಣನಡತೆಯ ಹೆಣ್ಣನ್ನು ಆರಿಸಿಕೊಳ್ಳಿ ಎಂದು ಉದ್ಧರಿಸಲಾಗಿದೆ.” (ಬುಖಾರಿ)
ಆದರ್ಶ ಸಮೂಹದ ನಿರ್ಮಾಣಕ್ಕೆ ದೇವಪ್ರಜ್ಞೆ, ಧಾರ್ಮಿಕ ನಿಷ್ಠೆ, ಉತ್ತಮ ಗುಣ ಸ್ವಭಾವವಿರುವ ಮಹಿಳೆ ಅನಿವಾರ್ಯವಾಗಿದೆ. ಕುಟುಂಬ ಎಂಬುದು ಒಂದು ಕೋಟೆಯಂತೆ. ಕೋಟೆ ನಿರ್ಮಿಸಲು ಹಾಗೂ ಸಂರಕ್ಷಿಸಲು, ಉಳಿಸಿಕೊಳ್ಳಲು ಪುರುಷ ಮಾತ್ರ ಪ್ರಯತ್ನ ಮಾಡಿದರೆ ಸಾಲದು. ಅದಕ್ಕೆ ಶಕ್ತಳು ಧರ್ಮನಿಷ್ಠೆ ಹಾಗೂ ಅನುಸರಣಾಶೀಲವುಳ್ಳ ಪ್ರಿಯತಮೆಯ ಅಗತ್ಯವಿದೆ. ಅಲ್ಲಾಹನನ್ನು ಭಯಪಟ್ಟು ಜೀವಿಸುವವಳಿಗೆ ಪತಿಯನ್ನು ಅನುಸರಿಸಲು ಸಾಧ್ಯವಿದೆ. ಅದೇರೀತಿ ಧಾರ್ಮಿಕ ನಿಷ್ಠೆ, ಇಸ್ಲಾಮೀ ಸಂಸ್ಕಾರವನ್ನು ಬೆಳೆಸಿಕೊಂಡ ಪುರುಷನಿಗೆ ಆದರ್ಶ ಕುಟುಂಬ, ಉತ್ತಮ ಮಕ್ಕಳನ್ನು ಬೆಳೆಸಲು ಸಾಧ್ಯ.
ಸೌಂದರ್ಯ, ವಿದ್ಯಾಭ್ಯಾಸ, ಕುಟುಂಬ ಹಿನ್ನೆಲೆ, ಬೆಳೆಯುವ ವಾತಾವರಣ, ವಯಸ್ಸು, ದೇಹರಚನೆ, ಆರೋಗ್ಯ ಸ್ಥಿತಿ, ಆದರ್ಶ ಇವೆಲ್ಲವೂ ಕುಟುಂಬ ಜೀವನದ ವಿಜಯಕ್ಕೆ ಅಗತ್ಯ. ಆದರೆ ಇವೆಲ್ಲವನ್ನೂ ಒಂದು ಅಳತೆಯಲ್ಲಿ ಪರಿಗಣಿಸಬೇಕು. ಆದರೆ ಪ್ರಥಮ ಪ್ರಾಶಸ್ತ್ಯ ಧಾರ್ಮಿಕ ಪ್ರಜ್ಞೆ ಹಾಗೂ ಉತ್ತಮ ಸ್ವಭಾವಕ್ಕೆ ನೀಡಬೇಕು ಎಂಬುದು ಪ್ರವಾದಿಯ ಮಾತಿನ ಇಂಗಿತ. ಪ್ರವಾದಿ(ಸ) ಹೇಳಿದರು, “ಪ್ರಭಾವವನ್ನು ನೋಡಿ ವಿವಾಹವಾದರೆ ಅಲ್ಲಾಹನು ಅವನಿಗೆ ನಿಂದ್ಯತೆಯನ್ನೇ ನೀಡುವನು. ಹಣವನ್ನು ನೋಡಿ ವಿವಾಹವಾದರೆ ದಾರಿದ್ರ್ಯವನ್ನು ಅವನಿಗೆ ಹೆಚ್ಚಿಸುವನು. ಸಚ್ಚಾರಿತ್ರ್ಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಕುಟುಂಬ ಸಂಬಂಧವನ್ನು ಜೋಡಿಸಲು ವಿವಾಹವಾದರೆ ಅವಳಿಂದ ಅಲ್ಲಾಹನು ಅವನನ್ನು ಅನುಗ್ರಹಿಸುವನು. ಅವಳನ್ನು ಅವನಿಂದ ಅನುಗ್ರಹಿಸುವನು.” (ತ್ವಬ್ರಾನಿ)
ಪ್ರವಾದಿ(ಸ) ಹೇಳಿದರು, “ಮನುಷ್ಯನ ಸೌಭಾಗ್ಯ ಮೂರು ಕಾರ್ಯಗಳಲ್ಲಿದೆ. ದೌರ್ಭಾಗ್ಯವೂ ಮೂರು ಕಾರ್ಯಗಳಲ್ಲಿದೆ. ಉತ್ತಮ ಪತ್ನಿ, ಸೌಕರ್ಯವುಳ್ಳ ಮನೆ, ಒಳ್ಳೆಯ ವಾಹನ ಇವು ಆ ಸೌಭಾಗ್ಯ. ಕೆಟ್ಟ ಪತ್ನಿ, ಸೌಕರ್ಯವಿಲ್ಲದ ಮನೆ, ಕೆಟ್ಟ ವಾಹನ ಇವು ದೌರ್ಭಾಗ್ಯವಾಗಿದೆ.” (ಅಹ್ಮದ್, ತ್ವಬ್ರಾನಿ, ಹಾಕಿಮ್) ಇನ್ನೊಮ್ಮೆ ಅವರು ಹೇಳಿದರು, “3 ವಿಷಯಗಳು ಸೌಭಾಗ್ಯವಾಗಿದೆ. ಒಂದು, ಸದ್ಗುಣವಂತೆಯಾದ ಪತ್ನಿ, ಅವಳನ್ನು ಕಾಣುವಾಗ ನಿನಗೆ ಸಂತೋಷ ಲಭಿಸುತ್ತದೆ. ನಿನ್ನ ಅನುಪಸ್ಥಿತಿಯಲ್ಲಿ ಅವಳ ಶರೀರ ಮತ್ತು ನಿನ್ನ ಸಂಪತ್ತಿನ ಕುರಿತು ನೀನು ಸ್ವಸ್ಥನಾಗಿರುತ್ತಿ. ಎರಡು, ವೇಗವುಳ್ಳ ವಾಹನ. ಅದು ಅತಿವೇಗ ನಿನ್ನನ್ನು ಸಂಗಡಿಗರ ಬಳಿಗೆ ತಲುಪಿಸುತ್ತದೆ. ಮೂರು, ವಿಶಾಲ ಹಾಗೂ ಸೌಕರ್ಯವುಳ್ಳ ಮನೆ.” (ಹಾಕಿಮ್)
ಪ್ರವಾದಿ(ಸ) ಹೇಳಿದರು, “ತನ್ನ ಪ್ರೀತಿಪಾತ್ರಳನ್ನು ಧರ್ಮಪ್ರಜ್ಞೆಯಿಲ್ಲದವನ ಪತ್ನಿಯಾಗಿ ಮಾಡುವವನು ಅವಳೊಂದಿಗೆ ಸಂಬಂಧವನ್ನು ಕಡಿದುಕೊಂಡನು.” (ಇಬ್ನು ಹಿಬ್ಬಾನ್) ಇನ್ನೊಮ್ಮೆ ಅವರು ಹೇಳಿದರು, “ನಿಮ್ಮಲ್ಲಿ ಯಾರೂ ತನ್ನ ಮಗಳನ್ನು ನಿಂದ್ಯನೂ ಕುರೂಪಿಯೂ ಆದವನಿಗೆ ವಿವಾಹ ಮಾಡಿಕೊಡಬಾರದು. ಕಾರಣವೇನೆಂದರೆ, ನೀವು ಬಯಸುವುದನ್ನೆಲ್ಲವನ್ನೂ ಆ ಹುಡುಗಿಯೂ ಬಯಸುತ್ತಾಳೆ.” ಪ್ರವಾದಿ ಪತ್ನಿ ಆಯಿಶಾ(ರ) ಹೇಳುತ್ತಾರೆ, “ತನ್ನ ಪ್ರಿಯ ಮಗಳನ್ನು ಎಲ್ಲಿಗೆ ವಹಿಸಿಕೊಡಬೇಕೆಂದು ಪ್ರತಿಯೊಬ್ಬರೂ ಆಲೋಚಿಸಬೇಕು.”
ಪತಿ-ಪತ್ನಿ ಸಂಬಂಧ ಇಸ್ಲಾಮಿನಲ್ಲಿ
ಸ್ತ್ರೀ-ಪುರುಷ ಸಂಬಂಧವು ನಿಯಮಬದ್ಧವಾಗಿರಬೇಕೆಂದು ಇಸ್ಲಾಮಿನ ದೃಷ್ಟಿಕೋನವಾಗಿದೆ. ವಿವಾಹೇತರ ಸಂಬಂಧಗಳನ್ನು ಇಸ್ಲಾಮ್ ಬಲವಾಗಿ ವಿರೋಧಿಸುತ್ತದೆ. ಅದು ವ್ಯಕ್ತಿ, ಕುಟುಂಬ, ಸಮೂಹದ ಅವನತಿಗೆ ನೈತಿಕ ಮೌಲ್ಯಗಳ ಅಧಃಪತನಕ್ಕೆ ಕಾರಣವಾಗುವ ಮಾರಕ ರೋಗಗಳಿಗೆ ಕಾರಣವಾಗುವುದು.
ದೈಹಿಕ ಸಂಬಂಧಗಳಲ್ಲಿ ಗೌರವಾರ್ಹರೂ ಸಭ್ಯವೂ ಆಹ್ಲಾದಕರವಾದ ಮಾರ್ಗಗಳನ್ನು ಸ್ವೀಕರಿಸಬಹುದು. ಸಂಗಾತಿಗಳ ಇಷ್ಟಾ ನಿಷ್ಟಗಳನ್ನು ಪರಸ್ಪರ ಪರಿಗಣಿಸಬೇಕು. ಸ್ತ್ರೀ-ಪುರುಷ ಲೈಂಗಿಕ ಸಂಬಂಧಕ್ಕೆ ಮುನ್ನುಡಿಯಾದ ಸರಸ ಸಲ್ಲಾಪಗಳಲ್ಲಿ ಏರ್ಪಡಬೇಕೆಂದು ಇಸ್ಲಾಮ್ ತಿಳಿಸುತ್ತದೆ. ಪ್ರವಾದಿ(ಸ) ಹೇಳಿದರು, “ನಿಮ್ಮಲ್ಲಿ ಯಾರೂ ಜಾನುವಾರುಗಳಂತೆ ತನ್ನ ಪ್ರಿಯತಮೆಯನ್ನು ಸಮೀಪಿಸಬಾರದು. ಅವರ ಮಧ್ಯೆ ಓರ್ವ ದೂತನು ಇರಲಿ.” ಯಾರು ಆ ದೂತ ಎಂದು ಕೇಳಿದಾಗ ಅವರು ಹೇಳಿದರು, “ಚುಂಬನ ಮತ್ತು ಮಾತುಕತೆಗಳವು.” (ದೈಲಮಿ) ಪ್ರವಾದಿ(ಸ) ಪುನಃ ಹೇಳುತ್ತಾರೆ, “ನಿಮ್ಮಲ್ಲಿ ಯಾರಾದರೂ ತನ್ನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸುವುದಾದರೆ ಪಕ್ಷಿಗಳಂತೆ ಆಗಬಾರದು. ನಿಧಾನತೆ ತೋರಿಸುವುದು, ಸಹನೆ ಪಾಲಿಸುವುದು ಉತ್ತಮ.
ಆ ಸಂದರ್ಭದ ಪ್ರಾರ್ಥನೆಯನ್ನೂ ಪ್ರವಾದಿವರ್ಯರು ಕಲಿಸಿದ್ದಾರೆ.”
“ದೇವನ ನಾಮದಿಂದ, ಅಲ್ಲಾಹನೇ ಪಿಶಾಚಿಯಿಂದ ನೀ ನಮ್ಮನ್ನು ದೂರವಿರಿಸು. ನಮಗೆ ನೀಡುವ ಸಂತಾನಗಳಿಂದಲೂ ಪಿಶಾಚಿಯನ್ನು ದೂರವಿರಿಸು” ಈ ಪ್ರಾರ್ಥನೆಯೊಂದಿಗೆ ದಂಪತಿಯರು ಒಂದಾದರೆ ಮಕ್ಕಳಿಗೆ ಪೈಶಾಚಿಕ ತೊಂದರೆಯು ಉಂಟಾಗುವುದಿಲ್ಲ. ಪತಿ-ಪತ್ನಿಯರು ದಾಂಪತ್ಯ ರಹಸ್ಯಗಳನ್ನು ಹೊರಗೆ ಹೇಳುವುದನ್ನು ಇಸ್ಲಾಮ್ ಪ್ರಬಲವಾಗಿ ವಿರೋಧಿಸುತ್ತದೆ. ಪ್ರವಾದಿ(ಸ) ಹೇಳಿದರು, ಪರಸ್ಪರ ಮಿಲನಗೊಂಡ ಬಳಿಕ ಪತ್ನಿಯ ರಹಸ್ಯಗಳನ್ನು ಪ್ರಚುರಪಡಿಸುವ ಪುರುಷ ಪುನರುತ್ಥಾನ ದಿನ ಅಲ್ಲಾಹನ ಬಳಿ ಅತ್ಯಂತ ನಿಂದನೀಯ ಅವಸ್ಥೆಯಲ್ಲಿರುತ್ತಾನೆ.
(ಮುಸ್ಲಿಮ್, ಅಬೂದಾವೂದ್)
IslamKannada News Portal

