Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಅವರ ದೃಷ್ಟಿಯಲ್ಲಿ ಇಸ್ಲಾಮ್

ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು) ಅವರ ದೃಷ್ಟಿಯಲ್ಲಿ ಇಸ್ಲಾಮ್

– ನಾಡೋಜ ಡಾ।। ದೇ. ಜವರೇಗೌಡ (ಸಾಹಿತಿಗಳು)

ಜಗತ್ತಿನ ಮತಾಚಾರ್ಯರಲ್ಲಿ ಮುಹಮ್ಮದ್ ಪೈಗಂಬರರ ವ್ಯಕ್ತಿತ್ವವು, ಅವರು ಪ್ರಚುರ ಪಡಿಸಿದ ಇಸ್ಲಾಮ್ ಧರ್ಮವು ವಿಶಿಷ್ಟ ಮಾತ್ರವಲ್ಲ, ಮಹತ್ವಪೂರ್ಣವಾದುದೆಂದು ಮಹಾ ಪುರುಷರು ಮೆಚ್ಚಿಕೊಂಡಿದ್ದಾರೆ. ಈ ಮೆಚ್ಚುಗೆಗೆ ಮುಖ್ಯ ಕಾರಣ, ಆಚಾರ್ಯರ ಸರಳ ಜೀವನ, ಸರ್ವ ಸಮಾನತಾ ಮನೋಧರ್ಮ ಮತ್ತು ಆ ಮತದ ಸಲ್ಲಕ್ಷಣಗಳಾದ ಏಕದೇವತೋಪಾಸನೆ, ನಿರ್ಜಾತೀಯ ನಿರ್ವರ್ಗೀಯ ಭ್ರಾತೃತ್ವ ಮತ್ತು ಸಕಲ ಜೀವನ ವ್ಯವಹಾರ ನೀತಿ ಸಂಹಿತೆ.

ಅಲ್ಲಾಹ್ ಬೋಧಿಸಿ, ಅವನ ದೂತ ಪ್ರವಾದಿ ಕಿವಿಯಲ್ಲಿಟ್ಟುಕೊಂಡು, ಕಿವಿಯಿಂದ ಕಿವಿಗೆ (ಶ್ರುತಿಯ ಮೂಲಕ) ಹರಿದ ಗ್ರಂಥವೇ ಕುರ್‍ಆನ್. ಅದು ಬೋಧಿಸಿದ ಧರ್ಮವೇ ಇಸ್ಲಾಮ್. ಇಸ್ಲಾಮ್ ಅನುಸರಿಸಿದವರೆಲ್ಲರೂ ಮುಸ್ಲಿಮರು. ಅಂದರೆ ಅಲ್ಲಾಹನಿಗೆ ಶರಣಾದವರು. ‘ಲಾ ಇಲಾಹ ಇಲ್ಲಲ್ಲಾಹು’ (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ) ‘ಅಲ್ಲಾಹುಮ್ಮ ಸಲ್ಲಿ ಅಲಾ ಮುಹಮ್ಮದಿನ್’ (ಓ ಅಲ್ಲಾಹ್! ಮುಹಮ್ಮದ್‍ರ ಮೇಲೆ ಕರುಣೆ ತೋರು) ‘ಸಲ್ಲಲ್ಲಾಹು ಅಲೈಹಿವ ಸಲ್ಲಮ್’ (ಅವರ ಮೇಲೆ ಅಲ್ಲಾಹನ ಅನುಗ್ರಹ ಮತ್ತು ಶಾಂತಿಯಿರಲಿ!) ಇಂಥ ಮಾತುಗಳು ಧ್ವನಿಯುಕ್ತ, ಅರ್ಥದೀಪ್ತ, ದಿವ್ಯಸುಂದರ.

ಮೂರ್ತಿಪೂಜೆ, ಬಹುದೇವಾರಾಧನೆ, ವ್ಯಕ್ತಿ ಪೂಜೆಗಳನ್ನು ಇಸ್ಲಾಮ್ ವಿರೋಧಿಸುತ್ತದೆ ಮತ್ತು ವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವಗಳನ್ನು ಒಪ್ಪುತ್ತದೆ. ಏಕದೇವತಾರಾಧನೆ (ತೌಹೀದ್), ದಾನ (ಝಕಾತ್), ಪ್ರಾರ್ಥನೆ (ನಮಾಝ್), ತೀರ್ಥಯಾತ್ರೆ (ಹಜ್ಜ್) ಮತ್ತು ಉಪವಾಸ ಇಸ್ಲಾಮಿನ ತಳಹದಿಗಳೆಂದು ನಂಬಲಾಗಿದೆ. ಜಗತ್ತಿನ ಯಾವ ಜನಾಂಗವಾದರೂ ಒಪ್ಪುವಂಥವು ಇವು. ಧರ್ಮದ ವಿಷಯದಲ್ಲಿ ಯಾವುದೇ ಒತ್ತಾಯ ಬಲಾತ್ಕಾರಗಳಿಲ್ಲ (ಕುರ್‍ಆನ್: 2: 256) ನಿಮಗೆ ನಿಮ್ಮ ಧರ್ಮ, ನನಗೆ ನನ್ನ ಧರ್ಮ. (109:6) ಈ ಸೂತ್ರಗಳನ್ನು ಗಮನಿಸುವಾಗ ‘ಜಿಹಾದ್’ ಬಗ್ಗೆಯೂ ಆಕ್ಷೇಪವೆತ್ತುವಂತಿಲ್ಲ. ಕುರ್‍ಆನ್ ಜತೆಗೆ ಹದೀಸ್, ಸೇರಿದರೆ ಇಸ್ಲಾಮ್ ಧರ್ಮ ಪೂರ್ಣವಾಗುತ್ತದೆ. ಹದೀಸ್ ಪ್ರವಾದಿಗಳ ಅಂತರ್ವಾಣಿ, ಜನಜೀವನಕ್ಕನ್ವಯವಾಗುವ, ಅವರ ನಡಾವಳಿಯನ್ನೊಳಗೊಂಡ ವಚನಗಳು. ಅವು ಮುಸ್ಲಿಮರಿಗೆ ಮಾತ್ರ ಅನ್ವಯವಾಗುವ ಬೋಧೆಯಲ್ಲ. ಇಡೀ ವಿಶ್ವವೇ ಅನುಸರಿಸಬಹುದಾದ ಬೋಧಾಮೃತ. ಯಾವ ದೃಷ್ಟಿಯಿಂದ ನೋಡಿದರೂ ಮುಹಮ್ಮದ್ ಜಗತ್ತು ಗೌರವಿಸಬೇಕಾದ ಪವಿತ್ರ ವ್ಯಕ್ತಿ. ಅವರ ಉಪದೇಶ ಸಕಲರೂ ಅನುಸರಿಸಬೇಕಾದ ಶಾಶ್ವತ ಮೌಲ್ಯ, ಇಸ್ಲಾಮ್ ಜಗತ್ತಿನ ಶ್ರೇಷ್ಠ ಧರ್ಮವೆಂದು ಸ್ಪಷ್ಟಪಡಿಸಬಹುದಾಗಿದೆ.

SHARE THIS POST VIA

About editor

Check Also

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು …

Leave a Reply

Your email address will not be published. Required fields are marked *