ಅಪ್ಪನನ್ನು ಕಳಕೊಳ್ಳುವುದೆಂದರೆ ಯಾವುದೇ ಮಕ್ಕಳ ಪಾಲಿಗೆ ಆಲದಮರ ಉರುಳಿದಂತೆ. ಅಪ್ಪನನ್ನು ಸಾಮಾನ್ಯವಾಗಿ ಮಕ್ಕಳು ನೋಡುವುದು ಸಂಜೆ ಅಥವಾ ಕತ್ತಲಾದ ಮೇಲೆ. ಅದರಲ್ಲೂ ಕೂಲಿ ಕಾರ್ಮಿಕ ಅಪ್ಪ ಸಂಜೆ ಮನೆ ಪ್ರವೇಶಿಸುವಾಗ ದಣಿವಿನ ಪರ್ವತವನ್ನೇ ಹೊತ್ತು ಕೊಂಡಿರುತ್ತಾನೆ. ಮಕ್ಕಳ ಜೊತೆ ಧಾರಾಳವಾಗಿ ಮಾತಾಡುವಷ್ಟು ಅನೇಕ ಬಾರಿ ಆತನ ದಣಿದ ದೇಹ ಬಿಡುವುದೂ ಇಲ್ಲ. ಬಿಟ್ಟರೂ, ಆತ ತನ್ನನ್ನು ಹೊರತುಪಡಿಸಿ ಇತರೆಲ್ಲ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದೇ ಹೆಚ್ಚು ಮತ್ತು ತನ್ನ ಕಷ್ಟಗಳನ್ನು ಮಕ್ಕಳ ಪಾಲಿಗೆ ಅಡಗಿಸಿಡುವುದೇ ಹೆಚ್ಚು. ಆತ ಮಕ್ಕಳಲ್ಲಿ ಸುಖಗಳ ಬಗ್ಗೆ ಮಾತನಾಡುತ್ತಾನೆ. ಸುಖದ ಕನಸು ಬಿತ್ತುತ್ತಾನೆ ಮತ್ತು ತಾನು ಅದಕ್ಕಾಗಿ ದಿನಾ ಕರಗುತ್ತಲೇ ಇರುತ್ತಾನೆ. ಹೀಗೆ ಕರಗಿ ಕರಗಿ ಒಂದು ದಿನ ಆತ ಇಲ್ಲವಾದಾಗ ಮಕ್ಕಳಿಗೆ ಅಪ್ಪ ಏನೆಂದು ಅರ್ಥವಾಗುತ್ತದೆ. ಅನಾಥ ಭಾವ ಕಾಡುತ್ತದೆ..
ಅಸ್ಸಾಂನ ಕೂಲಿ ಕಾರ್ಮಿಕ ಮುಈನುಲ್ ಹಕ್ ನ ಮೂವರು ಮಕ್ಕಳ ಮುಂದಿನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಎಸ್ಐ ವಹಿಸಿಕೊಂಡಿದೆ. ಎಸ್ ಐ ಓ ನ ರಾಷ್ಟ್ರೀಯ ಅಧ್ಯಕ್ಷ ಸಲ್ಮಾನ್ ಅಹ್ಮದ್ ರು ಹಕ್ ನ ಮನೆಗೆ ಭೇಟಿ ಕೊಟ್ಟಿದ್ದಾರೆ. ಮಕ್ಕಳಲ್ಲಿ ಧೈರ್ಯ ತುಂಬಿದ್ದಾರೆ. ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಆ ಮಕ್ಕಳು ಬೆಳೆಯಲಿ. ಜಗವೇ ಮೆಚ್ಚುವ ಫೋಟೋಗ್ರಾಫರ್ ಮತ್ತು ದೇಶವೇ ಹೆಮ್ಮೆ ಪಡುವ ಪೊಲೀಸ್ ಅಧಿಕಾರಿಗಳಾಗಿ ಅವರು ಮಾರ್ಪಡಲಿ. ಇದುವೇ ಆ ಕ್ರೌರ್ಯಕ್ಕೆ ಮಾಡುವ ಅತ್ಯುತ್ತಮ ಮುಯ್ಯಿ.
– ಏ ಕೆ ಕುಕ್ಕಿಲ
IslamKannada News Portal
