Home / ಪ್ರಶ್ನೋತ್ತರ / ಆತ್ಮಸಾಕ್ಷಿ ಮತ್ತು ದೇವಸಂದೇಶ?

ಆತ್ಮಸಾಕ್ಷಿ ಮತ್ತು ದೇವಸಂದೇಶ?

ಮಾನವನ ಮಾರ್ಗದರ್ಶನಕ್ಕೆ ದಿವ್ಯ ಸಂದೇಶ ಅನಿವಾರ್ಯವೆಂಬ ವಾದ ಸರಿಯೇ? ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯಂತೆ ಬಾಳಿದರೆ ಸಾಕಾಗದೇ?

ಮನಸ್ಸಿನ ಇಚ್ಛೆ ಎಂಬುದು ಒಂದು ಮಹತ್ತರವಾದ ಸಿದ್ಧಿಯಾಗಿದೆ. ಹಾಗಾದರೆ ಈ ಆತ್ಮಸಾಕ್ಷಿ ಎಂದರೇನು? ಎಲ್ಲರ ಆತ್ಮಸಾಕ್ಷಿ ಒಂದೇ ರೀತಿ ಇರುವುದೇ? ಅದು ದೋಷಮುಕ್ತವೆಂದು ಎಲ್ಲರಿಗೂ ನಂಬಿಕೆಯಿದೆಯೇ? ಇವೆಲ್ಲಾ ಗಮನಿಸಬೇಕಾದ ಪ್ರಶ್ನೆಗಳಾಗಿವೆ. ನಾವು ಹುಟ್ಟಿದ ಕುಟುಂಬ ಹಾಗೂ ಬೆಳೆಯುವ ವಾತಾವರಣವು ನಮ್ಮ ಆತ್ಮಸಾಕ್ಷಿಯನ್ನು ಗಾಢವಾಗಿ ಸ್ವಾಧೀನಪಡಿಸುತ್ತದೆ. ದೇಶ, ವಂಶ, ಕಾಲ, ಜಾತಿ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಕೂಡಾ ಪ್ರಭಾವ ಬೀರುತ್ತದೆ.

ಎಲ್ಲರ ವಿಚಾರಗಳು, ಶೈಲಿಯೂ ಒಂದೇ ತೆರನಾಗಿಲ್ಲ, ಮನುಷ್ಯರು ವಿಭಿನ್ನ ಪ್ರಕೃತಿಯವರೂ, ಸ್ವಭಾವವುಳ್ಳವರೂ ಆಗಿದ್ದಾರೆ. ಅವರ ಆಶೆ, ಅಭಿಲಾಷೆಗಳು ವಿಭಿನ್ನವಾಗಿದೆ. ವೈಜ್ಞಾನಿಕ ಹಾಗೂ ಯುಕ್ತಿಪೂರ್ಣ ನಿಲುವುಗಳಲ್ಲೂ ಅಂತರವಿದೆ. ಎಲ್ಲರೂ ತಮ್ಮದೇ ರೀತಿಯಲ್ಲಿ ತಮ್ಮದೇ ಯೋಚನೆಯಂತೆ ವಿಷಯಗಳನ್ನು ಗಮನಿಸುತ್ತಾರೆ. ಎಲ್ಲರ ಚಿಂತನೆಯೂ ಒಂದೇ ರೀತಿಯಾಗಲು ಸಾಧ್ಯವಿಲ್ಲ, ಅವರ ಗ್ರಹಿಕೆಯಲ್ಲಿ ವ್ಯತ್ಯಾಸ ಅನಿವಾರ್ಯ.

ಸೌಂದರ್ಯವು ಅಪೇಕ್ಷಣೀಯವಾಗಿದೆ. ಆದರೆ ವ್ಯಕ್ತಿಗಳ ಆಸ್ವಾದನೆ ರೀತಿಗಳು ವಿಭಿನ್ನವಾಗಿರುತ್ತದೆ. ಹಲವರಿಗೆ ಸುಂದರವಾಗಿ ಗೋಚರಿಸಿದ್ದು ಇನ್ನು ಕೆಲವರಿಗೆ ಕುರೂಪವಾಗಿರುತ್ತದೆ. ಮಾನವರ ಅಭಿರುಚಿಗಳಲ್ಲಿ ಬಹಳ ಅಂತರಗಳಿರುತ್ತದೆ. ಕೆಲವರು ಇಷ್ಟಪಡುವ ವಸ್ತುಗಳು ಇನ್ನು ಕೆಲವರಿಗೆ ಜಿಗುಪ್ಸೆ ಮೂಡಿಸುತ್ತದೆ. ಹಾಗಾದರೆ ಒಳಿತು -ಕೆಡುಕುಗಳು ಇದೇ ರೀತಿಯೇ? ವ್ಯಕ್ತಿಗಳ ಅಭಿರುಚಿಗೆ ತಕ್ಕಂತೆ ಅವುಗಳಲ್ಲಿ ವ್ಯತ್ಯಾಸವಿದೆಯೇ? ಖಂಡಿತ ಅದು ಅಸಾಧ್ಯವಲ್ಲವೆ? ಒಳಿತು ಎಂದೆಂದೂ ಒಳಿತೇ ಆಗಿರುತ್ತದೆ. ಕೆಡುಕು ಕೆಡುಕೇ ಆಗಿರುತ್ತದೆ. ಇದನ್ನು ಮಾನವರ ಅಭಿರುಚಿಗೆ ಬಿಟ್ಟರೆ ಮೌಲ್ಯಪ್ರಜ್ಞೆಯಿಲ್ಲದಂತಾಗುವುದು. ಒಳಿತು-ಕೆಡುಕು, ಸರಿ-ತಪ್ಪೆಂಬ ಭಾವನೆ ಮಾಯವಾಗುತ್ತದೆ. ಹೀಗೆ ಸಮಾಜ ಅರಾಜಕತೆಯತ್ತ ಸಾಗುತ್ತದೆ.

ಒಳಿತು ಕೆಡುಕುಗಳು ಸಾಮಾಜಿಕ, ಆರ್ಥಿಕ ಪರಿಸ್ಥಿತಿಗನುಗುಣವಾಗಿ ಬದಲಾಗುವುದಿಲ್ಲ. ಒಳಿತೆಂದರೆ ಕೇವಲ ಒಂದು ನಾಮ ಮಾತ್ರ ಎಂದು ಹೇಳಿದ ನಿಕೋಲೊ ಮಾಕ್ಯವಲ್ಲಿಯವರ ದೃಷ್ಟಿಕೋನ ಹಾಗೂ ಒಳಿತೆಂಬುದು ಒಂದು ಕಟ್ಟುಕತೆಯಂಬ ಝಾನ್ ಪೋರ್ ಸಾರ್ ತ್ರೆಯವರ ವಾದಗಳಲ್ಲೂ ಇದನ್ನೇ ಅನಾವರಣ ಗೊಳಿಸುತ್ತದೆ.

ಒಳಿತು-ಕೆಡುಕುಗಳು, ಕಾಲ-ದೇಶ-ಭಾಷೆ, ವರ್ಗ, ವರ್ಣ, ಜಾತಿ, ಲಿಂಗಗಳನ್ನು ಮೀರಿ ಸುಭದ್ರ ಹಾಗೂ ಶಾಶ್ವತವಾಗಿರಬೇಕು. ಅದು ಮನುಷ್ಯನ ಆತ್ಮಸಾಕ್ಷಿಗೆ ಅಥವಾ ಆರ್ಥಿಕ, ದೇಶೀಯ ಹಿತಾಸಕ್ತಿಗಳಿಗೆ ಅನುಗುಣವಾಗಿರಬೇಕು ಮತ್ತು ಸಮಕಾಲೀನ ಬೇಡಿಕೆಗಳು ಅವನ್ನು ನಿಶ್ಚಯಿಸುತ್ತದೆಯೆಂದಾದರೆ ಅದು ಅಸಾಧ್ಯ. ಆದ್ದರಿಂದ ಒಳಿತು-ಕೆಡುಕು, ನ್ಯಾಯ ಅನ್ಯಾಯಗಳನ್ನು ಮನುಷ್ಯನ ಆತ್ಮಸಾಕ್ಷಿಗೆ ಬಿಟ್ಟರೆ ಅದು ಬುದ್ಧಿವಂತಿಕೆಯಲ್ಲ, ಮನುಷ್ಯನ ಆತ್ಮಸಾಕ್ಷಿಯಲ್ಲಿ ದೌರ್ಬಲ್ಯವಿಲ್ಲವೆಂದು ನಂಬಲು ಸಾಧ್ಯವಿಲ್ಲ. ಆದ್ದರಿಂದ ಮನುಷ್ಯ ದೇಹೇಚ್ಛೆಯ ಗುಲಾಮನಾಗಿ ಬಿಡುತ್ತಾನೆ.

ಒಳಿತು-ಕೆಡುಕುಗಳನ್ನು ಎಲ್ಲಾ ಕಾಲದ, ದೇಶದ ಹಾಗೂ ಸರ್ವ ಮನುಷ್ಯರ ಸೃಷ್ಟಿಕರ್ತನಾದ ದೇವನೇ ನಿರ್ಧರಿಸಬೇಕು. ಆತ ಅದನ್ನು ಬಹಳ ಸ್ಪಷ್ಟವಾಗಿ, ನಿಸ್ಪಕ್ಷಪಾತವಾಗಿ ನಿರ್ಣಯಿಸಿದ್ದಾನೆ. ಆದ್ದರಿಂದ ಒಳಿತು-ಕೆಡುಕು, ಸರಿ-ತಪ್ಪು ದೇವ ನಿಶ್ಚಿತವಾಗಿದೆ. ಅದು ಕಾಲ ಹಾಗೂ ದೇಶಗಳನ್ನು ಮೀರಿ ನಿಂತಿದೆ. ಮಾನವರಿಗೆ ಅದನ್ನು ತಿಳಿಯಲು ಇರುವ ಏಕೈಕ ಮಾರ್ಗ ದೇವಸಂದೇಶವಾಹಕರ ದಿವ್ಯಬೋಧನೆಗಳಾಗಿವೆ.

ನಾನು ಯಾರು? ಎಲ್ಲಿಂದ ಬಂದೆ? ಎಲ್ಲಿ ಹೋಗಬೇಕಾಗಿದೆ? ಜೀವನವೆಂದರೇನು? ಅದರ ಉದ್ದೇಶವೇನು? ಅದು ಯಾವ ರೀತಿಯಿರಬೇಕು? ಮೊದಲಾದ ವಿಷಯಗಳನ್ನು ದಿವ್ಯಸಂದೇಶದ ಹೊರತು ಯಾರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ತತ್ವಜ್ಞಾನಿಗಳು ಹಾಗೂ ಸಂಶೋಧಕರು ಕೂಡ ಮನುಷ್ಯರ ಕುರಿತು ಗೊಂದಲದಲ್ಲೇ ಇದ್ದಾರೆ. ಏಕೆಂದರೆ ಕೆಲವು ಬಹಿರಂಗವಾದ ವಿಷಯಗಳಿಂದ ಮಾತ್ರ ವಿಷಯಗಳನ್ನು ಗ್ರಹಿಸಲು ಅವರಿಗೆ ಸಾಧ್ಯವಾಗುವುದು. ಮನುಷ್ಯರ ಕುರಿತು ಹೆಚ್ಚಿನ ವಿಷಯಗಳು ಇಂದಿಗೂ ಅಜ್ಞಾತವಾಗಿಯೇ ಉಳಿದಿದೆ. ಮನುಷ್ಯನಿಗೆ ಸೀಮಿತ ಬುದ್ಧಿಸಾಮರ್ಥ್ಯವಿರುವುದರಿಂದ ಸಂಶೋಧನೆಗಳು ಇನ್ನೂ ಕೊನೆಗೊಂಡಿಲ್ಲ, ವಿಜ್ಞಾನಿಗಳು ಹಾಗೂ ಸಂಶೋಧಕರು ಮನುಷ್ಯರ ಕುರಿತು ಹೊಸ ಹೊಸ ವಿಚಾರಗಳು ತಿಳಿದು ಬಂದಂತೆ ತಮ್ಮ ಅಜ್ಞಾನದ ಆಳವನ್ನು ತಿಳಿದುಕೊಳ್ಳುವುದು ವಾಡಿಕೆ. ಚಾರ್ಲ್ಸ್ ಡಾರ್ವಿನ್, ಸಿಗ್‌ಮಂಡ್ ಫ್ರಾಯ್ಡ್ ಹೇಗಲ್, ಮಾರ್ಕ್ಸ್…. ಮೊದಲಾದವರು ಮನುಷ್ಯನನ್ನು ಬೇರೆ ಬೇರೆ ರೀತಿಯಿಂದ ಅರ್ಥಮಾಡಿಕೊಂಡರು. ಕೆಲವರು ತಮ್ಮ ಸಂಶೋಧನೆಯಲ್ಲಿ ತಮ್ಮ ಎಲ್ಲಾ ಗಮನವನ್ನೂ ದೇಹಪ್ರಕೃತಿಯಲ್ಲೂ ರೂಪಭಾವಗಳಲ್ಲೂ ಕೇಂದ್ರೀಕರಿಸಿದರು. ಆದ್ದರಿಂದ ದೇಹವನ್ನು ಕೇಂದ್ರೀಕರಿಸಿ ಕೆಲವು ಅಭಿಪ್ರಾಯಗಳಿಗೆ ತಲುಪಿದರು. ಇನ್ನು ಕೆಲವರು ಉದ್ಯೋಗದ ಪರಿಣಾಮಕ್ಕೆ ವಿಧೇಯನಾದ ಪ್ರಾಣಿಯಂತೆ ಕಂಡುದು ಮತ್ತು ಕೆಲವು ಸಂಶೋಧಕರ ಗಮನ ಅವರ ಹೊಟ್ಟೆಯ ಕಡೆಗೆ ನೆಟ್ಟಿತು. ಅವರು ಅದೇ ರೀತಿಯ ಸಂಶೋಧನೆಯಲ್ಲಿ ನಿರತರಾದರು.
ಎಲ್ಲವನ್ನೂ ಅದರೊಂದಿಗೆ ಜೋಡಿಸಿದರು. ಹೊಟ್ಟೆಯೇ ಪ್ರಧಾನವೆಂದು ವಾದಿಸಿದರು. ಅದೇ ವಿಚಾರವನ್ನು ಹಿಗ್ಗಿಸಿದರು. ಹಸಿವೆಯೇ ಎಲ್ಲಾ ಸಮಸ್ಯೆಗಳ ಮೂಲ ಎಂದರು. ಅದು ನಿವಾರಣೆಯಾದರೆ ಎಲ್ಲಾ ಸರಿಯಾಗುತ್ತದೆಂದು ವಾದಿಸಿದರು. ಲೈಂಗಿಕತಯೇ ಮನುಷ್ಯನ ಮೊದಲ ಪ್ರಾಶಸ್ಯವೆಂದು ಕೆಲವರು ನಂಬಿದರು. ಹೀಗೆ ನಮಗೆ ಕಾಣುವ, ತೋರುವ, ಕೆಲವು ವಿಚಾರಗಳೊಂದಿಗೆ ಜೋಡಿಸಿ ಅದಕ್ಕೆ ಸೀಮಿತಗೊಳಿಸಿದರು. ಮನುಷ್ಯ ಜೀವನದ ಎಲ್ಲಾ ವಿಷಯಗಳು ಅಂಗಕ್ಕೆ ಸಂಬಂಧಿಸಿದ್ದೆಂದು ಘೋಷಿಸಿದರು.ಲೈಂಗಿಕ ನಿಯಂತ್ರಣವನ್ನು ತೆಗೆದು ಹಾಕಿದರೆ ಎಲ್ಲವೂ ಸರಿಯಾಗುತ್ತದೆಂಬ ನಿಲುವಿಗೆ ಕೆಲವರು ತಲುಪಿದರು. ಇನ್ನು ಕೆಲವರು ಆಧ್ಯಾತ್ಮಕತೆಗೆ ಹೆಚ್ಚಿನ ಮಹತ್ವ ನೀಡಿದರು. ದೇಹ ಮತ್ತು ಅದರ ಅಗತ್ಯಗಳನ್ನು ನಿರ್ಲಕ್ಷಿಸಿದರು. ಆದ್ದರಿಂದಲೇ ದಿವ್ಯ ಸಂದೇಶವನ್ನು ಅವಲಂಬಿಸಿದ ಮಾನವನನ್ನು ಅರಿಯಲು ಯತ್ನಿಸಿದರು. ಆನೆ ಹೇಗಿದೆಯೆಂದು ತಿಳಿಯಲು ಪ್ರಯತ್ನಿಸಿದ ಕುರುಡರಂತೆ ಆಗಿದ್ದಾರೆ. ಅಪೂರ್ಣವೂ, ಅಸಂಬಂಧವೂ, ಜಟಿಲವೂ ಆದ ನಿಲುವಿಗೆ ತಲುಪಲು ಮಾತ್ರ ಅವರಿಗೆ ಸಾಧ್ಯವಾಯಿತು.

ಮನುಷ್ಯನನ್ನು ಅರಿಯದವರಿಗೆ ಅವನು ಹೇಗೆ ಜೀವಿಸಬೇಕೆಂದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ತಾನು ಯಾವ ರೀತಿ ಬದುಕು ಸಾಗಿಸಬೇಕೆಂದು ಗ್ರಹಿಸಲು ಅಗತ್ಯವಾದ ಪ್ರಾಥಮಿಕ ಜ್ಞಾನವಾದರೂ ಇರಬೇಕು. ದಿವ್ಯ ಸಂದೇಶದಿಂದ ಮಾತ್ರ ಅದು ಲಭಿಸಲು ಸಾಧ್ಯ. ಮನುಷ್ಯನಿಗೆ ಆತನ ಅಸ್ತಿತ್ವ, ಗುರಿ, ಉದ್ದೇಶ ಹಾಗೂ ಆಗಮನದ ಕುರಿತು ಧರ್ಮವೇ ಕಲಿಸಿಕೊಟ್ಟಿದೆ. ಜೀವನದ ಮಾರ್ಗವನ್ನು ಅದುವೇ ನಿರ್ಣಯಿಸಿದೆ. ದಿವ್ಯ ಸಂದೇಶವನ್ನು ಅವಲಂಬಿಸದವರಿಗೆ ಮರಣಾನಂತರ ಏನು? ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರಿಗೆ ಜೀವನವೆಂಬದು ಹುಟ್ಟಿನಿಂದ ಆರಂಭವಾಗಿ ಮರಣದೊಂದಿಗೆ ಕೊನೆಗೊಳ್ಳುವ ಒಂದು ಪ್ರಕ್ರಿಯೆ ಮಾತ್ರ. ಇದು ಜೀವನದ ದೃಷ್ಟಿಕೋನ ಹಾಗೂ ಉದ್ದೇಶದ ಮೇಲೆ ಪ್ರಬಲ ಪರಿಣಾಮ ಬೀರುತ್ತದೆ. ಜೀವನದ ಎಲ್ಲಾ ರಂಗಗಳನ್ನು ಸ್ವಾಧೀನ ಪಡಿಸುತ್ತದೆ. ಆದರೆ ದೇವಸಂದೇಶವು ಇನ್ನೊಂದು ಲೋಕದ ಕುರಿತು ಮಾತನಾಡುತ್ತದೆ. ಮರಣದ ಬಳಿಕದ ಜೀವನವೇ ಮುಖ್ಯ ಎಂದು ಹೇಳುತ್ತದೆ. ಈ ಲೋಕವು ಕರ್ಮಭೂಮಿಯೆಂದೂ, ವಿಚಾರಣೆ, ನ್ಯಾಯ ತೀರ್ಮಾನ ಹಾಗೂ ಪ್ರತಿಫಲ ಪರಲೋಕದಲ್ಲಿ ದೊರೆಯುತ್ತದೆಂದೂ ಹೇಳುತ್ತದೆ. ಇಂತಹ ವಿಶ್ವಾಸ ಇಲ್ಲದಿದ್ದರೆ ಭೂಮಿಯಲ್ಲಿ ಮಾಡುವ ಸತ್ಕರ್ಮಗಳೆಲ್ಲ ನಿರರ್ಥಕವಾಗಿ ಬಿಡುತ್ತದೆ. ಕರ್ಮಗಳಿಗೆ ದೊರೆಯುವ ಲೌಕಿಕ ಪ್ರತಿಫಲಗಳನ್ನು ನೋಡಿ ತೀರ್ಮಾನಿಸುವುದು ಸರಿಯಾಗುವುದಿಲ್ಲ. ನದಿಗೆ ಬಿದ್ದ ಮಗುವನ್ನು ರಕ್ಷಿಸಲು ಹೊಳೆಗೆ ಧುಮುಕಿದ ವ್ಯಕ್ತಿ ಶಕ್ತಿ ಮೀರಿ ಪ್ರಯತ್ನಿಸಿದರೂ ಆತನ ಶ್ರಮ ವಿಫಲವಾಯಿತೆಂದು ಅರ್ಥವಲ್ಲ. ನಮಗೆ ಅದು ಸೋಲಿನಂತೆ ಭಾಸವಾಗಬಹುದು. ಆದರೆ ಅದು ಉದಾತ್ತ ಮೌಲ್ಯದಿಂದ ಕೂಡಿದೆ. ಮಗುವನ್ನು ರಕ್ಷಿಸುವಾಗ ನೀರಿನ ಸುಳಿಗೆ ಸಿಲುಕಿ ಆತನು ನೀರುಪಾಲಾದರೆ ನಮಗೆ ಅದು ಒಬ್ಬನ ಬದಲಿಗೆ ಇಬ್ಬರ ಮರಣವಾಯಿತೆಂದು ತೋರುತ್ತದೆ. ಇದು ಲೌಕಿಕ ದೃಷ್ಟಿಯಲ್ಲಿ ದೊಡ್ಡ ನಷ್ಟವಾಗಿದೆ. ಆದರೆ ವಾಸ್ತವದಲ್ಲಿ ಅದು ಶೌರ್ಯದ ಪರಕಾಷ್ಟೆಯ ವೀರ ಮರಣವಾಗಿದೆ. ಮರಣದಿಂದ ಎಲ್ಲವೂ ಕೊನೆಗೊಳ್ಳುವುದಾದರೆ ಆದರ್ಶಕ್ಕಾಗಿ ವೀರ ಮರಣಹೊಂದಿದವರ ಹೋರಾಟ ಅರ್ಥಶೂನ್ಯವೆನಿಸುತ್ತದೆ. ನ್ಯಾಯದ ಹೋರಾಟದಲ್ಲಿ ವಿಫಲನಾದ ವ್ಯಕ್ತಿಗೆ ಸಿಗುವ ಪ್ರತಿಫಲಕ್ಕೆ ಈ ಲೋಕದೊಂದಿಗೆ ಸಂಬಂಧವಿಲ್ಲ.

ಮರಣದಿಂದ ಜೀವನ ಕೊನೆಗೊಳ್ಳುವುದಾದರೆ ಅಂತಹ ತ್ಯಾಗ ವ್ಯರ್ಥವಾಗಿದೆ ಅಥವಾ ನಾವದನ್ನು ಪ್ರತಿಫಲಾರ್ಹವೆಂದು ಹೇಳವುದಾದರೆ ಅದು ಪರಲೋಕ ಪ್ರಜ್ಞೆಯ ಫಲವಾಗಿದೆ. ಸತ್ಯ, ನ್ಯಾಯ ಮಾರ್ಗದಲ್ಲಿ ಸ್ಥಿರವಾಗಿ ನಿಂತು ಹೋರಾಡಿ ಸೋತ ವೀರನಾಯಕನನ್ನು ಬೆಂಬಲಿಸುವುದು, ಸಮರ್ಥಿಸುವುದು ಅಥವಾ ಹೊಗಳುವುದು ಪರಲೋಕದ ಕುರಿತ ಯಾವುದೋ ನಂಬಿಕೆಯ ಫಲವಾಗಿದೆ. ಘಟನಾವಳಿಗಳ ಕುರಿತ ನಮ್ಮ ಸ್ವಂತ ಅಭಿಪ್ರಾಯವೇ ನಮ್ಮನ್ನು ಸ್ವಾಧೀನಗೊಳಿಸಿರುತ್ತದೆ. ದಿವ್ಯ ಸಂದೇಶದ ಸ್ವಾಧೀನತೆಯಿಂದ ಮುಕ್ತವಾದ ಮನಃ ಸಾಕ್ಷಿಗೆ ತ್ಯಾಗದ ಬೆಲೆಯ ಅರ್ಥವಾಗುವುದಿಲ್ಲ. ಗಣಿತ ಶಾಸ್ತ್ರದ ಲಾಭ-ನಷ್ಟಗಳಿಗೆ ಹೊರತಾಗಿ ಬೇರೆ ತೀರ್ಮಾನಕ್ಕೆ ಬರಲು ಅವರಿಗೆ ಸಾಧ್ಯವಾಗುವುದಿಲ್ಲ.

ದಿವ್ಯ ಸಂದೇಶದ ಅಭಾವದಿಂದ ಮನುಷ್ಯನಿಗೆ ತನ್ನ ಕುರಿತು ಮಾತ್ರವಲ್ಲ ತನ್ನ ಸೃಷ್ಠಿಕರ್ತನ ಕುರಿತೂ ಅರಿವಾಗುವುದಿಲ್ಲ. ಅವನು ತಂದೆಯೊಂದಿಗೆ ಬದುಕು ಸಾಗಿಸಿದರೂ ಸ್ವಂತ ತಂದೆಯನ್ನು ಅರ್ಥಮಾಡಿಕೊಳ್ಳದ ಮಗನಿಗಿಂತ ಅನೇಕ ಪಟ್ಟು ದೌರ್ಭಾಗ್ಯವಂತನಾಗಿದ್ದಾನೆ. ದೇವನ ಕುರಿತ ಅಜ್ಞಾನವು ಅವನ ಜೀವನದ ಉದ್ದೇಶದ ಅಜ್ಞಾನಕ್ಕೂ ಈ ಮೂಲಕ ಅವನ ನಾಶಕ್ಕೂ ಕಾರಣವಾಗುತ್ತದೆ.

ಜಗತ್ತು ಹೊಸ ಹೊಸ ಸಂಶೋಧನೆಗಳಿಂದ ಆಧುನಿಕ ತಂತ್ರಜ್ಞಾನದತ್ತ ದಾಪುಗಾಲು ಹಾಕುತ್ತಿರುವಾಗಲೂ, ಮಾನವ ತನ್ನ ಹಾಗೂ ತಾನು ಬದುಕುತ್ತಿರುವ ಈ ಲೋಕದ ಕುರಿತು ಅಜ್ಞನಾಗಿದ್ದಾನೆ. ಪ್ರತಿಯೊಂದು ಸಂಶೋಧನೆಗಳಿಂದ ಲಭಿಸುವ ಹೊಸ ತಿಳುವಳಿಕೆಯು ತನ್ನ ಅಜ್ಞಾನದ ಆಳವನ್ನು ಅರಿಯಲು ಸಹಾಯಕವಾಗುತ್ತದೆ. ತನ್ನನ್ನು ತನ್ನ ನಿವಾಸವಾದ ಈ ಲೋಕದ ಕುರಿತು ತಿಳಿಯದೆ ಇಲ್ಲಿ ಸ್ಪಷ್ಟ ಶಾಂತಿಯುತ ಜೀವನ ಸಾಧ್ಯವಿಲ್ಲ. ಆದ್ದರಿಂದ ನಮ್ಮ ಆತ್ಮಸಾಕ್ಷಿಗೆ ಜೀವನದ ಮಾರ್ಗದರ್ಶಕವಾಗಲು ಅಸಾಧ್ಯ.

ಸ್ವಾರ್ಥದಿಂದ ಮುಕ್ತನಾದವನು ಯಾರೂ ಇಲ್ಲ, ಸಮಾಜದಲ್ಲಿ ಕಾನೂನು ವ್ಯವಸ್ಥೆಗಳು, ನ್ಯಾಯನೀತಿ, ಶಿಸ್ತುಗಳನ್ನು ನಿರ್ಧರಿಸುವುದು ಪುರಾವೆಯೆಂದಾದರೆ, ಆತನ ಇಚ್ಛೆಗೆ ಹೆಚ್ಚು ಪ್ರಾಧಾನ್ಯತೆ ಲಭಿಸುತ್ತದೆ. ಸ್ತ್ರೀಯರೆಂದಾದರೆ ಅದಕ್ಕೆ ವಿರುದ್ಧವಾಗಿರುತ್ತದೆ. ಕರಿಯ ವರ್ಣದವರು ನಿರ್ಮಿಸುವ ಕಾನೂನು ನಿಯಮಗಳು ಅವರಿಗೆ ಅನುಕೂಲವಾಗಿರುತ್ತದೆ. ಬಿಳಿಯರು ಅವರ ಹಿತಾಸಕ್ತಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುತ್ತಾರೆ. ಯಜಮಾನ-ಕಾರ್ಮಿಕರ ವಿಚಾರವು ಇದಕ್ಕಿಂತ ಭಿನ್ನವಲ್ಲ, ಪ್ರತಿಯೊಂದು ದೇಶದ, ರಾಜ್ಯದ ಜನತೆಯೂ ತಮ್ಮಿಚ್ಚೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ದೇಶೀಯ ವಾದದ ತಳಹದಿಯೂ ಅದೇ ಆಗಿದೆ. ನಿಕೋಲೊ ಮಾಕ್ಯವಲ್ಲಿ ಹೇಳುತ್ತಾರೆ, ‘ಒಳಿತೆಂಬುದು ಹೆಸರು ಮಾತ್ರ, ವಾಸ್ತವದಲ್ಲಿ ಕೆಡುಕುಗಳೇ ಇವೆ. ಆದ್ದರಿಂದ ದೇಶವನ್ನು ಬಲಗೊಳಿಸಬೇಕೆಂಬ ಬಯಕೆಯಿರುವ ಯಾವುದೇ ಆಡಳಿತಗಾರನು ಕೆಡುಕು ಮಾಡುವುದು ಹೇಗೆಂದು ಚೆನ್ನಾಗಿ ತಿಳಿದಿರಬೇಕು.’

ವೇಯಿನ್‌ಪ್ಗೆಲ್‌ರ ನಿಲುವು ಅದೇ ಆಗಿತ್ತು. ಸನ್ಮಾರ್ಗಿಯಾದ ಓರ್ವರಿಗೆ ರಾಷ್ಟ್ರವನ್ನು ಮುನ್ನಡೆಸಲು ಸಾಧ್ಯವಿಲ್ಲ. ಏಕೆಂದರೆ ರಾಷ್ಟ್ರದ ರಕ್ಷಣೆಗಾಗಿ ಮಾಡಬೇಕಾದ ಲೌಕಿಕ ಕಾರ್ಯಗಳನ್ನು ಓರ್ವ ಸನ್ಮಾರ್ಗಿಗೆ ಮಾಡಲು ಸಾಧ್ಯವಿಲ್ಲ. ದೇಶ ಹಿತಕ್ಕಾಗಿ ಆಡಳಿತಗಾರನು ಯಾವುದೇ ಕಾರ್ಯವನ್ನು ಮಾಡಲು ಸಿದ್ಧನಿರಬೇಕು. ಒಳಿತು ಕೆಡುಕುಗಳ ಕುರಿತು ಚಿಂತಿಸುವ ಸನ್ಮಾರ್ಗಿಗೆ ಅದು ಅಸಾಧ್ಯ.

ಯಾವುದೇ ರೀತಿಯ ಸ್ವಾರ್ಥ ಇಲ್ಲದವರು ಇರುವುದಿಲ್ಲ. ಆದ್ದರಿಂದ ಅವರು ರೂಪಕೊಡುವ ಕಾನೂನು ವ್ಯವಸ್ಥೆಯಲ್ಲೂ ಅದು ಪ್ರಭಾವ ಬೀರುತ್ತದೆ. ಇಡೀ ಲೋಕವನ್ನೂ ಅದರಲ್ಲಿರುವ ಮನುಷ್ಯ ವರ್ಗವನ್ನೂ ಒಂದೇ ರೀತಿಯಲ್ಲಿ ಕಾಣಲು ಅವುಗಳ ಸೃಷ್ಠಿಕರ್ತ ಹಾಗೂ ಸಂರಕ್ಷಕನಾದ ದೇವನಿಗೆ ಮಾತ್ರ ಸಾಧ್ಯ. ಎಲ್ಲ ಕಾಲ, ದೇಶಗಳ ಮನುಷ್ಯರಿಗೆ ನ್ಯಾಯ ವ್ಯವಸ್ಥೆಯನ್ನು ನೀಡಬೇಕಾದದ್ದು ಅವನೇ. ದೇವನ ಸನ್ಮಾರ್ಗದ ಸಂದೇಶ ಲಭಿಸದ ಕೇವಲ ಆತ್ಮಸಾಕ್ಷಿಯ ಆಧಾರದಲ್ಲಿ ಸ್ವಸ್ಥ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಹೇಳಲು ಕಾರಣವು ಇದೇ ಆಗಿದೆ. ತನ್ನ ಸಂದೇಶವಾಹಕರಾದ ಪ್ರವಾದಿಗಳ ಮೂಲಕ ಸರ್ವಶಕ್ತನು ಜೀವನ ವ್ಯವಸ್ಥೆಯನ್ನು ನಮಗೆ ತಲುಪಿಸಿದ್ದಾನೆ. ವ್ಯಕ್ತಿ, ಕುಟುಂಬ, ಸಮೂಹ, ರಾಷ್ಟ್ರ ಹಾಗೂ ವಿಶ್ವದ ಅಸ್ತಿತ್ವವೂ ಅದೇ ಆಧಾರದಲ್ಲಿ ಆಗಬೇಕೆಂದು ಧರ್ಮವು ಕಲಿಸುತ್ತದೆ.

‘ದೇವರು – ಧರ್ಮ – ಧರ್ಮಗ್ರಂಥ ಸ್ನೇಹ ಸಂವಾದ’ ಕೃತಿಯಿಂದ

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …